ನೂತನಾ ದೋಶೆಟ್ಟಿ ಕಾವ್ಯಗುಚ್ಛ
ಬಟ್ಟಲ ತಳದ ಸಕ್ಕರೆ

ಬಟ್ಟಲಲ್ಲಿ ಆಗಷ್ಟೇ ಕಾಯಿಸಿದ
ಬಿಸಿ ಹಾಲು
ಜೊತೆಗೆ ತುಸು ಸಕ್ಕರೆ
ಹಿತವಾದ ಮಿಲನವ
ಸವಿಯುವ ಪರಿ
ಸುಖವೇ ಸಾಕಾರವಾಗಿ
ಬೆಳದಿಂಗಳೊಡಗೂಡಿದ
ತಂಗಾಳಿಯ ಪಯಣ
ಮೆತ್ತನೆಯ ಹಾಸು
ಕರೆವ ಕೆಂಪು ಹೂಗಳ ಗುಂಪು
ಕಾಮನ ಬಿಲ್ಲಿಗೂ ಬಣ್ಣ ತುಂಬುವುದೇ?
ಬಟ್ಟಲು ಬರಿದಾದಾಗ
ತಳದಲ್ಲುಳಿದ ತುಸು
ಸಕ್ಕರೆಯನ್ನೇ
ತುದಿ ಬೆರಳಿನಿಂದ ಸವರಿ
ಮೆಲ್ಲಗೆ ಹೀರಿದಾಗ
ಖಾಲಿಯಾಗುವ ಭಯ
ಕಾಲನ ದಾರಿಗುಂಟ
ಸವೆಯಬೇಕಾದ ಹಾದಿ
ಮೂಡಿ ಮಸುಕಾಗಿರುವ
ಹೆಜ್ಜೆ ಗುರುತು
ಬಟ್ಟಲ ತಳದ
ಸಕ್ಕರೆಯಂತೆ.
ನಿನಗೆ ನೀನೇ ಸರಿಸಾಟಿ

ಮನಸೊಂದು
ಮಲ್ಲಿಗೆ ಹೂ
ಅಂಗಳದ ಬೆಳ್ಳಿ ರಂಗೋಲಿ
ಅರಳಿದಾಗ
ಬಣ್ಣ ಬಣ್ಣದ ಹೂಗಳ
ಓಕುಳಿ
ಬಿರಿದು ನಕ್ಕಾಗ
ಬಾನ ಚಿಕ್ಕೆಗಳ
ಚೆಲ್ಲಾಟದ ಪರಿ
ಮನಸ್ಸೊಂದು
ಕೋಗಿಲೆಯ ಕೊರಳ ಇಂಪು
ಕರೆವ ಮಾಘದ ಮಧುರ ಪೆಂಪು
ಮೌನದ ಮೆಲ್ಲುಸಿರ
ಕರೆಗೆ ಬಾಗುವ ಕ್ಷಣ
ಗೆಜ್ಜೆಯ ಝಣ ಝಣ
ನಾದ ಲಯ ತಾಣ
ಮನಸ್ಸೊಂದು
ಹರಿವ ನೀರ ಬದಿಯ.
ಪುಟ್ಟ ಹೂಗಳು ಗುಂಪು
ಮೆತ್ತಗೆ ಸೋಕಿದ
ಕೈಯ ಕಚಗುಳಿಗೆ
ಅದುರುವ
ನಾಜೂಕು ನವಿರು ಭಾವ
ಮನಸ್ಸೊಂದು
ಬೆಳದಿಂಗಳ ಇರುಳ ಶಾಂತಿ
ಕಣ್ಣು ಮುಚ್ಚಾಲೆಯಾಡುವ
ಚಂದ್ರನ ಬಿಸಿಯುಸಿರು
ಪುಟ್ಟ ಕಂದನ ಕಿಲ ಕಿಲ ನಗು
ಕಿಶೋರಿಯ ಬೆಡಗು
ಅವನು ನೋಟದ ತಣ್ಪು
ಮನಸೇ
ನಿನಗೆ ನೀನೇ ಸರಿಸಾಟಿ.
ಮಾತೆಂದರೆ ಏನು ಗೂಗಲ್’

ಜಗಮಗಿಸುವ ದೀಪಗಳು ನಗುತ್ತಿವೆ
ಹಾಗೆ ಅನ್ನಿಸುತ್ತಿರಬಹುದೆ?
ನದಿಗಳ ಕಣ್ಣೀರು ಕಾಣದಷ್ಟು
ದೂರದಲ್ಲಿವೆ ಅವು
ಮುಗಿಲೆತ್ತರದ ಸಿಮೆಂಟು ಗೋರಿಗಳಲ್ಲಿ
ಸುಖವೋ ಸುಖ
ಹಾಗೆ ಅನ್ನಿಸುತ್ತಿರಬಹುದೆ?
ಗುಬ್ಬಿಗಳು ಚದುರಿವೆ ಕಾಗೆಗಳು ಬೆದರಿವೆ
ಉಸಿರಾಡದ ಹಸುರಿಗೆ ಸೋಂಕು ರೋಗ
ತಣ್ಣನೆಯ ಗಾಳಿಯೆಂದರೆ ತಾನೆ
ಏರ್ ಕಂಡೀಷನ್ನಿಗೆ ಅನ್ನಿಸಿರಬಹುದೆ?
ಅಜ್ಜ ಮೂಗಿನ ಮೇಲೆ ಬೆರಳಿಟ್ಟು ಕೂತಿದ್ದಾನೆ
ಮನೆಯಂಗಳದ ಮಾವಿನ ಮರ ಅವನ ಕನಸಿನಲ್ಲಿ
ಅವನಿಗೆ ಕತೆ ಹೇಳಲೆ
ಬಾಯಿಪಾಠ ಮಾಡಿಸಲೇ
ಅಜ್ಜಿಗೆ ಅನ್ನಿಸಿರಬಹುದೆ?
ಮಾತೆಂದರೆ ಏನು ಗೂಗಲ್
ಮೊಮ್ಮಗು ಕೇಳುತ್ತದೆ.
ನಾನು ಹೀಗಿದ್ದೆನೆ
ಬದಲಾಗಿಬಿಟ್ಟೆನೆ
ಮಾತಿಗೆ ಅನ್ನಿಸಿರಬಹುದೆ?
ಮೈಂಡ್ ಯುವರ್ ಲ್ಯಾಂಗ್ವೇಜ್
ಹೆಂಡತಿ ಹೇಳುತ್ತಾಳೆ
ಯೂ ಬಿಚ್ ಎನ್ನುತ್ತಾನೆ ಗಂಡ.
ಪಬ್ಬು ಬಾರುಗಳಲ್ಲಿ
ಆ ಹುಡುಗಿಯ ಕುಲುಕಿಗೂ ಬೆಲೆ ಕಟ್ಟುತ್ತಾರೆ
ಹಾಗೆ ಅನ್ನಿಸುತ್ತಿರಬಹುದೆ?
ಮನೆಯಲ್ಲಿ ಸೂರೆ ಹೋಗುತ್ತಿರುವ ಸುಖ ಅಣಕಿಸುತ್ತಿದೆ.
ಮೌನ ದುಃಖಿಸುತ್ತಿದೆಯೊ
ನಗುತ್ತಿದೆಯೊ?
ಕಳೆದುಕೊಳ್ಳುವುದು ದುಃಖ
ಪಡೆಯುವುದು ಸಂತಸವೇ
ಏನು ಕಳೆದದ್ದು
ಯಾವುದು ಪಡೆದದ್ದು !!
******************************
ನವಿರು ನವಿರು ಭಾವದ ಕವಿತೆಗಳು…