ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ ಅವರ
ಕವಿತೆ


ಕಾಗದದ ಮೇಲೆ
ಬರೆಯಬೇಕೆಂದ ಸಾಲುಗಳು
ಇದ್ದಲ್ಲೇ ಕರಗಿ
ಹೋದವು ಸುಮ್ಮನೇ
ಗೆರೆಗಳ ಹಾಕಿ
ಚಿತ್ರವಾಗಬೇಕಾದ ಚಿತ್ರಗಳೂ
ರಸ್ತೆಗಳಾದವು
ಮರದ ನೆರಳಾಗಿ
ಉಳಿಯಬೇಕಾದ ಹೂವುಗಳು
ಹಣ್ಣಿಗಾಗಿ ಇಳೆ ಸೇರಿತು
ಕಾಲದ ಸಹಜ
ಓಟದ ಹರಿವಿಗೆ
ಬಯಲು ನದಿಯಾಯಿತು
ಕಡಲು ಬದುಕಾಗಿ
ಜೀವದ ಓಟ ಸಾಗಿತು
ಮರದ ಮೇಲೊಂದು ಹಕ್ಕಿ
ಕುಳಿತು ಗೂಡು ಕಟ್ಟುವುದು
ಹೇಗೆ ಎಂದು ನೋಡುತ್ತಿತ್ತು
ಹಾರಿ ಸಾಗಿ ಬದುಕಿನ
ಉಸಿರಿಗೆ ಉಸಿರಾಗಿ
ಕಣ್ಣೊಳಗೆ ಜಗವ
ತುಂಬುತ್ತಿತ್ತು ಸುಮ್ಮನೇ
ಗದ್ದೆಯ ಹಸಿರಿಗೆ
ಚಿಗುರು ಮೂಡಿತ್ತು
ಮತ್ತೆ ಮೋಡದಿ
ಮಳೆ ಹನಿಯ ಚಿತ್ರ
ತಾನಾಗಿ ಮೂಡಿ
ಜಗದಗಲದ ನೆಲಕೆ
ತಂಪು ಹರಡಿತ್ತು
ಕಾಗದದ ಮೇಲೆ
ಮೂಡಿದ ಬಣ್ಣಗಳೆಲ್ಲಾ
ಗಾಳಿಯಲ್ಲಿ ತೇಲಿ
ನೆಲಕೆ ಇಳಿದಿತ್ತು
ಮತ್ತೆ ಚಿತ್ರವಾಗುತ್ತ
ನೆಲದೊಳಗೆ ಸೇರಿತ್ತು…….
ನಾಗರಾಜ ಬಿ.ನಾಯ್ಕ




ಬದುಕು ಪ್ರಕೃತಿ ಒಂದಕ್ಕೊಂದು ಬೆಸೆದು ಕವನ ಸೌಂದರ್ಯ ಹೆಚ್ಚಿಸಿಕೊಂಡಿದೆ.