ನಾಗರಾಜಹರಪನಹಳ್ಳಿ
ಕಾವ್ಯಗುಚ್ಛ
ಬೆರಳ ತುದಿಗೆ ಕರುಣೆ ಪಿಸುಗುಡುವತನಕ
ಕಟ್ಟೆಯ ಮೇಲೆ ಕುಳಿತದ್ದಕ್ಕ
ಕೊಲೆಯಾಯಿತು
ಉಗ್ಗಿದ ಖಾರದ ಪುಡಿಗೆ
ಇರಿದ ಚೂರಿಗೆ
ಕಣ್ಣು ಕರುಣೆ ಇರಲಿಲ್ಲ
ಅಂತಿಂತಹ ಕಟ್ಟೆಯಲ್ಲ
ಮಲ್ಲಿಕಾರ್ಜುನನ ಕಟ್ಟೆ
ಇರಿದವ ಅಹಂಕಾರಿ
ಇರಿಸಿಕೊಂಡದ್ದು ಸಮಾನತೆ
ಒಂದು ಸವರ್ಣಧೀರ್ಘ ಸಂದಿ
ಮತ್ತೊಂದು ಲೋಪಸಂದಿ
ಕಣ್ಣು ಕಟ್ಟಿದ ,ಬಾಯಿ ಮುಚ್ಚಿದ ಈ ನಾಡಿನಲ್ಲಿ ಏನೂ ಆಗಬಹುದು
ಸ್ವತಃ ದೊರೆ ದೀರ್ಘಾಸನದಲ್ಲಿ
ಶವಾಸನದಲ್ಲಿರುವಾಗ
ಅಹಂಕಾರ ಊರ ಸುತ್ತಿದರೆ
ಅಚ್ಚರಿಯೇನಿಲ್ಲ
ಇಲ್ಲಿ ಎಲ್ಲರೂ ಬಾಯಿಗೆ ಬೀಗ
ಜಡಿದು ಕೊಂಡಿರುವಾಗ
ನಿತ್ಯವೂ ಸಮಾನತೆಯ ಹಂಬಲ ಕೊಲೆಯಾಗುತ್ತಿರುತ್ತದೆ
ಮತ್ತೊಮ್ಮೆ ಕರುಣೆ
ಭೂಮಿಯಲ್ಲಿ ಮೊಳಕೆಯೊಡೆದು ಸಸಿಯಾಗಿ ಗಿಡವಾಗಿ ,ನಡೆದಾಡುವ ಮರ ಬರುವತನಕ
ನದಿಯೇ ಮನುಷ್ಯನಾಗಿ ಚೂರಿಯ ಅಹಂಕಾರದ ರಕ್ತ ತೊಳೆಯುವತನಕ
ಇರಿದ ಚೂರಿಯ ತುದಿಗೆ
ಹಿಡಿದ ಬೆರಳ ತುದಿಗೆ ಕರುಣೆ
ಪಿಸುಗುಡುವತನಕ
………..
ನಾವಿಬ್ಬರೂ ಮರವಾಗಿದ್ದೇವೆ
ನಾವಿಬ್ಬರೂ ಮರವಾಗಿದ್ದೇವೆ
ಇದು ನನ್ನ ಮೊದಲ ಹಾಗೂ
ಕೊನೆಯ ಪದ್ಯವೆಂದು ಬರೆಯುವೆ
ಪ್ರತಿ ಅಕ್ಷರಗಳಲ್ಲಿ ಪ್ರೀತಿಯ ಬೆರಸಿ
ನಡೆವ ದಾರಿಯಲ್ಲಿ ನಿನ್ನಲ್ಲಿ ನಾ ತುಂಬಿ ಕೊಂಡರೆ ಅದಕ್ಕೆ ಏನೆನ್ನಲಿ?
ಅಥವಾ ನನ್ನ ಜೀವನದ ಪ್ರತಿ ಉಸಿರಾಟದಿ ನೀ ತುಂಬಿ ಕೊಂಡಿರುವುದ ಹೇಗೆ ಮನದಟ್ಟು ಮಾಡಲಿ?
ಹೀಗೆ ಹೇಳಬಹುದು:
ನಿನಗೆ ಕಾಣುವ ಪ್ರತಿ ಗಿಡ ಮರ ಹೂ ಬಿಟ್ಟು ನಗುತ್ತಿದ್ದರೆ ಅದು ನಮ್ಮಿಬ್ಬಿರ ಪ್ರೇಮ
ಅತೀ ಕಟ್ಟಕಡೆಯ ಮನುಷ್ಯನ ಮನೆ ಅಂಗಳದಿ ಮಗು ನಗು ಅರಳಿಸಿ ಅದರ ಕಣ್ಣಲ್ಲಿ ಕಾಂತಿ ಕಂಡರೆ ಅದು ನಮ್ಮಿಬ್ಬರ ಪ್ರೇಮ
ವಾಸ್ತವವಾಗಿ ನಾವಿಬ್ಬರೂ ವಾಸಿಸುವುದು ಅಂತ್ಯಜರಲ್ಲಿ
ಭ್ರಮಾತ್ಮಕ ಅಕ್ಷರ ಲೋಕದ
ಖೂಳರ ನಾವಿಬ್ಬರೂ ಸೇರಿ
ಒಂದನಿ ರಕ್ತ ಹರಿಸದೆ
ಒಂದಕ್ಷರ ಬರೆಯದೇ
ಮದ್ದು ಗುಂಡು ಸಿಡಿಸದೆ
ಗೊತ್ತೇ ಆಗದಂತೆ ಕೊಲೆ ಮಾಡಿ ಬಂದೆವು
ಈಗ ನಾವಿಬ್ಬರೂ ಅಕ್ಕಪಕ್ಕದ ಮರವಾಗಿದ್ದೇವೆ
ನಮ್ಮ ಟೊಂಗೆಗಳಲ್ಲಿ ಹದವಾಗಿ ಬೆಳೆದ ಹಸಿರು ಹೂ ಕಾಯಿ ಕಣ್ಣಲ್ಲಿ ಹಕ್ಕಿಗಳು ಸಂಸಾರ ನಡೆಸಿವೆ
ಹು, ಈಗ ; ಕೊನೆಯ ಮಾತು
ಹಠಾತ್ ನಾ ಇಲ್ಲವಾದರೆ
ಇದ್ದಲ್ಲೇ ಕಣ್ಣೀರಾಗು
………
ಗೌರಿ ಮಾತಾಡಲಿಲ್ಲ
ಗೌರಿಯನು ತಂದರು
ಮನೆಯ ಪಡಸಾಲೆಯಲ್ಲಿ ಅದ್ಭುತವಾಗಿ ಅಲಂಕರಿಸಿದರು
ಗೌರಿ ಮಾತಾಡಲಿಲ್ಲ
ಆಕೆ ಮೌನವಾಗಿದ್ದಳು
ಆಕೆಗೆ ಮಾತಾಡದಂತೆ ಕಲಿಸಿಲಾಗಿತ್ತು
ಆಕೆ ಜೀವಂತ ಮಣ್ಣಿನಮೂರ್ತಿಯಾಗಿದ್ದಳು
ಅದನ್ನೇ ಸಂಸ್ಕೃತಿ ಅಂದರು
ಭವ್ಯ ಪರಂಪರೆ ಎಂದರು
ಗೌರಿಯ ಭಕ್ತಿ ಭಾವದಿಂದ
ಪೂಜಿಸಿದರು
ದೀಪ ಹಚ್ಚಿದರು
ಸಿಹಿ ನೈವೇದ್ಯ ಮಾಡಿದರು
ನಮಸ್ಕರಿಸಿದರು
ಪಟಾಕಿ ಹೊಡೆದರು
ಭಜನೆ ಮಾಡಿದರು
ಗೌರಿ ಮಾತಾಡಲಿಲ್ಲ
ಮೌನವಾಗಿದ್ದಳು
ಅದನ್ನು ಸಂಸ್ಕೃತಿ ಅಂದರು
ಸಿಹಿ ಹಂಚಿ ತಿಂದರು
ಕೊನೆಗೆ ಅದೇ ಗೌರಿಯ ನೀರಲ್ಲಿ ಮುಳುಗಿಸಿದರು
ಗೌರಿ ಆಗಲೂ ಮಾತಾಡಲಿಲ್ಲ
ಅದನ್ನೇ ಸಂಸ್ಕೃತಿ ಎಂದರು
ಮಣ್ಣು ಮಣ್ಣ ಸೇರಿತ್ತು
…********************************
ಮೊದಲ ಕವನ ಬಹಳ ಚೆನ್ನಾಗಿದೆ. ಬರಿಯ ಶಬ್ದಾಡಂಬರಗಳಿಲ್ಲದ, ತಣ್ಣನೆಯ ಕ್ರೋಧದ ಭುಗಿಲು ಸುಡಲು ಶಕ್ತವಾಗಿದೆ.
ಗೌರಿ ಮೌನ… ನಿಮ್ಮ ಹೊಸ ಚಿಂತನೆಯ ಅಭಿವ್ಯಕ್ತಿ ಸೊಗಸಾಗಿದೆ.
ಗೌರಿ ಹೆಣ್ಣು ಮಕ್ಕಳಿಗೆ ಪೂರ್ಣ ಸ್ವಾತಂತ್ರ್ಯವನ್ನೂ, ಗೌರವವನ್ನೂ ಕೊಡುವ ಹಬ್ಬ. ಬಹುಶಃ ಇದೊಂದೇ ಪೂರ್ಣ ಮಹಿಳಾ ತೊಡಗುವಿಕೆಯ ಹಬ್ಬ ಕೂಡ.
ಅಭಿನಂದನೆಗಳು.
ಹೌದು. ಗೌರಿಗೆ ಮೌನವಾಗಿರುವಯದನ್ನು ಕಲಿಸಿ ಸಂಸ್ಕೃತಿ ಎನ್ನಲಾಗಿದೆ
ಗೌರಿ ಪದ್ಯ ಬಹಳ ಕಾಡಿತು .ಒಳ್ಳೆಯ ಪದ್ಯಗಳು
ಗೌರಿ ಕಾಡಿದಳು….