ಕವಿತೆ
ಕಪ್ಪುಬಿಳುಪಿನ ಚಿತ್ರ
ಬಿದಲೋಟಿ ರಂಗನಾಥ್
ಅವಳಿಗಾಗಿ ಕಾದ ಭರವಸೆಯ ದೀಪ
ಹೊಯ್ಲಾಡುತ್ತಿರುವಾಗಲೇ
ಇರುವೆಯೊಂದು ಕೂತು ಮೂತಿ ತೀಡಿ
ಮುಂಗೈ ಮೇಲಿನ ಗುರುತ ನೋಡಿ ಕಣ್ಣ ಮಿಟುಕಿಸಿತು
ಕಾದ ತಂಗೂದಾಣದ ಗೋಡೆಯ ತೊಡೆ
ಗೀಚಿದ ಅಕ್ಷರಗಳ ಮೌನ ಮುರಿದು
ಬರುವ ಬಸ್ಸಿನ ಸೌಂಡಿಗೆ
ಉಗುರ ಬಣ್ಣ ಕಚಗುಳಿಯಿಟ್ಟು
ಬೆರಳ ತುದಿಯ ಅವಳ ಸ್ಪರ್ಶದ ನಗು
ತುಟಿಯ ಕಚ್ಚಿ ಬೆಳಕಾಡಿತು
ಆ ಸಂದಣಿಯಲ್ಲೂ ಸೂಟಿಯಿಟ್ಟ ಕಣ್ಣು
ಕೆನ್ನೆಕಚ್ಚಿದ ಗುರುತನು ಹುಡುಕಿ
ಭಾವಜಾಡಿನ ಬಲೆನೇಯ್ದು
ಹಕ್ಕಿಮರಿಯ ಪ್ರೇಮದಂಚು ಹೊಳೆದು
ಚಂದ್ರಗೆರೆಯ ಕರುಣೆ ಮುದ್ದಾಡಿ
ಕಾಲನ ಕರುಳು ಮರುಗಿ
ನೆಲದ ಬೆವರು ಚಿಗುರಿಸಿದ ಕನಸು
ಒಂಟಿ ಚಿಪ್ಪಿನಲಿ ನಿಲ್ಲದ ತೂಕದ ಬೊಟ್ಟು
ಸತ್ಯದ ಬೆನ್ನಿಗೆ ಬರೆದ ಕಪ್ಪುಬಿಳುಪಿನ ಚಿತ್ರ
ಕಾವಳ ಬಂದ ದಿನ ಶಪಿಸಿದ ಮನಸು
ಕಾಣದ ಅವಳ ಆಕೃತಿಗೆ ಮರುಗಿ
ಜೀವತಂತುವಿನ ಸದ್ದು
ಬಯಲ ಮಾರ್ದನಿಸಿ
ಭಾವಸ್ಪರ್ಶದ ಗಿಡದ ಬೇರಿನ
ನಾಲಿಗೆ ಒಣಗಿ
ಎದೆ ಬಿರಿದ ಶೋಕ
ಇನ್ನೂ ಕೇಳುತ್ತಿದೆ.
**********************
ಚೆನ್ನಾಗಿದೆ,ಅಭಿನಂದನೆ
ಧನ್ಯವಾದಗಳು ಮೆಡಮ್
ಚೆನ್ನಾಗಿದೆ ಸರ್
ಧನ್ಯವಾದಗಳು