ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ನೀವು ಒಂದು ದಿನ ನನಗೆ ಒಪ್ಪಿಗೆ ಕೊಟ್ಟರೆ ನನ್ನ ಕಬ್ರ್ ನಾನೇ ತೋಡಿಕೊಳ್ಳುತ್ತೇನೆ.ನನ್ನ ಗೋರಿ ಕಟ್ಟಲು ತಂದ ಈ ಬಂಡೆಗಲ್ಲಿನ ಮೇಲೆ ನಾ ಹಿಂದೂಸ್ತಾನಿ ಎಂದು ನಾನೇ ಕೆತ್ತಿಕೊಳ್ಳುತ್ತೇನೆ. ನೀವು ಸುಮ್ಮನಿದ್ದರೆ ನನ್ನ ಮಸಣ ನಾನೇ ನಿರ್ಮಿಸಿಕೊಳ್ಳುತ್ತೇನೆ.ನಾಳೆ ನನ್ನ ಗಜಲ್ ಓದುವಾಗ ಯಾರೂ ಧರ್ಮ ಹುಡುಕಬಾರದೆಂದು ಬೇಡಿಕೊಳ್ಳುತ್ತೇನೆ. ನೀವು ದೂರವಿದ್ದರೆ ನನ್ನ ಗೋರಿ ಮೇಲೆ ಬಿಳಿ ಹೂ ಹುಟ್ಟಲು ಕೇಳಿಕೊಳ್ಳುತ್ತೇನೆ.ನನ್ನ ಗೋರಿ ಬಳಿ ಯಾವ ಧರ್ಮದ ಝಂಡಾ ಹಾರದಿರಲಿಯೆಂದು ವಿನಂತಿಸಿಕೊಳ್ಳುತ್ತೇನೆ. ನೀವು ಬರುವುದಾದರೆ ನನ್ನ ಗೋರಿ ಬಳಿ ಗಡ್ಡ ಜುಟ್ಟ ದಾರದ ಕುರುಹು ಕೇಳಬೇಡಿ ಎಂದು ಕೈಜೋಡಿಸುತ್ತೇನೆ.ನನ್ನ ಗಜಲ್ ನಿಮ್ಮ ನಡುವೆ ಮನುಷ್ಯ ಪ್ರೀತಿ ಕಟ್ಟಲಿಯೆಂದು ದುವಾ ಮಾಡುತ್ತೇನೆ. ನೀವು ಧರ್ಮದ ಅಮಲಿನಲ್ಲಿ ಸಾವು ಬೇಡುವುದಾದರೆ ನಾನು ಗೋರಿಯಲ್ಲಿ ಮರು ಜನುಮ ಧಿಕ್ಕರಿಸುತ್ತೇನೆ.ನನ್ನ ಗೋರಿ ಸುತ್ತ ಬಿಳಿ ಪಾರಿವಳದ ದಂಡು “ಗಿರಿರಾಜ”ನ ಐಕ್ಯತೆಯ ಮಂತ್ರ ಪಠಿಸಲಿಯೆಂದು ಬೇಡಿಕೊಳ್ಳುತ್ತೇನೆ **********************************.

ಗಜಲ್ Read Post »

ಪುಸ್ತಕ ಸಂಗಾತಿ

ಕಾದಂಬರಿ ಕುರಿತು ಸು ನಾನು ಪ್ರತಿ ಪುಸ್ತಕ ಓದಿದಾಗಲೂ ಅದರಲ್ಲಿ ಬರುವ ಒಂದು ಪಾತ್ರ ನಾನೇ ಎನ್ನಿಸಿಬಿಡುವಷ್ಟು ಕೆಲವೊಂದು ಪಾತ್ರಗಳು ಕಾಡುತ್ತವೆ. ಇಲ್ಲಿ ಸು ಕಥಾನಾಯಕನಾದರೂ ನನಗ್ಯಾಕೊ ಪ್ರಕಾಶ್ ಪಾತ್ರ ಬಹಳ ಹಿಡಿಸಿತು. ಇಡೀ ಸು ಕಾದಂಬರಿ ಪ್ರಕಾಶ್ ಪಾತ್ರವೇ ನಿರೂಪಣೆ ಮಾಡಿದ್ದು ಅಂತ ನನಗೆ ಭಾಸವಾಯಿತು. ಇದನ್ನ ಕಾದಂಬರಿ ಅನ್ನೋದಕ್ಕಿಂತ ಒಂದು ಅನುಭವ ಕಥನ ಅಂತ ಕರೆಯೋದು ಹೆಚ್ಚು ಸೂಕ್ತ ಅನ್ನಿಸಿತು ನನಗೆ. ಕಡೆಯ ಎರಡು ಅಧ್ಯಾಯಗಳಲ್ಲಿ ಸು ಮತ್ತು ಪ್ರಕಾಶ್ ಮನಸ್ಸಿನ ತಳಮಳಗಳು ಬಹಳ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಸು, ಪ್ರಕಾಶ್, ಮಾರಡೂರಿ,ಸು ನ ಸಂಗಾತಿ ಇವೆಲ್ಲ ಪಾತ್ರಗಳು ಆಪ್ತವೆನಿಸುತ್ತವೆ. ಹೇಲಾಳ ಜೀವಕೋಶಗಳು ಮತ್ತವಳ ಸಮಾಧಿಯ ಬಗೆಗಿನ ಸನ್ನಿವೇಶಗಳು, ಪ್ರಕಾಶ್ ಸು ನ ಸಮಾಧಿಯ ಬಳಿಯ ಸನ್ನಿವೇಶಗಳು ಭಾವುಕವಾಗಿವೆ‌. ಮೆಟಾಸ್ಟಾಸಿಸ್, ಆಫ್ಲಾಟಾಕ್ಸಿನ್, ಹಸಿ ಕಾಳುಗಳ ಮೇಲೆ ಬೆಳೆಯುವ ಯಾಸ್ಪರ್ಜಿಲ್ಲುಸ್ ಫ್ಲಾವುಸ್ ಎಂಬ ಶಿಲೀಂಧ್ರ (ಕ್ಯಾನ್ಸರ್ ಕಾರಕ ವಿಷವಾದ ಆಫ್ಲಾಟಾಕ್ಸಿನ್ ಉತ್ಪತ್ತಿಸುವುದು), ಸು ನ ಕ್ಯಾನ್ಸರ್ ಗೆ ಕಾರಣ ಇವೆಲ್ಲವೂ ಕ್ಯಾನ್ಸರ್ ನ ಬಗೆಗಿನ ಬಹಳಷ್ಟು ವೈಜ್ಞಾನಿಕ ವಿಷಯಗಳನ್ನ ತಿಳಿಸುತ್ತವೆ ಮತ್ತಷ್ಟು ಕುತೂಹಲವನ್ನೂ ಹೆಚ್ಚಿಸಿದೆ. ಸು ಬಹಳ ಇಷ್ಟ ಪಟ್ಟು ಹೆಚ್ಚಾಗಿ ತಿನ್ನುತ್ತಿದ್ದ ನೆಲಗಡಲೆಯೇ ಅವನ ಜೀವಕ್ಕೆ ಕುತ್ತು ತಂದಿದ್ದು ಖೇದಕರ. ಅದು ಹೇಗೆ ಎಂದು ತಿಳಿಯಲು ಪುಸ್ತಕ ಓದಲೇಬೇಕು. ಟಿಬೆಟ್ ನೆಲದ ಸಂಸ್ಕೃತಿಯ ಸಣ್ಣ ಪರಿಚಯದೊಂದಿಗೆ ಅಲ್ಲಿಯ ಶವಸಂಸ್ಕಾರದ ರೀತಿ ಭೀಭತ್ಸ ಹುಟ್ಟಿಸುವಂತಿತ್ತು.  ಅಲೆಕ್ಸಾಂಡರ್ ರೀತಿ ಸು ನ ಎರಡೂ ಕಣ್ಣುಗಳು ಬೇರೆ ಬೇರೆ ಬಣ್ಣಗಳು ಮತ್ತು ಕಾಕತಾಳೀಯವೆಂಬಂತೆ ಅಂತಹದೇ ಬೆಕ್ಕು ಸು ಗೆ ಹತ್ತಿರವಾಗುವುದು ಮತ್ತದು ಅವನನ್ನ ಬಹಳವಾಗಿ ಹಚ್ಚಿಕೊಳ್ಳುವುದು ಯಾವುದೋ ಜನ್ಮದ ಸಂಬಂಧದಂತೆ ತೋರುತ್ತೆ. ಎಷ್ಟೇ ಸಂಶೋಧನೆಗಳನ್ನು ಮಾಡಿದರೂ ಸು ಗೆ ಯಾವುದೇ ರೀತಿಯ ಪ್ರಶಸ್ತಿಗಳು, ಹೆಸರಿನ ಆಸೆ ಇಲ್ಲದೆ ಕೇವಲ ಕ್ಯಾನ್ಸರ್ ನನ್ನು ಸೋಲಿಸಲು ಸಂಶೋಧನೆ ಮಾಡುವನು. ಕೊನೆಗೆ ಸು ಸೋತು ಕ್ಯಾನ್ಸರ್ ಗೆಲ್ಲುವುದು. ಇಲ್ಲಿ ಸು ಮತ್ತು ಅಲೆಕ್ಸಾಂಡರ್ ಗೂ ಹೋಲಿಕೆ ಮಾಡಿರುವುದು ಪರಿಣಾಮಕಾರಿಯಾಗಿದೆ. ಸು ನ ಆತ್ಮವೃತ್ತಾಂತದಂತಹ ಕಥನ, ಸರಾಗವಾಗಿ ಓದಿಸಿಕೊಳ್ಳುವ ಒಂದು ಚಂದದ ಓದು. ********************************************** ಚೈತ್ರಾ ಶಿವಯೋಗಿಮಠ

Read Post »

ಕಾವ್ಯಯಾನ

ಕಪ್ಪುಬಿಳುಪಿನ ಚಿತ್ರ

ಕವಿತೆ ಕಪ್ಪುಬಿಳುಪಿನ ಚಿತ್ರ ಬಿದಲೋಟಿ ರಂಗನಾಥ್ ಅವಳಿಗಾಗಿ ಕಾದ ಭರವಸೆಯ ದೀಪಹೊಯ್ಲಾಡುತ್ತಿರುವಾಗಲೇಇರುವೆಯೊಂದು ಕೂತು ಮೂತಿ ತೀಡಿಮುಂಗೈ ಮೇಲಿನ ಗುರುತ ನೋಡಿ ಕಣ್ಣ ಮಿಟುಕಿಸಿತು ಕಾದ ತಂಗೂದಾಣದ ಗೋಡೆಯ ತೊಡೆಗೀಚಿದ ಅಕ್ಷರಗಳ ಮೌನ ಮುರಿದುಬರುವ ಬಸ್ಸಿನ ಸೌಂಡಿಗೆಉಗುರ ಬಣ್ಣ ಕಚಗುಳಿಯಿಟ್ಟುಬೆರಳ ತುದಿಯ ಅವಳ ಸ್ಪರ್ಶದ ನಗುತುಟಿಯ ಕಚ್ಚಿ ಬೆಳಕಾಡಿತು ಆ ಸಂದಣಿಯಲ್ಲೂ ಸೂಟಿಯಿಟ್ಟ ಕಣ್ಣುಕೆನ್ನೆಕಚ್ಚಿದ ಗುರುತನು ಹುಡುಕಿಭಾವಜಾಡಿನ ಬಲೆನೇಯ್ದುಹಕ್ಕಿಮರಿಯ ಪ್ರೇಮದಂಚು ಹೊಳೆದುಚಂದ್ರಗೆರೆಯ ಕರುಣೆ ಮುದ್ದಾಡಿಕಾಲನ ಕರುಳು ಮರುಗಿನೆಲದ ಬೆವರು ಚಿಗುರಿಸಿದ ಕನಸು ಒಂಟಿ ಚಿಪ್ಪಿನಲಿ ನಿಲ್ಲದ ತೂಕದ ಬೊಟ್ಟುಸತ್ಯದ ಬೆನ್ನಿಗೆ ಬರೆದ ಕಪ್ಪುಬಿಳುಪಿನ ಚಿತ್ರಕಾವಳ ಬಂದ ದಿನ ಶಪಿಸಿದ ಮನಸುಕಾಣದ ಅವಳ ಆಕೃತಿಗೆ ಮರುಗಿಜೀವತಂತುವಿನ ಸದ್ದುಬಯಲ ಮಾರ್ದನಿಸಿಭಾವಸ್ಪರ್ಶದ ಗಿಡದ ಬೇರಿನನಾಲಿಗೆ ಒಣಗಿಎದೆ ಬಿರಿದ ಶೋಕಇನ್ನೂ ಕೇಳುತ್ತಿದೆ. **********************

ಕಪ್ಪುಬಿಳುಪಿನ ಚಿತ್ರ Read Post »

ನಿಮ್ಮೊಂದಿಗೆ

ಕಲ್ಲಾಗಿಯೇ ಇರಬೇಕಿತ್ತು!

ಕವಿತೆ ಕಲ್ಲಾಗಿಯೇ ಇರಬೇಕಿತ್ತು! ರಾಜೇಶ್ವರಿ ಭೋಗಯ್ಯ ಇದ್ದದ್ದು ನಿಜವಾಗಿದ್ದರೆ ಅಹಲ್ಯೆಹೇಗೆ ಸಹಿಸಿಕೊಂಡಳೋನೋವನ್ನೂ ಅವಮಾನವನ್ನು ತನ್ನ ತಪ್ಪಿಲ್ಲದಿದ್ದರೂ ಶಾಪವಿಟ್ಟ ಅವಮಾನಕ್ಕೆವಿನಾಕಾರಣ ಕಲ್ಲಾಗಿಸಿದ ನೋವಿಗೆಹೇಗೆ ಸಹಿಸಿಕೊಂಡಳೋ ಅಬಲೆ ಹೆಂಡತಿಯನ್ನು ನೆಲಕ್ಕೆ ತುಳಿದುನಿನ್ನನ್ನು ಮೇಲಕ್ಕೆತ್ತುವ ಹಿಂದೆಯಾವ ಲೋಕ ಕಲ್ಯಾಣದ ಸಂಚಿತ್ತು ಗೌತಮ ಸಹಕರಿಸಲಿಲ್ಲಇಂದ್ರನೂ ಕಾಪಾಡಲಿಲ್ಲವ್ರತಕೆಟ್ಟರೂ ಸುಖಪಡಲಿಲ್ಲಅನ್ಯಾಯವ ಸಹಿಸಿಕೊಂಡು ಸುಮ್ಮನಿರಬಾರದಿತ್ತು ಕಲ್ಲಾಗಿಯೇ ಇರಬೇಕಿತ್ತು ನೀನುರಾಮನ ಪಾದಸ್ಪರ್ಶ ಯಾಕೆ ಬೇಕಿತ್ತುಒಳಗೇ ಹುದುಗಿರಬೇಕಿತ್ತು ನೀನುನಿಜ ಧರ್ಮ ತಿಳಿದವ ಬುದ್ದಬಂದು ನಿನ್ನ ಮೈ ದಡವುವವರೆಗೂ. **********************

ಕಲ್ಲಾಗಿಯೇ ಇರಬೇಕಿತ್ತು! Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಪ್ರಶ್ನೆಯ ಜರೂರಿ ಕೆಲವು ವರ್ಷಗಳ ಹಿಂದೆ ಎರಡು ವಿದ್ಯಮಾನ ಜರುಗಿದವು. ಒಂದು- ತಾನು ಓದುವ ಶಾಲೆಯನ್ನು ತಾಲಿಬಾನಿಗಳು ಯಾಕೆ ಕೆಡವಬೇಕು ಎಂದು ಪ್ರಶ್ನಿಸಿದ ಪುಟ್ಟಬಾಲೆ ಮಲಾಲಳದು. ಎರಡು-ಬಾಳಾಸಾಹೇಬ್ ಠಾಕರೆ ತೀರಿಕೊಂಡರೆ ಮುಂಬೈ ಬಂದ್ ಯಾಕೆ ಮಾಡಬೇಕು ಎಂದು ಚರ್ಚಿಸಿದ ಇಬ್ಬರು ತರುಣಿಯರದು. ಸುತ್ತಮುತ್ತ ಬದುಕುತ್ತಿರುವ ಲಕ್ಷಾಂತರ ಜನರಲ್ಲಿ ಹುಟ್ಟದ ಪ್ರಶ್ನೆಗಳು ಈ ಹುಡುಗಿಯರಲ್ಲಿ ಸಹಜವಾಗಿ ಹೇಗೆ ಹುಟ್ಟಿಕೊಂಡವು? ನಮಗೇತಕ್ಕೆ ಇಲ್ಲದ ರಗಳೆ ಎಂದು ಬಹುಸಂಖ್ಯಾತ ಸಾರ್ವಜನಿಕರು ಸುರಕ್ಷಿತಮೌನ ತಾಳಿರುವಾಗ ಕೆಲವರೇಕೆ ಕೇಳುವ ದಿಟ್ಟತನ ತೋರುತ್ತಾರೆ? ಪ್ರಶ್ನೆ ಕೇಳುವುದು ಆಲೋಚನ ಶಕ್ತಿಯುಳ್ಳ ಎಲ್ಲ ವ್ಯಕ್ತಿಗಳಲ್ಲೂ ಇರುವ ಸಹಜ ಗುಣ. ಆದರೆ ಹಾಗೆ ಕೇಳದಂತೆ ತಡೆಯಲು ನೂರಾರು ಅಂಕುಶಗಳು ಸಮಾಜದಲ್ಲಿರುತ್ತವೆ. ಆದರೆ ಈ ತಡೆಗಳ ಒಳಗೂ ಪ್ರಶ್ನೆಯನ್ನು ಹುಟ್ಟಿಸಿಕೊಳ್ಳುವುದು ಮುಖ್ಯ; ಅದನ್ನು ಬಹಿರಂಗವಾಗಿ ಕೇಳುವುದು ಮತ್ತು ಅದರ ಪರಿಣಾಮ ಅನುಭವಿಸಲು ಸಿದ್ಧವಾಗುವುದು ಇನ್ನೂ ಮುಖ್ಯ. ಇದನೇ ಕುವೆಂಪು ನಿರಂಕುಶಮತಿತ್ವ ಎಂದು ಕರೆದಿದ್ದು. ಈ ನಿರಂಕುಶಮತಿತ್ವದ ಮಾರಣಾಂತಿಕ ಪರಿಣಾಮವನ್ನು ಸಾಕ್ರೆಟಿಸ್ ಎದುರಿಸಿದ; ಅನೇಕ ಸೂಫಿಗಳು, ಚಾರ್ವಾಕರು ಎದುರಿಸಿದರು; ಭಗತ್‍ಸಿಂಗ್ ಮುಂತಾದ ಹೋರಾಟಗಾರರು ಮುಖಾಮುಖಿ ಮಾಡಿದರು; ಈಗ ಪತ್ರಕರ್ತರು ಚಿಂತಕರು ಎದುರಿಸುತ್ತಿದ್ದಾರೆ. ನಮ್ಮ ಮನೆಗಳಲ್ಲಿ ಎಷ್ಟೊ ಮಹಿಳೆಯರು ಇದರ ಕಹಿಫಲವನ್ನು ಉಂಡಿದ್ದಾರೆ. ಪ್ರಶ್ನೆಗಳು ಕೇವಲ ಸ್ಥಾಪಿತ ವ್ಯವಸ್ಥೆಯನ್ನು ವಿರೋಧಿಸುವ ಕಾರಣದಿಂದ ಹುಟ್ಟುತ್ತವೆ ಎಂದು ತಿಳಿಬೇಕಿಲ್ಲ. ಅವು ಕುತೂಹಲದ ದೆಸೆಯಿಂದಲೂ ಹುಟ್ಟಬಹುದು. ಮಕ್ಕಳು ಸಹಜ ವಿಸ್ಮಯದಿಂದ ಎಷ್ಟೊಂದು ಪ್ರಶ್ನೆ ಕೇಳುತ್ತಿರುತ್ತವೆ? ಯಾಕೆ ಸಂಜೆ ಮುಂಜಾನೆ ಸೂರ್ಯ ಕೆಂಪಗೆ ಕಾಣುತ್ತದೆ? ಹೂವುಗಳಿಗೆ ಏಕಿಷ್ಟು ಬಣ್ಣಗಳಿವೆ? ನೀರೇಕೆ ಹರಿಯತ್ತದೆ? -ಹೀಗೆ ನೂರಾರು. ಇವನ್ನು ಕೇಳಿಸಿಕೊಳ್ಳುವ ಸಹನೆ ಮತ್ತು ಉತ್ತರಿಸುವ ತಿಳಿವು ಬಹುತೇಕ ಹಿರಿಯರಲ್ಲಿ ಇರುವುದಿಲ್ಲ. ತಿಳಿವನ್ನು ಕೊಡುವ ಜಾಗಗಳಾಗಿರುವ ತರಗತಿಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಎಷ್ಟೊಂದು ಪ್ರಶ್ನೆಗಳನ್ನು ಹೊಸಕಿ ಹಾಕಿರಬಹುದು ಎಂದು ನೆನೆದರೆ ಭಯವಾಗುತ್ತದೆ. ಸಹಜ ಪ್ರಶ್ನೆಯನ್ನು ದಮನಿಸುವುದು, ಕೇಳುವವರ ಚೈತನ್ಯವನ್ನೇ ದಮನಿಸಿದಂತೆ. ನಿಜವಾದ ಗುರುಗಳೂ ಕೇವಲ ಪ್ರಶ್ನೆಗೆ ಉತ್ತರಿಸುವುದಿಲ್ಲ. ಪ್ರಶ್ನೆ ಕೇಳುವ ಮನೋಭಾವವನ್ನೂ ನಿರ್ಮಿಸುತ್ತಿರುತ್ತಾರೆ. ತಂದೆತಾಯಿಗಳು ಆದರ್ಶರಾಗುವುದು, ಮಕ್ಕಳಿಗೆ ಸರಿಯಾದ ಆಹಾರ ಬಟ್ಟೆ ವಸತಿ ಕೊಡುವ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವುದರಿಂದ ಮಾತ್ರವಲ್ಲ, ಅವರ ಪ್ರಶ್ನೆ, ಕುತೂಹಲ, ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಓದುವ ಸಹಜ ಹಕ್ಕುಗಳನ್ನು ನಾಶಮಾಡಿದ್ದಾರೊ ಇಲ್ಲವೊ ಎಂಬುದರ ಮೇಲೆ. ತನ್ನ ಪ್ರಶ್ನೆಯನ್ನು ಹೊಸಕಿಹಾಕಿದ ಅಪ್ಪನ ವಿರುದ್ಧ ಬಂಡೆದ್ದ ಪುರಾಣದ ನಚಿಕೇತ ನೆನಪಾಗುತ್ತಾನೆ. ಬಹುತೇಕ ಧರ್ಮಗಳು ಹೊಸ ಪ್ರಶ್ನೆಗಳನ್ನು ಕೇಳುವ ಧೀಮಂತರಿಂದಲೇ ಹುಟ್ಟಿವೆ. ಮುಂದೆ ಅವೇ ಧರ್ಮಗಳು ಪ್ರಶ್ನೆಗಳನ್ನು ಹತ್ತಿಕ್ಕಿಯೇ ಬೆಳೆದಿವೆ. ಬುದ್ಧನಂತಹ ಕೆಲವರು ಮಾತ್ರ ಪ್ರಶ್ನೆ ತಿಳಿವಿನ ಮೂಲವೆಂದು ನಂಬಿದ್ದರು. ನಾನು ಹೇಳಿದ್ದು ಒಪ್ಪಿಗೆಯಾಗದಿದ್ದರೆ ನಿನ್ನ ದಿಟವನ್ನು ನೀನೇ ಹುಡುಕಿಕೊ ಎಂದು ಬುದ್ಧ ನೇರವಾಗಿ ಹೇಳಿದನು. ಹೀಗೆ ಹೇಳಲು ಒಬ್ಬ ಗುರುವಿಗೆ ಬಹಳ ಧೈರ್ಯ ಬೇಕು. ಮಗುವೊಂದು ಹುಟ್ಟುವ ಜೈವಿಕಕ್ರಿಯೆ ಬಲ್ಲ ಎಲ್ಲರಿಗೂ ಅದಕ್ಕೆ ಜಾತಿ ಧರ್ಮಗಳಿರುವುದಿಲ್ಲ ಎಂಬುದು ಗೊತ್ತಿದ್ದರೂ, ಅದು ಹುಟ್ಟಿ ಲೋಕಕ್ಕೆ ಬಂದ ಕೂಡಲೇ ಅದಕ್ಕೆ ಜಾತಿ ಧರ್ಮಗಳು ಯಾಕೆ ಸುತ್ತಿಕೊಳ್ಳುತ್ತವೆ? ಹುಟ್ಟಿನಿಂದ ಯಾಕೆ ಕೆಲವರು ಕೀಳು ಅಥವಾ ಮೇಲು ಅನಿಸಿಕೊಳ್ಳಬೇಕು? ಕೆಲವರು ಯಾಕಷ್ಟು ದುಡಿದರೂ ಬಡವರಾಗಿ ಉಳಿದಿದ್ದಾರೆ? ಯಾಕೆ ವಾಸದ ಪರಿಸರವನ್ನು ಚೊಕ್ಕಟವಾಗಿ ಇರಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ? ಯಥೇಚ್ಛವಾದ ನಿಸರ್ಗ ಸಂಪತ್ತಿದ್ದರೂ ಭಾರತದಲ್ಲೇಕೆ ಬಡತನವಿದೆ? ಎಲ್ಲರಿಗೂ ಸೇರಬೇಕಾದ ಸಂಪತ್ತನ್ನು ಲೂಟಿಹೊಡೆದವರು ಹೇಗೆ ಆರಾಮಾಗಿ ಬದುಕುತ್ತಿದ್ದಾರೆ? ದುಷ್ಟರು ಕಳ್ಳರು ಎಂದು ಗೊತ್ತಿದ್ದರೂ ಜನ ಯಾಕೆ ಕೆಲವರನ್ನು ಚುನಾವಣೆಯಲ್ಲಿ ಆರಿಸುತ್ತಾರೆ? ಸ್ತ್ರೀಯರನ್ನು ನಿಕೃಷ್ಟವಾಗಿ ಚಿತ್ರಿಸುವ ಲೇಖಕರಿಗೆ ಯಾಕೆ ಮಹಿಳಾ ಓದುಗರೇ ಹೆಚ್ಚಿದ್ದಾರೆ? ಹೀಗೆ ನೂರಾರು ಪ್ರಶ್ನೆಗಳಿವೆ. ಪ್ರ್ರಶ್ನೆ ಹುಟ್ಟುವುದು ಮತ್ತು ಪ್ರಕಟವಾಗುವುದು ಮಾತ್ರವಲ್ಲ, ಅವು ಕ್ರಿಯೆಗೂ ಕಾರಣವಾಗಬೇಕು. ಈ ಕ್ರಿಯೆ ತಪ್ಪಾದ ವ್ಯವಸ್ಥೆಯನ್ನು ಬದಲಿಸಬೇಕು. ಮಲಾಲಾ ಎತ್ತಿದ ಪ್ರಶ್ನೆ ತಾಲಿಬಾನಿಗಳನ್ನು ಪ್ರತಿರೋಧಿಸುವ ಹೊಸಅಲೆಯನ್ನು ಹುಟ್ಟಿಸಿತು. ಲೋಕದಲ್ಲಿ ಸ್ವತಂತ್ರವಾಗಿ ವಿಚಾರಮಾಡುವ ಪ್ರವೃತ್ತಿಯೇ ಹೊಸ ಪ್ರಶ್ನೆಗಳ ತಾಯಿ; ಪ್ರಶ್ನೆಗಳು ನಿಸರ್ಗ ರಹಸ್ಯಗಳನ್ನು ಶೋಧಿsಸುವ ವಿಜ್ಞಾನವನ್ನು ಬೆಳೆಸಿವೆ; ಹಳೆಯ ಸಮಾಜವನ್ನು ಹೊಸ ಸಮಾಜವಾಗಿ ಬದಲಿಸಿವೆ. ನಮ್ಮ ಪೂರ್ವಿಕರು ಪ್ರಶ್ನೆ ಕೇಳಿಕೊಳ್ಳದಿದ್ದರೆ ಬೆಂಕಿ ಅಥವಾ ಬೇಸಾಯ ಶೋಧ ಆಗುತ್ತಿರಲಿಲ್ಲ. ವಿಜ್ಞಾನ ತಂತ್ರಜ್ಞಾನದ ಫಲವಾಗಿ ನಾವಿಂದು ಅನುಭವಿಸುತ್ತಿರುವ ಸೌಲಭ್ಯಗಳು ಇರುತ್ತಿರಲಿಲ್ಲ. ಪ್ರಶ್ನೆಯಿಲ್ಲದೆ ಸ್ಥಾಪಿತಸತ್ಯಗಳ ಒಳಗಿನ ಹುಸಿ ಹೊರಬರುವುದಿಲ್ಲ; ಹೊಸ ಚಿಂತನೆ ಹುಟ್ಟುವುದಿಲ್ಲ. ನಾವೇಕೆ ಹೀಗಿದ್ದೇವೆ ಎಂಬ ಪ್ರಶ್ನೆ ಹುಟ್ಟಿರದಿದ್ದರೆ, ಅಮೆರಿಕೆಯ ಕಪ್ಪುಜನ ಗುಲಾಮಗಿರಿಯಿಂದ ಸ್ವತಂತ್ರರಾಗುತ್ತಿರಲಿಲ್ಲ; ಭಾರತೀಯರು ಬ್ರಿಟಿಶರ ವಿರುದ್ಧ ಹೋರಾಡುತ್ತಿರಲಿಲ್ಲ; ಮಹಿಳೆಯರು ಬಿಡುಗಡೆಯ ಹಾದಿ ಹುಡುಕುತ್ತ್ತಿರಲಿಲ್ಲ. ದಲಿತರು ಸ್ವಾಭಿಮಾನ ಗಳಿಸುತ್ತಿರಲಿಲ್ಲ; ಸರ್ವಾಧಿಕಾರಿಗಳು ನಾಶವಾಗುತ್ತಿರಲಿಲ್ಲ.ಚರಿತ್ರೆಯಲ್ಲಿ ಸಮಾಜಗಳನ್ನು ಬದಲಿಸಿರುವುದು ಪ್ರಶ್ನೆಗಳೇ. ರಾಜಸಭೆಗೆ ತನ್ನನ್ನು ಬಲಾತ್ಕಾರವಾಗಿ ಎಳೆದು ತಂದಾಗ ದ್ರೌಪದಿ `ತನ್ನನ್ನೇ ಪಣಕ್ಕಿಟ್ಟು ಸೋತ ವ್ಯಕ್ತಿಗೆ ತನ್ನ ಹೆಂಡತಿಯನ್ನು ಪಣಕ್ಕಿಡಲು ಹಕ್ಕಿದೆಯೇ?’ ಎಂಬ ಪ್ರಶ್ನೆ ಮುಂದಿಡುತ್ತಾಳೆ. ಉತ್ತರಿಸಲು ಸಭೆ ಒದ್ದಾಡುತ್ತದೆ. ಪ್ರಶ್ನೆಯ ಮೂಲಕ ಆಕೆ ತನ್ನ ಆಕ್ರೋಶ ವೇದನೆಗಳನ್ನಷ್ಟೆ ಹೊರಗೆಡಹುವುದಿಲ್ಲ, ಹೆಣ್ಣೊಬ್ಬಳ ಅಪಮಾನವನ್ನು ಸಹಿಸಿಕೊಂಡಿರುವ ಸಭೆಯ ಅಮಾನವೀಯತೆ ಮತ್ತು ಅವಿವೇಕವನ್ನೂ ಬಯಲಿಗೆಳೆಯುತ್ತಾಳೆ. ಪ್ರಶ್ನಿಸುವ ಪ್ರವೃತ್ತಿ ಅಧಿಕಾರಸ್ಥರ ಕೆರಳಿಕೆಗೂ ದಮನಕ್ಕೂ ಕಾರಣವಾಗುತ್ತದೆ. ಪ್ರಶ್ನೆಯೆತ್ತಿದ ಮಲಾಲಾಗೆ ತಾಲಿಬಾನಿಗಳು ಗುಂಡು ಹೊಡೆದು ಉತ್ತರಿಸಿದರು; ಮುಂಬೈ ತರುಣಿಯರಿಗೆ ಪೋಲಿಸರು ಬಂಧಿಸುವ ಮೂಲಕ ಪ್ರತಿಕ್ರಿಯಿಸಿದರು. ಧರ್ಮರಾಯನು ಯುದ್ಧದಲ್ಲಿ ಗೆದ್ದು ಅರಮನೆ ಪ್ರವೇಶಿಸುವಾಗ, `ಜ್ಞಾತಿಬಂಧುಗಳನ್ನು ಕೊಂದ ನಿನಗೆ ರಾಜ್ಯವಾಳುವ ನೈತಿಕತೆಯಿದೆಯೇ’ ಎಂದು ಪ್ರಶ್ನಿಸಿದ ಚಾರ್ವಾಕನನ್ನು ಕೊಂದರು. ಶಿಷ್ಯ ದಾರಾಶುಕುವನ್ನು ಕೊಂದ ಔರಂಗಜೇಬನ ವಿರುದ್ಧ ಸೂಫಿ ಸರ್ಮದ್ ನಗ್ನನಾಗಿ ನಿಂತು ಇಂತಹುದೇ ಪ್ರಶ್ನೆಯನ್ನೆತ್ತಿ ತಲೆದಂಡ ತೆತ್ತನು. ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರಶ್ನಿಸಿದ ಅನೇಕ ವಿಜ್ಞಾನಿಗಳನ್ನು ಯೂರೋಪಿನ ಚರ್ಚುಗಳು ದಮನ ಮಾಡಿದ್ದಂತೂ ಸರ್ವವಿದಿತ. ಧಾರ್ಮಿಕ ಮೂಲಭೂತವಾದಿಗಳು ಮತ್ತು ರಾಜಕೀಯ ಸರ್ವಾಧಿಕಾರಿಗಳು ಇಂತಹ ದಮನವನ್ನು ಮಾಡುತ್ತಲೇ ಬಂದಿರುವರು. ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರು ಕಿರಿಯರ, ಪುರುಷರು ಮಹಿಳೆಯರ ಪ್ರಶ್ನೆಗಳನ್ನು ಹೀಗೇ ಹೊಸಕಿ ಹಾಕಿರುವರು. ಆದರೂ ಪ್ರಶ್ನಿಸುವ ಪ್ರವೃತ್ತಿಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಸಾಧ್ಯವಾಗುವುದೂ ಇಲ್ಲ. ಪ್ರಶ್ನೆಯಿಲ್ಲದೆ ಚರಿತ್ರೆ ಚಲಿಸುವುದಿಲ್ಲ; ಲೋಕ ಬದಲುವುದಿಲ್ಲ. ಪ್ರಶ್ನೆಗಳು ಸಂಸ್ಕøತಿ ನಾಗರಿಕತೆಗಳನ್ನು ಕಟ್ಟಿಬೆಳೆಸಿದ ಶಕ್ತಿಗಳು. ಅವುಗಳ ಗಾತ್ರ ಚಿಕ್ಕದಿರಬಹುದು. ಪರಿಣಾಮ ಚಿಕ್ಕದಲ್ಲ. ಸಮಾಜದಲ್ಲಿ ಮಹತ್ವದ ಪಲ್ಲಟ ಸಂಭವಿಸಿದ್ದರೆ, ಅದರ ಹಿಂದೆ ಕೆಲವರು ಎತ್ತಿದ ಪ್ರಶ್ನೆಗಳಿವೆ; ಅವು ಹುಟ್ಟಿಸಿದ ಕ್ರಿಯೆ-ಪ್ರತಿಕ್ರಿಯೆಗಳಿವೆ. ನಮ್ಮ ಧರ್ಮದಲ್ಲಿ ಮಹಿಳೆಯರೇಕೆ ಹಿಂದುಳಿದ್ದಾರೆ, ದಲಿತರೇಕೆ ಅಸ್ಪøಶ್ಯರಾಗಿದ್ದಾರೆ, ನಿರ್ದಿಷ್ಟ ಜನರೇಕೆ ಶ್ರೇಷ್ಠರೆನಿಸಿಕೊಂಡಿದ್ದಾರೆ, ನಮ್ಮ ಮತಧರ್ಮಗಳೇಕೆ ದ್ವೇಷ ಹುಟ್ಟಿಸುತ್ತಿವೆ, ನಾನೇಕೆ ಇಷ್ಟು ನೀಚನಾಗಿದ್ದೇನೆ-ಹೀಗೆ ನಿಷ್ಠುರ ಪ್ರಶ್ನೆಗಳನ್ನು ಹುಟ್ಟಿಸಿಕೊಳ್ಳಲಾಗದ, ಅದನ್ನು ಲೋಕದ ಮುಂದಿಡಲಾರದ, ಮತ್ತು ಅಂತಹ ಪ್ರಶ್ನೆ ಕೇಳಿಸಿಕೊಳ್ಳುವ ಸಹನೆಯಿಲ್ಲದ ಯಾವ ವ್ಯಕ್ತಿ, ಸಮುದಾಯ ಮತ್ತು ಸಮಾಜವೂ ಚರಿತ್ರೆಯಲ್ಲಿ ದೊಡ್ಡದನ್ನು ಸಾಧಿಸಿಲ್ಲ. ನಾಗರಿಕ ಮತ್ತು ಮಾನವೀಯ ಕೂಡ ಆಗಿಲ್ಲ. ********************************************* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಹಣತೆ ಹಚ್ಚಿದ ಅಕ್ಷರ ದೀಪ ನಮ್ಮ ಅಜ್ಜಿ ಹಚ್ಚಿ  ಹಣತೆ ಬೆಳಕಲ್ಲಿ ತೆರೆದಳು ರಾಮಾಯಣ. ಹಣತೆ ಸಣ್ಣಗೆ ಬೆಳಗುವಾಗ ರಾಮ ಪುಟು ಪುಟು ಹೆಜ್ಜೆ ಹಾಕುತ್ತಿದ್ದ.ಜತೆಗೆ ಇನ್ನೂ ಮೂರು ತಮ್ಮ ತಮ್ಮ ತಮ್ಮಂದಿರು. ಎಷ್ಟು ಪ್ರೀತಿ ಮುಗ್ಧ ಬೆಳಕಿತ್ತು. ಕತೆ ಕೇಳುತ್ತಾ ನಮಗೆಲ್ಲ ಪುಳಕ. ಹಣತೆಯ ಬೆಳಕೂ ರಾಮನೂ ಜತೆ ಜತೆ ಬೆಳೆದರು. ವಿಶ್ವಾಮಿತ್ರನ ಕೈ ಹಿಡಿದು ಅಣ್ಣ ತಮ್ಮ ಗುರು ತೋರಿದ ಕಾಡುಹಾದಿಯಲ್ಲಿ ತಿಳಿವಿನ ಬೆಳದಿಂಗಳಿತ್ತು. ಕೆಂಗಣ್ಣ ದೈತ್ಯೆ ತಾಟಕಿಯ ಘೋರ ಆರ್ಭಟಕ್ಕೆ ಹಣತೆಯ ಪುಟ್ಟ ಜ್ವಾಲೆ ಕೆಂಪು ಕೆಂಪು ಓಲಾಡಿತು.ಅಜ್ಜಿ ಚಾಳೀಸು ಸರಿಪಡಿಸಿ ಪುಸ್ತಕದೊಳಗೇ ನೋಟ ನೆಟ್ಟರು. ಆ ಪುಸ್ತಕದೊಳಗೆ ಯಜ್ಞವಿತ್ತು. ಮಾರೀಚನಿದ್ದ, ಯಜ್ಞಕ್ಕೆ ನೆತ್ತರು ಸುರಿಯುತ್ತ ಆಗಸದಲ್ಲಿ. ಹಣತೆಯ ಬೆಳಕಲ್ಲಿ ಆತ ತುಂಬಾ ಭಯಾನಕನಂತೆ ಕಂಡ. ಅಜ್ಜೀ ಅಜ್ಜೀ..ಭಯವಾಗುತ್ತಿದೆ ಅಂದು ಮಕ್ಕಳು ಅಜ್ಜಿಯ ಮಡಿಲಲ್ಲಿ ಮುಖಮುಚ್ಚಿ ರಕ್ಷಣೆ ಪಡೆದರು.ರಾಮ ಬಾಣ ಹೂಡಿ, ಮಾರೀಚ ಯೋಜನ ದೂರ ಸಮುದ್ರಕ್ಕೆ ಬಿದ್ದ. ಹಣತೆಯ ಬೆಳಕೂ ಶಾಂತವಾಯಿತು. ಜನಕನ ರಾಜ ಭವನ ಬೆಳಗಿತು ಪುಟ್ಟ ಹಣತೆ. ಸೀತೆ ಬೆಳಗಿದಳು ಎಷ್ಟು ಚಂದ, ರಾಮ ಸ್ವಯಂವರದೀಪದ ಬೆಳಕಲ್ಲಿ. ಕತೆ ಕೇಳುತ್ತಾ ಹುಡುಗಿಯರು ಸೀತೆಯಂತೇ ಕಂಡರು. ರಾಗರತಿಯ ಮತ್ತೇರಿದ ದೀಪ ಜ್ವಾಲೆ ನಡು ಬಳುಕಿಸಿ ನಲಿಯಿತು. ಪರಶುರಾಮನ ಕೋಪಾಗ್ನಿಗೆ, ಪುಸ್ತಕದ ಅಕ್ಷರಗಳು ಅಜ್ಜಿಯ ವರ್ಣನೆಗೆ ಕೆಂಪಡರಿದ್ದವು. ಸಮಚಿತ್ತ  ವಿನಯದ ತಂಪಿಗೆ ಬೆಳಕು ನಂದಲಿಲ್ಲ. ರಾಮ! ರಾಮ! ಮಂಥರೆ ಮೇಲೆ ದೀಪದ ಬೆಳಕು ಹೊಗೆ ಸುತ್ತಿ ಪುಸ್ತಕದೊಳಗೆಲ್ಲ ನೆರಳು ಹೊಗೆಯಾಡಿತು ರಾಮ ಕಾಡಿಗೆ ಹೊರಟ. ಅಜ್ಜಿ ದೀಪದ ಬತ್ತಿ ಸರಿಪಡಿಸಿದರು. ಬೆಳಕು ಸ್ಪಷ್ಟವಾದಾಗ ಕೈಕೇಯಿ ಮನಸ್ಸು ಹೊಗೆ ಮುಕ್ತ. ದಶರಥನ ಜೀವ ಅಕ್ಷರಗಳಿಂದ ಮುಕ್ತವಾದಾಗ ಅಜ್ಜಿ ದೀಪದ ಉಸಿರು ಆರಿಸಿದರು. ಮಲಗಿ ಮಕ್ಕಳೇ!. ಮುಂದಿನ ಕತೆ ನಾಳೆಗೆ. ಅಜ್ಜಿ ಪುನಃ ಹಚ್ಚಿದರು ಹಣತೆ. ಸುತ್ತಲೂ ಅಂಧಕಾರ. ಪುಸ್ತಕದೊಳಗೆ ದಂಡಕಾರಣ್ಯದ ಚಿತ್ರ. ಅಜ್ಜಿ ಓದುತ್ತಿದ್ದಂತೇ ದೀಪದ ಬೆಳಕಲ್ಲಿ ಋಷಿ ಮುನಿಗಳ ಆಶ್ರಮ, ತಪಸ್ಸು, ಅಕ್ಷರಗಳಾದವು. ಕುಣಿಯುತ್ತ ಬಂತು ಚಿನ್ನದ ಜಿಂಕೆ. ಚಂಚಲವಾಯಿತು ಹಣತೆ. ರಾಮನ ಕಳಿಸಿದಳು ಸೀತೆ, ಜಿಂಕೆಯ ಬಣ್ಣದ ಹಿಂದೆ. ‘ಹಾ ಸೀತೇ..ಹಾ ಲಕ್ಷ್ಮಣಾ’.. ಮರಣಾಕ್ರಂದನ, ಬೆಳಕು ಮುಗ್ಧವಾಗಿತ್ತು ಸೀತೆ ಲಕ್ಷ್ಮಣರೇಖೆ ದಾಟಿದ್ದಳು ಸೀತಾಪಹರಣ ಮಾಡಿದ ರಾವಣನ ಮೇಲೆ ಬೆಳಕಿನ ನೆರಳು ಕರ್ರಗೆ ಚೆಲ್ಲಿತ್ತು. ಅಜ್ಹಿಯ ಕಣ್ಣು ತೇವವಾಗಿ ಅಕ್ಷರಗಳು ಮಂದವಾದವು. ಕಿಷ್ಕಿಂಧೆಯಲ್ಲಿ ವಾಲಿ ಸುಗ್ರೀವ ನಡುವೆ ಎಷ್ಟೊಂದು ಪ್ರೀತಿಯಿತ್ತು. ಕಿಟಿಕಿಯಿಂದ ಗಾಳಿ ಬೀಸಿ, ಹಣತೆ ಬೆಳಕು ತುಯ್ದಾಡಿತು. ವಾಲಿಯ ಮನಸ್ಸಿನ ಮೇಲೆ ಶಂಕೆಯ ನೆರಳು ಬಿತ್ತು.ಸಹೋದರದ ಪದಸಂಧಿ ವಿಂಗಡಿಸಿತು. ಹನುಮನ ಮೇಲೆ ಬೆಳಕು ಚೆಲ್ಲಿತು ಹಣತೆ. ಸೀತಮ್ಮನ ಹುಡುಕುತ್ತ ಸಾಗರ ಹಾರಿದ ಕತೆ ಕೇಳುತ್ತಾ ನಾನೂ ನನ್ನ ಹಿಂಭಾಗ ಸವರಿದೆ! ಬಾಲ ಸಿಗಲಿಲ್ಲ. ಅಜ್ಜಿ ಅಂದರು..ದೀಪಕ್ಕೆ ಎಣ್ಣೆ ತುಂಬಲು, ಬತ್ತಿ ನೇರ ಮಾಡಲು. ಬೆಳಕ ಏಕಾಗ್ರ ಚಿತ್ತ. ಸಂಕ ಕಟ್ಟುವತ್ತ ಕೋಟಿ ಮರ್ಕಟ ಮನಸ್ಸು ಏಕಾಗ್ರ, ರಾಮ! ರಾಮ!. ರಾಮ ರಾವಣ ಪದಗಳು  ಸಮಸಮ ಹೊಳೆಯುತ್ತಿದ್ದವು. ಎರಡೂ ಪಾತ್ರಗಳು ಹಣತೆಯ ಬೆಳಕ ಹೀರಿ ಬೆಳೆಯುತ್ತಿದ್ದವು. ಅಸ್ತ್ರ ಶಸ್ತ್ರ ಶಾಸ್ತ್ರಗಳು ಪುಸ್ತಕದೊಳಗೆ ಸಾಲುಗಳು ದೀಪ ದೀಪ್ತಿಯಲ್ಲಿ ಬೆಳಗಿದವು. ರಾಮ ತೆರೆದ ತನ್ನ ಆದಿತ್ಯ ಹೃದಯ.ಒಳಗೆ ತುಂಬಾ ಬೆಳಕು ತುಂಬಲು. ರಾವಣನ ಹೃದಯ ಉಕ್ಕಿನ ಕವಚ. ಒಳಗೆ ಬೆಳಕು ತಲಪಲಿಲ್ಲ. ರಾವಣನ ಕತೆ ಮುಗಿಯಿತು. ರಾಮ ಲಕ್ಷ್ಮಣ ಸೀತೆ ಪುಷ್ಪಕ ವಿಮಾನವೇರಿ ಅಯೋಧ್ಯೆಗೆ ಬಂದಾಗ, ಅಜ್ಜಿಯ ರಾಮಾಯಣ ಪುಸ್ತಕದೊಳಗೆ ಸಾಲು ಸಾಲು ಹಣತೆ ಬೆಳಗಿ ಪುಟ್ಟ, ಮಕ್ಕಳ ಕಣ್ಣೊಳಗೆ ದೀಪಾವಳಿ!. ದೀಪ ಮತ್ತು ಬೆಳಕನ್ನು ಸೃಜನಶೀಲ ಮನಸ್ಸು ಹಲವು ಪ್ರತಿಮೆಗಳಾಗಿ ಕಾಣುತ್ತವೆ. ಬೆಳಕು ಮನಸ್ಸನ್ನು ಬೆಳಗುವಾಗ ಅದರ ಆಯಾಮಗಳು ನೂರಾರು. ಮನಸ್ಸಿನ ಕ್ಯಾನುವಾಸ್ ನಲ್ಲಿ ಚಿತ್ರಗಳು ಮೂಡಲು ಬೆಳಕು ಸಾಧನ ತಾನೇ. ನಾಟಕದ ಪಾತ್ರಗಳ ಭಾವಾಭಿವ್ಯಕ್ತಿಯೂ ಬೆಳಕಿನ ಬಣ್ಣಗಳನ್ನು ಸಂಯೋಜಿಸಿ ಅದಕ್ಕೆ ಹೊಸ ರೂಪ ಕೊಡುವುದೂ ಒಂದು ಕಲೆಯೇ. ಹಾಗಾಗಿ, ವಸ್ತುವನ್ನು ನಾವು ನೋಡುವ ಬಗೆಯಲ್ಲಿ ಬೆಳಕಿನ ಪಾತ್ರ ಅತ್ಯಂತ ಪ್ರಮುಖವಾದದ್ದೂ ಹೌದು,ಸಾಪೇಕ್ಷವಾದದ್ದೂ ಹೌದು. ಹಾಗೆ ಅಚಾನಕ್ಕಾಗಿ ಫ್ಲಾಷ್ ಆಗುವ ಬೆಳಕಲ್ಲಿ ರೂಪ ಹೇಗಿರಬಹುದು?. ಬೇಂದ್ರೆಯವರ “ಸ್ವರೂಪ ದೀಪ” ಕವಿತೆಯ ಸಾಲುಗಳು ಹಣತೆಯ ಬೆಳಕಲ್ಲಿ ಹೀಗೆ ಹೊಳೆಯುತ್ತವೆ. “ಬೆಳಕೀಗೆ ಕತ್ತಲೆ ಕೊಟ್ಟಾಗ ಮುದ್ದು ಮೂಡ್ಯಾನೋ ಚಂದಿರ ಹಗಲು ಹೋಯಿತು ಜಾರಿ ಬಟಾ ಬಯಲೆಲ್ಲಾ ಚುಕ್ಕಿಯ ಮಂದಿರ ಚಕಮಕ್ಕಿ ಹಾರೀ ಕಂಡಿತೋ ಮಾರಿ ಎಂದಿನದೀ ನೋಟ ಮೈಯೊಳಗ ಮೈಯೋ ಕೈಯೊಳಗ ಕೈಯೋ ಕರುಳಾಟ ಮರುಳಾಟ” ರಾತ್ರೆಯ ಕತ್ತಲಲ್ಲಿ ಆಗಸದ ಚಿತ್ತಾರದ ಅಡಿಯಲ್ಲಿ,  ಚಕಮಕ್ಕೀ ಹಾರಿದಾಗ ನೋಟದೊಳಗೆ ಮೂಡುವ ಚಿತ್ರಕ್ಕೆ ಪ್ರಾಪ್ತವಾಗುವ ಸ್ವರೂಪ ದೀಪದ ಮೇಲೆ ಅವಲಂಬಿತ,ಅಲ್ಲವೇ. ಒಲವು, ಜ್ಞಾನ ಎಲ್ಲವೂ ಬೆಳಕೇ. ದೀಪ ಹಚ್ಚುವುದೆಂದರೆ ಪ್ರಕಾಶಿಸುವುದೆಂದರೆ ಅದರಲ್ಲಿ ಋಣಾತ್ಮಕ ಅಂಶಗಳಿಗೆ ಎಡೆಯೇ ಇಲ್ಲ.  “ನೀ ಬಂದು ನಿಂದಿಲ್ಲಿ ದೀಪ ಹಚ್ಚಾ..” ಎಸ್ ವಿ ಪರಮೇಶ್ವರ ಭಟ್ಟ ಅವರು ಬರೆದ ಕವನದ ಪ್ರತೀ ಸಾಲುಗಳು ಸಾಲುದೀಪಾಕ್ಷರಗಳು. “ಪ್ರೀತಿಯ ಕರೆಕೇಳಿ  ಆತ್ಮನ ಮೊರೆಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚಾ ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚಾ ದೇಹದ ಗೂಡಲಿ ನಿನ್ನೊಲವು ಮೂಡಲಿ ಜಗವೆಲ್ಲ ನೋಡಲಿ ದೀಪ ಹಚ್ಚಾ ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ ನನ್ನ ಮನದಂಗಳದಿ ದೀಪ ಹಚ್ಚಾ ಹಳೆಬಾಳು ಸತ್ತಿತ್ತು ಕೊನೆಬಾಳು ಸುಟ್ಟಿತ್ತು ಹೊಸಬಾಳು ಹುಟ್ಟಿತ್ತು ದೀಪ ಹಚ್ಚಾ ಪ್ರೀತಿಯ ರತಿಗೆ ನೀ ಬೆಳಕಿನ ಆರತಿ ಬೆಳಗಿ ಕಲ್ಲಾರತಿ ದೀಪ ಹಚ್ಚಾ ಮೋಹದ ಮತಿಗೆ ನೀ ಸುಟ್ಟು ತೋರುವ ದೀಪ ಸುಜ್ಞಾನಪ್ರದೀಪ ದೀಪ ಹಚ್ಚಾ ಜ್ಯೋತಿಸ್ವರೂಪನೆ ಸ್ವಯಂಪ್ರಕಾಶನೆ ತೇಜೋರೂಪನೆ ದೀಪ ಹಚ್ಚಾ ವಿಶ್ವಮೋಹಿತಚರಣ ವಿವಿಧವಿಶ್ವಾಭರಣ ಆನಂದದ ಕಿರಣ ದೀಪ ಹಚ್ಚಾ” ಪ್ರೀತಿ, ಒಲವು, ಆತ್ಮಜ್ಯೋತಿ, ಮನಸ್ಸೊಳಗಿನ ಭಾವ, ಬದುಕು, ಜ್ಞಾನ, ಆನಂದ, ಇವೆಲ್ಲ ಕವಿಗೆ ದೀಪದ ಬೆಳಕಾಗಿ ಹಬ್ಬವಾಗುತ್ತೆ. ಅಕ್ಷರಗಳು ಜ್ಞಾನದ,ಕಲೆಯ, ಚಿಂತನೆಯ, ಸೃಜನಾತ್ಮಕ ಪ್ರಕ್ರಿಯೆಯ ಜೀವಕೋಶಗಳು ತಾನೇ. ಹಾಗಾದರೆ ಭಾಷೆ?. – ಡಿ. ಎಸ್. ಕರ್ಕಿ ಅವರ ಈ ಪದ್ಯದಲ್ಲಿ ಕನ್ನಡವೂ ದೀಪವೇ. “ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವ ದೀಪ” ಭಾಷೆಯೂ ದೀಪ, ಅದರ ಸಿರಿವಂತಿಕೆಯೂ ದೀಪ ಅದರೊಳಗೆ, ಅದರ ಮೂಲಕ ಮತ್ತು ಅದರತ್ತ ಇರುವ ಒಲವೂ ದೀಪವೇ. ಉರಿಸಿದಾಗ ಕರ್ಪೂರದಂತೆ ಭಾಷೆಯ ಕಂಪೂ ಹರಡುತ್ತದೆ,ಅಲ್ಲವೇ. ನರನರವನೆಲ್ಲ ಹುರಿಗೊಳಿಸಿ ಭಾಷೆಯ ಮುಲಕ ಹೊಸತನ ತುಂಬುವುದು ದೀಪೋಜ್ವಲನವೇ. “ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ” ಎಂಬ ಸಾಲುಗಳು ಅಸ್ಮಿತೆಯ ದೀಪ ಹಚ್ಚುತ್ತೆ. ಬೇಂದ್ರೆಯವರ “ಚೈತನ್ಯದ ಪೂಜೆ” ಎಂಬ ಕವನದಲ್ಲಿ ದೀಪದೊಳಗಿನ ವಿಶ್ವಾತ್ಮ ಚೈತನ್ಯದ ಜ್ಯೋತಿಯಿದೆ. “ಚೈತನ್ಯದ ಪೂಜೆ ನಡೆದSದ ನೋಡS ತಂಗಿ।। ಅಭಂಗದ ಭಂಗೀS ।। ಪ ।। ಸತ್ಯ ಎಂಬುವ ನಿತ್ಯದ ದೀಪ ಸುತ್ತೆಲ್ಲಾ ಅವನದೇ ರೂಪ ಪ್ರೀತಿ ಎಂಬುವ ನೈವೇದ್ಯ ಇದು ಎಲ್ಲರ ಹೃದಯದ ಸಂವೇದ್ಯ.” ಸತ್ಯ ಎಂಬುವ ನಿತ್ಯದ ದೀಪ, ಸುತ್ತೆಲ್ಲ ಅವನದೇ ರೂಪ ಎನ್ನುತ್ತಾ, ಬೇಂದ್ರೆಯವರು ಚೈತನ್ಯದ ಆರಾಧನೆಯ ಮಾರ್ಗ ಕ್ಕೆ ಬೆಳಕು ಚೆಲ್ಲುತ್ತಾರೆ. ಕೆ.ಎಸ್ ನರಸಿಂಹ ಸ್ವಾಮಿಯವರು ಬರೆದ “ದೀಪವು ನಿನ್ನದೆ,ಗಾಳಿಯೂ ನಿನ್ನದೆ,ಆರದಿರಲಿ ಬೆಳಕು ” ಎನ್ನುವ ಸಾಲುಗಳು, ದೀಪವನ್ನು ಏಳು ಬೀಳುಗಳನ್ನು ಅನುಭವಿಸುತ್ತಾ ಸಾಗುವ ಬದುಕಿಗೆ ಪ್ರತಿಮೆಯಾಗಿಸುತ್ತಾರೆ. ಅವರ ದೀಪಾವಳಿ ಕವನವೂ ಹಾಗೆಯೇ ದೀಪವನ್ನು ಹಲವು ರೂಪಕವಾಗಿ ಬೆಳಗಿಸುತ್ತೆ. ಹೂವು ಬಳ್ಳಿಗೆ ದೀಪ ; ಹಸಿರು ಬಯಲಿಗೆ ದೀಪ ; ಅನ್ನುತ್ತಾ ಅವರು ದೀಪಕ್ಕೆ ಹೊಸ ವ್ಯಾಖ್ಯಾನ ಕೊಡುವ “ಬಲ್ಮೆ ತೋಳಿಗೆ ದೀಪ” ಎಂಬ ಸಾಲು ಬರೆಯುತ್ತಾರೆ. ಅವರ ಈ ಸಾಲುಗಳನ್ನು ಗಮನಿಸಿ!. “ಸಹನೆ ಅನುಭವ – ದೀಪ ಬದುಕಿನಲ್ಲಿ ಕರುಣೆ ನಂದಾದೀಪ ಲೋಕದಲ್ಲಿ” ಅಕ್ಷರಗಳನ್ನು ದೀಪವಾಗಿ ಕಾಣುತ್ತಾ ಅವರು ಬರೆಯುತ್ತಾರೆ.. “ಕತ್ತಲೆಯ ಪುಟಗಳಲಿ ಬೆಳಕಿನಕ್ಷರಗಳಲಿ, ದೀಪಗಳ ಸಂದೇಶ ಥಳಥಳಿಸಲಿ !” ದೀಪದ ಬಗ್ಗೆ ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟರು ಬರೆದ ಕವನ ಅನನ್ಯ ಭಾವದ ಒಲುಮೆಯ ದೀಪವೇ. “ಮಾನವನೆದೆಯಲಿ ಆರದೆ ಉರಿಯಲಿ. ದೇವರು ಹಚ್ಚಿದ ದೀಪ ರೇಗುವ ದನಿಗೂ ರಾಗವು ಒಲಿಯಲಿ ಮೂಡಲಿ ಮಧುರಾಲಾಪ” ಹಮ್ಮು ಬಿಮ್ಮುಗಳ ಮರುಳುಗಾಡಿನಲಿ ಎಲ್ಲೋ ಥಣ್ಣನೆ ಚಿಲುಮೆ ತಾಪವ ಹರಿಸಿ ಕಾಪಾಡುವುದು ಒಳಗೇ ಸಣ್ಣಗೆ ಒಲುಮೆ.” ಇವುಗಳಿಗೆಲ್ಲ ಭಿನ್ನವಾಗಿ ಶಿವರುದ್ರಪ್ಪನವರು ಬರೆದ ಕವನ  “ನನ್ನ ಹಣತೆ” “ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಆದರೂ ಹಣತೆ ಹಚ್ಚುತ್ತೇನೆ ನಾನೂ; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ; ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ.”    ಹಣತೆಯ ಬೆಳಕಲ್ಲಿ, ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಆಸೆಯಿಂದ, ಹಣತೆ ಹಚ್ಚುವ ಕವಿ, ಜೀವಪ್ರೇಮವನ್ನೂ ಜೀವನಪ್ರೇಮವನ್ನೂ, ವಾಸ್ತವಾನುಭವದ ಸತ್ಯವನ್ನು ಮಾತ್ರ ಅವಲಂಬಿಸುತ್ತಾರೆ. ಅಕ್ಷರಗಳ ಮೂಲಕ ಅನುಭೂತಿ ಹುಡುಕುವ, ನಮ್ಮ ಈ ಪ್ರಯತ್ನದಲ್ಲಿ,  ಅಕ್ಷರಮಾಲೆ, ದೀಪದ ಸಾಲುಗಳು. ಈ ಅಕ್ಷರ ದೀಪಾವಳಿಯ ಶುಭಾಶಯಗಳು, ನಿಮಗೆಲ್ಲರಿಗೂ. ****************************************** ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

You cannot copy content of this page

Scroll to Top