ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಸುಖಸ್ಯಾ ನಂತರಂ ದುಃಖಂ ದುಃಖಸ್ಯಾ ನಂತರಂ ಸುಖಂ” ಶೋಭಾ ನಾಗಭೂಷಣ

ವಿಶೇಷ ಸಂಗಾತಿ ಶೋಭಾ ನಾಗಭೂಷಣ “ಸುಖಸ್ಯಾ ನಂತರಂ ದುಃಖಂ ದುಃಖಸ್ಯಾ ನಂತರಂ ಸುಖಂ”    ಜೀವನ ಎನ್ನುವುದು ಒಂದೇ ರೀತಿಯಾಗಿ ಇರುವುದಿಲ್ಲ ಸುಖದ ಹಿಂದೆ ದುಃಖ; ದುಃಖದ ಹಿಂದೆ ಸುಖ ಎನ್ನುವುದು ಸರ್ವೇ ಸಾಮಾನ್ಯ. ವ್ಯಕ್ತಿ ಈ ಘಳಿಗೆಯಲ್ಲಿ ಸುಖ, ಶಾಂತಿ, ನೆಮ್ಮದಿಗಳಿಂದ ಇದ್ದಾನೆ ಎಂದರೆ ಆ ಸುಖವು ಶಾಶ್ವತವಾಗಿ ಇರಬೇಕೆಂದಿಲ್ಲ. ಆ ವ್ಯಕ್ತಿಯು ಯಾವುದಾದರೂ ಒಂದು ಕಾರಣಕ್ಕೆ ತನ್ನ ಜೀವನದಲ್ಲಿ ಅತೀವ ದುಃಖಕ್ಕೆ ಒಳಗಾಗಿರುತ್ತಾನೆ. ಎಂತಹ ಪ್ರಭಾವಿ ವ್ಯಕ್ತಿಯೂ; ಎಂತಹ ಆಗರ್ಭ ಶ್ರೀಮಂತನಾಗಿದ್ದರೂ ಅವನು ಸಂಪೂರ್ಣವಾಗಿ ಸುಖಿಯಾಗಿರುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಆ ವ್ಯಕ್ತಿಗೆ ಜೀವನದಲ್ಲಿ ಯಾವುದಾದರೂ ಒಂದು ದುಃಖ ಖಂಡಿತಾ ಇರುತ್ತದೆ. ಹಾಗೆಯೇ ಜೀವನದಲ್ಲಿ ಕಷ್ಟಗಳನ್ನೇ ಕಂಡ ಹಲವಾರು ವ್ಯಕ್ತಿಗಳು ಒಮ್ಮೆ ಸುಖವನ್ನು ಕಂಡಿರುತ್ತಾನೆ. “ಒಳ್ಳೆಯ ದಿನಗಳು ಬರಬೇಕೆಂದರೆ ಸ್ವಲ್ಪ ಕೆಟ್ಟ ದಿನಗಳ ಜೊತೆ ಕಾಲ ಕಳೆಯಬೇಕು” ಎನ್ನುವ ಜೀವನದ ಸತ್ಯವನ್ನು ಅರ್ಥಮಾಡಿಕೊಂಡು ಕಷ್ಟವನ್ನು ನುಂಗಿ ಸುಖದ ನಿರೀಕ್ಷೆಯೊಂದಿಗೆ ಬದುಕನ್ನು ನಡೆಸುತ್ತಿರುತ್ತಾನೆ.    ನಾವು ರಾಜಾ ಹರಿಶ್ಚಂದ್ರನು ಸತ್ಯ ಹರಿಶ್ಚಂದ್ರನಾದ ಕಥೆಯನ್ನು ನೋಡಿದರೆ,  ಹರಿಶ್ಚಂದ್ರನು ಸತ್ಯಕ್ಕಾಗಿ ಅಪಾರ ಕಷ್ಟವನ್ನು ಅನುಭವಿಸುತ್ತಾನೆ. ತನ್ನ ರಾಜ್ಯದಲ್ಲಿ ದಕ್ಷ ಆಡಳಿತ ಮಾಡುತ್ತಿದ್ದಲ್ಲದೇ, ಪ್ರಜಾನುರಾಗಿಯಾಗಿ, ಪ್ರಜೆಗಳಿಗಾಗಿ ಅತ್ಯುತ್ಕೃಷ್ಟ  ಕಾರ್ಯಗಳನ್ನು ಮಾಡುತ್ತಾ ಬದುಕಿದ್ದ ಹರಿಶ್ಚಂದ್ರನಿಗೂ ಒಮ್ಮೆ ರಾಜ್ಯ, ಕುಟುಂಬ , ಗೌರವ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿ ಒದಗಿಬರಲಿಲ್ಲವೇ? ಆದರೆ ಅವನು ಎಂದಿಗೂ ಧೃತಿಗೆಡದೆ ಬಂದದ್ದನ್ನು ಸ್ವೀಕರಿಸುತ್ತಾ, ಸತ್ಯಮಾರ್ಗವನ್ನು ಬಿಡದೆಯೇ ನಡೆದುಕೊಂಡ ಈ ಕಾರಣಕ್ಕಾಗಿ ಅಂತಿಮವಾಗಿ ಅವನ ಸತ್ಯನಿಷ್ಠೆಗೆ ಫಲವಾಗಿ ಮತ್ತೆ ಸುಖ, ರಾಜ್ಯ ಮತ್ತು ತನ್ನ ಕುಟುಂಬ, ಗೌರವ ಎಲ್ಲವನ್ನೂ ಮರಳಿ ಪಡೆದುಕೊಂಡ. ಕಷ್ಟದ ಸಂದರ್ಭದಲ್ಲಿ ಹರಿಶ್ಚಂದ್ರನೇನಾದರೂ ಸ್ಥೈರ್ಯಗೆಟ್ಟು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರೆ, ಇಂದು ಕಲಿಯುಗದಲ್ಲಿ ಸತ್ಯಕ್ಕೆ ಹೆಸರಾಗಿ ಉಳಿದಿರುವ ಹರಿಶ್ಚಂದ್ರ ಹೇಳ ಹೆಸರಿಲ್ಲದಂತೆ ಆಗುತ್ತಿದ್ದ. ಹಾಗೆಯೇ ರಾಮಾಯಣದಲ್ಲಿ  ಶ್ರೀರಾಮನ ವನವಾಸದ ಕಥೆ; ಶ್ರೀರಾಮ ಸುಖದಲ್ಲಿ ಇದ್ದಾಗಲೇ ಇನ್ನೇನು ರಾಜ್ಯ ಪಟ್ಟಾಭಿಷೇಕ ಆಗುತ್ತದೆ ಎನ್ನುವ ಕಾಲಕ್ಕೆ ವನವಾಸ ಪ್ರಾಪ್ತವಾಗುತ್ತದೆ. ಅನೇಕ ಸಂಕಷ್ಟಗಳು ಒದಗಿಬರುತ್ತವೆ. ಕೊನೆಯಲ್ಲಿ ಅಯೋಧ್ಯೆಗೆ ಮರಳಿ ರಾಜನಾಗುತ್ತಾನೆ.  ಮಹಾಭಾರತದ ಪಾಂಡವರ ಕಥೆಯೂ ಹಾಗೆಯೇ. ಪಾಂಡವರು ಅನೇಕ ಕಷ್ಟಗಳು, ವನವಾಸ-ಅಜ್ಞಾತವಾಸ, ಅವಮಾನಗಳನ್ನು ಅನುಭಸಿದ್ದರೂ ನ್ಯಾಯಕ್ಕಾಗಿ ಹೋರಾಡಿ ವಿಜಯ ಪಡೆಯುತ್ತಾರೆ.  ದುಃಖ ಎನ್ನುವುದು ಶಾಶ್ವತವಲ್ಲ ಧೈರ್ಯದಿಂದ ಇದ್ದರೆ ಸುಖ ಬಂದೇ ಬರುತ್ತದೆ.ಒಂದು ಹಳ್ಳಿಯಲ್ಲಿ ಒಬ್ಬ ವೃದ್ಧ ರೈತ ವಾಸಿಸುತ್ತಿದ್ದ. ಅವನ ಬಳಿ ಒಂದು ಸುಂದರ ಕುದುರೆ ಇತ್ತು ಆ ಕುದುರೆಯೇ ಅವನ ಜೀವನೋಪಾಯ. ಒಂದು ದಿನ ಆ ಕುದುರೆ ದಾರಿ ತಪ್ಪಿ ಕಾಡಿಗೆ ಹೊರಟುಹೊಯಿತು. ಆ ವೃದ್ಧನಿಗೆ ಅದೃಷ್ಟದಂತಿದ್ದ ಕುದುರೆ ಕಾಣದಾದಾಗ, ಆ ಹಳ್ಳಿಯ ಜನರು ವೃದ್ಧನನ್ನು ಕುರಿತು “ನಿನ್ನ ಅದೃಷ್ಟವೇ ಕೆಟ್ಟು ಹೋಯಿತು , ಆ ದೇವರು ನಿಮಗೆ ಇಷ್ಟು ದುಃಖವನ್ನು ಕೊಡಬಾರದಿತ್ತು” ಎಂದರು. ಆಗ ಆ ವೃದ್ಧನು “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದನು. ಕೆಲವು ದಿನಗಳು ಹೀಗೇ ಕಳೆಯಿತು. ಒಂದು ದಿನ ಆ ಕುದುರೆ ಮರಳಿ ಬಂದಿತು. ಅದರೊಂದಿಗೆ ಇನ್ನೂ ಮೂರು ಕಾಡು ಕುದುರೆಗಳೂ ಬಂದವು. ಹಳ್ಳಿಯವರಿಗೆ ಆಶ್ಚರ್ಯವೋ ಆಶ್ಚರ್ಯ. ಹಳ್ಳಿಯವರು ರೈತನನ್ನು ಕುರಿತು “ನಿಮ್ಮ ಅದೃಷ್ಟ ನಿಜಕ್ಕೂ ತುಂಬಾ ಚೆನ್ನಾಗಿದೆ!” ಎಂದರು. ರೈತ ಮತ್ತೆ “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದನು. ಒಂದು ದಿನ ಆ ರೈತನ ಮಗ ಆ ಕಾಡು ಕುದುರೆಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ. ಆದರೆ ಕುದುರೆಯಿಂದ ಬಿದ್ದು ಅವನ ಕಾಲು ಮುರಿದು ಹೋಯಿತು. ಹಳ್ಳಿಯವರು ದುಃಖದಿಂದ “ಅಯ್ಯೋ! ತುಂಬಾ ಕೆಟ್ಟ ದ್ದಾಯಿತು” ಎಂದರು. ಆದರೆ ಆ ರೈತ ಮಾತ್ರ ಆಗಲೂ ಮತ್ತದೇ ಮಾತನ್ನು ಆಡಿದ “ಯಾರಿಗೆ ಗೊತ್ತು, ಬಹುಶಃ ಇದು ಒಳ್ಳೆಯದ್ದೋ! ಕೆಟ್ಟದ್ದೋ” ಎಂದ. ಕೆಲವು ದಿನಗಳ ಬಳಿಕ ರಾಜ್ಯದಲ್ಲಿ ಯುದ್ಧ ಆರಂಭವಾಯಿತು. ಹಳ್ಳಿಯ ಎಲ್ಲಾ ಯುವಕರನ್ನೂ ಸೈನ್ಯಕ್ಕೆ ಕರೆದುಕೊಂಡು ಹೋದರು. ಆದರೆ ರೈತನ ಮಗನ ಕಾಲು ಮುರಿದುದ್ದರಿಂದ ಅವನನ್ನು ಕರೆದೊಯ್ಯಲಿಲ್ಲ. ಯುದ್ಧಕ್ಕೆ ಹೋದ ಅನೇಕರು ಮರಳಿ ಬರಲಿಲ್ಲ.  ಆಗ ಹಳ್ಳಿಯವರು ಬಂದು “ ನಿಜವಾಗಿಯೂ ಇದು ಒಳ್ಳೆಯದ್ದೇ ಆಯಿತು” ಎಂದರು. ಆಗ ಆ ರೈತ ನಕ್ಕು “ಜೀವನದಲ್ಲಿ ಯಾವುದು ಸುಖ ಯಾವುದು ದುಃಖ ಎಂದು ತಕ್ಷಣ ನಿರ್ಧರಿಸಲಾಗುವುದಿಲ್ಲ” ಎಂದು ಹೇಳಿದ.  ಯಾವ ಘಟನೆಯು ನಮಗೆ ಒಳ್ಳೆಯದ್ದನ್ನು ಮಾಡುತ್ತದೆ; ಯಾವುದು ಕೆಟ್ಟದ್ದನ್ನು ಮಾಡುತ್ತದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಬಂದದ್ದನ್ನೆಲ್ಲಾ ಸ್ವೀಕರಿಸುತ್ತಾ, ಒಳ್ಳೆಯ ಆಲೋಚನೆಗಳನ್ನು ಮಾಡುತ್ತಾ ನಮ್ಮ ಕರ್ತವ್ಯವನ್ನು ಮಾಡುತ್ತಾ ಸಾಗಬೇಕು.ಶ್ರೀ ಕೃಷ್ಣನು ಭಗವದ್ಗೀತೆಯ ಎರಡನೇ ಅಧ್ಯಾಯದ ೧೪ನೇ ಶ್ಲೋಕದಲ್ಲಿ ಹೇಳುವಂತೆ,ಮಾತ್ರಾ ಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ ।ಆಗಮಾಪಾಯಿನೋऽನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ| ಭಗವಂತನು ಅರ್ಜುನನಿಗೆ ಹೇಳುತ್ತಾನೆ “ಇಂದ್ರಿಯಗಳ ಮೂಲಕ ಹೊರ ಪ್ರಪಂಚದಿಂದ ಉಂಟಾಗುವ ಶೀತ ಮತ್ತು ಉಷ್ಣ, ನಲಿವು ಮತ್ತು ನೊವುಗಳನ್ನು ಆದಿ ಮತ್ತು ಅಂತ್ಯವನ್ನು ಹೊಂದಿವೆ. ಅವುಗಳು ಅನಿತ್ಯ; ಅವುಗಳನ್ನು ಸಹಿಸು ಎನ್ನುತ್ತಾನೆ. ಅದರಂತೆಯೇ ಅದೇ ಅಧ್ಯಾಯದ ೩೮ ನೇ ಶ್ಲೋಕದಲ್ಲಿ ಹೇಳುವಂತೆ ಸುಖದುಃಖೇ ಸಮೇಕೃತ್ವಾಲಾಭಾಲಾಭೌ ಜಯಾಜಯೌ|ತತೋ ಯುದ್ಧಾಯ ಯುಜ್ಯಸ್ವನೈವಂ ಪಾಪಮವಾಪ್ಸ್ಯಸಿ|| ಅಂದರೆ ಸುಖ-ದುಃಖ, ಲಾಭ-ನಷ್ಟ ಮತ್ತು ಗೆಲುವು- ಸೋಲುಗಳನ್ನು ಸಮವಾಗಿ ಭಾವಿಸಿಕೊಂಡು ಯುದ್ಧಕ್ಕೆ ಅನುವಾಗು ಆಗ ನೀನು ಪಾಪವನ್ನು ಗಳಿಸುವುದಿಲ್ಲ.  ಭಗವಂತನ ಈ ಮಾತುಗಳೆಲ್ಲವು ಕೂಡ ಸುಖ- ದುಃಖಗಳ ಬಗೆಗೆ ಚಿಂತಿಸದೇ ನಾವು ನಮ್ಮ ಕಾರ್ಯವನ್ನು ಮಾಡಬೇಕು ಎಂದು ತಿಳಿಸುತ್ತವೆ. ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು|ಗುರುತಿಸೊಳಿತಿರುವುದನು ಕೇಡುಗಳ ನಡುವೆ||ಇರುವ ಭಾಗ್ಯವ ನೆನೆದು ಬಾರದೆಂಬುದನು ಬಿಡು|ಹರುಷಕಿದೆ ದಾರಿಯೆಲೊ-ಮಂಕುತಿಮ್ಮ|| ಡಿ ವಿ ಜಿ ಯವರ ಮಕುತಿಮ್ಮನ ಕಗ್ಗದ ಸಾಲುಗಳಿವು ಜೀವನದಲ್ಲಿ ನಮಗೆ ದೊರೆತಿರುವ ಪುಣ್ಯವನ್ನು ಹಾಗೂ ಅದರ ಒಳ್ಳೆಯ ಫಲವನ್ನು ಅನುಭವಿಸದೇ ಬಾರದಿರುವುದರ ಬಗ್ಗೆ ನಾವು ಚಿಂತಿಸುತ್ತೇವೆ. ಆ ಬಾರದಿರುವುದು ಸುಖವೂ ಆಗಿರಬಹುದು ಅಥವಾ ಹಲವಾರು ಕಾರಣಗಳಿಂದ ಮುಂದೆ ಬರಬಹುದಾದ ದುಃಖವೂ ಆಗಿರಬಹುದು. ನಾವು ಮುಂದಿನ ದುಃಖದ ಬಗೆಗೆ ಹೆಚ್ಚು ಆಲೋಚಿಸಿದರೆ ಇಂದು ನಮ್ಮ ಪಾಲಿಗೆ ಒದಗಿರುವ ಸುಖವನ್ನು ಅನುಭವಿಸದೇ ಅದನ್ನೂ ಕೂಡ ದುಃಖವನ್ನಾಗಿಸಿಕೊಂಡು ನಮ್ಮ ಕೈಯ್ಯಲ್ಲಿಯೇ ನಮ್ಮ ಜೀವನದ ರಸ ನಿಮಿಷವನ್ನು ಹಾಳುಮಾಡಿಕೊಳ್ಳುತ್ತೇವೆ. ಅದನ್ನು ಹೊರತುಪಡಿಸಿ ನಾವು ಪ್ರತಿಕ್ಷಣವನ್ನು ಜೀವಿಸಬೇಕು. ತೃಪ್ತಿಕರವಾಗಿ ಅನುಭವಿಸಬೇಕು. ಬರದಿರುವುದರ ಬಗ್ಗೆ ಆಲೋಚಿಸಿ, ಈಗಿರುವ ಒಳ್ಳೆಯದ್ದನ್ನು ಮರೆಯಬಾರದು. ಕಷ್ಟಗಳ ನಡುವೆಯೂ ಕಿಂಚಿತ್ತಾದರೂ ಸುಖ ಎನ್ನುವುದು ಇರುತ್ತದೆ. ಆ ಸಂತೋಷವನ್ನು ನಾವು ಹುಡುಕಿ ತೆಗೆದು ಬದುಕಬೇಕು. ಇರುವ ಭಾಗ್ಯವ ನೆನೆದು ಬದುಕಿದರೆ ಮನಸ್ಸಿಗೆ ಹರುಷವು ಸಿಗುತ್ತದೆ. ಎನ್ನುವ ಹಿರಿಯರ ಅನುಭವಜನ್ಯವಾದ ಮಾತು ಎಲ್ಲರಿಗೂ ಬದುಕುವ ಭರವಸೆಯನ್ನು ನೀಡುತ್ತದೆ. ನಾವು ಯಾವುದೇ ಯಶಸ್ವೀ ವ್ಯಕ್ತಿಗಳ ಜೀವನವನ್ನು ತೆಗೆದುಕೊಂಡರೂ ಆ ಯಶಸ್ಸಿನ ಹಿಂದೆ ಅವರ ದೊಡ್ಡ ಶ್ರಮ, ಸಂಕಷ್ಟಗಳು ಇರುತ್ತವೆ. ಬೆಂದು ಬೇಂದ್ರೆಯದ ದ.ರಾ.ಬೇಂದ್ರೆಯವರು, ಡಿವಿಜಿಯವರು, ಡಾ||ರಾಜ್ ಕುಮಾರ್, ಅಬ್ದುಲ್ ಕಲಾಂ, ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿಗಳು, ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು, ನಮ್ಮ ರಾಷ್ಟ್ರದ ಪ್ರಥಮ ಪ್ರಜೆಯಾಗಿರುವ ದ್ರೌಪದಿ ಮುರ್ಮು ಅವರು,  ಇನ್ನೂ ಅನೇಕ ವ್ಯಕ್ತಿಗಳು. ಇವು ಬೆರಳೆಣಿಕೆಯಷ್ಟೇ ಹೆಸರುಗಳು ಇಂತಹ ಸಾವಿರಾರು ಉದಾಹರಣೆಗಳನ್ನು ನಾವು ಕಾಣಬಹುದು. ಇವರೆಲ್ಲಾ ಇಂದು ಇಷ್ಟು ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರೆ ಅವರ ಜೀವನದ ಹಾದಿಯೇನೂ ಹೂವಿನ ಹಾಸಿಗೆಯಾಗಿ ಇರಲಿಲ್ಲ. ಅವರುಗಳು ಅನುಭವಿಸಿದ ಸಂಕಷ್ಟಗಳೇನೂ ಕಡಿಮೆಯಲ್ಲ. ಆದರೆ ಅವರ್ಯಾರೂ ಕಷ್ಟಗಳಿಗೆ ಕುಗ್ಗಲಿಲ್ಲ. ಅವುಗಳನ್ನು ಹಿಮ್ಮೆಟ್ಟಿಸಿ ಬೆಳೆದವರು. ಸಂಕಲ್ಪತೊಟ್ಟು ಗುರಿಸಾಧಿಸಿದವರು.  ಸೂರ್ಯೋದಯದ  ಮೊದಲು ಕತ್ತಲೆ ಗಾಢವಾಗಿ ಇರುತ್ತದೆ; ಹಾಗೆಯೇ ಸುಖದ ಮೊದಲು ದುಃಖವೂ ಇರುತ್ತದೆ. ಕತ್ತಲಾಯಿತೆಂದು ನಾವು ತಲೆಯ ಮೇಲೆ ಕೈಹೊತ್ತು ಕುಳಿತರೆ ಚಂದ್ರನ ಬೆಳದಿಂಗಳಿನ ಸುಖವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಬದಲಾವಣೆ ಎನ್ನುವುದು ಜಗದ ನಿಯಮ. ಬದುಕಲ್ಲಿ ಲಾಭವನ್ನೇ ಕಂಡವನು ನಷ್ಟಕ್ಕೆ ಹೆದರಿ ಜೀವ ಕಳೆದುಕೊಳ್ಳಬಾರದು. ಇಂದು ಅದೆಷ್ಟೋ ವ್ಯಕ್ತಿಗಳು, ಮಹಿಳೆಯರು, ವಿದ್ಯಾರ್ಥಿಗಳು, ಕುಟುಂಬಗಳು ಜೀವನದಲ್ಲಿ ಬಂದ ತಾತ್ಕಾಲಿಕವಾದ ಕಷ್ಟಗಳಿಗೆ ಹೆದರಿ ಜೀವವನ್ನು ಕಳೆದುಕೊಂಡ ಅನೇಕ ಸುದ್ದಿಗಳು ಪ್ರತಿದಿನವೂ ಕೂಡ ಸುದ್ದಿವಾಹಿನಿಗಳಲ್ಲಿ, ವಾರ್ತಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. ಒಮ್ಮೆ ಕಳೆದುಹೋದ ಜೀವನವನ್ನು ಮತ್ತೆ ನಾವು ಪಡೆಯಲು ಸಾಧ್ಯವಿಲ್ಲ. ಈ ಜೀವವು ನಾವು ಬೇಡಿ ಬಂದದ್ದಲ್ಲ. ಅದು ಪರಮಾತ್ಮನ ಕರುಣೆಯಿಂದ ಸೃಷ್ಟಿಯಾದದ್ದು. ಹೀಗಿರುವಾಗ ಈ ಜೀವದ ಅಂತ್ಯವೂ ಅವನ ಕೈಯಿಂದಲೇ ಆಗಬೇಕು. ಅಲ್ಲಿಯವರೆಗೂ ಬದುಕನ್ನು ಎದುರಿಸಿ ಮುನ್ನಡೆಯಲೇಬೇಕು. ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಂ ಎನ್ನುವ ವಾಕ್ಯವನ್ನು ನಾವು ಸದಾ ನೆನಪಿನಲ್ಲಿ ಇಡಬೇಕು. ಶೋಭಾ ಬಿಕಾವ್ಯನಾಮ: ಶೋಭಾ ನಾಗಭೂಷಣಶಿಕಕ್ಷಿ , ಕವಯತ್ರಿ ಹಾಗೂ ನಿರೂಪಕಿಪ್ರಧಾನ ಕಾರ್ಯದರ್ಶಿಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ನೋಂ)

“ಸುಖಸ್ಯಾ ನಂತರಂ ದುಃಖಂ ದುಃಖಸ್ಯಾ ನಂತರಂ ಸುಖಂ” ಶೋಭಾ ನಾಗಭೂಷಣ Read Post »

ಕಾವ್ಯಯಾನ

ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ”

ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ” ನೆರಳು ಬೆಳಕಿನಾಟಸದ್ದಿಲ್ಲದೇ ನಡೆದಿದೆಪ್ರಕೃತಿಯ ಸೊಬಗಲೂಹಣಾ ಹಣಿ ಗದ್ದಲವಿಲ್ಲದೆ ಸಾಗಿದೆ. ಬಗೆಯ ಆಕಾರಅನಂತ ಶಕ್ತಿಯ ಹೊದಿಕೆಬಾನಂಚಿನ ವರೆಗೂರಮ್ಯ ಮನೋಹರ. ಒಂದೊಮ್ಮೆ ಬಿಡುಗಡೆಸಿದ್ಧವಾಗಿಯೂ ಇದೆಆಶವಾದುವೂ ಜೊತೆ ಜೊತೆಗೆಹಂಬಲದ ದಿನಮಾನಗಳೂ ಇವೆ. ಹೊತ್ತು ಮುಳುಗುವ ಮುನ್ನಆಯ್ದುಕೊ ಮುತ್ತುಬಿತ್ತರಿಸಿ ಬಿಡು ಹಿಡಿದಿಟ್ಟ ಶಕ್ತಿಮತ್ತೇನಿದೆ ಮಮತೆ ಮಡಿಲು ಬಿಟ್ಟು ಮೆತ್ತನೆ ಹಾಸಿಗೆ ಹೊದಿಯುವ ಮುನ್ನಶೋಧಿಸಿ ಬಿಡು ರೋಧನೆಯ ಹತ್ತಿಕ್ಕಿಬೋಧನೆಯ ಅರಿವಿನ ಹೊನಲಲಿಚಿತ್ತ ಶುದ್ಧಿ ಮಾಡಿಕೋ. ರೇಷ್ಮಾ ಕಂದಕೂರ

ರೇಷ್ಮಾ ಕಂದಕೂರ “ಹೊತ್ತು ಮುಳುಗುವ ಮುನ್ನ” Read Post »

ಇತರೆ

“ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್” ಗೊರೂರು ಅನಂತರಾಜು

ವ್ಯಕ್ತಿ ಸಂಗಾತಿ ಗೊರೂರು ಅನಂತರಾಜು “ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್”   ಕವಿ ರಾಜೇಂದ್ರ ಪಾಟೀಲ್ ಅವರು ಉಮಾತನಯ ಕಾವ್ಯನಾಮದಲ್ಲಿ ಕವಿತೆ ರಚಿಸಿಕೊಂಡು ಬಂದವರು.ಇವರು 10.07.1965ರಂದು ಮಹಾರಾಷ್ಟ್ರ ರಾಜ್ಯದ ಸೋಲಾಪುರದಲ್ಲಿ ಜನಿಸಿದರು.ಮೂಲಸ್ಥಳ ಮಿರಗಿ, ಇಂಡಿ ತಾಲೂಕು, ವಿಜಯಪುರ ಜಿಲ್ಲೆ.ಇವರ ತಾಯಿ ಶ್ರೀಮತಿ ಉಮಾದೇವಿ,ತಂದೆ  ಶ್ರೀ ಶಂಕರರಾವ್. ಇವರಪ್ರಾಥಮಿಕ ಶಿಕ್ಷಣ ನಡೆದಿದ್ದು ಮಾಶಾಳ, ಕಮಲಾಪುರ, ರೇವೂರದಲ್ಲಿ.  ಪ್ರೌಢಶಿಕ್ಷಣ   ಅಫಜಲ್ ಪುರ‌‌ದಲ್ಲಿ.ಕಾಲೇಜು ಮತ್ತು ಪದವಿ( ಬಿಎ) ಶಿಕ್ಷಣ ಕಲಬುರಗಿಯಲ್ಲಿ.ತಾಂತ್ರಿಕ ಶಿಕ್ಷಣ ವರ್ಕ್ ಶಾಪ್ ಟೆಕ್ನಾಲಜಿ ಬಿಇಎಂಎಲ್, ಕೆಜಿಎಫ್‌ ನಲ್ಲಿ. ಪತ್ರಕರ್ತರಾಗಿ  ಗ್ರೀನೋಬಲ್ಸ್, ಚಿಂತಕ ( ಕಲಬುರಗಿ).1987 ರಿಂದ 1990ವರೆಗೆ,ಕನ್ನಡಮ್ಮ, ನಾಡೋಜ, ಹಸಿರುಕ್ರಾಂತಿ ( ಬೆಳಗಾವಿ)1990 ರಿಂದ 1998 ರವರೆಗೆ.ಸಂಯುಕ್ತ ಕರ್ನಾಟಕ  1998 ರಿಂದ 2022 ರವರೆಗೆ ಸೇರಿದಂತೆ ಪತ್ರಕರ್ತರಾಗಿ ಇವರ ಸೇವಾವಧಿ 33 ವರ್ಷ‌.ಸುಧಾ, ತರಂಗ, ವಾರಪತ್ರಿಕೆ, ರಾಗಸಂಗಮ, ಮಂಗಳ, ಮಯೂರ, ಮಲ್ಲಿಗೆ, ಪ್ರಜಾವಾಣಿ, ಪ್ರಜಾಮತ, ಉತ್ಥಾನ, ಗ್ರಿನೋಬಲ್ಸ್, ಚಿಂತಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ, ಬುಕ್ ಬ್ರಹ್ಮಾ ಹೀಗೆ ನಾಡಿನ ನೂರಾರು ಪತ್ರಿಕೆಗಳಲ್ಲಿ ಇವರ ಕವನ ಕತೆ, ಲೇಖನ, ವಿಮರ್ಶೆ,  ಅಂಕಣಗಳು ಪ್ರಕಟವಾಗಿವೆ.  ಹಲವಾರು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಮಕ್ಕಳ ಸಾಹಿತ್ಯ  ಕವನ ಸಂಕಲನಗಳಲ್ಲಿ ಇವರ ಕವಿತೆಗಳು ಪ್ರಕಟಗೊಂಡಿವೆ. ಕಲಬುರಗಿಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ, ಡಾ. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದಾರೆ. ಧಾರವಾಡದಲ್ಲಿ ಬಾಲವಿಕಾಸ ಅಕಾಡೆಮಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಶಿಬಿರದಲ್ಲಿ, ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ದಾವಣಗೆರೆ, ಕುಷ್ಟಗಿ, ಕಲಬುರಗಿ, ವಿಜಯಪುರ, ಬೆಳಗಾವಿ, ಬೆಂಗಳೂರು, ಕೊಪ್ಪಳ, ಬದಾಮಿ ಭಾಗವಹಿಸಿದ್ದಾರೆ.  50 ಕ್ಕೂ ಹೆಚ್ಚಿನ  ಕವನ ಸಂಕಲನಗಳಿಗೆ ಮುನ್ನುಡಿ,ಳ ಬರೆದಿರುವರು. ಇವರ ಜೇನ್ಗೊಡ, ನೆನಪ ರಂಗೋಲಿ ಕವನ ಸಂಕಲನ, ಕಥಾಗುಚ್ಛ ಕಥಾ ಸಂಕಲನ ಪ್ರಕಟಗೊಂಡಿವೆ. ಕರ್ನಾಟಕ ಸರಕಾರದ ಪಠ್ಯಪುಸ್ತಕ ನಿರ್ದೇಶನಾಲಯವು 1 ನೇ ತರಗತಿಗೆ ಅಮ್ಮ ಕವನವನ್ನು, 2ನೇ  ಮತ್ತು 5 ನೇ ತರಗತಿಗೆ ತಂಗಿಯ ಪತ್ರ ಕವನವನ್ನು ಪಠ್ಯದಲ್ಲಿ ಅಳವಡಿಸಿದೆ. 1989ರ ನವೆಂಬರ್ ನಲ್ಲಿ ನೆಹರು ಜನ್ಮ ಶತಮಾನೋತ್ಸವ ಪ್ರಯುಕ್ತ ಇವರ ಕವಿತೆ ಶಾಂತಿದೂತ  ಆಕಾಶವಾಣಿ ಕಲಬುರಗಿ, ಧಾರವಾಡ, ಬೆಂಗಳೂರು, ಮೈಸೂರು, ಮಂಗಳೂರು  ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಿದೆ. ಕರ್ನಾಟಕ ಸಾಹಿತ್ಯ ಕಲಾ ವೇದಿಕೆ ರಾಜ್ಯ ಸಂಚಾಲಕರಾಗಿ ಮೂರು ವರ್ಷ ಸಾಂಸ್ಕೃತಿಕ ಸೇವೆ. ಭಾವ ಸಂಗಮ ಸಾಂಸ್ಕೃತಿಕ ವೇದಿಕೆಯ ರಾಜ್ಯ ಸಂಚಾಲಕರಾಗಿ 2015 ರಿಂದ ಇಲ್ಲಿಯವರೆಗೆ 11 ಸಮ್ಮೇಳನಗಳನ್ನು ಆಯೋಜಿಸಿದ್ದಾರೆ. ಪ್ರಸ್ತುತ ಉಮಾಶಂಕರ ಪ್ರತಿಷ್ಠಾನ ಕಾರ್ಯಾಧ್ಯಕ್ಷರಾಗಿದ್ದಾರೆ. ಇವರಿಗೆರಾಷ್ಟ್ರೀಯ ಬಸವ ವಿಭೂಷಣ, ಬಸವನಬಾಗೇವಾಡಿ, ಅಸ್ಮಿತಾ ಫೌಂಡೇಶನ್ ಹಿರಿಯ ನಾಗರಿಕರ ಪ್ರಶಸ್ತಿ, ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ 29ನೇ ವಾರ್ಡ್, ಮೂರನೇ ಕ್ರಾಸ್ಹಾಸನ – 574201

“ಶಿಶು ಕಾವ್ಯ ಕವಿ ರಾಜೇಂದ್ರ ಪಾಟೀಲ್” ಗೊರೂರು ಅನಂತರಾಜು Read Post »

ಕಾವ್ಯಯಾನ

ಟಿ.ಪಿ. ಉಮೇಶ್‌ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು”

ಕಾವ್ಯ ಸಂಗಾತಿ ಟಿ.ಪಿ. ಉಮೇಶ್‌ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು” ಅಗೋ ಆ ಆಕಾಶದಲ್ಲಿಮೋಡಗಳು ಚಲಿಸುವುದು ನಿಲ್ಲುವುದಿಲ್ಲ!ಯಾರ ಕಣ್ಣೀರಿದ್ದರು ಇಲ್ಲದಿದ್ದರುಮಳೆಯು ಬರುವುದು ನಿಲ್ಲುವುದಿಲ್ಲ! ಸ್ಮೃತಿಯ ಬಾಗಿಲ ಮೇಲೆಒಂದಾದ ಮೇಲೊಂದು ಋತುಗಳ ಬೆರಳುಗಳುಮುಚ್ಚಿದ ಗುರುತು ಬಿಡುವುದುನಿಲ್ಲುವುದಿಲ್ಲ! ನನಗೆ ಗೊತ್ತು ಈ ಕಾಲದ ಜಾತ್ರೆಯೊಳಗೆಹೃದಯ ತಪ್ಪಿಹೋಗುವುದು ನಿಲ್ಲುವುದಿಲ್ಲ!ಕೈಚೆಲ್ಲಿದ ಕ್ಷಣಗಳಿಗೆ ಇಲ್ಲಿಮತ್ತೆ ಹೆಸರು ಕೊಡಲಾಗುವುದಿಲ್ಲ! ಇಷ್ಟಾದರೂ ಹಾರಿ ಹೋದ ಹಕ್ಕಿಗಳರೆಕ್ಕೆಗಳ ಸದ್ದುನನ್ನ ಅಂತರಂಗದೊಳಗೆ ಉಳಿಯುವುದಿಲ್ಲ!ಅವು ಗೂಡಿನಲ್ಲಿ ಬಿಟ್ಟುಹೋದಬೆಚ್ಚಗಿನ ನಿಶ್ಶಬ್ದ ನನ್ನದಾಗುವುದಿಲ್ಲ!ಒಮ್ಮೆ ದೀಪ ಹಚ್ಚಿದ ಕೈಗಳುಮತ್ತೆ ಈ ಕತ್ತಲಿನಲ್ಲಿನನಗಾಗಿ ಬೆಳಕು ಹಂಚುವುದಿಲ್ಲ! ಈಗ ನೋಡಿ ಈ ಒಣಗಿದ ನದಿಯ ತಳದಲ್ಲಿಚಿಕ್ಕ ಜಲಧಾರೆಮೌನವಾಗಿ ಹುಟ್ಟಿ ಜಿನುಗುವುದುನಿಲ್ಲುವುದಿಲ್ಲ!ನಾ ಕಂಡರೂ ಕಾಣದಿದ್ದರೂನದಿ ಸಮುದ್ರದ ದಾರಿ ಬಿಟ್ಟು ಬರುವುದಿಲ್ಲ! ಟಿ.ಪಿ.ಉಮೇಶ್ ಚಿತ್ರದುರ್ಗ

ಟಿ.ಪಿ. ಉಮೇಶ್‌ ಚಿತ್ರದುರ್ಗ “ಒಮ್ಮೆ ದೀಪ ಹಚ್ಚಿದ ಕೈಗಳು” Read Post »

ಅಂಕಣ ಸಂಗಾತಿ, ವೀಣಾ-ವಾಣಿ

“ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್‌ ಗೌಡ ಪಾಟೀಲ್

ಮಕ್ಕಳ ಸಂಗಾತಿ “ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್‌ ಗೌಡ ಪಾಟೀಲ್ ಅದೆಷ್ಟೇ ಮನಸ್ಸು ಕ್ಷೋಭೆಗೊಳಗಾಗಿರಲಿ ಆತಂಕಿತ ವಾಗಿರಲಿ ಸಂಗೀತದ ನಾದ ತರಂಗಕ್ಕೆ ಮನದ ನೋವು ನಿವಾರಿಸುವ ಶಕ್ತಿ ಇದೆ. ಮನಸ್ಸನ್ನು ಸಮಾಧಾನಗೊಳಿಸುವ, ಆಳವಾದ ನೆಮ್ಮದಿಯನ್ನು ನೀಡುವ ಮನಸ್ಸನ್ನು ಅದ್ವಿತೀಯ ವಿಶ್ರಾಂತ ಸ್ಥಿತಿಗೆ ಕರೆದೊಯ್ಯುವ ಶಕ್ತಿ ಇದೆ…. ಸಂಗೀತ ನಮ್ಮನ್ನು ನಾವಿರುವ ಭಾವದಿಂದ ತನ್ನದೇ ಆದ ಲೋಕಕ್ಕೆ ಕರೆದೊಯ್ಯುತ್ತದೆ.ಲಲಿತ ಕಲೆಗಳಲ್ಲಿ ಒಂದಾದ ಸಂಗೀತವು ಮಕ್ಕಳಲ್ಲಿ ರಾಗ, ತಾಳ, ಲಯಗಳ ಜ್ಞಾನದ ಜೊತೆಗೆ ಹತ್ತು ಹಲವು ವಿಭಿನ್ನ ಸಂಗತಿಗಳಲ್ಲಿ ಹೆಚ್ಚಿನ ಕಲಿಕೆಯನ್ನು ನೀಡುತ್ತದೆ.ವ್ಯಕ್ತಿಯ ಬೌದ್ಧಿಕ ಭಾವನಾತ್ಮಕ, ಸಾಮಾಜಿಕ  ಹಾಗೂ ಸಾಂಸ್ಕೃತಿಕ ಬದುಕಿಗೆ ಒಳ್ಳೆಯ ಬುನಾದಿಯನ್ನು ಹಾಕುತ್ತದೆ. ಆದ್ದರಿಂದಲೇ ಮಕ್ಕಳನ್ನು ಚಿಕ್ಕಂದಿನಲ್ಲಿಯೇ ಸಂಗೀತ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆಟ ಪಾಠಗಳಂತೆ ಲಲಿತ ಕಲೆಗಳಲ್ಲಿ ಒಂದಾದ ಸಂಗೀತವೂ ಕೂಡ ಅತ್ಯವಶ್ಯಕ ಎಂಬುದನ್ನು ಮನಗಂಡಿರುವ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಪ್ರತಿ ವಾರಕ್ಕೆ ಎರಡರಿಂದ ಮೂರು ಅವಧಿಯಲ್ಲಿ ಸಂಗೀತ ಶಿಕ್ಷಣವನ್ನು ಕಡ್ಡಾಯವಾಗಿ ಕಲಿಸುವ ವ್ಯವಸ್ಥೆ ಮಾಡಿದೆ. ಪರಿಣಾಮವಾಗಿ ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯದೆ ಹೋದರೂ ಕೂಡ ತಕ್ಕಮಟ್ಟಿಗೆ ಸಂಗೀತದ ಜ್ಞಾನ ಮಕ್ಕಳಿಗೆ ದೊರೆಯುತ್ತದೆ. ಸಂಗೀತ ಕಲೆ…. ಕೇವಲ ಕಲೆಯಲ್ಲ..ಅದು ಜೀವನವನ್ನು ಅರಿಯುವ ಮಾರ್ಗ. ಸಂಗೀತವನ್ನು   ಕಲಿಯುವ ಮಕ್ಕಳಲ್ಲಿ ಗಮನಾರ್ಹ ಬದಲಾವಣೆಯನ್ನು ನಾವು ಕಾಣಬಹುದು. ಸೂಕ್ಷ್ಮವಾದ ಹಾಗೂ ಅತ್ಯುತ್ತಮವಾದ ಗ್ರಹಿಕೆಯ ಶಕ್ತಿ ಮಕ್ಕಳದಾಗುತ್ತದೆ. ಸ್ಮರಣಶಕ್ತಿ ಕೂಡ ಹೆಚ್ಚುತ್ತದೆ. ಚಿಕ್ಕ ಪುಟ್ಟ ಬದಲಾವಣೆಗಳಿಂದ ಉಂಟಾಗುವ ವ್ಯತ್ಯಾಸಗಳ ಅರಿವು ಮೂಡುತ್ತದೆ…. ಇದರ ಪರಿಣಾಮವಾಗಿ ಮಕ್ಕಳು ಶಾಲೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಬದುಕಿನ ಎಲ್ಲಾ ಹಂತಗಳಲ್ಲಿ ತಮ್ಮ ಗ್ರಹಣ ಶಕ್ತಿಯ ಸೂಕ್ಷ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಸಂಗೀತ ಶಿಕ್ಷಣವು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತದೆ. ಸಂಗೀತದ ಮೂಲಕ ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವಂತೆ ಮಕ್ಕಳನ್ನು ಕ್ರಿಯಾಶೀಲಗೊಳಿಸುತ್ತದೆ. ಮಕ್ಕಳ ಸೃಜನಶೀಲತೆ ಅರಳುವುದು ಇಂತಹ ಕ್ರಿಯಾಶೀಲ ಅಭಿವ್ಯಕ್ತಿಗಳಿಂದ ಮಾತ್ರ. ಹೊಸ ವಿಚಾರಗಳನ್ನು ಅರಿಯಲು, ಹೊಸ ವಿಷಯಗಳನ್ನು ಪ್ರಸ್ತುತಪಡಿಸಲು ಸಂಗೀತವು ಅವರಿಗೆ ಸೂಕ್ಷ್ಮವಾದ ಕಲಿಕಾ ಕೌಶಲ್ಯವನ್ನು ನೀಡುತ್ತದೆ.ಸಂಗೀತದಿಂದ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರೆ ಅಚ್ಚರಿ ಪಡದಿರಿ. ನಿರಂತರವಾಗಿ ಸಂಗೀತದ ಅಭ್ಯಾಸವನ್ನು ಮಾಡುವುದರಿಂದ ಹಾಗೂ ಒಳ್ಳೆಯ ಸುಮಧುರವಾದ ಸಂಗೀತವನ್ನು ಕೇಳುವ ಮೂಲಕ ಉದ್ರಿಕ ನರಗಳನ್ನು  ಶಾಂತಗೊಳಿಸಬಹುದು. ಮೈ-ಮನಗಳಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ತರುವ ಸಂಗೀತದ ನಾದ ತರಂಗಗಳು ಮನಸ್ಸಿನ ಬೇಗುದಿಯನ್ನು ತೊಡೆದು ಹಾಕುವ ಮೂಲಕ ಶಾಂತ ಮನಸ್ಥಿತಿಗೆ ಕಾರಣವಾಗುತ್ತದೆ. ಸಂಗೀತವು ವ್ಯಕ್ತಿಯ ಆತ್ಮವಿಶ್ವಾಸ ವೃದ್ದಿಗೆ ಸಾಧನ…. ನಿರಂತರವಾದ ತರಬೇತಿಯ ಮೂಲಕ ಕಲಿಕೆಯಲ್ಲಿ ಆತ್ಮವಿಶ್ವಾಸ ಹೆಚ್ಚಿದರೆ, ವೇದಿಕೆಯನ್ನು ಏರಿ ಕಲಿತ ವಿದ್ಯೆಯನ್ನು ಪ್ರಸ್ತುತಪಡಿಸಲು ಅತ್ಯವಶ್ಯಕವಾದ ಧೈರ್ಯವನ್ನು ಸಂಗೀತವು ನೀಡುತ್ತದೆ. ಆತ್ಮವಿಶ್ವಾಸ ವೃದ್ಧಿಗೆ ಇದಕ್ಕಿಂತ ಇನ್ನೇನು ಬೇಕು ? ಸಾರ್ವಜನಿಕರೊಂದಿಗೆ ಸಂವಹನ ಸಾಧ್ಯವಾಗುತ್ತದೆ. ಮತ್ತಷ್ಟು ಮಗದಷ್ಟು ಕಲಿಕಾ ಆಸಕ್ತಿ ಹೆಚ್ಚುತ್ತದೆ.ಸಾಂಸ್ಕೃತಿಕ ಮೌಲ್ಯಗಳ ಪರಿಚಯ ಮಾಡಿಕೊಡುವ ಸಂಗೀತವು ನಮ್ಮ ದೇಶದ ಮಹೋನ್ನತ ಸಂಗೀತ ಪರಂಪರೆಯ ಅರಿವನ್ನು ಮೂಡಿಸುತ್ತದೆ. ವಿವಿಧ ರಾಗ ತಾಳ ಲಯಗಳ ಜ್ಞಾನವನ್ನು ನಮಗೆ ಪ್ರಚುರಪಡಿಸುತ್ತದೆ. ಸಂಗೀತದ ವೈವಿಧ್ಯಗಳ ಕುರಿತು ಹೊಸ ಕುತೂಹಲವನ್ನು ಮೂಡಿಸುತ್ತದೆ. ವಿವಿಧ ಶೈಲಿಗಳ, ತಾಳ ವಾದ್ಯಗಳ ಅರಿವನ್ನು ಮೂಡಿಸಿ ನಮ್ಮ ಮಹೋನ್ನತ ಗುರು ಪರಂಪರೆಯ ಕುರಿತು ಕೃತಜ್ಞತಾ ಭಾವವನ್ನು ಮೂಡಿಸುತ್ತದೆ. ಸಂಗೀತ ಕಲಿಕೆಯು ನಮ್ಮ ಬದುಕಿನಲ್ಲಿ ಶಿಸ್ತಿನ ಪಾಲನೆಗೆ ಕಾರಣವಾಗುತ್ತದೆ… ಪ್ರತಿದಿನವೂ ಸಂಗೀತವನ್ನು ಕಲಿಯುವ ನಿಟ್ಟಿನಲ್ಲಿ ತರಬೇತಿ ಹೊಂದುವ ಪ್ರತಿ ಮಗುವು ಕೂಡ ತಮ್ಮದೇ ಆದ ಕೆಲ ಪದ್ಧತಿಗಳನ್ನು ರೂಡಿಸಿಕೊಳ್ಳುತ್ತಾರೆ. ತಮಗೆ ಒಗ್ಗುವ ಊಟೋಪಚಾರ, ಆಹಾರ ವಿಹಾರಗಳನ್ನು ಪಾಲಿಸುತ್ತಾರೆ ಇದು ಅವರಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಶಿಸ್ತಿನ ಪರಿಪಾಲನೆಗೆ ಸಹಕಾರಿಯಾಗುತ್ತದೆ. ನಿಯಮ ಹಾಗೂ ಸಮಯ ಪಾಲನೆಯ ಕಾರಣದಿಂದಾಗಿ ಒಂದು ಬಗೆಯ ಶಿಸ್ತು ಅವರಲ್ಲಿ ಉಂಟಾಗುತ್ತದೆ. ಗುಂಪಿನಲ್ಲಿ ಹಾಡುವ ಮೂಲಕ ಸಾಮಾಜಿಕ ಸಾಂಗತ್ಯದ ಸಾಮರ್ಥ್ಯ ಬೆಳೆಯುತ್ತದೆ ವಿಭಿನ್ನತೆಯಲ್ಲಿಯೂ ಏಕತೆಯನ್ನು ಕಾಣುವ ಶಕ್ತಿ ಸಂಗೀತಕ್ಕಿದೆ. ಇತರರಲ್ಲಿರುವ ವಿಭಿನ್ನ ಗ್ರಹಿಕೆಯ ಶಕ್ತಿ,, ಕಲಿಕಾ ಸಾಮರ್ಥ್ಯ, ಸಮಯ ಪಾಲನೆ, ಶ್ರದ್ಧೆ,ಕಾರ್ಯ ತತ್ವರತೆಗಳು ನಮ್ಮನ್ನು ಪ್ರೇರೇಪಿಸುತ್ತವೆ. ಸಂಗೀತವು ಸ್ನೇಹ ಭಾವವನ್ನು ಹಾಗೂ ಗೌರವವನ್ನು ವೃದ್ಧಿಸುತ್ತದೆ. ನಮ್ಮ ಮನದಾಳದ ಮಾತುಗಳನ್ನು ನಮಗರಿವಿಲ್ಲದೆ ಸಂಗೀತದ ಮೂಲಕ  ಹೊರಹಾಕುವ ಪ್ರತಿ ವ್ಯಕ್ತಿಯು ಇನ್ನಿಲ್ಲದ ನಿರುಮ್ಮಳತೆಯನ್ನು ಅನುಭವಿಸುತ್ತಾರೆ….ಆದ್ದರಿಂದ ತರಗತಿಯ ಕೋಣೆಯಲ್ಲಿ ಕಡ್ಡಾಯವಾಗಿ ದೊರೆಯುವ ಸಂಗೀತ ಶಿಕ್ಷಣದಿಂದ ನಿಮ್ಮ ಮಕ್ಕಳನ್ನು ವಂಚಿತಗೊಳಿಸದಿರಿ. ವೀಣಾ ಹೇಮಂತ್ ಗೌಡ ಪಾಟೀಲ್ 

“ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-21 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಜಯದೇವಿ ತಾಯಿಯವರು ಕೋರ್ಟ್ ಕೇಸ್ನ್ನ ಗೆದ್ದು…..“ನ್ಯಾಯಕ್ಕೆ ಜೀವ ತುಂಬಿದರು.*ಆಗಿನ ಕಾಲದಲ್ಲಿ ಜಯದೇವಿ ತಾಯಿಯವರ ಪತಿಯು ಬಾಲಕರೆಂದು  ಬ್ರಿಟಿಷರ ಮೇಲ್ವಿಚಾರಣೆಯಲ್ಲಿದ್ದ ದೊಡ್ಡ ಆಸ್ತಿ, ಜಮೀನು, ಮನೆ, ವ್ಯವಹಾರ—ಎಲ್ಲವು ಒಂದೇ ಕ್ಷಣದಲ್ಲಿ ತಾಯಿ ಯ ಹೆಗಲ ಮೇಲೆ ಬಿದ್ದವು.ಪುರುಷರೇ ಹೆದರಿಬಿಡುವಂತಹ ಜವಾಬ್ದಾರಿಯನ್ನು ಒಬ್ಬ ಹೆಣ್ಣು ಮಗಳು ಒಬ್ಬಳೇ ಹೊತ್ತು ನಿಲ್ಲುವುದು ಅಂದಿನ ಸಮಾಜದಲ್ಲಿ ಅಸಾಧ್ಯವೆಂದು ಎಲ್ಲರೂ ಭಾವಿಸಿದ್ದರು.ಆದರೆ ಜಯದೇವಿ ತಾಯಿ ಒಬ್ಬ ಸಬಲ ತಾಯಿತನದ ಶಕ್ತಿಯಾಗಿ ನಿಂದರು.ಒಂದೆಡೆ ಗಂಡನ ಅಗಲಿಕೆಯ ನೋವು ಹೃದಯದಿ ಮುಚ್ಚಿಟ್ಟು ಮತ್ತೊಂದೆಡೆ ಐದು  ಮಕ್ಕಳ ಭವಿಷ್ಯ ಅವರ ಕಣ್ಣೆದುರಿಗೆ ನಿಂತಿತ್ತು ಬೆಳಗ್ಗೆ ಉದಯಿಸುವ ಸೂರ್ಯನಿಗಿಂತ ಮುಂಚೆಯೇ ಎದ್ದು ಮನೆಯ ಕೆಲಸ, ಮಕ್ಕಳ ಆರೈಕೆ, ಕಾರ್ಮಿಕರ ನೋಡಿಕೊಳ್ಳುವುದು, ಆಸ್ತಿಯ ಲೆಕ್ಕಪತ್ರ, ನ್ಯಾಯದ ವಿಚಾರ …..ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಅವರಲ್ಲಿ ಆವರಿಸಿದ ಖಾಲಿತನವನು ಸಿದ್ದರಾಮನ ನೆನಹುನಲಿ ನಮ್ಮೆದೆಯ ತುಂಬಲಾರಂಭಿಸಿದರು. ಇಚ್ಛೆಯಿಂದಲೇ ಸರ್ವ|ತುಚ್ಚಿೀಕರಿಸಿ ಬೇಗ ಎಚ್ಚರದಿಂದ ಇರಬೇಕು- ನಮ್ಮಲಿಯಸಚ್ಚಿದಾನಂದನ ಸ್ಮರಿಸೂತ||*B ಸಚ್ಚಿದಾನಂದ ಶಿವಮಯನಾದ ಸಿದ್ದರಾಮನು ನೆನೆಯುತ ಐದು ಮಕ್ಕಳ ಬದುಕನ್ನು ಕಟ್ಟುವ ಉಕ್ಕಿನ ಮನೋಬಲವಿತ್ತು. ಮಕ್ಕಳ ಬದುಕು ಅರಳಬೇಕೆಂಬು ಕನಸು ಹೊತಿದ್ದರು…    ಮಕ್ಕಳಿಗೆ ಪರ್ವತದಂತೆ ಬಲವಾಗಿ ನಿಂತರು.ಅದರಲ್ಲೇ ಅವರ ತಾಯಿತನದ ದಿವ್ಯತೆ ಇತ್ತು. ಇಲ್ಲಿ ಒಂದೆರಡು ಘಟನೆಗಳನ್ನು ನೆನಪಿಸಿಕೊಳ್ಳಲೇ ಬೇಕು ತಾಯಿಯವರು ಆಗಿಂದ್ದಾಂಗ  ಹೇಳುತ್ತಿದ್ದರು.  ಮೊದಲ ಮಗಳು ಶಶಿಕಲಾ ಅವರಿಗೆ ರಾಜಶೇಖರ ಮಡಕಿ  ಸ್ವಂತ ತಮ್ಮನಿಗೆ ಕೊಟ್ಟು ಮದುವೆ ಮಾಡಲಾಗಿತ್ತು‌ . ಅವರು ಸುಖ ಸಂಸಾರದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಾಹಿತ್ಯವನ್ನು ರಚಿಸುತ್ತಾ ಸುಖವಾಗಿ ಇದ್ದರು. ತಾಯಿಯವರ ಹಿರಿಯ ಮಗಳು ಶಶಿಕಲಾ ಮಡಕಿ ಅಳಿಯ ರಾಜಶೇಖರ್ ಮಡಿಕೆ ಎರಡನೇ ಮಗ ಶ್ರೀಕಂಠ ಮೂರನೇ ಮಗ ಪ್ರಭುರಾಜ ಇವರಿಬ್ಬರನ್ನು ಪಂಚಗಣಿಯ ಶಾಲೆಯಲ್ಲಿ ಓದಲು ಕಳಿಸಿಕೊಟ್ಟಿದ್ದರು‌ ‌.ಸುಖದ ಸುಪತ್ತಿನಲ್ಲಿ ಬೆಳೆದು ಬಂದ್ದಿದ್ದ ಮಕ್ಕಳಿಗೆ ಅಲ್ಲಿಯ ಕಠಿಣವಾದ ಶಿಸ್ತು ಬದ್ಧತೆ ,ಕಟ್ಟುನಿಟ್ಟಾದ ನಿಯಮಗಳು, ಶಾಲೆಯ ಅಭ್ಯಾಸದ ಭಾರವು ಅವರಿಗೆ ಸರಿ ಹೊಂದಲಿಲ್ಲ, ಊಟದಲಿ ವ್ಯತ್ಯಾಸ ಸಹಿಸಲಾಗಲಿಲ್ಲ. ಹೀಗಾಗಿ ಅವರು ಅಲ್ಲಿ ಇರಲು ಒಪ್ಪಿಕೊಳ್ಳಲಿಲ್ಲ… ಹಿರಿಯ ಮಗ ಶ್ರೀಕಂಠ ಆದರೂ ತಾಯಿಗೆ ಹೆದರಿ ಮೊದಲು ಮಗ ಶ್ರೀಕಂಠ ಶಾಲೆಯ ರಜೆ ಪ್ರಾರಂಭವಾಗುವವರೆಗೂ ಇದ್ದು ರಜೆಗೆಂದು ಮನೆಗೆ ಬಂದಾಗ ಹಿಂತಿರುಗಿ ಹೋಗಲು ಸಾಧ್ಯವೇ ಇಲ್ಲವೆಂದು ತನ್ನ ಅಭಿರುಚಿಯು ಕೃಷಿಯಲ್ಲಿ ಹಾಗೂ ಅಂಗಡಿ ಮನೆ ನೋಡಿಕೊಂಡು ಹೋಗುವದರಲ್ಲಿ ಇದೆ ಎಂದು ತಿಳಿಸಿದಾಗ ತಾಯಿಯವರು ಅವರ ವಿಚಾರದ ವಿರುದ್ಧ ಹೋಗಲು ಒಪ್ಪಲಿಲ್ಲ ಏಕೆಂದರೆ ಶ್ರೀಕಂಠವರಿಗೆ ಕೃಷಿಯಲ್ಲಿ ಅಭಿರುಚಿ ಹೆಚ್ಚಿಗೆ ಇರುವುದನ್ನು ಗಮನಿಸಿದ್ದ ತಾಯಿಯವರು ಅವರಂತೆ ಒಪ್ಪಿಕೊಂಡರು.ಇಲ್ಲಿ ತಾಯಿಯವರು ಮಕ್ಕಳಿಗೆ ಯಾವುದೇ ರೀತಿಯಾದ ಒತ್ತಾಯದಿಂದ ಯಾವ ಶಿಕ್ಷಣವನ್ನು ಕೊಡಬಾರದು ಅನ್ನುವುದನ್ನು ಮನಗಂಡಿದ್ದರು ಅವರವರ ಅಭಿರುಚಿಯಂತೆ ಅವರವರ ಜೀವನದ ದಾರಿಯನ್ನು ತೊರಿ ಕೊಡಬೇಕು ಅನ್ನುವ ಅಭಿಪ್ರಾಯ ಹೊಂದಿದ್ದರು. ಇನ್ನು ಎರಡನೇ ಮಗ ಪ್ರಭುರಾಜ ಅತ್ಯಂತ ಮೃದು ಹೃದಯ, ಜಾಣ ಬುದ್ಧಿವಂತನು ಇವರಿಗೆ ದೊಡ್ಡ ಶಿಕ್ಷಣವನ್ನು ಕೊಡಿಸಬೇಕೆನ್ನುವ ಆಸೆ ತಾಯಿಯವರು ಹೊತ್ತಿದ್ದರು .ಅವರು ಕೂಡ ತಿರುಗಿ ಹೋಗಲು ಒಪ್ಪದಿದ್ದಾಗ ತಾಯಿಯವರು ನನಗಾಗಿ ನೀನು ಹೋಗಲೇ ಬೇಕು ಅನ್ನುವ ಪ್ರಮಾಣ ತೆಗೆದುಕೊಂಡರು… ಏಕೆಂದರೆ ಅವರಲ್ಲಿ ಮುಂದೆ ಕಲಿಯುವ ಯೋಗ್ಯತೆ ಇದೆ ಅನ್ನುವುದನ್ನು ಅರೆತಿದ್ದರು …..ಅನಿವಾರ್ಯವಾಗಿ ಪ್ರಭುರಾಜರಿಗೆ ಹೋಗ ಬೇಕಾಗಿ ಬಂತು. ಎರಡನೆ ಮಗ ಪ್ರಭುರಾಜ ಪ್ರಭುರಾಜ್ ಅವರ ಪ್ರತ್ನಿ ಪ್ರಮೀಳಾ (ಗದಗಿನ ಎಳೆಮಲಿ ಶಾಂತಪ್ಪನವರ ಮಗಳು) ತಾಯಿಯವರನ್ನು ಒಂದು ಕ್ಷಣವು ಬಿಟ್ಟಿರದಿದ್ದ ಪ್ರಭು ರಾಜರು ತಾಯಿಯ ನೆರಳಲ್ಲಿದವರು ಹಾಗೂ ಕರುಳಿನ ಸಂಬಂಧ ಗಾಡವಾಗಿತ್ತು. ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿದ ಅವರಿಗೆ ತಾಯಿಯಿಂದ ದೂರಿರುವುದು ಬಹಳ ಅಸಹನಿಯವಾಗಿತ್ತು ಹಿಂಸೆ ಕೊಡಲಾರಂಭಿಸಿತ್ತು …. ತಾಯಿಗೆ ಪತ್ರ ಬರೆದು ಹಿಂತಿರುಗಿ ಬರುವುದಾಗಿ ಒತ್ತಾಯಿಸುತ್ತಿದ್ದರು. ಮನೆಯಲ್ಲಿ ಇದ್ದಾಗ ಕೂಡ ಪ್ರಭುರಾಜರಿಗೆ ತಾಯಿಯವರು  ಅವನ ಸಮೀಪದಲ್ಲಿ ಇದ್ದರೆ ಮಾತ್ರ ಮನಸ್ಸಿಗೆ ಶಾಂತಿ….ತಾಯಿ ಕಣ್ಣೆದುರಿನಿಂದ ಸ್ವಲ್ಪ ದೂರವಾದರೂ ಅವನ ಹೃದಯ ಖಾಲಿಯಾಗಿಬಿಡುತ್ತಿತ್ತು. ಇನ್ನು ದೂರದ ಊರಲ್ಲಿ ಇದ್ದರೆ ಕೇಳಬೇಕೆ ಅವರ ಸ್ಥಿತಿ ಹೇಳಲಾಗಿತ್ತುಶಾಲೆಯಲ್ಲಿ ಕುಳಿತಿದ್ದರು ಪ್ರಭುರಾಜ್ ಮನಸ್ಸು ಅಲ್ಲಿ ನೆಲಸಲೇ ಇಲ್ಲ. ಸುತ್ತಲೂ ವಿದ್ಯಾರ್ಥಿಗಳು ಕುಳಿತು ಶಿಕ್ಷಕರು ಪಾಠ ಮಾಡುತ್ತಿದ್ದರೆ ಅವನ ಕಿವಿಯಲ್ಲಿ ಕೇಳಿಸುತ್ತಿದ್ದದ್ದು ತಾಯಿಯ ಧ್ವನಿಯೇ. ಊಟಕ್ಕೆ ಕೂತರೂ ತಾಯಿಯ ಕೈತುತ್ತಿನ ನೆನಪು, ರಾತ್ರಿ ಮಲಗಿದರೂ ತಾಯಿಯ ಮುಖವೇ ಕಣ್ಣಮುಂದೆ ತೇಲುತ್ತಿತ್ತು. ದಿನದಿಂದ ದಿನಕ್ಕೆ ತಾಯಿಯ ನೆನಪು ಅವನ ಮನಸ್ಸನ್ನು ಕಾಡಲಾರಂಭಿಸಿತು …..!!ಪ್ರಿಯ ಓದುಗರೆಇದೆಲ್ಲಾ ಏನೋ ನಾನು ಅತಿಶೋಯುಕ್ತಿಯಾಗಿ ಬರೆಯುತ್ತಿದ್ದೇನೆ ಅಂತ ಏನು ತಿಳಿಯಬೇಡಿ…. ಪ್ರಭು ರಾಜರ ತಾಯಿಯ ಮೇಲಿದ್ದ ಅಗಾಧವಾದ ಪ್ರೀತಿ ಯಾವದಕ್ಕೂ ಸಾಟಿಯಾಗದು….!!!!ಏನು ಹೇಳಿದರೂ ತಾಯಿಯು ಯಾವುದಕ್ಕೂ ಒಪ್ಪದಾದಾಗ ಕೊನೆಗೆ ತಾಳಲಾರದೆ ತಾಯಿಗೆ ಪತ್ರ ಬರೆದನು.“ಅವ್ವಾ… ನನಗೆ ಇಲ್ಲಿ ಇರಲು ಆಗುತ್ತಿಲ್ಲ. ನಿಮ್ಮನ್ನು ಬಿಟ್ಟು ಒಂದು ಕ್ಷಣವೂ ಇರಲಾಗುತ್ತಿಲ್ಲ. ನಾನು ಹಿಂದಿರುಗಿ ಬರುತ್ತೇನೆ. ಇಲ್ಲವಾದರೆ ಇಲ್ಲಿಯೇ ಗುಡ್ಡು ಪರ್ವತಗಳನ್ನು ಏರಿ, ಬಿದ್ದು ಸಾಯ್ತೀನಿ…” ಎಂದು ಕಣ್ಣೀರಿನಿಂದ ಬರೆದ ಆ ಮಾತುಗಳಲ್ಲಿ ಮಗನ ಅತಿಯಾದ ಮಮತೆ ಮತ್ತು ಅಧೈರ್ಯ ಎರಡೂ ತುಂಬಿಕೊಂಡಿದ್ದವು.ಆ ಪತ್ರ ಓದಿದ ತಾಯಿಯವರು ಕ್ಷಣಕಾಲ ಮೌನವಾಗಿದ್ದರು. ಮಗನ ಪ್ರೀತಿಯ ತೀವ್ರತೆ ಅವರಿಗೆ ಗೊತ್ತಿತ್ತು. ಆದರೆ ಜೀವನವೆಂದರೆ *ಕೇವಲ ಭಾವನೆಗಳಿಗೆ ತಲೆಬಾಗುವುದಲ್ಲ, ಧೈರ್ಯದಿಂದ ಎದುರಿಸುವ ಪಥ ಎನ್ನುವರು…… *ಕಣ್ಣೊಳಗಿನ ಕ‌ಸ  |ಸಣ್ಣಾಗಿದ್ದರೆ ಏನುಕಣ್ಣು ಚುಚ್ಚಿ ನೀರು ಸುರಿವುದು- ಮಾಯೆಯುಸಣ್ಣಲ್ಲ ಕಣ್ಣಿನ ವಿಸ್ತಾರ ||* ಈ ರೀತಿಯ ಮನಸ್ಸಿನ ಪ್ರವೃತ್ತಿಯು ಚಿಕ್ಕದಲ್ಲ ಅನ್ನುವುದು ಅರ್ಥವಾಯಿತು ಹೀಗಾಗಿ ತಾಯಿಗೆ ಕಠಿಣವಾದರೂ ಜೀವನದ ಪಾಠವಾಗುವ ಉತ್ತರ ಬರೆದರು… *ಬಾಳಿನಲ್ಲಿ ಕೆಟ್ಟ |ಕೀಳತನಕ್ಕೆ ಜಾಗಎಳ್ಳಿನ ಮನೆಯಷ್ಟು ಕೊಡದಿರು- ನಿನ್ನಲ್ಲಿಒಳ್ಳೆತನದಿ  ಗಟ್ಟಿತನವು ಬೆಳೆಯಲಿ||* ಎನ್ನುತ….. ಹೀಗೆ ಬರೆದರು“ನನ್ನ ಹೊಟ್ಟೆಯಲ್ಲಿ ಹುಟ್ಟಿದವನು ಇಂಥ ಹೇಡಿಯೇ.. ಇಂಥ ಅಧೈರ್ಯ ಹೇಗೆ ಬಂತು? ಜೀವನದಲ್ಲಿ ಸಾಧನೆ ಮಾಡಲು ದೂರದ ಊರಿಗೆ ಹೋದರೆ ಕಷ್ಟಗಳು ಬರುತ್ತವೆ, ಏಕಾಂತ ಕಾಡುತ್ತದೆ. ಅದಕ್ಕೆ ಓಡಿ ಮನೆಗೆ ಬರಬೇಕೆಂದರೆ ಬದುಕಿನಲ್ಲಿ ಏನನ್ನೂ ಸಾಧಿಸಲಾಗದು. ಧೈರ್ಯವಾಗಿ ನಿಂತು ಹೋರಾಡಬೇಕು.‘ನಾನು ಅಲ್ಲೇ ಬಿದ್ದು ಸಾಯ್ತೀನಿ’ ಅಂತ ಹೇಳುವಷ್ಟು ದುರ್ಬಲನಾಗಿ ನನ್ನ ಮಗ ಹುಟ್ಟಿಲ್ಲ.ಸಾಯಬೇಕೆಂದರೆ ಅಲ್ಲೇ ಸಾಯಿ… ಆದರೆ ಓಡಿ ಬರುವ ಹೇಡಿತನದ ಮಾತು ಬೇಡ!” ಎಂದು ಕಡಾ ಖಂಡಿತವಾಗಿ ಪತ್ರವನ್ನು ಬರೆದರು. *ಹಿರಿಯರಲ್ಲಿ ಶ್ರದ್ಧೆ |ಸ್ಥಿರವಾಗಿ ಇರಲಿಹರಕೆ ಕೊಡುವವರು ನಿನಗೆ -ಈ ಮಾತುಪರಕಿಸಿ ನೋಡು ಬಾಳಲಿ ||*ಎನ್ನುವಂತೆ ತಾಯಿಯವರ ಆ ಮಾತುಗಳು ಪ್ರಭುರಾಜ್ ಹೃದಯಕ್ಕೆ ಮಿಂಚಿನಂತೆ ತಾಕಿದವು. ಮೊದಲಿಗೆ ಅವರ ಕಣ್ಣು ತುಂಬಿ ಬಂದರೂ, ತಾಯಿಯವರ ಮಾತಿನೊಳಗಿನ ಕಠೋರ ಪ್ರೀತಿಯನ್ನು ಅವರು ಅರ್ಥ ಮಾಡಿಕೊಂಡರು.ಆ ದಿನದಿಂದ ತನ್ನ ಕಲಿಕೆಯಲ್ಲಿ ಶ್ರದ್ಧೆಯಿಂದ ಓದಲಾರಂಭಿಸಿದರು ಮುಂದೆ ಎಲ್  ಎಲ್ ಬಿ…. ಕಲಿತು ವಕೀಲರಾದರು.. ಮುಂದೆ ದೊಡ್ಡ ರಾಜಕಾರಣಿ ಕೂಡ ಆದರು…ಮಮಕಾರದ ತಾಯಿಯಾಗಿ ಜೀವನದ ಬಿರುಗಾಳಿಯನ್ನು ಎದುರಿಸಲು ಮಕ್ಕಳ ಮನಸ್ಸನ್ನು ಉಕ್ಕಿನಂತೆ ಗಟ್ಟಿಗೊಳಿಸುವ ಗುರು ಕೂಡಾ ಆಗಿದ್ದರು. ಹೀಗೆ ಅತ್ಯಂತ ಧೈರ್ಯದಿಂದ ಆಸ್ತಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ. ಸಿದ್ದರಾಮನ ಅಪ್ಪಟ ಭಕ್ತಿಯಾಗಿ,  ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಹೊಂದಿದ ತಾಯಿಯವರು ಬಹಳ ಸುಭದ್ದವಾಗಿ ಭಧ್ಧತೆಯಿಂದ ತಾಯಿತನದ ಜವಾಬ್ದಾರಿಯನ್ನು, ಆಸ್ತಿಯ ಮಾಲೀಕತ್ವತೆಯನು ಹಾಗೂ ಜನ ಸೇವಕಿಯಾಗಿ ಕೆಲಸ ನಿರ್ವಹಿಸಲಾರಂಭಿಸಿದರು…. ಬಹಳ ಜನರು “ಹೆಂಗಸು ಒಬ್ಬಳೇ ಇಷ್ಟು ದೊಡ್ಡ ಜವಾಬ್ದಾರಿ ನಿಭಾಯಿಸಲಾರಳು” ಎಂದು ಮಾತಾಡಿದವರಿಗೆ ಉತ್ತರವಾಗಿ  ತಮ್ಮ ಬದುಕನ್ನು ಬದುಕಿ ತೋರಿಸಿದರು.ಅವರ ಜೀವನ ಒಂದು ಅಳಲಿನ ಕಥೆಯನು ಒರಸಿ ಅದು ತಾಯಿತನದ ಮಹಾಕಾವ್ಯವನು ಬರೆದರು. *ದುಃಖ ದುಮ್ಮಾನಗಳು |ಸಿಕ್ಕಿ ಒದ್ದಾಡದಿರುಸುಖ ಬಂದಿತ್ತೆಂದು ಹಿಗ್ಗದಿರು -ಮನವೇಸುಖ ದುಃಖ ಅರ್ಪಿಸು ಶಿವನಡಿಗೆ ||*ಎಂದು ಬಾಳನು ಆರಂಭಿಸಿದರು. ಸವಿತಾ ದೇಶಮುಖ್

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಶ್ರೇಷ್ಠ ಶಿವಯೋಗ ಸಾಧಕರು ಮಲೆ ಮಹದೇಶ್ವರ   ಹನ್ನೆರಡನೆಯ ಶತಮಾನದ ಶರಣರನ್ನು ಸಂತರನ್ನು ಹೊಂದಿರುವ ಕನ್ನಡದ ಈ ನೆಲದಲ್ಲಿ ಏಳು ಬೆಟ್ಟಗಳ ಮಲೆಯ ಮಹದೇಶ್ವರರು ಹುಟ್ಟಿ ಬರುತ್ತಾರೆ.  ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ಲಿಂಗಾಯತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ದಕ್ಷಿಣ ತುದಿಯ ಗಡಿ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿದೆ.  ಜನಪದ ಕಾವ್ಯಗಳು ಮತ್ತು ಸ್ಥಳ ಪುರಾಣಗಳ ಪ್ರಕಾರ, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ತಂದೆ ತಾಯಿಗಳ ವಿವರ   ತಂದೆ: ಚಂದ್ರಶೇಖರ ಮೂರ್ತಿ (ಕೆಲವು ಕಡೆ ಚಂದ್ರಶೇಖರ ಗುರುಗಳು ಎಂದೂ ಕರೆಯಲಾಗುತ್ತದೆ). ತಾಯಿ: ಉತ್ತರಾಜಮ್ಮ (ಕೆಲವು ಜನಪದ ಕಥೆಗಳ ಪ್ರಕಾರ ಇವರನ್ನು ಸುಗುಣಾದೇವಿ ಎಂದೂ ಗುರುತಿಸಲಾಗುತ್ತದೆ).ಹಿನ್ನೆಲೆ ಮತ್ತು ನಂಬಿಕೆಗಳು: ದೈವಿಕ ಜನನ: ಜನಪದ ಚರಿತ್ರೆಯ ಪ್ರಕಾರ, ಉತ್ತರಾಜಮ್ಮನಿಗೆ ದೀರ್ಘಕಾಲ ಮಕ್ಕಳಾಗದಿದ್ದಾಗ ಅವರು ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಭಕ್ತಿಗೆ ಮೆಚ್ಚಿದ ಶಿವನು ಅವಳ ಕನಸಿನಲ್ಲಿ ಬಂದು ಗಂಡು ಸಂತಾನದ ವರವನ್ನು ನೀಡುತ್ತಾನೆ. ಅದರಂತೆ ಜನಿಸಿದ ಬಾಲಕನೇ ಮುಂದೆ ‘ಮಹದೇಶ್ವರ’ರಾಗಿ ಪ್ರಸಿದ್ಧಿ ಪಡೆದರು ಎಂಬ ಪ್ರತೀತಿ ಇದೆ. *ಅವತಾರ ಪುರುಷ: ಮಹದೇಶ್ವರರು ಯಾವುದೇ ಸಾಮಾನ್ಯ ಮಾನವನಂತೆ ಜನಿಸದೆ, ಲೋಕ ಕಲ್ಯಾಣಕ್ಕಾಗಿ ಭೂಮಿಗೆ ಬಂದ ಶ್ರೇಷ್ಠ ಚಿಂತಕ ಅನುಭವಿ. ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ. ಅವರು ಸಣ್ಣ ವಯಸ್ಸಿನಲ್ಲೇ ಸಂಸಾರ ಮತ್ತು ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕ ಹಾದಿ ಹಿಡಿದರು.ಮಹದೇಶ್ವರ ಸ್ವಾಮಿಯ ಬಾಲ್ಯದ ಪವಾಡಗಳು ಅಥವಾ ಅವರು ಶ್ರೀಶೈಲದಿಂದ ಕರ್ನಾಟಕಕ್ಕೆ ಬಂದ ಇತಿಹಾಸದ ಬಗ್ಗೆ ಪುರಾಣ ಕಥನಗಳ ದಾಖಲೆಗಳಿವೆ. *ಹಿನ್ನೆಲೆ ಮತ್ತು ಸ್ಥಳ*  ಪುರಾಣಮಹದೇಶ್ವರ ಸ್ವಾಮಿ: 14-15ನೇ ಶತಮಾನದಲ್ಲಿ ಬಾಳಿ ಬದುಕಿದ ಪವಾಡ ಪುರುಷ ಹಾಗೂ ಶರಣ ಸಂಸ್ಕೃತಿಯ  ಸಂತ ಶ್ರೀ ಮಹದೇಶ್ವರರು ಸಾಕ್ಷಾತ್ ಶಿವನ ಅವತಾರ ಎಂದು ಅಲ್ಲಿನ ಜನಪದಿಗರು ನಂಬಿದ್ದಾರೆ. *ತಪೋಭೂಮಿ ಮತ್ತು ಮುಕ್ತಿ:*  ಮಹದೇಶ್ವರರು ಈ ಬೆಟ್ಟಗಳಲ್ಲಿ ತಪಸ್ಸು ಆಚರಿಸಿ, ಭಕ್ತರ ಕಷ್ಟಗಳನ್ನು ನಿವಾರಿಸಿ, ಕೊನೆಗೆ ಇಲ್ಲೇ ಲಿಂಗ ರೂಪದಲ್ಲಿ ಐಕ್ಯರಾದರು (ಸಮಾಧಿ ಹೊಂದಿದರು). ಹುಲಿ ವಾಹನ: ಜನಪದ ಕಾವ್ಯಗಳ ಪ್ರಕಾರ, ಬಾಲಯೋಗಿ ಮಹದೇಶ್ವರರು ಕಾಡಿನ ಹುಲಿಯನ್ನೇ ತಮ್ಮ ವಾಹನವಾಗಿಸಿಕೊಂಡು ಬೆಟ್ಟಗಳಲ್ಲಿ ಸಂಚರಿಸುತ್ತಿದ್ದರು.ಶ್ರವಣ ಸಂಹಾರ: ಈ ಭಾಗದಲ್ಲಿ ಜನರಿಗೆ ಹಿಂಸೆ ನೀಡುತ್ತಿದ್ದ ಕ್ರೂರ ರಾಜ ‘ಶ್ರವಣ’ನನ್ನು ಮಹದೇಶ್ವರರು ಸಂಹರಿಸಿ ಜನರನ್ನು ಮುಕ್ತಗೊಳಿಸಿದರು ಎಂಬ ಇತಿಹಾಸವಿದೆ. ಏಳು ಮಲೆಗಳು (ಬೆಟ್ಟಗಳು)ಮಲೆ ಮಹದೇಶ್ವರ ಕ್ಷೇತ್ರವು ಸಮುದ್ರ ಮಟ್ಟದಿಂದ ಸುಮಾರು 3,200 ಅಡಿ ಎತ್ತರದಲ್ಲಿದ್ದು, ದಟ್ಟವಾದ ಅರಣ್ಯದಿಂದ ಆವೃತವಾದ ಏಳು ಬೆಟ್ಟಗಳ ಸಾಲನ್ನು ಒಳಗೊಂಡಿದೆ: ಆನೆಮಲೆ ಜೇನುಮಲೆ ಕಾಡುಮಲೆ ಕಾನುಮಲೆ ಪೊನ್ನಾಚಿಮಲೆ ಪಾವಲಮಲೆ (ಪವಲಮಲೆ) ಪಚ್ಚೆಮಲೆ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳುಲಿಂಗ ರೂಪದ ದರ್ಶನ: ದೇವಸ್ಥಾನದ ಗರ್ಭಗುಡಿಯಲ್ಲಿ ಮಹದೇಶ್ವರರು ಸ್ವಯಂಭೂ ಲಿಂಗ ರೂಪದಲ್ಲಿ ನೆಲೆಸಿದ್ದಾರೆ. ಅಂತರಗಂಗೆ: ಬೆಟ್ಟದ ಸಮೀಪವಿರುವ ಒಂದು ಪವಿತ್ರ ನೀರಿನ ಸೆಲೆ. ಇಲ್ಲಿ ವರ್ಷದ ಯಾವುದೇ ಋತುವಿನಲ್ಲೂ ನೀರು ಬತ್ತುವುದಿಲ್ಲ. ಭಕ್ತರು ಇಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ದೊಡ್ಡ ನಂದಿ ವಿಗ್ರಹ: ದೇವಾಲಯದ ಆವರಣದಲ್ಲಿ ಶಿವನ ವಾಹನವಾದ ನಂದಿಯ ಬೃಹತ್ ಮೂರ್ತಿಯಿದೆ. ಜಾನಪದ ಕಾವ್ಯ: ಮಲೆ ಮಹದೇಶ್ವರ ಕಾವ್ಯ ಅಥವಾ ತಂಬೂರಿ ಶೈಲಿಯ ಗಾಯನವು ಕರ್ನಾಟಕದ ಪ್ರಸಿದ್ಧ ಜಾನಪದ ಪರಂಪರೆಯಾಗಿದೆ. ಭಕ್ತರು ಇಂದಿಗೂ ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತುತ್ತಾ ಮಾದಪ್ಪನ ಕಥೆಗಳನ್ನು ಹಾಡುತ್ತಾರೆ. ಕಾಡಿನ ಸೋಲಿಗರು ಮತ್ತು ಇತರೆ ಬುಡಕಟ್ಟಿನ ಜನರಿಗೆ ಲಿಂಗ ಸಂಸ್ಕಾರ ನೀಡಿ ಕಾಯಕ ದಾಸೋಹ ಗುರು ಲಿಂಗ ಜಂಗಮ ತತ್ವಗಳನ್ನು ಪರಿಚಯಿಸಿದ ಸಾವಿಲ್ಲದ ಶ್ರೇಷ್ಠ ಶಿವಯೋಗ ಸಾಧಕರು ಮತ್ತು ಶರಣರು. ಬಸವ ಪರಂಪರೆಯ ಶ್ರೇಷ್ಠ ಚಿಂತಕರ ಬದುಕಿನ ತಿರುಳನ್ನು ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ತಿರುಗಾಡಿ ಬಸವ ತತ್ವ ಅಧ್ಯಯನ ಶಿವಯೋಗ ಸಾಧನೆಯನ್ನು ಅಲ್ಲಿನ ಬುಡಕಟ್ಟು ಮುಂತಾದ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು. ________________________’ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ನಿಮ್ಮೊಂದಿಗೆ

ನಾಗರಾಜ್‌ ಹರಪನಹಳ್ಳಿ ಕವಿತೆ “ಭೂಮಿಗೆ ಆಕಳಿಕೆ ಸಮಯ”

ಕಾವ್ಯ ಸಂಗಾತಿ ನಾಗರಾಜ್‌ ಹರಪನಹಳ್ಳಿ “ಭೂಮಿಗೆ ಆಕಳಿಕೆ ಸಮಯ” ಸೀರೆ ಸೆರಗ ತಾಗಿದ ಗಾಳಿಪ್ರೇಮದ ನವಿರು ಹೊತ್ತುತಂತುಆಡಿದ  ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿಚಿತ್ರ ಬಿಡಿಸಿತುನೀನಿಡುವ ಪ್ರತಿ ಹೆಜ್ಜೆಯಲಿಕನಸು ಇಣುಕುತ್ತಿದೆ ಗೆಳತಿಮನಸುಗಳ ಅಗಣಿತ ತರಂಗಗಳುಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನೆನ್ನಲಿ ?*** ನಿನ್ನ ದನಿ ಕೇಳದ ಭೂಮಿಗೆಆಕಳಿಕೆ ಸಮಯಅದಕ್ಕೆ ಮಗ್ಗಲು ಬದಲಿಸುತ್ತಿದೆಮುಗಿಲಿಗೆ ದಿಗಿಲು ಬಡಿದಿದೆಎಲ್ಲಿ ಹೋದೆ ?ಗೆಜ್ಜೆ ಸದ್ದಿಗೆ ಅರಳುತ್ತಿದ್ದ ಹೂ ಸಹ ಮೌನವಾಗಿದೆ              ***                               ನಾನು ಸುಳಿದಾಡುವೆ  ಒಬ್ಬಳೇ ಇರುವೆ ಎಂದು ಭಾವಿಸಬೇಡಸುಳಿಯುವ ಗಾಳಿಯಲ್ಲಿಎರಡು ನಿಟ್ಟುಸಿರುಗಳಿವೆ ಅವು ಪ್ರೇಮದ ಪಲ್ಲವಿಗಳಾಗಿಬದಲಾಗಿ ಬಿಡಲಿಕಣ್ಣಲ್ಲಿ ನಕ್ಷತ್ರಗಳು ಹಾಡಲಿಕಾಲ್ಗೆಜ್ಜೆಗಳಲ್ಲಿ  ಏಳು ಸುತ್ತಿನ ಮಲ್ಲಿಗೆ ಅರಳಲಿ****ರುತುಗಳಿಗೆ ತಕ್ಕಂತೆಬಣ್ಣ ರೂಪ ಪಡೆಯುವ ಭೂಮಿಮನಸ್ಸಿನ ಏರಿಳಿತಕ್ಕೆ ತಕ್ಕಂತೆಬಣ್ಣಗಳ ಸೀರೆ ತೊಡುವ ಆಕೆಎಲ್ಲವೂ ಪ್ರಕೃತಿ ಕಲಿಸಿದ ಪಾಠಕ್ಕೆನಿಬ್ಬೆರಗಾಗುವುದು ಮಾತ್ರ ………**** ನೀನು ನಡೆದರೆಭೂಮಿ ಪಿಸುಗುಡುತ್ತದೆಮಣ್ಣ ಕಣ ಕಣವೂಜೀವಸೆಲೆಯಿಂದ ಪುಟಿದೇಳುತ್ತದೆ  ದಾರಿ ಪಕ್ಕದ ಗಿಡ ಮರಗಳುಕಣ್ಣು ಮಿಟುಕಿಸುತ್ತವೆಮುಂಗುರುಳ ಲಾಸ್ಯಕ್ಕೆಗಾಳಿ ರೋಮಾಂಚನಗೊಳ್ಳುತ್ತದೆ ನಾಗರಾಜ್ ಹರಪನಹಳ್ಳಿ

ನಾಗರಾಜ್‌ ಹರಪನಹಳ್ಳಿ ಕವಿತೆ “ಭೂಮಿಗೆ ಆಕಳಿಕೆ ಸಮಯ” Read Post »

ನಿಮ್ಮೊಂದಿಗೆ

ಎ ಎಸ್ ಮಕಾನದಾರ ಗದಗ ಅವರ “ಶಾಯಿರಿಗಳು”

ಕಾವ್ಯ ಸಂಗಾತಿ ಎ ಎಸ್ ಮಕಾನದಾರ ಗದಗ “ಶಾಯಿರಿಗಳು” ಶಾಯಿರಿಗಳುಧರ್ಮ ದೇವರ ಹೆಸರಿನ್ಯಾಗಹಿಡಿಬ್ಯಾಡ್ರಿ ಕೈಯಾಗ ಕಲ್ಲು ಕಲ್ಲು ಮಣ್ಣಿನ್ಯಾಗಹುಟ್ಟಿಲ್ಲ ದೇವರೆಲ್ಲೂ ***ಪ್ರೀತಿ ಅನ್ನೂ ದೇವರಮುಂದಯಾವ ದೇವರೂ ದೊಡ್ಡವಲ್ಲ ಸತ್ಯ ಅನ್ನೂ ತತ್ವದ ಮುಂದಯಾವ ಗ್ರಂಥವೂ ದೊಡ್ಡದಲ್ಲ***ಉಸಿರಾಡುವವರು ಜೀವಂತಅದಾರಂತ ಎನ್ ಗ್ಯಾರಂಟಿಸತ್ತವರಲ್ಲಿ ಕೆಲವರುಇನ್ನೂ ಜೀವಂತ ಅದಾರಲ್ಲಇದಕೆ ನೀ ಏನಂತೀ*** ಎ ಎಸ್ ಮಕಾನದಾರ ಗದಗ

ಎ ಎಸ್ ಮಕಾನದಾರ ಗದಗ ಅವರ “ಶಾಯಿರಿಗಳು” Read Post »

ಕಾವ್ಯಯಾನ

ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು”

ಕಾವ್ಯ ಸಂಗಾತಿ ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು” ಯುಗಗಳು ಉರುಳಿದರೂ ಮರೆಯದ ಆಸರೆ,ಅಮ್ಮನ ಸೀರೆಯ ಆ ಒಂದು ಸೆರಗು;ಅದರೊಳು ಅಡಗಿತ್ತು ಜಗದೊಳಗಿನ ಮಮತೆ,ಕಣ್ಣೀರ ಒರೆಸುತ್ತಿದ್ದ ದಿವ್ಯ ಬೆರಗು. ಬಿಸಿ ಪಾತ್ರೆಗೆ ಹಿಡಿಕೆಯಾಗಿದ್ದ ಆ ತುದಿ,ಮಗುವಿನ ಮುಖದ ಮಸಿ ತೊಳೆಯುವ ನದಿ;ನಾಚಿಕೆಗೆ ಅಡಗುದಾಣ, ಚಳಿಗೆ ಹೊದಿಕೆ,ಅಮ್ಮನ ಸೆರಗೊಂದೇ ಬಾಳಿನ ಅಸ್ತಿತ್ವದ ನಂಬಿಕೆ. ಗಂಟು ಹಾಕಿದರೆ ಕಳೆದುದ ಕರುಣಿಸುವ ಮಾಯೆ,ಕಾಸು ಬಚ್ಚಿಟ್ಟ ಚಲಿಸುವ ಬ್ಯಾಂಕಿನ ಛಾಯೆ;ಸುಡುವ ಕಣ್ಣಿಗೆ ಉಸಿರಿನ ಬಿಸಿ ಒತ್ತುವ ಸಾಂತ್ವನ,ಆ ಸೆರಗಿನ ನೆರಳಲ್ಲೇ ಅರಳಿತ್ತು ಧನ್ಯ ಬಾಲ್ಯದ ಜಗತ್ತಿನ ಪಯಣ. ಆದರೆ… ಕಾಲದ ಚಕ್ರ ಉರುಳಿದೆ ಇಂದು,ಉಡುಗೆ ತೊಡುಗೆಯ ರೂಪ ಬದಲಾಗಿದೆ ಅಂದು;ಜೀನ್ಸಿನ ಜೇಬಲಿ ಜಾಗವಿಲ್ಲ ಆ ಸೆರಗಿಗೆ,ಆಧುನಿಕತೆಯ ಓಟದಲಿ ಕಳೆದುಹೋಯಿತೇ ಆ ನೆರಳಿಗೆ? ಬಟ್ಟೆಯ ಸೆರಗು ಇಲ್ಲದಿರಬಹುದು ಜೀನ್ಸಿನ ಅಂಚಿನಲ್ಲಿ,ಆದರೆ ಅಮ್ಮನ ಮಮತೆ ಎಂದೂ ಕಮ್ಮಿಯಾಗದು ನೆನಪಿನಲ್ಲಿ;ಸೆರಗಿನ ಗಂಟಿನ ಹಣವೀಗ ಬ್ಯಾಂಕಿನ ಖಾತೆಯಾಗಿದೆ,ಕಣ್ಣೀರ ಒರೆಸುತ್ತಿದ್ದ ಕೈಗಳು ಈಗ ಹೆಗಲಿಗೆ ಹೆಗಲು ನೀಡಿದೆ. ರೂಪ ಬದಲಾದರೂ ಕರುಳಿನ ಕುಡಿ ಪ್ರೀತಿ ಬದಲಾಗದು,ಅಮ್ಮನ ಅಪ್ಪುಗೆಯ ಬೆಚ್ಚನೆಯ ಆಶ್ರಯ ಎಂದೂ ಮುಗಿಯದು;ಸೀರೆಯ ಸೆರಗಿಗೆ ತಲೆಬಾಗುತ್ತಲೇ ಇಂದಿನ ತಾಯ್ತನವನ್ನೂ ಗೌರವಿಸೋಣ,ಯುಗ ಯಾವುದೇ ಆದರೂ ಅಮ್ಮನ ಪ್ರೀತಿಯೇ ಜಗದ ಶಕ್ತಿ ಎನ್ನೋಣ. ಸುಮಲತಾ ಗಡಿಯಪ್ಪನವರ

ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು” Read Post »

You cannot copy content of this page

Scroll to Top