ಕಾವ್ಯ ಸಂಗಾತಿ
ಜ್ಯೋತಿ ಮಾಳಿ ಬೆಳಗಾವಿ
ಗಜಲ್


ಅಂದು ಹಸಿವಿನಿಂದ ಪರದಾಡಿದ ಪರದೇಶಿ ದಿನಗಳಿಂದು
ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ
ಅಂತರಾಳದಲ್ಲಿಯ ಹಸಿ ಗಾಯಗಳ ರುಜು ಋಣಗಳಿಂದು
ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ
ಕರೆದು ಕೂಲಿಗೆ ಕಾಸು ಚೆಲ್ಲಿ ಸುಮ್ಮನೆ ಮನೆಗೆ ಕಳುಹಿಸಿದ್ದರೂ
ಮರೆಯಬಹುದಿತ್ತು ನಾವು
ಕಲ್ಲಿನೇಟು ನೀಡಿ ,ಮುಳ್ಳುಗಳಿಂದ ತಿವಿದ ಜೀತ ಕ್ಷಣಗಳಿಂದು
ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ
ನಾಳೆಗಾಗಿ ಬರಿಗಾಲಲಿ ನಡೆದು ನೆತ್ತರು ಸುರಿಸಿ ಕಳೆದು ಹೋಗುತಿವೆ
ನಿತ್ಯ ಕಂಡ ಕನಸುಗಳು
ಬೆತ್ತಲೆ ಪಾದಗಳು ಸೀಳಿ ರಕ್ತ ಒಸರಿ ಬಾಯ್ಬಿಟ್ಟ ಆರ್ತನಾದಗಳಿಂದು ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ
ಮಹಡಿ ಮನೆಗಳ ಮುಂಬಾಗಿಲಿಗೆ ಬಡವನನ್ನು ಸುಲಿದ ಚರ್ಮದ
ತೋರಣ ಒಪ್ಪ ಓರಣವಾಗಿದೆ
ಕನಸಿಗೆ ತೆರಿಗೆ ಹಾಕಿ,ಸಾವಿಗೂ ಸುಂಕ ಕಟ್ಟುವ ಹುನ್ನಾರುಗಳಿಂದು
ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ
ನಿದ್ದೆ ಮಾಡುವವನು, ಕದ್ದು ಕರೆದರೂ ತುಸು ಎಚ್ಚರಗೊಳ್ಳುವನು ಅನಾಯಾಸವಾಗಿ
ಆಳುವವರ ಮುಸುಕಿನಲ್ಲಿ ಸೋಗುಲಾಡಿತನದ ನಡೆಗಳಿಂದು
ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ
ಎಷ್ಟಂತ ತೇಪೆ ಹಾಕಿ, ಚಿತ್ತಾರ ಮೂಡಿಸಿ ಮನವ ಹಗುರಾಗಿಸೋಣ ಮರ್ಯಾದೆಗೆ ಅಂಜಿ
ಅಪವಾದ, ಅವಮಾನಗಳಿಂದ ನುಜ್ಜುಗುಜ್ಜಾದ ಆಕ್ರಂದನಗಳಿಂದು ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ
ಯಾರನ್ನೋ ದ್ವೇಷಿಸಿ, ದೂಷಿಸಿ, ಹಿಡಿಶಾಪ ಹಾಕಿ, ಕಣ್ಣೀರು ಹರಿಸಿದರೆ ಏನು ಪ್ರಯೋಜನ ಜ್ಯೋತಿ
ಖಂಡ, ಮಾಂಸ, ಬೆವರು, ಬಿಸಿರಕ್ತಗಳ ಅಸಂಖ್ಯ ಬಲಿದಾನಗಳಿಂದು
ನಮ್ಮನ್ನು ಇಲ್ಲಿ ಹಿಡಿದಿಟ್ಟಿವೆ
ಜ್ಯೋತಿ ಮಾಳಿ ಬೆಳಗಾವಿ



