ಅಂಕಣ ಬರಹ
ಕಬ್ಬಿಗರ ಅಬ್ಬಿ
ಹಣತೆ ಹಚ್ಚಿದ ಅಕ್ಷರ ದೀಪ
ನಮ್ಮ ಅಜ್ಜಿ ಹಚ್ಚಿ ಹಣತೆ ಬೆಳಕಲ್ಲಿ ತೆರೆದಳು ರಾಮಾಯಣ. ಹಣತೆ ಸಣ್ಣಗೆ ಬೆಳಗುವಾಗ ರಾಮ ಪುಟು ಪುಟು ಹೆಜ್ಜೆ ಹಾಕುತ್ತಿದ್ದ.ಜತೆಗೆ ಇನ್ನೂ
ಮೂರು ತಮ್ಮ ತಮ್ಮ ತಮ್ಮಂದಿರು.
ಎಷ್ಟು ಪ್ರೀತಿ ಮುಗ್ಧ ಬೆಳಕಿತ್ತು. ಕತೆ ಕೇಳುತ್ತಾ ನಮಗೆಲ್ಲ ಪುಳಕ.
ಹಣತೆಯ ಬೆಳಕೂ ರಾಮನೂ ಜತೆ ಜತೆ ಬೆಳೆದರು.
ವಿಶ್ವಾಮಿತ್ರನ ಕೈ ಹಿಡಿದು ಅಣ್ಣ ತಮ್ಮ ಗುರು ತೋರಿದ ಕಾಡುಹಾದಿಯಲ್ಲಿ ತಿಳಿವಿನ ಬೆಳದಿಂಗಳಿತ್ತು. ಕೆಂಗಣ್ಣ ದೈತ್ಯೆ ತಾಟಕಿಯ ಘೋರ ಆರ್ಭಟಕ್ಕೆ ಹಣತೆಯ ಪುಟ್ಟ ಜ್ವಾಲೆ ಕೆಂಪು ಕೆಂಪು ಓಲಾಡಿತು.ಅಜ್ಜಿ ಚಾಳೀಸು
ಸರಿಪಡಿಸಿ ಪುಸ್ತಕದೊಳಗೇ ನೋಟ ನೆಟ್ಟರು.
ಆ ಪುಸ್ತಕದೊಳಗೆ ಯಜ್ಞವಿತ್ತು. ಮಾರೀಚನಿದ್ದ, ಯಜ್ಞಕ್ಕೆ ನೆತ್ತರು ಸುರಿಯುತ್ತ ಆಗಸದಲ್ಲಿ.
ಹಣತೆಯ ಬೆಳಕಲ್ಲಿ ಆತ ತುಂಬಾ ಭಯಾನಕನಂತೆ ಕಂಡ. ಅಜ್ಜೀ ಅಜ್ಜೀ..ಭಯವಾಗುತ್ತಿದೆ ಅಂದು ಮಕ್ಕಳು ಅಜ್ಜಿಯ ಮಡಿಲಲ್ಲಿ ಮುಖಮುಚ್ಚಿ ರಕ್ಷಣೆ ಪಡೆದರು.ರಾಮ ಬಾಣ ಹೂಡಿ, ಮಾರೀಚ ಯೋಜನ ದೂರ ಸಮುದ್ರಕ್ಕೆ ಬಿದ್ದ. ಹಣತೆಯ ಬೆಳಕೂ ಶಾಂತವಾಯಿತು.
ಜನಕನ ರಾಜ ಭವನ ಬೆಳಗಿತು ಪುಟ್ಟ ಹಣತೆ.
ಸೀತೆ ಬೆಳಗಿದಳು ಎಷ್ಟು ಚಂದ,
ರಾಮ ಸ್ವಯಂವರದೀಪದ ಬೆಳಕಲ್ಲಿ.
ಕತೆ ಕೇಳುತ್ತಾ ಹುಡುಗಿಯರು ಸೀತೆಯಂತೇ ಕಂಡರು. ರಾಗರತಿಯ ಮತ್ತೇರಿದ ದೀಪ ಜ್ವಾಲೆ ನಡು ಬಳುಕಿಸಿ ನಲಿಯಿತು.
ಪರಶುರಾಮನ ಕೋಪಾಗ್ನಿಗೆ, ಪುಸ್ತಕದ ಅಕ್ಷರಗಳು ಅಜ್ಜಿಯ ವರ್ಣನೆಗೆ ಕೆಂಪಡರಿದ್ದವು. ಸಮಚಿತ್ತ ವಿನಯದ ತಂಪಿಗೆ ಬೆಳಕು ನಂದಲಿಲ್ಲ. ರಾಮ! ರಾಮ!
ಮಂಥರೆ ಮೇಲೆ ದೀಪದ ಬೆಳಕು ಹೊಗೆ ಸುತ್ತಿ ಪುಸ್ತಕದೊಳಗೆಲ್ಲ ನೆರಳು ಹೊಗೆಯಾಡಿತು
ರಾಮ ಕಾಡಿಗೆ ಹೊರಟ. ಅಜ್ಜಿ ದೀಪದ ಬತ್ತಿ ಸರಿಪಡಿಸಿದರು. ಬೆಳಕು ಸ್ಪಷ್ಟವಾದಾಗ ಕೈಕೇಯಿ
ಮನಸ್ಸು ಹೊಗೆ ಮುಕ್ತ. ದಶರಥನ ಜೀವ ಅಕ್ಷರಗಳಿಂದ ಮುಕ್ತವಾದಾಗ ಅಜ್ಜಿ ದೀಪದ ಉಸಿರು ಆರಿಸಿದರು.
ಮಲಗಿ ಮಕ್ಕಳೇ!. ಮುಂದಿನ ಕತೆ ನಾಳೆಗೆ.
ಅಜ್ಜಿ ಪುನಃ ಹಚ್ಚಿದರು ಹಣತೆ. ಸುತ್ತಲೂ ಅಂಧಕಾರ. ಪುಸ್ತಕದೊಳಗೆ ದಂಡಕಾರಣ್ಯದ ಚಿತ್ರ. ಅಜ್ಜಿ ಓದುತ್ತಿದ್ದಂತೇ ದೀಪದ ಬೆಳಕಲ್ಲಿ ಋಷಿ ಮುನಿಗಳ ಆಶ್ರಮ, ತಪಸ್ಸು, ಅಕ್ಷರಗಳಾದವು.
ಕುಣಿಯುತ್ತ ಬಂತು ಚಿನ್ನದ ಜಿಂಕೆ. ಚಂಚಲವಾಯಿತು ಹಣತೆ. ರಾಮನ ಕಳಿಸಿದಳು ಸೀತೆ, ಜಿಂಕೆಯ ಬಣ್ಣದ ಹಿಂದೆ.
‘ಹಾ ಸೀತೇ..ಹಾ ಲಕ್ಷ್ಮಣಾ’..
ಮರಣಾಕ್ರಂದನ, ಬೆಳಕು ಮುಗ್ಧವಾಗಿತ್ತು
ಸೀತೆ ಲಕ್ಷ್ಮಣರೇಖೆ ದಾಟಿದ್ದಳು
ಸೀತಾಪಹರಣ ಮಾಡಿದ ರಾವಣನ ಮೇಲೆ ಬೆಳಕಿನ ನೆರಳು ಕರ್ರಗೆ ಚೆಲ್ಲಿತ್ತು. ಅಜ್ಹಿಯ ಕಣ್ಣು ತೇವವಾಗಿ ಅಕ್ಷರಗಳು ಮಂದವಾದವು.
ಕಿಷ್ಕಿಂಧೆಯಲ್ಲಿ ವಾಲಿ ಸುಗ್ರೀವ ನಡುವೆ ಎಷ್ಟೊಂದು ಪ್ರೀತಿಯಿತ್ತು. ಕಿಟಿಕಿಯಿಂದ ಗಾಳಿ ಬೀಸಿ, ಹಣತೆ ಬೆಳಕು ತುಯ್ದಾಡಿತು. ವಾಲಿಯ ಮನಸ್ಸಿನ ಮೇಲೆ
ಶಂಕೆಯ ನೆರಳು ಬಿತ್ತು.ಸಹೋದರದ ಪದಸಂಧಿ
ವಿಂಗಡಿಸಿತು.
ಹನುಮನ ಮೇಲೆ ಬೆಳಕು ಚೆಲ್ಲಿತು ಹಣತೆ.
ಸೀತಮ್ಮನ ಹುಡುಕುತ್ತ ಸಾಗರ ಹಾರಿದ ಕತೆ ಕೇಳುತ್ತಾ ನಾನೂ ನನ್ನ ಹಿಂಭಾಗ ಸವರಿದೆ! ಬಾಲ ಸಿಗಲಿಲ್ಲ.
ಅಜ್ಜಿ ಅಂದರು..ದೀಪಕ್ಕೆ ಎಣ್ಣೆ ತುಂಬಲು, ಬತ್ತಿ ನೇರ ಮಾಡಲು. ಬೆಳಕ ಏಕಾಗ್ರ ಚಿತ್ತ. ಸಂಕ ಕಟ್ಟುವತ್ತ ಕೋಟಿ ಮರ್ಕಟ ಮನಸ್ಸು ಏಕಾಗ್ರ, ರಾಮ! ರಾಮ!.
ರಾಮ ರಾವಣ ಪದಗಳು ಸಮಸಮ ಹೊಳೆಯುತ್ತಿದ್ದವು. ಎರಡೂ ಪಾತ್ರಗಳು ಹಣತೆಯ ಬೆಳಕ ಹೀರಿ ಬೆಳೆಯುತ್ತಿದ್ದವು. ಅಸ್ತ್ರ ಶಸ್ತ್ರ ಶಾಸ್ತ್ರಗಳು ಪುಸ್ತಕದೊಳಗೆ ಸಾಲುಗಳು ದೀಪ ದೀಪ್ತಿಯಲ್ಲಿ ಬೆಳಗಿದವು. ರಾಮ ತೆರೆದ ತನ್ನ ಆದಿತ್ಯ ಹೃದಯ.ಒಳಗೆ ತುಂಬಾ ಬೆಳಕು ತುಂಬಲು. ರಾವಣನ ಹೃದಯ ಉಕ್ಕಿನ ಕವಚ. ಒಳಗೆ ಬೆಳಕು ತಲಪಲಿಲ್ಲ.
ರಾವಣನ ಕತೆ ಮುಗಿಯಿತು. ರಾಮ ಲಕ್ಷ್ಮಣ ಸೀತೆ ಪುಷ್ಪಕ ವಿಮಾನವೇರಿ ಅಯೋಧ್ಯೆಗೆ ಬಂದಾಗ, ಅಜ್ಜಿಯ ರಾಮಾಯಣ ಪುಸ್ತಕದೊಳಗೆ
ಸಾಲು ಸಾಲು ಹಣತೆ ಬೆಳಗಿ ಪುಟ್ಟ, ಮಕ್ಕಳ ಕಣ್ಣೊಳಗೆ ದೀಪಾವಳಿ!.
ದೀಪ ಮತ್ತು ಬೆಳಕನ್ನು ಸೃಜನಶೀಲ ಮನಸ್ಸು ಹಲವು ಪ್ರತಿಮೆಗಳಾಗಿ ಕಾಣುತ್ತವೆ.
ಬೆಳಕು ಮನಸ್ಸನ್ನು ಬೆಳಗುವಾಗ ಅದರ ಆಯಾಮಗಳು ನೂರಾರು. ಮನಸ್ಸಿನ ಕ್ಯಾನುವಾಸ್ ನಲ್ಲಿ ಚಿತ್ರಗಳು ಮೂಡಲು ಬೆಳಕು ಸಾಧನ ತಾನೇ. ನಾಟಕದ ಪಾತ್ರಗಳ ಭಾವಾಭಿವ್ಯಕ್ತಿಯೂ ಬೆಳಕಿನ ಬಣ್ಣಗಳನ್ನು ಸಂಯೋಜಿಸಿ ಅದಕ್ಕೆ ಹೊಸ ರೂಪ ಕೊಡುವುದೂ ಒಂದು ಕಲೆಯೇ. ಹಾಗಾಗಿ, ವಸ್ತುವನ್ನು ನಾವು ನೋಡುವ ಬಗೆಯಲ್ಲಿ ಬೆಳಕಿನ ಪಾತ್ರ ಅತ್ಯಂತ ಪ್ರಮುಖವಾದದ್ದೂ ಹೌದು,ಸಾಪೇಕ್ಷವಾದದ್ದೂ ಹೌದು.
ಹಾಗೆ ಅಚಾನಕ್ಕಾಗಿ ಫ್ಲಾಷ್ ಆಗುವ ಬೆಳಕಲ್ಲಿ ರೂಪ ಹೇಗಿರಬಹುದು?. ಬೇಂದ್ರೆಯವರ “ಸ್ವರೂಪ ದೀಪ” ಕವಿತೆಯ ಸಾಲುಗಳು ಹಣತೆಯ ಬೆಳಕಲ್ಲಿ ಹೀಗೆ ಹೊಳೆಯುತ್ತವೆ.
“ಬೆಳಕೀಗೆ ಕತ್ತಲೆ ಕೊಟ್ಟಾಗ ಮುದ್ದು
ಮೂಡ್ಯಾನೋ ಚಂದಿರ
ಹಗಲು ಹೋಯಿತು ಜಾರಿ
ಬಟಾ ಬಯಲೆಲ್ಲಾ
ಚುಕ್ಕಿಯ ಮಂದಿರ
ಚಕಮಕ್ಕಿ ಹಾರೀ ಕಂಡಿತೋ ಮಾರಿ
ಎಂದಿನದೀ ನೋಟ
ಮೈಯೊಳಗ ಮೈಯೋ
ಕೈಯೊಳಗ ಕೈಯೋ
ಕರುಳಾಟ ಮರುಳಾಟ”
ರಾತ್ರೆಯ ಕತ್ತಲಲ್ಲಿ ಆಗಸದ ಚಿತ್ತಾರದ ಅಡಿಯಲ್ಲಿ, ಚಕಮಕ್ಕೀ ಹಾರಿದಾಗ ನೋಟದೊಳಗೆ ಮೂಡುವ ಚಿತ್ರಕ್ಕೆ ಪ್ರಾಪ್ತವಾಗುವ ಸ್ವರೂಪ ದೀಪದ ಮೇಲೆ ಅವಲಂಬಿತ,ಅಲ್ಲವೇ.
ಒಲವು, ಜ್ಞಾನ ಎಲ್ಲವೂ ಬೆಳಕೇ. ದೀಪ ಹಚ್ಚುವುದೆಂದರೆ ಪ್ರಕಾಶಿಸುವುದೆಂದರೆ ಅದರಲ್ಲಿ ಋಣಾತ್ಮಕ ಅಂಶಗಳಿಗೆ ಎಡೆಯೇ ಇಲ್ಲ.
“ನೀ ಬಂದು ನಿಂದಿಲ್ಲಿ ದೀಪ ಹಚ್ಚಾ..”
ಎಸ್ ವಿ ಪರಮೇಶ್ವರ ಭಟ್ಟ ಅವರು ಬರೆದ ಕವನದ ಪ್ರತೀ ಸಾಲುಗಳು ಸಾಲುದೀಪಾಕ್ಷರಗಳು.
“ಪ್ರೀತಿಯ ಕರೆಕೇಳಿ ಆತ್ಮನ ಮೊರೆಕೇಳಿ
ನೀ ಬಂದು ನಿಂದಿಲ್ಲಿ
ದೀಪ ಹಚ್ಚಾ
ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ
ದೀಪ ಹಚ್ಚಾ
ದೇಹದ ಗೂಡಲಿ ನಿನ್ನೊಲವು ಮೂಡಲಿ
ಜಗವೆಲ್ಲ ನೋಡಲಿ
ದೀಪ ಹಚ್ಚಾ
ಬಾನಿನಂಗಳದಲ್ಲಿ ಚುಕ್ಕಿ ಹೊಳೆದೆಸೆವಂತೆ
ನನ್ನ ಮನದಂಗಳದಿ
ದೀಪ ಹಚ್ಚಾ
ಹಳೆಬಾಳು ಸತ್ತಿತ್ತು ಕೊನೆಬಾಳು ಸುಟ್ಟಿತ್ತು
ಹೊಸಬಾಳು ಹುಟ್ಟಿತ್ತು
ದೀಪ ಹಚ್ಚಾ
ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಲ್ಲಾರತಿ
ದೀಪ ಹಚ್ಚಾ
ಮೋಹದ ಮತಿಗೆ ನೀ ಸುಟ್ಟು ತೋರುವ ದೀಪ
ಸುಜ್ಞಾನಪ್ರದೀಪ
ದೀಪ ಹಚ್ಚಾ
ಜ್ಯೋತಿಸ್ವರೂಪನೆ ಸ್ವಯಂಪ್ರಕಾಶನೆ
ತೇಜೋರೂಪನೆ
ದೀಪ ಹಚ್ಚಾ
ವಿಶ್ವಮೋಹಿತಚರಣ ವಿವಿಧವಿಶ್ವಾಭರಣ
ಆನಂದದ ಕಿರಣ
ದೀಪ ಹಚ್ಚಾ”
ಪ್ರೀತಿ, ಒಲವು, ಆತ್ಮಜ್ಯೋತಿ, ಮನಸ್ಸೊಳಗಿನ ಭಾವ, ಬದುಕು, ಜ್ಞಾನ, ಆನಂದ, ಇವೆಲ್ಲ ಕವಿಗೆ ದೀಪದ ಬೆಳಕಾಗಿ ಹಬ್ಬವಾಗುತ್ತೆ.
ಅಕ್ಷರಗಳು ಜ್ಞಾನದ,ಕಲೆಯ, ಚಿಂತನೆಯ, ಸೃಜನಾತ್ಮಕ ಪ್ರಕ್ರಿಯೆಯ ಜೀವಕೋಶಗಳು ತಾನೇ. ಹಾಗಾದರೆ ಭಾಷೆ?. – ಡಿ. ಎಸ್. ಕರ್ಕಿ ಅವರ ಈ ಪದ್ಯದಲ್ಲಿ ಕನ್ನಡವೂ ದೀಪವೇ.
“ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ”
ಭಾಷೆಯೂ ದೀಪ, ಅದರ ಸಿರಿವಂತಿಕೆಯೂ ದೀಪ ಅದರೊಳಗೆ, ಅದರ ಮೂಲಕ ಮತ್ತು ಅದರತ್ತ ಇರುವ ಒಲವೂ ದೀಪವೇ. ಉರಿಸಿದಾಗ ಕರ್ಪೂರದಂತೆ ಭಾಷೆಯ ಕಂಪೂ ಹರಡುತ್ತದೆ,ಅಲ್ಲವೇ.
ನರನರವನೆಲ್ಲ ಹುರಿಗೊಳಿಸಿ ಭಾಷೆಯ ಮುಲಕ ಹೊಸತನ ತುಂಬುವುದು ದೀಪೋಜ್ವಲನವೇ.
“ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ” ಎಂಬ ಸಾಲುಗಳು ಅಸ್ಮಿತೆಯ ದೀಪ ಹಚ್ಚುತ್ತೆ.
ಬೇಂದ್ರೆಯವರ “ಚೈತನ್ಯದ ಪೂಜೆ” ಎಂಬ ಕವನದಲ್ಲಿ ದೀಪದೊಳಗಿನ ವಿಶ್ವಾತ್ಮ ಚೈತನ್ಯದ ಜ್ಯೋತಿಯಿದೆ.
“ಚೈತನ್ಯದ ಪೂಜೆ ನಡೆದSದ
ನೋಡS ತಂಗಿ।। ಅಭಂಗದ ಭಂಗೀS ।। ಪ ।।
ಸತ್ಯ ಎಂಬುವ ನಿತ್ಯದ ದೀಪ
ಸುತ್ತೆಲ್ಲಾ ಅವನದೇ ರೂಪ
ಪ್ರೀತಿ ಎಂಬುವ ನೈವೇದ್ಯ
ಇದು ಎಲ್ಲರ ಹೃದಯದ ಸಂವೇದ್ಯ.”
ಸತ್ಯ ಎಂಬುವ ನಿತ್ಯದ ದೀಪ, ಸುತ್ತೆಲ್ಲ ಅವನದೇ ರೂಪ ಎನ್ನುತ್ತಾ, ಬೇಂದ್ರೆಯವರು ಚೈತನ್ಯದ ಆರಾಧನೆಯ ಮಾರ್ಗ ಕ್ಕೆ ಬೆಳಕು ಚೆಲ್ಲುತ್ತಾರೆ.
ಕೆ.ಎಸ್ ನರಸಿಂಹ ಸ್ವಾಮಿಯವರು ಬರೆದ
“ದೀಪವು ನಿನ್ನದೆ,ಗಾಳಿಯೂ ನಿನ್ನದೆ,ಆರದಿರಲಿ ಬೆಳಕು ” ಎನ್ನುವ ಸಾಲುಗಳು, ದೀಪವನ್ನು ಏಳು ಬೀಳುಗಳನ್ನು ಅನುಭವಿಸುತ್ತಾ ಸಾಗುವ ಬದುಕಿಗೆ ಪ್ರತಿಮೆಯಾಗಿಸುತ್ತಾರೆ.
ಅವರ ದೀಪಾವಳಿ ಕವನವೂ ಹಾಗೆಯೇ ದೀಪವನ್ನು ಹಲವು ರೂಪಕವಾಗಿ ಬೆಳಗಿಸುತ್ತೆ.
ಹೂವು ಬಳ್ಳಿಗೆ ದೀಪ ;
ಹಸಿರು ಬಯಲಿಗೆ ದೀಪ ;
ಅನ್ನುತ್ತಾ ಅವರು ದೀಪಕ್ಕೆ ಹೊಸ ವ್ಯಾಖ್ಯಾನ ಕೊಡುವ “ಬಲ್ಮೆ ತೋಳಿಗೆ ದೀಪ” ಎಂಬ ಸಾಲು ಬರೆಯುತ್ತಾರೆ.
ಅವರ ಈ ಸಾಲುಗಳನ್ನು ಗಮನಿಸಿ!.
“ಸಹನೆ ಅನುಭವ – ದೀಪ ಬದುಕಿನಲ್ಲಿ
ಕರುಣೆ ನಂದಾದೀಪ ಲೋಕದಲ್ಲಿ”
ಅಕ್ಷರಗಳನ್ನು ದೀಪವಾಗಿ ಕಾಣುತ್ತಾ ಅವರು ಬರೆಯುತ್ತಾರೆ..
“ಕತ್ತಲೆಯ ಪುಟಗಳಲಿ
ಬೆಳಕಿನಕ್ಷರಗಳಲಿ,
ದೀಪಗಳ ಸಂದೇಶ ಥಳಥಳಿಸಲಿ !”
ದೀಪದ ಬಗ್ಗೆ ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟರು ಬರೆದ ಕವನ ಅನನ್ಯ ಭಾವದ ಒಲುಮೆಯ ದೀಪವೇ.
“ಮಾನವನೆದೆಯಲಿ ಆರದೆ ಉರಿಯಲಿ.
ದೇವರು ಹಚ್ಚಿದ ದೀಪ
ರೇಗುವ ದನಿಗೂ ರಾಗವು ಒಲಿಯಲಿ
ಮೂಡಲಿ ಮಧುರಾಲಾಪ”
ಹಮ್ಮು ಬಿಮ್ಮುಗಳ ಮರುಳುಗಾಡಿನಲಿ
ಎಲ್ಲೋ ಥಣ್ಣನೆ ಚಿಲುಮೆ
ತಾಪವ ಹರಿಸಿ ಕಾಪಾಡುವುದು
ಒಳಗೇ ಸಣ್ಣಗೆ ಒಲುಮೆ.”
ಇವುಗಳಿಗೆಲ್ಲ ಭಿನ್ನವಾಗಿ ಶಿವರುದ್ರಪ್ಪನವರು ಬರೆದ ಕವನ “ನನ್ನ ಹಣತೆ”
“ಹಣತೆ ಹಚ್ಚುತ್ತೇನೆ ನಾನೂ.
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ.
ಆದರೂ ಹಣತೆ ಹಚ್ಚುತ್ತೇನೆ ನಾನೂ;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.”
ಹಣತೆಯ ಬೆಳಕಲ್ಲಿ, ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಆಸೆಯಿಂದ, ಹಣತೆ ಹಚ್ಚುವ ಕವಿ, ಜೀವಪ್ರೇಮವನ್ನೂ ಜೀವನಪ್ರೇಮವನ್ನೂ, ವಾಸ್ತವಾನುಭವದ ಸತ್ಯವನ್ನು ಮಾತ್ರ ಅವಲಂಬಿಸುತ್ತಾರೆ.
ಅಕ್ಷರಗಳ ಮೂಲಕ ಅನುಭೂತಿ ಹುಡುಕುವ, ನಮ್ಮ ಈ ಪ್ರಯತ್ನದಲ್ಲಿ, ಅಕ್ಷರಮಾಲೆ, ದೀಪದ ಸಾಲುಗಳು.
ಈ ಅಕ್ಷರ ದೀಪಾವಳಿಯ ಶುಭಾಶಯಗಳು, ನಿಮಗೆಲ್ಲರಿಗೂ.
******************************************
ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ
ನಿಮ್ಮ ಈ ಲೇಖನವೇ ದೀಪದ ಸಾಲಿಗೆ, ಬೆಳಕಿಗೆ ಒಂದು ಪ್ರತಿಮೆಯಾಗಿ ಹೊರಹೊಮ್ಮಿದೆ. ನಿಮ್ಮ ಕವಿತೆಯಷ್ಟೇ ಹೃದ್ಯ ನಿಮ್ಮ ಲೇಖನ ಸಹ. ಕನ್ನಡದ ಕವಿಗಳ ದೀಪಗಳ ನೋಟವನ್ನು ಸಮರ್ಥವಾಗಿ ಪರಿಚಯಿಸಿದ್ದೀರಿ.
ರಮೇಶ್ ಸರ್. ದೀಪ ಮತ್ತು ಬೆಳಕು ಮನಸ್ಸನ್ನು ಪ್ರೇರೇಪಿಸಿದಷ್ಟು, ಉಳಿದವು ಮಾಡಲಾರವು.
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ತುಂಬಾ ಕೃತಜ್ಞತೆಗಳು
ಸಾಲು ಕಾವ್ಯ ದೀಪಗಳ ಹಚ್ಚಿ ದೀಪಾವಳಿ ಮತ್ತಷ್ಟು ಆಪ್ತ ಗೊಳಿಸಿದಿರಿ. ಕಾವ್ಯದಂತಹ ಗದ್ಯ.
ಪೂರ್ಣಿಮಾ ಅವರೇ, ಅಕ್ಷರಗಳಿಗಿಂತ ಚೆನ್ನಾದ ದೀಪ, ಬೇರಿದೆಯೇ
ಅಕ್ಷರ ಸಾಲುಗಳು ಬೆಳಗಿದಾಗ ಜಗ ಬೆಳಗುತ್ತೆ. ಅಲ್ವಾ.
ನಿಮದಮ ಒಲುಮೆಯ ಪ್ರತಿಕ್ರಿಯೆ ಕೂಡಾ ದೀಪವೇ.
Tara Kulkarni .
ರವಿ ಕಾಣದ್ದನ್ನು ಕಂಡ ಅನೇಕ ಕವಿಗಳ ದರ್ಶನ ಮಾಡಿಸಿ
ಪ್ರೋತ್ಸಾಹದ ನುಡಿಗಳಿಗೆ
ತುಂಬಾ ಧನ್ಯವಾದಗಳು
ಹಣತೆಯ ಬೆಳಕಿನಲ್ಲಿ ಅಜ್ಜಿ ತೆರೆದ ‘ ರಾಮಾಯಣ’, ಪ್ರಕಾಶದ ಬಗೆ ಬಗೆಯ ಕಾಂತಿಯ ಛಾಯೆಯಲ್ಲಿ ಅನಾವರಣಗೊಳ್ಳುತ್ತ ಸಾಗುವ ವಿವರಣೆ ಬಹಳ ಸುಂದರವಾಗಿದೆ. ‘ ಬೆಳಕು ಮನಸನ್ನು ಬೆಳಗುವಾಗ ಅದರ ಆಯಾಮಗಳು ನೂರಾರು! ‘ ಹೀಗೆ ಅಂಕಣದ ಪ್ರತಿ ಸಾಲೂ ಸರಣಿ ದೀಪಗಳಂತೆ ಬೆಳಗುತ್ತವೆ. ಅದಕ್ಕೆ ಕುಂದಣವಿಟ್ಟಂತೆ, ಕನ್ನಡ ಸಾಹಿತ್ಯ ಜಗತ್ತಿನ ದಿಗ್ಗಜ ಕವಿಗಳ ಅವಿಸ್ಮರಣೀಯ ಸಾಲುಗಳನ್ನು ಹೆಕ್ಕಿ ತಂದು , ಅವುಗಳ ದೇದೀಪ್ಯಮಾನವಾದ ಪ್ರಕಾಶವನ್ನು ನಮಗೆಲ್ಲ ಇತ್ತು, ನಮ್ಮ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೊಸ ಅರ್ಥ ಹಾಗೂ ಚೈತನ್ಯ ನೀಡಿದ್ದಾರೆ, ಮಹಾದೇವ್ ಅವರು.
ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು
ಬದುಕಿನ ಪುಟ ತೆರೆದಾಗ, ಬಿಳಿ ಹಾಳೆಯ ಮೇಲೆ ಕಪ್ಪಕ್ಷರಗಳ ಬೆಳಕಿದೆ!. ನೋಟಕ್ಕೆ ಬಣ್ಣವಿಲ್ಲದಿದ್ದರೂ ಕನಸಿಗೆ, ಕಲ್ಪನೆಗಳಿಗೆ ವರ್ಣಸಂಕೀರ್ಣವಿದೆ. ಬಿಳಿ ಬೆಳಕನ್ನು ವಿಂಗಡಿಸಿದರೆ ಹತ್ತು ಹಲವು ಬಣ್ಣಗಳು, ತರಂಗಗಳು ದೀಪವನ್ನು ಸಿಂಗರಿಸುತ್ತವೆ. ಪ್ರಹ್ಲಾದ ಜೋಶಿ ಅವರೇ, ನಿಮ್ಮ ಪ್ರೋತ್ಸಾಹ ಮತ್ತು ದೀಪ್ತಿಯಂತಹ ಉಕ್ತಿಗೆ ಶರಣು
ಅಜ್ಜಿಯ ಹಣತೆಯ ಬೆಳಕಿನಲ್ಲಿ ಸಂಪೂರ್ಣ ರಾಮಾಯಣ ತೋರಿಸಿದ ರೀತಿ ಅದ್ಭತವೆನಿಸಿತು.ಧನಾತ್ಮಕವಾದದ್ದೆಲ್ಲ ದೀಪವೇ.ರಾಮಾಯಣದಲ್ಲಿಯ ಏಳುಬೀಳುಗಳಿಗನುಗುಣವಾಗಿ ಅಜ್ಜಿಯ ದೀಪ ದೇದಿಪ್ಯಮಾನವಾಗುತ್ತದೆ,ಹೊಗೆ ಬಿಡುತ್ತದೆ,ಮತ್ತೆ ತೈಲದಿಂದ ಉರಿಯುತ್ತದೆ.ಹೊಸ ರೀತಿ ಹೊಸ ಶೈಲಿ.ಅದರೊಂದಿಗೆ ಸಾಗರದಿಂದ ಮುತ್ತನ್ನಾರಿಸಿ ತಂದುಕೊಟ್ಟಂತೆ ಕನ್ನಡ ಸಾಹಿತ್ಯರಂದಲ್ಲಿಯ ವರಕವಿಗಳಿಮದ ರಚಿತವಾದ ದೀಪದ ಕವಿತೆಗಳ ರಸದೌತಣ.ಮತ್ತೆ ನೀವು ಒಂದು ವಿಷಯವನ್ನಾರಿಸಿಕೊಂಡರೆ ಅದಕ್ಕೆ ಪ್ರತಿಶತ ಒಪ್ಪಿಸಿ ಕೊಂಡು ನ್ಯಾಯ ಮಾಡುತ್ತೀರೆಂದು ಸಿದ್ಧಪಡಿಸಿದ್ದೀರಿ.ಹೊಸ ಬರಹಕ್ಕಾಗಿ ನಿರೀಕ್ಷೆ.
ಮೀರಾ ಅವರೇ, ಕಾಣಿಸುವ ವಸ್ತು ಮತ್ತು ಭಾವ, ಕಾಣುವ ಕಣ್ಣಿಗೂ ಮನಸ್ಸಿನ ಕ್ಯಾನುವಾಸಿಗೂ ಸಾಪೇಕ್ಷವಾಗಿದ್ದರೂ, ನೋಟವೇ ಅನುಭವವಾಗುತ್ತಾ, ಅರಿವಿಗೆ ವ್ಯಾಪ್ತಿ ಕೊಡುವ ಟೂಲ್ ಆಗುತ್ತೆ. ನಿಮ್ಮ ಸೃಜನಶೀಲ ಪ್ರತಿಕ್ರಿಯೆ ನನ್ನ ಬೆನ್ನು ತಟ್ಟಿದೆ. ಮನ ಮುಟ್ಟಿದೆ.
ಕೃತಜ್ಞ ನಾನು.