ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

“ಇಂದಿರಾ ಲಂಕೇಶ್ ನಿಧನ”

ವ್ಯಕ್ತಿ ಸಂಗಾತಿ ಇಂದಿರಾ ಲಂಕೇಶ್ ನಿಧನ “ಹುಳಿ ಮಾವು ಮತ್ತು ನಾನು” ಕೃತಿಯ  ಲೇಖಕಿ ಮತ್ತು ಸಾಹಿತಿ ,ಪತ್ರಕರ್ತ  ಪಿ. ಲಂಕೇಶ್ ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಇಂದು  ನಿಧನರಾಗಿದ್ದಾರೆ.  ‘ಲಂಕೇಶ್ ಪತ್ರಿಕೆ’ಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಅವರು, ‘ಹುಳಿಮಾವು ಮತ್ತು ನಾನು’ ಕೃತಿಯ ಮೂಲಕವೂ ಗುರುತಿಸಿಕೊಂಡಿದ್ದರು. ಕನ್ನಡ ಸಾರಸ್ವತ ಲೋಕದ ಮಹತ್ವದ ಲೇಖಕ ,  ಹಿರಿಯ ಪತ್ರಕರ್ತ ಹಾಗೂ ಖ್ಯಾತ ಬರಹಗಾರ ಪಿ. ಲಂಕೇಶ್ ಅವರ ಧರ್ಮಪತ್ನಿ, ಲೇಖಕಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಸೋಮವಾರ (ಜೂನ್ 15, 2026) ಮುಂಜಾನೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.  ಬೆಂಗಳೂರಿನ ರಾಜಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದು, ಇವರ ನಿಧನದಿಂದ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಒಂದು ಮಹತ್ವದ ಪರಂಪರೆಯ ಕೊಂಡಿ ಕಳಚಿದಂತಾಗಿದೆ.  ಗೌರಿ ಲಂಕೇಶ್ ( ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ) ,ಕವಿತಾ ಲಂಕೇಶ್ (ಚಿತ್ರನಿರ್ದೇಶಕಿ), ಇಂದ್ರಜಿತ್ ಲಂಕೇಶ್ (ಚಿತ್ರನಿರ್ದೇಶಕ ಹಾಗೂ ಪತ್ರಕರ್ತ) ಸೇರಿದಂತೆ ಅಪಾರ ಬಂಧು-ಮಿತ್ರರು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ತಾಯಿ ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ, ಸಾಹಿತ್ಯ ಹಾಗೂ ಚಲನಚಿತ್ರ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಲಂಕೇಶ್ ಪತ್ರಿಕೆಯ ಯಶಸ್ಸಿನ ಹಿಂದಿನ ಮಹಾಶಕ್ತಿಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಲಂಕೇಶ್ ಪತ್ರಿಕೆ’ಯ ಆರಂಭದ ದಿನಗಳಿಂದಲೂ ಇಂದಿರಾ ಲಂಕೇಶ್ ಅವರು ಪತಿ ಪಿ. ಲಂಕೇಶ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಕೇವಲ ವೈವಾಹಿಕ ಜೀವನದಲ್ಲಷ್ಟೇ ಅಲ್ಲದೆ, ಪತ್ರಿಕೆಯ ಆಡಳಿತ, ಮುನ್ನಡೆ ಹಾಗೂ ಪ್ರಕಾಶನದ ಜವಾಬ್ದಾರಿಯನ್ನು ತೆರೆಮರೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. 2000 ಇಸವಿಯಲ್ಲಿ ಪಿ. ಲಂಕೇಶ್ ಅವರ ನಿಧನದ ನಂತರ ಮತ್ತು ತದನಂತರದ ದಿನಗಳಲ್ಲಿ ಹಿರಿಯ ಪುತ್ರಿ, ದಿ. ಗೌರಿ ಲಂಕೇಶ್ ಅವರ ಅಗಲಿಕೆಯ ನಂತರವೂ ಧೃತಿಗೆಡದ ಇಂದಿರಾ ಅವರು, ಕುಟುಂಬ ನಿರ್ವಹಣೆ ಜೊತೆಗೆ,  ಸಾಹಿತ್ಯ  ಮತ್ತು ಪತ್ರಿಕೋದ್ಯಮದ ಪರಂಪರೆಯನ್ನು ಮುನ್ನಡೆಸಿದ್ದರು. ನಾಗರಾಜ್‌ ಹರಪನಹಳ್ಳಿ

“ಇಂದಿರಾ ಲಂಕೇಶ್ ನಿಧನ” Read Post »

ಇತರೆ, ಜೀವನ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ

ಸಂಬಂಧಗಳ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” *ಬೆಳಗಾಗೆದ್ದು Good Morning ಕಳಿಸೋ ನೂರು ಜನ ಇದಾರೆ. ಆದ್ರೆ ರಾತ್ರಿ ನಿದ್ದೆ ಬರದೇ ಒದ್ದಾಡಿದಾಗ ಮಾತಾಡೋ ಒಬ್ಬನೂ ಇಲ್ಲ.* ಇದೇ ಇವತ್ತಿನ ಸಂಬಂಧಗಳ ಸ್ಥಿತಿ.ಯಾಕೆ ಹೀಗಾಯ್ತು? ಮುಂದೆ ಓದುತ್ತಾ ಹೋಗಿ.ಮೊಬೈಲ್ ಮೊದಲಾಯ್ತು, ಮನುಷ್ಯ ಎರಡನೆಯವನಾದ*ಒಂದೇ ಮನೆಯಲ್ಲಿ ನಾಲ್ಕು ಜನ ಇದ್ರೂ ನಾಲ್ಕು ಮೂಲೆಯಲ್ಲಿ ಕುಳಿತು ನಾಲ್ಕು ಮೊಬೈಲ್ ನೋಡ್ತಾರೆ. ಅಪ್ಪನಿಗೆ ಮಗ ಏನ್ ಓದ್ತಿದ್ದಾನೆ ಗೊತ್ತಿಲ್ಲ. ಮಗನಿಗೆ ಅಮ್ಮನ ಆರೋಗ್ಯದ ಚಿಂತೆ ಇಲ್ಲ. ಊಟದ ಟೇಬಲ್‌ನಲ್ಲಿ ಮಾತಿಗಿಂತ ರೀಲ್ಸ್ ಮುಖ್ಯವಾಯ್ತು. “ಸಂಪರ್ಕ ಇದೆ, ಸಂಬಂಧ ಇಲ್ಲ.”. ಸಲುಗೆ ಸ್ವಾತಂತ್ರ್ಯವಾಯ್ತು ಹೇಗೆ ಅಂದರೆ,“ನನ್ನ ಲೈಫ್, ನನ್ನ ರೂಲ್ಸ್” ಅಂತ ಮಕ್ಕಳು ಅಂದ್ರೆ, “ನಮ್ಮ ಕಾಲದಲ್ಲಿ ಹೀಗಿರಲಿಲ್ಲ” ಅಂತ ಹೆತ್ತವರು ಅಂದ್ರೆ. ಇಬ್ಬರ ಮಧ್ಯೆ ಗೋಡೆ ಬೆಳೆಯುತ್ತೆ. 8-9 ತಿಂಗಳು ಹೊತ್ತು ಹೆತ್ತ ತಾಯಿಯ ಮಾತಿಗಿಂತ 3 ದಿನದ ಹಿಂದೆ Insta ದಲ್ಲಿ ಪರಿಚಯವಾದವನ ಮೆಸೇಜಿಗೆ ಬೆಲೆ ಜಾಸ್ತಿ ಆಯ್ತು. “ಹೆತ್ತವರ ಪ್ರೀತಿ ಹಳೇದಾಯ್ತು, ಅಪರಿಚಿತರ ಮಾತು ಹೊಸದಾಯ್ತು.” ಈಗ ಎಲ್ಲವೂ Instant. ನೂಡಲ್ಸ್ 2 ನಿಮಿಷ, ಪ್ರೀತಿ 2 ದಿನ. ಸಣ್ಣ ಜಗಳಕ್ಕೆ Block, ಸಣ್ಣ ತಪ್ಪಿಗೆ Disconnect. ಸಂಬಂಧ ಕಟ್ಟೋಕೆ ವರ್ಷ ಬೇಕು, ಮುರಿಯೋಕೆ ಒಂದು Status ಸಾಕು. “ಕ್ಷಮಿಸೋ ಮನಸ್ಸು ಸತ್ತು, ಅಹಂ ಬೆಳೆದು ನಿಂತಿದೆ.”“ಹೋಲಿಕೆ ರೋಗ ಇದ್ದಂತೆ”“ಅವನ ಮಗ BMW ತಂದ, ನನ್ನವನು ಯಾಕೆ ತರಲಿಲ್ಲ?” ಅಂತ ಅಪ್ಪ. “ಅವಳ ಗಂಡ ವಿದೇಶಕ್ಕೆ ಕರ್ಕೊಂಡು ಹೋದ, ನೀನು ಯಾಕೆ ಹೋಗಲಿಲ್ಲ?” ಅಂತ ಹೆಂಡತಿ. ಪಕ್ಕದ ಮನೆ ಹುಲ್ಲು ಯಾವಾಗಲೂ ಹಸಿರು. “ನಮ್ಮ ಬಳಿ ಇರೋದರ ಬೆಲೆ ಮರೆತು, ಇಲ್ಲದ್ದಕ್ಕೆ ಹಂಬಲಿಸೋಕೆ ಶುರು ಮಾಡಿದ್ವಿ.”ದುರಂತ ಏನು ಗೊತ್ತಾ?ಮನೆ ತುಂಬಾ ಜನ ಇದ್ದರೂ ಒಂಟಿತನ. ಅಪ್ಪ ಅಮ್ಮ ದುಡಿದು ದುಡಿದು ಮಕ್ಕಳಿಗೆ ಎಲ್ಲಾ ಕೊಟ್ಟರೂ, ಕೊನೆಗೆ ವೃದ್ಧಾಶ್ರಮ. ಮಕ್ಕಳು ಪ್ರೀತಿಗಾಗಿ ಪರದಾಡಿ, ಕೊನೆಗೆ ಮೋಸ ಹೋಗಿ ಜೀವ ಕಳೆದುಕೊಳ್ಳೋದು. *ಗೋಡೆ ಕಟ್ಟೋಕೆ ಗೊತ್ತಿದ್ದ ನಮಗೆ, ಸೇತುವೆ ಕಟ್ಟೋಕೆ ಮರೆತು ಹೋಯ್ತು. ದಿನಾ 15 ನಿಮಿಷ ಮೊಬೈಲ್ ದೂರ ಇಟ್ಟು ಮನೆಯವರ ಜೊತೆ ಕೂತು ಮಾತಾಡಿ. ಊಟ ಒಟ್ಟಿಗೆ ಮಾಡಿ.   ಬುದ್ಧಿ ಹೇಳೋಕಿಂತ ಮೊದಲು, ಮಕ್ಕಳ ಮನಸ್ಸಿನ ಮಾತು ಕೇಳಿ. ಹೆತ್ತವರ ನೋವು ಅರ್ಥ ಮಾಡಿಕೊಳ್ಳಿ.  :ತಪ್ಪು ಮಾಡದ ಮನುಷ್ಯ ಇಲ್ಲ. ಒಂದು ತಪ್ಪಿಗೆ ಸಂಬಂಧವನ್ನೇ ಕಡಿದುಕೊಳ್ಳಬೇಡಿ.  ಸಮಯ ಕೊಡಿ, ದುಡ್ಡು, ಬಟ್ಟೆ, ಬೈಕ್ ಕೊಟ್ರೆ ಸಾಲದು. ನಿಮ್ಮ ಸಮಯ, ನಿಮ್ಮ ಪ್ರೀತಿ ಕೊಡಿ.  ಮೆಚ್ಚುಗೆ ಸೂಚಿಸಿ: “ಥ್ಯಾಂಕ್ಸ್ ಕಣೋ”, “ಚೆನ್ನಾಗಿ ಮಾಡಿದ್ದೀಯ” ಅನ್ನೋ ಎರಡು ಮಾತು ಸಂಬಂಧ ಗಟ್ಟಿ ಮಾಡುತ್ತೆ. ಕೊನೆಯ ಮಾತು:ಸಂಬಂಧ ಅಂದ್ರೆ AC ರೂಮಲ್ಲಿಡೋ ಹೂವಿನ ಹಾಗಲ್ಲ. ಬಿಸಿಲು, ಮಳೆ, ಗಾಳಿ ಎಲ್ಲಾ ತಾಗಬೇಕು. ಜಗಳ ಬರಬೇಕು, ಮುನಿಸು ಬರಬೇಕು, ಆದ್ರೆ ಬಿಟ್ಟು ಹೋಗೋ ಯೋಚನೆ ಬರಬಾರದು.*ಮೊಬೈಲ್‌ನಲ್ಲಿ ಸಾವಿರ Friend Request ಇರಬಹುದು. ಆದ್ರೆ ಕಷ್ಟ ಅಂದಾಗ ಹೆಗಲು ಕೊಡೋದು ರಕ್ತ ಸಂಬಂಧ, ಮನಸ್ಸಿನ ಸಂಬಂಧ ಮಾತ್ರ.*ಸಂಬಂಧಗಳು ಸರಿಯಿಲ್ಲ ಅಂದ್ರೆ, ಸರಿ ಮಾಡೋಕೆ ಶುರು ಮಾಡೋಣ. ಇವತ್ತಿಂದ, ಈಗಿಂದ, ನಮ್ಮಿಂದಲೇ. ವನಜಾ ಮಹಾಲಿಂಗಯ್ಯ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-121 ಒಬ್ಬ ಅಮ್ಮನ ಕಥೆ ರುಕ್ಮಿಣಿನಾಯರ್ ಅಮ್ಮನ ಆರೋಗ್ಯದ ಸತ್ಯ ಅರಿತತಂಗಿಯ ಗೋಳಾಟ ಸ್ವಲ್ಪ ಹೊತ್ತು ಇಬ್ಬರೂ ಅಮ್ಮನ ಜೊತೆ ಮಾತನಾಡುತ್ತಾ ಕಾಲ ಕಳೆದರು. ಡಾಕ್ಟರ್ ರೌಂಡ್ಸ್ ಗೆ ಬರುವ ಹೊತ್ತಾಯ್ತು ಎಂದು ವಾರ್ಡಿನ ಆಯಾ ಕೂಗಿ ಹೇಳಿದಾಗ ಅಕ್ಕ-ತಂಗಿ ಇಬ್ಬರೂ ಹೊರಗೆ ನಡೆದರು. ಆಸ್ಪತ್ರೆಯ ಹೊರಾಂಗಣದಲ್ಲಿ ಮೆಟ್ಟಿಲ ಮೇಲೆ ಕುಳಿತು ಪರಸ್ಪರ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅಕ್ಕ ಇಷ್ಟೊಂದು ಮೌನವಾಗಿರುವುದನ್ನು ನೋಡಿ ಅಮ್ಮನ ಆರೋಗ್ಯದಲ್ಲಿ ಏನೋ ದೊಡ್ಡ ಸಮಸ್ಯೆ ಇರಬಹುದು ಎಂದು ತಂಗಿ ಊಹಿಸಿದಳು. ಆದರೂ ಅಕ್ಕ ಹೇಳುವವರೆಗೂ ಕಾಯ್ದಳು. ಸ್ವಲ್ಪ ಹೊತ್ತಿನ ನಂತರ ಅಕ್ಕನೇ ಮೌನ ಮರಿದಳು…. “ನಿನಗೆ ಗೊತ್ತು ತಾನೆ ಅಮ್ಮನಿಗೆ ಡಯಾಬಿಟಿಸ್ ಇರುವುದು…. ಅದಕ್ಕಾಗಿ ಅಮ್ಮ ನಿರಂತರವಾಗಿ ಇನ್ಸುಲಿನ್ ತೆಗೆದುಕೊಳ್ಳುತ್ತಿರುವುದು….. ಹಾಗೂ ಮೂರು ತಿಂಗಳಿಗೊಮ್ಮೆಯಾದರೂ ಆಸ್ಪತ್ರೆಗೆ ತಪಾಸಣೆಗೆ ಬರುವುದು….ಆದರೆ….. ಅದರ ಜೊತೆಗೆ ಅದ್ಯಾವಾಗ ಬಿ.ಪಿ ಬಂದು ಅಮ್ಮನ ಒಡಲನ್ನು ಸೇರಿತು ಎಂಬುದು ಅಮ್ಮನಿಗೂ ನಮಗೂ ತಿಳಿಯಲಿಲ್ಲ”…. ಎಂದು ಅಲ್ಲಿಗೆ ನಿಲ್ಲಿಸಿ, ತಂಗಿಯ ಮುಖವನ್ನು ಒಮ್ಮೆ ದಿಟ್ಟಿಸಿದಳು. ಅಚ್ಚರಿಯಿಂದ ತಂಗಿ ಅಕ್ಕನ ಮುಖವನ್ನು ನೋಡಿದಳು. ಆಗ ಅಕ್ಕ ‘ಹೌದು’ ಎನ್ನುವಂತೆ ತಲೆ ಆಡಿಸಿದಳು…. “ಮಧುಮೇಹ ಮತ್ತು ರಕ್ತದೊತ್ತಡ ಎರಡೂ ಅಣ್ಣತಮ್ಮಂದಿರು ಇದ್ದಂತೆ ಎಂದು ವೈದ್ಯರು ಹೇಳಿದರು….. ಒಂದು ಬಂದ ನಂತರ ನಿಧಾನವಾಗಿ ಮತ್ತೊಂದು ಜೊತೆಗೂಡುತ್ತದೆ ಎಂದು ಕೂಡ ಹೇಳಿದರು…. ಈಗ ನಮ್ಮ ತಾಯಿಗೆ ಇರುವ ಆರೋಗ್ಯ ಸಮಸ್ಯೆ ಗಂಭೀರವಾದದ್ದು…..  ಮಧುಮೇಹ ಹಾಗೂ ರಕ್ತದೊತ್ತಡದಿಂದಾಗಿ ನಮ್ಮ ತಾಯಿಯ ಶರೀರದ ಒಳಗಿರುವ ಅಂಗಾಂಗಗಳು, ಎಂದರೆ ಹೃದಯ, ಯಕೃತ್ತು ಮೂತ್ರಪಿಂಡಗಳು ಎಲ್ಲವೂ ಊದಿಕೊಂಡಿವೆ…. ಅವು ಸರಿಯಾಗಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿಲ್ಲ… ಹಾಗಾಗಿ ರಕ್ತ ಶುದ್ಧಿ ಆಗುತ್ತಿಲ್ಲ…. ಎಂದು ವೈದ್ಯರು ತಿಳಿಸಿದ್ದಾರೆ…. ಎಂದಳು.  ಅಕ್ಕ ಹೇಳಿದ ಸಂಗತಿಯನ್ನು ಕೇಳುತ್ತಾ ತಂಗಿಯ ಮುಖ ಬಾಡಿತು…. ಅಕ್ಕಾ ಇದಕ್ಕೆ ಔಷಧೋಪಚಾರಗಳು ಇಲ್ಲವೇ?….ಎಂದು ತಂಗಿ ಕೇಳಿದಾಗ…. ಇಲ್ಲಾ… ಕಣೇ…. ಎಂದವಳ ಧ್ವನಿ ಭಾರವಾಗಿತ್ತು…… ಯಾಕಕ್ಕಾ?…..ಅದು ಹೇಗೆ? ….ಎಂದು ಕೇಳಿದಾಗ…. ಶರೀರದ ಒಳ ಅಂಗಗಳು ವೈಫಲ್ಯವಾದರೆ ಯಾವ ಔಷಧಿಗಳೂ ಪರಿಣಾಮ ಬೀರುವುದಿಲ್ಲ… ತಾತ್ಕಾಲಿಕ ಉಪಶಮನಗಳು ದೊರೆಯುತ್ತವೆ ಅಷ್ಟೇ…. ಆದರೆ ಪೂರ್ಣವಾಗಿ ಗುಣಮುಖವಾಗುವುದಿಲ್ಲ…. ಹಾಗಾಗಿ ವೈದ್ಯರು ಹೇಳಿದರು,”…. ಎಂದು ತನ್ನ ಮಾತನ್ನು ಮುಂದುವರೆಸದೆ ಅರ್ಧಕ್ಕೇ ನಿಲ್ಲಿಸಿ, ತಂಗಿಯ ಮುಖವನ್ನೇ ತದೇಕ ಚಿತ್ತದಿಂದ ನೋಡಿದಳು.‌ ಮುಂದೆ ಮಾತು ಬಾರದೇ ಗಂಟಲು ಕಟ್ಟಿತು. ಕಣ್ಣುಗಳಲ್ಲಿ ಧುತ್ತನೇ ನೀರು ತುಂಬಿಕೊಂಡವು. ತಂಗಿಗೆ ಹೇಗೆ ಹೇಳಲಿ ಇರುವ ಸತ್ಯವನ್ನು? ಅವಳು ಖಂಡಿತಾ ಸಹಿಸಲಾರಳು. ದೇವರೇ ನನಗೊಂದಿಷ್ಟು ಶಕ್ತಿ ಕೊಡು. ನನ್ನಲ್ಲಿರುವ ಶಕ್ತಿ ಉಡುಗಿ ಹೋಗುತ್ತಿದೆ. ಇಂತಹಾ ಘೋರ ಸತ್ಯವನ್ನು ನಾನವಳಿಗೆ ಹೇಗೆ ಹೇಳಲಿ? ಎಂದು ಚಿಂತಾಕ್ರಾಂತಳಾಗಿ ಒಂದು ಕ್ಷಣ ಕಣ್ಣು ಮುಚ್ಚಿದಳು. ಕಣ್ಣುಗಳಲ್ಲಿ ತುಂಬಿದ್ದ ನೀರು ಕೆನ್ನೆಯ ಮೇಲೆ ಇಳಿಯಿತು.  ತಂಗಿಯು ಕುಳಿತಲ್ಲಿಂದ ನಿಧಾನವಾಗಿ ಎದ್ದು ಬಂದು ಅಕ್ಕನ ಕೆನ್ನೆಯ ಮೇಲೆ ಹರಿದ ಕಣ್ಣೀರನ್ನು ಒರಸಿ, ಅಕ್ಕನ ಮುಖವನ್ನು ಬೊಗಸೆಯಲ್ಲಿ ಹಿಡಿದು…”ಅಕ್ಕಾ ….ಏನಾಯ್ತು ಹೇಳು…. ಕಷ್ಟ ಸುಖ, ನೋವು ನಲಿವು, ಏನೇ ಇರಲಿ ನಾವು ಪರಸ್ಪರ ಹೇಳಿಕೊಂಡು ಮನಸ್ಸನ್ನು ಹಗುರಾಗಿಸಿಕೊಂಡಿದ್ದೇವೆ….. ಒಬ್ಬರಿಗೊಬ್ಬರು ಸದಾ ಜೊತೆಯಲ್ಲಿ ಇದ್ದೇವೆ…. ನೀನು ಇರುವ ಸ್ಥಿತಿಯನ್ನು ಕಂಡು ಪರಿಸ್ಥಿತಿಯ ಗಂಭೀರತೆ ನನಗೂ ಅರ್ಥವಾಗುತ್ತಿದೆ…. ನೀನು ಹೀಗೆ ಮಾತನಾಡದೆ ದುಃಖಿಸುತ್ತಿದ್ದರೆ ನನ್ನ ಮನ ಇನ್ನೂ ವ್ಯಾಕುಲಗೊಳ್ಳುತ್ತದೆ…. ಪರಿಸ್ಥಿತಿ ಏನೇ ಇರಲಿ ಅದನ್ನು ನಾವು ಎದುರಿಸಲೇಬೇಕು…. ದಯವಿಟ್ಟು ಏನಾಯ್ತು ಎಂದು ಹೇಳು ಅಕ್ಕಾ”…. ಎಂದು ತಂಗಿ ಹೇಳಿದಾಗ ಅವಳ ದುಃಖವು ಇನ್ನೂ ಹೆಚ್ಚಾಯಿತು. ತಂಗಿಯ ಕೈಯನ್ನು ಬಿಗಿಯಾಗಿ ಹಿಡಿದುಕೊಂಡು ತನ್ನ ಪಕ್ಕ ಕುಳಿತುಕೊಳ್ಳುವಂತೆ ಸನ್ನೆ ಮಾಡಿ…. “ನೀನು ಈಗ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬೇಕಾಗಿದೆ…. ವೈದ್ಯರು ಹೇಳಿದಾಗ ನನಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅನುಭವವಾಯಿತು… ಈಗ ನಿನಗೆ ಇಂತಹ ಸಂಕಟದ ವಿಷಯವನ್ನು ಹೇಗೆ ಹೇಳಲಿ ಎಂಬುದೇ ನನ್ನ ಯೋಚನೆಯಾಗಿದೆ…. ಆದರೂ ಹೇಳದೇ ಬೇರೆ ದಾರಿ ಇಲ್ಲ”…. ಎಂದಾಗ ತಂಗಿ…._ಅದೇನೇ ಇರಲಿ ಹೇಳು” …ಎಂದಳು….. _ವೈದ್ಯರು ಹೇಳಿದರು…. ನಮ್ಮ ತಾಯಿ ಇನ್ನು ಕೇವಲ ಆರು ತಿಂಗಳಷ್ಟೇ…. ನಮ್ಮೊಂದಿಗೆ ಇರುತ್ತಾರೆ”… ಎಂದಳು.‌ ಅಕ್ಕ ಹೇಳಿದ ಮಾತು ತಂಗಿಗೆ ಸರಿಯಾಗಿ ಅರ್ಥವಾಗಲಿಲ್ಲ…. _ಬಿಡಿಸಿ ಹೇಳಕ್ಕ…. ನನಗೆ ಏನೂ ಅರ್ಥವಾಗುತ್ತಿಲ್ಲ….”ಎಂದಳು. ….”ಅಂದರೆ…. ನಮ್ಮ ತಾಯಿ ಜೀವಂತವಾಗಿರುವುದು ಇನ್ನು ಕೇವಲ ಆರು ತಿಂಗಳು ಮಾತ್ರ….. ಈ ಮಾತನ್ನು ಕೇಳಿದ ತಂಗಿ ಗರಬಡಿದಂತೆ ಅಲುಗಾಡದೆ ಹಾಗೆ ಕುಳಿತುಬಿಟ್ಟಳು. ತನ್ನ ಕಿವಿಗಳನ್ನು ತಾನೆ ನಂಬದಾದಳು. ತಾನು ಕೇಳುತ್ತಿರುವುದು ಏನು? ಅಕ್ಕ ಇದೇನು ಹೇಳುತ್ತಿದ್ದಾಳೆ? ಇದು ನಿಜವಲ್ಲ ಎಂದುಕೊಳ್ಳುತ್ತಾ, ಅಕ್ಕನ ಎರಡೂ ಭುಜಗಳನ್ನು ಹಿಡಿದು ಬಲವಾಗಿ ಅಲುಗಾಡಿಸುತ್ತಾ… “ನೀನು ಏನು ಹೇಳುತ್ತಿರುವೆ? ಸುಮ್ಮನೆ ಏನೇನೋ ಹೇಳಬೇಡ….. ಅಮ್ಮನಿಗೆ ಏನೂ ಆಗಿಲ್ಲ…. ಈಗ ನೋಡು ಸ್ವಲ್ಪ ಹೊತ್ತಿಗೆ ಮುಂಚೆ ನಮ್ಮ ಜೊತೆ ಎಷ್ಟು ಚೆನ್ನಾಗಿ ಮಾತನಾಡುತ್ತಿದ್ದಳು…. ಏನೋ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಅಷ್ಟೇ…. ವೈದ್ಯರು ಹಾಗೆ ಹೇಳಿರಲಿಕ್ಕಿಲ್ಲ…. ಬಹುಶಃ ನೀನು ಸರಿಯಾಗಿ ಕೇಳಿಸಿಕೊಂಡಿಲ್ಲ ಎಂದು ಅನಿಸುತ್ತದೆ…. ಇಷ್ಟು ಬೇಗ ನಮ್ಮನ್ನಗಲಿ ಅಮ್ಮ ಎಲ್ಲಿಗೂ ಹೋಗುವುದಿಲ್ಲ….. ನಿನ್ನ ವಿದ್ಯಾಭ್ಯಾಸ ಮುಗಿದು ನೀನು ಕೆಲಸಕ್ಕೆ ಸೇರಿಕೊಳ್ಳುವುದನ್ನು …. ನಾವೆಲ್ಲರೂ ಸಂತೋಷದಿಂದ ಕಳೆಯುವ ಕಾಲವನ್ನು ಅಮ್ಮ ನೋಡಬೇಕಿದೆ….. ತಂಗಿ ನವೋದಯ ವಿದ್ಯಾಲಯದಿಂದ ಈ ವರ್ಷ 10ನೇ ತರಗತಿ ಮುಗಿಸಿ, ಅವಳು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸುವುದನ್ನು ಅಮ್ಮ ನೋಡಬೇಕಿದೆ…. ದೇವರು ಅಷ್ಟು ನಿಷ್ಕರುಣಿಯಲ್ಲ…. ವೈದ್ಯರನ್ನು ಭೇಟಿಯಾಗಿ ಮತ್ತೊಮ್ಮೆ ಕೇಳು….. ಅಮ್ಮನ ಆರೋಗ್ಯ ಸುಧಾರಿಸಲು ಏನಾದರೂ ಔಷಧೋಪಚಾರ ಇರಬಹುದೇ?….ಸ್ವಲ್ಪಕಾಲವಾದರೂ ಅಮ್ಮ ನಮ್ಮೊಟ್ಟಿಗೆ ಬದುಕಿರಲು ಅವಕಾಶವಿದೆಯೇ ಎಂದು…. ಅಕ್ಕಾ ದಯವಿಟ್ಟು ವೈದ್ಯರನ್ನು ಮತ್ತೊಮ್ಮೆ ಭೇಟಿ ಮಾಡಿ ಕೇಳು ಎಂದು ಬೆಕ್ಕಿ ಬಿಕ್ಕಿ ಅಳುತ್ತಾ ದಂಬಾಲು ಬಿದ್ದಳು. ರುಕ್ಮಿಣಿ ನಾಯರ್

Read Post »

You cannot copy content of this page

Scroll to Top