ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮೈಸೂರಿನಸಿಲ್ಕ್‌ ಫ್ಯಾಕ್ಟರಿ

ಹೀಗೆ ವಿವಿಧ ರೀತಿಯ ತಪ್ಪುಗಳ ಪಟ್ಟಿಯನ್ನು ಸರಿ ಮಾಡುತ್ತಾ ಹೋಗುವುದು ತುಂಬಾ ಆಸಕ್ತಿದಾಯಕವಾದ ವಿಷಯವಾಗಿತ್ತು. ನಗದು ಕಟ್ಟುವ ಪಾಲಿಸಿಗಳಿಗೆ ಆಗ ತಾನೇ ಎಲ್ಲಿ ಬೇಕಾದರೂ ಕಟ್ಟಬಹುದು ಎನ್ನುವ ವ್ಯವಸ್ಥೆ ಆರಂಭವಾಗಿತ್ತು. ಆದರೆ ಮೊದ ಮೊದಲು ಸಮಸ್ಯೆಗಳು ಎದುರಾಗಿದ್ದವು. ಬೇರೆ ಕಡೆ ಕಟ್ಟಿದ್ದು ಅಪ್ಡೇಟ್ ಆಗದೆ ಎರಡೆರಡು ಬಾರಿ ಕಟ್ಟಿಸಿಕೊಳ್ಳುವ ಹಾಗೆ ಆಗುತ್ತಿತ್ತು. ಕೆಲವೊಮ್ಮೆ ಕ್ಲೇಮ್ಸ್ ನಿಂದ ಮುರಿದುಕೊಂಡಿದ್ದರೂ ಸಹ ಅದು ಮಾನ್ಯ ಆಗದೆ ಮತ್ತೆ ಮತ್ತೆ ಕಟ್ಟಿಸಿಕೊಳ್ಳುವ ಹಾಗೆ ಆಗುತ್ತಿತ್ತು. ಈ ಎಲ್ಲವೂ ಸೆಂಟ್ರಲ್ ಆಫೀಸಿನಲ್ಲಿ ತಿಂಗಳಿಗೆ ಒಮ್ಮೆ ಸರಿಯಾಗಿ ಈ ರೀತಿ ತಪ್ಪುಗಳು ಪಟ್ಟಿ ಆಗಿ ಬರುತ್ತಿದ್ದವು. ಅವುಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ನಿಜವಾಗಿ ಎರಡು ಬಾರಿ ಕಟ್ಟಿದ್ದಾರೆ ಎಂದರೆ ಆ ವ್ಯಕ್ತಿಗಳಿಗೆ ಅದನ್ನು ವಾಪಸ್ಸು ಮಾಡುವ ಕೆಲಸ ಈ ಕ್ಯಾಶ್ ಎರರ್ ಸರಿ ಮಾಡುವ ಕೆಲಸ. ಅದು ಸಹ ಮೊದಮೊದಲು ತಿಂಗಳಿಗೆ 30 40 ಆ ರೀತಿ ಬರುತ್ತಿತ್ತು. ಈಗ ಎಲ್ಲಾ ಕಡೆಯೂ ಸರಿಯಾಗಿ ಆಗಿದೆ. ಗೂಗಲ್ ಪೇ ಮುಂತಾದವುಗಳಿಂದ ಕಟ್ಟಿದ್ದು ಸಹ ತಕ್ಷಣವೇ ಸರಿಯಾಗಿ ತೋರಿಸುತ್ತದೆ. ಅಂದರೆ ತಂತ್ರಜ್ಞಾನ ಎಷ್ಟು ಚೆನ್ನಾಗಿ ಈಗ ಕೆಲಸ ನಿರ್ವಹಿಸುತ್ತಿದೆ ಎಂಬುದನ್ನು ಕಾಣಬಹುದು.

ಮೊದಲೇ ಹೇಳಿದಂತೆ ಸಾಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲಿ ಪಾಲಿಸಿದಾರರಿಂದ ಪಡೆದ ಬಾಂಡುಗಳು ಅವರ ಅರ್ಜಿಗಳು ಸಂಗ್ರಹ ಮಾಡಿ ಇಡುತ್ತೇವೆ. ಲೋನ್ ಡಾಕೆಟ್ ಎಂದು ಇದಕ್ಕೆ ಹೆಸರು. ಸಾಲ ತೆಗೆದುಕೊಂಡಾಗಿನಿಂದ ಹಿಡಿದು ಸಾಲ ವಾಪಸ್ ಆಗುವವರೆಗೆ ಇವುಗಳನ್ನು ಜೋಪಾನ ಮಾಡಬೇಕಾಗುತ್ತದೆ.  ಅವರು ನಗದು ತಂದು ಕಟ್ಟಿ ಸಾಲ ತೀರಿಸಿದರೂ ಸಹ ಬಾಂಡುಗಳನ್ನು ಮತ್ತೆ ವಾಪಸ್ ಮಾಡಬೇಕಾಗುತ್ತದೆ. ಹಾಗಾಗಿ ಪಾಲಿಸಿಗಳು ಬೇರೆ ಊರಿನಿಂದ ವರ್ಗವಾಗಿ ಬಂದರು ಅಲ್ಲಿಂದ ಲೋನ್ ಡಾಕೆಟ್ ಗಳನ್ನು ತರಿಸಬೇಕಾಗುತ್ತದೆ. ನಮ್ಮಿಂದ ಹೋಗುವ ಪಾಲಿಸಿಗಳ ಫೈಲ್ ಜೊತೆಯಲ್ಲೂ ಸಾಲದ ಡಾಕೆಟ್ಗಳನ್ನು ಕಳಿಸಬೇಕಾಗುತ್ತದೆ. ಹಾಗಾಗಿ ಇವುಗಳು ಬೇಕಾದ ಸಮಯಕ್ಕೆ ಸರಿಯಾಗಿ ಸಿಗಬೇಕಾದದ್ದು ಅತ್ಯವಶ್ಯ. ಆದರೆ ಕೆಲವೊಮ್ಮೆ ಅವುಗಳು ನಮಗೆ ಬೇಕಾದಾಗ ದೊರೆಯದೆ ಹೋಗುತ್ತಿದ್ದುದು ಒಂದು ಸಮಸ್ಯೆಯಾಗಿತ್ತು. ಸಕಲೇಶಪುರದಲ್ಲಿ ಈ ರೀತಿ ಸಾಲದ ವಿಭಾಗ ಕಂಪ್ಯೂಟರೀಕರಣ ಆದಾಗ ಸಾಲದ ಶೆಡ್ಯೂಲ್ ಇಟ್ಟುಕೊಂಡು ಅದೆಲ್ಲವನ್ನು ಕಂಪ್ಯೂಟರ್ ಮಾಹಿತಿಗೆ ತುಂಬಿದ ವಿಷಯ ಹೇಳಿದ್ದೆ .ಆ ರೀತಿ ಕೆಲವು ಶಾಖೆಗಳಲ್ಲಿ ಸರಿಯಾಗಿ ಮಾಡದೆ ಹೋದಾಗ ನಮಗೆ ಆ ಪಾಲಿಸಿಗಳು ವರ್ಗವಾಗಿ ಬಂದಾಗ ತೊಂದರೆ ಉಂಟಾಗುತ್ತಿತ್ತು. ಇವುಗಳನ್ನೆಲ್ಲ ನಿವಾರಿಸಲು ಸರಿಯಾದ ಮಾರ್ಗವೆಂದರೆ ಇತ್ತೀಚಿನ ಸಾಲದ ಶೆಡ್ಯೂಲ್ ಇಟ್ಟುಕೊಂಡು ಅದಕ್ಕೆ ತಕ್ಕಂತೆ ಲೋನ್ ಡಾಕೆಟ್ ಗಳು ಇದೆಯಾ ಎಂದು ಪರಿಶೀಲಿಸುವುದು.  ಈ ಕೆಲಸಕ್ಕೆ “ಲೋನ್ ಡಾಕೆಟ್ ಪ್ಯೂರಿಫಿಕೇಶನ್” ಎಂದು ಹೇಳುತ್ತಿದ್ದರು .ನಾನು ಸಾಲದ ವಿಭಾಗದಲ್ಲಿ ಇದ್ದಾಗ ಮಾಮೂಲಿಯ ಕೆಲಸದ ಜೊತೆ ದಿನ ಸ್ವಲ್ಪ ಸ್ವಲ್ಪ ಮಾಡಿ ಈ ರೀತಿ ಸಾಲದ ಪ್ಯೂರಿಫಿಕೇಶನ್ ಕೆಲಸ ಮಾಡಿದ್ದು ಸಹ ಒಂದು ರೀತಿಯ ಹೆಮ್ಮೆಯ ವಿಷಯವೇ. ನಮ್ಮಲ್ಲಿ ಷೆಡ್ಯೂಲಿನಲ್ಲಿ ಇಲ್ಲದೆ ಇರುವ ಡಾಕೆಟ್ಗಳನ್ನು ಬೇರೆ ಶಾಖೆಗಳಿಗೆ ಕಳಿಸುವುದು ಈಗಾಗಲೇ ಪರಿಪಕ್ವ ಅಥವಾ ಸಾವಿನ ದಾವಾ ಗಳು ಇದ್ಯರ್ಥ ಆಗಿದ್ದ ಪಾಲಿಸಗಳ ಸಾಲದ ಡಾಕೆಟ್ಳನ್ನು ನಾಶ ಮಾಡುವುದು ಇವೆಲ್ಲವುಗಳಿಂದ ಜಾಗ ಸಹ ಹೆಚ್ಚು ದೊರೆಯುವಂತೆ ಆಯಿತು. ಹೆಚ್ಚು ಹುಡುಕಾಟ ಮಾಡುವ ಕೆಲಸವು ತಪ್ಪಿತು.

ಇಷ್ಟೆಲ್ಲ ಆಗುವ ವೇಳೆಗೆ ಮತ್ತೆ ಶಾಖಾಧಿಕಾರಿಗಳ ಬದಲಾವಣೆ. ಈ ಬಾರಿ ಮಹಿಳಾ ಶಾಖಾಧಿಕಾರಿಗಳು. ಅನುರಾಧ ಎನ್ನುವವರು ಶಾಖಾಧಿಕಾರಿಗಳಾಗಿ ಬಂದರು. ನಮಗೆಲ್ಲ ಅದು ಸಂತಸದ ಹಾಗೂ ಹೆಮ್ಮೆಯ ವಿಷಯವೇ ಆಗಿತ್ತು. ಅದಕ್ಕಿಂತ ಹೆಚ್ಚಾಗಿ ಅವರು ದಿನಾಲು ಉಟ್ಟುಕೊಂಡು ಬರುತ್ತಿದ್ದ ಮೈಸೂರು ಸಿಲ್ಕ್ ಸೀರೆ ನಮ್ಮೆಲ್ಲರ ಗಮನ ಸೆಳೆದಿತ್ತು. ಒಂದು ರೀತಿ ನಮಗೆಲ್ಲ ಸ್ಪೂರ್ತಿಯೇ ಆದ ಅವರಿಂದ ನಾವು ಸಹ ಹೆಚ್ಚು ಮೈಸೂರ್ ಸಿಲ್ಕ್ ಸೀರೆಗಳನ್ನು ಕೊಳ್ಳಲು ಆರಂಭಿಸಿದ್ದೆವು. ಅದಕ್ಕೆ ಮತ್ತೊಂದು ಕಾರಣ ಎಂದರೆ ಮೈಸೂರು ಸಿಲ್ಕ್ ಫ್ಯಾಕ್ಟರಿ ಅವರು ತಾವೇ ಶಾಖೆಗೆ ಬಂದು ಕಂತಿನ ರೂಪದಲ್ಲಿ ಸೀರೆಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದು. ಒಂದು ಕಂತು ನಗದು ಕೊಟ್ಟರೆ ಮಿಕ್ಕ ಕಂತುಗಳನ್ನು  9 ಚೆಕ್ ಗಳಾಗಿ ಮುಂಚೆಯೇ ಕೊಟ್ಟರೆ ಆಯಿತು .ಪ್ರತಿ ತಿಂಗಳು ಬ್ಯಾಂಕ್ನಿಂದ ಅದು ಡೆಬಿಟ್ ಆಗಿ ಹೋಗುತ್ತಿತ್ತು .ಒಂದು ರೀತಿ ಒಳ್ಳೆಯ ಅನುಕೂಲವೇ ಆಗಿ ಎಲ್ಲರೂ ಆಗ ಮೈಸೂರು ಸಿಲ್ಕ್ ಖರೀದಿ ಕಡೆ ಮುಖ ತಿರುಗಿಸುವ ಹಾಗೆ ಮಾಡಿತ್ತು.

ಶಾಖೆಯಲ್ಲಿ ವಿಮಾ ಉತ್ಸವ

ಶಾಖೆ ೫ಕ್ಕೆ ಬಂದಮೇಲೆ ಪ್ರತಿ ಸೆಪ್ಟೆಂಬರ್ ಒಂದರಂದು ನಡೆಸುವ ಜೀವ ವಿಮಾ ನಿಗಮದ ವಾರ್ಷಿಕೋತ್ಸವ ಸಮಾರಂಭಗಳಿಗೆ ಒಂದು ಹೊಸ ಕಳೆ ಬಂದಿತ್ತು. ಇಲ್ಲಿ ಬಹಳ ವಿಜೃಂಭಣೆಯಿಂದ ಅದನ್ನು ಆಚರಿಸುವ ಪದ್ಧತಿ ಅಥವಾ ಎಲ್ಲಾ ಶಾಖೆಗಳಲ್ಲೂ ಆಗ ಆ ರೀತಿ ಆಚರಿಸುವ ಅಭ್ಯಾಸ ಆರಂಭವಾಗಿತ್ತು ಅನ್ನಿಸುತ್ತೆ.  ಬೇರೆ ಬೇರೆ ಶಾಲೆಯ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳು, ಸಿಬ್ಬಂದಿ ವರ್ಗದವರಿಗೆ ಸ್ಪರ್ಧೆಗಳು ಹಾಗೂ ಪ್ರತಿನಿಧಿಗಳನ್ನು ಒಳಗೊಂಡು ತುಂಬಾ ಸಂಭ್ರಮದಿಂದ ಸೆಪ್ಟೆಂಬರ್ ಒಂದರಿಂದ ಏಳರವರೆಗಿನ ವಿಮಾ ಸಪ್ತಾಹವನ್ನು ಸಡಗರದಿಂದ ಆಚರಿಸಲಾಗುತ್ತಿತ್ತು. ಅದಕ್ಕೆ ಎಂಟು ಹತ್ತು ದಿನ ಮುಂಚೆ ಬೇರೆ ಬೇರೆ ವಿಭಾಗಗಳಿಗೆ ಕಮಿಟಿಗಳನ್ನು ರಚಿಸಿ ಅವರಿಗೆ ಕೆಲಸಗಳನ್ನು ವಹಿಸಿಕೊಡಲಾಗುತ್ತಿತ್ತು . ಸೆಪ್ಟೆಂಬರ್ ಒಂದರ ಬೆಳಿಗ್ಗೆ ದೀಪ ಹಚ್ಚಲು ರಂಗೋಲಿ ಅಲಂಕಾರದಿಂದ ಹಿಡಿದು ಹೆಂಗಳೆಯರು ಒಂದೊಂದು ದಿನ ಒಂದೊಂದು ಬಣ್ಣದ ಥೀಮ್ ನಲ್ಲಿ ಅಲಂಕರಿಸಿಕೊಂಡು ಬಂದು ಇಡೀ ಶಾಖೆಯೇ ಬಣ್ಣ ಬಣ್ಣವಾಗಿ ತೋರುತ್ತಿತ್ತು. ಸಿಬ್ಬಂದಿಗಳಿಗೆ ಸ್ಪರ್ಧೆಗಳನ್ನು ತಮಾಷೆಯಾಗಿ ಇರುವ ಹಾಗೆ ಇಡುತ್ತಿದ್ದಿದರಿಂದ ಆ ಸ್ಪರ್ಧೆಗಳು ನಡೆಯುವಷ್ಟು ಹೊತ್ತು ಎಲ್ಲರಿಗೂ ಮನರಂಜನೆ. ಗೆಲುವು ಸೋಲು ಮುಖ್ಯವಲ್ಲ, ಎಲ್ಲರೂ ಭಾಗವಹಿಸಿ ಆ ಕ್ಷಣಗಳನ್ನು ಸ್ಮರಣೀಯ ಮಾಡಿಕೊಳ್ಳುತ್ತಿದ್ದು ವಿಶೇಷ.

ಹಾಗೆಯೇ ಹಿಂದಿ ದಿನದ ಆಚರಣೆಯು ಸಹ. ಇಲ್ಲಿ ಸಿಬ್ಬಂದಿಗಳಿಗೆ ಪ್ರತ್ಯೇಕ ಸ್ಪರ್ಧೆ ಇರುತಿರಲಿಲ್ಲ ಬೇರೆ ಶಾಖೆಗಳಲ್ಲಿ ಇದ್ದಂತೆ. ಆದರೆ ಒಬ್ಬ ಮುಖ್ಯ ಅತಿಥಿಯನ್ನು ಕರೆದು ಅವರಿಂದ ಹಿಂದಿ ಬಗ್ಗೆ ಮಾತನಾಡಿಸಿ ಅವರಿಗೊಂದು ಉಡುಗೊರೆ ಕೊಟ್ಟು ಕಳಿಸುವುದು ಹಾಗೂ ಇಡೀ ಶಾಖೆಯ ಸಿಬ್ಬಂದಿಗೆ ಸಂಜೆ ಒಂದು ಹೈಟೀ. ಸಾಮಾನ್ಯ ಸೆಪ್ಟೆಂಬರ್ 2ನೆಯ ವಾರದಲ್ಲಿ ಈ ಹಿಂದಿ ದಿನಾಚರಣೆಯನ್ನು ನಡೆಸುತ್ತಿದ್ದು. ನಾನು  ಹಿಂದಿ ಕಮಿಟಿಯ ಸದಸ್ಯಳೂ ಆಗಿದ್ದರಿಂದ ಈ ದಿನಾಚರಣೆಯ ಕೆಲಸಗಳಲ್ಲಿ  ತುಂಬಾ ಖುಷಿಯಿಂದ ಪಾಲ್ಗೊಳ್ಳುತ್ತಿದ್ದೆ. ಸಾಮಾನ್ಯವಾಗಿ ಹಿಂದಿ ದಿನದ ಆಚರಣೆಯ ನಿರೂಪಣೆಯನ್ನು ನಾನೇ ನಿರ್ವಹಿಸುತ್ತಿದ್ದೆ.
ಒಮ್ಮೆ ಅನುರಾಧ ಅವರ ನೇತೃತ್ವದಲ್ಲಿ ವಿಮಾ ಸಪ್ತಾಹದಲ್ಲಿ ಗಾಡಿ ತೆಗೆದುಕೊಂಡು ಜಾಥಾ ಹೋಗಿದ್ದ ನೆನಪು ಸಹ ಇದೆ.

ವಿಮಾ ಸಪ್ತಾಹದ ಒಂದು ನೋಟ

ಅಲ್ಲದೆ ವಿಭಾಗೀಯ ಮಟ್ಟದಲ್ಲಿ ಸಿಬ್ಬಂದಿ ವರ್ಗದವರಿಗಾಗಿ ಹಿಂದಿ‌ ಪ್ರಬಂಧ ಮತ್ತು ಪತ್ರಲೇಖನ ಸ್ಪರ್ಧೆಗಳು ನಡೆಸಲು ಆರಂಭಿಸಿದರು. ಮುಂಚೆಯೇ ನೋಂದಾಯಿಸಿಕೊಳ್ಳ ಬೇಕಿತ್ತು. ಸ್ಪರ್ಧೆಗೆ ಐದು ನಿಮಿಷ ಮುಂಚೆ ಇ-ಮೇಲ್ ಮುಖಾಂತರ ವಿಷಯಗಳು ಬರುತ್ತಿತ್ತು ಒಂದು ದಿನ ಪ್ರಬಂಧ ಸ್ಪರ್ಧೆ ಮತ್ತೊಂದು ದಿನ ಕಚೇರಿ ಕೆಲಸಕ್ಕೆ ಸಂಬಂಧ ಪಟ್ಟಂತೆ ನೋಟ್ ಮತ್ತು ಪತ್ರಲೇಖನಗಳು ಹಾಗೂ ವಿಮಾ ಪಾರಿಭಾಷಿಕ ಶಬ್ದಗಳ ಬಗ್ಗೆ ಕ್ವಿಜ್ ಇಷ್ಟು ಇರುತ್ತಿತ್ತು . ಸಾಮಾನ್ಯ ಪ್ರತಿ ವರ್ಷ ನಾನು ಈ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಮೊದಮೊದಲು ಎರಡರಲ್ಲೂ ಬಹುಮಾನ ಸಿಗುತ್ತಿತ್ತು. ನಂತರ ಯಾವುದಾದರೂ ಒಂದರಲ್ಲಿ ಮಾತ್ರ ಬಹುಮಾನ ಎಂದು ನಿಗದಿಪಡಿಸಿದರು. ಅಂತೂ ಭಾಗವಹಿಸಿದಾಗೆಲ್ಲ ಒಂದೊಂದು ಬಹುಮಾನ ಗೆದ್ದ ಖುಷಿ ನನ್ನದು. ಇದಕ್ಕೆ ನಗದು ಬಹುಮಾನ ಅದು ಸಹ ಒಳ್ಳೆಯ ಮೊತ್ತವೇ. ಮೊದಲ ಬಹುಮಾನ ೧೫00 ಎರಡನೆಯ ಬಹುಮಾನ ೧೨೦೦ ಹಾಗೂ ತೃತೀಯ ಬಹುಮಾನ  ರೂ.‌೧೦೦೦. ಬರುತ್ತಿದ್ದ ಹಣದಲ್ಲಿ ಶಾಖೆಗೆ ಸಿಹಿ ಕೊಡಿಸಲು ಅರ್ಧ ಮೊತ್ತ ಖರ್ಚಾಗುತ್ತಿದ್ದು ಅದು ಬೇರೆ ವಿಚಾರ.

ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಎರಡನೆಯ ಬಾರಿ ವಾಹನ ಸಾಲ ತೆಗೆದುಕೊಂಡು ನನ್ನ ಪತಿಗೆ ಹೀರೋ ಹೋಂಡಾ ಗಾಡಿ ಕೊಡಿಸಿದ್ದು. ಸಾಲವಿಲ್ಲದೆ ನನ್ನ ಮೊಟ್ಟ ಮೊದಲ ಹೊಸ ದ್ವಿಚಕ್ರ ವಾಹನ ಸ್ಟ್ರೀಕ್ ಕೊಂಡಿದ್ದು ಸಹ ಅದಾಗಿ ಒಂದೆರಡು ತಿಂಗಳಿಗೇ…

ಈ ವೇಳೆಗೆ ನನ್ನ ತಂಗಿ ಛಾಯಾಳಿಗೆ ಆಡಳಿತ ಅಧಿಕಾರಿ ಪದೋನ್ನತಿ ಸಿಕ್ಕಿ ದೂರದ ಧಾರವಾಡ ವಿಭಾಗದ ಹಾವೇರಿ ಶಾಖೆಗೆ ಹಾಕಿದ್ದರು. ಈಗಾಗಲೇ ಒಮ್ಮೆ ನಿರಾಕರಿಸಿದರಿಂದ ಈ ಪದೋನ್ನತಿ ಮತ್ತೆ ನಿರಾಕರಿಸುವ ಹಾಗೆ ಇರಲಿಲ್ಲ .ಹಾಗಾಗಿ ಅವಳು ಅದನ್ನು ಒಪ್ಪಿಕೊಂಡು ಹೋದಳು ಮತ್ತೆ ಕೆಲವೇ ದಿನಗಳಲ್ಲಿ ಅವಳ ಪತಿ ಪ್ರಸನ್ನ ಅವರಿಗೂ ಅದೇ ಶಾಖೆಗೆ ವರ್ಗ ದೊರೆಯಿತು.

ನಾವು ಒಮ್ಮೆ ಹಾವೇರಿಗೆ ಹೋಗಿ ಅಲ್ಲಿ ಸುತ್ತಮುತ್ತಲ ಜಾಗಗಳನ್ನೆಲ್ಲ ನೋಡಿಕೊಂಡು ಒಂದೆರಡು ದಿನ ಇದ್ದು ಬಂದೆವು. ಅವಳಿದ್ದ ಹಾವೇರಿ ಶಾಖೆ ತುಂಬಾ ದೊಡ್ಡದು ಅಲ್ಲಿ ಸಾಲ ತೆಗೆದುಕೊಳ್ಳಲು ಬಂದವರಿಗೆ ಟೋಕನ್ ಕೊಟ್ಟು ಪ್ರತಿದಿನವೂ ನಗದು ಸಾಲ ವಿತರಿಸಲಾಗುತ್ತಿತ್ತು ಈ ರೀತಿ ವಿಶೇಷವಾಗಿ ಟೋಕನ್ ಮೂಲಕ ಸಾಲ ಕೊಡುವ ಶಾಖೆಗಳಲ್ಲಿ ಕರ್ನಾಟಕದಲ್ಲಿ ಅದೊಂದೇ ಅಂತೆ ಆಗ ಇದ್ದದ್ದು. ಈಗಂತೂ ನಗದು ಸಾಲ ಕೊಡುವ ಪದ್ಧತಿಯೇ ಇಲ್ಲ ಎಲ್ಲವೂ ನೆಫ್ಟ್ ಮೂಲಕ ಬ್ಯಾಂಕಿಗೆ ಹಾಕುವ ವ್ಯವಸ್ಥೆ.

ಮತ್ತೊಂದು ಖುಷಿ ಇರುವ ಬೆಳವಣಿಗೆ ಎಂದರೆ ನಾವು ಮನೆಗೆ ಹೋಗುವ ದಾರಿಯಲ್ಲೇ ಕಚೇರಿಯ ಪಕ್ಕದ್ದಲ್ಲ ಪಕ್ಕದ ರಸ್ತೆಯಲ್ಲಿ ಜನನಿ ಟೆಕ್ಸ್ಟೈಲ್ ಎಂದು ಮನೆಯಲ್ಲಿಯೇ ಒಂದು ಅಂಗಡಿ ಆರಂಭವಾಗಿದ್ದು ನಮಗೆಲ್ಲ ಆಹ್ವಾನಪತ್ರಿಕೆ ಕೊಟ್ಟು ಹೋದರು. ಮುಖ್ಯ ಆಕರ್ಷಣೆ ಎಂದರೆ ಕಂತಿನಲ್ಲಿ ಬಟ್ಟೆ ತೆಗೆದುಕೊಳ್ಳುವ ಅವಕಾಶ. ಹೊಸ ಸ್ಟಾಕ್ ಬಂದಾಗ ಯಾರಿಗಾದರೂ ಒಬ್ಬರಿಗೆ ಫೋನ್ ಮಾಡಿ ಹೇಳುವರು. ಸಂಜೆ ಮನೆಗೆ ಹೋಗುತ್ತಾ ನೋಡಿಕೊಂಡು ತೆಗೆದುಕೊಂಡು ಹೋಗುವುದು. ಅದರ ಕಂತು ಕಟ್ಟಲು ಹೋದಾಗ ಮತ್ತೆ ತೆಗೆದುಕೊಳ್ಳುವುದು. ಅಂತೂ ಅವರು ಆ ಮನೆ ಬಿಟ್ಟು ಬೇರೆ ಕಡೆ ಹೋಗುವ ತನಕ ನಮ್ಮ ಅಕೌಂಟ್ ಅವರಲ್ಲಿ ಇದ್ದೇ ಇತ್ತು ಅಂದರೆ ನಮ್ಮ ಬಟ್ಟೆಯ ವ್ಯಾಮೋಹ ಅರ್ಥವಾಗಬಹುದು. ಸೀರೆ ಚೂಡಿದಾರ್ ಎಲ್ಲವೂ ಅವರ ಬಳಿಯೇ ತೆಗೆದುಕೊಳ್ಳುತ್ತಿದ್ದುದು. ೧೦೦೦೦ದ ರೇಷ್ಮೆ ಸೀರೆಯಿಂದ ಹಿಡಿದು  300 ರೂಗಳ ಸಾಮಾನ್ಯ ಸೀರೆಯವರೆಗೂ ಅಲ್ಲಿ ದೊರೆಯುತ್ತಿತ್ತು ಮತ್ತು ನಾವೆಲ್ಲ ಅಲ್ಲಿಗೆ ಖಾಯಂ ಗ್ರಾಹಕರು. ಹಳೆಯ ಶಾಖೆಯ ಪಕ್ಕ ಇದ್ದ ಕನಕಗಿರಿ ಟೆಕ್ಸ್ ಟೈಲ್ಸ್ ನಲ್ಲಿ ಆ ಶಾಖೆಯಲ್ಲಿದ್ದಾಗ ತುಂಬಾ ಕೊಳ್ಳುತ್ತಿದ್ದೆವು. ಈ ಕಟ್ಟಡಕ್ಕೆ ಬಂದಮೇಲೆ ಅಲ್ಲಿ ಹೋಗಿ ಕೊಳ್ಳುವುದು ಕಡಿಮೆಯಾಯಿತು. ಆದರೆ ಈ ಹೊಸ ಅಂಗಡಿ ಆ ಕೊರತೆ ನಿವಾರಿಸಿತ್ತು. (ಮುಂದುವರೆಯುವುದು)


About The Author

1 thought on “”

  1. ಚಂದದ ಚಿತ್ರಗಳೊಂದಿಗೆ ಪ್ರಕಟಿಸಿದ ಸಂಪಾದಕರಿಗೆ ಅನಂತ ಧನ್ಯವಾದಗಳು.

    ಸುಜಾತಾ ರವೀಶ್

Leave a Reply

You cannot copy content of this page

Scroll to Top