ಧಾರಾವಾಹಿ ಸಂಗಾತಿ-119
ರುಕ್ಮಿಣಿ ನಾಯರ್

ಒಬ್ಬ ಅಮ್ಮನ ಕಥೆ
ಸುಮತಿಯ ಒಳತೋಟಿ

ಹೇಗೋ ಸಾವರಿಸಿಕೊಂಡು ಕಾರಿನಲ್ಲಿ ಕುಳಿತಿದ್ದ ಮಹಾನುಭಾವರಿಗೆ ವಂದಿಸಿ ಕ್ಷಮೆ ಯಾಚಿಸಿದಳು. ನಂತರ ಹೇಗೋ ಯಾಂತ್ರಿಕವಾಗಿ ರಸ್ತೆಯನ್ನು ದಾಟಿ ಅಲ್ಲಿಂದ ನೇರವಾಗಿ ಅನಾಥಾಶ್ರಮಕ್ಕೆ ಬಂದಳು.
ಅನಾಥಾಶ್ರಮಕ್ಕೆ ಬಂದಾಗ ಮಕ್ಕಳೆಲ್ಲರೂ ಅದಾಗಲೇ ಶಾಲೆಯಿಂದ ಬಂದಿದ್ದರು. ಅವಳ ಜೊತೆಗೆ ಸಹಾಯಕ್ಕಾಗಿ ಹೊಸದಾಗಿ ಬಂದ ಅವಳದೇ ವಯಸ್ಸಿನ ಹುಡುಗಿಯು ಇವಳನ್ನು ಕಂಡೊಡನೆ ಹತ್ತಿರ ಬಂದು…. ಏನಾಯ್ತು?…. ನಿನ್ನ ಮುಖ ಪೂರ್ತಿ ಕಳೆಗುಂದಿದೆ…. ಮಧ್ಯಾಹ್ನದ ಊಟ ಮಾಡಿಲ್ಲವೇ? ಎಂದು ಕೇಳಿದಳು. ಇಲ್ಲವೆಂಬಂತೆ ತಲೆ ಆಡಿಸಿ ತನ್ನ ರೂಮಿನೊಳಗೆ ಹೋದಳು. ಆ ಹುಡುಗಿ ಆಕೆಯನ್ನು ಹಿಂಬಾಲಿಸಿ ಬಂದಳು. ಅವಳ ಹೆಗಲ ಮೇಲೆ ಕೈಯಿಟ್ಟು…. ಏನಾಯ್ತು ಹೇಳು…. ಬಂದಾಗಿನಿಂದ ನಿನ್ನನ್ನು ಗಮನಿಸುತ್ತಿದ್ದೇನೆ….. ಇಷ್ಟೊಂದು ಹತಾಶಳಾಗಿ ನಿನ್ನನ್ನು ಕಂಡಿದ್ದೇ ಇಲ್ಲ…. ಏನಾಯ್ತು…. ಎಂದು ಕೇಳಲು, ಅಲ್ಲಿಯವರೆಗೂ ಅವಳು ತಡೆಹಿಡಿದಿದ್ದ ಮನಸ್ಸಿನ ಭಾರ ಒಮ್ಮೆಲೆ ಹೊರಗೆ ಬರುತ್ತಿರುವಂತೆ ಅವಳಿಗನಿಸಿತು. ಇವಳು ಆ ಹುಡುಗಿಯ ಹೆಗಲ ಮೇಲೆ ತಲೆ ಇಟ್ಟಳು. ಅವಳನ್ನು ಬಿಗಿಯಾಗಿ ಅಪ್ಪಿಕೊಂಡಳು. ಆದರೆ ಕಣ್ಣಿನಿಂದ ಒಂದು ಹನಿ ನೀರೂ ಆಚೆ ಬರಲಿಲ್ಲ. ಅಳಬೇಕೆಂದು ಪ್ರಯತ್ನ ಪಟ್ಟರೂ ಅಳು ಗಂಟಲಲ್ಲಿ ಉಳಿದು ಹೋಯಿತು. ಅವಳ ಆ ಸ್ಥಿತಿಯನ್ನು ಗಮನಿಸಿದಾಗ ಪರಿಸ್ಥಿತಿಯು ಗಂಭೀರವಾಗಿದೆ ಎಂಬುದು ಅವಳ ಜೊತೆಗಿದ್ದ ಹುಡುಗಿಗೆ ಅರ್ಥವಾಯಿತು. ಒಂದು ಲೋಟ ನೀರು ತರುವಂತೆ ಮಕ್ಕಳಿಗೆ ಹೇಳಿ ಆ ಹುಡುಗಿಯು ಇವಳನ್ನು ಅಲ್ಲಿದ್ದ ಬೆಂಚಿನ ಮೇಲೆ ಕುಳ್ಳಿರಿಸಿದಳು.
“….ಏನಾಯ್ತು ಹೇಳು”…. ಎಂದಾಗ, ವೈದ್ಯರು ಹೇಳಿದ ಅಷ್ಟೂ ವಿಷಯಗಳನ್ನು ಆ ಹುಡುಗಿಗೆ ತಿಳಿಸಿದಳು. ಆ ಹುಡುಗಿಯು ಕೊಡಗಿನ ನಿವಾಸಿಯಾಗಿದ್ದಳು. ಹಾಸನದಲ್ಲಿ ದಾದಿಯರ ತರಬೇತಿಗೆಂದು ಬಂದವಳಾಗಿದ್ದಳು. ಆ ವರ್ಷದ ಅಡ್ಮಿಶನ್ ಅವಧಿ ಮುಗಿದಿದ್ದ ಕಾರಣ ಸ್ವಲ್ಪ ದಿನ ಅನಾಥಾಶ್ರಮದಲ್ಲಿ ಸಹಾಯಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಮುಂದಿನ ವರ್ಷದ ನರ್ಸಿಂಗ್ ತರಬೇತಿಗೆ ಸೇರಲು ತೀರ್ಮಾನಿಸಿದ್ದಳು. ಈ ಹುಡುಗಿಯು ಬಂದಿದ್ದು ಸುಮತಿಯ ಮಗಳಿಗೆ ಬಹಳ ಸಹಾಯಕವಾಗಿತ್ತು. ಅಡುಗೆಯ ಕೆಲಸವನ್ನು ಚೆನ್ನಾಗಿ ಬಲ್ಲವಳಾಗಿದ್ದ ಅವಳು ರುಚಿಕರವಾದ ಅಡುಗೆಯನ್ನು ಮಾಡಿ ಸುಮತಿಯ ಮಗಳಿಗೂ ಅನಾಥಾಶ್ರಮದ ಮಕ್ಕಳಿಗೂ ಉಣ ಬಡಿಸುತ್ತಿದ್ದಳು. ಬಹಳ ಬೇಗ ಇಬ್ಬರೂ ಸ್ನೇಹಿತೆಯರಾಗಿ ಬಿಟ್ಟಿದ್ದರು. ಅಲ್ಲದೆ ಅನಾಥಾಶ್ರಮದ ಮೇಲೆ ಇರುವ ಕಟ್ಟಡದ ವನಿತಾ ಹಾಸ್ಟಲ್ ನಲ್ಲಿ ಬಾಡಿಗೆಗೆ ವಾಸವಾಗಿದ್ದ ಯುವತಿಯರು ಕೂಡಾ ಸುಮತಿಯ ಮಗಳಿಗೆ ಸ್ನೇಹಿತೆಯರಾಗಿದ್ದರು. ಕೆಲವೊಮ್ಮೆ ಅಪರೂಪಕ್ಕೆ ಹಾಸ್ಟೆಲ್ ಗೆ ಹೋಗಿ ಅವರೊಂದಿಗೆ ಸಮಯ ಕಳೆಯುತ್ತಿದ್ದಳು. ಸುಮತಿಯ ಮಗಳು ಮಧುರವಾಗಿ ಹಾಡುಗಳನ್ನು ಹಾಡುತ್ತಿದ್ದ ಕಾರಣ ಆ ಯುವತಿಯರೆಲ್ಲರಿಗೂ ಬಹಳ ಇಷ್ಟವಾಗಿದ್ದಳು. ಅವಳ ತಾಯಿಯ ಆರೋಗ್ಯ ಸರಿ ಇಲ್ಲದಿರುವುದು ಆ ಯುವತಿಯರಿಗೂ ತಿಳಿದಿತ್ತು. ಹಾಗಾಗಿ ಸುಮತಿಯ ಮಗಳನ್ನು ಕಂಡು ಮಾತನಾಡಿಸಿಕೊಂಡು ಹೋಗಲು ಆ ಯುವತಿಯರು ಅನಾಥಾಶ್ರಮದ ಒಳಗೆ ಬಂದರು.
ಸುಮತಿಯ ಮಗಳ ಸ್ಥಿತಿಯನ್ನು ಕಂಡು ಹಾಗೂ ಅವಳ ಮಾತುಗಳನ್ನು ಆಲಿಸಿ, ಅವಳ ತಾಯಿಗೆ ಗಂಭೀರವಾದ ಸಮಸ್ಯೆ ಇರುವುದನ್ನು ಮನಗಂಡರು. ಸಾಧ್ಯವಾದಷ್ಟು ಸಾಂತ್ವನ ಹೇಳಿ, ಮೇಲಿನ ಹಾಸ್ಟೆಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಅವಳಿಗೆ ಹಣ್ಣಿನ ಪಾನಕವನ್ನು ಕೊಟ್ಟರು. ಎಲ್ಲರ ಸಾಂತ್ವನದ ಮಾತುಗಳು ಮತ್ತು ಕಾಳಜಿ ಅವಳಿಗೊಂದಿಷ್ಟು ಸಮಾಧಾನವನ್ನು ಕೊಟ್ಟಿತು.
ಅವಳ ಜೊತೆಗಿದ್ದ ಹುಡುಗಿಯಂತೂ ಅವಳ ಬಲಗೈಯಂತೆ ಅವಳಿಗೆ ಸಹಾಯ ಮಾಡುತ್ತಿದ್ದಳು. ಸುಮತಿಗೆ ರಾತ್ರಿ ಊಟಕ್ಕೆ ಬೇಕಾದ ಅಡುಗೆಯನ್ನು ಮಾಡಿ ಸ್ಟೀಲ್ ಡಬ್ಬಿಯಲ್ಲಿ ತುಂಬಿ, ತನ್ನ ಸ್ನೇಹಿತರಿಗೂ ಊಟ ಬಡಿಸಿ ಸ್ವಲ್ಪವಾದರೂ ತಿನ್ನುವಂತೆ ಬಲವಂತ ಮಾಡಿದರು. ಅವಳ ಕಾಳಜಿಯನ್ನು ನೋಡಿ ಊಟ ಸೇರದಿದ್ದರೂ ಒಂದೆರಡು ತುತ್ತು ತಿಂದು, ರಾತ್ರಿ ತಾಯಿಯ ಜೊತೆ ಆಸ್ಪತ್ರೆಯಲ್ಲಿ ಮಲಗಲು ಹೊರಟಳು. ತನಗೆ ಸಹಾಯಕಿ ಹಾಗೂ ಸ್ನೇಹಿತೆ ಅನಾಥಾಶ್ರಮದಲ್ಲಿ ಇರುವುದರಿಂದ ಅವಳಿಗೆ ಮಕ್ಕಳ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಹಾಗೂ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರು ಅನುಮತಿಯನ್ನು ನೀಡಿದ್ದರಿಂದ ಸ್ವಲ್ಪ ನಿರಾಳವಾಗಿದ್ದಳು. ಅನಾಥಾಶ್ರಮದಿಂದ ಹೊರಟವಳು ಬೇಗ ಬೇಗನೆ ಆಸ್ಪತ್ರೆಯ ಕಡೆ ಹೆಜ್ಜೆ ಹಾಕಿದಳು. ಅಲ್ಲಿ ಬಂದಾಗ ತನ್ನ ದಾರಿಯನ್ನೇ ಕಾಯುತ್ತಿದ್ದ ಸುಮತಿಯನ್ನು ಕಂಡಳು. ಇನ್ನೂ ಹದಿನಾರರ ಹರೆಯದ ಮೂರನೇ ಮಗಳು ಒಬ್ಬಳೇ ಊರಲ್ಲಿರುವುದರಿಂದ ಸುಮತಿ ಚಿಂತಾಕ್ರಾಂತಳಾಗಿದ್ದಳು. ಮಂಗಳೊಂದಿಗೆ ತನ್ನ ಮನದ ದುಗುಡವನ್ನು ಹೇಳಿಕೊಂಡಳು.
ಅಕ್ಕ ಪಕ್ಕದಲ್ಲಿ ಮನೆಗಳಿದ್ದರೂ ಹೆಣ್ಣು ಮಗಳು ಒಬ್ಬಳೇ ಅಲ್ಲಿರುವಳಲ್ಲ ಎನ್ನುವ ಚಿಂತೆ ಸುಮತಿಯ ಮನಸ್ಸನ್ನು ಕೊರೆಯುತ್ತಿತ್ತು. ತಾಯಿಯ ಚಿಂತೆಯನ್ನು ಅರಿತು ಮಗಳು…. ಅಮ್ಮಾ …..ಹಾಗೆಲ್ಲ ಚಿಂತಿಸಬೇಡ…. ಅವಳು ಧೈರ್ಯವಂತಳು….ಅವಳು ಅಲ್ಲಿದ್ದು ಶಾಲೆಗೆ ಹೋದರೆ ತಾನೇ ನಿನ್ನ ತಿಂಗಳಿನ ಸಂಬಳ ನಮಗೆ ಸಿಗುವುದು…. ಆ ಸಂಬಳ ಇರದಿದ್ದರೆ ನಾವು ತುಂಬಾ ಕಷ್ಟ ಪಡಬೇಕಾಗುತ್ತದೆ ಅಲ್ಲವೇ?…. ಎಂದು ಕೇಳಿದಳು. ಮಗಳು ಹೇಳಿದ ಮಾತು ಅಕ್ಷರಶಃ ಸತ್ಯವೆಂದು ಸುಮತಿಗೆ ತಿಳಿದಿದೆ ಆದರೂ ಒಳ ಮನಸ್ಸಿಗೆ ಸಮಾಧಾನವೇ ಇರಲಿಲ್ಲ. ಆಸ್ಪತ್ರೆಯಲ್ಲಿ ಡಾಕ್ಟರ್ ಹಾಗೂ ನರ್ಸ್ ಸುಮತಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ತಾಯಿಗೆ ರಾತ್ರಿ ಊಟವನ್ನು ಕೊಟ್ಟು, ನರ್ಸ್ ಕೊಟ್ಟ ಗುಳಿಗೆಗಳನ್ನು ನುಂಗಿಸಿ, ಮಲಗಲು ಹೇಳಿ ಪ್ರೀತಿಯಿಂದ ತಲೆಯನ್ನು ಸವರಿ…. “ಅಮ್ಮಾ …..ನಾನು ಇಲ್ಲಿಯೇ ವಾರ್ಡಿನ ಹೊರಗೆ ಆಸ್ಪತ್ರೆಯ ಉದ್ಯಾನದ ಕಾರಂಜಿಯ ನಡುವೆ ಇರುವ ವಿದ್ಯುತ್ ದೀಪದ ಬೆಳಕಿನಲ್ಲಿ ನನ್ನ ಪಠ್ಯಪುಸ್ತಕಗಳನ್ನು ಓದುತ್ತಿರುತ್ತೇನೆ…. ಇನ್ನೇನು ವಾರ್ಷಿಕ ಪರೀಕ್ಷೆಯು ಹತ್ತಿರ ಬರುತ್ತಿದೆ…. ಎಂದಳು. ಸುಮತಿ ಮಗಳ ಮುಖವನ್ನು ಒಮ್ಮೆ ನೋಡಿದಳು. ನನ್ನ ಮಕ್ಕಳಿಗೆ ಈ ಚಿಕ್ಕ ವಯಸ್ಸಿಗೆ ಎಷ್ಟೊಂದು ಜವಾಬ್ದಾರಿಗಳು? ನನ್ನಂತಹಾ ನತದೃಷ್ಟಳ ಹೊಟ್ಟೆಯಲ್ಲಿ ಏಕೆ ಇಂತಹಾ ಒಳ್ಳೆಯ ಮಕ್ಕಳನ್ನು ಹುಟ್ಟಿಸಿದೆ ದೇವರೇ. ನನ್ನ ಮಕ್ಕಳು ಜೀವನದ ಪ್ರತಿಯೊಂದು ಹಂತದಲ್ಲೂ ಒಂದಲ್ಲ ಒಂದು ರೀತಿಯ ಕಷ್ಟಕರ ಸವಾಲುಗಳನ್ನು ಎದುರಿಸುತ್ತಾ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ನಾನೇ ಕಾರಣ ಎಂದು ಸುಮತಿ ವ್ಯಥೆ ಪಟ್ಟಳು.




