ಕಾವ್ಯ ಸಂಗಾತಿ
ಡಾ.ಡೋ.ನಾ.ವೆಂಕಟೇಶ
‘ಕಾಲಚಕ್ರ’
ಮಳೆ ಬಾರದಾಗ ನನ್ನೂರಲ್ಲಿ ಹರಕೆ
ಕಪ್ಪೆಗೂ ಮದುವೆ
ಕತ್ತೆಗೂ ಮೆರವಣಿಗೆ
ಇಳೆಯಲ್ಲಾ ಹಸಿರು ಹೊದೆಯಲಿ ಎಂಬ ಪ್ರಾರ್ಥನೆ!
ಹೊಳೆವ ಸೂರ್ಯನಿಗೆ ಶಾಪ!
ಈಗ ಭಾರೀ ಮಳೆಗೆ
ಧರೆಯೆಲ್ಲ ತೊಳೆದು ಕಸಕಡ್ಡಿ ಕೊಳೆ
ಕಳೆದು ಮನಸ್ಸು ನಿರಾಳ
ಆದರೂ
ಗೊಣಗಾಟ ನಿರಂತರ
ಹಾಳಾದ್ದು ಮಳೆ ಎಲ್ಲೆಲ್ಲೂ ಪಸೆ
ಶೀತೋದ್ಭವ!
ಶಾಪ ಈಗ ಮಳೆರಾಯನಿಗೆ
ಭಾರಿ ಮಳೆ ಸುರಿಸಿದ ವರುಣನಿಗೆ
ನಿರಂತರ ವರಾತ ಹಚ್ಚಿದ ಮಳೆಗೆ
ಹಾಳು ಮಾಡಿದೆ ಇವಳ ಸ್ನೇಹಿತೆಯ
ಮೊಮ್ಮಗನ ಮುಂಜಿ
ಮತ್ತಿಲ್ಲಿ ಇನ್ನಾರದ್ದೋ ದೌಲತ್ತಿನ
ಮೆರವಣಿಗೆಯ ವೈಭವದ ನೋಟ!
ಸೂರ್ಯ ದೇವನ ದರ್ಶನಕ್ಕೆ ಈಗ
ನೂಕು ನುಗ್ಗುಲು
ಹೊಳೆವ ಸೂರ್ಯನೀಗ
ಶಾಪಮುಕ್ತ! ಜಗದ್ವ್ಯಂದ್ಯ!
ಎಲ್ಲರೂ ನಮ್ಮವರೇ
ನೀವು ನಾವು ಅವಳು ಮತ್ತು
ಕಪ್ಪೆ ,ಕತ್ತೆ,
ಹೊಳೆ ಹೊಳೆವ ಸೂರ್ಯ
ಕೊಳೆ ತೊಳೆವ ವರುಣ!
ಪೃಥ್ವಿ ಗುಂಡಗಿದೆ
ಕಾಲ ಚಕ್ರ ತಿರುಗುತ್ತಲೂ ಇದೆ!
ಮನುಷ್ಯ ಹಾಗೇ ಬದುಕಿದ್ದಾನೆ!
ಡಾ.ಡೋ.ನಾ.ವೆಂಕಟೇಶ
ಕವಿತೆ ತುಂಬಾ ಅರ್ಥಪೂರ್ಣವಾಗಿದೆ.