ಕಾಡು ಸುತ್ತಿಸಿ ನಿಸರ್ಗದ ಪಾಠ ಹೇಳುವ ಕಾನ್ಮನೆಯ ಕಥೆಗಳು

             
          ನಾನು ಎರಡನೇ ತರಗತಿ ಇದ್ದಿರಬಹುದು. ಅಜ್ಜಿ ಮನೆಯ ಊರಲ್ಲಿ ಬಂಡಿ ಹಬ್ಬ. ಅಂಕೋಲಾ ಹಾಗೂ ಕುಮಟಾದವರು ಏನನ್ನಾದರೂ ಬಿಟ್ಟಾರು. ಆದರೆ ಬಂಡಿ ಹಬ್ಬ ಬಿಡುವುದುಂಟೆ? ಆದರೆ ಬಂಡಿ ಹಬ್ಬದಲ್ಲಿ ದೇವರು ಒಮ್ಮೆ ಕಳಸದ ಮನೆಯಲ್ಲಿ ಕುಳಿತ ನಂತರ ಮತ್ತೆ ಎದ್ದು ಬರೋದು ರಾತ್ರಿಯೇ. ಅದರಲ್ಲೂ ಬಂಡಿ ಆಟ ಮುಗಿಸಿ ತಡವಾಗಿದ್ದ ರಾತ್ರಿಯದು. ನಾವೆಲ್ಲ ನಿಂತ ಅನತಿ ದೂರದಲ್ಲಿ ಒಂದೆಡೆ ಜಾತ್ರೆಯ ತೇರಿನಂತೆ ಮರಕ್ಕೆ ಬಣ್ಣಬಣ್ಣದ ದೀಪ ವಿದ್ಯತ್ ಅಲಂಕಾರ ಮಾಡಿದಂತೆ ಕಾಣಿಸುತ್ತಿತ್ತು. ನನಗೋ ಅದು ಎಂದೂ ನೋಡಿರದ ದೃಶ್ಯ. ಮಾವನ ಮಗಳು ಮಾಲಕ್ಕನ ಬಳಿ ಅಕ್ಕಾ ಏನದು? ಎಂದೆ. ಮಾತನಾಡಿದರೆ ಈ ಧರೆಗಿಳಿದ ಸೌಂದರ್‍ಯ ಕರಗಿ ಹೋಗಬಹುದು ಎನ್ನುವ ಭಯ. ಆದರೆ ಆಕೆಗೆ ಅದು ಮಾಮೂಲು. ‘ಅದಾ ಮಿಂಚು ಹುಳ. ಮಳೆಗಾಲ ಹತ್ತಿರ ಬಂತಲ್ಲ? ಅದಕ್ಕೆ ಮಿಂಚು ಹುಳಗಳು ಮಳೆಗೆ ದಾರಿ ತೋರಸ್ತಾವೆ. ಎಂದಳು. ನನಗೆ ಅಷ್ಟು ದೂರದಿಂದ ಸೂಡಿಯ ಬೆಳಕಲ್ಲಿ ಮೈ ಮೇಲೆ ಬಂದ ದೇವರ ಆರ್ಭಟ ನೋಡುವ ಕುತೂಹಲ ಮುಗಿದು ಹೋಯ್ತು. ಕಣ್ಣೆದುರಿಗೇ ಧರೆಗಿಳಿದ ಅಮರಾವತಿಯನ್ನಿಟ್ಟುಕೊಂಡು, ಮಾತನಾಡಿದರೇ ಥಕಧಿಮಿಗುಡುವ ದೇವರನ್ನೇಕೆ ನೋಡಲು ಹೋಗಲಿ? ಅಂತೂ ದೇವರ ಕಳಸ ನಮ್ಮ ಮುಂದಿನಿಂದ ಧಪಧಪ ಹೆಜ್ಜೆ ಇಡುತ್ತ ಹೋಗುವಾಗ ಕೈ ಹಿಡಿದುಕೊಂಡಿದ್ದ ಮಾಲಕ್ಕ ನನ್ನನ್ನು ಎಳೆದುಕೊಂಡೇ ಹೊರಟಳು ಆದರೆ ನನಗೋ ಆ ಚಿತ್ತಾರ ಬಿಟ್ಟು ಬರುವ ಮನಸ್ಸಿರಲಿಲ್ಲ. ಇಂದಿನಂತೆ ಆಗೇನಾದರೂ ಕೈಯ್ಯಲ್ಲೊಂದು ಮೊಬೈಲ್ ಇದ್ದಿದ್ದರೆ ಅದೆಷ್ಟು ಫೋಟೊ ಹೊಡೆದು ಫೇಸ್‌ಬುಕ್‌ಗೆ ಹಾಕಿ ಏನೇನು ತಲೆಬರೆಹ ಕೊಡುತ್ತ ಎಷ್ಟೊಂದು ಲೈಕ್ ಗಿಟ್ಟಿಸಬಹುದಿತ್ತು ಎಂದು ಈಗಲೂ ಆ ದೃಶ್ಯವನ್ನು ನೆನಪಿಸಿಕೊಳ್ಳುವಾಗಲೆಲ್ಲ   ಅಂದುಕೊಳ್ಳುತ್ತೇನೆ. ಮತ್ತೆ ಆ ದೃಶ್ಯ ಈಗ ಶಿವಾನಂದ ಕಳವೆಯವರ ಕಾನ್ಮನೆಯ ಕಥೆಗಳು ಪುಸ್ತಕ ಓದುವಾಗ ನೆನಪಿಗೆ ಬಂತು.


        ಶಿವಾನಂದ ಕಳವೆಯವರ ಕಾನ್ಮನೆಯ ಕಥೆಗಳು ನಮಗೆ ಹಲವಾರು ವಿಷಯಗಳನ್ನು ವಿವರಿಸುತ್ತ ಹೋಗುತ್ತವೆ. ಕಾಡು ಮತ್ತು ಮಾನವನ ಸಂಬಂಧದ ಕುರಿತಾದ ಅದ್ಭುತ ನುಡಿಚಿತ್ರವನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು. ‘ಅರೆ ಹೌದಲ್ಲ? ಇದನ್ನು ನೋಡಿದ್ದರೂ ನಾವಿದನ್ನು ಗಮನಿಸಿಯೇ ಇರಲಿಲ್ಲವಲ್ಲ’ ಎಂಬ ಅದೆಷ್ಟೋ ಘಟನೆಗಳು ನಮ್ಮನ್ನು ಅಚ್ಚರಿಯ ಸುಳಿಗಾಳಿಗೆ ಸಿಲುಕಿಸುತ್ತವೆ. ಕಾಗೆಯ ಗೂಡಿಗೆ ಕಲ್ಲು ಹೊಡೆದು ತಿಂಗಳುಗಳಿಂದ ಮನೆಯಿಂದ ಹೊರಗೇ ಬರಲಾರದಂತೆ ಮಾಡಿಕೊಂಡ ಎಡವಷ್ಟು ನಮ್ಮ ಬಾಲ್ಯದಲ್ಲಿ ಅದೆಷ್ಟಿಲ್ಲ?  ಅದೆಷ್ಟೋ ಬೀಜಗಳ ಪೋಷನೆಯನ್ನು ಹೀಗೆ ಮಾಡಿದರೆ ಮಾತ್ರ ಮೊಳಕೆಯೊಡೆಯುತ್ತದೆ ಎನ್ನುವುದನ್ನು ನಮ್ಮ ಹಿರಿಯರು ಹೇಳಿಕೊಟ್ಟಿಲ್ಲ ಹೇಳಿ. ಆದರೂ ನಾವು ಪರಿಸರವನ್ನು ಕೇವಲ ಸಸ್ಯಶಾಸ್ತ್ರೀಯ ಅಧ್ಯಯನಗಳಿಂದಲೇ ತಿಳಿದುಕೊಳ್ಳುವುದಕ್ಕೆ ಹೊರಡುತ್ತೇವೆಯೇ ಹೊರತೂ  ನಮ್ಮ ಜನಪದ ಜ್ಞಾನವನ್ನು ಇದಕ್ಕೆ ಬಳಸಿಕೊಳ್ಳುವುದಿಲ್ಲ ಎಂಬುದಕ್ಕೆ ಅದೆಷ್ಟು ಉದಾಹರಣೆಗಳು ಈ ಪುಸ್ತಕದಲ್ಲಿ ದೊರಕುತ್ತವೆಯೆಂದರೆ ಓದುತ್ತಿದ್ದರೆ ಒಮ್ಮೆ ನಗು, ಇನ್ನೊಮ್ಮೆ ವಿಷಾz, ಮತ್ತೊಮ್ಮೆ ಕೋಪ ಕೆಲವೊಮ್ಮೆ ಎಲ್ಲವೂ ಒತ್ತಟ್ಟಿಗೇ ಒಕ್ಕರಿಸಿಕೊಂಡು ಬರುತ್ತದೆ.


                  ನಾವೆಲ್ಲ ಕಹಿ ಎಂದುಕೊಳ್ಳುವ, ವಿಷಕಾರಿ ಎಂದು ದೂರ ಇಡುವ ಕಾಸ್ನ (ಕಾಸರಕ) ಮರದ ವಿಶೇಷಣಗಳ ಬಗ್ಗೆ ಶಿವಾನಂದ ಕಳವೆಯವರು ಹೇಳುವಾಗ ಈ ಮರಕ್ಕೆ ಇಷ್ಟೆಲ್ಲ ಗುಣಗಳಿವೆಯೇ ಎಂದು ಅಚ್ಚರಿಯಾಗದೇ ಇರಲು ಸಾಧ್ಯವೇ ಇಲ್ಲ. ಹೆಂಡ ಇಳಿಸಲು ಬಳಸುವ ಬಗಿನೆ ಮರದ ಬೇರನ್ನು ಅಡಿಕೆಯ ಬದಲಾಗಿ ತಾಂಬೂಲ ಹಾಕಲು ಬಳಸಬಹುದಂತೆ ಎಂಬ ಮಾತಂತೂ ನನಗೆ ಹೊಸದು. ಆಗಾಗ ಹಬ್ಬ ಹಾಗೂ ಮನೆಯ ವಿಶೇಷ ಕಾರ್‍ಯಕ್ರಮಗಳಲ್ಲಿ ಮನೆಯ ಅಡಿಕೆ ಹಾಗೂ ಅದೇ ಮರಕ್ಕೆ ಹಬ್ಬಿದ್ದ ವೀಳ್ಯದೆಲೆಗೆ ಸುಣ್ಣ ಹಚ್ಚಿ ಬಾಯಿ ಕೆಂಪು ಮಾಡಿಕೊಳ್ಳುವ ನೀವು ದುರಾಭ್ಯಾಸವೆಂದರೆ ದುರಭ್ಯಾಸ, ಆರೋಗ್ಯಕರ ಎಂದರೆ ಆರೋಗ್ಯಕರವಾದ ನನ್ನ ಕವಳ ಹಾಕುವ ಚಟ ನೆನಪಿಗೆ ಬಂದು, ಈ ಬಾಡಿಗೆ ಮನೆಯಲ್ಲಿ ಹೊತ್ತಲ್ಲದ ಹೊತ್ತಲ್ಲಿ ಕವಳ ಹಾಕಲಾಗದು ಎಂದು ಪರಿತಪಿಸುವಂತಾಗಿದ್ದು ಸುಳ್ಳಲ್ಲ.


   ಅಂದಹಾಗೆ ಕಾಳಿನದಿ ಕಣಿವೆಯ ಶಿವಪುರ ಎಂಬ ಹಳ್ಳಿಯ ಬಾಗಿನಗದ್ದೆಯ ಅಡಕೆ ತೋಟದ ಪಕ್ಕದಲ್ಲಿರುವ ಹಾಲೆ ಮರದಡಿಯಲ್ಲಿ ಇಟ್ಟ ವೀಳ್ಯದ ಎಲೆ ವರ್ಷವಾದರೂ ಬಾಡುವುದಿಲ್ಲವಂತೆ. ಈ ಹಾಲೆ ಮರವನ್ನು ದೇವರ ಮರ ಎಂದು ಪೂಜಿಸುತ್ತಾರೆ ಆ ಭಾಗದವರು. ಆ ಮರದ ಬುಡದಲ್ಲಿ ಎಡೆಯಿಟ್ಟ ವೀಳ್ಯದ ಎಲೆಗಳು ಬೇರು ಬಿಟ್ಟು ಬಳ್ಳಿಗಳಾಗಿ ಆ ಮರಕ್ಕೇ ಹಬ್ಬಿಕೊಂಡಿದೆಯಂತೆ. ದೇವ-ದಾನವರು ಸಮುದ್ರ ಕಡೆದು ಸಿಕ್ಕ ಅಮೃತ ಕುಡಿದ ನಂತರ ಹೆಚ್ಚಾದ ಅಮೃತವನ್ನು ಗಜರಾಜನ ಕಂಬದ ಕೆಳಗಿಟ್ಟಿದ್ದರಂತೆ. ಆದರೆ ಗಜರಾಜ ಮದವೇರಿ ಆ ಅಮೃತದ ಕಲಶವನ್ನು ಒಡೆದನಂತೆ. ಹೀಗಾಗಿ ಆ ಒಡೆದ ಕಲಶ ಒಡೆದಲ್ಲಿ ಅಮೃತ ಚೆಲ್ಲಿ ಬೆಳೆದ ಬಳ್ಳಿಯೇ ನಾಗವಲ್ಲಿ ಅಂದರೆ ವೀಳ್ಯದ ಎಲೆ ಬಳ್ಳಿಗಳಂತೆ. ಅಂತೂ ಕವಳ ತಿನ್ನುವ ನನ್ನ ರೂಢಿ ಕೆಟ್ಟದ್ದಲ್ಲ ಎಂದು ಸಿಕ್ಕಾಗಲೆಲ್ಲ ಕವಳ ಹಾಕಿಯೇ ಮಾತಿಗೆ ತೊಡಗುವ ಶಿವಾನಂದ ಹೆಗಡೆಯವರು ಹೇಳಿ ನನ್ನ ದುಗುಡ ಕಡಿಮೆ ಮಾಡಿದ್ದಾರಾದರೂ ಹಾಲೆಮರ ಎಂದು ಕರೆಯಿಸಿಕೊಳ್ಳುವ ಸಪ್ತಪರ್ಣಿಯನ್ನು ಕಡಿದು ಆ ಮನೆತನವೇ ಊರು ಬಿಟ್ಟಿದ್ದು, ಅಲ್ಲಿನ ವೀಳ್ಯದ ಬಳ್ಳಿಗಳೂ ಒಣಗಿ ಹೋಗಿದ್ದನ್ನು ಹೇಳಿ ಒಂದಿಷ್ಟು ಚಿಂತೆಯನ್ನೂ ಜೊತೆಗೆ ಅದ್ಯಾವ ಕಾರಣಕ್ಕೆ ಹಾಗೆ ಆಗಿರಬಹುದು ಎನ್ನುವ ಕುತೂಹಲ ಮೂಡಿಸಿದ್ದಾರೆ. ನನ್ನ ಮುಂದಿನ ಕಾಡಿನ ವಾಸ ಕಂಡಿತಾ ಶಿಪುರದ ಸಮೀಪಕ್ಕೆ ನನ್ನನ್ನು ಕೊಂಡೊಯ್ಯಬಹುದು. ಯಾಕೆಂದರೆ ಈ ಹಾಲೆ ಮರದ ತೊಗಟೆಯನ್ನು ತಂದು ಕುದಿಸಿ ದೀಪಾವಳಿಯ ದಿನ ಬೆಳ್ಳಂಬೆಳಿಗ್ಗೆ ಮೈ ತುಂಬ ಅರಶಿಣ ಎಣ್ಣೆ ಲೇಪಿಸಿಕೊಂಡು ಹಾಲೆ ಕಷಾಯ ಕುಡಿಯುವ ಸಂಪ್ರದಾಯ ನಮ್ಮ ಜನಾಂಗದಲ್ಲಿದೆ. ಹೀಗಾಗಿ ಹಾಲೆ ಮರದ ತೊಗಟೆ ತೆಗೆಯುವ ಈ ಶತಮಾನಗಳ ಆಚರಣೆಯ ಬಗ್ಗೆ ಒಂದಿಷ್ಟು ಭಯವೂ ಹುಟ್ಟಿಕೊಂಡಿದೆ.


   ನಾನು ಹಿಂದೆ ಬಾಡಿಗೆಗೆ ಇದ್ದ ಮನೆಯ ಎರಡು ಮನೆಗಳ ಆಚೆ ಒಂದು ವೃದ್ಧ ಜೋಡಿಯಿತ್ತು. ಆತ ಸೈನ್ಯದಲ್ಲಿದ್ದು ನಿವೃತ್ತಿ ಹೊಂದಿದವರು. ಹೀಗಾಗಿ ತೀರಾ ಕಟ್ಟುನಿಟ್ಟು. ಯಾರೊಡನೆಯೂ ಹೆಚ್ಚಿನ ಮಾತಿಲ್ಲ. ಅಷ್ಟು ದೊಡ್ಡ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುತ್ತಿದ್ದುದು. ಬೆಳಿಗ್ಗೆ ನಾನು ಶಾಲೆಗೆ ಹೋಗುವಾಗ ಇಬ್ಬರೂ ಮನೆಯ ಅಂಗಳದಲ್ಲಿ ಖುರ್ಚಿ ಹಾಕಿಕೊಂಡು ಎದುರಿಗೆ ಬಿದ್ದ ದೊಡ್ಡ ಬಯಲನ್ನು ನೋಡುತ್ತ ಕುಳಿತಿರುತ್ತಿದ್ದರು. ಸಂಜೆ ಬಂದಾಗಲೂ ಬಹುತೇಕ ಅಲ್ಲಿಯೇ ಇರುತ್ತಿದ್ದರು. ಅಥವಾ ಆತ ಅಲ್ಲೇ ಅಂಗಳದಲ್ಲಿ ವಾಕ್ ಮಾಡುತ್ತಿದ್ದರೆ ಹೆಂಡತಿ ಅದೇ ಭಂಗಿಯಲ್ಲಿ ಕುಳಿತಿರುತ್ತಿದ್ದರು. ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆಂದು ನಾನು ಮನೆಗೆ ಬಂದಾಗಲೂ ಅವರು ಅಲ್ಲಿಯೇ. ಇವರಿಬ್ಬರು ಅಡುಗೆ, ಊಟ ಏನಾದರೂ ಮಾಡ್ತಾರೋ ಇಲ್ಲವೋ ಎಂಬ ಅನುಮಾನ ಆಗುತ್ತಿತ್ತು ಆಗಾಗ. ಆದರೆ ಅಕ್ಟೋಬರ್ ರಜೆ ಮುಗಿಸಿ ನಾನು ಶಾಲೆಗೆ ಹೋಗುವ ಹೊತ್ತಿನಲ್ಲಿ ಅವರಿಬ್ಬರಲ್ಲೂ ಅದೆಂಥಹ ಬದಲಾವಣೆಯಾಗುತ್ತಿತ್ತು ಎಂದರೆ ಅವರ ಮನೆಯ ಮುಂದಿನ ಜಾಗ ರಸ್ತೆಯೋ ಪಕ್ಷಿ ಸಾಕಾಣಿಕಾ ಕೇಂದ್ರವೋ ಎನ್ನುವ ಅನುಮಾನ ಹುಟ್ಟಿಸಿಬಿಡುತ್ತಿತ್ತು. ಮನೆಯ ಮುಂದೆ ದೊಡ್ಡ, ಅಗಲವಾದ ನೀರಿನ ಮಡಕೆಯೊಂದನ್ನು ಇಡುತ್ತಿದ್ದರು. ನೀರು ಕುಡಿಯಲು ಹಕ್ಕಿಗಳ ದಂಡೇ ಆಗಮಿಸುತ್ತಿತ್ತು. ನವೆಂಬರ ತಿಂಗಳ ಮುಸುಗುಡುವ ಚಳಿಯಲ್ಲಿ ನಾನು ಏಳಲಾಗದೇ ಎದ್ದು ವಾಕಿಂಗ್ ಹೋಗುವಾಗ ಆ ನೀರಿನ ಮಡಿಕೆಯ ಎದುರು ನಾಲ್ಕಾರು ನವಿಲುಗಳೂ ಇರುತ್ತಿದ್ದವು. ಶಿವಾನಂದ ಕಳೆಯವರ ಪುಸ್ತಕದಲ್ಲಿ ಹೀಗೆ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ನೀರನ್ನಿಡುವ ಪ್ರಸ್ತಾಪ ಹಲವಾರು ಸಾರಿ ಓದಿದಾಗ ನನಗೆ ನೆನಪಾಗಿದ್ದು ಅದೇ ವೃದ್ಧ ದಂಪತಿಗಳು.ಆ ಹಕ್ಕಿಗಳನ್ನು ನೋಡುತ್ತ ಅವರು ಪರವಶರಾಗುತ್ತಿದ್ದುದು ನನಗೀಗಲೂ ನೆನಪಿದೆ. ಕಾಲು ನೋವಿನಿಂದ ಒದ್ದಾಡುತ್ತ ಕುಳಿತಲ್ಲಿಂದ ಎದ್ದು ಓಡಾಡಲು ಹರಸಾಹಸ ಪಡುತ್ತಿದ್ದ ಆಕೆಯಂತೂ ಮಡಿಕೆಯಲ್ಲಿ ನೀರು ಒಂದಿಷ್ಟು ಖಾಲಿಯಾದರೂ ಸಾಕು ಬೇಗ ಬೇಗ ನೀರು ತಂದು ಹಾಕುತ್ತಿದ್ದರು. ಮೊಮ್ಮಕ್ಕಳು ಬಂದಾಗಲೂ ಆಕೆ ಹೀಗೆ ಓಡಾಡಿದ್ದನ್ನು ನಾನು ನೋಡಿರಲಿಲ್ಲ.


 ಬಾವಿಗೆ ಬಿದ್ದ ಚಿರತೆಯನ್ನು ಎತ್ತಿದ ಪ್ರಸಂಗ, ಹಾಗೂ ಅದೇ ಸಮಯದಲ್ಲಿ ಮೂರನೇ ತರಗತಿಯನ್ನೂ ಕಲಿಯದ ಹಿರಿಯೊಬ್ಬರು ಹೇಳಿದ ಪರಿಸರ ಪಾಠವನ್ನು ನಿಜಕ್ಕೂ ಎಲ್ಲರೂ ಅರ್ಥ ಮಾಡಿಕೊಳ್ಳುವಂತಿದ್ದರೆ ಬಹುಶಃ ನಾವಿಂದು ಪ್ರಾಣಿಗಳನ್ನು ರಕ್ಷಿಸಿ ಎಂಬ ಸ್ಲೋಗನ್‌ಗಳನ್ನು ಹಿಡಿದು ನಮ್ಮ ಶಾಲಾ ಮಕ್ಕಳನ್ನು ಮೆರವಣಿಗೆ ಹೊರಡಿಸುವ ಅಗತ್ಯವಿರಲಿಲ್ಲ.


   ನನ್ನ ಆತ್ಮೀಯ ಗೆಳೆಯನೊಬ್ಬನಿಗೆ ಬದನೆ ಕಾಯಿ, ಬಟಾಟೆ ಬೆಂಡೆಕಾಯಿಗಳನ್ನು ತಿಂದರೆ ಮೈಯ್ಯೆಲ್ಲ ಚಿಕ್ಕ ಚಿಕ್ಕ ಗುಳ್ಳೆ ಎದ್ದು ತುರಿಕೆ ಪ್ರಾರಂಭವಾಗುತ್ತದೆ. ನಾವು ಬೆಂಡೆಗೆ, ಬದನೆಗೆ ಹಾಗೂ ಅತೀವ ತುರಿಕೆ ಹುಟ್ಟಿಸುವ ಕೆಸುವಿನ ಎಲೆ, ಗಡ್ಡೆಯ ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯಗಳಿಗೆ, ಸುವರ್ಣ ಗಡ್ಡೆ ಎನ್ನುವ ಅತ್ಯಪೂರ್ವ ಗಡ್ಡೆಗೆ ನಮ್ಮದೇ ಆದ ವಾಟೆಹುಳಿ ಬೆರೆಸುತ್ತೇವೆ, ಮೊನ್ನೆ ‘ಬೆಂಡೆಗೆ ಮುರುಗಲು ಹುಳಿಯನ್ನೇ ಹಾಕು ಅದರ ಲೋಳೆ ಕಡಿಮೆಯಾಗಿ ತುರಿಕೆ ಇರುವುದಿಲ್ಲ’ ಎಂದು ಅಮ್ಮ ಹೇಳುತ್ತಿದ್ದರು. ಇದನ್ನೇ ನಾನು ನನ್ನ ಸ್ನೇಹಿತನಿಗೂ ಹೇಳುತ್ತಿದ್ದೆ. ಕೋಕಂ ಸಿಪ್ಪೆ ಇಟ್ಕೋಬೇಕು. ತುರಿಕೆ ಆದಾಗಲೆಲ್ಲ ನೀರಲ್ಲಿ ಹಿಚುಕಿ ಆ ನೀರು ಕುಡಿದು ಅದರ ಸಿಪ್ಪೆಯನ್ನು ತುರಿಕೆ ಎದ್ದ ಚರ್ಮಕ್ಕೆ ತಿಕ್ಕಿದರೆ ನಾವು ಪೈಥಿ ಎನ್ನುವ ಗುಳ್ಳೆ ಏಳುವ ಈ ತರಹದ ಅಲರ್ಜಿ ಕಡಿಮೆಯಾಗುತ್ತದೆಯೆಂದು. ಬಯಲು ಸೀಮೆಯ ಆತನಿಗೆ ನಾವು ಮುರುಗಲು ಅಥವಾ ಪುನಿರ್‌ಪುಳಿ ಎಂದು ಕರೆಯುವ ಕೋಕಂನ ಪರಿಚಯವಿಲ್ಲ. ಹೀಗಾಗಿ ಅದರ ಬಳಕೆಗೂ ಹಿಂದೇಟು ಹಾಕುವುದು ಸಹಜವೇ.  ಕಾಡು ಕಲಿಕೆಗೆ ನೂರಾರು ದಾರಿಗಳು ಲೇಖನ ನನ್ನ ಈ ಔಷಧಿಯ ಹುಳಿಯ ನಿಜಾಯತಿಯನ್ನು ಸಿದ್ಧಪಡಿಸಿದ್ದಕ್ಕಾಗಿ ಖುಷಿಯಾಯಿತು. ಕೆಸುವಿನ ಎಲೆ ತಿಂದು ತುರಿಕೆಯ  ಕಾರಣದಿಂದಾಗಿ ಅರ್ಧ ನಾಲಿಗೆ ಹೊರಚಾಚಿ ಉಸಿರಾಟಕ್ಕೆ ಸಂಕಷ್ಟ ಪಡುತ್ತಿದ್ದ ಆಕಳ ಕರುವಿಗೂ ಹೂಳಿ ತಿನ್ನಿಸಿ ಬದುಕಿಸಿದ ಕಥೆಯಿದೆ. ಸನೈಡ್‌ನಷ್ಟು ತೀಕ್ಷ್ಣವಾದ ವಿಷದ ನೀರು ಬಿಡುವ ಕಳಲೆಯನ್ನೂ ಆಹಾರ ಯೋಗ್ಯವನ್ನಾಗಿ ಮಾಡಿಕೊಂಡಿರುವ ಹಳ್ಳಿಗರ ವೈಶಿಷ್ಟ್ಯತೆಯನ್ನು ಕಳವೆಯವರು ವಿವರಿಸುತ್ತ ಯಾವ ಪಾಕತಜ್ಞರಾಗಲಿ, ವಿಜ್ಞಾನಿಗಳಾಗಲಿ ವಿವರಿಸಿದ ಪಾಠ ಇದಲ್ಲ ಎನ್ನುತ್ತಾರೆ. ಇಂತಹುದ್ದೇ ಉಪ್ಪಾಗೆ ಹುಳಿಗೆ ಒಂದು ಕಾಲದಲ್ಲಿ ಕೆಜಿಗೆ ಐನೂರು, ಆರು ನೂರು ರೂಪಾಯಿಗಳಾಗಿ, ಒಂದು ಹಂತದಲ್ಲಿ ಸಾವಿರ ರೂಪಾಯಿಯವರೆಗೂ ಹೋಗಿದ್ದನ್ನು ಚಿಕ್ಕಂದಿನಲ್ಲಿ ಗಮನಿಸಿದ್ದೇನೆ. ಉಪ್ಪಾಗೆ ಕಾಯನ್ನಷ್ಟೇ ಕೊಯ್ಯುವ ಬದಲು, ರೆಂಬೆಕೊಂಬೆಗಳನ್ನೆಲ್ಲ ಕಡಿದು, ಉಪ್ಪಾಗೆ ಸಸ್ಯದ ಅವನತಿಗೆ ಕಾರಣವಾಗಿದ್ದೂ ಗೊತ್ತಿದೆ. ಇಂದಿಗೂ ದೇಹದ ಉಷ್ಣತೆಗೆ, ಕೈಕಾಲು ಬಿರುಕಿಗೆ ಬಳಸುವ ಮುರುಗಲು ತುಪ್ಪ ಹಾಗೂ ದೇಹದ ತೂಕ ಇಳಿಸುತ್ತದೆಯೆಂದು ನಾನು ಹುಡುಕುತ್ತಿರುವ ಉಪ್ಪಾಗೆ ತುಪ್ಪ ಈಗ ಅಪರೂಪದ ವಸ್ತುವಾಗಿದೆ ನಮ್ಮ ಆಧುನಿಕತೆಯಿಂದಾಗಿ.


        ಶಿವಾನಂದ ಕಳವೆಯವರ ಜಲಜಾಗ್ರತಿ ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಕೆರೆಗಳ ಸಂರಕ್ಷಣೆಗಾಗಿ ಇಡೀ ಕರ್ನಾಟಕದಾದ್ಯಂತ ಓಡಾಡಿ ಅನೇಕ ಕೆರೆಗಳ ಪುನರುತ್ಥಾನ ಮಾಡಿದ್ದು ಗೊತ್ತಿದೆ. ಇಲ್ಲಿ ಜಲಜಾಗ್ರತಿಯ ಬಗ್ಗೆ ಹೇಳಿದ್ದಾರೆ, ಪರಿಸರದ ಕುರಿತಾಗಿ ಭಾಷಣ ಮಾಡಿ, ಕ್ವಿಜ್ ಏರ್ಪಡಿಸಿ, ಸೆಮಿನಾರ್‌ಗಳನ್ನು ಮಾಡುವ ಬದಲು ಒಂದಿಷ್ಟು ಗಿಡನೆಟ್ಟು ಬೆಳೆಸಬೇಕಾದ ಅನಿವಾರ್‍ಯತೆಯನ್ನು ಒತ್ತಿ ಹೇಳಿದ್ದಾರೆ. ಓಡುವ ಮಳೆ ನೀರನ್ನು ನಿಲ್ಲಿಸಿದರೆ ಅದು ಕಾಡಿನ ಬಣ್ಣವನ್ನು ಹಚ್ಚಹಸಿರಾಗಿಸುವ, ಬಣ್ಣ ಬಣ್ಣದ ಹೂಗಳಿಂದ ಶೃಂಗರಿಸುವ ಪರಿಯನ್ನು ವಿವರಿಸಿದ್ದಾರೆ. ಮುಂಡುಗೋಡದ ಪಾಳಾ ಎಂಬ ಬಯಲಿನಲ್ಲಿ ಮಾವಿನ ತೋಟ ಮಾಡಿಸಿದ ಅಪ್ಪಾರಾಯರ ಬಗ್ಗೆ ಹೇಳಿ ಗಿಡ ಬೆಳೆಸುವುದು ನಮ್ಮೆಲ್ಲರ ಕಾಯಕವಾಗಬೇಕು ಎನ್ನುತ್ತಾರೆ. ಯಾಣದ ಭೈರವೇಶ್ವರ ಶಿಖರದಲ್ಲಿ ಎಲ್ಲಿಯವರೆಗೆ ಜೇನು ಗೂಡುಗಳಿರುತ್ತವೆಯೋ ಅಲ್ಲಿಯವರೆಗೆ ಭೈರವ ಯಾಣದಲ್ಲಿ ನೆಲೆಸಿರುತ್ತಾನೆ ಎಂದು ಹೆಜ್ಜೇನುಗಳ ಬಗೆಗಿರುವ ಪುರಾಣದ ನಂಬಿಕೆಯನ್ನು ಹೇಳುತ್ತ ಬಿರುಬೇಸಿಗೆಯ ಫೆಬ್ರುವರಿಯಲ್ಲಿ ಮಳೆ ಬಿದ್ದರೆ ಮತ್ತಿ ಹೂಗಳು ಬಿಡುತ್ತವೆ ಮತ್ತು ಜೇನಿನ ಸಂತತಿ ಆಗ ಹೆಚ್ಚಾಗುತ್ತದೆ ಎಂಬ ಹಳ್ಳಿಗರ ಅನುಭವದ ಮಾತುಗಳನ್ನು ಹೇಳುತ್ತಾರೆ.  ಕಹಿ ರುಚಿಯ ಅಂಟುವಾಳದ ಮರ ಹೂ ಬಿಡುವ ಸಮಯದಲ್ಲಿ ಜೇನು ಸಿಕ್ಕರೆ ಅದು ತೀರಾ ಸಿಹಿ ಮತ್ತು ಔಷಧೀಯ ಗುಣ ಹೊಂದಿರುತ್ತದೆ ಎಂಬುದು ನಮ್ಮ ಹಳ್ಳಿಗಳ ಕಡೆಯ ಮಾತು. ಅಂದಹಾಗೆ ಮತ್ತಿ ಮರದ ಗಂಟುಗಳನ್ನು ಒಡೆದರೆ ಬೇಸಿಗಯ ಸುಡು ಬಿಸಿಲಲ್ಲೂ ಲೀಟರ್‌ಗಟ್ಟಲೆ ನೀರನ್ನು ಪಡೆಯಬಹುದೆಂಬ ಹಳ್ಳಿಯ ಕಾಡಿನ ಮಕ್ಕಳ ನಂಬಿಕೆ ಹಲವಾರು ಕಡೆ ಪ್ರಸ್ತಾಪಿತವಾಗಿದೆ. ಅತ್ತಿ ಮರದ ಬೇರಿನ ನೀರಲ್ಲಿ ಕಲೆಸಿ ಮಾಡಿದ ಚಕ್ಕುಲಿ ತಿಂದರೆ ಕರಿದೆಣ್ಣೆಯ ಕೆಮ್ಮು ಬರುವುದಿಲ್ಲ ಎಂಬುದು, ಹುಣಸೆಹಣ್ಣಿಗೆ ಹುಳಿಗೆ ಉಪ್ಪು ಹಾಕಿಟ್ಟರೆ ಬಹುಕಾಲ ಕೆಡುವುದಿಲ್ಲ ಎಂಬುದು, ಲಿಂಬು ಹಣ್ಣನ್ನು ಬೂದಿಯಲ್ಲಿ ಮುಚ್ಚಿಟ್ಟರೆ ತಿಂಗಳುಗಟ್ಟಲೆ ತಾಜಾ ಇಡಬಹುದೆನ್ನುವುದನ್ನು ಅಮ್ಮಂದಿರ ಬಳಿ ಕಲಿಯಬೇಕೆ ಹೊರತೂ ಪಾಕಶಾಸ್ತ್ರದವರಿಂದಲ್ಲ ಎನ್ನುತ್ತಾರೆ.


ನನಗೆ ಯಾರಾದರೂ ನಿನಗೆ ಇಷ್ಟವಾದ ಹಣ್ಣುಗಳನ್ನು ಪಟ್ಟಿ ಮಾಡು ಎಂದು ಕೇಳಿದರೆ ನನ್ನ ಪಟ್ಟಿಯಲ್ಲಿ ಗೇರು ಹಣ್ಣು ಮೂರು ಅಥವಾ ನಾಲ್ಕನೆಯ ಸ್ಥಾನದಲ್ಲಿರುತ್ತದೆ. ಹೊರಗಿನವರಿಗೆ ಕೇವಲ ಗೋವಾ ಫೆನ್ನಿ, ಉರಾಕ್ ಮಾತ್ರ ನೆನಪಿಸುವ ಗೇರುಹಣ್ಣಿನ ಔಷಧಿಯ ಗುಣಗಳ ಪಟ್ಟಿಮಾಡಲು ಹೊರಟರೆ ನಾಲ್ಕು ಪುಟಗಳೂ ಸಾಕಾಗದು. ಗೇರುಹಣ್ಣಿನ ಬಗ್ಗೆ ಶಿವಾನಂದ ಕಳವೆಯವರು ಬರೆದದ್ದನ್ನು ಓದುವುದಕ್ಕಾದರೂ ನೀವು ಕಾನ್ಮನೆಯ ಕಥೆಗಳನ್ನು ಓದಲೇ ಬೇಕು. ಅಂದಹಾಗೆ ಕಾನ್ಮನೆ ಹಾಗೂ ಶಿವಾನಂದ ಹೆಗಡೆಯವರ ಜೊತೆ ತಳುಕು ಹಾಕಿಕೊಂಡಿರುವ ಮತ್ತೊಂದು ಹೆಸರೆಂದರೆ ಅದು ಗೌರಿ. ಗೌರಿ ಎಂದರೆ ಶಿವಾನಂದರು ಕಾಪಾಡಿಕೊಂಡ ಜಿಂಕೆ. ಗೌರಿಯ ಆತ್ಮಕತೆಯೆ ಬೇರೊಂದಿದೆ. ಕಾಡಿನ ರಸದೌತಣ ಉಣ್ಣಿಸುವ ಈ ಬರಹಗಳು ಎರಡು ವರ್ಷಗಳಿಂದ ಕಾಡಿನಲ್ಲಿ ಉಳಿದುಕೊಳ್ಳಲಾಗದೇ ಪರಿತಪಿಸುತ್ತಿರುವ  ನನಗಂತೂ ಒಂದಿಷ್ಟು ನೆಮ್ಮದಿ ನೀಡಿದವು. ನನಗಿಂತಲೂ ಕಾಂಕ್ರಿಟ್ ಕಾಡಿನಲ್ಲಿ ವಾಸಿಸುವವರಿಗೆ ಈ ಪುಸ್ತಕ ಅತ್ಯುತ್ತಮ ಮಾರ್ಗದರ್ಶಿ, ಅಚ್ಚರಿಗಳ ಆಗರ, ಕಾಡಿನ ಕುರಿತಾದ ಹೊಸ ವಿಷಯಗಳ ಎನ್‌ಸೈಕ್ಲೋಪಿಡಿಯಾ ಕೂಡ ಆಗಬಲ್ಲದು.

****************************************

ಲೇಖಕರ ಬಗ್ಗೆ ಎರಡು ಮಾತು:


ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು



4 thoughts on “

  1. ವಾವ್…ಕಾಡು,ಕಾಡಿನಲ್ಲಿ ಸಿಗುವ ಗಿಡಮೂಲಿಕೆ,ಕಾಯಿ,ಎಲೆಗಳ ಔಷಧಿ ತಿಳುವಳಿಕೆ,ಕಾಡು ಸುತ್ತಿದ ಚಿಕ್ಕ ಅನುಭವ ನೀಡಿತು ಈ ಬರಹ.ನಿಸರ್ಗದ ಸಂಸರ್ಗದಲ್ಲಿನ ಒಡನಾಟದಿಂದಾಗಿ ಈ ಲೇಖನ ಅನುಭದ ಸಾರದಂತಿದೆ.ಅಪರೂಪಕ್ಕೆ ಹಳ್ಳಿಗೆ ಹೋಗಿ ಸಂಭ್ರಮಿಸುವ ನನ್ನಂತಹವಳಿಗೆ ನಿಜಕ್ಕೂ ಈ ಕೃತಿ ಬೆರಗೆ.ನಿಸರ್ಗದ ಬಗೆಗೆ ತಿಳುಸುತ್ತಲೇ ನಮ್ಮನ್ನು ಅತ್ತಕಡೆ ಸೆಳೆಯುವ ಈ ಕಥೆಗಳ ವಿಷಯ ವಿವರಣೆ ಚನ್ನಾಗಿ ಮೂಡಿಬಂದಿದೆ.ಸುಲಲಿತವಾದ ಆತ್ಮೀಯ ಬರಹವಿದು.

  2. ಶ್ರೀದೇವಿ..ಕೃತಿಕಾರರ ಜ್ಞಾನದ ಹರಹು ನಿಮ್ಮ ವಿಮರ್ಶೆಯಲ್ಲಿ ಸಮರ್ಥವಾಗಿ ಮೂಡಿಬಂದಿದೆ.ಎಂದಿನಂತೆ ನೀವು ಸ್ವಂತ ಅನುಭವಗಳನ್ನು ವಿಮರ್ಶೆಯಲ್ಲಿ ಅಡಕಗೊಳಿಸಿರುವಿರಿ…

  3. ನಿಸರ್ಗದ ಹತ್ತಿರವೇ ಸುಳಿದಾಡಿದಂತೆ, ಬಹಳ ಕಾಡುವ ಬರಹ, ಪುಸ್ತಕ ಓದಬೇಕೆನಿಸುತಿದೆ

Leave a Reply

Back To Top