ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹಿತ್ಲ ಬೇವಿನ ನೆರಳಲ್ಲಿ,
ಅವ್ವ ಜೋಗುಳ ಹಾಡಿದ್ಲು;
ಅಪ್ಪನ ಹೆಗಲ ಹತ್ತಿದ ,
ಕೂಸು ಚಂದಿರ ಹಿಡಿದಿತ್ತು.

ಮಂಗನ ಮನಸು ನಮ್ದು ,
ಕೊಂಬೆಗೊಂದು ಮಿನುಗುವ ಹಣ್ಣು;
ದೂರದ ಬೆಟ್ಟ ನುಣ್ಣಗೆ
ಹಿತ್ಲ ಗೂಡಿಗೇ ಬೆನ್ನು!

ಕಾಸಿನ ಹಸಿರಿಗೆ ಕಣ್ಣು,
ಕುರ್ಚಿಯ ನೆರಳಿಗೆ ಮನಸು;
ಪರರ ನಗುವಿಗೆ ಮೈಮರೆತು,
ಎರಡು ಗೂಡುಗಳಿಗೆ ಮಣ್ಣು
ಕಾರ್ಮೋಡ ಮುಚ್ಚಿದ ಮುಗಿಲು
ಮುಸ್ಸಂಜೆ ಮುಸುಕಿದ ಹೊಸ್ತಿಲು
ಇಲ್ಲೊಂದು ಜೋಗುಳ ಮೌನ
ಅಲ್ಲೊಂದು ತೊಟ್ಟಿಲಿಗೆ ನಡುಕ.

ಆಷಾಢದ ಜಡಿಮಳೆಗೆ,
ಎರಡೂ ಕಿಟಕಿಗಳು ತೆರೆದು,
ಇಲ್ಲೊಂದು ತುತ್ತು ತಣ್ಣಗೆ,
ಅಲ್ಲೊಂದು ದಿಂಬಿಗೆ ಉಪ್ಪು.

ಮಾಸ್ತರು ಮನೆ ಬಿಡಿಸೆಂದ್ರು,
ಕೂಸು ಎರಡು ಮನೆ ಬರೆದು;
ನಡುವೆ ತನ್ನ ತಾ ಹುಡುಕಲು,
ಮುರಿಯಿತು ಬಳಪ!

ದಸರಾ ರಜೆಗೆ,
ವಸತಿನಿಲಯದ
ಗೆಳೆಯರೆಲ್ಲ
ಅವರವರ
ಗೂಡು ಸೇರಿದ್ರು;
ಮನೆಯಿದ್ದೂ
ಮಡಿಲಿಲ್ಲದೆ,
ಪುಟ್ಟ ಚಪ್ಪಲಿ
ಕಾಯುತ್ತಿತ್ತು.

ಜಡಿಮಳೆ ನಿಂತ
ನಟ್ಟಿರುಳು,
ಬೇವಿನೆಲೆಯ ಮೇಲೆ
ಬೆಳದಿಂಗಳು;
ಅತ್ತ
ಮಂಗ ತನ್ನ ಮರಿಯ
ತಬ್ಬಿಕೊಂಡಿತು ,
ಇತ್ತ
ಕೂಸಿನ ಕಣ್ಣು
ಕೆರಳಿತು
‘ಅವ್ವಾ, ನಮ್ಮ ಗೂಡೆಲ್ಲಿ?’


About The Author

Leave a Reply

You cannot copy content of this page

Scroll to Top