ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಯದೇವಿ ತಾಯಿಯವರ ಜೀವನವೆಂಬ ಮಹಾಗ್ರಂಥದಲ್ಲಿ ಅವರ ಮಕ್ಕಳು ಒಂದೊಂದು ಅಮೂಲ್ಯ ಅಧ್ಯಾಯಗಳಾಗಿದ್ದರೆ…. ಮುಖ್ಯ ಪಾತ್ರಧಾರಿಯಾಗಿ ಆಗಮಿಸಿದ ಅಳಿಯ ಡಾ. ಶಂಕರಣ್ಣ ಮೂಗಿ ಸುಪ್ರೀಂ ಕೋರ್ಟಿನ ನ್ಯಾಯವಾದಿಗಳು (ನನ್ನ ತಂದೆ).

ಜಯದೇವಿ ತಾಯಿಯವರ ಪಡೆದ ಹಿರಿಯ ಮಗನಾಗಿ ಪಾತ್ರವನ್ನು ವಹಿಸಿದ್ದು ಅತ್ಯಂತ ವಿಶಿಷ್ಟವಾದುದು. ತಾಯಿಯ ಬದುಕಿನ ಕಷ್ಟ-ಸುಖಗಳ ನಡುವೆ ಮಗನಾಗಿ, ತಾಯಿಯ ನೆರಳಾಗಿ, ಬೆನ್ನೆಲುಬಾಗಿ, ಮಾರ್ಗದರ್ಶಕರಾಗಿ ನಿಂತವರು.
ಗಂಡನ ವಿಯೋಗದ ನಂತರ ಮನೆಯ ಜವಾಬ್ದಾರಿಗಳ  ಭಾರವು ಹೇರಿಕೊಳ್ಳಲಾರದಷ್ಟು ಭಾರವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲು ಪ್ರಾರಂಭಿಸಿದ್ದವು…. ಆ ಸಮಯದಲ್ಲಿ “ಶಿವಯೋಗಿ ಸಿದ್ದರಾಮನು ಕಳಿಸಿಕೊಟ್ಟ ಕೈಯಾಗಿ ಶಂಕರಣ್ಣನವರು.. ಬಂದರೆಂದು” ತಾಯಿ ಯಾವಾಗಲು ಹೇಳುತಿದ್ದರು.

ಶಂಕರ ಮೂಗಿ ಅವರದು ಬೈಲ್ಹೊಂಗಲದ ಪ್ರತಿಷ್ಠಿತ ಮನೆತನ ಹಾಗೂ ಕಿತ್ತೂರು ಇತಿಹಾಸದ ಮೊದಲ ಇತಿಹಾಸಕಾರೆಂದು ಪ್ರಸಿದ್ಧಿಗೊಂಡ ಶ್ರೀ ದೊಡ್ಡಭಾವೆಪ್ಪ ಚನ್ನಬಸಪ್ಪ ಮೂಗಿಯವರ ಮಗನಾಗಿದ್ದರು… ಕಾರಣಾಂತರದಿಂದ ಬೈಲ್ಹೊಂಗಲವನ್ನು ಬಿಟ್ಟು ಸೊಲ್ಲಾಪುರದಲ್ಲಿ ಕೆಲಸಕ್ಕಾಗಿ ಬರಬೇಕಾದ ಸಂದರ್ಭ ಬಂತು…

ಸೊಲ್ಲಾಪುರದ ಗಡಿನಾಡಿನ ಮಣ್ಣಿನಲ್ಲಿ ಕನ್ನಡದ ಕಂಪು ಹರಡುತ್ತಿದ್ದ ದಿನಗಳಲ್ಲಿ, “ಜಯದೇವಿ ತಾಯಿ” ಎಂಬ ಹೆಸರೇ ಅನೇಕರ ಹೃದಯದಲ್ಲಿ ಗೌರವದ ಸ್ಥಾನ ಪಡೆದಿತ್ತು. ಕನ್ನಡ ನಾಡು, ನುಡಿ, ಸಂಸ್ಕೃತಿಯ ಮೇಲಿನ ಅವರ ಅಪಾರ ಪ್ರೀತಿ, ಸಮಾಜಸೇವೆಯಲ್ಲಿನ ಅವರ ತ್ಯಾಗ ಮತ್ತು ಸಂಕಷ್ಟಗಳ ಎದುರು ತಲೆಬಾಗದ ಧೈರ್ಯವು ಎಲ್ಲೆಡೆ ಹರಡಿತ್ತು.ಅಂತಹ ಸಮಯದಲ್ಲಿ, “ಗಡಿನಾಡಿನಲ್ಲಿ ಜಯದೇವಿ ತಾಯಿ ಎಂಬ ಕನ್ನಡತಿ ಇದ್ದಾರೆ. ನಿಷ್ಠಾವಂತೆ, ಧೈರ್ಯವಂತೆ, ಜನರ ಕಷ್ಟಗಳಿಗೆ ಸ್ಪಂದಿಸುವ ಅಪರೂಪದ ಮಹಿಳೆ” ಎಂಬ ಮಾತುಗಳನ್ನು ಕೇಳಿದ ಶಂಕರಣ್ಣನವರ ಮನಸ್ಸಿನಲ್ಲಿ ಅವರನ್ನು ಒಮ್ಮೆ ಭೇಟಿಯಾಗಬೇಕೆಂಬ ಹಂಬಲ ಮೂಡಿತು.

ಒಂದು ದಿನ ಅವರು ಜಯದೇವಿ ತಾಯಿಯವರನ್ನು ಕಾಣಲು ಬಂದರು. ಮೊದಲ ಭೇಟಿಯಲ್ಲಿಯೇ ಅವರ ಸರಳತೆ, ವಿನಯತೆ, ದೃಢ ಸಂಕಲ್ಪ ಮತ್ತು ಕನ್ನಡದ ಮೇಲಿನ ಅಭಿಮಾನ ಕಂಡು ಮಂತ್ರ ಮುಗ್ಧರಾದರು.
ತಾಯಿಯವರ ಮಾತುಗಳಲಿ ಬದುಕಿನ ಅನುಭವಗಳಿದ್ದವು. ಅವರ ನಗುವಿನಲ್ಲಿ  ಸೌಮ್ಯತೆ ಇತ್ತು ದೈವಿ ಖಳೆಯಿತು …..ಸಾವಿರ ನೋವುಗಳ ಗೆದ್ದ ಆತ್ಮವಿಶ್ವಾಸವಿತ್ತು.
ತಾಯಿಯವರು ಸಮಾಜದ ಏಳಿಗೆಗಾಗಿ ನಡೆಸುತ್ತಿದ್ದ ಕಾರ್ಯಗಳು, ಬಡವರ ಮತ್ತು ನಿರ್ಗತಿಕರ ಪರವಾಗಿ ತೋರಿಸುತ್ತಿದ್ದ ಕಾಳಜಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮಾಡುತ್ತಿದ್ದ ಸೇವೆಯನ್ನು ಕಂಡು ಶಂಕರಣ್ಣನವರು ತುಂಬಾ ಸಂತೋಷಪಟ್ಟರು.
“ಇಂತಹ ಮಹಿಳೆಯರು ಒಂದು ಕುಟುಂಬಕ್ಕೆ‌ ಅಷ್ಟೇ ಇಡೀ ಸಮಾಜದ ಆಸ್ತಿ” ಎಂದು ಅವರು ಮನಸಾರೆ ಹೊಗಳಿದರು ಹಾಗೂ ತಾಯಿಯವರ ಕೈಜೋಡಿಸಲು ಪ್ರಾರಂಭಿಸಿದರು.
ಅಂದಿನ ಭೇಟಿ  ಕನ್ನಡ ಪ್ರೀತಿ, ಸಮಾಜಸೇವೆ ಮತ್ತು ಮಾನವೀಯತೆಯ ಎರಡು ಮಹಾನ ಮನಸ್ಸುಗಳ ಸಂಗಮವಾಗಿತ್ತು.
ಗಡಿನಾಡಿನಲ್ಲಿ ಕನ್ನಡದ ದೀಪವನ್ನು ಆರದಂತೆ ಕಾಪಾಡುತ್ತಿರುವ ಜಯದೇವಿ ತಾಯಿಯವರ ಜೊತೆಯಾದರು….

 ಜಯದೇವಿ ತಾಯಿಯವರ ವ್ಯಕ್ತಿತ್ವವನ್ನು ಕಂಡ ಶಂಕರಣ್ಣನವರು, “ಧೈರ್ಯ, ನಿಷ್ಠೆ ಮತ್ತು ಭಕ್ತಿ ಎಲ್ಲವು ರೂಪ ತಾಳಿದರೆ ಅದು ಜಯದೇವಿ ತಾಯಿಯವರ ರೂಪವಾಗುತ್ತದೆ” ಎಂದು ಪ್ರಶಂಸಿಸಿದ್ದರೆ ಅಚ್ಚರಿಯೇನಿಲ್ಲ.

ತಾಯಿಯಲಿ ಮೂಡುತ್ತಿದ್ದ ಆತಂಕವನ್ನು ಅರ್ಥಮಾಡಿಕೊಂಡು, ಅವರ ಮನಸ್ಸಿಗೆ ಧೈರ್ಯದ ಮಾತುಗಳನ್ನು ತುಂಬುತ್ತಿದ್ದರು. ತಾಯಿಯ ಕನಸುಗಳು ಕುಸಿಯದಂತೆ, ಅವರ ಸಂಕಲ್ಪಗಳು ಮಂಕಾಗದಂತೆ ಎಚ್ಚರಿಕೆಯಿಂದ ಕಾಪಾಡುತ್ತಿದ್ದರು.
ಸಾಹಿತ್ಯ ಸೇವೆಯಲ್ಲಿ ಜಯದೇವಿ ತಾಯಿಯವರು ಬೆಳಗುತ್ತಿದ್ದ ದೀಪವಾದರೆ, ಆ ದೀಪಕ್ಕೆ ಎಣ್ಣೆ ಸುರಿದು ಬೆಳಕು ಕಡಿಮೆಯಾಗದಂತೆ ನೋಡಿಕೊಂಡವರು… ಶಂಕರಣ್ಣನವರು.

 ಅವರ ಹಿರಿಯ ಮಗನಂತೆ ತಾಯಿಯ ಬರಹಗಳು, ವಿಚಾರಗಳು, ಸಮಾಜಮುಖಿ ಚಿಂತನೆಗಳು ಜನರಿಗೆ ತಲುಪಲು ಬೇಕಾದ ಎಲ್ಲ ಸಹಕಾರವನ್ನು ನೀಡುತ್ತಿದ್ದರು. ತಾಯಿಯ ಪ್ರತಿಯೊಂದು ಸಾಧನೆಯನ್ನು ತಮ್ಮದೇ ಸಾಧನೆಯೆಂದು ಭಾವಿಸಿ ಹೆಮ್ಮೆಪಡುತ್ತಿದ್ದರು.
ಆಸ್ತಿಯ ಸಂರಕ್ಷಣೆಯ ವಿಷಯದಲ್ಲಿಯೂ ಅವರ ಪಾತ್ರ ಅಪಾರ. ಪೂರ್ವಜರು ಕಟ್ಟಿದ ಆಸ್ತಿಯನ್ನು  ಸಂಪತ್ತು……..ಅದು ಕುಟುಂಬದ ಗೌರವ ಮತ್ತು ಪರಂಪರೆಯ ಸಂಕೇತವೆಂದು ಭಾವಿಸಿ ಅತ್ಯಂತ ಪ್ರಾಮಾಣಿಕತೆಯಿಂದ ಕಾಪಾಡಿದರು. ಅನೇಕ ಸವಾಲುಗಳು ಎದುರಾದರೂ ಧೈರ್ಯ ಕಳೆದುಕೊಳ್ಳದೆ, ವಿವೇಕದಿಂದ ಎಲ್ಲವನ್ನು ನಿರ್ವಹಿಸಿದರು.

ತಾಯಿಯ  ಮಾತಿಗೆ ಓಗೊಟ್ಟು, ಬಂದ ಸಂಕಟಗಳಿಗೆ ಪರಿಹಾರವಾಗಿ ನಿಂತ ಮಗನಾದರು.
ಜಯದೇವಿ ತಾಯಿಯವರ ಹೆಜ್ಜೆ ಗುರುತುಗಳು ಸಮಾಜದಲ್ಲಿ ಉಳಿಯಬೇಕೆಂಬ ಉದ್ದೇಶದಿಂದ ತಮ್ಮ ಶಕ್ತಿ, ಸಮಯ ಮತ್ತು ಜೀವನವನ್ನೇ ಸಮರ್ಪಿಸಿದ ಅಪರೂಪದ ಪಡೆದ ಪುತ್ರರಾದರು ಡಾ. ಶಂಕರಣ್ಣ ಮೂಗಿಯವರು.

ತಾಯಿಯ ಜೀವನದ ರಥ ಎರಡು ಚಕ್ರಗಳ ಮೇಲೆ ಸಾಗಿದ್ದರೆ, ಒಂದು ಚಕ್ರ ತಾಯಿಯ ಅಚಲ ಸಂಕಲ್ಪವಾಗಿದ್ದರೆ, ಮತ್ತೊಂದು ಚಕ್ರ ಅವರ ಪಡೆದ ಮಗನ ನಿಸ್ವಾರ್ಥ ಸಹಕಾರವಾಗಿತ್ತು.
ತಾಯಿಯ ಯಶಸ್ಸಿನ ಹಿಂದೆ ಕಾಣದ ಶಕ್ತಿಯಾಗಿ, ಮಾತಿಲ್ಲದ ತ್ಯಾಗಿಯಾಗಿ, ಅಚಲ ಬೆಂಬಲವಾಗಿ ನಿಂತ ಅವರ ಪಾತ್ರ ಸದಾ ಸ್ಮರಣೀಯ.
ಅವರಂತಹ ಅಪರೂಪದ ವ್ಯಕ್ತಿ ದೊರೆತದ್ದು ನನ್ನ ಪುಣ್ಯ ವೆಂದು,…..ತಾಯಿಯವರು ಹೇಳು ವರು…ಅಂತಹ ತಾಯಿಗೆ ಸೇವೆ ಸಲ್ಲಿಸುವುದು ನನ್ನ ಭಾಗ್ಯ ಎಂದು ಶಂಕರಣ್ಣನವರು ಹೇಳುವರು…..!!!

ಶಂಕರಣ್ಣನವರ ಒಡನಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಅವರ ಸರಳತೆ, ಸಜ್ಜನಿಕೆ, ಹಿರಿಯರ ಮೇಲಿನ ಗೌರವ, ಸಮಾಜದ ಬಗ್ಗೆ ಇರುವ ಕಾಳಜಿ ಹಾಗೂ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳವ ಗುಣಗಳನ್ನು ಜಯದೇವಿ ತಾಯಿಯವರು ಹತ್ತಿರದಿಂದ ಗಮನಿಸುತ್ತಿದ್ದರು.
ಅವರ ಮಾತಿನಲ್ಲಿ ವಿನಯವಿತ್ತು, ನಡವಳಿಕೆಯಲ್ಲಿ ಸಂಸ್ಕಾರವಿತ್ತು, ಹೃದಯದಲ್ಲಿ ಸಾಹಿತ್ಯ ಪ್ರೇಮವಿತು.. , ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿಪ್ರಖಂಡ ಪಾಂಡಿತ್ಯವನ್ನು ಹೊಂದಿದ್ದರು ಇಂತಹ ಗುಣವಂತ ಯುವಕನನ್ನು ಕಂಡ ತಾಯಿಯವರ ಮನಸ್ಸಿನಲ್ಲಿ ಒಂದು ಆಶಯ ಮೂಡಿತು.
ಒಂದು ದಿನ ಪ್ರೀತಿಯಿಂದ ಶಂಕರಣ್ಣನವರನ್ನು ಕರೆದು, “ನನ್ನ ಕಿರಿಯ ಮಗಳು ಲಲ್ಲೇಶ್ವರಿಯನ್ನು ನಿಮಗೆ ಕೊಡಲು ನನ್ನ ಮನಸ್ಸಿದೆ. ನೀವು ನಮ್ಮ ಕುಟುಂಬದ ಮಗನಾಗಬೇಕು” ಎಂದು ಹೇಳಿದರು. ತಾಯಿಯವರ ಮಾತು ಕೇಳಿದ ಶಂಕರಣ್ಣನವರ ಮುಖದಲ್ಲಿ ಸಂತಸದ ಹೊಳಪು ಮೂಡಿತು. ಅದು ಅವರಿಗೆ ಸಿಕ್ಕ ಅತ್ಯಂತ ದೊಡ್ಡ ಆಶೀರ್ವಾದವಾಗಿತ್ತು.

ತಾಯಿಯವರು ಈ ವಿಷಯವನ್ನು ಲಲ್ಲೇಶ್ವರಿ ತಾಯಿಯವರ ಮುಂದೆ ಹೇಳಿದಾಗ, ತಾಯಿಯ ಮಾತೇ ದೇವರ ಮಾತು ಎಂದು ಭಾವಿಸುತ್ತಿದ್ದ ಲಲ್ಲೇಶ್ವರಿ ತಾಯಿಯವರು ವಿನಮ್ರವಾಗಿ ತಲೆಬಾಗಿದರು.
*ನುಡಿಸಿದಂತೆ ನುಡೆವೆನ| ನಡಿಸಿದಂತೆ ನಡೆವೆನ
ನೀ ಇರಿಸಿದಂತೆ ಇರುವೆನ -ನನ್ನವ್ವ
ನಿನ್ನ ಪಾದದ ಧೂಳಿಯಾಗಿ ಹಾರೈನ||*

ಎನ್ನುತ ತಮ್ಮ ಜೀವನದ ನಿರ್ಧಾರವನ್ನು ತಾಯಿಯವರ ಕೈಯಲ್ಲಿ ಇಟ್ಟಿದ್ದ ಅವರು, “ನೀವು ಹೇಳಿದಂತೆ ಆಗಲಿ ತಾಯಿ” ಎಂದು ಗೌರವದಿಂದ ಒಪ್ಪಿಗೆ ಸೂಚಿಸಿದರು.

ಶುಭ ಸುದ್ದಿ ಎರಡು ಕುಟುಂಬಗಳಲ್ಲೂ ಸಂತಸದ ಅಲೆಯನ್ನು ಹರಡಿಸಿತು. ನಂತರ ಬೈಲಹೊಂಗಲದಲ್ಲಿ ಮದುವೆಯ ಸಿದ್ಧತೆಗಳು ಆರಂಭವಾದವು. ಊರಿನ ಬೀದಿಗಳು ಹಬ್ಬದ ವಾತಾವರಣದಿಂದ ಕಂಗೊಳಿಸಿದವು. ಬಂಧು-ಬಳಗ, ಸ್ನೇಹಿತರು, ಶರಣರು, ಭಕ್ತರು ಎಲ್ಲರೂ ಮದುವೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದರು.

ಮದುವೆಯ ದಿನ ಬೈಲಹೊಂಗಲವೇ ಒಂದು ಪುಣ್ಯಕ್ಷೇತ್ರದಂತೆ ಕಂಗೊಳಿಸುತ್ತಿತ್ತು. ನಾದಸ್ವರದ ಮಧುರ ಸ್ವರಗಳು ಗಾಳಿಯಲ್ಲಿ ತೇಲುತ್ತಿದ್ದವು. ಮಂಗಳ ವಾದ್ಯಗಳ ಘೋಷದ ನಡುವೆ ವಧುವರರು ಕಲ್ಯಾಣ ಮಂಟಪಕ್ಕೆ ಆಗಮಿಸಿದರು. ಲಲ್ಲೇಶ್ವರಿ ತಾಯಿಯವರು ಸಾಂಪ್ರದಾಯಿಕ ವಸ್ತ್ರಾಭರಣಗಳಲ್ಲಿ ಲಕ್ಷ್ಮೀದೇವಿಯಂತೆ ಕಂಗೊಳಿಸುತ್ತಿದ್ದರು. ಶಂಕರಣ್ಣನವರು ಗಂಭೀರತೆ ಮತ್ತು ವಿನಯದ ಪ್ರತಿರೂಪವಾಗಿ ಕಾಣುತ್ತಿದ್ದರು.
ಹಿರಿಯರ ಆಶೀರ್ವಾದಗಳ ನಡುವೆ ಮಂಗಳಸೂತ್ರ ಧಾರಣೆ ನಡೆದ ಕ್ಷಣದಲ್ಲಿ ಎಲ್ಲರ ಕಣ್ಣಲ್ಲೂ ಸಂತಸದ  ಮಿನುಗಿತು. ಜಯದೇವಿ ತಾಯಿಯವರ ಹೃದಯವು ಆನಂದದಿಂದ ತುಂಬಿ ತುಳುಕಿತು. ತಮ್ಮ ಮಗಳ ಜೀವನ ಒಬ್ಬ ಸಜ್ಜನನ ಕೈಯಲ್ಲಿ ಸುರಕ್ಷಿತವಾಗಿದೆ ಎಂಬ ಸಮಾಧಾನ ಅವರ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಆ ಮದುವೆ ಕೇವಲ ಇಬ್ಬರ ಹೃದಯಗಳ…ಎರಡು ಸಂಸ್ಕಾರವಂತ ಕುಟುಂಬಗಳ , ಆದರ್ಶಗಳ ಪವಿತ್ರ ಮಿಲನವಾಗಿತ್ತು. ಬೈಲಹೊಂಗಲದ ಜನರು ಇಂದಿಗೂ ಆ ಕಲ್ಯಾಣ ಮಹೋತ್ಸವವನ್ನು ನೆನಪಿಸಿಕೊಂಡು, “ಅದು ನಿಜವಾಗಿಯೂ ದೇವರ ಅನುಗ್ರಹದಿಂದ ನಡೆದ ದಿವ್ಯ ವಿವಾಹ” ಎಂದು ಭಾವಪೂರ್ಣವಾಗಿ ಹೇಳಿಕೊಳ್ಳುತ್ತಾರೆ.

ಅತಿಥಿಗಳ ಆತಿಥ್ಯವೂ ಅಷ್ಟೇ ಅದ್ದೂರಿಯಾಗಿತ್ತು. ಬಂದ ಪ್ರತಿಯೊಬ್ಬರನ್ನೂ ಗೌರವದಿಂದ ಸ್ವಾಗತಿಸಿ, ಪ್ರೀತಿಯಿಂದ ಊಟೋಪಚಾರ ಮಾಡಲಾಯಿತು. ಮದುವೆ ಮುಗಿದ ನಂತರವೂ ಹಲವಾರು ದಿನಗಳ ಕಾಲ ಬೈಲಹೊಂಗಲದ ಜನರು ಆ ವಿವಾಹದ ಬಗ್ಗೆ ಮಾತನಾಡುತ್ತಲೇ ಇದ್ದರು.
“ಮದುವೆ ಅಂದರೆ ಹೀಗೆ ಇರಬೇಕು! ನಾವು ಇಂತಹ ವಿಜೃಂಭಣೆಯ ಕಲ್ಯಾಣವನ್ನು ಜೀವನದಲ್ಲಿ ನೋಡಿಲ್ಲ!” ಎಂದು ಜನರು ಹೇಳಿಕೊಳ್ಳುತ್ತಿದ್ದರು. ಆ ದಿನವನ್ನು ಕಂಡವರು ಇಂದಿಗೂ ನೆನಪಿಸಿಕೊಂಡಾಗ ಅವರ ಕಣ್ಮುಂದೆ ಹೂವಿನ ತೋರಣಗಳಿಂದ ಸಿಂಗರಿಸಲ್ಪಟ್ಟ ಬೈಲಹೊಂಗಲದ ಓಣಿ ಓಣಿಯ ತುಂಬಾ ಕಟ್ಟಿದ ಹಂದರಗಳ ನೆನಪು ಬಾರದೇ ಇರದು..

ಸತಿಪತಿಗಳ ಪವಿತ್ರ ಬಂಧವನ್ನು  ಗೌರವಿಸಿ,   ಪ್ರೀತಿ, ಕಾಳಜಿ ಮತ್ತು ಸೇವಾಭಾವದಿಂದ ನಡೆದುಕೊಂಡರು. ಸುಖದಲ್ಲೂ ದುಃಖದಲ್ಲೂ ಅವರ ನೆರಳಾಗಿ ನಿಂತು, ಪ್ರತಿಯೊಂದು ಹೆಜ್ಜೆಯಲ್ಲಿಯೂ ಜೊತೆಗಿದ್ದು, ಆದರ್ಶ ದಂಪತಿಗಳಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಿದರು.
ಅವರಿಬ್ಬರ ಜೀವನವು ಪರಸ್ಪರ ತ್ಯಾಗ ಮತ್ತು ಧರ್ಮನಿಷ್ಠೆಯ ಪ್ರತೀಕವಾಗಿತ್ತು.ಜೀವನದ ಎಲ್ಲಾ ಏಳುಬೀಳುಗಳನ್ನು ಕೈಹಿಡಿದು ದಾಟಿದರು.
ಅತ್ಯಂತ ವೈಶಿಷ್ಟ ಪೂರ್ಣ ಜೀವನವು ಇವರದಾಗಿತ್ತು
ಶಂಕ್ರಣ್ಣ ಮೂಗಿ ಹಾಗೂ ಲ‌ಲ್ಲೇಶ್ವರಿ ತಾಯಿಯವರು ಜೀವನದ ಒಂದು ಹಂತದಲ್ಲಿ ಸಂಸಾರದ ಬಂಧನಗಳನ್ನು ಮೀರಿ ಸನ್ಯಾಸತ್ವವನ್ನು ಸ್ವೀಕರಿಸಿದರು. ಆ ಬಳಿಕ ಅವರು ದಾಂಪತ್ಯ ಜೀವನದ ಭಾವನೆಗಿಂತಲೂ ಉನ್ನತವಾದ ಆಧ್ಯಾತ್ಮಿಕ ಸಂಬಂಧವನ್ನು ಅಳವಡಿಸಿಕೊಂಡರು. ಒಬ್ಬರನ್ನೊಬ್ಬರು  ತಂದೆ-ತಾಯಿಯರಂತೆ ಗೌರವದಿಂದ ಕಾಣುತ್ತಿದ್ದರು. ಲಲ್ಲೇಶ್ವರಿ ತಾಯಿಯವರು ಕೈಯಲ್ಲಿ ರುದ್ರಾಕ್ಷಿ ಕಂಕಣವನ್ನು ಕಟ್ಟಿಕೊಂಡರು.ಸಂಬಂಧದಲ್ಲಿ ಮೋಹ ಮರೆತು ಮಮತೆ, ನಿಸ್ವಾರ್ಥ ಸೇವೆಯಲಿ ತೊಡಗಿದರು. ಪರಸ್ಪರರ ಯೋಗಕ್ಷೇಮವನ್ನು ಕಾಪಾಡುತ್ತ, ತಾಯಿ ಸೇವೆಗಾಗಿ ತಮ್ಮ ಬದುಕನ್ನು ಸಮರ್ಪಿಸಿದರು.

 ಅವರ ಪ್ರತಿಯೊಂದು ಹೆಜ್ಜೆಯೂ ಶರಣ ತತ್ವದ ಪ್ರತಿಬಿಂಬವಾಗಿತ್ತು.
ಸನ್ಯಾಸ ಮಾರ್ಗದಲ್ಲಿ ನಡೆದು, ಭಕ್ತಿ, ಜ್ಞಾನ ಮತ್ತು ಸೇವೆಯ ಮೂಲಕ ತಮ್ಮ ಅಂತರಂಗವನ್ನು ಶುದ್ಧಗೊಳಿಸಿಕೊಂಡರು. ಅಂತಿಮವಾಗಿ ನಿರ್ವಾಣದತ್ತ ಪಯಣ ಬೆಳೆಸಿದರು. ಅವರ ಜೀವನವು ಸಂಸಾರಿಕ ಮಿತಿಯನ್ನು ದಾಟಿ, ಆತ್ಮಮದ ಶ್ರೇಷ್ಠ ಮಟ್ಟವನ್ನು ತಲುಪಿದ ಉದಾತ್ತ ಉದಾಹರಣೆಯಾಗಿದೆ.
 ತಾಯಿಯನ್ನೇ  ಗುರುವಾಗಿ ಸ್ವೀಕರಿಸಿ  ಶರಣರ ವೈರಾಗ್ಯವನ್ನು ಕಂಡ ಮಹಾತ್ಮರಾದರು” ಎಂದು ಭಕ್ತಿಭಾವದಿಂದ ಸ್ಮರಿಸ ಬಹುದಾಗಿದೆ.ಅವರ ಜೀವನಗಾಥೆ ಇಂದಿಗೂ ಸೇವೆ, ತ್ಯಾಗ ಮತ್ತು ಆಧ್ಯಾತ್ಮಿಕ ಸಾಧನೆಯ ಆದರ್ಶವಾಗಿ ಉಳಿದಿದೆ.

*ಸತಿಪತಿಯ ಭಾವ| ತೊರೆದು ನಿರತ
ಸತೀಶರಣ ಲಿಂಗಪತಿ ಬಾವದಿ- ರಮಿಸಿ
ಭಕ್ತಿ ಭವನದ ವಾಸವಾದೆವು|| *

ಎನ್ನುತ ನಂತರ ಬಸವಕಲ್ಯಾಣದಲ್ಲಿ ಜಯದೇವಿ ತಾಯಿಯವರೊಂದಿಗೆ ಶರಣರು ನಡೆದಾಡಿದ ಭೂಮಿಯಲ್ಲಿ ಅವರು ವಾಸವಿದ್ದು, ತಮ್ಮ ಆಧ್ಯಾತ್ಮಿಕ ಮತ್ತು ಸಾಹಿತ್ಯ ಸೇವೆಯನ್ನು ಮುಂದುವರಿಸಿದರು.

*ಕರೆದ್ಧ್ಯೊದರು ಕೈಹಿಡಿದು| ಅರಮನೆ ಆಧ್ಯಾತ್ಮ
ಚಿರ ಪರ ಪದವೀಯ ಅರಿತು ನೀಡಿ-ಪತಿದೇವ ಶರಣರ ನಿಜ ನಿವಾಸಕ್ಕೆ ಕರೆದರು ||*

ಗಂಡ ಹೆಂಡಂದಿರು ಇಬ್ಬರು ಸನ್ಯಾಸತ್ವವನ್ನು ಪಡೆದು ಬಸವಭೂಮಿಯಲ್ಲಿ ನೆಲೆಸಿದರು

ಸತಿಪತಿಗಳ ಜೀವನದ ಕೊನೆಯ ಅಧ್ಯಾಯವೂ ಅವರ ಬದುಕಿನಂತೆಯೇ ಸೇವೆ, ಭಕ್ತಿ ಮತ್ತು ತ್ಯಾಗದ ಸುಗಂಧದಿಂದ ತುಂಬಿಕೊಂಡಿತ್ತು. ಕಿರಿ ಮಗಳು ಮತ್ತು ಅಳಿಯನೊಂದಿಗೆ ಜಯದೇವಿ ತಾಯಿಯವರು ಅನೇಕ ವರ್ಷಗಳ ಕಾಲ ಸಮಾಜಸೇವೆ, ಶರಣ ಸಂಸ್ಕೃತಿಯ ಪ್ರಚಾರ ಮತ್ತು ಮಾನವೀಯ ಮೌಲ್ಯಗಳ ಬಿತ್ತನೆ ಮಾಡುತ್ತಾ ಬದುಕಿದರು.
ಬಸವಣ್ಣನವರ ಪವಿತ್ರ ಭೂಮಿಯಾದ ಬಸವಕಲ್ಯಾಣದಲ್ಲಿ ಈ ಮಹನೀಯರು ತಮ್ಮ ಉಸಿರಿನವರೆಗೂ ಧರ್ಮದ ದಾರಿಯಲ್ಲಿ ನಡೆದರು.

ಕಾಲಚಕ್ರದ ನಿಯಮದಂತೆ ದೇಹವು ಮಣ್ಣಿನಲ್ಲಿ ಲೀನವಾದರೂ, ಅವರು ಬಿತ್ತಿದ ಆದರ್ಶಗಳು ಇಂದಿಗೂ ಜೀವಂತವಾಗಿವೆ. ಬಸವಣ್ಣನವರ ಪಾವನ ಮಣ್ಣಿನಲ್ಲಿ ಈ ಮೂವರು ಮಹಾತ್ಮರು ಮಣ್ಣಲ್ಲಿ ಮಣ್ಣಾಗಿ, ಶಿವನಲ್ಲಿ ಶಿವವಾಗಿ ಲೀನರಾದರು. ಬಸವಕಲ್ಯಾಣದಲ್ಲಿ ಅವರ ಸಮಾಧಿಗಳನ್ನು ಕಾಣಬಹುದಾಗಿದೆ.
ಬಸವಕಲ್ಯಾಣದಲ್ಲಿ ಅವರ ಜೀವನದ ನೆನಪುಗಳನ್ನು ಸಾರುವ ಮೂರು ಸಮಾಧಿಗಳು ಭಕ್ತರ ಕಣ್ಮನ ಸೆಳೆಯುತ್ತವೆ. ಆ ಸಮಾಧಿಗಳು  ಅವು ಅವರ ತ್ಯಾಗ, ಸೇವೆ, ಶರಣ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಜೀವಂತ ಸಾಕ್ಷಿಗಳಾಗಿವೆ.
ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರ ಮನದಲ್ಲೂ ಜಯದೇವಿ ತಾಯಿಯವರ ಹಾಗೂ ಅವರ ಕುಟುಂಬದ ಆದರ್ಶ ಜೀವನದ ನೆನಪುಗಳು ಮರುಕಳಿಸುತ್ತವೆ.
 ಅವರ ಸೇವೆಯ ಪ್ರತಿಧ್ವನಿ ಕೇಳಿಬರುವಂತಿರುತ್ತದೆ. ಭಕ್ತಿಯಿಂದ ತಲೆಬಾಗಿದಾಗ, ಅವರ ಬದುಕಿನ ಸಂದೇಶ ಮನಸ್ಸನ್ನು ಸ್ಪರ್ಶಿಸುತ್ತದೆ…. “ಮಾನವ ಸೇವೆಯೇ ಶಿವ ಸೇವೆ, ಪ್ರೀತಿಯೇ ಪರಮ ಧರ್ಮ.”
ಆ ಕಾರಣಕ್ಕೇ ಇಂದಿಗೂ ಅವರ ಸಮಾಧಿಗಳು ಭಕ್ತರ ಪಾಲಿಗೆ ಪ್ರೇರಣೆಯ ತಾಣವಾಗಿ, ಸೇವಾ ಜೀವನದ ಸ್ಮಾರಕವಾಗಿ ನಿಂತಿವೆ.       (ಮುಂದುವರೆಯುತ್ತದೆ)


About The Author

Leave a Reply

You cannot copy content of this page

Scroll to Top