ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ಗೊರೂರು ಶಿವೇಶ್

ವ್ಯಕ್ತಿ ಸಂಗಾತಿ ಗೊರೂರು ಶಿವೇಶ್ “ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ನನ್ನ ಕಾಲಘಟ್ಟದ ಯಾರೇ ನಮ್ಮೂರಿನ ರಸಿಕರನ್ನು ಚಿತ್ರಿಸಲು ಹೊರಟರೆ, ಅದರಲ್ಲಿ ಮರೆಯದೆ ದಾಖಲು ಮಾಡಬೇಕಾದ ಪಾತ್ರ ಯಾಕೂಬ್ ನದು. ಗೋರೂರು ರಾಮಸ್ವಾಮಿ ಅಯ್ಯಂಗಾರ್ ರು ತಮ್ಮ ನಮ್ಮೂರಿನ ರಸಿಕರು ಕೃತಿಯಲ್ಲಿ ಚಿತ್ರಿಸಿದ ಶಾಲು ಸಾಬಿ ಪಾತ್ರವು ತನ್ನ ಮುತ್ತಜ್ಜನೆಂದು ಹೇಳಿಕೊಳ್ಳುವ ಯಾಕೂಬ್ ಗುಣದಲ್ಲೂ ಅವರನೇ ನೆನಪಿಸುತ್ತಾನೆ . ಈಗ ಹಾಸನದಲ್ಲಿ ನೆಲೆಸಿರುವ ಆತ ನಮ್ಮೂರಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳ ಜೊತೆಗೆ ಊರಿನ ರಥೋತ್ಸವ ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾನೆ. ಹಾಸನದಲ್ಲಿ ನಡೆಯುವ ಯಾವುದೇ ಸಾಹಿತ್ಯ ಕಾರ್ಯಕ್ರಮ ನಾಟಕಗಳಲ್ಲಿ ಕಾಣಸಿಗುತ್ತಾನೆ ಕಳೆದ 50 ವರ್ಷಗಳ ಇಡೀ ಗೊರೂರಿನ ಇತಿಹಾಸವನ್ನು ದಾಖಲು ಮಾಡುವ ಸಾಮರ್ಥ್ಯ ಇರುವ ಆತನಿಗೆ ನಮ್ಮೂರಿನ ಮನೆಮನೆ ಕಥೆಗಳು ಗೊತ್ತು. ಅಷ್ಟೇ ಏಕೆ ಹಾಸನದ ಪ್ರಮುಖ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಘಟನೆಗಳನ್ನು ಆತ ಹೇಳಬಲ್ಲ. ಯಾಕೂಬ್ ಗೂ ನನ್ನ ತಂದೆಗೂ ಒಂದು ರೀತಿಯ  ಪ್ರೇಮ ಕೋಪದ ಅನನ್ಯ ಸಂಬಂಧ. 1990ರ ಸುಮಾರಿಗೆ ಆರಂಭವಾದ ಸಾಕ್ಷರತಾ  ಆಂದೋಲನದಲ್ಲಿ ನನ್ನಣ್ಣನು ಹಾಗೂ ಯಾಕೂಬ್ ಇಬ್ಬರೂ ಧುಮುಕಿದ  ಸಂದರ್ಭ. ಜಿಲ್ಲಾ ಕೇಂದ್ರವಾದ ಹಾಸನಕ್ಕೆ ಪದೇಪದೇ ಹೋಗಬೇಕಾಗಿತ್ತು. ಹಾಸನದಿಂದ ನಮ್ಮೂರಿಗೆ ಬಸ್ಸಿನಲ್ಲಿ ಮಧ್ಯರಾತ್ರಿ ಬಂದು ಮನೆಯ ಬಾಗಿಲು ಬಡಿಯುತ್ತಿದ್ದ ಕಾರಣಕ್ಕೆ ತಂದೆ ಅವರಿಗೆ  ನನ್ನ ಅಣ್ಣನ ಮೇಲೆ ಕೋಪ. ಈ ಕೋಪವನ್ನು   ಜೊತೆಗಿರುತ್ತಿದ್ದ   ಯಾಕುಬ್ ಮೇಲೆ    ಆಗಾಗ್ಗೇ ತೀರಿಸಿಕೊಳ್ಳುತ್ತಿದ್ದರು. ಅವರು ಬೈದ ಬೈಗಳನೆಲ್ಲ  ನಾನು ಸಿಕ್ಕಾಗ ನನಗೆ  ನಿಮ್ಮ ತಂದೆ ಹೀಗೆಲ್ಲಾ ಬೈದ್ರು ಅಣ್ಣ ಎಂದು ಒಪ್ಪಿಸುತ್ತಿದ್ದ. ಆದರೆ   ಮಾರನೇ ದಿನವೇ ನನ್ನ ತಂದೆ  ಯಾಕೂಬ್ ಬಣ್ಣ ತರಲು ಹಾಸನಕ್ಕೆ ಹೋಗಲು ನಮ್ಮೂರಿನ ಬಸ್ ಸ್ಟ್ಯಾಂಡ್ ನ ಬಳಿ ಕಾಣಿಸುತ್ತಿದ್ದರು.  ಪ್ರತಿ ವರ್ಷದ ಜನವರಿ ತಿಂಗಳಲ್ಲಿ ಮಣ್ಣಿನ ಗೋಡೆ ಆದ್ದರಿಂದ ನೀರು ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಸುಣ್ಣ ಬಣ್ಣ ಮೊದಲಿಗೆ ಬೇಡ ಬೇಡ ಎಂದುಕೊಂಡರೂ ಜಾತ್ರೆ ಹತ್ತಿರ ಬಂದಂತೆ  ಸುಣ್ಣ ಬಣ್ಣ ಆಗಲೇಬೇಕೆಂದು ಬೇಕೆಂದು ನಿರ್ಧರಿಸಿದ ನಮ್ಮ ತಂದೆ ಅದಕ್ಕಾಗಿ ಯಾಕೋಬನನ್ನು ನಿಯೋಜಿಸಿದ ನಂತರ 3- 4 ದಿನ ಮನೆಯಲ್ಲಿ ಬಣ್ಣ ದೇ ಸಡಗರ. ಪಾತ್ರೆಗಳನ್ನೆಲ್ಲ ಹಿತ್ತಲಿಗೆ ಸಾಮಾನುಗಳನ್ನೆಲ್ಲ  ರೂಮ್ ನ ಮಧ್ಯಕ್ಕೆ ಜೋಡಿಸಿ ಅದರ ಮೇಲೆ ಚಾಪೆ ಮುಚ್ಚಿ ಬಣ್ಣ ಹೊಡೆಯುವ ಪ್ರಕ್ರಿಯೆ ಆರಂಭವಾಗುತ್ತಿತ್ತು .ಬಣ್ಣ ನೆಲದ ಮೇಲೆ ಬಿದ್ದಾಗಲಿಲ್ಲ ತಾಯಿ  ಗೊಣಗಲು ಒಮ್ಮೊಮ್ಮೆ ಕೂಗಾಡಲು ಆರಂಭಿಸಿದೊಡನೆ ತಟ್ಟನೆ ಬಣ್ಣ ಬಳಿಯುವುದನ್ನು ನಿಲ್ಲಿಸಿ ಕೆಳಗೆ  ಹಾರಿ ಟರ್ಪೆಂಟೇನನ್ನು ಹಾಕಿ ನೆಲ ಉಜ್ಜಿ ಸರಿ ಆಯ್ತಾ ಅಕ್ಕ ಎಂದು ಸಮಾಧಾನಿಸುತ್ತಿದ್ದ . ನನಗೆ ಅವನ ಕುರಿತು ಗಮನ ಸೆಳೆಯುತ್ತಿದ್ದದ್ದು ಸದಾ  ಆತನ ಕೈಯಲ್ಲಿರುತ್ತಿದ್ದ ಒಂದಿಲ್ಲೊಂದು ಪತ್ರಿಕೆಗಳು. ಅದರಲ್ಲೂ  ಆ ವಾರದ ಲಂಕೇಶ್ ಪತ್ರಿಕೆ ಮತ್ತು  ಹಾಯ್ ಬೆಂಗಳೂರು ಕೈಯಲ್ಲಿ ಹಿಡಿದು ಮನೆಗೆ ಬಂದು ಮಂಚದ ಮೇಲೆ ಇರಿಸಿ ತನ್ನ ಕಾರ್ಯ ಆರಂಭಿಸುತ್ತಿದ್ದ .ಅವನು ತನ್ನ ಕೆಲಸ ಮುಗಿಸುವುದರೊಳಗೆ ನಾನು ಆ ಪತ್ರಿಕೆಗಳನ್ನು ಓದಿ ಮುಗಿಸುತ್ತಿದ್ದೇ. ಈ ರೀತಿಯ ಓದಿನ ಹವ್ಯಾಸ ಹೊಂದಿದ ಯಾಕೂಬನಿಗೆ ಬಹುತೇಕ ಪ್ರಮುಖ ಲೇಖಕರು ಅವರ ಕೃತಿಗಳು ಅವರ ಕೃತಿಗಳ ಸಿನಿಮಾಗಳು ಗೊತ್ತಿತ್ತು .ಅಷ್ಟೇ ಅಲ್ಲದೆ ಚಿತ್ರರಂಗದ ಅನೇಕ ಮಾಹಿತಿಗಳನ್ನು ಆತ ಹಂಚಿಕೊಳ್ಳುವುದರ ಜೊತೆಗೆ ಊರಿನ ಹಲವಾರು ರಸವತ್ತಾದ ಪ್ರಸಂಗಗಳನ್ನು  ಅವನದೇ ಹಾಸ್ಯಮಯ ದಾಟಿಯಲ್ಲಿ ಹೇಳುತ್ತಿದ್ದ. ಆತ ಹೇಳುತ್ತಿದ್ದ ಅನೇಕ ಪ್ರಸಂಗಗಳು ಮತ್ತೊಂದು ಪ್ರಬಂಧಕ್ಕೆ ವಸ್ತುವಾಗಬಲ್ಲದು.  ಬೇಸಿಗೆ ರಜೆ ಸಮಯಕ್ಕೆ ನಮ್ಮೂರಿನಲ್ಲಿ  ಸಮಯ ಕಳೆಯಲು  ಹೊಸದಾಗಿ ಆರಂಭವಾದ ಗ್ರಂಥಾಲಯಕ್ಕೆ ಹೋಗುತ್ತಿದ್ದೆ..ಆದರೆ ಅಲ್ಲಿನ ಗ್ರಂಥಪಾಲಕರು ಅದೇ ಸಮಯಕ್ಕೆ ಅರ್ಜೆ ಹಾಕಿ ತಮ್ಮ ಊರಿಗೆ ತೆರಳಿರುತ್ತಿದ್ದರು ಒಮ್ಮೆ ಈ ರೀತಿ ಗ್ರಂಥಾಲಯದ  ಹೋಗುತ್ತಿದ್ದಾಗ ಯಾಕೂಬ್ ಎದುರಾದ.  ನನ್ನನ್ನು ನೋಡಿ” ಅಣ್ಣ  ಆಶ್ ಮಟಾಶ್ ಇಲ್ಲ” ಎಂದ. ನನಗೆ ತಕ್ಷಣ ಗೊತ್ತಾಗಲಿಲ್ಲ. ನಂತರ ಅದರ ಅನುವಾದ  ಅವನೇ ಮಾಡಿದ.  ” ಆ್ಯಷ್ ಎಂದರೆ ಬೂದಿ ಮಟ್ಯಾಷ್ ಎಂದರೆ ಹಾಳು” ಗ್ರಂಥಪಾಲಕರ ಹೆಸರು ಬೂದಿಹಾಳು ಎಂದಿದ್ದು, ಅದನ್ನು ಆ ರೀತಿ ಪ್ರಯೋಗಿಸುತ್ತಿದ್ದ. ಹಂಸಲೇಖರ ಹಾಸನಕ್ಕೆ ಬಂದ ಸಂದರ್ಭದಲ್ಲಿ ಇವನನ್ನು ಯಾಕುಬ್ ಎಂದು  ಪರಿಚಯಿಸಿದಾಗ ಕ್ಯಾ ಕೂಬ್  ಲಗತಿ ಹೋ ಹಾಡನ್ನು ಬದಲಿಸಿ ಯಾ ಕೂಬ್  ಲಗತಿ ಹೊ ಎಂದು  ಹಾಡಿದ್ದನ್ನು ಖುಷಿಯಿಂದ ನೆನೆಯುತ್ತಿರುತ್ತಾನೆ. 1984ರ ಸುಮಾರಿನಲ್ಲಿ ಗೊರೂರಿನಲ್ಲಿ ಗೊರೂರು  ರಾಮಸ್ವಾಮಿ ಅಯ್ಯಂಗಾರ್ ಮತ್ತು ವೀರೇಂದ್ರ ಹೆಗಡೆಯವರಿಗೆ ಏರ್ಪಡಿಸಿದ್ದ ನಾಗರೀಕ ಸನ್ಮಾನದ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಅರಕಲಗೂಡು ವರದರಾಜಲು ರವರಿಗೆ  ಪ್ರಥಮ ದರ್ಜೆ ಕಾಲೇಜಿಗೆ ಬೇಡಿಕೆ ಇಟ್ಟಾಗ ಸ್ಥಾಪಿತವಾದ ಎ ಎನ್ ವಿ ಕಾಲೇಜಿನ  ಮೊದಲ ಫಲಾನುಭವಿ ಯಾಕೋಬನು ಮುಂದೆ ಮಾಸ್ಟರ್ ಡಿಗ್ರಿಯನ್ನು ಪಡೆದ. ಆತನ ಸಹಪಾಠಿಗಳು ಈಗ ಉಪ ನಿರ್ದೇಶಕರಾಗಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಆದರೆ ತನ್ನ ವಿದ್ಯಾಭ್ಯಾಸದ ದಿನದಲ್ಲಿ ಬಣ್ಣದ ಬದುಕಿಗೆ ಬಿದ್ದ ಯಾಕೂಬ್ ತನ್ನ ಸಂಬಂಧಿಕರ ಜಿಎಎಸ್ ಟಾಕೀಸ್ ನಲ್ಲಿ  ಟಿಕೆಟ್ ವಿತರಕ ,ಗೇಟ್ ಕೀಪರ್, ಆಪರೇಟರ್ ಜೊತೆ ಜೊತೆಗೆ ಬೋರ್ಡ್ ಬರೆಯುವ ಹವ್ಯಾಸಕ್ಕೂ ಬಿದ್ದ ನಂತರ ಯಾಕೋ ಅಲ್ಲಿಯೇ ಸಂತೃಪ್ತನಾದ. ಕುವೆಂಪುರವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ವಿಶ್ವ ಮಾನವ ಸಂದೇಶವನ್ನು ನಮ್ಮೂರಿನ ಗ್ರಂಥಾಲಯಕ್ಕೆ ಉಚಿತವಾಗಿ ಬ್ಯಾನರ್ ಬೋರ್ಡನ್ನು ಕೊಟ್ಟಿದ್ದಲ್ಲದ ಸುತ್ತಲೂ ನಾಲ್ಕೈದು ಶಾಲೆಗಳಿಗೆ ಕೈಯಲ್ಲಿ ಬರೆದ ಉದ್ದನೆಯ ಫೋಲ್ಡಿಂಗ್ ಬ್ಲಾಕ್ ಬೋರ್ಡ್ ನಲ್ಲಿ ಬರೆದು ಕೊಟ್ಟಿದ್ದು ನೆನಪಿದೆ. ಕಳೆದ ವರ್ಷ ಜಹೊನಾ ಸ್ಮರಣೆಯ ಸಮಾರಂಭದಲ್ಲಿ ಅವರ ಮಗಳಾದ ಖ್ಯಾತ ಲೇಖಕಿ  ಜ ನಾ ತೇಜಶ್ರೀ  ಅವರು ಜಹೊನಾರು ತೀರಿಕೊಂಡ ಸಂದರ್ಭದಲ್ಲಿ  ಪಾರ್ಥಿವ ಶರೀರವನ್ನು ರಾತ್ರಿಯಿಡೀ ಎಚ್ಚರವಾಗಿ ಕುಳಿತು ನೋಡಿಕೊಂಡದ್ದನ್ನು ನೆನಪಿಸಿಕೊಂಡರು.  ಆ ಸಂದರ್ಭದಲ್ಲಿ ಸಾಕ್ಷರತಾ  ಆಂದೋಲನದ ಸಮಯದಲ್ಲಿ ಹಾರನ ಹಳ್ಳಿಯಲ್ಲಿ ಗೋಡೆ ಬರಹವನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಆತನನ್ನು ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಕೂರಿಸಿದ ಪ್ರಸಂಗವನ್ನು ನನ್ನೊಂದಿಗೆ ಹಂಚಿಕೊಂಡ ಯಾಕೂಬ್ ಆಗ ಸಾಕ್ಷರತಾ ಸಮಿತಿಯ ಅಧ್ಯಕ್ಷರಾಗಿದ್ದ ಜಹೊನಾರವರು ಅಲ್ಲಿಗೆ ಬಂದು ಬಿಡಿಸಿಕೊಂಡ ಘಟನೆಯನ್ನು ನೆನಪಿಸಿಕೊಂಡ. ಕಳೆದ ವರ್ಷ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವನದೇ ಗೋಡೆ ಬರಹ . ಇವನು ಬರೆಯುವ ಗೋಡೆ ಬರಹಕ್ಕೆ ಯಾವುದೇ ಸಂಭಾವನೆ ಪಡೆಯುವುದಿಲ್ಲ.ಈಗಲೂ  ರಾಜ್ಯ ,ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ  ಆಯ ಊರುಗಳಿಗೆ ಹೋಗಿ ಸಾಹಿತ್ಯ ಸಮ್ಮೇಳನದ ದಿನಾಂಕಗಳ ಜೊತೆಗೆ ಲೇಖಕರ ಪ್ರಸಿದ್ಧ ನುಡಿಗಳನ್ನು ದಾಖಲಿಸುವ ಕೆಲಸವನ್ನು ಮುಂದುವರಿಸಿಕೊಂಡು ಬಂದಿರುವ ಯಾಕೂಬ್   ನಮ್ಮೂರಿನ ಅನನ್ಯ ಪ್ರತಿಭೆ. ಗೊರೂರು ಶಿವೇಶ್

“ಯಾಕೂಬ್ ಅಲಿಖಾನ್ ಎಂಬ ನಮ್ಮೂರಿನ ರಸಿಕ ಕಲಾವಿದ ಕನ್ನಡಾಭಿಮಾನಿ” ಗೊರೂರು ಶಿವೇಶ್ Read Post »

ಕಾವ್ಯಯಾನ

ಶಿವಕುಮಾರ ಕೋಡಿಹಾಳ ಅವರ ಕವಿತೆ “ಮೃಗಶಿರಾ ಮಳೆ”

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ “ಮೃಗಶಿರಾ ಮಳೆ” ಬಿಸಿಲ ಬೇಗೆಗೆ ಬಸವಳಿದಭೂರಮೆಯ ತಂಪುಗೊಳಿಸಲುಇಳೆಗೆ ಸುರಿಯಿತಿಂದುಮೃಗಶಿರಾ ಮಳೆಧರಣಿದೇವಿಯತಾಪ ನೀಗಿಸಲು ಕಣ್ಣೋಟ ಹರಿಸಿದೆಡೆಹಸಿರಿನ ವೈಭವಮುನ್ನೋಟ ವಿಹರಿಸಿದೊಡೆಆಹ್ಲಾದದ ಸೂರಭನಿಸರ್ಗ ಚೆಲುವಿನಅಮೃತಪಾವನಈ ಮೃಗಶಿರಾ ಮಳೆ ಕಾದ ನೆಲವ ತಂಪಾಗಿಸಿದಆ ವರುಣದೇವಹಸಿದೊಡಲ ಬರ ನೀಗಿಸಿದಈ ಅನ್ನದೇವಭಾವ ಸಮಾಧಿಯಸಿಂಧೂರಈ ಮೃಗಶಿರಾ ಮಳೆ ಕಪ್ಪೆಗಳ ವಟವಟ ನಿನಾದಚಿಟ್ಟೆಗಳ ಚಿಲಿಪಿಲಿ ನಾದಗುಂಯ್ ಗುಡುವ ಸೊಳ್ಳೆಗಳಮಧುರಾಯನ ಮೈಳೈಸಿತೇಳ್ಈ ಮಳೆಯ ಆರ್ಭಟದಿಂ ಮಳೆಯಿಂದ ಇಳೆಕಾಣುತಿದೆ ಬೆಳೆಮನದಿಂದ ಕಲ್ಮಶವ ಕಳೆಇದೇ ಬಾಳಿಗೆ ಚಿತ್ಕಳೆಬೆಳಗುತಿದೆ ಬಾಳುಸುಖದ ಕುರುಹು ಕೇಳು ಶಿವಕುಮಾರ ಕೋಡಿಹಾಳ      

ಶಿವಕುಮಾರ ಕೋಡಿಹಾಳ ಅವರ ಕವಿತೆ “ಮೃಗಶಿರಾ ಮಳೆ” Read Post »

ಕಾವ್ಯಯಾನ

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಕೊಳ್ಳುವವರಿಲ್ಲ…….”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಕೊಳ್ಳುವವರಿಲ್ಲ…….” ಜೀವನ ನಾವು ಅಂದುಕೊಂಡತಲ್ಲಅಂದುಕೊಂಡಿದ್ದೆಲ್ಲ ಜೀವನವಲ್ಲಮೇಲೊಬ್ಬನ ಹಣೆಬರಹ ತಿಳಿಯಲ್ಲಬದುಕಿನ ಏರಿಳಿತ ಎಂದೂ ಅರಿವಿಲ್ಲ ಜಗವೇ ಒಂದು ನಾಟಕ ರಂಗಬಾಳಲ್ಲಿ ಇರಲಿ ಒಳ್ಳೆಯವರ ಸಂಗಅರಿಯದೆ ಬಾಳಿದರೆ ಬದುಕು ಭಂಗತಿಳಿಯದಿದ್ದರೆ ಇಂಗು ತಿಂದ ಮಂಗ ಬದುಕಿನ ಸಂತೆಯಲಿ ಬಿಕರಿಗಿದೆ ಕನಸು ಮತ್ತು ಚಿಂತೆಕೊಳ್ಳುವವರಿಲ್ಲ ನೋವುಗಳ ಸಾಲಿನ ಕಂತೆತುಂಬಿಹುದು ಬಾಳಲಿ ಸುಖ ದುಃಖದ ಬೊಂತೆಎಲ್ಲರು ನನ್ನವರೆಂಬ ಸುಳ್ಳು ಭ್ರಮೆಯಂತೆ ಜಗದಿ  ಅರಿಯಬೇಕು ಬಂದ ಕಾರಣಮಾಡಬೇಕು ಏಳಿಗೆಗೆ ಶ್ರಮಿಸಿದವರ ಸ್ಮರಣಸವಿಯುತ್ತಿರು ಸುಂದರ ನೆನಪುಗಳ ತೋರಣಬರೆದಿಹನು ಎಲ್ಲರಿಗೂ ಒಂದು ದಿನ ಮರಣ.  ಲತಾ ಎ ಆರ್ ಬಾಳೆಹೊನ್ನೂರು

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ”ಕೊಳ್ಳುವವರಿಲ್ಲ…….” Read Post »

ಪುಸ್ತಕ ಸಂಗಾತಿ

ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ”ಹರಿನರಸಿಂಹ ಉಪಾಧ್ಯಾಯ ಶಂಭೂರು

ಪುಸ್ತಕ ಸಂಗಾತಿ ಹರಿನರಸಿಂಹ ಉಪಾಧ್ಯಾಯ ಶಂಭೂರು ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ” ಅಂಬುಧಿಯ ಆಳಗಲ ಆಗಸದ ವಿಸ್ತಾರಕಾವ್ಯ ಕನ್ನಿಕೆ ಚೆಲುವ ಅಳೆಯಲುಂಟೇನು?ದೂರದೃಷ್ಟಿಯ ಬೀರಿ ಚಿತ್ತವನು ಹರಿಸಿದೊಡೆಜಗವೊಂದು ಹಿಡಿ ತಾನೆ? ಚಕ್ರಪಾಣಿ || ಸಾಗರದ ಆಳ ಅಗಲ ಅಳೆದಷ್ಟೂ ಅಗಾಧ, ಆಗಸವನ್ನು ಶೋಧಿಸಿದಷ್ಟೂ ವಿಸ್ತಾರಗೊಳ್ಳುವಂತೆ ಸಾಹಿತ್ಯದಲ್ಲಿ ಕಾವ್ಯ ಕನ್ನಿಕೆಯ ಚೆಲುವನ್ನು ಬಣ್ಣಿಸಲು ಸಾಧ್ಯವಿಲ್ಲ. ದೂರದೃಷ್ಟಿಯಿಂದ ತನ್ನ ಚಿತ್ತವನ್ನು ಅತ್ತ ಹರಿಸಿದ್ದೇ ಆದರೆ ಆಗ ಅವೆಲ್ಲವೂ ಹಿಡಿ ಗಾತ್ರದಂತೆ ಭಾಸವಾಗದೆ ಇರದು. ಆದರೆ ಅದಕ್ಕೆ ಉದಾತ್ತತೆಯ ಗುಣ ನಮ್ಮಲ್ಲಿರಬೇಕು ಎಂಬ ಸಾರಾಂಶ ಹೊಂದಿರುವ ಮೇಲಿನ ರಚನೆ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲ ರವರ ಚೋಕಾ ಸಾಹಿತ್ಯ ಪ್ರಕಾರವನ್ನು ಕಂಡಾಗ ನನ್ನಲ್ಲಿ ಉದಿಸಿಬಂದದ್ದು ಸತ್ಯ. ಇತ್ತೀಚೆಗೆ ಅಂತರ್ಜಾಲದ ಪ್ರಭಾವದಿಂದ ನಮ್ಮ ಕನ್ನಡ ಸಾಹಿತ್ಯದ ಹಲವಾರು ಕವಿಮಿತ್ರರು ದೇಶೀಯ ಸಾಹಿತ್ಯ ಪ್ರಕಾರಗಳಲ್ಲದೆ ವಿದೇಶಿ ಸಾಹಿತ್ಯದಲ್ಲೂ ಆಸಕ್ತಿ ತೋರುತ್ತಿರುವುದು ಒಂದು ವಿಶೇಷವೇ ಸರಿ. ಸಾಹಿತ್ಯ ನಿಂತ ನೀರಲ್ಲ, ಸದಾ ಹರಿಯುವ ತೊರೆಯಾಗಿ ಇರುವಾಗ ಸಾಹಿತ್ಯ ತನ್ನನ್ನು ತಾನು ವಿಸ್ತಾರಗೊಳಿಸಿಕೊಂಡು ಹೊಸ ಹೊಸ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. ಮೊದಲೇ ಹೇಳಿದಂತೆ ಮೊದಲನೆಯದಾಗಿ ಅಂತರ್ಜಾಲ. ಹಾಗೆಯೇ ಕವಿಗಳ ಆಸಕ್ತಿ, ಹೊಸತನ್ನು ಕಲಿಯುವ, ಅದರ ಬಗ್ಗೆ ತಿಳಿಯುವ ಮತ್ತು ಅದನ್ನು ಅಳವಡಿಸಿಕೊಂಡು ತಮ್ಮ ಕೃಷಿಯನ್ನು ವಿಸ್ತರಿಸಿಕೊಳ್ಳುವ ಹಂಬಲವೇ ಇಂದು ಜಪಾನಿ ಸಾಹಿತ್ಯ, ಪರ್ಷಿಯನ್ ಸಾಹಿತ್ಯ ಪ್ರಕಾರಗಳು ಕನ್ನಡಕ್ಕೆ ಇಳಿದು ಬರಲು ಸಾಧ್ಯವಾಗಿದೆ. ಜಪಾನಿ ಸಾಹಿತ್ಯ ಪ್ರಕಾರಗಳಲ್ಲಿ ಹಾಯ್ಕು, ತಾಂಕಾ, ಚೋಕ ಇತ್ಯಾದಿ ಪುಟ್ಟ ಪ್ರಕಾರಗಳು ಹೆಚ್ಚಿನ ಅರ್ಥ ಕೊಡುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಇದು ನಮ್ಮವರನ್ನು ತನ್ನತ್ತ ಆಕರ್ಷಿಸಿ ಅದಕ್ಕೆ ಹೊಸ ರೂಪ ಕೊಡಲು ಪ್ರೇರಣೆ ನೀಡಿರುವುದರಿಂದ ಇಂದು ಕನ್ನಡದಲ್ಲಿಯೂ ಹಾಯ್ಕು, ಚೋಕಾಗಳು ಚಿಗುರೊಡೆಯುತ್ತಿವೆ. ಇವುಗಳು ಮೂಲದಲ್ಲಿ ಸಿಲಬಲ್ ಗಳಿಂದ ರಚನೆಗೊಂಡಿರುವುದಾದರೂ ಕನ್ನಡದಲ್ಲಿ ಅಕ್ಷರಗಳ ಸಂಖ್ಯೆಗಳ ಅಳತೆಯಿಂದ ರಚನೆಗೊಳ್ಳುತ್ತಿವೆ. ಹಾಗೆಯೇ ಚೋಕಾ ಪ್ರಕಾರದ ಕಾವ್ಯಾತ್ಮಕ ಅಳತೆಯು ೫/೭/೫/೭/೫/೭/೫/೭/೭ ಎಂದು ಪರಿಗಣಿಸಲ್ಪಟ್ಟಿದೆ. ಇದರಂತೆ ಡಾ. ಮಲ್ಲಿಕಾರ್ಜುನ ರವರು ತಮ್ಮ ಚೋಕಾ ರಚನೆಗಳನ್ನು ಒಳಗೊಂಡ ತಮ್ಮ ಕೃತಿಯನ್ನು   ಹೊರ ತರುವ ಈ ಸಂದರ್ಭದಲ್ಲಿ ಅವರ “ಚೋಕಾ- ಕಾವ್ಯಧಾರೆ” ಕೃತಿಯು ಕನ್ನಡ ಸಾಹಿತ್ಯದಲ್ಲಿ ಮೊದಲ ಚೋಕಾ ಕೃತಿ ಎಂಬ ಹಿರಿಮೆಗೆ ಪಾತ್ರವಾಗುತ್ತದೆ. ಶ್ರೀಯುತ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರು ವೃತ್ತಿಯಿಂದ ವ್ಯಾಪಾರಿಯಾಗಿದ್ದು ಕಲಬುರ್ಗಿಯ ಯಡ್ರಾಮಿ ಊರಿನವರು. ಸಣ್ಣವರಿದ್ದಾಗ ನಡೆದ ಒಂದು ಘಟನೆ ಇವರನ್ನು ಬರೆವಣಿಗೆ ಕೃಷಿಗೆ ಕರೆತಂದಿತು. ಆ ಘಟನೆಯಿಂದ ನೊಂದ ಇವರು ಸತ್ಯಾಂಶವನ್ನು ಜನತೆಗೆ ತಿಳಿಸುವ ಸಲುವಾಗಿ ಬರೆಯತೊಡಗಿದರು. ಮುಂದೆ ಇದು ಹವ್ಯಾಸವಾಗಿ ಬೆಳೆದು ನಿಂತಿತು. ಶ್ರೀಯುತರ ಹವ್ಯಾಸಕ್ಕೆ ಈಗ ಎರಡು ದಶಕಗಳ ಸಂಭ್ರಮ. ಕನ್ನಡ ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಿದ ಇವರನ್ನು ಗೌರವ ಡಾಕ್ಟರೇಟ್ ಕೂಡ ಅರಸಿ ಬಂದಿದೆ. ಅಲ್ಲದೆ ಚುಟುಕು ರತ್ನ, ಸಾಹಿತ್ಯ ಕೇಸರಿ, ಸ್ವರ್ಣಭೂಮಿ ಸೇವಾರತ್ನ, ಕಾವ್ಯ ಕಣಜ, ನುಡಿಚೇತನ ಮೊದಲಾದ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ. ಚೋಕಾ ಕಾವ್ಯಧಾರೆ ಕೃತಿಗೆ ಮುನ್ನುಡಿ ಬರೆದುಕೊಡಬೇಕು ಎಂದು ನನ್ನಲ್ಲಿ ಕೇಳಿಕೊಂಡಾಗ ಇದೊಂದು ಸಾಹಿತ್ಯ ಸೇವೆ ಎಂದು ಪರಿಗಣಿಸಿ ಶ್ರೀಯುತ ಮಲ್ಲಿಕಾರ್ಜುನ ರವರ ಈ ಕೃತಿಯ ಕುರಿತು ನನ್ನ ಒಂದಿನಿತು ಅನಿಸಿಕೆಗಳನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ. ವಸ್ತು ವಿಷಯಗಳಲ್ಲಿ ವೈವಿಧ್ಯತೆಯನ್ನು ತೋರುವ ಚೋಕಾಗಳು ಇಲ್ಲಿ ಏಕತಾನತೆಗೆ ಅವಕಾಶ ನೀಡದೆ ಓದುಗರನ್ನು ಎಲ್ಲ ದಿಕ್ಕಿನಿಂದಲೂ ಚಿಂತಿಸುವಂತೆ ಮಾಡುತ್ತವೆ ಆ ನಿಟ್ಟಿನಲ್ಲಿ ಲೇಖಕರ ಶ್ರಮ ಬಹುತೇಕ ಸಾರ್ಥಕವಾಗಿದೆ ಎಂದು ಮೊದಲೇ ಹೇಳಲು ಇಚ್ಛಿಸುತ್ತೇನೆ. ಗುರುಚರಣ ಎಂಬ ಚೋಕಾದಲ್ಲಿ… ಮುನಿದರೇನು/ ದೇವಗಣ; ಗುರುವು/ ಕಾಯುವವನು/ ಗುರುವೇ ಮುನಿದರೆ/ನರಮಾನವ/ ನಿನ್ನಾರು ಕಾಯುವರು/ಗುರುಚರಣ/ ಅನುದಿನ ಪೂಜಿಸು/ನೀನೇ ಶ್ರೇಷ್ಠನಾಗುವೆ// ಮೇಲಿನ ರಚನೆಯು ದೇವರು ಮುನಿದರೆ ಗುರುವು ಕಾಯಲು ಇದ್ದಾರೆ, ಆದರೆ ಗುರುವೇ ಮುನಿಸಿಕೊಂಡರೆ ಗುರಿ ತೋರುವವರು ಇಲ್ಲದೆ ನಿನ್ನನ್ನು ಕಾಪಾಡಲು ಯಾರೂ ಇರಲಾರರು. ಆದ್ದರಿಂದ ನಿತ್ಯ ಗುರುಚರಣ ಸೇವಿಸಿದಲ್ಲಿ ಶ್ರೇಷ್ಟನಾಗಬಹುದು, ವಿಶೇಷನಾಗಬಹುದು ಎಂಬ ಸುಂದರ ವಿಚಾರ ಇಲ್ಲಿ ತಿಳಿಸಿದ್ದಾರೆ. ಇದನ್ನೇ ಅಲ್ಲವೇ ದಾಸರು ಹೇಳಿದ್ದು, “ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕುತಿ” ಎಂದು. ಇನ್ನೊಂದು ರಚನೆ: ನಾ ಹೇಗೆ ಹೋರಾಡಲಿ…. ಅಂಧಕಾರವೇ/ ತುಂಬಿರೋ ಬದುಕಲ್ಲಿ/ ಹೊಂಬೆಳಕನ್ನು / ನಾನೆಲ್ಲಿ ಹುಡುಕಲಿ/ಸತ್ಯದ ಸಾವು/ ಸಂಭವಿಸಿರುವಾಗ/ಸದ್ಧರ್ಮಕ್ಕಾಗಿ/ ನಾ ಹೇಗೆ ಹೋರಾಡಲಿ/ಹೇಳು ನೀ ಸೃಷ್ಟಿಕರ್ತ // ಇಲ್ಲಿ ಬದುಕಿನ ತೊಳಲಾಟವನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಬದುಕಿನಲ್ಲಿ ಅಂಧಕಾರ ತುಂಬಿರುವಾಗ ಉಜ್ವಲವಾಗುವುದಾದರೂ ಹೇಗೆ? ಲೋಕದಲ್ಲಿ ಸತ್ಯಕ್ಕೆ ಜಯ ಸಿಗದೆ ಸುಳ್ಳು ಮೆರೆದಾಡುತ್ತಿದೆ. ಹೀಗಿರುವಾಗ ಧರ್ಮಕ್ಕಾಗಿ, ನ್ಯಾಯಕ್ಕಾಗಿ ಹೋರಾಡುವುದಾದರೂ ಹೇಗೆ? ಹೇ ಭಗವಂತ ನೀನೇ ಇದಕ್ಕೆ ಉತ್ತರಿಸಬೇಕು ಎಂಬ ಆರ್ತನಾದ ಇಲ್ಲಿ ವ್ಯಕ್ತವಾಗಿದೆ. ಮಾನವೀಯತೆ/ ಮಣ್ಣಲ್ಲಿ ಮಣ್ಣಾದಾಗ/ ಕರುಣೆಯೆಂಬ/ ಕಡಲು ಬತ್ತಿದಾಗ/ ಅಧರ್ಮಗಳು/ ಅಟ್ಟಹಾಸ ಗೈದಾಗ/ ಅಂತಿಮವಾಗಿ / ಸದ್ಧರ್ಮ ಸ್ಥಾಪನೆಗೆ/ಧರ್ಮಯುದ್ಧವೇ ಅಸ್ತ್ರ// ಭಗವದ್ಗೀತೆಯ ಸಾಲು ಇಲ್ಲಿ ನೆನಪಿಗೆ ಬರುತ್ತದೆ. ಧರ್ಮಗ್ಲಾನಿ ಉಂಟಾದಾಗ ಮತ್ತೆ ಧರ್ಮ ಸ್ಥಾಪನೆಗಾಗಿ ಭಗವಂತ ಅವಿರ್ಭವಿಸುತ್ತಾನೆ ಎಂಬ ಮಾತಿನಂತೆ ಲೋಕದಲ್ಲಿ ಮಾನವೀಯತೆ, ಕರುಣೆ ನಾಶವಾಗಿ ಅಧರ್ಮವೇ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಧರ್ಮ ಸ್ಥಾಪನೆಗೆ ಧರ್ಮಯುದ್ಧವೇ ಪ್ರಬಲವಾದ ಅಸ್ತ್ರ. ಅದನುಳಿದು ಬೇರೆ ಇಲ್ಲ ಎಂಬ ತೀರ್ಮಾನ ಇಲ್ಲಿ ವ್ಯಕ್ತವಾಗಿದೆ. ಬೆಳದಿಂಗಳ/ ಬೆಳ್ಳಿ ಬೆಳಕಿನಲ್ಲಿ/ ಅರಳಿ ನಿಂತ/ ಸುಕೋಮಲ ಪುಷ್ಪವೇ/ ಲಲಿತಾಂಗಿಯೇ/ ಏನೆಂದು ಬಣ್ಣಿಸಲಿ/ ಆಶಕ್ಯವಿದೆ/ ನಿನ್ನಂದಕೆ ಸಾಟಿಯೇ/ ಶಶಿ ಕರಗಿದನು// ಇಲ್ಲಿ ಕವಿಯ ಅಲಂಕಾರ ಭಾವ ವ್ಯಕ್ತವಾಗಿದೆ. ಒಂದು ಕಡೆಯಿಂದ ಬೆಳದಿಂಗಳ ಬೆಳಕಿನಲ್ಲಿ ಹೂವು ಸೊಗಸಾಗಿ ಅರಳಿ ನಿಂತ ಪರಿಯನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ ಎಂಬುದಾಗಿಯೂ ಮತ್ತೊಂದು ದೃಷ್ಟಿಯಿಂದ ಅದೇ ಬೆಳದಿಂಗಳ ಛಾಯೆಯಲ್ಲಿ ಸುಕೋಮಲೆಯಾದ ಹೆಣ್ಣು ಮೈ ತುಂಬಿ ನಿಂತಾಗ ಆ ಸೊಬಗಿಗೆ ಸೋತ ಗಂಡು ಆಕೆಯ ಸೌಂದರ್ಯವನ್ನು ಹೊಗಳಲು ಪದಗಳಿಗೆ ಪರದಾಡುವ ಸ್ಥಿತಿಯಲ್ಲಿ ಇದ್ದಾಗ, ತಾನೇನು, ಈ ಚೆಲುವಿಗೆ ಶಶಿಯೇ ಸೋತು ಕರಗಿದನು ಎಂದು ವರ್ಣಿಸುವ ಕಾವ್ಯಾತ್ಮಕ  ಪರಿ ಅತ್ಯಂತ ಸೊಗಸಾಗಿದೆ. ಸ್ತ್ರೀ ಅಂದರೇನು/ ಕೇವಲ ಅವಳೊಂದು/ ಹೆಣ್ಣಾಗಿಹಳೇ/ ಕೂಸುಗಳನ್ನು ಮಾತ್ರ/ ಹೆತ್ತು ಕೊಡುವ/ ಸಾಧನವಾಗಿಹಳೇ / ಕಾಮ ತೀರಿಸೋ/ ಭೋಗ ವಸ್ತುವೇ?; ಅಲ್ಲ/ ಜಗದ್ದಾತ್ರಿಯವಳು// ಹಿಂದಿನ ಚೋಕಾದಲ್ಲಿ ಹೆಣ್ಣಿನ ಸೌಂದರ್ಯವನ್ನು ಹೊಗಳಿದ ಕವಿಯು ಇಲ್ಲಿ ಹೆಣ್ಣಿನ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಸಮಾಜವು ಇಂದು ಯಾವ ರೀತಿ ಹೆಣ್ಣನ್ನು ನೋಡುತ್ತಿದೆ ಎನ್ನುವುದನ್ನು ಅರಿತು ಅದರ ವಿರುದ್ಧ ಧ್ವನಿ ಎತ್ತಿರುವುದನ್ನು ಇಲ್ಲಿ ಕಾಣಬಹುದು. ಆಕೆ ಕೇವಲ ಭೋಗವಸ್ತು ಎಂದು ತಿಳಿಯದೆ, ಅವಳೊಂದು ಶಕ್ತಿ, ಜಗದ್ಧಾತ್ರಿ ಎನ್ನುವುದನ್ನು ತಿಳಿದು ಅಕೆಯನ್ನು ಗೌರವದಿಂದ ಕಾಣುವ ದೃಷ್ಟಿ ಹೊಂದಬೇಕು ಎಂದು ಪ್ರತಿಪಾದಿಸಿದ್ದಾರೆ. ಇದು ಇಂದಿನ ದಿನಮಾನಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಇನ್ನು ಬೇರೆಯವರ ದುಡ್ಡು ತಿಂದು ಎಷ್ಟು ದಿನ ಸುಖವಾಗಿ ಇರಬಹುದು ಎನ್ನುವುದರ ಬಗ್ಗೆ ಹೀಗೆ ಹೇಳುತ್ತಾರೆ. ಪರ ದುಡ್ಡಲ್ಲಿ/ ಮೋಜು ಮಸ್ತಿಯ ಮಾಡಿ/ ತಮ್ಮ ಬೇಳೆಯ/ ಬೇಯಿಸಿಕೊಳ್ಳುವಂತ/ ನರಾಧಮರು/ ಜಗದ ತುಂಬೆಲ್ಲವೂ/ ತುಂಬಿರುವಾಗ / ಸುಜನರ ಏಳ್ಗೆಯು/ ಬುವಿಯಲ್ಲಿ ಆದೀತೇ// ಸ್ವಾರ್ಥವೇ ತುಂಬಿರುವ ಜನರು ಇಂದು ಸುಲಿಗೆ ಮೋಸ ವಂಚನೆಯಲ್ಲಿ ತೊಡಗಿರುವಾಗ ಅಂಥ ನರಾಧಮರು ತಮ್ಮ ಮೋಜು ಮಸ್ತಿಗಾಗಿ ಬೇರೆಯವರ ದುಡ್ಡು ತಿಂದು ಮೋಸ ಮಾಡುವುದನ್ನು ಕಾಣುತ್ತವೆ. ಇಂಥ ನೀಚರೇ ಎಲ್ಲೆಲ್ಲೂ ತುಂಬಿ ಹೋಗಿದ್ದಾರೆ. ಹೀಗಿರುವಾಗ ಲೋಕ ಹೇಗೆ ಉದ್ದಾರ ಆದೀತು ಎಂಬ ಕಳವಳ ಕವಿಯಲ್ಲಿ ಮಾತ್ರವಲ್ಲ , ನಮ್ಮಲ್ಲೂ ಮೂಡದೆ ಇರಲು ಸಾಧ್ಯವೇ ಹೇಳಿ. ದೇಶಪ್ರೇಮ ಇರದವನು ದೇಶಿಗನು ಆಗಲು ಸಾಧ್ಯವಿಲ್ಲ. ಹಾಗೆಯೇ ಇಲ್ಲೊಂದು ದೇಶಪ್ರೇಮ ಮೆರೆವ ಯೋಧರ ಕುರಿತಾದ ರಚನೆ ನೋಡೋಣ. ಭಾರತಾಂಬೆಯ / ಮುಕುಟದಿ ಶೌರ್ಯದಿ /ನಿಂತ ಯೋಧರು/ ಹಿಮವನ್ನೇ ಹಾಸಿಗೆ/ ಮಾಡಿಕೊಂಡರು/ ಕೊರೆವ ಚಳಿಯನ್ನೇ/ ಹೊದ್ದುಕೊಂಡರು / ಕೆಚ್ಚೆದೆಯಿಂದ ವೈರಿ/ ನಾಶಕ್ಕೆ ಕಾದಿಹರು// ಇಂದು ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ ಎಂದಾದರೆ ಅದು ಗಡಿಯಲ್ಲಿ ಕಾಯುವ ಯೋಧರ ಕೊಡುಗೆ. ನಾವು ಬೆಚ್ಚಗೆ ಮಲಗಿದ್ದರೆ ಅಲ್ಲಿ ಯೋಧರು ಹಿಮವನ್ನೇ ಹೊದ್ದುಕೊಂಡು ವೈರಿಗಳ ನುಸುಳುವಿಕೆಯನ್ನು ತಡೆಯಲು ಕಾಯುತ್ತಿದ್ದಾರೆ ಅಲ್ಲವೇ. ಅವರ ದೇಶ ಪ್ರೇಮ, ಸೇವಾ ನಿಷ್ಠೆ, ಕಾರ್ಯ ತತ್ಪರತೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಅಲ್ಲವೇ.. ಕವಿಯ ದೇಶಪ್ರೇಮ ಇಲ್ಲಿ ಉತ್ಕಟವಾಗಿದೆ. ಇಷ್ಟೇ ಅಲ್ಲದೆ ಕವಿಯ ಚಿತ್ತ ದಶದಿಕ್ಕುಗಳಿಗೂ ಹರಿದು, ದೃಷ್ಟಿಗೆ ಗೋಚರಿಸಿದ ಬಹಳಷ್ಟು ವಿಚಾರಗಳನ್ನು ತಮ್ಮ ಲೇಖನಿಯ ಮೂಲಕ ಇಳಿಸಿದ್ದಾರೆ. ಕರುನಾಡಿನ ಕುರಿತು, ಕನ್ನಡದ ಕುರಿತು ಬರೆಯದ ಕವಿ ಕನ್ನಡಿಗನು ಹೇಗಾದಾನು. ಅಂತೆಯೆ ಕನ್ನಡ ನಾಡು ನುಡಿಯ ಬಗ್ಗೆಯೂ ಇಲ್ಲಿ ನಾವು ನೋಡಬಹುದಾಗಿದೆ. ಇನ್ನು ಗುರುಗಳು, ಶರಣರು, ಮಹಾತ್ಮರ ಕುರಿತಾದ ಚೋಕಾಗಳು ಮನಸೆಳೆಯುತ್ತವೆ. ಭಾರತದ ನೆಲದಲ್ಲಿ ಅಧ್ಯಾತ್ಮಕ್ಕೆ ಮಹತ್ವದ ಸ್ಥಾನ ಇದೆ. ಅಂತೆಯೇ ಇಲ್ಲಿ ಕವಿಗಳ ಭಗವಂತನ ಕುರಿತು, ರಾಮನ ಕುರಿತು ಬರೆದ ರಚನೆಗಳು ಭಕ್ತಿ ಭಾವದಿಂದ ಓದುವಂತೆ ಮಾಡಿವೆ. ಕವಿಯಾದವನಿಗೆ ಪ್ರಕೃತಿ ನೀಡಿದಷ್ಟು ಪ್ರೋತ್ಸಾಹ ಮತ್ತೆಲ್ಲೂ ಸಿಗಲಾರದು. ಅಂದ ಮೇಲೆ ಪ್ರಕೃತಿ ಸೌಂದರ್ಯ ಇಲ್ಲೂ ನಳನಳಿಸಿದೆ, ಒಲವಿನ ಸುಧೆ ಹರಿಸಿದೆ. ಹಾಗೆಯೇ ಬದುಕಿನ ನೋವು ನಲಿವುಗಳು ಪ್ರತಿದ್ವನಿಸಿವೆ. ಆದರೆ ಇವೆಲ್ಲವುಗಳನ್ನು ಓದಿ ಮನನಮಾಡಿಕೊಳ್ಳುವ ಹೃದಯ ಇರಬೇಕು ಅಷ್ಟೇ. ಒಟ್ಟಿನಲ್ಲಿ “ಚೋಕಾ- ಕಾವ್ಯಧಾರೆ” ಕೃತಿಯು ತನ್ನ ಪ್ರತಿ ಪುಟದಲ್ಲೂ ಓದುಗನ ಹೃದಯಕ್ಕೆ ನಾಟುವಂತಹ ವಿಶಿಷ್ಟ ಜಪಾನಿ ಸಾಹಿತ್ಯದ ಕನ್ನಡ ಪ್ರಕಾರದಿಂದ ಪ್ರಕಾಶಿತಗೊಳ್ಳುತ್ತಿರುವುದು ಕನ್ನಡ ಸಾಹಿತ್ಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತೆ ಎನ್ನಬಹುದು. ಕವಿ ಡಾ. ಮಲ್ಲಿಕಾರ್ಜುನ ಎಸ್ ಅಲಮೇಲರವರ ಈ ಕೃತಿಯು ಓದುಗರ ಜ್ಞಾನದಾಹವನ್ನು ತಣಿಸಲಿ. ಕೃತಿಕಾರರಿಗೆ ಯಶಸ್ಸು ಕೀರ್ತಿ ಅರಸಿ ಬರಲಿ. ಮತ್ತಷ್ಟು ಅಧ್ಯಯನದೊಂದಿಗೆ ಬರೆವಣಿಗೆ ಮುಂದುವರೆಯುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಮನೆಮಾತಾಗಲಿ ಎಂದು ಹಾರೈಸುತ್ತೇನೆ. ಹರಿನರಸಿಂಹ ಉಪಾಧ್ಯಾಯ(ಕವಿಗಳು)ಶಂಭೂರು, ಬಂಟ್ವಾಳ ತಾಲ್ಲೂಕು. ದ.ಕ.ಜಿಲ್ಲೆ+೯೧ ೯೯೮೦೯೨೧೧೧೧

ಕನ್ನಡವನ್ನಪ್ಪಿದ ಜಪಾನಿ ಕಾವ್ಯ ಕನ್ನಿಕೆ “ಚೋಕಾ-ಕಾವ್ಯಧಾರೆ”ಹರಿನರಸಿಂಹ ಉಪಾಧ್ಯಾಯ ಶಂಭೂರು Read Post »

You cannot copy content of this page

Scroll to Top