ಅಂಕಣ ಬರಹ

ಪ್ರಶ್ನೆಯ ಜರೂರಿ

Buy I Am Malala: The Girl Who Stood Up for Education and was Shot by the  Taliban (Old Edition) Book Online at Low Prices in India | I Am Malala: The  Girl

ಕೆಲವು ವರ್ಷಗಳ ಹಿಂದೆ ಎರಡು ವಿದ್ಯಮಾನ ಜರುಗಿದವು. ಒಂದು- ತಾನು ಓದುವ ಶಾಲೆಯನ್ನು ತಾಲಿಬಾನಿಗಳು ಯಾಕೆ ಕೆಡವಬೇಕು ಎಂದು ಪ್ರಶ್ನಿಸಿದ ಪುಟ್ಟಬಾಲೆ ಮಲಾಲಳದು. ಎರಡು-ಬಾಳಾಸಾಹೇಬ್ ಠಾಕರೆ ತೀರಿಕೊಂಡರೆ ಮುಂಬೈ ಬಂದ್ ಯಾಕೆ ಮಾಡಬೇಕು ಎಂದು ಚರ್ಚಿಸಿದ ಇಬ್ಬರು ತರುಣಿಯರದು. ಸುತ್ತಮುತ್ತ ಬದುಕುತ್ತಿರುವ ಲಕ್ಷಾಂತರ ಜನರಲ್ಲಿ ಹುಟ್ಟದ ಪ್ರಶ್ನೆಗಳು ಈ ಹುಡುಗಿಯರಲ್ಲಿ ಸಹಜವಾಗಿ ಹೇಗೆ ಹುಟ್ಟಿಕೊಂಡವು? ನಮಗೇತಕ್ಕೆ ಇಲ್ಲದ ರಗಳೆ ಎಂದು ಬಹುಸಂಖ್ಯಾತ ಸಾರ್ವಜನಿಕರು ಸುರಕ್ಷಿತಮೌನ ತಾಳಿರುವಾಗ ಕೆಲವರೇಕೆ ಕೇಳುವ ದಿಟ್ಟತನ ತೋರುತ್ತಾರೆ?


ಪ್ರಶ್ನೆ ಕೇಳುವುದು ಆಲೋಚನ ಶಕ್ತಿಯುಳ್ಳ ಎಲ್ಲ ವ್ಯಕ್ತಿಗಳಲ್ಲೂ ಇರುವ ಸಹಜ ಗುಣ. ಆದರೆ ಹಾಗೆ ಕೇಳದಂತೆ ತಡೆಯಲು ನೂರಾರು ಅಂಕುಶಗಳು ಸಮಾಜದಲ್ಲಿರುತ್ತವೆ. ಆದರೆ ಈ ತಡೆಗಳ ಒಳಗೂ ಪ್ರಶ್ನೆಯನ್ನು ಹುಟ್ಟಿಸಿಕೊಳ್ಳುವುದು ಮುಖ್ಯ; ಅದನ್ನು ಬಹಿರಂಗವಾಗಿ ಕೇಳುವುದು ಮತ್ತು ಅದರ ಪರಿಣಾಮ ಅನುಭವಿಸಲು ಸಿದ್ಧವಾಗುವುದು ಇನ್ನೂ ಮುಖ್ಯ. ಇದನೇ ಕುವೆಂಪು ನಿರಂಕುಶಮತಿತ್ವ ಎಂದು ಕರೆದಿದ್ದು. ಈ ನಿರಂಕುಶಮತಿತ್ವದ ಮಾರಣಾಂತಿಕ ಪರಿಣಾಮವನ್ನು ಸಾಕ್ರೆಟಿಸ್ ಎದುರಿಸಿದ; ಅನೇಕ ಸೂಫಿಗಳು, ಚಾರ್ವಾಕರು ಎದುರಿಸಿದರು; ಭಗತ್‍ಸಿಂಗ್ ಮುಂತಾದ ಹೋರಾಟಗಾರರು ಮುಖಾಮುಖಿ ಮಾಡಿದರು; ಈಗ ಪತ್ರಕರ್ತರು ಚಿಂತಕರು ಎದುರಿಸುತ್ತಿದ್ದಾರೆ. ನಮ್ಮ ಮನೆಗಳಲ್ಲಿ ಎಷ್ಟೊ ಮಹಿಳೆಯರು ಇದರ ಕಹಿಫಲವನ್ನು ಉಂಡಿದ್ದಾರೆ.


ಪ್ರಶ್ನೆಗಳು ಕೇವಲ ಸ್ಥಾಪಿತ ವ್ಯವಸ್ಥೆಯನ್ನು ವಿರೋಧಿಸುವ ಕಾರಣದಿಂದ ಹುಟ್ಟುತ್ತವೆ ಎಂದು ತಿಳಿಬೇಕಿಲ್ಲ. ಅವು ಕುತೂಹಲದ ದೆಸೆಯಿಂದಲೂ ಹುಟ್ಟಬಹುದು. ಮಕ್ಕಳು ಸಹಜ ವಿಸ್ಮಯದಿಂದ ಎಷ್ಟೊಂದು ಪ್ರಶ್ನೆ ಕೇಳುತ್ತಿರುತ್ತವೆ? ಯಾಕೆ ಸಂಜೆ ಮುಂಜಾನೆ ಸೂರ್ಯ ಕೆಂಪಗೆ ಕಾಣುತ್ತದೆ? ಹೂವುಗಳಿಗೆ ಏಕಿಷ್ಟು ಬಣ್ಣಗಳಿವೆ? ನೀರೇಕೆ ಹರಿಯತ್ತದೆ? -ಹೀಗೆ ನೂರಾರು. ಇವನ್ನು ಕೇಳಿಸಿಕೊಳ್ಳುವ ಸಹನೆ ಮತ್ತು ಉತ್ತರಿಸುವ ತಿಳಿವು ಬಹುತೇಕ ಹಿರಿಯರಲ್ಲಿ ಇರುವುದಿಲ್ಲ. ತಿಳಿವನ್ನು ಕೊಡುವ ಜಾಗಗಳಾಗಿರುವ ತರಗತಿಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಎಷ್ಟೊಂದು ಪ್ರಶ್ನೆಗಳನ್ನು ಹೊಸಕಿ ಹಾಕಿರಬಹುದು ಎಂದು ನೆನೆದರೆ ಭಯವಾಗುತ್ತದೆ. ಸಹಜ ಪ್ರಶ್ನೆಯನ್ನು ದಮನಿಸುವುದು, ಕೇಳುವವರ ಚೈತನ್ಯವನ್ನೇ ದಮನಿಸಿದಂತೆ. ನಿಜವಾದ ಗುರುಗಳೂ ಕೇವಲ ಪ್ರಶ್ನೆಗೆ ಉತ್ತರಿಸುವುದಿಲ್ಲ. ಪ್ರಶ್ನೆ ಕೇಳುವ ಮನೋಭಾವವನ್ನೂ ನಿರ್ಮಿಸುತ್ತಿರುತ್ತಾರೆ. ತಂದೆತಾಯಿಗಳು ಆದರ್ಶರಾಗುವುದು, ಮಕ್ಕಳಿಗೆ ಸರಿಯಾದ ಆಹಾರ ಬಟ್ಟೆ ವಸತಿ ಕೊಡುವ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವುದರಿಂದ ಮಾತ್ರವಲ್ಲ, ಅವರ ಪ್ರಶ್ನೆ, ಕುತೂಹಲ, ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಓದುವ ಸಹಜ ಹಕ್ಕುಗಳನ್ನು ನಾಶಮಾಡಿದ್ದಾರೊ ಇಲ್ಲವೊ ಎಂಬುದರ ಮೇಲೆ. ತನ್ನ ಪ್ರಶ್ನೆಯನ್ನು ಹೊಸಕಿಹಾಕಿದ ಅಪ್ಪನ ವಿರುದ್ಧ ಬಂಡೆದ್ದ ಪುರಾಣದ ನಚಿಕೇತ ನೆನಪಾಗುತ್ತಾನೆ. ಬಹುತೇಕ ಧರ್ಮಗಳು ಹೊಸ ಪ್ರಶ್ನೆಗಳನ್ನು ಕೇಳುವ ಧೀಮಂತರಿಂದಲೇ ಹುಟ್ಟಿವೆ. ಮುಂದೆ ಅವೇ ಧರ್ಮಗಳು ಪ್ರಶ್ನೆಗಳನ್ನು ಹತ್ತಿಕ್ಕಿಯೇ ಬೆಳೆದಿವೆ. ಬುದ್ಧನಂತಹ ಕೆಲವರು ಮಾತ್ರ ಪ್ರಶ್ನೆ ತಿಳಿವಿನ ಮೂಲವೆಂದು ನಂಬಿದ್ದರು. ನಾನು ಹೇಳಿದ್ದು ಒಪ್ಪಿಗೆಯಾಗದಿದ್ದರೆ ನಿನ್ನ ದಿಟವನ್ನು ನೀನೇ ಹುಡುಕಿಕೊ ಎಂದು ಬುದ್ಧ ನೇರವಾಗಿ ಹೇಳಿದನು. ಹೀಗೆ ಹೇಳಲು ಒಬ್ಬ ಗುರುವಿಗೆ ಬಹಳ ಧೈರ್ಯ ಬೇಕು.


ಮಗುವೊಂದು ಹುಟ್ಟುವ ಜೈವಿಕಕ್ರಿಯೆ ಬಲ್ಲ ಎಲ್ಲರಿಗೂ ಅದಕ್ಕೆ ಜಾತಿ ಧರ್ಮಗಳಿರುವುದಿಲ್ಲ ಎಂಬುದು ಗೊತ್ತಿದ್ದರೂ, ಅದು ಹುಟ್ಟಿ ಲೋಕಕ್ಕೆ ಬಂದ ಕೂಡಲೇ ಅದಕ್ಕೆ ಜಾತಿ ಧರ್ಮಗಳು ಯಾಕೆ ಸುತ್ತಿಕೊಳ್ಳುತ್ತವೆ? ಹುಟ್ಟಿನಿಂದ ಯಾಕೆ ಕೆಲವರು ಕೀಳು ಅಥವಾ ಮೇಲು ಅನಿಸಿಕೊಳ್ಳಬೇಕು? ಕೆಲವರು ಯಾಕಷ್ಟು ದುಡಿದರೂ ಬಡವರಾಗಿ ಉಳಿದಿದ್ದಾರೆ? ಯಾಕೆ ವಾಸದ ಪರಿಸರವನ್ನು ಚೊಕ್ಕಟವಾಗಿ ಇರಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ? ಯಥೇಚ್ಛವಾದ ನಿಸರ್ಗ ಸಂಪತ್ತಿದ್ದರೂ ಭಾರತದಲ್ಲೇಕೆ ಬಡತನವಿದೆ? ಎಲ್ಲರಿಗೂ ಸೇರಬೇಕಾದ ಸಂಪತ್ತನ್ನು ಲೂಟಿಹೊಡೆದವರು ಹೇಗೆ ಆರಾಮಾಗಿ ಬದುಕುತ್ತಿದ್ದಾರೆ? ದುಷ್ಟರು ಕಳ್ಳರು ಎಂದು ಗೊತ್ತಿದ್ದರೂ ಜನ ಯಾಕೆ ಕೆಲವರನ್ನು ಚುನಾವಣೆಯಲ್ಲಿ ಆರಿಸುತ್ತಾರೆ? ಸ್ತ್ರೀಯರನ್ನು ನಿಕೃಷ್ಟವಾಗಿ ಚಿತ್ರಿಸುವ ಲೇಖಕರಿಗೆ ಯಾಕೆ ಮಹಿಳಾ ಓದುಗರೇ ಹೆಚ್ಚಿದ್ದಾರೆ? ಹೀಗೆ ನೂರಾರು ಪ್ರಶ್ನೆಗಳಿವೆ.

Malala Yousafzai - Wikipedia


ಪ್ರ್ರಶ್ನೆ ಹುಟ್ಟುವುದು ಮತ್ತು ಪ್ರಕಟವಾಗುವುದು ಮಾತ್ರವಲ್ಲ, ಅವು ಕ್ರಿಯೆಗೂ ಕಾರಣವಾಗಬೇಕು. ಈ ಕ್ರಿಯೆ ತಪ್ಪಾದ ವ್ಯವಸ್ಥೆಯನ್ನು ಬದಲಿಸಬೇಕು. ಮಲಾಲಾ ಎತ್ತಿದ ಪ್ರಶ್ನೆ ತಾಲಿಬಾನಿಗಳನ್ನು ಪ್ರತಿರೋಧಿಸುವ ಹೊಸಅಲೆಯನ್ನು ಹುಟ್ಟಿಸಿತು. ಲೋಕದಲ್ಲಿ ಸ್ವತಂತ್ರವಾಗಿ ವಿಚಾರಮಾಡುವ ಪ್ರವೃತ್ತಿಯೇ ಹೊಸ ಪ್ರಶ್ನೆಗಳ ತಾಯಿ; ಪ್ರಶ್ನೆಗಳು ನಿಸರ್ಗ ರಹಸ್ಯಗಳನ್ನು ಶೋಧಿsಸುವ ವಿಜ್ಞಾನವನ್ನು ಬೆಳೆಸಿವೆ; ಹಳೆಯ ಸಮಾಜವನ್ನು ಹೊಸ ಸಮಾಜವಾಗಿ ಬದಲಿಸಿವೆ. ನಮ್ಮ ಪೂರ್ವಿಕರು ಪ್ರಶ್ನೆ ಕೇಳಿಕೊಳ್ಳದಿದ್ದರೆ ಬೆಂಕಿ ಅಥವಾ ಬೇಸಾಯ ಶೋಧ ಆಗುತ್ತಿರಲಿಲ್ಲ. ವಿಜ್ಞಾನ ತಂತ್ರಜ್ಞಾನದ ಫಲವಾಗಿ ನಾವಿಂದು ಅನುಭವಿಸುತ್ತಿರುವ ಸೌಲಭ್ಯಗಳು ಇರುತ್ತಿರಲಿಲ್ಲ. ಪ್ರಶ್ನೆಯಿಲ್ಲದೆ ಸ್ಥಾಪಿತಸತ್ಯಗಳ ಒಳಗಿನ ಹುಸಿ ಹೊರಬರುವುದಿಲ್ಲ; ಹೊಸ ಚಿಂತನೆ ಹುಟ್ಟುವುದಿಲ್ಲ. ನಾವೇಕೆ ಹೀಗಿದ್ದೇವೆ ಎಂಬ ಪ್ರಶ್ನೆ ಹುಟ್ಟಿರದಿದ್ದರೆ, ಅಮೆರಿಕೆಯ ಕಪ್ಪುಜನ ಗುಲಾಮಗಿರಿಯಿಂದ ಸ್ವತಂತ್ರರಾಗುತ್ತಿರಲಿಲ್ಲ; ಭಾರತೀಯರು ಬ್ರಿಟಿಶರ ವಿರುದ್ಧ ಹೋರಾಡುತ್ತಿರಲಿಲ್ಲ; ಮಹಿಳೆಯರು ಬಿಡುಗಡೆಯ ಹಾದಿ ಹುಡುಕುತ್ತ್ತಿರಲಿಲ್ಲ. ದಲಿತರು ಸ್ವಾಭಿಮಾನ ಗಳಿಸುತ್ತಿರಲಿಲ್ಲ; ಸರ್ವಾಧಿಕಾರಿಗಳು ನಾಶವಾಗುತ್ತಿರಲಿಲ್ಲ.
ಚರಿತ್ರೆಯಲ್ಲಿ ಸಮಾಜಗಳನ್ನು ಬದಲಿಸಿರುವುದು ಪ್ರಶ್ನೆಗಳೇ. ರಾಜಸಭೆಗೆ ತನ್ನನ್ನು ಬಲಾತ್ಕಾರವಾಗಿ ಎಳೆದು ತಂದಾಗ ದ್ರೌಪದಿ `ತನ್ನನ್ನೇ ಪಣಕ್ಕಿಟ್ಟು ಸೋತ ವ್ಯಕ್ತಿಗೆ ತನ್ನ ಹೆಂಡತಿಯನ್ನು ಪಣಕ್ಕಿಡಲು ಹಕ್ಕಿದೆಯೇ?’ ಎಂಬ ಪ್ರಶ್ನೆ ಮುಂದಿಡುತ್ತಾಳೆ. ಉತ್ತರಿಸಲು ಸಭೆ ಒದ್ದಾಡುತ್ತದೆ. ಪ್ರಶ್ನೆಯ ಮೂಲಕ ಆಕೆ ತನ್ನ ಆಕ್ರೋಶ ವೇದನೆಗಳನ್ನಷ್ಟೆ ಹೊರಗೆಡಹುವುದಿಲ್ಲ, ಹೆಣ್ಣೊಬ್ಬಳ ಅಪಮಾನವನ್ನು ಸಹಿಸಿಕೊಂಡಿರುವ ಸಭೆಯ ಅಮಾನವೀಯತೆ ಮತ್ತು ಅವಿವೇಕವನ್ನೂ ಬಯಲಿಗೆಳೆಯುತ್ತಾಳೆ.


ಪ್ರಶ್ನಿಸುವ ಪ್ರವೃತ್ತಿ ಅಧಿಕಾರಸ್ಥರ ಕೆರಳಿಕೆಗೂ ದಮನಕ್ಕೂ ಕಾರಣವಾಗುತ್ತದೆ. ಪ್ರಶ್ನೆಯೆತ್ತಿದ ಮಲಾಲಾಗೆ ತಾಲಿಬಾನಿಗಳು ಗುಂಡು ಹೊಡೆದು ಉತ್ತರಿಸಿದರು; ಮುಂಬೈ ತರುಣಿಯರಿಗೆ ಪೋಲಿಸರು ಬಂಧಿಸುವ ಮೂಲಕ ಪ್ರತಿಕ್ರಿಯಿಸಿದರು. ಧರ್ಮರಾಯನು ಯುದ್ಧದಲ್ಲಿ ಗೆದ್ದು ಅರಮನೆ ಪ್ರವೇಶಿಸುವಾಗ, `ಜ್ಞಾತಿಬಂಧುಗಳನ್ನು ಕೊಂದ ನಿನಗೆ ರಾಜ್ಯವಾಳುವ ನೈತಿಕತೆಯಿದೆಯೇ’ ಎಂದು ಪ್ರಶ್ನಿಸಿದ ಚಾರ್ವಾಕನನ್ನು ಕೊಂದರು. ಶಿಷ್ಯ ದಾರಾಶುಕುವನ್ನು ಕೊಂದ ಔರಂಗಜೇಬನ ವಿರುದ್ಧ ಸೂಫಿ ಸರ್ಮದ್ ನಗ್ನನಾಗಿ ನಿಂತು ಇಂತಹುದೇ ಪ್ರಶ್ನೆಯನ್ನೆತ್ತಿ ತಲೆದಂಡ ತೆತ್ತನು. ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರಶ್ನಿಸಿದ ಅನೇಕ ವಿಜ್ಞಾನಿಗಳನ್ನು ಯೂರೋಪಿನ ಚರ್ಚುಗಳು ದಮನ ಮಾಡಿದ್ದಂತೂ ಸರ್ವವಿದಿತ. ಧಾರ್ಮಿಕ ಮೂಲಭೂತವಾದಿಗಳು ಮತ್ತು ರಾಜಕೀಯ ಸರ್ವಾಧಿಕಾರಿಗಳು ಇಂತಹ ದಮನವನ್ನು ಮಾಡುತ್ತಲೇ ಬಂದಿರುವರು. ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರು ಕಿರಿಯರ, ಪುರುಷರು ಮಹಿಳೆಯರ ಪ್ರಶ್ನೆಗಳನ್ನು ಹೀಗೇ ಹೊಸಕಿ ಹಾಕಿರುವರು.


ಆದರೂ ಪ್ರಶ್ನಿಸುವ ಪ್ರವೃತ್ತಿಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಸಾಧ್ಯವಾಗುವುದೂ ಇಲ್ಲ. ಪ್ರಶ್ನೆಯಿಲ್ಲದೆ ಚರಿತ್ರೆ ಚಲಿಸುವುದಿಲ್ಲ; ಲೋಕ ಬದಲುವುದಿಲ್ಲ. ಪ್ರಶ್ನೆಗಳು ಸಂಸ್ಕøತಿ ನಾಗರಿಕತೆಗಳನ್ನು ಕಟ್ಟಿಬೆಳೆಸಿದ ಶಕ್ತಿಗಳು. ಅವುಗಳ ಗಾತ್ರ ಚಿಕ್ಕದಿರಬಹುದು. ಪರಿಣಾಮ ಚಿಕ್ಕದಲ್ಲ. ಸಮಾಜದಲ್ಲಿ ಮಹತ್ವದ ಪಲ್ಲಟ ಸಂಭವಿಸಿದ್ದರೆ, ಅದರ ಹಿಂದೆ ಕೆಲವರು ಎತ್ತಿದ ಪ್ರಶ್ನೆಗಳಿವೆ; ಅವು ಹುಟ್ಟಿಸಿದ ಕ್ರಿಯೆ-ಪ್ರತಿಕ್ರಿಯೆಗಳಿವೆ. ನಮ್ಮ ಧರ್ಮದಲ್ಲಿ ಮಹಿಳೆಯರೇಕೆ ಹಿಂದುಳಿದ್ದಾರೆ, ದಲಿತರೇಕೆ ಅಸ್ಪøಶ್ಯರಾಗಿದ್ದಾರೆ, ನಿರ್ದಿಷ್ಟ ಜನರೇಕೆ ಶ್ರೇಷ್ಠರೆನಿಸಿಕೊಂಡಿದ್ದಾರೆ, ನಮ್ಮ ಮತಧರ್ಮಗಳೇಕೆ ದ್ವೇಷ ಹುಟ್ಟಿಸುತ್ತಿವೆ, ನಾನೇಕೆ ಇಷ್ಟು ನೀಚನಾಗಿದ್ದೇನೆ-ಹೀಗೆ ನಿಷ್ಠುರ ಪ್ರಶ್ನೆಗಳನ್ನು ಹುಟ್ಟಿಸಿಕೊಳ್ಳಲಾಗದ, ಅದನ್ನು ಲೋಕದ ಮುಂದಿಡಲಾರದ, ಮತ್ತು ಅಂತಹ ಪ್ರಶ್ನೆ ಕೇಳಿಸಿಕೊಳ್ಳುವ ಸಹನೆಯಿಲ್ಲದ ಯಾವ ವ್ಯಕ್ತಿ, ಸಮುದಾಯ ಮತ್ತು ಸಮಾಜವೂ ಚರಿತ್ರೆಯಲ್ಲಿ ದೊಡ್ಡದನ್ನು ಸಾಧಿಸಿಲ್ಲ. ನಾಗರಿಕ ಮತ್ತು ಮಾನವೀಯ ಕೂಡ ಆಗಿಲ್ಲ.

*********************************************

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ


Leave a Reply

Back To Top