ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪನ ಮಡಿಲು…
ಅದು ಕೇವಲ ಒಬ್ಬ ತಂದೆಯ ಮಡಿಲಲ್ಲ.
ಅದು ನನ್ನ ಬದುಕಿನ ಮೊದಲ ಆಶ್ರಯ,
ಮೊದಲ ಪಾಠಶಾಲೆ,
ಮೊದಲ ದೇವಾಲಯ.
ನಾನು ಈ ಜಗತ್ತಿಗೆ ಬಂದಾಗ ನನಗೆ ಯಾವುದರ ಅರಿವೂ ಇರಲಿಲ್ಲ. ಬೆಳಕು, ಕತ್ತಲೆ, ಮುಖಗಳು, ನಗು, ಅಳು—ಯಾವುದೂ ನನಗೆ ಅರ್ಥವಾಗಲಿಲ್ಲ. ಕಿವಿಗೆ ಬಿದ್ದ ಶಬ್ದಗಳೇ ನನ್ನ ಮೊದಲ ಪರಿಚಯ. ಆ ಶಬ್ದಗಳ ಅರ್ಥ ಗೊತ್ತಾಗುವ ಮೊದಲೇ ನಾನು ಬದುಕಿನೊಳಗೆ ಕಾಲಿಟ್ಟಿದ್ದೆ.
ಅದು ನನ್ನ ಜನನ.
ಆ ಕ್ಷಣದಿಂದಲೇ ಆರಂಭವಾಯಿತು ಒಂದು ಪಯಣ—ನಾನು ಅರ್ಥಮಾಡಿಕೊಳ್ಳುವ ಮೊದಲು ನನ್ನನ್ನು ಅರ್ಥಮಾಡಿಕೊಳ್ಳುತ್ತಿದ್ದ ಬದುಕಿನ ಪಯಣ.
ಬದುಕು ಯಾವಾಗಲೂ ನಮಗೆ ತಿಳಿಸಿ ನಡೆಯುವುದಿಲ್ಲ.
ಅದು ನಮ್ಮನ್ನು ಎತ್ತಿಕೊಂಡು ಹೋಗುತ್ತದೆ.
ಕೆಲವೊಮ್ಮೆ ಮುದ್ದಾಗಿ,
ಕೆಲವೊಮ್ಮೆ ಕ್ರೂರವಾಗಿ.
ನಮ್ಮ ಮನೆ ಚಿಕ್ಕದಾಗಿತ್ತು. ನಾಲ್ಕು ಗೋಡೆಗಳು, ಒಂದು ಚಿಕ್ಕ ಅಡುಗೆಮನೆ, ಒಂದು ಹಳೆಯ ಬಾಗಿಲು. ಆದರೆ ಆ ಮನೆಯೊಳಗೆ ಅಪಾರವಾದ ಉಷ್ಣತೆ ಇತ್ತು. ಅಪ್ಪ, ಅಮ್ಮ, ನಾನು ಮತ್ತು ನನ್ನ ತಂಗಿ—ನಾಲ್ವರೂ ಸೇರಿ ನಮ್ಮದೇ ಒಂದು ಪುಟ್ಟ ಲೋಕವನ್ನು ಕಟ್ಟಿಕೊಂಡಿದ್ದೆವು.
ಅಪ್ಪ ಮನೆಯ ಹೊರಗಿನ ಜಗತ್ತಿನ ಹೊರೆ ಹೊತ್ತವರು.
ಅಮ್ಮ ಮನೆಯೊಳಗಿನ ಜಗತ್ತಿನ ಶಕ್ತಿಯು.
ತಂಗಿ ಅಪ್ಪನ ಜೀವದ ತುಣುಕು.
ನಾನು ಎಲ್ಲವನ್ನೂ ಮೌನವಾಗಿ ನೋಡುತ್ತಾ ಬೆಳೆದುಬಂದ ಮಗ.
ಅಪ್ಪ ನಮ್ಮನ್ನು ಯಾವಾಗಲೂ ಕೊರತೆಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದರು. ಹಣ ಇದ್ದರೂ ಇಲ್ಲದಿದ್ದರೂ, ನಗುವಿನ ಕೊರತೆ ನಮ್ಮ ಮನೆಯಲ್ಲಿರಲಿಲ್ಲ. ಅವರ ಜೀವನದ ಉದ್ದೇಶ ಒಂದೇ—ಮಕ್ಕಳಿಗೆ ನೋವು ತಟ್ಟಬಾರದು.
ಅಪ್ಪನ ಕೈಗಳು ಕಠಿಣವಾಗಿದ್ದರೂ, ಹೃದಯ ಮೃದುವಾಗಿತ್ತು.
ಅವರು ಹೆಚ್ಚು ಮಾತನಾಡುವುದಿಲ್ಲ. ಆದರೆ ಅವರು ಮಾಡಿದ ಕೆಲಸಗಳೇ ಮಾತಾಡುತ್ತಿತ್ತು.
ನಾನು ಚಿಕ್ಕಂದಿನಿಂದಲೇ ಹಠ ಹಿಡಿದು ಅಳುವ ಮಕ್ಕಳಲ್ಲಿ ಒಬ್ಬನಲ್ಲ. ಏನಾದರೂ ಬೇಕು ಎಂದರೆ ಅಪ್ಪನ ಮುಖ ನೋಡುತ್ತಿದ್ದೆ. ಅವರ ಕಣ್ಣುಗಳಲ್ಲಿ “ಇಲ್ಲ” ಅಂದರೆ, ಅದು ನನ್ನಿಗೆ ಅಂತಿಮ ಉತ್ತರ. ಅವರ ಮೌನದಲ್ಲೇ ನನಗೆ ಉತ್ತರ ಸಿಗುತ್ತಿತ್ತು.
ಹಂಚಿಕೊಂಡು ತಿನ್ನುವುದು, ಇತರರ ನೋವನ್ನು ಅರ್ಥಮಾಡಿಕೊಳ್ಳುವುದು, ಅಗತ್ಯಕ್ಕಿಂತ ಹೆಚ್ಚು ಬೇಡ ಅನ್ನಿಸುವುದು—ಇವೆಲ್ಲ ನನ್ನಲ್ಲಿ ಸಹಜವಾಗಿಯೇ ಬೆಳೆದ ಗುಣಗಳು. ಬಹುಶಃ ಅದು ಅಪ್ಪನಿಂದ ನನಗೆ ಬಂದ ಉಡುಗೊರೆ.
ಅಪ್ಪನ ಮಡಿಲು ನನಗೆ ದೇವಾಲಯದಂತಿತ್ತು.
ಅಲ್ಲಿ ಕುಳಿತರೆ ಜಗತ್ತು ಮೌನವಾಗುತ್ತಿತ್ತು.
ಅಪ್ಪ ತಲೆಗೆ ಕೈ ಇಟ್ಟರೆ, ನನ್ನೊಳಗಿನ ಭಯಗಳು ಕರಗುತ್ತಿತ್ತು.
ಅವರು ನನ್ನ ಮೊದಲ ದೇವರು.
ಮೊದಲ ಹೀರೋ.
ನನ್ನ ಬಾಲ್ಯ ಸಂಪೂರ್ಣ ಸಂತೋಷದಿಂದ ತುಂಬಿತ್ತು ಎಂದು ಹೇಳಿದರೆ ಅದು ಅರ್ಧ ಸತ್ಯ. ಹೊರಗೆ ನೋಡಿದರೆ ಎಲ್ಲವೂ ಸರಿಯೇನೋ ಎಂಬಂತೆ ಕಾಣುತ್ತಿತ್ತು. ಆದರೆ ಮನೆಯೊಳಗೆ ಮೌನವಾಗಿ ಬೆಳೆಯುತ್ತಿದ್ದ ಕೆಲ ನೋವುಗಳು, ಅರ್ಥವಾಗದ ನಿಶ್ಶಬ್ದಗಳು ನನ್ನೊಳಗೆ ಪ್ರಶ್ನೆಗಳಾಗಿ ಉಳಿಯುತ್ತಿತ್ತು.
ಅಪ್ಪ–ಅಮ್ಮನ ನಡುವೆ ಮಾತಿಲ್ಲದ ದಿನಗಳು.
ನಗು ಇದ್ದರೂ, ಹೃದಯಗಳು ದೂರವಾಗುತ್ತಿರುವ ಕ್ಷಣಗಳು.
ಆ ನೋವುಗಳನ್ನು ನಾನು ಪದಗಳಲ್ಲಿ ಅರ್ಥಮಾಡಿಕೊಳ್ಳುವ ಮೊದಲೇ ಮನಸ್ಸಿನಲ್ಲಿ ಸಂಗ್ರಹಿಸಿಕೊಂಡಿದ್ದೆ.
ನಾನು ಐದನೇ ತರಗತಿಯಲ್ಲಿ ಓದುತ್ತಿದ್ದಾಗ, ನಮ್ಮ ಬದುಕಿನ ಮೇಲೆ ಬಿರುಗಾಳಿ ಬಂತು.
ಅಪ್ಪ ಮತ್ತು ಅಮ್ಮ ದೂರವಾದರು.
ಗೋಡೆಗಳು ಹಾಗೆಯೇ ಇದ್ದವು.
ಬಾಗಿಲು, ಕಿಟಕಿ, ನೆಲ— ಯಾವುದು ಬದಲಾಗಿರಲಿಲ್ಲ
ಆದರೆ ಮನೆಯ ಆತ್ಮ ಒಡೆದಿತ್ತು.
ಅಮ್ಮ ಮನೆ ಬಿಟ್ಟು ಹೋದ ದಿನ ಮನೆ ಮೌನವಾಗಿತ್ತು. ಆ ಮೌನವು ಕಿವಿಗೆ ಕೇಳಿಸದ ಶಬ್ದವಾಗಿ ನನ್ನ ಮನಸ್ಸಿನಲ್ಲಿ ಕೂಗುತ್ತಿತ್ತು.
“ಅಮ್ಮ ಏಕೆ ಹೋದಳು?”
ಈ ಪ್ರಶ್ನೆಗೆ ಉತ್ತರ ಯಾರಲ್ಲೂ ಇರಲಿಲ್ಲ.
ಅಮ್ಮ ಎಂದರೆ ದೇವರು ಎನ್ನುತ್ತಾರೆ.
ಆದರೆ ನನ್ನ ಬದುಕಿನಲ್ಲಿ ‘ಅಮ್ಮ’ ಎಂಬ ಪದ ನೋವಿನ ಅರ್ಥ ಹೊತ್ತುಕೊಂಡಿತ್ತು.
ಎಲ್ಲಾ ತಾಯಂದಿರು ಮಕ್ಕಳಿಗಾಗಿ ತ್ಯಾಗ ಮಾಡುತ್ತಾರೆ ಎಂಬ ಮಾತು ನನ್ನಿಗೆ ಸುಳ್ಳಾಗಿ ಕಾಣಿಸಿತು.
ನನ್ನ ತಾಯಿ ತನ್ನ ಸುಖವನ್ನು ಆರಿಸಿಕೊಂಡಳು.
ಮಕ್ಕಳ ಕಣ್ಣೀರನ್ನು ನೋಡದೆ.
ದೇವರ ಮುಂದೆ ನಾನು ಒಂದು ಮೌನ ಪ್ರಾರ್ಥನೆ ಮಾಡಿಕೊಂಡೆ—
“ದೇವರೆ, ಈ ತರದ ತಾಯಿ ಯಾರಿಗೂ ಕೊಡಬೇಡ.”
ಇದು ಎಲ್ಲಾ ತಾಯಂದಿರ ವಿರುದ್ಧದ ಮಾತಲ್ಲ.
ಇದು ನನ್ನ ಬದುಕಿನ ಸತ್ಯ.

ಮೌನದಲ್ಲಿ ಬದುಕಿದ ತಂದೆ

ಅಮ್ಮ ಮನೆ ಬಿಟ್ಟು ಹೋದ ನಂತರ ನಮ್ಮ ಮನೆ ಮೌನವನ್ನು ಕಲಿತಿತು.
ಆ ಮೌನ ಮಾತಾಡುತ್ತಿರಲಿಲ್ಲ, ಆದರೆ ಎಲ್ಲವನ್ನೂ ಹೇಳುತ್ತಿತ್ತು.
ಅಪ್ಪ ಮೊದಲ ಕೆಲವು ದಿನಗಳು ಏನೂ ಆಗದಂತೆ ನಡೆದುಕೊಂಡರು.
ಅವರು ಅಳಲಿಲ್ಲ.
ಕೋಪಗೊಂಡಿಲ್ಲ.
ಪ್ರಶ್ನೆ ಕೇಳಲಿಲ್ಲ.
ಆದರೆ ನಾನು ಗಮನಿಸಿದ್ದೆ—
ಅಪ್ಪನ ನಗು ನಿಧಾನವಾಗಿ ಕಡಿಮೆಯಾಗುತ್ತಿತ್ತು.

ಸಮಾಜ ಮಾತ್ರ ಮೌನವಾಗಿರಲಿಲ್ಲ.
“ಹೆಂಡತಿ ಹೋದಳು” ಅನ್ನೋದು ನಮ್ಮ ಮನೆಯ ಪರಿಚಯವಾಗಿ ಬಿಟ್ಟಿತು.
ಕೆಲವರು ಸಹಾನುಭೂತಿ ತೋರಿಸಿದರು.
ಹೆಚ್ಚಿನವರು ಕುತೂಹಲ ತೋರಿಸಿದರು.
ಕೆಲವರು ಮೌನವಾಗಿ ನಿಂದಿಸಿದರು.
ಅಪ್ಪನಿಗೆ ಸಲಹೆಗಳು ಬಂತು—
“ಮಕ್ಕಳಿಗಾಗಿ ಮರುಮದುವೆ ಮಾಡಿ”
“ಒಬ್ಬ ಹೆಣ್ಣು ಮನೆಗೆ ಬಂದರೆ ಎಲ್ಲವೂ ಸರಿಯಾಗುತ್ತದೆ”
“ಮಕ್ಕಳು ತಾನೇ ಹೊಂದಿಕೊಳ್ಳುತ್ತಾರೆ”
ಆದರೆ ಅಪ್ಪನ ಉತ್ತರ ಒಂದೇ.
ಅದು ಗಟ್ಟಿಯಾಗಿರಲಿಲ್ಲ.
ಆದರೆ ಅಚಲವಾಗಿತ್ತು.
“ನನ್ನ ಮಕ್ಕಳ ಮನಸ್ಸಿಗೆ ನೋವಾಗಬಾರದು.”
ಅಪ್ಪನಿಗೆ ತಮ್ಮ ಬದುಕಿನ ಬಗ್ಗೆ ಚಿಂತೆಯೇ ಇರಲಿಲ್ಲ.
ಅವರ ಪ್ರಶ್ನೆ ಒಂದೇ—
ನನ್ನ ಮಕ್ಕಳು ಸುರಕ್ಷಿತರಾಗಿದ್ದಾರೆಯೇ?
ಮರುಮದುವೆ ಅಂದ್ರೆ ಕೇವಲ ಒಂದು ಸಂಬಂಧ ಅಲ್ಲ.
ಅದು ಮಕ್ಕಳ ಬದುಕಿನೊಳಗೆ ಮತ್ತೊಬ್ಬರ ಪ್ರವೇಶ.
ಆ ಪ್ರವೇಶ ಒಳ್ಳೆಯದಾಗುತ್ತದೆಯೋ, ಗಾಯವಾಗುತ್ತದೆಯೋ—ಅಪ್ಪನಿಗೆ ಅದರ ಭಯ ಇತ್ತು.
ಆ ಭಯವೇ ಅವರನ್ನು ಜೀವನಪೂರ್ತಿ ಒಬ್ಬಂಟಿಯಾಗಿಸಿದರೂ, ಮಕ್ಕಳಿಗಾಗಿ ಅವರು ಒಪ್ಪಿಕೊಂಡರು.
ಅಪ್ಪ ಅಮ್ಮನ ಕೊರತೆಯನ್ನು ನಮಗೆ ತೋರಿಸಲಿಲ್ಲ.
ಅಡುಗೆ ಮನೆಯಲ್ಲಿ ಅವರೇ ನಿಂತರು.
ಬಟ್ಟೆ ತೊಳೆಯುವುದು, ಊಟ ಮಾಡಿಸುವುದು, ಶಾಲೆಗೆ ಕಳುಹಿಸುವುದು—ಎಲ್ಲವನ್ನೂ ಅವರು ಮೌನವಾಗಿ ಮಾಡುತ್ತಿದ್ದರು.
ಅಪ್ಪನ ಕೈಗಳಿಂದ ಬಂದ ಊಟದಲ್ಲಿ ಅಮ್ಮನ ಕೈರೇಖೆಗಳು ಕಾಣಿಸದಿದ್ದರೂ, ತ್ಯಾಗ ಸ್ಪಷ್ಟವಾಗಿತ್ತು.
ತಂಗಿ ದೊಡ್ಡದಾಗುತ್ತಾ ಹೋಗುತ್ತಿದ್ದಳು.
ಅವಳಿಗೆ ಅಪ್ಪ ತಾಯಿ ಎರಡೂ ಆಗಿದ್ದರು.
ಅವಳ ಕೂದಲನ್ನು ಬಿಚ್ಚಿ ಜಡೆ ಹಾಕುವುದು, ಅವಳ ಕಣ್ಣೀರನ್ನು ಒರೆಸುವುದು—ಅಪ್ಪ ಕಲಿತರು.
ಅವಳು ನಗಿದರೆ ಅಪ್ಪ ಬದುಕಿದ್ದಂತೆ.
ಅವಳು ಮೌನವಾದರೆ ಅಪ್ಪನ ಹೃದಯ ನಡುಗುತ್ತಿತ್ತು.
ನಾನು ಅಷ್ಟರಲ್ಲಿ ಮೌನದಿಂದ ಜವಾಬ್ದಾರಿಯತ್ತ ಸಾಗುತ್ತಿದ್ದೆ.
ನನ್ನೊಳಗೆ ಅಪ್ಪನಂತಾಗಬೇಕು ಅನ್ನೋ ಆಸೆ ಬೆಳೆದುಬಂದಿತ್ತು.
ಅವರ ನೋವನ್ನು ಕೇಳದೆ ಅರ್ಥಮಾಡಿಕೊಳ್ಳಬೇಕು ಎಂದು ಕಲಿತಿದ್ದೆ.
ಅಪ್ಪ ಮಾತಾಡದ ದಿನಗಳಲ್ಲಿ ನಾನು ಅವರ ಪಕ್ಕ ಕುಳಿತುಕೊಳ್ಳುತ್ತಿದ್ದೆ.
ಮಾತು ಬೇಡ.
ಹಾಜರಾತಿಯೇ ಸಾಕಾಗುತ್ತಿತ್ತು.
ಕಾಲ ಸಾಗಿತು.
ತಂಗಿ ಕಾಲೇಜಿಗೆ ಹೋದಳು.
ಅಪ್ಪ ಅವಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು.
ಅಷ್ಟು ನಂಬಿಕೆ ಅಂದ್ರೆ—
ಮನೆಯ ಹಣದ ಜವಾಬ್ದಾರಿಯನ್ನೇ ಅವಳ ಕೈಗೆ ಕೊಟ್ಟಿದ್ದರು.
ಲೆಕ್ಕ ಕೇಳಲಿಲ್ಲ.
ಅನುಮಾನ ಮಾಡಲಿಲ್ಲ.
“ನನ್ನ ಮಗಳು ತಪ್ಪು ಮಾಡೋದಿಲ್ಲ”
ಅದು ಅಪ್ಪನ ವಿಶ್ವಾಸ.
ಆ ವಿಶ್ವಾಸವೇ ಮುಂದೆ ಅಪ್ಪನ ಹೃದಯವನ್ನು ಹೆಚ್ಚು ನೋಯಿಸಿದ ಸಂಗತಿ ಅನ್ನೋದು ಆ ಕ್ಷಣದಲ್ಲಿ ಯಾರಿಗೂ ಗೊತ್ತಿರಲಿಲ್ಲ.
ನಾನು ಡಿಗ್ರಿ ಓದುತ್ತಿದ್ದೆ.
ಬದುಕಿನ ಹೊಣೆಗಾರಿಕೆ ನನ್ನತ್ತ ನಿಧಾನವಾಗಿ ಜಾರುತ್ತಿತ್ತು.
ಅಪ್ಪ ವಯಸ್ಸಾಗುತ್ತಿದ್ದರು.
ಆದರೆ ಅವರ ಮನಸ್ಸು ಮಾತ್ರ ನಮ್ಮ ಭವಿಷ್ಯದಲ್ಲೇ ಸಿಲುಕಿತ್ತು.
ಆ ದಿನ ಬಂತು.
ತಂಗಿಗೆ ಕೊನೆಯ ಪರೀಕ್ಷೆ.
ನಾನೇ ಅವಳನ್ನು ಕಾಲೇಜಿಗೆ ಬಿಟ್ಟು ಬಂದೆ.
“ಪರೀಕ್ಷೆ ಮುಗಿದ ಮೇಲೆ ಬೇಗ ಮನೆಗೆ ಬಾ” ಎಂದು ಸಹಜವಾಗಿ ಹೇಳಿದ್ದೆ.
ಅವಳು ನಗುತ್ತಾ ತಲೆ ಆಡಿ ಹೋಗಿದ್ದಳು.
ಸಂಜೆಯಾಯಿತು.
ರಾತ್ರಿ ಆಯಿತು.
ಅವಳು ಬರಲಿಲ್ಲ.
ಅಪ್ಪ ಮೊದಲಿಗೆ ಗಾಬರಿಯಾಗಲಿಲ್ಲ.
“ಇನ್ನೂ ಬರ್ತಾಳೆ” ಅಂದರು.
ಆದರೆ ಸಮಯ ಸಾಗಿದಂತೆ ಮೌನ ಗಟ್ಟಿಯಾಗುತ್ತಿತ್ತು.
ಆಮೇಲೆ…
ಅಪ್ಪನ ಫೋನ್‌ಗೆ ಒಂದು ವಾಟ್ಸ್‌ಆ್ಯಪ್ ಮೆಸೇಜ್ ಬಂತು.
ಒಂದು ಫೋಟೋ.
ಆ ಫೋಟೋದಲ್ಲಿ—
ಅಪ್ಪನ ಮುದ್ದಿನ ಮಗಳು
ಮದುವೆಯ ಉಡುಪಿನಲ್ಲಿ
ಬೇರೊಬ್ಬನ ಕೈ ಹಿಡಿದು ನಿಂತಿದ್ದಳು.
ಅಪ್ಪ ಆ ಫೋಟೋವನ್ನು ನೋಡಿದರು.
ಒಮ್ಮೆ ನೋಡಿದರು.
ಮತ್ತೊಮ್ಮೆ ನೋಡಿದರು.
ಅವರು ಕುಸಿದಿಲ್ಲ.
ಅವರು ಕೂಗಿಲ್ಲ.
ಅವರು ಶಪಿಸಲಿಲ್ಲ.
ಆದರೆ ಅವರ ಕಣ್ಣುಗಳಲ್ಲಿ ನಂಬಿಕೆ ಒಡೆದ ಶಬ್ದವಿತ್ತು.
ಅದು ನಾನು ಜೀವನದಲ್ಲಿ ಮೊದಲ ಬಾರಿ ನೋಡಿದ ಅಪ್ಪ.
ಆ ದಿನ ಅಪ್ಪ ಒಳಗೊಳಗೆ ಕುಸಿದರು.
ಅವರ ನೋವಿಗೆ ಮಾತು ಸಿಗಲಿಲ್ಲ.
ಮೌನವೇ ಅವರ ಭಾಷೆಯಾಯಿತು.
ಆದರೂ…
ಅಪ್ಪ ಸಂಪೂರ್ಣವಾಗಿ ಮುರಿಯಲಿಲ್ಲ.
ಅವರು ನನ್ನತ್ತ ನೋಡಿದರು.
ಆ ದೃಷ್ಟಿಯಲ್ಲಿ ಒಂದು ಪ್ರಶ್ನೆ ಇತ್ತು—
“ನೀನು ಇದ್ದೀಯಾ?”
ನಾನು ಉತ್ತರ ಕೊಟ್ಟಿಲ್ಲ.
ಆದರೆ ಅವರ ಪಕ್ಕ ಕುಳಿತೆ.
ಅದು ಸಾಕಾಗಿತ್ತು.


About The Author

Leave a Reply

You cannot copy content of this page

Scroll to Top