ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹಿರಿಯ ಕವಿ ಎಸ್ ವಿ‌.ಪರಮೇಶ್ವರ ಭಟ್ಟರು‌ ಕನ್ನಡದಲ್ಲಿ ಮುಕ್ತ ಕ ಸಾಹಿತ್ಯವನ್ನು ಬೆಳೆಸಿದವರು. ಅವರು ಆಧುನಿಕ ವಚನಕಾರರೆಂದೂ,ಅನುವಾದಕರೆಂದೂ ಕೂಡ ಹೆಸರಾದ ವರು. ಅವರ ಅನುವಾದಗಳು ತುಂಬ  ಮೌಲಿಕವಾಗಿವೆ ಸಂಸ್ಕೃತದ ,ಪ್ರಾಕೃತದ ಮಹಾಮಹಾ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.ಅವುಗಳಲ್ಲಿ ಕನ್ನಡ ಕಾಳಿದಾಸ ಮಹಾಸಂಪುಟ,ಭಾಸ ಕವಿ ಮಹಾಸಂಪುಟ ,ಅಮರು ಶತಕ,ಗಾಥಾ ಸಪ್ತಶತಿ,ಭತೃಹರಿ ಕಾವ್ಯ ಸಂಪುಟ, ಗೀತಗೋವಿಂದ ಮೊದಲಾದ ಮಹತ್ವದ ಕೃತಿ ಸಂಪುಟ ಗಳನ್ನು ಅವರು‌ ಕನ್ನಡ ಓದುಗರಿಗೆ‌ ನೀಡಿದ್ದಾರೆ. ಹೊಸಗನ್ನಡದ ಆದ್ಯ ವಚನಕಾರ ರಲ್ಲಿ ಒಬ್ಬರಾದ ಅವರು‌ ಎಂಟು ಆಧುನಿಕ ವಚನ ಸಂಕಲನಗಳನ್ನು‌ ಪ್ರಕಟಿಸಿದ್ದು ಅವುಗಳಲ್ಲಿ ‘ಉಪ್ಪು ಕಡಲು’,  ‘ಇಂದ್ರ ಗೋಪ’ ಮೊದಲಾದವು ಪ್ರಸಿದ್ಧವಿವೆ.  ಹಾಗೆಯೆ ಕನ್ನಡದಲ್ಲಿ ಮುಕ್ತಕಗಳನ್ನು ಬರೆದ ಆದ್ಯರಲ್ಲಿ ಒಬ್ಬರಾದ ಅವರು ಐದು ಮುಕ್ತಕ ಸಂಕಲನ ಪ್ರಕಟಿಸಿದ್ದು’ ಇಂದ್ರಚಾಪ’,’ಚಂದ್ರವೀಧಿ,’ ‘ಸುರಗಿ ಸುರಹೊನ್ನೆ’, ‘ ತುಂಬೆ ಹೂವು’  ..ಮೊದಲಾದವು ಪ್ರಸಿದ್ಧವಾಗಿವೆ.

ಅವರ ಇಂದ್ರಚಾಪ ಸಂಕಲನದ ಕೆಲವು ಮುಕ್ತಕಗಳ ಓದು ಇಲ್ಲಿದೆ.

ಅವರಿಗೆ ಕವಿತೆಯೇ ಇಂದ್ರಚಾಪ ವಾಗಿ ( ಮಳೆ ಮೋಡ) ವಾಗಿ ಕಂಡಿದೆ.ತಮ್ಮ ಒಂದು ಮುಕ್ತಕದಲ್ಲಿ

ಮನವೇ ಬಾನಂಗಣ,ದುಗುಡವೇ ಮಳೆ ಮೋಡ
ಕವಿಗಣ ಸೂಕ್ತಿಯೆ ದಿನಪ
ಮೂಡಿತು ಮಳೆ ಬಿಸಿಲಿನ ಮೇಳದೊಳು ನೋಡಾ
ಕವಿತೆಯ ಇಂದ್ರಚಾಪ

ಕವಿಗೆ ಬಾನಂಗಣವನ್ನು ಸುಂರಗೊಳಿಸುವಂತೆ ಮೂಡಿದ ಕಾಮನಬಿಲ್ಲು ,ಕವಿಯ ಮನದಲ್ಲಿ ಉದಿಸಿದ ಕವಿತೆ ಎರಡೂ ಅಷ್ಟೇ ಸುಂದರವಾಗಿ ಕಂಡಿವೆ.ಇಲ್ಲ ಕವಿತೆ ಮೂಡಲು ಮನವೇ ಬಾನಂಗಣವಾದರೆ ಅವನ ಮನದ ಭಾವಗಳ  ರೂಪುಗೊಂಡು ಕವಿತೆಯಂಬ ಇಂದ್ರಚಾಪ ವಾಗಿವೆ ಎನ್ನುತ್ತಾರೆ‌ ಕವಿ. ಅವರ ಇನ್ನೊಂದು‌ ಮುಕ್ತಕ ಸಾಹಿತ್ಯ ಮತ್ತು ಮಿತ್ರರ ಗುಂಪಿನ ಮಹತ್ವ ಸಾರಿದೆ.ಕವಿಗೆ‌ ಕವಿತೆಯೆ ಸಂಜಿವಿನಿ ಶಕ್ತಿಯಾಗಿದೆ. ಅದನ್ನು ಕವಿ

ಸಾಹಿತ್ಯವೊಂದೆಯೆನ್ನ ಸಂಜೀವಿನಿ
ಅದೆ ನನ್ನ ತಾರಕಶಕ್ತಿ
ಮಿತ್ರಸಲ್ಲಾಪವೆ ಚಿತ್ತಾಹ್ಲಾದಿನಿ
ಅದರಿಂದಲೆಯೆ ನನ್ನ‌ಮುಕ್ತಿ

ತನ್ನೊಳಿರುವ ಸಾಹಿತ್ಯ ಶಕ್ತಿಯೆ ನನ್ನ ಬಲ ಎನ್ನುವ ಕವಿ ಅಷ್ಟೇ ಮಹತಗವದ ಸ್ಥಾನವನ್ನು ಮಿತ್ರರೊಡನೆ ಆಡುವ ಸಲ್ಲಾಪಕ್ಕೂ ನೀಡುತ್ತಾರೆ.ಮಿತ್ರರೊಡನೆ ಆಡುವ ಮಾತು ವ್ಯರ್ಥ ಸಲ್ಲಾಪವಲ್ಲ ಅದು ಕವಿಯ ಮನಸಿಗೆ ಆಹ್ಲಾದ ವನ್ಬು ಕೊಡುವ ಚಿತ್ತಾಹ್ಲಾದಿನಿ,ಮಾತ್ರವಲ್ಲ ಅದರಿಂದಲೇ ಕವಿಗೆ ಮುಕ್ತಿ  ಎನ್ನುತ್ತಾರೆ. ಕವಿತೆ‌ಮಾತ್ರವಲ್ಲ ಕವಿಗೆ ಮಿತ್ರ ಗಣ ಸಲ್ಲಾಪವೂ ಮುಖ್ಯವೆನಿಸಿದೆ.

ಇರುವ ಬಾಳಿನಲಿ ಆನಂದ ಹುಡುಕದಿದ್ದರೆ ಸಂಸಾರ ನಿಸ್ಸಾರವೆನಿಸುತ್ತದೆ.ಕಷ್ಟ ಸುಖ ಗಳ ನಡುವೆಯೆ ಸಂತಸವ ಹುಡುಕಿದರೆ ಸಂಸಾರವೂ ರಸಮಯವೆನಿಸುತ್ತದೆ.ಕವಿ ತನ್ನ ಕವಿತೆಯೊಡನೆ ಸಂಸಾರವನ್ನು ಮೇಳವಿಸುವದು ಹೀಗೆ.

ಸಾಹಿತ್ಯವನು ಕಂಡೆ ಸಂಸಾರದೊಳು ಹೀಗೆ
ಸಾಂಗತ್ಯವಾಗಿಸಿ ಕೊನೆಗೆ
ಇಲ್ಲದೆ ಹೋದರೆ ಉಸಿರಾಡುವುದು ಹೇಗೆ
ಹೊಗೆಗಟ್ಟಿದೀ ಗೂಡಿನೊಳಗೆ

ಇರುವ ಬಾಳಿನಲ್ಲಿಯೆ ಸುಖ ಕಾಣಬೇಕು.ಹೇ ಇದರಲ್ಲೇನಿ ದೆ ? ಎಂದು ಅಲಕ್ಷಿಸುತ್ತಾ ಹೋದರೆ ಅದು ಹೊಗೆಗಟ್ಟಿದ ಗೂಡಾಗುತ್ತದೆ.ಅದನ್ನೆ ಬಹಳ ಹಿಂದೆ  ಮಹಾಕವಿ ಪಂಪ “ಸಾರಂ ಅನಂಗ ಜಂಗಮ‌ಲಲಿತಾಲತಾಂಗಿಯರಿಂದಮಲ್ತೇ ಸಂಸಾರಂ ” ಎಂದು ಸಂಸಾರವನ್ನು ಸಾರವಾಗಿಸುವ ದಾರಿ ಕಂಡಿದ್ದ‌ನು.ಇಲ್ಲ ಕವಿ ಪರಮೇಶ್ವರಭಟ್ಟರೂ ಕೂಡ ಅದೇ ಮಾರ್ಗವನ್ನು ಹೇಳುತ್ತಾರೆ.

ಬಾಳು ಎಂದ ಮೇಲೆ ಕಷದಟಗಳು ಬರುವವೇ.ಆದರೆ ಅವು‌ ಹೇಳಿ‌ಕೇಳಿ ಬರುವದಿಲ್ಲ.ಆಕಸ್ಮಿಕವಾಗಿಯೆ ಬರುತ್ತವೆ. ಕೆಲವೊಮ್ಮೆ ಒಳ್ಳೆಯವರೇ ಇಲ್ಲಿ ತೊಂದರೆಗೀಡಾಗುತ್ತಾರೆ. ಅವರದೇನೂ ತಪ್ಪಿರುವದಿಲ್ಲ.ಆದರೂ ತೊಂದರೆಗಳು ಅವರಿಗೆ ಬರುತ್ತವೆ. ಅದನ್ನು ಸುಂದರವಾದ ರೂಪಕದಿಂದ ಕವಿ ಬಣ್ಣಿಸುತ್ತಾರೆ.

ಬಾಳೆ ಹಣ್ಣನು ತಿಂದವರೆಸೆದರು
 ಸಿಪ್ಪೆಯ  ಬೀದಿಯ ಕೊನೆಗೆ
ಕಾಣದೆ ಕಾಲಿಟ್ಟು ಜಾರುವನ್ಯರು
ಕಷ್ಟವು‌ ಬರುವುದೆ ಹೀಗೆ

ಯಾರೋಬಾಳೆ ಹಣ್ಣನು ತಿಂದು ಸಿಪ್ಪೆಯನ್ನು ಬೀದಿಯಲ್ಲಿ ಎಸೆದು ಬಿಡುತ್ತಾರೆ.ಆದರೆ ಅದನ್ನು ನೋಡದ ಇನ್ನು ಯಾರೊ ಅದರ‌ ಮೇಲೆ‌ ಕಾಲಿಟ್ಟು ಜಾರಿ ಬೀಳುತ್ತಾರೆ. ಅವರದೇನು ತಪ್ಪೇ ಇರದು ಆದರೂ ಕೆಲವು ಸಲ ತೊಂದರೆ ಅವರನ್ನು ಹುಡುಕಿ ಬಂದು ಬಿಡುತ್ತವೆ.ಇದೇ ಬಾಳಿನ ವೈಚಿತ್ರ್ಯ.

ಕವಿ ಎಷ್ಟೇ ಶ್ರೇಷ್ಠವಾದ ಕವಿತೆ ಬರೆಯಲಿ ಅದನ್ನು ಮೆಚ್ಚುವವರು ಎಲ್ಲ‌ಕಾಲಕ್ಕೂ ಸಿಗುವದು ಅಸಾಧ್ಯ.ಎಲ್ಲೊ‌ಕೆಲವು ಭಾಗ್ಯವಂತರಿಗೆ ಮಾತ್ರ ಅವರ ಕವಿತೆಯ ಕುರಿತು ಸರಿಯಾದ ವಿಮರ್ಶೆ,ಮೆಚ್ಚಿಕೆ ಗೌರವ ಗಳು ಸಿಗುತ್ತವೆ .ಆಧುನಿಕ‌ಕಾಲದ ಕವಿಗಳು ತಮ್ಮ ಕವಿತೆಯನ್ನು  ಕುರಿತು ತಾವೇ ಜಾಹಿರಾತು ಕೊಟ್ಟು ಇತರರಿಗೆ ಪರಿಚಯ‌ ಮಾಡಿಕೊಡುತ್ತಾರೆ.ಇಂಥ ಪರಿಚಯ
ಅವರಿಗೆ ಗೌರವವನ್ನು‌ ತಂದುಕೊಡುತ್ತದೆ. ನನಗೆ ಯಾರ ಗೌರವ ಪ್ರಶಸ್ತಿ ಬೇಡ ಎಂದು‌ ಕವಿತೆ ಬರೆಯುತ್ತ ಕೂಡ್ರುವ ಜನ ಆಧುನಿಕ ಕಾಲಕ್ಕಂತೂ ಕಡಿಮೆ. ಎಲ್ಲರೂ ಏನಾದರೂ‌ ಪ್ರಯತ್ನ‌ ಮಾಡುವವರೆ .ಇಂಥವರನ್ನು‌ ಕಂಡು ಕವಿ ಪರಮೇಶ್ವರ ಭಟ್ಟರು

ಪ್ರತಿಭೆಯೊಂದಿರಬೇಕು, ವುತ್ಪನ್ನಮತಿ
ಅಭ್ಯಾಸ, ಗುರುಸೇವೆ ಬೇಕು
ಈ ಹಳೆಯ ಪಟ್ಟಿಗಿನ್ನೊಂದು ಸೇರಬೇಕು
ಕವಿಗೆ ಜಾಹಿರಾತು ಬೇಕು

ಕವಿತೆ ಬರೆಯಲು ಏನೆನು ಬೇಕು ಎಂದು ಪ್ರಶಗನಿನಿಸ ಕಾವ್ಯ‌ಮೀಮಾಂಸಕರು ಪ್ರತಿಭೆ,ವುತ್ಪತ್ತಿ,ಗುರುಸೇವೆ ,ಅಭಾಸ ಹೀಗೆ ಆರು ಗುಣಗಳು ಬೇಕು ಎಂದು ಹೇಳಿದ್ದರು .ಆದರೆ ಆಧುನಿಕ‌ಕಾಲಕ್ಕೆ  ಇಷ್ಟೇ ಸಾಕಾಗೊಲ್ಲ. ಎಷ್ಟೇ ಪ್ರತಿಭಾವಂತ ರಿದ್ದರೂ ಜಾಹಿರಾತು ಇಲ್ಲದೆ ಕವಿ ಯ ಕಾವ್ಯ ‌ಪ್ರಸಿದ್ಧಿಗೆ ಬಾರದು ಎಂಬ ನೈರಾಸ್ಯ ಬಾವವನ್ನು ವ್ಯಕ್ತ ಮಾಡಿದ್ದಾರೆ.ಒಮ್ಮೊಮ್ಮೆ ಜಾಹಿರಾತಿನ ಬಲದಿಂದ ಅಂಥ ಶ್ರೇಷ್ಟ ಕಾವ್ಯವಲ್ಲದ್ದೂ ಕೂಡ ಮಿಂಚತೊಡಗುತ್ತದೆ. ಇಂಥದನ್ನು ಕಂಡು ನಿಜ ಕವಿಗಳು ಮರುಗಬೇಕಾಗುತ್ತದೆಯಷ್ಠೆ.

ಇವು ಕೆಲವು ಅರ್ಥಪೂರ್ಣ ಮುಕ್ತಕಗಳ ಉದಾಹರ ಣೆ ಯಷ್ಟೇ.ಇಂಥ ಹಲವಾರು ಸುಂದರ ಮುಕ್ತಕಗಳ ಕಣಜವೇ ಅವರ ಸಂಕಲನಗಳಲ್ಲಿದೆ.ಓದುವ , ಸವಿಯುವ ಗುಣ ನಮ್ಮದಾಗಬೇಕಷ್ಟೇ.


About The Author

Leave a Reply

You cannot copy content of this page

Scroll to Top