ಅಂಕಣ ಸಂಗಾತಿ-41
ವೃತ್ತಿ ವೃತ್ತಾಂತ
ಸುಜಾತಾ ರವೀಶ್

ಹೀಗಿರುವಾಗಲೇ ನಮ್ಮ ನಿಗಮದಲ್ಲಿ ಚೆಕ್ ಕೊಡುವ ಸಂಪ್ರದಾಯವನ್ನು ಕೈ ಬಿಟ್ಟು ಇನ್ನು ಮುಂದೆ ನೇರ ಬ್ಯಾಂಕ್ ಗೆ ಹಣ ವರ್ಗಾಯಿಸುವ ಪದ್ಧತಿ ಬರಲಿದೆ ಎಂಬ ವಿಷಯ ತಿಳಿಯಿತು ಅದು ಸರ್ಕಾರದ ಆಜ್ಞಾನುಸಾರ ಕ್ರಿಯೆಗೆ ಏನ್ ಈ ಎಫ್ ಟಿ(NEFT) ಎಂದು ಕರೆಯುತ್ತಿದ್ದರು. ಏನಿದು ತಿಳಿಯೋಣ ಬನ್ನಿ
ಎಲ್‌ಐಸಿಯಲ್ಲಿ (LIC of India) ನೆಫ್ಟ್ (NEFT – National Electronic Funds Transfer) ಸೌಲಭ್ಯವನ್ನು 2011ರಲ್ಲಿ ಅನುಷ್ಠಾನಗೊಳಿಸಲಾಯಿತು.
ಇದರ ಮೂಲಕ ಪಾಲಿಸಿದಾರರ ಮೆಚುರಿಟಿ (Maturity), ಸರೆಂಡರ್ (Surrender), ಸಾಲ (Loan), ಹಾಗೂ ಪೆನ್ಷನ್ ಅಥವಾ ಕ್ಲೈಮ್ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಎಲ್‌ಐಸಿಯಲ್ಲಿ NEFT ನೋಂದಾಯಿಸುವ ಪ್ರಕ್ರಿಯೆಯ ಹಂತಗಳು:
೧. ಅಗತ್ಯ ದಾಖಲೆಗಳನ್ನು ಒಟ್ಟುಗೂಡಿಸುವುದು
NEFT ಮ್ಯಾಂಡೇಟ್ ಫಾರ್ಮ್ (NEFT Mandate Form): ಎಲ್‌ಐಸಿ ಶಾಖೆಯಲ್ಲಿ ಉಚಿತವಾಗಿ ಸಿಗುತ್ತದೆ ಅಥವಾ ಎಲ್‌ಐಸಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ರದ್ದಾದ ಚೆಕ್ (Cancelled Cheque): ಪಾಲಿಸಿದಾರರ ಹೆಸರು ಮುದ್ರಿತವಾಗಿರುವ ರದ್ದಾದ ಚೆಕ್ ಎಲೆ.
(ಹೆಸರು ಮುದ್ರಿತವಿಲ್ಲದಿದ್ದರೆ, ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದ ಪ್ರತಿ ಅಥವಾ ಇತ್ತೀಚಿನ ಬ್ಯಾಂಕ್ સ્ટેಟ್‌ಮೆಂಟ್ ಪ್ರತಿಯನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು).
ಪಾನ್ ಕಾರ್ಡ್ (PAN Card): ಪ್ರತಿಯನ್ನು ಸ್ವಯಂ ದೃಢೀಕರಿಸಿ (Self-attested) ನೀಡಬೇಕು.
೨. ಫಾರ್ಮ್ ಭರ್ತಿ ಮಾಡುವುದು
ಫಾರ್ಮ್‌ನಲ್ಲಿ ಕೆಳಗಿನ ವಿವರಗಳನ್ನು ನಿಖರವಾಗಿ ಭರ್ತಿ ಮಾಡಬೇಕು:
ಪಾಲಿಸಿ ಸಂಖ್ಯೆ (Policy Number)
ಪಾಲಿಸಿದಾರರ ಹೆಸರು (Policyholder Name)
ಬ್ಯಾಂಕ್ ಹೆಸರು ಮತ್ತು ಶಾಖೆ (Bank Name & Branch)
ಬ್ಯಾಂಕ್ ಖಾತೆ ಸಂಖ್ಯೆ (Account Number)
ಖಾತೆಯ ಪ್ರಕಾರ (Savings / Current)
ಬ್ಯಾಂಕ್ ಐಎಫ್‌ಎಸ್‌ಸಿ ಕೋಡ್ (IFSC Code – 11 ಅಕ್ಷರಗಳ ಕೋಡ್)
ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆ
೩. ದಾಖಲೆಗಳನ್ನು ಸಲ್ಲಿಸುವುದು
ಭರ್ತಿ ಮಾಡಿದ NEFT ಫಾರ್ಮ್ ಹಾಗೂ ಲಗತ್ತಿಸಿದ ದಾಖಲೆಗಳಿಗೆ (ರದ್ದಾದ ಚೆಕ್ / ಪಾಸ್‌ಬುಕ್ ಪ್ರತಿ) ಸಹಿ ಮಾಡಿ, ನಿಮ್ಮ ಪಾಲಿಸಿ ಇರುವ ಎಲ್‌ಐಸಿ ಸೇವಾ ಶಾಖೆಗೆ (Home Branch) ಅಥವಾ ಯಾವುದೇ ಸಮೀಪದ ಎಲ್‌ಐಸಿ ಶಾಖೆಗೆ ಸಲ್ಲಿಸಬೇಕು.
೪. ದೃಢೀಕರಣ ಮತ್ತು ಸಕ್ರಿಯಗೊಳಿಸುವಿಕೆ (Verification & Activation)
ಎಲ್‌ಐಸಿ ಸಿಬ್ಬಂದಿ ನಿಮ್ಮ ಬ್ಯಾಂಕ್ ವಿವರಗಳನ್ನು ಸಿಸ್ಟಮ್‌ನಲ್ಲಿ ಅಪ್‌ಡೇಟ್ ಮಾಡುತ್ತಾರೆ.
ವಿವರಗಳು ಯಶಸ್ವಿಯಾಗಿ ನೋಂದಣಿಯಾದ ನಂತರ ನಿಮ್ಮ ಮೊಬೈಲ್‌ಗೆ/ಇಮೇಲ್‌ಗೆ ಮೆಸೇಜ್ ಬರುತ್ತದೆ.
ಗಮನಿಸಿ: ಆನ್‌ಲೈನ್ ಮೂಲಕ (LIC Customer Portal/App) ಕೂಡ ಪಾಲಿಸಿದಾರರು ಲಾಗಿನ್ হৈ ತಮ್ಮ ಪಾಲಿಸಿಗೆ NEFT ವಿವರಗಳನ್ನು ನೇರವಾಗಿ ಅಪ್‌ಲೋಡ್ ಮಾಡಬಹುದು.
ಆದರೆ ಅದು ಇನ್ನೂ ಆರಂಭದ ದಿನಗಳಾಗಿದ್ದರಿಂದ ಬ್ಯಾಂಕಿಗೆ ನೇರವಾಗಿ ಪಾವತಿ ಮಾಡಬೇಕಾಗಿದ್ದು ಫಾಲಿಸಿದಾರರ ಐಚ್ಚಿಕ ಆಪ್ಷನ್ ಆಗಿದ್ದು ಚೆಕ್ ಮೂಲಕ ಸಹ ಪಾವತಿ ಮಾಡುತ್ತಿದ್ದವು. ಆದರೆ ಪಾಲಿಸಿದಾರರ ಬ್ಯಾಂಕ್ ಖಾತೆ ವಿವರಗಳನ್ನು ತೆಗೆದುಕೊಂಡು ರಿಜಿಸ್ಟರ್ ಮಾಡುವ ಕೆಲಸ ನೂರು ಪ್ರತಿಶತ ಆಗಲೇಬೇಕಿತ್ತು. ಆದರೆ ಬಹಳ ಜನ ಇನ್ನೂ ಬ್ಯಾಂಕ್ ವಿವರಗಳನ್ನು ಕೊಡಲು ಇಷ್ಟಪಡುತ್ತಿರಲಿಲ್ಲ. ಇದರಿಂದ ಮತ್ತೊಂದು ಅನುಕೂಲ ಆದದೆಂದರೆ ಆಗ ತಾನೇ ಹೆಚ್ಚಾಗಿ ಜನಪ್ರಿಯವಾಗುತ್ತಿದ್ದ ಮೊಬೈಲ್ ನಂಬರ್ ಗಳನ್ನು ನಮ್ಮ ದಾಖಲೆಗಳಲ್ಲಿ ಅಳವಡಿಸುವುದು ಇದರಿಂದಾಗಿ ನಾವು ಪಾಲಿಸಿದಾರರನ್ನು ಸಂಪರ್ಕಿಸಬೇಕಾದಾಗ ತುಂಬಾ ಅನುಕೂಲ ಆಗುತ್ತಿತ್ತು. ಇದರ ಜೊತೆಗೆ ಇ-ಮೇಲ್ ತೆಗೆದುಕೊಳ್ಳಬೇಕು ಎಂದು ಇದ್ದರೂ ಆಗ ಬಹಳಷ್ಟು ಜನ ಈಮೇಲ್ ಉಪಯೋಗ ಮಾಡದೆ ಇದುದರಿಂದ ಅದು ಬರಿ ನಾಮಕಾವಸ್ತೆ ಕಾಲಂ ಆಗಿದ್ದಂತೂ ಸುಳ್ಳಲ್ಲ.
ಈ ಮಧ್ಯೆ ಶಾಖೆಯಲ್ಲಿ ಎಲ್ಲರ ವಿಭಾಗದ ಬದಲಾವಣೆಯ ವಿಷಯ ಕೇಳಿ ಬರತೊಡಗಿತ್ತು ಈಗಾಗಲೇ ನಾನು ಪಾಲಿಸಿ ಸೇವಾ ವಿಭಾಗಕ್ಕೆ ಬಂದು ಮೂರು ವರ್ಷಗಳು ಉರುಳಿ ಹೋಗಿದ್ದರಿಂದ ಮತ್ತೆ ಬೇರೆಯ ವಿಭಾಗದಲ್ಲಿ ಕೆಲಸ ಮಾಡಲು ಸಿದ್ದಳಾಗಬೇಕಿತ್ತು. ಆಗಿದ್ದ ಶಾಖಾಧಿಕಾರಿ ಅನುರಾಧ ಅವರು ಸಹ ಇನ್ನೇನು ವರ್ಗವಾಗಿ ಹೋಗುವುದರಿಂದ ಅದಕ್ಕೆ ಮೊದಲು ಶಾಖೆಗಳ ವರ್ಗಾವಣೆ ಮಾಡಿ ಹೋಗಲು ನಿರ್ಧರಿಸಿದ್ದರು. ನಮಗೆಲ್ಲ ಮೂರು ವಿಭಾಗಗಳನ್ನು ಆಯ್ಕೆ ಮಾಡಿ ಅರ್ಜಿ ಕೊಡಲು ಹೇಳಲಾಯಿತು ಅದರಲ್ಲಿ ನಾನು ವಿಕ್ರಯ ವಿಭಾಗವನ್ನು ಸಹ ಸೇರಿಸಿದೆ ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಮಾತ್ರ ನಾನು ವಿಕ್ರಯ ವಿಭಾಗದಲ್ಲಿ ಕೆಲಸ ಮಾಡಿದ್ದು ಈಗ ಕಂಪ್ಯೂಟರಿಕರಣವಾದ ನಂತರ ಅಲ್ಲಿನ ಕೆಲಸ ಮಾಡಲು ಉತ್ಸುಕಳಾಗಿದ್ದೆ. ಅಲ್ಲಿಗೆ ಬೇರೆ ಯಾರು ಹೋಗಲು ಇಷ್ಟಪಡದೆ ಇದ್ದುದರಿಂದ ನನಗೆ ಅಲ್ಲಿಗೆ ವರ್ಗಾವಣೆ ಮಾಡಲು ಒಪ್ಪಿ ಆದೇಶವನ್ನು ಸಹ ಹಾಕಿ ಆಯಿತು. ಆ ಸಮಯಕ್ಕೆ ಶಾಖಾಧಿಕಾರಿಗಳ ವರ್ಗಾವಣೆ ಆದೇಶಗಳು ಆಗಿ ಅನುರಾಧರಿಗೆ ವರ್ಗಾವಣೆ ಸಿಕ್ಕಿತು. ಆದರೆ ನಮ್ಮ ಶಾಖೆಗೆ ವರ್ಗಾವಣೆ ಆಗಿಬಂದದ್ದು ನನ್ನ ತಂಗಿಯ ಪತಿ ಪ್ರಸನ್ನ ಅವರು. ವಿಕ್ರಯ ವಿಭಾಗ ನೇರವಾಗಿ ಶಾಖಾಧಿಕಾರಿಗಳ ಆಡಳಿತಕ್ಕೆ ಒಳಪಡುತ್ತದೆ ಮತ್ತು ಬೇರೆ ಯಾವ ಅಧಿಕಾರಿಗಳು ಅಲ್ಲಿ ಇರುವುದಿಲ್ಲ. ಹಾಗಾಗಿ ನಾವು ಸಂಬಂಧಿಗಳು ಮಾತ್ರ ಆ ವಿಭಾಗದಲ್ಲಿ ಜವಾಬ್ದಾರರಾಗುವುದು ಸರಿ ಹೋಗುವುದಿಲ್ಲ ಎಂದು ಹೇಳಿ ಇನ್ನು ರಿಲೀವ್ ಆಗಿರದ ಅನುರಾಧ ಅವರೊಂದಿಗೆ ಮಾತನಾಡಿದರೆ, ಅವರು ಆ ವಿಷಯಕ್ಕೆ ಸ್ವಲ್ಪವೂ ಪ್ರಾಮುಖ್ಯತೆ ಕೊಡದೆ ಏನು ಆಗುವುದಿಲ್ಲ ಕೊಟ್ಟಿರುವುದನ್ನು ಮಾಡಿ ಎಂದು ಕಟುವಾಗಿ ಹೇಳಿದರು ಮತ್ತು ನಾನು ಬಲವಂತಿಸಿದಾಗ ಬೇರೆ ಯಾರಾದರೂ ಅಲ್ಲಿಗೆ ಬರುವುದಿದ್ದರೆ ಅವರೊಂದಿಗೆ ವಿನಿಮಯ ಮಾಡಿಕೊಳ್ಳಿ ಎಂದರು. ಆದರೆ ಜವಾಬ್ದಾರಿ ಹೆಚ್ಚು ಇರುತ್ತಿದ್ದ ಈ ವಿಭಾಗಕ್ಕೆ ಬಂದು ತಲೆ ಕೊಡಲು ಬೇರೆ ಯಾರು ಸಿದ್ದರಿರಲಿಲ್ಲ. ಹಾಗಾಗಿ ನಾನು ತೆಪ್ಪಗೆ ಅಲ್ಲಿಯೇ ಮುಂದುವರೆಯುವ ನಿರ್ಧಾರ ಮಾಡಬೇಕಾಯಿತು.
ಈ ವೇಳೆಗೆ ನನ್ನ ತಂಗಿ ಗರ್ಭಿಣಿಯಾಗಿದ್ದು ಪೂರ ಬೆಡ್ ರೆಸ್ಟ್ ಹೇಳಿದ್ದರಿಂದ ಅವಳು ಕಚೇರಿಗೆ ಹೋಗುತ್ತಿರಲಿಲ್ಲ. ನಮ್ಮ ಶಾಖೆಯ ಬಳಿ ಸರಸ್ವತಿಪುರಂನಲ್ಲೇ ಅವರು ಮನೆ ಮಾಡಿದ್ದಾಯಿತು .ನನಗೂ ಆಫೀಸಿನಿಂದ ವಾಪಸ್ ಹೋಗುತ್ತಾ ಅವಳನ್ನು ಮಾತನಾಡಿಸಿಕೊಂಡು ಹೋಗಲು ಅಥವಾ ಅವರಲ್ಲಿಗೆ ಅವಶ್ಯಕತೆ ಇದ್ದಾಗ ಹೋಗಲು ಅನುಕೂಲ ಆಯಿತು.
ಆಗ ಅಲ್ಲಿ ನನ್ನ ಜೊತೆ ಇದ್ದವರು ವೀಣಾ ಮತ್ತು ರಾಧಿಕಾ. ಅದುವರೆಗೆ ಇದ್ದ ಪ್ರೋಗ್ರಾಮರ್ ರಾಮಚಂದ್ರ ಅವರು ವರ್ಗವಾಗಿ ರಾಜಲಕ್ಷ್ಮಿ ಅಲ್ಲಿಗೆ ಬಂದಿದ್ದಳು. ಅವಳು ಸಹ ತಮ್ಮದೇ ಯೂನಿಯನ್ ನವಳಾಗಿದ್ದು ಮೊದಲಿನಿಂದಲೂ ಗೆಳತಿ ಆದ್ದರಿಂದ ಕಂಪ್ಯೂಟರ್ಗೆ ಸಂಬಂಧಿಸಿದ ಕೆಲಸಗಳನ್ನು ಕಲಿಯಲು ಹಾಗೂ ಅವರಿಂದ ಮಾಡಿಸಿಕೊಳ್ಳಲು ತುಂಬಾ ಅನುಕೂಲವಾಗಿತ್ತು.
ಈ ಮೊದಲೇ ಹೇಳಿದ ಬ್ಯಾಂಕ್ ದಾಖಲೆಗಳ ವಿವರ ಆಗ ಎಲ್ಲಾ ಪ್ರತಿನಿಧಿಗಳಿಗೂ ಕಡ್ಡಾಯ ಎಂದಾಗಿದ್ದರಿಂದ ಆಗ ಇದ್ದ ಎಲ್ಲಾ ಪ್ರತಿನಿಧಿಗಳ ಬ್ಯಾಂಕ್ ವಿವರಗಳನ್ನು ತೆಗೆದುಕೊಂಡು ಕಂಪ್ಯೂಟರ್ಗೆ ತುಂಬಿಸುವ ಒಂದು ದೊಡ್ಡ ಪ್ರಾಜೆಕ್ಟ್ ಆಗಿ ಅದನ್ನು ಒಂದೇ ಸಮ ಕುಳಿತು ಮಾಡಿದ್ದು ನನಗೆ ಈಗಲೂ ತೃಪ್ತಿ ಕೊಡುವ ವಿಷಯ.
ಹಾಗೆಯೇ ಪ್ರತಿನಿಧಿಗಳಿಗೆ ಸಂಬಂಧಿಸಿದ ಕ್ಲಬ್ ರೋಸ್ಟರ್ ಕೆಲಸವು ಅಷ್ಟೇ, ಅದೇ ಮೊದಲ ಬಾರಿಗೆ ಸಂಪೂರ್ಣ ಕಂಪ್ಯೂಟರಿ ಕೃತ ಆಗಿದ್ದು ಅದನ್ನು ತುಂಬಾ ಯಶಸ್ವಿಯಾಗಿ ನಮ್ಮ ಶಾಖೆಯಲ್ಲಿಯೇ ಪ್ರಥಮ ಬಾರಿಗೆ ಮಾಡಿದ್ದು ತುಂಬಾ ಖುಷಿ ಕೊಟ್ಟಿತು. ನಾನು ಅಲ್ಲಿ ಕೆಲಸ ಮಾಡಿದ ಮೂರು ವರ್ಷಗಳಲ್ಲೂ ನಮ್ಮ ಶಾಖೆಯೇ ಮೊತ್ತ ಮೊದಲು ಈ ರೀತಿಯ ಕ್ಲಬ್ ರೋಸ್ಟರ್ ಗಳನ್ನು ಸಲ್ಲಿಸಿದ್ದು .ನಮ್ಮ ದೂರದ ಸಂಬಂಧಿ ಸ್ವಾಮಿ ಅವರು ಸಹ ವಿಭಾಗಿಯ ಕಚೇರಿಯ ವಿಕ್ರಯ ವಿಭಾಗದಲ್ಲೇ ಆಗ ಕೆಲಸ ಮಾಡುತ್ತಿದ್ದು ನಮಗೆ ಬೇಕಾದಾಗ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಿದ್ದರು. ಆಡಿಟ್ ಇನ್ಸ್ಪೆಕ್ಷನ್ ಎಲ್ಲದರಲ್ಲೂ ನಮ್ಮ ವಿಭಾಗ ತುಂಬಾ ಹೆಚ್ಚಿನ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಮತ್ತೊಂದು ವಿಶೇಷ. ವಿಭಾಗಿಯ ಮಟ್ಟದ ಕ್ಲಬ್ ಸಮಾವೇಶಗಳನ್ನು ಮೈಸೂರಿನಲ್ಲಿಯೇ ದಾಸ ಪ್ರಕಾಶ್ ಹೋಟೆಲ್ನಲ್ಲಿಯೇ ಮಾಡುತ್ತಿದ್ದು ಆ ಮೂರು ವರುಷಗಳು ಅದನ್ನು ನಿರೂಪಿಸಿ ಅಲ್ಲಿ ಭಾಗವಹಿಸುವ ಅವಕಾಶ ದೊರೆತಿತ್ತು.
ಇನ್ನೊಂದು ಮುಖ್ಯವಾದ ಕೆಲಸ ಅಂದರೆ ಪ್ರತಿನಿಧಿಗಳ ಆದಾಯ ತೆರಿಗೆ ವಿಷಯ. ಎಲ್ಲಾ ಪ್ರತಿನಿಧಿಗಳು ಪ್ಯಾನ್ ಕಾರ್ಡ್ ಹೊಂದಿರದಿದ್ದ ಕಾರಣ ಅವರಿಗೆ ಕಮಿಷನ್ ಬಟವಾಡೆಗೆ ನಿಲುಗಡೆ ಆಗಿತ್ತು ಅವರಿಗೆ ಹೇಳಿ ಪ್ಯಾನ್ ಕಾರ್ಡ್ ಮಾಡಿಸಿ ಆ ವಿವರಗಳನ್ನು ಕಂಪ್ಯೂಟರ್ನಲ್ಲಿ ದಾಖಲಿಸುವ ಕೆಲಸವು ನಾವಿದ್ದ ಸಮಯದಲ್ಲೇ ಆಗಿದ್ದು ಎಂದು ಹೇಳಿಕೊಳ್ಳಲು ಹೆಮ್ಮೆ. ಅಲ್ಲದೆ ಪ್ರತಿನಿಧಿಗಳ ತೆರಿಗೆ ಸಲ್ಲಿಸುವ ಹಾಗೂ ಅವರಿಗೆ ಫಾರ್ಮ್ 21 ಅನ್ನು ಕೊಡುವ ಈ ಎಲ್ಲಾ ಕೆಲಸಗಳನ್ನೂ ಕಲಿತು ಮಾಡಿದ್ದು ಖುಷಿ ಕೊಟ್ಟಿತ್ತು. ಈ ಹಿಂದೆ ಸರಿಯಾದ ಪ್ಯಾನ್ಗಳು ಇಲ್ಲದೆ ಆದಾಯ ತೆರಿಗೆ ವಿಭಾಗದಿಂದ ಕೆಲವೊಂದು ನೋಟಿಸ್ ಗಳು ಜಾರಿಯಾಗಿತ್ತು . ಅಂತಹ ನೋಟಿಸ್ ಗಳನ್ನು ನೋಡಿ ಅವುಗಳಿಗೆ ಬೇಕಾದ ವಿವರಗಳನ್ನು ಹೊಂದಿಸಿ ಅದನ್ನು ಆದಾಯ ತೆರಿಗೆ ರಿಟರ್ನಸ್ ಮಾಡಿ ಕೊಡುವಂತಹ ಕಠಿಣತರ ಕೆಲಸವನ್ನು ಸಹ ಒಂದು ಏಜೆನ್ಸಿಯ ಮೂಲಕ ತುಂಬಾ ತೃಪ್ತಿಕರವಾಗಿ ಮಾಡಿ ಯಾವುದೇ ನೋಟಿಸ್ ರಾಕಿ ಇಲ್ಲದಂತೆ ನೋಡಿಕೊಂಡಿದ್ದೆ .ಹಾಗಾಗಿ ವಿಭಾಗಿಯ ಕಚೇರಿಯವರು ಸಹ ಬೇರೆ ಯಾವುದಾದರೂ ಶಾಖೆಗೆ ನೋಟಿಸ್ ಬಂದರೆ ನನ್ನ ಮಾರ್ಗದರ್ಶನ ತೆಗೆದುಕೊಳ್ಳಲು ಹೇಳುತ್ತಿದ್ದರು. ಆ ನಾನಿದ್ದ ಸಮಯದ ಅವಧಿಯಲ್ಲಿ ವೀಣಾ ಅವರಿಗೆ ಬೇರೆ ವಿಭಾಗಕ್ಕೆ ಬದಲಾವಣೆ ದೊರಕಿ ನಾಗಮ್ಮ ಅಲ್ಲಿಗೆ ಬಂದರು. ನಾನು ರಾಧಿಕಾ ಮತ್ತು ನಾಗಮ್ಮ ತುಂಬಾ ಒಳ್ಳೆಯ ಟೀಮ್ ಆಗಿ ವರ್ಕ್ ಮಾಡಿದೆವು. ಅಲ್ಲಿ ಏನೆಲ್ಲಾ ವಿಶೇಷ ಸಾಧನೆಗಳು ಆಯಿತು ಅದೆಲ್ಲ ಈ ಟೀಮ್ ವರ್ಕ್ ನ ಫಲವೇ. ನಾನು ಹೋದ ಸ್ವಲ್ಪ ದಿನ ಒಬ್ಬ ಉಪ ಶಾಖಾಧಿಕಾರಿಗಳು ಇದ್ದಾರಾದರೂ ಅವರಿಗೆ ಬೆಂಗಳೂರಿಗೆ ವರ್ಗ ಸಿಕ್ಕಿದ ನಂತರ ಮತ್ತೆ ಯಾವ ಉಪಶಾಖಾಧಿಕಾರಿಗಳನ್ನು ನಮ್ಮ ಶಾಖೆಗೆ ಪೋಸ್ಟ್ ಮಾಡಲಿಲ್ಲ . ಹಾಗಾಗಿ ವಿಕ್ರಯ ವಿಭಾಗದ ಮುಖ್ಯಸ್ಥೆ ಆಗಿದ್ದ ನನ್ನ ಮೇಲೆ ಸ್ವಲ್ಪ ಹೆಚ್ಚಿನ ಜವಾಬ್ದಾರಿಯೇ ಎಂದು ಹೇಳಬಹುದು. ಆದರೆ ಎಲ್ಲರ ನೆರವು ಹಾಗೂ ಶಾಖಾಧಿಕಾರಿಗಳಾಗಿದ್ದ ನಮ್ಮ ಭಾವ ಪ್ರಸನ್ನ ಅವರ ಸಹಕಾರದಿಂದಾಗಿ ತೃಪ್ತಿಕರ ಸೇವೆ ಸಲ್ಲಿಸುವ ಅವಕಾಶ ದೊರೆಯಿತು.
ಆ ವೇಳೆಗೆ ನಮ್ಮ ಎಲ್ಐಸಿನಲ್ಲಿ ಎರಡನೇ ಬಾರಿಗೆ ಮನೆ ಸಾಲ ತೆಗೆದುಕೊಳ್ಳುವ ಯೋಜನೆ ಬಂದಿತ್ತು. ಹಾಗಾಗಿ ನಾನು ಮೊದಲು ಇದ್ದ ಚಿಕ್ಕ ಸೈಟಿನ ಮನೆಯನ್ನು ಮಾರಿ ಆ ಹಣದೊಂದಿಗೆ ಎರಡನೆಯ ಬಾರಿಯ ಸಾಲ ಉಪಯೋಗಿಸಿಕೊಂಡು ಈಗಿರುವ ಮನೆಯನ್ನು ಕೊಂಡುಕೊಂಡಿದ್ದು. ಹೀಗೆ ಇದೇ ಸಮಯದಲ್ಲಿ ನನ್ನ ತಂಗಿಯ ಮಗ ಸುಧನ್ವ ಸಹ ಹುಟ್ಟಿದ್ದು. ನಂತರ ನನ್ನ ತಂಗಿಗೆ ಹುಣಸೂರು ಶಾಖೆಯಿಂದ ಮೈಸೂರಿನ ಶಾಖೆ 4ಕ್ಕೆ ವರ್ಗವಾಯಿತು. ಮೂರು ವರ್ಷ ನಮ್ಮ ಶಾಖೆಯಲ್ಲಿ ಕಾರ್ಯ ನಿರ್ವಹಿಸಿದ ನಂತರ ನನ್ನ ಭಾವ ಪ್ರಸನ್ನ ಅವರಿಗೆ ನಾಗಮಂಗಲ ಶಾಖೆಗೆ ವರ್ಗವಾಗಿತ್ತು. ಆನಂತರ ಬಂದ ಶಾಖಾಧಿಕಾರಿಗಳೇ ರಾಜಶೇಖರ ಅವರು.
ನಮ್ಮ ಶಾಖೆಯ ಪದ್ಧತಿಯಂತೆ ಮೂರು ವರ್ಷ ಮುಗಿದಿದ್ದರಿಂದ ವಿಕ್ರಯ ವಿಭಾಗದಿಂದ ನನಗೆ ಮತ್ತೆ ಪಾಲಿಸಿ ಸೇವಾ ವಿಭಾಗಕ್ಕೆ ಬದಲಾವಣೆ ದೊರಕಿತು. ಈ ಬಾರಿ ಮೊದಲು ಕೆಲಸ ಮಾಡುತ್ತಿದ್ದ ಸಿಂಗಲ್ ವಿಂಡೋ ದ ಬದಲು ಪಿ ಎಸ್ ಜನರಲ್ ಎಂದು ಬೇರೆ ಎಲ್ಲಾ ಇತರೆ ಕೆಲಸಗಳು ಇದ್ದ ವಿಭಾಗ ಅಲ್ಲಿ ನಾನು ಮುಖ್ಯವಾಗಿ ನೋಡಿಕೊಳ್ಳುತ್ತಿದ್ದು ಅಸೈನ್ಮೆಂಟ್ ನಾಮಿನೇಷನ್ ರಿವೈವಲ್ ಆಲ್ಟರೇಷನ್ ಬಾಂಡ್ ರಿಲೀಸ್ ಇತ್ಯಾದಿ ಕೆಲಸಗಳು. ಈ ವೇಳೆಗೆ ಬ್ಯಾಂಕ್ ವಿವರಗಳ್ನ ಸಲ್ಲಿಸುವಿಕೆ ಕಡ್ಡಾಯವಾಗಿದ್ದು ಚೆಕ್ ನಲ್ಲಿ ಪಾವತಿ ಮಾಡುವುದು ಪೂರ್ತಿ ನಿಂತುಹೋಗಿತ್ತು ಹಾಗಾಗಿ ಬ್ಯಾಂಕ್ ವಿವರಗಳನ್ನು ಎಲ್ಲರೂ ಸಲ್ಲಿಸುತ್ತಿದ್ದರು ಹಾಗೂ ಅದು ಒಂದು ದೊಡ್ಡ ಪ್ರಮುಖ ಕೆಲಸವಾಗಿ ಬಿಟ್ಟಿತ್ತು ಆ ವೇಳೆಗೆ ಅಲ್ಲಿ ಇದ್ದ ಆಫೀಸರ್ ನಾರಾಯಣ್ ಅವರು. ಅವರು ಸಹ ತುಂಬಾ ವಿಷಯ ತಿಳಿದಿದ್ದರೂ ಹಾಗೂ ಕೆಲಸದಲ್ಲಿ ಪೂರ್ತಿ ತೊಡಗಿಸಿಕೊಂಡಿದ್ದರು ಇನ್ನೇನು ಒಂದುವರೆ ವರ್ಷಕ್ಕೆ ಅವರಿಗೆ ನಿವೃತ್ತಿ ಬಾಕಿ ಇದ್ದರು ಸಹಿತ ಈಗ ಸೇರಿದವರಷ್ಟೇ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದರು. ಈ ಬ್ಯಾಂಕ್ ವಿವರಗಳ ದಾಖಲಾತಿಯನ್ನು ನಾನು ಮತ್ತು ಅವರು ಇಬ್ಬರೂ ಸೇರಿ ಮಾಡುತ್ತಿದ್ದೆವು ದಿನಕ್ಕೆ 40 _ 50 ಪಾಲಿಸಿಗಳ ಬ್ಯಾಂಕ್ ದಾಖಲಾತಿ ಆ ಸಮಯದಲ್ಲಿ ನಡೆದಿದ್ದು ಈಗಲೂ ಕೆಲವೊಮ್ಮೆ ಕಂಪ್ಯೂಟರ್ನಲ್ಲಿ ಹಳೆಯ ಬ್ಯಾಂಕ್ ದಾಖಲಾತಿಗಳನ್ನು ನೋಡಿದಾಗ ನಮ್ಮ ಈ ಕೆಲಸದ ವಿವರಗಳು ಕಂಡು ಖುಷಿಯಾಗುತ್ತದೆ.
ಹೀಗೆ ಪಾಲಿಸಿ ಸೇವಾ ವಿಭಾಗದಲ್ಲಿ ಎರಡನೇ ಬಾರಿ ಸೇವೆ ಸಲ್ಲಿಸುತ್ತಿರುವಾಗ ಒಂದೆರಡು ಸ್ವಾರಸ್ಯಕರ ಘಟನೆಗಳು ನಡೆದಿದ್ದವು ಅವುಗಳನ್ನು ಮುಂದಿನ ವಾರ ತಿಳಿದುಕೊಳ್ಳೋಣ.
ಮುಗಿದಿಲ್ಲ
ಸುಜಾತಾ ರವೀಶ್




