ಗಜಲ್
ಅಲ್ಲಾಗಿರಿರಾಜ್ ಕನಕಗಿರಿ.
ನೀವು ಒಂದು ದಿನ ನನಗೆ ಒಪ್ಪಿಗೆ ಕೊಟ್ಟರೆ ನನ್ನ ಕಬ್ರ್ ನಾನೇ ತೋಡಿಕೊಳ್ಳುತ್ತೇನೆ.
ನನ್ನ ಗೋರಿ ಕಟ್ಟಲು ತಂದ ಈ ಬಂಡೆಗಲ್ಲಿನ ಮೇಲೆ ನಾ ಹಿಂದೂಸ್ತಾನಿ ಎಂದು ನಾನೇ ಕೆತ್ತಿಕೊಳ್ಳುತ್ತೇನೆ.
ನೀವು ಸುಮ್ಮನಿದ್ದರೆ ನನ್ನ ಮಸಣ ನಾನೇ ನಿರ್ಮಿಸಿಕೊಳ್ಳುತ್ತೇನೆ.
ನಾಳೆ ನನ್ನ ಗಜಲ್ ಓದುವಾಗ ಯಾರೂ ಧರ್ಮ ಹುಡುಕಬಾರದೆಂದು ಬೇಡಿಕೊಳ್ಳುತ್ತೇನೆ.
ನೀವು ದೂರವಿದ್ದರೆ ನನ್ನ ಗೋರಿ ಮೇಲೆ ಬಿಳಿ ಹೂ ಹುಟ್ಟಲು ಕೇಳಿಕೊಳ್ಳುತ್ತೇನೆ.
ನನ್ನ ಗೋರಿ ಬಳಿ ಯಾವ ಧರ್ಮದ ಝಂಡಾ ಹಾರದಿರಲಿಯೆಂದು ವಿನಂತಿಸಿಕೊಳ್ಳುತ್ತೇನೆ.
ನೀವು ಬರುವುದಾದರೆ ನನ್ನ ಗೋರಿ ಬಳಿ ಗಡ್ಡ ಜುಟ್ಟ ದಾರದ ಕುರುಹು ಕೇಳಬೇಡಿ ಎಂದು ಕೈಜೋಡಿಸುತ್ತೇನೆ.
ನನ್ನ ಗಜಲ್ ನಿಮ್ಮ ನಡುವೆ ಮನುಷ್ಯ ಪ್ರೀತಿ ಕಟ್ಟಲಿಯೆಂದು ದುವಾ ಮಾಡುತ್ತೇನೆ.
ನೀವು ಧರ್ಮದ ಅಮಲಿನಲ್ಲಿ ಸಾವು ಬೇಡುವುದಾದರೆ ನಾನು ಗೋರಿಯಲ್ಲಿ ಮರು ಜನುಮ ಧಿಕ್ಕರಿಸುತ್ತೇನೆ.
ನನ್ನ ಗೋರಿ ಸುತ್ತ ಬಿಳಿ ಪಾರಿವಳದ ದಂಡು “ಗಿರಿರಾಜ”ನ ಐಕ್ಯತೆಯ ಮಂತ್ರ ಪಠಿಸಲಿಯೆಂದು ಬೇಡಿಕೊಳ್ಳುತ್ತೇನೆ
**********************************.