ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹಸಿರಿನ ಹೊದಿಕೆ ಹೊದ್ದ ಪವಿತ್ರ ಮಂದಿರ,
ಜ್ಞಾನದ ಜ್ಯೋತಿ ಬೆಳಗುವ ಸರಕಾರಿ ಶಾಲೆ;
ಸುಣ್ಣದ ಬಿಳಿಯ ಗೋಡೆಗಳ ನಗು,
ನೋಡುವ ಮನದಲಿ ಅರಳಿಸುವ ಹೂವಿನ ಮಾಲೆ//

ಶಾಲೆಯ ಆವರಣ ಹಚ್ಚಹಸಿರಾಗಿ,
ಗಿಡಮರಗಳು ಕೈಬೀಸಿ ಸ್ವಾಗತಿಸುತಿವೆ;
ತಂಗಾಳಿಯ ತಂಪಿನಲಿ ಹಕ್ಕಿಗಳ ಗಾಯನ,
ಕಲಿಕೆಯ ದಾರಿಯಲಿ ಕನಸು ಬಿತ್ತುತ್ತಿವೆ//

ಎಡಬಲ ಹಸಿರಿನ ಸಾಲುಗಳ ನಡುವೆ,
ಪ್ರಕೃತಿಯೇ ಪಾಠ ಹೇಳುವ ಗುರುವಾಗುತಿದೆ;
ಸ್ವಚ್ಛತೆ, ಶಿಸ್ತು, ಸಮಯದ ಮೌಲ್ಯ,
ಪ್ರತಿ ಹೆಜ್ಜೆಯಲಿ ಬದುಕಿನ ಬೆಳಕಾಗುತಿದೆ//

ಮಕ್ಕಳ ದಾಹ ತಣಿಸುವ ಶುದ್ಧ ನೀರಿನ ತೊರೆ,
ಆರೋಗ್ಯದ ಅರಿವು ಬೆಳೆಸುವ ಅಕ್ಕರೆಯ ಸ್ಪರ್ಶ;
ಹಸಿ–ಒಣ ಕಸದ ವಿಂಗಡಣೆಯ ಪಾಠ,
ಪರಿಸರ ಪ್ರೀತಿಯ ಬದುಕಿನ ಆದರ್ಶ//

ಸಾವಿತ್ರಿಬಾಯಿ ಫುಲೆ ವೇದಿಕೆಯ ಸೊಬಗು,
ಜ್ಞಾನದ ದೀಪವನು ಹೊತ್ತ ಮಹಿಮೆಯ ಸಂಕೇತ;
ಅದನು ನೋಡುವ ಎರಡು ಕಣ್ಣು ಸಾಲದೆ,
ಮನದಲಿ ಮೂಡುತ್ತದೆ ಭವಿಷ್ಯದ ಸುಂದರ ಚಿತ್ರ//

ಶಿಕ್ಷಕಿಯ ಉದಾತ್ತ ಚಿಂತನೆ, ದೂರದೃಷ್ಟಿ,
ಮಕ್ಕಳ ಏಳಿಗೆಗೆ ಅಕ್ಷಯ ತಪಸ್ಸಾಗಿದೆ;
ತಾಯಿಯ ಮಮತೆಯಲಿ ಜ್ಞಾನವನುಣಿಸುವ,
ಸೇವೆಯ ಬದುಕು ಸಾರ್ಥಕತೆಯಾಗಿದೆ//

 ಇದು ಶಾಲೆಯಲ್ಲ ಹಸಿರು ದೇವಾಲಯ,
ಇದು  ಕೋಣೆಗಳು  ಕನಸುಗಳ ನೆಲೆ;
ಇಲ್ಲಿಂದ ಹೊರಡುವ ಪ್ರತಿಯೊಂದು ಮಗು,
ನಾಡಿನ ಭವಿಷ್ಯವ ಬೆಳಗಿಸುವ ದಿವ್ಯ ಕಿರಣ//

ಹಸಿರು ಉಳಿಯಲಿ, ಶಿಕ್ಷಣ ಅರಳಲಿ,
ಸಾವಿತ್ರಿಯ ಕನಸು ಸದಾ ಚಿಗುರಲಿ;
ಇಂತಹ ಹಸಿರು ಮಂದಿರಗಳು ಎಲ್ಲೆಡೆ ಬೆಳೆಯಲಿ,
ಜ್ಞಾನ ಭಾರತವು ಹಸಿರಾಗಿ ನಗುತಿರಲಿ


About The Author

Leave a Reply

You cannot copy content of this page

Scroll to Top