ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು


ಬೇಡದವರ ತಲೆ
ಬೇಡ, ತೆಗೆಯುವುದು,
ತೆಗೆದ್ಹಾಕು ಅವರ
ಹೆಸರು, ತಲೆಯಿಂದ.
ಕಷ್ಟ-ಕಾರ್ಪಣ್ಯ, ದ್ವೇಷ-
-ಅಸೂಯೆಯ ವ್ಯಾಧಿಗೆ
ದೇವ ಕೊಟ್ಟ ಔಷಧಿ
ಮರೆವಿನ ಗುಳಿಗೆ
“ನಾ”ಎಂಬುದಿರಬೇಕು
“ಮೈ” ಇದ್ದಂತೆ ಬೆಚ್ಚಗೆ,
“ನಾನೇ” ಎಂದವನ ‘ಮೈ’
ಬಿಸಿ ಏರಿ ವ್ಯಾಧಿಗೆ.
ಮನುಷ್ಯ ಆಸೆಗಳ
ಬಿಡಲಾರ ಸಾಯಲು,
ಆಸೆಯು ಮನುಷ್ಯನ
ಬಿಡದು ಬದುಕಲು.
ಹಗಲು ಕಳೆಯಿತು
ಇಲ್ಲ ಮುಗುಳುನಗೆ,
ನಿದ್ದೆ ಇಲ್ಲದಿರುಳು
ಈ ಇಳಿ ವಯಸಿಗೆ.
ಮನೆ, ಊರು, ಸಂಬಂಧ
ಎಲ್ಲ ಬದಲಿಸಿದ,
ಸಿಗದಾಗ ನೆಮ್ಮದಿ
ತನ್ನಲ್ಲೇ ಬದಲಾದ.
ವ್ಯಾಸ ಜೋಶಿ.
ವಿನೂತನ ಶೈಲಿಯ ಚುಟುಕು ಸಾಹಿತ್ಯಕ್ಕೆ ನಮೋನ್ನಮಃ