ಕವಿತೆ
ಕಲ್ಲಾಗಿಯೇ ಇರಬೇಕಿತ್ತು!
ರಾಜೇಶ್ವರಿ ಭೋಗಯ್ಯ
ಇದ್ದದ್ದು ನಿಜವಾಗಿದ್ದರೆ ಅಹಲ್ಯೆ
ಹೇಗೆ ಸಹಿಸಿಕೊಂಡಳೋ
ನೋವನ್ನೂ ಅವಮಾನವನ್ನು
ತನ್ನ ತಪ್ಪಿಲ್ಲದಿದ್ದರೂ ಶಾಪವಿಟ್ಟ ಅವಮಾನಕ್ಕೆ
ವಿನಾಕಾರಣ ಕಲ್ಲಾಗಿಸಿದ ನೋವಿಗೆ
ಹೇಗೆ ಸಹಿಸಿಕೊಂಡಳೋ ಅಬಲೆ
ಹೆಂಡತಿಯನ್ನು ನೆಲಕ್ಕೆ ತುಳಿದು
ನಿನ್ನನ್ನು ಮೇಲಕ್ಕೆತ್ತುವ ಹಿಂದೆ
ಯಾವ ಲೋಕ ಕಲ್ಯಾಣದ ಸಂಚಿತ್ತು
ಗೌತಮ ಸಹಕರಿಸಲಿಲ್ಲ
ಇಂದ್ರನೂ ಕಾಪಾಡಲಿಲ್ಲ
ವ್ರತಕೆಟ್ಟರೂ ಸುಖಪಡಲಿಲ್ಲ
ಅನ್ಯಾಯವ ಸಹಿಸಿಕೊಂಡು ಸುಮ್ಮನಿರಬಾರದಿತ್ತು
ಕಲ್ಲಾಗಿಯೇ ಇರಬೇಕಿತ್ತು ನೀನು
ರಾಮನ ಪಾದಸ್ಪರ್ಶ ಯಾಕೆ ಬೇಕಿತ್ತು
ಒಳಗೇ ಹುದುಗಿರಬೇಕಿತ್ತು ನೀನು
ನಿಜ ಧರ್ಮ ತಿಳಿದವ ಬುದ್ದ
ಬಂದು ನಿನ್ನ ಮೈ ದಡವುವವರೆಗೂ.
**********************
ಚೆನ್ನಾಗಿದೆ…
ಚಂದದ ಬರಹ
ಪುರುಷ ಸಮಾಜದ ದೌರ್ಜನ್ಯಕ್ಕೆ ಹಿಡಿದ ಕನ್ನಡಿ, ಜೊತೆಗೆ ಕವಿತೆ ಕೇಳುವ ಪ್ರಶ್ನೆಗಳಿಗೆ ನಾವು ತಲೆ ತಗ್ಗಿಸಿದ್ದೇವೆ, ಉತ್ತರವಿಲ್ಲದ ಅಸಹಾಯಕರಾಗಿದ್ದೆವೆ. ಚೆನ್ನಾಗಿದೆ
ಅದ್ಭುತ ಕವಿತೆ ಅಮ್ಮ