ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್

ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್ “ಹಿರಿಯ ಮಗುವಿಗೆ…. ಹೊರೆಯಾಗದಿರಲಿ ಭ್ರಾತೃತ್ವ” ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಹಿರಿಯ ಮಗನನ್ನು ತಂದೆ ಸಮಾನ ಮತ್ತು ಅತ್ತಿಗೆ ತಾಯಿ ಎಂಬಂತೆ ಭಾವಿಸುತ್ತಾರೆ. ತಂದೆ ತಾಯಿಯ ನಂತರದ ಸ್ಥಾನವನ್ನು ಪಡೆದ ಹಿರಿಯ  ಮಕ್ಕಳು ಕೌಟುಂಬಿಕ ದೃಷ್ಟಿಯಿಂದ ಎಲ್ಲರನ್ನು ಸಮಾನವಾಗಿ ಕಾಣುವುದು ಅನಿವಾರ್ಯವಾಗುತ್ತದೆ. ಮತ್ತೆ ಎಷ್ಟೋ ಬಾರಿ ಹಿರಿಯ ಮಕ್ಕಳು ತಮ್ಮ ತಂದೆಯ ಮರಣ ನಂತರ ಕುಟುಂಬದ ಪರಿಪಾಲನೆಗೆ ತಮ್ಮ ವೈಯುಕ್ತಿಕ ಸುಖ ಭೋಗಗಳನ್ನು ಮರೆತು ಕರ್ತವ್ಯ ಬದ್ಧರಾಗಿ ಕೌಟುಂಬಿಕ ನಿರ್ವಹಣೆಯನ್ನು ಮಾಡುತ್ತಾರೆ ಕೂಡ.ಪಾಲಕರಿಗೆ ತಮ್ಮ ಕಿರಿಯ ಮಕ್ಕಳ ಮೇಲೆ ಸಹಜವಾಗಿಯೇ ತುಸು ಕಾಳಜಿ ಹೆಚ್ಚು ಮತ್ತು ತಮ್ಮ ಹಿರಿಯ ಮಕ್ಕಳನ್ನು ತಮ್ಮ ಮುಂದಿನ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಬೆಳೆಸುತ್ತಾರೆ. ಹೀಗಾಗಿ ಸಹಜವಾಗಿಯೇ ಹಿರಿಯ ಮಕ್ಕಳು ತುಸು ಸೂಕ್ಷ್ಮಪ್ರಜ್ಞೆಯವರಾಗಿರುತ್ತಾರೆ. ಆದರೆ ಕಾಲಘಟ್ಟ ಯಾವುದೇ ಇರಲಿ  ಹಿಂದಿನ ಒಡಹುಟ್ಟಿದವರಾಗಲೀ ಇಂದಿನ ಪೀಳಿಗೆಯೇ ಇರಲಿ ಸಾಮಾನ್ಯವಾಗಿ ನಾವು ನೋಡುವ ಕೆಲ ವಿಪರ್ಯಾಸಗಳು ಹೀಗಿರುತ್ತವೆ. ತಮ್ಮ ಮಕ್ಕಳನ್ನು ಬೇರೆಯವರಿಗೆ ಪರಿಚಯಿಸುವ ಪಾಲಕರು ತಮ್ಮ ದೊಡ್ಡ ಮಗುವನ್ನು ನಿಧಾನ ಎಂದು ಚಿಕ್ಕ ಮಗುವನ್ನು ದೊಡ್ಡವರಿಗೆ ಹೋಲಿಸಿ ತುಂಬಾ ಜಾಣ ಎಲ್ಲವನ್ನು ಬೇಗನೆ ತಿಳಿದುಕೊಳ್ಳುತ್ತಾನೆ ದೊಡ್ಡವನಂತೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಲ್ಲದರಲ್ಲೂ ಆಸಕ್ತಿ ಮತ್ತು ಎಲ್ಲದರಲ್ಲೂ ಮುಂದೆ ಇದ್ದಾನೆ ಎಂದು ಹೊಗಳುತ್ತಾರೆ. ಇದಕ್ಕೆ ಕಾರಣ ಹತ್ತು ಹಲವು…. ಎರಡನೇ ಮಗು ಹೊಟ್ಟೆಯಲ್ಲಿರುವಾಗಲೇ ದೊಡ್ಡ ಮಗುವಿಗೆ ತಮ್ಮ ಇಲ್ಲವೇ ತಂಗಿ ತಾಯಿಯ ಹೊಟ್ಟೆಯಲ್ಲಿದ್ದು ಇನ್ನೂ ಕೆಲವೇ ದಿನಗಳಲ್ಲಿ ಅದು ತನ್ನೊಂದಿಗೆ ಆಟವಾಡಲು ದೊರೆಯುತ್ತದೆ ಮತ್ತು ಅದರೊಂದಿಗೆ ತಾನು ಅತ್ಯಂತ ಪ್ರೀತಿಪೂರ್ವಕವಾಗಿ ನಡೆದುಕೊಳ್ಳಬೇಕು ಎಂದು ಕಲಿಸಲಾಗುತ್ತದೆ. ಸಮಾಧಾನ ತಾಳ್ಮೆಯಿಂದ ವರ್ತಿಸಬೇಕು ಎಂದು ಪದೇಪದೇ ಹೇಳಿಕೊಡಲಾಗುತ್ತದೆ.ಖಂಡಿತವಾಗಿಯೂ ಇದು ತಪ್ಪಲ್ಲ. ಆದರೆ ಹಾಗೆ ಹೇಳುವ ಭರದಲ್ಲಿ, ಮಗು ಹುಟ್ಟಿದ ನಂತರ ಎಲ್ಲಾ ವಿಷಯಗಳಲ್ಲಿಯೂ ದೊಡ್ಡ ಮಗುವೆ ಸಮಾಧಾನದಿಂದ ಇರಲು ಸೂಚಿಸಲಾಗುತ್ತದೆ. ಸಹಜವಾಗಿಯೇ ಪಾಲಕರ ಮಾತನ್ನು ಒಪ್ಪಿಕೊಳ್ಳುವ ಮಗು ತನಗಿಂತ ಕಿರಿಯ ಮಗುವಿನ ಕಾಳಜಿ ವಹಿಸುತ್ತಾ ತಾನು ಹಿಂದೆ ಉಳಿಯುತ್ತದೆ. ಚಿಕ್ಕವರಿದ್ದಾಗ ತನಗಿಂತ ಚಿಕ್ಕವರಾದ ಒಡಹುಟ್ಟಿದವರೊಂದಿಗೆ ಪ್ರೀತಿ ಮತ್ತು ಸೌಹಾರ್ದತೆಯಿಂದ ಇರುವ ಮಗು ಮುಂದೆ ಪಾಲಕರ ಹೋಲಿಕೆಯಿಂದ ನಿರಾಶನಾಗಿ ಬೇಸರಗೊಳ್ಳಬಹುದು, ಮಾನಸಿಕವಾಗಿ ಮುದುಡಬಹುದು,  ಸಿಡಿದೇಳಬಹುದು.ಓದಿನಲ್ಲಿ ಹಿಂದೆ ಬೀಳಬಹುದು, ಆಸಕ್ತಿ ಕಡಿಮೆಯಾಗಬಹುದು.ಇದುವರೆಗೂ ಮನೆಯವರೆಲ್ಲರ ಅಚ್ಚುಮೆಚ್ಚಿದ ಮಗು ಒಮ್ಮಿಂದೊಮ್ಮೆಲೆ ತನ್ನ ಮೇಲಿದ್ದ ಗಮನಿಸುವಿಕೆಯ ಸ್ಪಾಟ್ ಲೈಟ್ ತನ್ನ ಸಹೋದರ ಅಥವಾ ಸಹೋದರಿಯ ಮೇಲೆ ಬಿದ್ದಾಗ ಪುಟ್ಟ ಮಗುವಿನ ಮನದಲ್ಲಿ ಆತಂಕದ ಸುಳಿಗಳು ಎದ್ದು ಮಗು ಆ ಸುಳಿಯಲ್ಲಿ ಸಿಲುಕುತ್ತದೆ.ಇಂತಹ ಸಮಯದಲ್ಲಿ ದೊಡ್ಡ ಮಗುವಿನಿಂದ ಪುಟ್ಟ  ಮಗುವಿಗೆ ದೈಹಿಕವಾಗಿ ಏನಾದರೂ ಹಾನಿಯಾಗಬಹುದು ಎಂಬ ಕಾರಣದಿಂದ ಪಾಲಕರು ತಮಗರಿವಿಲ್ಲದೆ ಪುಟ್ಟ ಮಗುವನ್ನು ಮುಚ್ಚಟೆಯಿಂದ ಸಾಕಿ ಬೆಳೆಸಿ ದೊಡ್ಡ ಮಗುವಿನೊಂದಿಗೆ ತುಸು ಅಂತರವನ್ನು ಕಾಯುತ್ತಾರೆ… ಇದು ಅಗೋತರವಾಗಿ ಅವರಿಬ್ಬರ ನಡುವೆ ಒಂದು ಪುಟ್ಟ ಕಂದರವನ್ನು ಸೃಷ್ಟಿಮಾಡುತ್ತದೆ ಮತ್ತು ಬೆಳೆಯುತ್ತಾ ಹೋದಂತೆ ಈ ಕಂದರ ಹೆಚ್ಚು ಅಗಲವಾಗುತ್ತಾ ಹೋಗುತ್ತದೆ…ಆದ್ದರಿಂದ ಎರಡನೆಯ ಮಗುವನ್ನು ಹೊಂದಿರುವ ಪಾಲಕರು ತಮ್ಮ ಎರಡು ಮಕ್ಕಳ ನಡುವೆ ಜೈವಿಕ ಸಂಬಂಧಕ್ಕೆ ಮಿಗಿಲಾದ ಆತ್ಮೀಯತೆ ಪ್ರೀತಿ ವಿಶ್ವಾಸ ಮತ್ತು ಸ್ನೇಹ ಭಾವಗಳನ್ನು ತುಂಬಲು ಈ ರೀತಿ ಪ್ರಯತ್ನಿಸಬಹುದು.ನಿಮ್ಮ ಮಕ್ಕಳು ನಿಮಗೆ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವನ್ನು ಹಚ್ಚುವ ರೀತಿಯಲ್ಲಿ ನಿಮ್ಮ ವರ್ತನೆ ಇರಬಾರದು. ನಿಮ್ಮ ಮಾತನ್ನು ಕೇಳುವ ಮಗುವನ್ನು ಪ್ರೀತಿಸುವ ಮತ್ತು ಕೇಳದೆ ಹೋಗುವ ಮಗುವಿನ ಮೇಲೆ ತುಸು ಸಿಟ್ಟು ಸಹಜವಾಗಿ ನಿಮಗೆ ಬರಬಹುದು. ಆದರೆ ಮಗು ನಿಮ್ಮ ಮಾತನ್ನು ಏಕೆ ಕೇಳುತ್ತಿಲ್ಲ ಎಂಬುದರ ಹಿಂದಿನ ಮರ್ಮವನ್ನು ಮಗುವನ್ನು ಅನುನಯಿಸಿ ಒಲಿಸಿಕೊಳ್ಳುವ ಮೂಲಕ ಆ ಮಗುವಿನ ಮನಸ್ಸಿಗೆ ಸಮಾಧಾನವಾಗುವ ರೀತಿಯಲ್ಲಿ ವರ್ತಿಸುವ ಮೂಲಕ ಮಗುವನ್ನು ತಿದ್ದಬಹುದೇ ಹೊರತು ವಿನಾಕಾರಣ ಮಗುವನ್ನು ಶಿಕ್ಷೆಗೆ ಗುರಿಪಡಿಸಿ ಇಲ್ಲವೇ ಬಿರುಸು ಮಾತುಗಳಿಂದ ದಂಡಿಸಿ ಅಲ್ಲ.ಮಕ್ಕಳು ಪರಸ್ಪರ ಎದುರಾಳಿಗಳಲ್ಲ ಒಬ್ಬರ ಮೇಲೆ ಮತ್ತೊಬ್ಬರ ಕುರಿತು ದೂರು ಹೇಳುವ, ಹಂಗಿಸುವ ರೀತಿಯಲ್ಲಿ ಪಾಲಕರು ಮಕ್ಕಳನ್ನು ಕುರಿತು ಎಂದೂ ಮಾತನಾಡಬಾರದು. ಮಕ್ಕಳ ನಡುವಿನ ಜಗಳಗಳಲ್ಲಿ ಯಾರು ಸರಿ ಮತ್ತು ಯಾರೂ ತಪ್ಪು ಎಂಬುದನ್ನು ಎಣಿಸದೆ, ಎಲ್ಲಿ ಮತ್ತು ಏಕೆ ತಪ್ಪಾಗಿದೆ ಮತ್ತು ಅದನ್ನು ಹೇಗೆ ತಿದ್ದಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಮಕ್ಕಳಿಗೆ ಮನದಟ್ಟು ಮಾಡಿಸಬೇಕು.ಒಂದು ಮಗುವಿನ ಕುರಿತು ಮತ್ತೊಂದು ಮಗುವಿನ ಮುಂದೆ ಅಥವಾ ಹಿಂದೆ ಅವಹೇಳನಕಾರಿಯಾಗಿ ಮಾತನಾಡಬಾರದು.ಇದು ಮಕ್ಕಳಲ್ಲಿ ಮಾನಸಿಕ ಅಭದ್ರತೆ ಮತ್ತು ನೋವಿಗೆ ಕಾರಣವಾಗುತ್ತದೆ.ಪಾಲಕರು ತಮ್ಮ ಒಂದು ಮಗುವನ್ನು ಚಿನ್ನ ರನ್ನ ಎಂದು ಮತ್ತೊಂದು ಮಗುವನ್ನು ಹರಕೆಯ ಕುರಿ ಎಂಬಂತೆ  ಭಾವಿಸಬಾರದು.ಎರಡನೇ ಮಗುವನ್ನು ಪಾಲಿಸಲಿ ಎಂದು ಆಶಿಸುವ ಪಾಲಕರು ಮಗುವಿನ ಮೇಲೆ ಎಲ್ಲ ರೀತಿಯ ಭಾವನಾತ್ಮಕ ಹೊರೆಯನ್ನು ಹೊರಿಸುತ್ತಾರೆ… ಇದು ಖಂಡಿತವಾಗಿಯೂ ತಪ್ಪು. ಮಗುವಿನ ಎಳೆಯ ಹೆಗಲಿಗೆ ಅದಕ್ಕೂ ಮುಖ್ಯವಾಗಿ ಮನಸ್ಸಿಗೆ ಇದು ಖಂಡಿತವಾಗಿಯೂ ಬೆಟ್ಟವನ್ನು ಹೊತ್ತಂತಹ ಭಾವವನ್ನು ಸೃಷ್ಟಿಸಿ ಮೊದಮೊದಲು ಮಾನಸಿಕವಾಗಿ ನಲುಗುವ ಮಗು ಮುಂದೆ ಹೋಲಿಕೆಗಳಿಂದ ಬೇಸತ್ತು ಹೋಗುತ್ತದೆ. ಅದರ ಸುಪ್ತ ಮನಸ್ಸು ಮೊದಮೊದಲು ಹಿಂಜರಿದರೂ ನಂತರ ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯೆಸುತ್ತದೆ. ನಾನೇ ಮಾಡಬೇಕು ಎಂಬುದರಿಂದ ನೊಂದು ನಾನೇಕೆ ಮಾಡಬೇಕು ಎಂದು ಸಿಡಿದು ನಿಲ್ಲುವ ಮಟ್ಟಿಗೆ ಅದರ ಪಯಣ ಸಾಗುತ್ತದೆ. ಇದು ಖಂಡಿತವಾಗಿಯೂ ಪಾಲಕರು ಎಚ್ಚರಗೊಳ್ಳಬೇಕಾದ ವಿಷಯವೇ ಸರಿ.ಸಹೋದರರು ದಾಯಾದಿಗಳಾಗಿ ಬದಲಾಗುವುದರಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿರುತ್ತದೆ ಅರಿತೋ ಅರಿಯದೆಯೋ ಪಾಲಕರು ಮಾತನಾಡುವ ಪ್ರತಿಯೊಂದು ಮಾತು ಕ್ರಿಯೆಗಳು ಮಕ್ಕಳ ಮೇಲೆ ಅಪಾರ ಪರಿಣಾಮವನ್ನು ಬೀರುತ್ತವೆ.. ಒಡಹುಟ್ಟಿದವರಲ್ಲಿ ಉಂಟಾಗುವ ಗೊಂದಲ ಆತಂಕ, ಅಸಹನೆ ಮತ್ತು  ಅಶಂಕೆಗಳಿಗೆ ಮೂಲ ಬೇರು ಪಾಲಕರೇ ಆಗಿರುತ್ತಾರೆ. ಮಕ್ಕಳನ್ನು ಬೆಳೆಸುವಾಗ ಪಾಲಕರ ಮತ್ತು ಕುಟುಂಬದ ಇತರ ಸದಸ್ಯರ ವರ್ತನೆ, ಮನೆಯಲ್ಲಿನ ವಾತಾವರಣ ಮಕ್ಕಳಲ್ಲಿ ಈ ಭಾವನೆಗಳು ಬೇರೂರಲು ಕಾರಣವಾಗಿರುತ್ತವೆ.ಎಲ್ಲ ಮನೆಗಳಲ್ಲಿಯೂ ಹೀಗೆಯೇ ಆಗಬೇಕು ಎಂದಿಲ್ಲ ಮತ್ತು ಆಗುತ್ತದೆ ಎಂದು ಭಾವಿಸುವಂತಿಲ್ಲ. ಆಗಬಹುದು ಎಂಬ ಕಾರಣಗಳನ್ನು ಹೀಗೆ ಪಟ್ಟಿ ಮಾಡಲಾಗಿದ್ದು ಈ ಕುರಿತು ಪಾಲಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ,ಆದರೆ ಖಂಡಿತವಾಗಿಯೂ ಮಕ್ಕಳ ನಡುವೆ ಭಿನ್ನಾಭಿಪ್ರಾಯಗಳು ಬಾರದಂತೆ ಅವರನ್ನು ಪಾಲಿಸುವ ಬೆಳೆಸುವ ಜವಾಬ್ದಾರಿ ಮಾತ್ರ ಪಾಲಕರದ್ದೇ. ಸಂತ ಸೂಕ್ಷ್ಮ ಮನಸ್ಥಿತಿಯ ಮಕ್ಕಳು ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯಿಸಿದರೆ ಕೆಲ ಗಟ್ಟಿ ವ್ಯಕ್ತಿತ್ವದ ಮಕ್ಕಳು ಇಲ್ಲದ ಅಹಂಭಾವವನ್ನು ತೋರುತ್ತ ಎದೆ ಸೆಟೆಸಿ ತಾವು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಾರೆ.ಒಡಹುಟ್ಟಿದವರಲ್ಲಿ ಇದು ಸಾಮಾನ್ಯ ಎಂದು ತೋರಿದರೂ ವಿಪರೀತಕ್ಕೆ ಇಟ್ಟುಕೊಳ್ಳದಂತೆ ಇದನ್ನು ನಿರ್ವಹಿಸುವ ಜವಾಬ್ದಾರಿ ಖಂಡಿತವಾಗಿಯೂ ಪಾಲಕರದ್ದು.ಈ ಹಿಂದೆ ಮಕ್ಕಳಾಗಿ ಒಡಹುಟ್ಟಿದವರಾಗಿ ತಮ್ಮ ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಹಿರಿಯರಾದ ಹೊತ್ತಿನಲ್ಲಿ ನೆನೆದು ನಗುವ ಜನರಿರುವಂತೆಯೇ, ತಮ್ಮ ಬದುಕಿನ ಎಲ್ಲಾ ಅವಘಡಗಳಿಗೂ ತಮ್ಮ ಪಾಲಕರು ಮತ್ತು ಒಡಹುಟ್ಟಿದವರೇ ಕಾರಣ ಎಂದೂ, ಬಾಲ್ಯದಲ್ಲಿ ತಮ್ಮನ್ನು ಪರಿಗಣಿಸದೆ ಹೋದ ಕಾರಣ ತಾವು ಹೀಗಿರುವುದು ಎಂದು ಮತ್ತೆ ಕೆಲವರು ಹೇಳಬಹುದು. ಯಾವ ರೀತಿ ಎಲ್ಲಾ ಬೆರಳುಗಳು ಒಂದೇ ಸಮನೆ ಇರುವುದಿಲ್ಲವೋ ಅದೇ ರೀತಿ ಎಲ್ಲರ ಮನಸ್ಥಿತಿಯೂ ಒಂದೇ ಸಮನಾಗಿ ಇರುವುದಿಲ್ಲ… ಅವರವರ ಬುದ್ಧಿಗೆ, ಗ್ರಹಿಕೆಗೆ ಮತ್ತು ಭಾವಕ್ಕೆ ತಕ್ಕಂತೆ ಮನುಷ್ಯನ ವರ್ತನೆ ಇರುತ್ತದೆ.ಪಾಲಕರಾಗಿ ಇದನ್ನು ನಾವು ಖಂಡಿತವಾಗಿಯೂ ತಿಳಿದುಕೊಳ್ಳಬೇಕು.ಮತ್ತೆ ಕೆಲವರು ವಾಸ್ತವ ಪರಿಸ್ಥಿತಿಯನ್ನು ಕುರಿತು ಪ್ರಬುದ್ಧವಾಗಿ ಯೋಚಿಸಿ ತಾವು ಅನುಭವಿಸಿದ ತೊಂದರೆಗಳು ತಮ್ಮ ಮಕ್ಕಳ ಬಾಳಿನಲ್ಲಿ ಬರದೇ ಇರಲಿ ಎಂದು ಆಶಿಸುತ್ತಾರೆ ಮತ್ತು ಆ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಯೋಚಿಸಿ ಅಂತೆಯೇ ನಡೆದುಕೊಳ್ಳುತ್ತಾರೆ. ಸಾಮಾಜಿಕವಾಗಿ ನಡೆದು ಬಂದ ಕೆಲ ತಪ್ಪು ತಿಳುವಳಿಕೆಗಳ ಸರಪಳಿಯನ್ನು ತುಂಡರಿಸಿ ಹೊಸ ಬೆಸುಗೆಯನ್ನು ಹಾಕುತ್ತಾರೆ. ತಮ್ಮದೇ ಮಕ್ಕಳಲ್ಲಿ ಅತ್ಯುತ್ತಮ ಸ್ನೇಹ,, ಬಾಂಧವ್ಯ ಪ್ರೀತಿ ವಿಶ್ವಾಸಗಳ ಅನುಬಂಧವನ್ನು  ಉಳಿಸುವ ನಿಟ್ಟಿನಲ್ಲಿ ತಮ್ಮ ಪಾಲಿನ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ.ಎಲ್ಲ ಮಕ್ಕಳನ್ನು ಸಮಾನಸ್ಥಾಯಿ ಭಾವದಲ್ಲಿ ನೋಡುವ, ಸುರಕ್ಷತಾ ಭಾವವನ್ನು ಕೊಡುವ ಮತ್ತು ಯಾವುದೇ ರೀತಿಯ ಶರತ್ತು ಬದ್ಧತೆಗಳನ್ನು ಹೊಂದಿರದ ಏಕರೂಪದ ಪ್ರೀತಿಯನ್ನು ಕೊಡ ಮಾಡುತ್ತಾರೆ. ಅದುವೇ ಪಾಲಕತ್ವದ ನಿಜವಾದ ಗುರಿ. ವೀಣಾ ಹೇಮಂತ್ ಗೌಡ ಪಾಟೀಲ್

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಕಾವ್ಯಯಾನ

ಜಯಂತಿ ಕೆ ವೈ ಅವರ ಕವಿತೆ “ಸಾವಿನ ಮನೆ ಸೇರುವ ಸತ್ಯ”

ಕಾವ್ಯ ಸಂಗಾತಿ ಜಯಂತಿ ಕೆ ವೈ “ಸಾವಿನ ಮನೆ ಸೇರುವ ಸತ್ಯ” ಯಾರೂ ಬರೆಯದ ಕತೆಯ ಲೇಖಕಿಯಾಗುವ ಉಮೇದಿನಲಿಅಕ್ಷರಗಳ ಹೆಕ್ಕುವಾಗ ಆಸೆಯೇ ಇಲ್ಲವೆಂದ ಪದಗಳಿಗೆ ಪ್ರಶಸ್ತಿಗಳ ಆಮಿಷವೊಡ್ಡಿದೆ! ಕಾರಣವೇ ಇಲ್ಲದೆ ಕತೆಯಾಗುವಸುಳ್ಳಿನ ಬಲೆಯೊಳಗೆ ಸಿಲುಕುವಬೇಡವೆಂದರೂ ಬೇಕೆನಿಸುವಬಯಕೆ ಬಿಸಿಯ ಕಾವಿಗೆಪದಗಳು ಕರಗಿದವು. ಅದೆಲ್ಲೋ ಕುಳಿತ ಪುಟ್ಟ ಹಕ್ಕಿಯ ಶಿಳ್ಳೆಕೂಗುಎದೆಹಾಡಿಗೆ ಸ್ವರ ಕೂಡಿಸುವ ವೇಳೆಗೆಅಲ್ಲೊಂದು ಕಥಾನಕದ ಅನಾವರಣ ಸುಳ್ಳು ಸತ್ಯವಾಗಿಸತ್ಯ ಸುಳ್ಳಾಗಿ ಹೇಳುವವರ ಬಾಯಲ್ಲಿಹೊರಳಾಡುತ್ತಾ ಹೊರಬಿದ್ದವು ಮಾತಾಗಿದಾಖಲಾದವು ಮಸಿಯಾಗಿ. ಹೇಳಲೇನಿದೆ ಕೇಳಿದವರಿಗೆಲ್ಲಒಂದೇ ಪ್ರಶ್ನೆಉತ್ತರವೇ ಇಲ್ಲದಮಾರುತ್ತರ ಬಯಸದ ಹಾಗೆದಿಕ್ಕೆಡಿಸುವಂತೆ ಪದಗಳ ನದಿ ಹರಿದಂತೆಕತೆಗಾರಳಾಗುವ ಕನಸಿನ ಹಕ್ಕಿ ರೆಕ್ಕೆ ಬಿಚ್ಚಿತ್ತು! ಅಲ್ಲೊಂದು ದಿವ್ಯಮೌನರೆಕ್ಕೆಬಿಚ್ಚಿದ ಕನಸಿನ ಹಕ್ಕಿಗಾಗೇ ಕಾಯುತ್ತಿತ್ತುಮೌನ ಮಾತನಾಡಿತು‘ನ ಬ್ರೂಯಾತ್ ಸತ್ಯಮಪ್ರಿಯಮ್’ಸತ್ಯ ಸಾವಿನಮನೆ ಸೇರಿತುಪದಗಳಾಗುವ ಆಸೆಯೇಇಲ್ಲದ ವರ್ಣಮಾಲೆಯ ಅಕ್ಷರಗಳಲ್ಲಿಮೂಡಿತ್ತು ಮಂದಹಾಸ!! ಜಯಂತಿ ಕೆ ವೈ

ಜಯಂತಿ ಕೆ ವೈ ಅವರ ಕವಿತೆ “ಸಾವಿನ ಮನೆ ಸೇರುವ ಸತ್ಯ” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ ಅವರ ಕವಿತೆ “ಒಲುಮೆಯ ಸಾಂಗತ್ಯ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ “ಒಲುಮೆಯ ಸಾಂಗತ್ಯ” ಇರಬೇಕು ಒಲುಮೆಯ ಸಾಂಗತ್ಯಮಧುರ ಭಾವಗಳು ಬೆಸೆದುಒಲವಿನ ಹೊನಲು ಹರಿಸಲು ಇರಬೇಕು ಒಲುಮೆಯ ಸಾಂಗತ್ಯಮಾತುಗಳು ನೂರಿದ್ದರೂಮೌನದ ಭಾಷೆ ಅರಿಯಲು ಇರಬೇಕು ಒಲುಮೆಯ ಸಾಂಗತ್ಯಬಯಕೆಯ ಬಳ್ಳಿಗೆಆಸರೆಯಾಗಿ ನಿಲ್ಲಲು ಇರಬೇಕು ಒಲುಮೆಯ ಸಾಂಗತ್ಯತಪ್ಪು ಒಪ್ಪುಗಳ ನಡುವೆತಿದ್ದಿ ಸರಿದಾರಿ ತೋರಲು ಇರಬೇಕು ಒಲುಮೆಯ ಸಾಂಗತ್ಯಪ್ರೀತಿ ಸ್ನೇಹಗಳ ಸಮ್ಮಿಲನಮನದಂಗಳದಿ ಅರಳಲು ಇರಬೇಕು ಒಲುಮೆಯ ಸಾಂಗತ್ಯಮನದ ಮಧುರ ಮಿಲನಕೆಅಮೃತಧಾರೆ ಹರಿಸಲು ಇರಬೇಕು ಒಲುಮೆಯ ಸಾಂಗತ್ಯಸಮಸ್ಯೆ ಸವಾಲುಗಳಿಗೆಭರವಸೆ ಬಾಳು ಬೆಳಗಲು ಇರಬೇಕು ಒಲುಮೆಯ ಸಾಂಗತ್ಯದೂರ ದಾರಿಯ ಪಯಣಕೆಸದಾಕಾಲ ಸಿಹಿ ಸ್ಪರ್ಶ ನೀಡಲು ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ

ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ ಅವರ ಕವಿತೆ “ಒಲುಮೆಯ ಸಾಂಗತ್ಯ” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಅಕ್ಕ ತಂಗಿಯರ ಪರಸ್ಪರ ಸಾಂತ್ವಾನದ ಕ್ಷಣಗಳು ಸುಮತಿಯ ಅನುಪಸ್ಥಿತಿಯಲ್ಲಿ ಮೂರನೇ ಮಗಳು ತಾಯಿಯ ಬದಲು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಶಾಲೆ ಹೋಗುತ್ತಿದ್ದಳು. ತೋಟದ ಶಾಲೆಯ ಮಕ್ಕಳಿಗೆ ಯಾರಾದರೂ ಹೋಗಿ ಅಕ್ಷರಾಭ್ಯಾಸ ಮಾಡಿಸಲೇ ಬೇಕಾದ ಅನಿವಾರ್ಯತೆ ಇತ್ತು. ಒಂದು ದಿನ ಶಾಲೆಗೆ ರಜೆಯಾದರೂ ಕೂಡಾ ಮರುದಿನ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದರು. ಮಕ್ಕಳು ಶಾಲೆಗೆ ಬರದೇ ಹೋದರೆ ತಿಂಗಳ ಸಂಬಳ ಎಲ್ಲಿ ತಪ್ಪಿ ಹೋಗುವುದೋ ಎನ್ನುವ ಭಯ. ಸಂಬಳದಿಂದ ಬರುವ ಹಣದಲ್ಲಿ ತಿಂಗಳು ಪೂರ್ತಿ ಸುಮತಿಯ ಕುಟುಂಬ ಕಳೆಯಬೇಕಿತ್ತು. ಎರಡನೇ ಮಗಳು ಕೆಲಸ ಮಾಡುತ್ತಿದ್ದರೂ ಅವಳಿಗೆ ಬರುವ ಸಂಬಳವೂ ಕಡಿಮೆ ಇತ್ತು. ಈಗ ಸುಮತಿ ಆಸ್ಪತ್ರೆಯಲ್ಲಿ ಇರುವುದರಿಂದ ಖರ್ಚುಗಳು ಸ್ವಲ್ಪ ಹೆಚ್ಚಿತ್ತು. ಸರಕಾರಿ ಆಸ್ಪತ್ರೆ ಆದ್ದರಿಂದ ಅಲ್ಲಿ ವಾರ್ಡ್ ಗೆ ಹಣ ಕಟ್ಟುವ ಅಗತ್ಯ ಇರಲಿಲ್ಲ. ಮಾತ್ರೆ ಔಷಧಿಗಳು ಅಲ್ಲಿಯೇ ಸಿಗುತ್ತಿದ್ದವು. ಹೊರಗಿನಿಂದ ತರಬೇಕೆಂದಿದ್ದರೆ ಎಷ್ಟೇಟಿನ ಲೆಕ್ಕದಲ್ಲಿ ಮೆಡಿಕಲ್ ಸ್ಟೋರ್ ನಿಂದ ಖರೀದಿಸಬಹುದಿತ್ತು. ಆದರೆ ಇನ್ನುಳಿದ ಖರ್ಚನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು. ಗುರುವಾರ ಶಾಲೆಗೆ ರಜೆ ಇದ್ದ ಕಾರಣ ಮೂರನೇ ಮಗಳು ಸುಮತಿಯನ್ನು ನೋಡಲು ಆಸ್ಪತ್ರೆಗೆ ಬಂದಳು. ಇನ್ನೂ ಹದಿನಾರರ ಹರೆಯದ ಹುಡುಗಿ ತೋಟದ ನಿರ್ಜನವಾದ ದಾರಿಯಲ್ಲಿ ಒಬ್ಬಳೇ ಶಾಲೆಗೆ ಹೋಗಿ ಬರಬೇಕಿತ್ತು. ಸುಮತಿ ಆಸ್ಪತ್ರೆಯಲ್ಲಿ ದಾಖಲಾದ್ದರಿಂದ ಮನೆಯಲ್ಲಿಯೂ ಕೂಡ ಅವಳೊಬ್ಬಳೇ ಇರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಮತಿಯ ಮಕ್ಕಳು ಧೈರ್ಯವಂತರು. ಅನಿವಾರ್ಯತೆಗಳಲ್ಲಿ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳಲು ಶಕ್ತರಾಗಿದ್ದರು. ಜೀವನದಲ್ಲಿ ಅವರು ಅನುಭವಿಸಿದ ಕಷ್ಟಗಳು ಆವರಿಗೆ ವಿಧಿ ಒಡ್ಡಿರುವ ಸವಾಲುಗಳನ್ನು ಎದುರಿಸಿ ಬದುಕುವ ಪಾಠ ಕಲಿಸಿತ್ತು. ಆದರೂ ಭಯ, ಆತಂಕ, ಒಂಟಿತನ ಇವೆಲ್ಲವೂ ಕಾಡುತ್ತಿದ್ದರೂ ಆ ಹುಡುಗಿ ಧೈರ್ಯವಾಗಿ ಶಾಲೆಗೆ ಹೋಗಿ ಬಂದು ತಾಯಿಯ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಳು. ಇದೀಗ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ತಾಯಿಯನ್ನು ಕಂಡು ಅವಳ ಮನಸ್ಸು ವಿಹ್ವಲಗೊಂಡಿತು. ಕಾಲೇಜಿನಿಂದ ಆಸ್ಪತ್ರೆಗೆ ಬಂದಾಗ, ತನ್ನ ತಂಗಿ ತಾಯಿಯನ್ನು ನೋಡಲು ಬಂದಿರುವುದು ಅಕ್ಕನಿಗೆ ತಿಳಿದು ಸಂತೋಷದ ಜೊತೆಗೆ ದುಃಖವೂ ಆಯಿತು. ವೈದ್ಯರು ತಾಯಿಯ ಬಗ್ಗೆ ತಿಳಿಸಿರುವ ಸಂಗತಿಯನ್ನು ತಂಗಿಗೆ ಹೇಳಲೇ ಬೇಕಿತ್ತು. ಇವಳಿಗೆ ಅವಳು, ಅವಳಿಗೆ ಇವಳು ಸದಾ ಸಾಂತ್ವನ ನೀಡಿ, ಪರಸ್ಪರರನ್ನು ಕಾಳಜಿವಹಿಸುತ್ತಿದ್ದರು. ಇಬ್ಬರೂ ಅಕ್ಕತಂಗಿಯರಂತಿರದೇ ಆತ್ಮೀಯ ಗೆಳತಿಯರಂತೆ ಅನ್ಯೋನ್ಯವಾಗಿದ್ದರು. ಹಾಗಾಗಿ ಏನೇ ಇದ್ದರೂ ಮುಚ್ಚು ಮರೆ ಇಲ್ಲದೇ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆದರೂ ಇಂತಹಾ ಖೇದಕರ ಸಂಗತಿಯನ್ನು ತಿಳಿಸಲು ಅಕ್ಕನಿಗೆ ಕಷ್ಟವಾಯಿತು…… ಇನ್ನು ನಮ್ಮ ತಾಯಿ ಬದುಕಿರುವುದು ಕೇವಲ ಆರು ತಿಂಗಳ ಮಾತ್ರ…. ಅಮ್ಮ ತುಂಬಾ ಗಂಭೀರ ಸ್ಥಿತಿಯಲ್ಲಿರುವಳು…. ಒಂದೊಂದು ದಿನ ಕಳೆಯುತ್ತಿದ್ದಂತೆ ಅವಳು ನಮ್ಮಿಂದ ದೂರವಾಗುತ್ತಿದ್ದಾಳೆ… ಎನ್ನುವ ಸತ್ಯವನ್ನು ನಾನು ಹೇಗೆ ತಂಗಿಗೆ ಹೇಳಲಿ? ಎಂಬ ಆಲೋಚನೆಯಲ್ಲಿ ಇದ್ದಳು. ಸುಮತಿಯ ಮೂರನೇ ಮಗಳು ತನ್ನ ತಾಯಿ ಮತ್ತು ಅಕ್ಕನ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಳು. ತಾಯಿಯ ಮುಖದಲ್ಲಿ ಭರವಸೆಯ ಛಾಯೆ ಇದ್ದರೆ, ಅಕ್ಕನ ಮುಖದಲ್ಲಿ ನಿರಾಶೆಯ ಛಾಯೆ ಮನೆ ಮಾಡಿತ್ತು. ಸದಾ ಹಸನ್ಮುಖಿಯಾದ ಅಕ್ಕ ಗಂಭೀರವಾದ ವಿಚಾರವಿಲ್ಲದೆ ಹೀಗೆ ಚಿಂತಾಕ್ರಾಂತಳಾಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ತಂಗಿಗೆ ತಿಳಿದಿತ್ತು. ಆದರೂ ತಾಯಿಯ ಎದುರು ಏನನ್ನೂ ಕೇಳುವುದು ಸೂಕ್ತವಲ್ಲ ಎಂದುಕೊಂಡು…. “ಅಮ್ಮಾ ….ಈಗ ಹೇಗಿದ್ದೀಯಾ?….ಮೊನ್ನೆ ನೀನು ಮನೆಯಿಂದ ಹೊರಟಾಗ ತುಂಬಾ ದಣಿದಿದ್ದೆ…. ಈಗ ನಿನ್ನ ಆಯಾಸ ಕಡಿಮೆಯಾಯಿತೇ? ಮನೆಯಲ್ಲಿ ನೀನು ಆಗಾಗ ವಾಂತಿ ಮಾಡಿಕೊಳ್ಳುತ್ತಿದ್ದೆ…. ಈಗ ಹೇಗಿದೆ?…. ಊಟ ಸೇರುತಿದೆಯೇ?…. ಎಂದು ತಾಯಿಯನ್ನು ಕೇಳಿದಳು. ಅದಕ್ಕೆ ಸುಮತಿ ಈಗ ಸ್ವಲ್ಪ ಪರವಾಗಿಲ್ಲ ಮಗಳೇ….. ವೈದ್ಯರ ಮೇಲ್ನೋಟದಲ್ಲಿ, ದಾದಿಯರ ಶುಶ್ರೂಷೆಯಲ್ಲಿ ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ…. ಜೊತೆಗೆ ನಿಮ್ಮಿಬ್ಬರ ಪ್ರೀತಿ ಮತ್ತು ಕಾಳಜಿ ನನಗೆ ಔಷಧವಲ್ಲವೇ? ….. ಅದಿರಲಿ ನೀನು ಹೇಗಿದ್ದೀಯಾ?….. ನಿನ್ನನ್ನು ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ನಾನು ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವ ಅನಿವಾರ್ಯ ಪರಿಸ್ಥಿತಿ ಬಂತು…. ನನಗೆ ತಿಳಿದಿರಲಿಲ್ಲ ಹೀಗೆ ಕೂಡಲೇ ನನ್ನನ್ನು ಆಸ್ಪತ್ರೆಯಲ್ಲಿ ದಾಖಲು ಮಾಡುತ್ತಾರೆ ಎಂಬುದು…. ವೈದ್ಯರು ಪರಿಶೀಲನೆ ನಡೆಸಿ ಮನೆಗೆ ಕಳುಹಿಸುತ್ತಾರೆ ಎಂದು ತಿಳಿದಿದ್ದೆ…. ಇಲ್ಲಿಗೆ ಬಂದ ಕೂಡಲೇ ನನ್ನನ್ನು ವೈದ್ಯರು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿ, ಇಲ್ಲಿ ದಾಖಲಾಗುವಂತೆ ತಿಳಿಸಿದರು…. ನಿನ್ನ ಅಕ್ಕ ಕೂಡ ಕೂಡಲೇ ನನ್ನನ್ನು ಇಲ್ಲಿಗೆ ದಾಖಲಿಸಿದಳು”….. ಎಂದಾಗ,…. “….ಅಮ್ಮಾ ….ಅಕ್ಕ ಆ ದಿನವೇ ನನಗೆ ಈ ಎಲ್ಲಾ ವಿಷಯವನ್ನು ತಿಳಿಸಿದ್ದಾಳೆ…. ನೀನು ಹೆಚ್ಚು ಯೋಚಿಸಿ ಆಯಾಸ ಪಡಬೇಡ…. ನಾನು ಅಲ್ಲಿ ಚೆನ್ನಾಗಿದ್ದೇನೆ…. ಅಲ್ಲಿ ಸುತ್ತಲೂ ನಮಗೆ ಪರಿಚಿತರಲ್ಲವೇ ಇರುವುದು? ಹಾಗಾಗಿ ಯಾವುದೇ ತೊಂದರೆ ಇಲ್ಲ…. ದಿನವೂ ನಾನು ಶಾಲೆಗೆ ಹೋಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಬರುತ್ತಿದ್ದೇನೆ…. ನೀನು ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಬೇಡ…. ನಿನ್ನ ಜೊತೆ ಸದಾ ನಾನು ಮತ್ತು ಅಕ್ಕ ಇದ್ದೇವೆ…. ಎಂದಳು. ಮಗಳ ಮಾತನ್ನು ಕೇಳಿದ ಸುಮತಿ ಎದ್ದು ಕುಳಿತು, ಇಬ್ಬರನ್ನೂ ತನ್ನ ಅಕ್ಕಪಕ್ಕದಲ್ಲಿ ಬಂದು ಕುಳಿತುಕೊಳ್ಳುವಂತೆ ಸೂಚಿಸಿದಳು.ತಾಯಿಯ ಅಣತಿಯಂತೆ ಇಬ್ಬರೂ ಅಕ್ಕಪಕ್ಕ ಬಂದು ಕುಳಿತರು. ಸುಮತಿ ಮಕ್ಕಳಿರಿಬ್ಬರನ್ನೂ ತೋಳಿಂದ ಬಳಸಿ …. ಮಕ್ಕಳೇ ಈ ಅಮ್ಮನನ್ನು ಕ್ಷಮಿಸಿ…. ಈ ವಯಸ್ಸಿಗೇ ನಿಮ್ಮನ್ನು ಹಲವಾರು ಕಷ್ಟಗಳಿಗೆ ದೂಡಿದೆ.‌ ನನ್ನಿಂದ ನಿನ್ನ ವಿಧ್ಯಾಭ್ಯಾಸ ಕೂಡಾ ಮೊಟಕುಗೊಂಡಿತು…..ಎನ್ನುತ್ತಾ ಮೂರನೇ ಮಗಳ ಭುಜವನ್ನು ಹಿಡಿದು ತನ್ನಡೆಗೆ ಆನಿಸಿಕೊಂಡು ಸುಮತಿ ಹೇಳಿದಳು….. “ಅಮ್ಮಾ …..ಅದಕ್ಕಾಗಿ ನೀನೇನೂ ಬೇಸರಗೊಳ್ಳಬೇಡ…. ಎಸ್ ಎಸ್ ಎಲ್ ಸಿ ವರೆಗೂ ಓದಿದ್ದೇನೆ…. ಅಕ್ಕ ಈಗ ಪದವಿ ತರಗತಿಯಲ್ಲಿ ಓದುತ್ತಿದ್ದಾಳೆ…. ತಂಗಿ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾವು ವಿದ್ಯೆಯನ್ನು ಕರೆಯಲಿ ಎಂದು ನೀನು ಮಾಡಿದ ತ್ಯಾಗ ಅಷ್ಟಿಷ್ಟಲ್ಲ”…. ಎಂದು ಹೇಳುತ್ತಾ, ನೀನೇಕೆ ಹೀಗೆ ಮಂಕಾಗಿರುವೆ ಎಂಬಂತೆ ಪ್ರಶ್ನಾರ್ಥಕವಾಗಿಅಕ್ಕನನ್ನು ನೋಡಿದಳು. ಅವಳ ಮುಖವು ಮ್ಲಾನವಾಗಿತ್ತು. ಕಣ್ಣುಗಳಲ್ಲಿ ಕಂಡೂ ಕಾಣದಂತೆ ಕಣ್ಣೀರಿನ ಪಸೆಯಿತ್ತು. ರುಕ್ಮಿಣಿ ನಾಯರ್

Read Post »

ಕಾವ್ಯಯಾನ

ಎನ್. ಜಯಚಂದ್ರನ್ ಅವರ ಕವಿತೆ “ನೆರಳು ದಾಟಿದ ಹೆಜ್ಜೆ.”

ಕಾವ್ಯ ಸಂಗಾತಿ ಎನ್. ಜಯಚಂದ್ರನ್  “ನೆರಳು ದಾಟಿದ ಹೆಜ್ಜೆ.”             ಬಾಳ ಹಾದಿಯಲಿ ನಡೆದು ಬಂದಹಾದಿಯ ಗುರುತುಗಳೆಲ್ಲಾ ಕಥೆಗಳಾದವು,ನಗುವಿನ ಹನಿಗಳು  ಮುತ್ತಾಗಿ ಮೂಡಿನೆನಪಿನ ಮಡಿಲಲ್ಲಿ ಶಾಶ್ವತವಾದವು. ಕಳೆದ ದಿನಗಳ ಸುವರ್ಣ ಕ್ಷಣಗಳುಕನಸಿನಂತೆ ಮನದೊಳಗೆ ಉಳಿದವು,ಸ್ನೇಹದ ಸ್ಪರ್ಶದ ಸಿಹಿ ಮಾತುಗಳುಹೃದಯದ ತಂತಿಗಳಲಿ ಹಾಡಾದವು. ಬಿರುಗಾಳಿಗಳ ನಡುವೆ ನಿಂತ ಧೈರ್ಯಜೀವನದ ಪಾಠವಾಗಿ ಬೆಳೆದಿತು,ಸೋಲಿನ ನೆರಳನ್ನು ದಾಟಿದ ಹೆಜ್ಜೆಗೆಲುವಿನ ಬೆಳಕಾಗಿ ಅರಳಿತು. ತಾಯಿಯ ಮಮತೆ, ತಂದೆಯ ಆಶೀರ್ವಾದಬಾಳ ದಾರಿಯ ದೀಪಗಳಾದವು,ಗುರುವಿನ ಜ್ಞಾನ, ಗೆಳೆಯರ ಪ್ರೀತಿಮನದ ಸಂಪತ್ತಾಗಿ ನೆಲೆಗೊಂಡವು. ಕಾಲದ ಚಕ್ರವು ಮುಂದೆ ಸಾಗಿದರೂಆ ಕ್ಷಣಗಳು ಹಿಂದೆ ಮರೆಯಾಗಲಿಲ್ಲ,ಸಾರ್ಥಕ ಬದುಕಿನ ಸುಂದರ ನೆನಪುಗಳುಮನದ ತೋಟದಲ್ಲಿ ಎಂದೂ ಒಣಗಲಿಲ್ಲ. ಕೊನೆಗೆ ಉಳಿಯುವುದು ಸಂಪತ್ತು ಅಲ್ಲ,ಹೆಸರಿನ ವೈಭವವೂ ಅಲ್ಲ,ಪ್ರೀತಿಯಿಂದ ಬದುಕಿದ ಕ್ಷಣಗಳೇಜೀವನದ ನಿಜವಾದ ಹಬ್ಬವಾಗುವವು. ಸಾರ್ಥಕ ಬದುಕಿನ ನೆನಪುಗಳುಸಂಜೆಯ ಸೂರ್ಯನ ಕಿರಣಗಳಂತೆ,ಅಸ್ತವಾಗುವ ಹೊತ್ತಿನಲ್ಲಿಯೂ ಸಹಮನದ ಆಕಾಶವನ್ನು ಬೆಳಗಿಸುವವು.ನೆರಳು ದಾಟಿದ ಹೆಜ್ಜೆ.            ಎನ್. ಜಯಚಂದ್ರನ್ 

ಎನ್. ಜಯಚಂದ್ರನ್ ಅವರ ಕವಿತೆ “ನೆರಳು ದಾಟಿದ ಹೆಜ್ಜೆ.” Read Post »

You cannot copy content of this page

Scroll to Top