ಅಂಕಣ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಪರಿಸರ ದಿನಾಚರಣೆ..
ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ


ಒಂದೆರಡು ದಿನಗಳ ಹಿಂದೆ ಪರಿಸರ ದಿನಾಚರಣೆಯಿದ್ದು ಇದನ್ನು ಕಡ್ಡಾಯವಾಗಿ ಆಚರಿಸಲೇಬೇಕು ಎಂಬ ಕಾರಣಕ್ಕಾಗಿ ಬಹುತೇಕ ಎಲ್ಲಾ ಸರಕಾರಿ, ಅರೆ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸಸಿಯನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.ಪತ್ರಿಕೆಯವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಹಸಿರು ಬಣ್ಣದ ಅಕ್ಷರಗಳಲ್ಲಿ ಪತ್ರಿಕೆಯನ್ನು ಪ್ರಿಂಟ್ ಮಾಡುವ ಮೂಲಕ ತಮ್ಮ ಪರಿಸರ ಪ್ರೇಮವನ್ನು ಮೆರೆದರು. ಇನ್ನು ಮಹಿಳಾಮಣಿಯರು ಹಸಿರು ರಂಗಿನ ದಿರಿಸುಗಳನ್ನು ಧರಿಸಿ ಪರಿಸರ ದಿನಾಚರಣೆಯನ್ನು ಆಚರಿಸಿ ಅದರ ಫೋಟೋ ತೆಗೆದು ತಮ್ಮ ವಾಟ್ಸಪ್ ಸ್ಟೇಟಸ್ ಗಳಲ್ಲಿ ಹಾಕಿಕೊಂಡು ಸಂಭ್ರಮಿಸಿದರು. ಎಲ್ಲವೂ ಚಂದ! ನಿಜ ಪರಿಸರ ದಿನಾಚರಣೆಯನ್ನು ಕಡ್ಡಾಯವಾಗಿ ಮಾಡಲೇಬೇಕು ಎಂಬ ಅನಿವಾರ್ಯತೆ ಇಲ್ಲದೆ ಹೋದರೆ ನಾವು ಪರಿಸರಕ್ಕೆ ಏನು ಕೊಟ್ಟಿದ್ದೇವೆ ಎಂಬುದರ ಕುರಿತು ಒಂದೈದು ನಿಮಿಷ ಮನದಲ್ಲೇ ಯೋಚಿಸಿದರೆ ಶೂನ್ಯ ಫಲಿತಾಂಶ ನಮ್ಮ ಮುಂದೆ ಕಾಣಬಹುದು.
ಯಾರನ್ನೂ ಹೀಯಾಳಿಸುವ, ತಮಾಷೆ ಮಾಡುವ ಅವರ ಕುರಿತು ನಿರ್ಣಾಯಾತ್ಮಕವಾಗಿ ಹೇಳಿಕೆ ಕೊಡುವ ಇಲ್ಲವೇ ಅವರ ಕ್ರಿಯೆಯನ್ನು ಹಂಗಿಸುವ ಉದ್ದೇಶ ನನಗಿಲ್ಲ…. ಆದರೂ ಕೆಲ ಸಂಗತಿಗಳನ್ನು ನಮ್ಮದೇ ನಿಲುಕಿನಲ್ಲಿ ನಾವು ವೈಯಕ್ತಿಕವಾಗಿ ಕೈಗೊಳ್ಳುವ ನೂರೆಂಟು ಸಾಧ್ಯತೆಗಳು ಇರುವಾಗ ಆ ನಿಟ್ಟಿನಲ್ಲಿ ನಾವು ಮುಂದುವರೆದರೆ ಪರಿಸರವನ್ನು ಇನ್ನಷ್ಟು ಸಮರ್ಪಕವಾಗಿ ಉಳಿಸಿಕೊಳ್ಳಬಹುದು ಎಂಬ ಆಶಯ ನನ್ನದು.
ಈಗಾಗಲೇ ಪರಿಸರ ವಿನಾಶದ ದುಷ್ಪರಿಣಾಮಗಳನ್ನು ನಾವು ನೋಡುತ್ತಿದ್ದೇವೆ . ಹಿತಕರವಾದ ಬೇಸಿಗೆ ನಮ್ಮ ಪಾಲಿಗೆ ದೂರ…. ಕುರಿಯುತ್ತಿರುವ ಝಳ, ನಮ್ಮನ್ನು ಆಹುತಿ ತೆಗೆದುಕೊಳ್ಳದಿದ್ದರೆ ಸಾಕು ಎಂಬಂತಹ ಬಿಸಿಲು ಒಂದೆಡೆ ಕಾಡುತ್ತಿದ್ದರೆ,, ಬೇಕಿರಲಿ ಬೇಡದೆ ಇರಲಿ ಧೋ ಎಂದು ಸುರಿಯುತ್ತಿರುವ ಅಕಾಲ ಮಳೆ ಅಲ್ಲಲ್ಲಿ ನೆರೆ ಹಾವಳಿಯಿಂದ ಬೆಳೆ ಮನೆಗಳನ್ನು ತನ್ನ ರುದ್ರ ನರ್ತನಕ್ಕೆ ಈಡು ಮಾಡಿ ಹಾಳುಗೆಡವುತ್ತಿದೆ…. ಬದುಕಲು ಸಾಧ್ಯವೇ ಇಲ್ಲ ಎಂಬಂತಹ ಮಾರಣಾಂತಿಕ ತೊಂದರೆಗಳಾದ ಹೃದಯ ತೊಂದರೆ, ಅಕಾಲ ಮರಣಗಳು ಚಳಿಯ ಕಾರಣದಿಂದ ಉಂಟಾಗುತ್ತಿದ್ದು, ಸಹಿಸಲಸಾಧ್ಯವಾದ ಚಳಿಯಿಂದ ಜನರು ಸಾಯುತ್ತಿರುವ ಘಟನೆಗಳನ್ನು ಕೂಡ ನಾವು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಈಗಾಗಲೇ ಪರಿಸ್ಥಿತಿ ಸಾಕಷ್ಟು ವಿಷಮಿಸಿದ್ದು ಇನ್ನೂ ಹೆಚ್ಚಿನ ಅನಾಹುತಗಳು ಉಂಟಾಗುವ ಮುನ್ನವೇ ಜಾಗೃತರಾಗಬೇಕಾದ ಪರಿಸ್ಥಿತಿ ನಮ್ಮದು ಆ ನಿಟ್ಟಿನಲ್ಲಿ ಕೆಲ ಪರಿಹಾರ ಕ್ರಮಗಳನ್ನು ನಾವು ಕೈಗೊಳ್ಳಲೇಬೇಕಾಗಿದೆ.
ಅಯ್ಯೋ ! ಅದನ್ನೆಲ್ಲ ಎಲ್ಲಿ ಮಾಡೋಕಾಗುತ್ತೆ ಉಳಿದವರೆಲ್ಲ ಮಾಡ್ಲಿ ನಮ್ಮ ಕೈಲಿ ಆಗೋದಿಲ್ಲ ಎಂಬ ನಿಟ್ಟಿನಲ್ಲಿ ಜನರು ವಿಸ್ಮೃತಿಯಲ್ಲಿ ಸಿಲುಕಿದ್ದಾರೆ ಅಂತಹವರಿಗೆ ಮಾಡುವ ಮನಸ್ಸಿದ್ದರೂ ಅವಕಾಶಗಳ ಅರಿವು ಹಾಗೂ ಅನಿವಾರ್ಯತೆಯನ್ನು ಮೂಡಿಸುವುದು ಮಾತ್ರ ನನ್ನ ಉದ್ದೇಶ.
ಪರಿಸರ ದಿನಾಚರಣೆ ಇರುವುದು ಕೇವಲ ಗಿಡ ಮರಗಳನ್ನು ನೀಡಲು ಮಾತ್ರವಲ್ಲ. ಪರಿಸರ ದಿನಾಚರಣೆಯ ಮುಖ್ಯ ಉದ್ದೇಶ ನಾವು ಇರುವ ಈ ಬೃಹತ್ ಬ್ರಹ್ಮಾಂಡದ ಎಲ್ಲಾ ಜೀವರಾಶಿಗಳಿಗೂ ನಮ್ಮಷ್ಟೇ ಇಲ್ಲಿ ಬದುಕುವ ಹಕ್ಕು ಇದೆ ಎಂಬುದನ್ನು ಅರಿತುಕೊಳ್ಳಲು. ಉಳಿದೆಲ್ಲ ಜೀವಿಗಳಿಗೆ ಮನುಷ್ಯನಷ್ಟು ಬುದ್ಧಿಶಕ್ತಿ ಇಲ್ಲ ನಿಜ…ಆದರೆ ಜಗತ್ತಿನ ಜೀವಸಂಕುಲಗಳಲ್ಲಿಯೇ ಅತ್ಯಂತ ಬುದ್ಧಿಶಾಲಿ ಎಂದು ಬೀಗುವ ಮನುಷ್ಯ ತಾನೇ ತೋಡಿದ ಕಂದಕಕ್ಕೆ ತಾನು ಮಾತ್ರವಲ್ಲದೆ ಇಡೀ ಜೀವ ಸಂಕುಲವನ್ನು ಹಂತ ಹಂತವಾಗಿ ತಳ್ಳಿ ಮಾರಣಾಂತಿಕ ತೊಂದರೆಯಲ್ಲಿ ಸಿಲುಕಿಸುವ ಪ್ರಕ್ರಿಯೆಗೆ ಈಗಾಗಲೇ ತೊಡಗಿದ್ದಾನೆ.
ಆರಂಭದಲ್ಲಿ ಆಧುನಿಕತೆಯ ಮೆರುಗಿನಲ್ಲಿ ಬಳಸಿ ಬಿಸುಡುವ ವಸ್ತುಗಳ ಶೋಕಿಯಲ್ಲಿ,, ಬಿಗಿಯಾದ ನೀತಿ ನಿಯಮಗಳ ಅನುಷ್ಠಾನ ಇಲ್ಲದ ಕಾರಣಕ್ಕಾಗಿ ಈ ಪ್ರವಾಹ ಚಿಕ್ಕದಾಗಿದ್ದರೂ ಇದೀಗ ಬೃಹದಾಕಾರದ ಸಮಸ್ಯೆಯಾಗಿ ಉಲ್ಬಣಗೊಂಡಿದೆ.
ಪ್ರತಿಯೊಂದು ಹಳ್ಳಿಯ ಗ್ರಾಮ ಪಂಚಾಯಿತಿಯಿಂದ ಹಿಡಿದು ದಿಲ್ಲಿಯವರೆಗಿನ ಮಹಾನಗರ ಪಾಲಿಕೆಗಳವರೆಗೆ ಸಮಸ್ಯೆ ಇರುವುದು ಕಸ ವಿಲೇವಾರಿ. ನೀವು ಯಾವುದೇ ಊರಿನ ಹೊರ ಭಾಗದಲ್ಲಿ ಹೋಗಿ ನೋಡಿದರೆ ರಸ್ತೆಯ ಬದಿಯಲ್ಲಿ ನೂರಾರು ಟ್ರ್ಯಾಕ್ಟರ್ ಗಳಷ್ಟು ಕಸ ಬಿದ್ದಿರುತ್ತದೆ. ಮರುಬರಕ್ಕೆ ಮಾಡಲು ಸಾಧ್ಯವಾಗದ ಪ್ಲಾಸ್ಟಿಕ್ ವಸ್ತುಗಳ ರಾಶಿ ಅಲ್ಲಿರುತ್ತದೆ. ಹರಿದು ಹೋದ ರಬ್ಬರ್ ಟಾಯರ್, ಟ್ಯೂಬ್, ಬ್ಯಾಗ್ ಗಳು, ನೀರಿನ ಬಾಟಲಿಗಳು ಪೇಸ್ಟಿನಿಂದ ಹಿಡಿದು ಬೃಹದಾಕಾರದ ತ್ಯಾಜ್ಯಗಳು ಊರ ಹೊರಗಿನಿಂದಲೇ ನಮ್ಮನ್ನು ಸ್ವಾಗತಿಸುತ್ತವೆ.
ಸರ್ಕಾರ ಅದೆಷ್ಟೇ ಪ್ರಯತ್ನ ಪಟ್ಟರೂ ಸ್ವಚ್ಛ ಭಾರತ ಯೋಜನೆಯನ್ನು ಕೈಗೊಂಡು ಮನೆಗೊಂದು ಶೌಚಾಲಯವನ್ನು ನಿರ್ಮಿಸಿ ಕೊಟ್ಟರೂ ಕೂಡ 21ನೇ ಶತಮಾನದಲ್ಲಿಯು ಜನರು ಬಯಲು ಬಹಿರ್ದೆಸೆಗೆ ಹೋಗುವ ಮೂಲಕ ಪರಿಸರವನ್ನು ಹಾಳುಗೆಡವುತ್ತಿದ್ದಾರೆ.
ಇನ್ನು ಚಿಕ್ಕ ಪಾನ್ ಶಾಪು ಗಳಿಂದ ಹಿಡಿದು ದೊಡ್ಡ ಮಾಲ್ಗಳವರೆಗೆ ಎಲ್ಲ ಕಡೆ ಪ್ಲಾಸ್ಟಿಕ್ನದ್ದೇ ಕಾರುಬಾರು.
ಬಣ್ಣ ಬಣ್ಣದ ಒಡೆಯದ ಚಿತ್ತಾಕರ್ಷಕ ಪ್ಲಾಸ್ಟಿಕ್ ಲೋಟ, ಬಟ್ಟಲು, ಬಳಸಿ ಬಿಸುಟಬಹುದಾದ ವಸ್ತುಗಳು ಒಂದೆರಡಲ್ಲ. ಪ್ಲಾಸ್ಟಿಕ್ ವಸ್ತುಗಳನ್ನು ಮಾರುವ ಅಂಗಡಿಕಾರರು ಅಂತಿಮವಾಗಿ ಪ್ಯಾಕ್ ಮಾಡಿ ಕೊಡುವಾಗ ಮಾತ್ರ ಸರ್/ಮೇಡಂ ನಾವು ಪ್ಲಾಸ್ಟಿಕ್ ಕವರ್ ಬಳಸುವುದಿಲ್ಲ ಪೇಪರ್ ಬ್ಯಾಗ್ ನಲ್ಲಿ ಹಾಕಿ ಕೊಡೋಣವೇ ಎಂದು ಕೇಳುವುದು ವಿಪರ್ಯಾಸವಲ್ಲವೇ ?
ಪರಿಸರವನ್ನು ಉಳಿಸಿ ಎಂದು ಒಕ್ಕೊರಳಿನಿಂದ ಹೋಗುವ ಎಲ್ಲಾ ಕಡೆಗಳಲ್ಲಿ ಕಣ್ಣು ಕುಕ್ಕುವ ಬಲ್ಬ್ ಗಳನ್ನು, ಟ್ಯೂಬ್ ಗಳನ್ನು ಹಾಕಿ ಸೂರ್ಯನ ಬೆಳಕಿಗೆ ಸವಾಲೊಡ್ಡುವಂತೆ ಪ್ರಕಾಶಮಾನವಾಗಿಸುವರು.
ರಸ್ತೆಯ ಅಗಲೀಕರಣ ಊರನ್ನು ಸುಂದರವಾಗಿಸುವ ನಿಟ್ಟಿನಲ್ಲಿ ಬೃಹದಾಕಾರದ ಕಟ್ಟಡಗಳನ್ನು ಕರುಣಿಸಿ ನಿರ್ಮಿಸುವ ಸಲುವಾಗಿ ನೂರಾರು ವರ್ಷಗಳಿಂದ ನಮಗೆ ಗಾಳಿ ನೆರಳನ್ನು ನೀಡುವುದರ ಜೊತೆಗೆ ನೂರಾರು ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿರುವ ಮರಗಳನ್ನು ಕಡಿದು ಉರುಳಿಸುವುದು ಪರಿಸರ ನಾಶವಲ್ಲದೆ ಮತ್ತಿನ್ನೇನು ?
ಯಾವುದೇ ಒಂದು ಆಧುನಿಕತೆಯ ಭರಾಟೆ ತನ್ನ ಅಂತಿಮ ಹಂತದಲ್ಲಿ ತೀವ್ರ ಪರಿಣಾಮವನ್ನು ಬೀರಿದಾಗ ಉಂಟಾಗುವ ಅಲ್ಲೋಲಕಲ್ಲೋಲದಲ್ಲಿ ನಾವು ಮನುಷ್ಯ ಮಾತ್ರಠು ಯೋಚಿಸಲು ಆರಂಭಿಸುತ್ತೇವೆ.
ಇವೆಲ್ಲವೂ ದೊಡ್ಡ ಮಟ್ಟದಲ್ಲಾಯಿತು… ನಮ್ಮ ಹಿರಿಯರು ನಮಗೆ ಕೊಟ್ಟ ಒಳ್ಳೆಯ ವಾತಾವರಣದ ಕೊಡುಗೆಯನ್ನು ನಾವು ಮಕ್ಕಳಿಗೆ ಉಳಿಸಿ ಕೊಡಬೇಕಾಗಿರುವುದು ನಮ್ಮದೇ ಜವಾಬ್ದಾರಿ ಆ ಜವಾಬ್ದಾರಿಯ ನಿರ್ವಹಣೆಯಲ್ಲಿ ನಾವು ಬಹುತೇಕ ಎಡವಿದ್ದೇವೆ ನಿಜ, ಆದರೆ ಮತ್ತೆ ಸಂಭಾಳಿಸಿಕೊಂಡು ನಿಲ್ಲಲೇಬೇಕಾದ ತುರ್ತು ಪರಿಸ್ಥಿತಿ ಒದಗಿದೆ. ಈ ನಿಟ್ಟಿನಲ್ಲಿ ಕನಿಷ್ಠ ಪಕ್ಷ ಸುಶಿಕ್ಷಿತರು, ನಾಗರಿಕರು ಎಂದೆನಿಸಿಕೊಂಡಿರುವ ನಾವುಗಳು ನಮ್ಮ ಮನೆಯ ಮಟ್ಟಿಗೆ ಪರಿಸರವನ್ನು ಹೇಗೆ ಕಾಯ್ದುಕೊಳ್ಳಬಹುದು ಎಂದು ನೋಡೋಣ.
* ಮನೆಯಿಂದ ಹೊರಗೆ ಅಂಗಡಿಗೆಂದೇ ಹೋಗುವಾಗ ಬಟ್ಟೆಯ ಕೈ ಚೀಲಗಳನ್ನು ಒಯ್ಯುವುದು ವಿಹಿತ. ಯಾವುದೇ ಸಮಯದಲ್ಲಿಯೂ ನೀವು ಏನನ್ನಾದರೂ ಖರೀದಿಸಬಹುದು ಎಂಬ ಮನಸ್ಥಿತಿ ನಿಮ್ಮದಾಗಿದ್ದರೆ ಬಟ್ಟೆಯ ಬ್ಯಾಗ್ ನ ಜೊತೆ ಒಂದೆರಡು ಡಬ್ಬಗಳನ್ನು ಒಯ್ಯುವುದು ಒಳ್ಳೆಯದು, ಅದು ಸಾಧ್ಯವಾಗದಿದ್ದರೆ ಅಂಗಡಿಗಳಲ್ಲಿ ಕಾಗದ ಪೊಟ್ಟಣದಲ್ಲಿ ಕಟ್ಟಿಕೊಡಲು ಕೇಳಿಕೊಳ್ಳಬೇಕು.
ಮೊದಮೊದಲು ಅಂಗಡಿಕಾರರು ನಿಮ್ಮನ್ನು ತಮಾಷೆ ಮಾಡಬಹುದು ಅಯ್ಯೋ! ಅದನ್ನೆಲ್ಲ ಯಾರು ಮಾಡ್ತಾರೆ ಸರ್, ಇದನ್ನೇ ತಗೊಂಡು ಹೋಗಿ ಎಂದು ನಿಮಗೆ ಅಸಡ್ಡೆಯಿಂದ ಉತ್ತರಿಸಬಹುದು… ಇದನ್ನು ಅವಮಾನ ಎಂದು ಭಾವಿಸಬೇಡಿ. ನೀವು ನಿಮ್ಮ ನಿಲುವಿಗೆ ಬದ್ಧರಾದರೆ ಮುಂದಿನ ದಿನಮಾನಗಳಲ್ಲಿ ನಿಮ್ಮನ್ನು ಮತ್ತಷ್ಟು ಜನರು ಅನುಸರಿಸಬಹುದು. ವೈಯುಕ್ತಿಕ ನೆಲೆಯಲ್ಲಿ ನಾವು ಇದನ್ನು ಖಂಡಿತವಾಗಿಯೂ ಮಾಡಲು ಸಾಧ್ಯವಿದೆ.
* ಹಗಲಿನ ಹೊತ್ತಿನಲ್ಲಿ ಮನೆಯ ಕಿಟಕಿ ಬಾಗಿಲುಗಳನ್ನು ತೆರೆದು ಹೊರಗಿನಿಂದ ಬರುವ ಸೂರ್ಯನ ಬೆಳಕು ಹಾಗೂ ತಾಜಾ ಹವೆಯನ್ನು ಉಸಿರಾಡಲು ರೂಢಿಸಿಕೊಳ್ಳಬೇಕು. ಅನವಶ್ಯಕವಾಗಿ ಲೈಟ್ಗಳನ್ನು ಉರಿಸುವುದು ಬೇಕಾಗಿಲ್ಲ. ತೀರ ಅನಿವಾರ್ಯವಾದಲ್ಲಿ ಮಂದ ಬೆಳಕನ್ನು ಸೂಸುವ ಅತ್ಯಂತ ಕಡಿಮೆ ಯೂನಿಟ್ ಬಳಕೆಯಾಗುವ ನವೀಕೃತ ಮಾದರಿಯ ಬಲ್ಬ್ ಗಳನ್ನು ಬಳಸಬೇಕು.
‘ಒಂದು ಯೂನಿಟ್ ಉಳಿತಾಯ ಒಂದು ಯೂನಿಟ್ ಉತ್ಪಾದನೆಗೆ ಸಮ ‘ ಎಂಬ ಮಾತು ಇಂದಿಗೂ ಚಾಲ್ತಿಯಲ್ಲಿ ಇಟ್ಟುಕೊಳ್ಳಲೇಬೇಕು. ನಮಗೆ ಉತ್ಪಾದನೆ ಮಾಡುವ ಸಾಮರ್ಥ್ಯವಿಲ್ಲ ಎಂದಾದಲ್ಲಿ ಬಳಸುವಾಗ ತುಸು ಎಚ್ಚರ ವಹಿಸುವುದು ಒಳಿತು.
*ಆಹಾರವನ್ನು ಸಾಧ್ಯವಾದಷ್ಟು ತಾಜಾ ಆಗಿ ತಯಾರಿಸಿ ಸೇವಿಸಬೇಕು ಪದೇ ಪದೇ ಬಿಸಿ ಮಾಡುವುದರಿಂದ ಆಹಾರದಲ್ಲಿರುವ ಜೀವಸತ್ವಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ಆಹಾರವು ಸತ್ವರಹಿತವಾಗುತ್ತದೆ.. ಅತಿಯಾಗಿ ಅಡುಗೆ ತಯಾರಿಸಿ ಅದನ್ನು ಚೆಲ್ಲುವುದರಲ್ಲಿ ಅರ್ಥವಿಲ್ಲ. ಪ್ರತಿದಿನವೂ ಹಳ್ಳಿಯಿಂದ ದಿಲ್ಲಿಯವರೆಗೆ ಉಣ್ಣಲು ಸಾಧ್ಯವಾಗದ ರೀತಿಯಲ್ಲಿ ಟನ್ನುಗಟ್ಟಲೆ ಆಹಾರ ಪದಾರ್ಥಗಳು ಕಸದ ತೊಟ್ಟಿಗೆ ಸೇರುವುದರಲ್ಲಿ ನಮ್ಮ ಅಳಿಲು ಪಾಲು ಸಲ್ಲುವುದನ್ನು ತಪ್ಪಿಸಬೇಕು. ಈ ಹಿಂದೆ ಉಳಿಕೆ ಆಹಾರವು ಮನೆಯ ಕೆಲಸದವರಿಗೆ ಮರುದಿನಕ್ಕೆ, ದನ ಕರುಗಳಿಗೆ ಮುಸುರೆಯಾಗಿ ಸಾರ್ಥಕತೆಯನ್ನು ಪಡೆಯುತ್ತಿತ್ತು ಆದರೆ ಆಧುನಿಕ ಭರಾಟೆಯಲ್ಲಿ ಪಶು ಸಂಗೋಪನೆಯನ್ನು ಕೈ ಬಿಟ್ಟಿರುವ ನಾವುಗಳು ಆಹಾರವನ್ನು ನೇರವಾಗಿ ಕಸದ ತೊಟ್ಟಿಗೆ ಚೆಲ್ಲುತ್ತಿದ್ದೇವೆ. ಇಡೀ ದೇಶದಲ್ಲಿ ಒಂದು ದಿನ ಕಸದ ತೊಟ್ಟಿಗೆ ಬಿಸಾಡುವ ಆಹಾರ ಅದೆಷ್ಟೋ ಕುಟುಂಬಗಳನ್ನು ಪಾಲಿಸಬಲ್ಲದು ಎಂಬ ಸತ್ಯದ ಅರಿವು ನಮಗಿರಬೇಕು… ಉತ್ಪಾದನಾ ಸಾಮರ್ಥ್ಯವಿಲ್ಲದವರಿಗೆ ಹಾಳು ಮಾಡುವ ಹಕ್ಕಿಲ್ಲ… ಅದು ನಮ್ಮ ವೈಯಕ್ತಿಕ ದುಡ್ಡಿನಿಂದ ಖರೀದಿಸಿದ್ದಾದರೂ ಸರಿಯೇ ? ಎಂಬ ಪ್ರಜ್ಞೆಯನ್ನು ಹೊಂದಿ ಅಂತೆಯೇ ನಡೆದುಕೊಳ್ಳಬೇಕು. ಇದರಿಂದ ಮನೆಯ ಖರ್ಚಿನಲ್ಲಿ ಮಿತವ್ಯಯ ಸಾಧಿಸಬಹುದು. ಇಂಧನವನ್ನು ಉಳಿಸಬಹುದು…. ತನ್ಮೂಲಕ ಪರಿಸರದ ಸಂರಕ್ಷಣೆಗೆ ನಮ್ಮ ಪಾಲನ್ನು ಸಲ್ಲಿಸಬಹುದು.
* ಈ ಹಿಂದೆ ಅಮ್ಮಂದಿರು ಕಡ್ಡಾಯವಾಗಿ ತಮ್ಮ ಬಳಿ ಕರ ವಸ್ತ್ರವನ್ನು ನ್ಯಾಪ್ಕಿನ್ ಗಳನ್ನು ಇಟ್ಟುಕೊಳ್ಳುತ್ತಿದ್ದರು. ಆದರೆ ಇದೀಗ ಬಳಸಿ ಬಿಸಾಡಬಹುದಾದ ನ್ಯಾಪ್ಕಿನ್ಗಳನ್ನು ಎಗ್ಗಿಲ್ಲದೆ ಬಳಸಿ ಎಸೆಯುತ್ತಾರೆ. ಒಂದು ದಿನಕ್ಕೆ ಸರಿ ಸುಮಾರು 37 ಸಾವಿರ ಮರಗಳನ್ನು ಕೇವಲ ಟಿಶ್ಯೂ ಪೇಪರ್ ತಯಾರಿಕೆಗೆ ಕಡಿದು ಬಳಸುತ್ತಾರೆ ಎಂದರೆ ನೀವೇ ಊಹಿಸಿಕೊಳ್ಳಿ…. ಒಂದು ವರ್ಷಕ್ಕೆ ಎಷ್ಟು ಮರಗಳ ಮಾರಣಹೋಮವಾಗುತ್ತದೆ ಎಂದು. ಪ್ರಶ್ನೆ ಇರುವುದು ಅದೇ ಪ್ರಮಾಣದಲ್ಲಿ, ಅದೇ ತುರ್ತಿನಲ್ಲಿ, ಅಷ್ಟೇ ಪ್ರಮಾಣದ ಗಿಡಗಳನ್ನು ನಾವು ಬೆಳೆಸಲು ಸಾಧ್ಯವೇ ? ಎಂಬುದು.
*ನಮ್ಮ ಹೊಲಗಳಲ್ಲಿ ಹೆಚ್ಚಿನ ಬೆಳೆಯನ್ನು ಪಡೆಯಲೆಂದು ನಾವು ಬಳಸುವ ಕೀಟನಾಶಕಗಳು ನಮ್ಮ ಭೂಮಿಯ ಸತ್ವವನ್ನು ಹೀರಿಕೊಳ್ಳುತ್ತಿವೆ. ನೆಲವನ್ನು ಬಂಜರಾಗಿಸುತ್ತವೆ. ಇದರ ಪರಿಣಾಮವಾಗಿ ನಿಸ್ಸತ್ವ ಆಹಾರವನ್ನು ಸೇವಿಸುತ್ತಿರುವ ನಮ್ಮ ಯುವ ಜನಾಂಗವು ಹತ್ತು ಹಲವಾರು ಆರೋಗ್ಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿವೆ. ಸಂತಾನಹೀನತೆಯ ತೊಂದರೆ ಪ್ರಮುಖವಾಗಿ ತಲೆದೋರುತ್ತಿದೆ. ಸಾಧ್ಯವಾದಷ್ಟು ಸಾವಯವ ಗೊಬ್ಬರವನ್ನು ಬಳಕೆ ಮಾಡಿ ಸತ್ವಯುತ ಆಹಾರ ಬೆಳೆಗಳನ್ನು ಬೆಳೆದು ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಯೋಚಿಸಲೇಬೇಕು. ಈ ಹಿಂದಿನವರು ಮಾಡುವಂತೆ ಉತ್ತಮ ತಳಿಯ ಬೀಜಗಳನ್ನು ಕಾಪಿಟ್ಟುಕೊಳ್ಳುವ, ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ನಮ್ಮದಾಗಿಸಿಕೊಳ್ಳುವ ವಾರ್ಷಿಕ ಬೆಳೆಗಳ ಜೊತೆಗೆ ತರಕಾರಿ ಬೆಳೆಗಳನ್ನು ಹಣ್ಣು ಹಂಪಲುಗಳನ್ನು ಬೆಳೆಯುವ ಮೂಲಕ ಆದಾಯವನ್ನು ಸರಿ ತೂಗಿಸಬಹುದು…. ಈ ಕೆಲಸದಲ್ಲಿ ತುಸು ಶ್ರಮ ಹೆಚ್ಚಾಗಬಹುದು ಆದರೆ ನಾವು ಸಾಕುವ ಪಶುಗಳೊಂದಿಗಿನ ಒಡನಾಟ ನಮ್ಮ ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ ಪ್ರಕೃತಿಯೊಂದಿಗಿನ ಸಾಂಗತ್ಯ ಮನಸ್ಸಿಗೆ ಹಿತವಾಗಿರುತ್ತದೆ.
* ಈ ಹಿಂದಿನಂತೆ ಪ್ರತಿ ಮನೆಯು ಒಂದು ಪುಟ್ಟ ಹಿತ್ತಲನ್ನು ಹೊಂದಿದ್ದು ಅಲ್ಲಿ ದಿನಬಳಕೆಯ ಹಣ್ಣು ತರಕಾರಿ ಹೂವುಗಳ ಗಿಡಗಳನ್ನು ಬೆಳೆಸಬೇಕು. ಅವಸರಕ್ಕೂ ಒದಗುವ ನೆರಳನ್ನು ಕೊಡುವ ಹಸಿರಿನಿಂದ ಕಣ್ಣು ತಂಪಾಗಿಸುವ ತಣ್ಣನೆಯ ಗಾಳಿಯನ್ನು ನೀಡುವ ಗಿಡಗಳು ಮನೆಯ ಹಿಂದೆ ಹಾಗೂ ಮುಂದೆ ಇರಲೇಬೇಕು ನಿಸರ್ಗಕ್ಕೆ ಹತ್ತಿರವಾದ ರೀತಿಯಲ್ಲಿ ಮನೆ ಹಾಗೂ ಮನೆಗೆ ಹತ್ತಿದಂತೆ ನಿಸರ್ಗಕ್ಕೆ ಹತ್ತಿರವಾಗುವ ಕೈತೋಟ ಇದ್ದರೆ ಅದು ನಂದನವನವೇ ಸರಿ.
ಮನೆಯಲ್ಲಿ ಕೂಡ ಸಾಧ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ಕೈ ಬಿಡಬೇಕು ಸ್ವಯಂ ಪ್ರೇರಿತರಾಗಿ ಅವುಗಳನ್ನು ದೂರವಿರಿಸುವುದು ಒಳ್ಳೆಯದು.
ಇನ್ನು ರಸ್ತೆಗೆ ಇಳಿದರೆ ವಿಪರೀತ ವಾಹನಗಳ ಸಂದಣಿ. ಮನೆಗೆ ನೂರು ಮೀಟರ್ ಹತ್ತಿರವಿರುವ ಅಂಗಡಿ ಮುಂಗಟ್ಟುಗಳಿಗೆ ಹೋಗಲು ಕೂಡ ಟೂ ವೀಲರ್ ಗಳನ್ನು ಬಳಸುವುದನ್ನು ನಿಲ್ಲಿಸಬೇಕು. ನಡೆಯುತ್ತಾ ಹೋಗಿ ದಿನಬಳಕೆಯ ವಸ್ತುಗಳನ್ನು ಖರೀದಿಸುವ ಮೂಲಕ ದೈಹಿಕ ಆರೋಗ್ಯದ ಜೊತೆ ಜೊತೆಗೆ ಗಾಡಿಗೆ ಬಳಸುವ ಇಂಧನದ ಖರ್ಚನ್ನು ಕೂಡ ಉಳಿಸಬಹುದು.
ಮನೆಯಲ್ಲಿ ಟೂ ವೀಲರ್, ಫೋರ್ ವೀಲರ್ ನಂತಹ ಗಾಡಿಗಳು ಇದ್ದರೆ ಅವುಗಳನ್ನು ಆಗಾಗ ಸರಿಯಾದ ಸಮಯಕ್ಕೆ ಸರ್ವಿಸ್ ಮಾಡಿಸಬೇಕು. ನಿಗದಿತವಾಗಿ ಸರ್ವಿಸ್ ಮಾಡಿಸುವ ವೆಹಿಕಲ್ ಗಳು ಕಡಿಮೆ ಹೊಗೆಯನ್ನು ಉಗುಳುತ್ತವೆ ಮತ್ತು ವಾತಾವರಣದ ಉತ್ತಮಿಕೆಗೆ ಕಾರಣವಾಗುತ್ತವೆ.
ಈ ಹಿಂದೆ ನಮ್ಮ ಹಿರಿಯರು ಹೇಳದೆ ಮಾಡುತ್ತಿದ್ದ RRR ರೇಡ್ಯೂಸ್ ರಿ ಯೂಸ್ ಮತ್ತು ರೀ ಸೈಕಲ್ ಅಂದರೆ ಅತ್ಯಂತ ಕಡಿಮೆ ಬಳಸುವುದು, ಪುನರಪಿ ಬಳಸುವುದು / ಮರುಬಳಕೆ ಮತ್ತು ಪರಿವರ್ತಿತ ರೀತಿಯಲ್ಲಿ ಬಳಸುವುದನ್ನು ರೂಡಿಸಿಕೊಳ್ಳಬೇಕು
ಮೇಲೆ ಹೇಳಿರುವ ಎಲ್ಲಾ ಸಲಹೆ ಸೂಚನೆಗಳು ಮನೆ ಮಟ್ಟಿಗೆ ಮಾಡಲು ಸಾಧ್ಯವಾಗುವಂತಹವಾಗಿದ್ದು
ಎಲ್ಲರೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಅದು ನಿಜವಾದ ಪರಿಸರದ ಕಾಳಜಿ ಹಾಗೂ ಒಳ್ಳೆಯ ಪರಿಸರವನ್ನು ಹೊಂದಲು ಉತ್ತಮ ಅಡಿಪಾಯವಾಗಬಹುದು. ಏನಂತೀರಾ ಸ್ನೇಹಿತರೆ ?
ವೀಣಾ ಹೇಮಂತ್ ಗೌಡ ಪಾಟೀಲ್




