ಕಾವ್ಯ ಸಂಗಾತಿ
ಡಾ. ಲತಾ ಎ ಆರ್ ಬಾಳೆಹೊನ್ನೂರು
ಗಜಲ್


ಅಲೆಯ ತೆರನದಿ ಅಪ್ಪಳಿಸಿ ಹೃದಯಕೆ
ಸುಖದ ನೋವಲಿ ತೇಲಿಸಿದೆ ತನು ಮನ
ದೇಹ ಎರಡು ಮನಸು ಒಂದು ನುಡಿದು
ಮುನಿಸು ತೋರಿ ಹೋದೆ ನೀನೆಲ್ಲಿಗೆ ದೂರಕೆ
ಜೊತೆಯ ಪಯಣ ಸಾಗುವ ದಾರಿ
ದೂರದೂರಿನ ಹೊಂಗನಸ ಸುರಿದು ಒಡಲಿಗೆ
ನವ್ಯಗೀತೆಯ ಬರಹದಲಿ ಬರೆದಿಡುವ ಮಾತ
ಸುಳ್ಳಾಗಿಸಿ ನಡೆದೆ ನೀನೆಲ್ಲಿಗೆ ದೂರಕೆ
ಬರಡು ಮನದಿ ಭಾವನೆಯ ಚಿಗುರಿಸಿ
ಮರದ ಚಿಗುರಿಗೆ ಹಸಿರು ಹೊದಿಸಿ
ಹೂವು ಹಣ್ಣುಗಳ ಕನಸ ಮೂಡಿಸಿ
ಮರುಭೂಮಿಯ ಸೃಷ್ಟಿಸಿ ಹೋದೆ ನೀನೆಲ್ಲಿಗೆ ದೂರಕೆ
ಕಾಯುವಿಕೆಯಲ್ಲಿ ಖುಷಿಯಿದೆ ಎಂದೇಣಿಸಿ
ಬರುವಿಕೆಯ ಹಾದಿಗೆ ಹೂವ ಹಾಸಿ
ಬೆಳದಿಂಗಳ ರಾತ್ರಿಯಲಿ ಕಾಯುವ ಕಾವ್ಯಲತಾಳ ಮರೆತು
ತೊರೆದೋದೆ ಬರದೇ ನೀನೆಲ್ಲಿಗೆ ದೂರಕೆ.
ಡಾ. ಲತಾ ಎ ಆರ್ ಬಾಳೆಹೊನ್ನೂರು



