ʼಅನುಸೂಯಾ ಸಿದ್ಧರಾಮ ಅವರ ʼನೂರಾರು ಗಝಲ್ʼಅವಲೋಕನಪ್ರಭಾವತಿ ಎಸ್ ದೇಸಾಯಿ

 ಕೃತಿ ಶೀಷಿ೯ಕೆ__ ನೂರಾರು ಗಝಲ್
 ಲೇಖಕರು……..ಅನುಸೂಯಾ ಸಿದ್ಧರಾಮ  ೯೭೩೧೫೬೯೫೬೯
ಪ್ರಕಟಿತ ವರ್ಷ…….೨೦೨೫
ಪ್ರಕಾಶನ……….ಭಾವಬುತ್ತಿ ಪ್ರಕಾಶನ ಬೆಂಗಳೂರು ೮೨೭೭೪೭೧೫೯೬
ಪುಟಗಳು ….೧೪೮.      ಬೆಲೆ…೧೭೫ ₹
__________________

ನಗರದ ಮನೆ ಅಂಗಳದಲ್ಲಿ ಬೆಳೆದ ಬಳ್ಳಿ ಹೂ ಅರಳಿಸಿ ತನ್ನ ಘಮ ಬೀರುತ್ತಾ ದಾರಿಹೋಗುವರರ ಚಿತ್ತ ಸೆಳೆಯುತ್ತದೆ.  ಆದರೆ ಕಾಡಿನಲ್ಲಿ ಸ್ವಚ್ಛಂದವಾಗಿ ಬೆಳೆದು ಮದವೇರುವ  ಘಮವನ್ನು ಹರಡಿ  ಅಮಲೇರಿಸುವ ಕಾಡು ಹೂಗಳ ಪರಿಚಯ ನಮಗಿರುವುದಿಲ್ಲ , ಇಂದು ಬನದ ತುಂಬಾ  ಅರಳಿದ ಕಾಡು ಮಲ್ಲಿಗೆ, ಸಂಪಿಗೆ ,ಗುಲಾಬಿ  ಹೊಂಗೆಯ ,ಮಾವು,ಬೇವಿನ ಪರಿಮಳವನ್ನು ಬೀರುತ್ತ ಅಮಲಿನಲ್ಲಿ ತೇಲಾಡುವಂತೆ ಮಾಡುವ ಗಜಲ್   ವನದಲ್ಲಿ ಒಂದು ಸುತ್ತು ಸುತ್ತೋಣ ಬನ್ನಿ.

ಗಜಲ್ ಎನ್ನುವುದು ಹೃದಯದ ಕಾವ್ಯ ರಸಾನಂದ ನೀಡುವ ಶೃಂಗಾರದ ಸ್ಥಾಯಿ ಭಾವವೆಂದು ಹೇಳಬಹುದು .  ಪ್ರೀತಿ, ಪ್ರೇಮ, ವಿರಹ ,ಕಾಯುವಿಕೆ  ಇಂಥ ಭಾವ ತೀವ್ರತೆಯು ಎಲ್ಲರ ಹೃದಯವನ್ನು ತಟ್ಟಿ ಹೃದಯಗಳನ್ನು ಬೆಸೆಯುವದೆ ಗಜಲ್ .  ಯೌವನದ ಕನಸುಗಳು , ಸಾಮಾಜಿಕ ವ್ಯವಸ್ಥೆ ,  ವಾಸ್ತವಿಕ ಘಟನೆ ಗಳಿಗೆ ಸ್ಪಂದಿಸುವುದು , ಸ್ತ್ರೀ ಸಂವೇದನೆ ಚಿಂತನೆ ,   ಅಸಹಾಯಕತೆ , ಶೀತಲವಾದ ಬಂಡಾಯ ,  ಎಲ್ಲವುಗಳನ್ನು ನಾವು ಇಂದು ಗಜಲ್ ದಲ್ಲಿ  ಕಾಣಬಹುದು .  ಲೌಕಿಕದಿಂದ ಆಧ್ಯಾತ್ಮಿಕ ಕಡೆ ಓದುಗರನ್ನು ಕರೆದುಕೊಂಡು ಹೋಗಿ ಧ್ಯಾನಸ್ಥ ಮನಸ್ಥಿತಿಯನ್ನು ಉಂಟು ಮಾಡುತ್ತದೆ .  ಗಜಲ್ ಮನೋರಂಜನೆಯ ಸರಕಲ್ಲ ಆತ್ಮವನ್ನು ಎಚ್ಚರಿಸುವ ಕಾರ್ಯ ಮಾಡುತ್ತದೆ . ನೋವು ನಲಿವು ಎನ್ನುವ ಜೋಡಿ ಪದಗಳು ಮನುಜ ಜೀವನದಲ್ಲಿ ಹಾಸು ಹೊಕ್ಕಾಗಿರುತ್ತವೆ.  ಗಜಲ್ ಗಳು ನೋವು ನಲಿವಿನ ಉದ್ಯಾನವನ್ನು ನಿರ್ಮಿಸಿ ಅಲ್ಲಿ ಅರಳಿದ ಪುಷ್ಪಗಳ ಮಕರಂದವನ್ನು ಹೀರಲು ಓದುಗರನ್ನು ದುಂಬಿಯಾಗಿಸುತ್ತಾ ಹೋಗುತ್ತವೆ.

ಗಜಲ್ ಎಂಬ ಪದವು  ಅರಬ್ಬಿ ಭಾಷೆಯಲ್ಲಿ ಹುಟ್ಟಿ ಇರಾನ್ ಭಾಷೆಯಲ್ಲಿ ಕಾವ್ಯವಾಗಿ ಸಮೃದ್ಧವಾಗಿ ಬೆಳೆಯಿತು. ಭಾರತಕ್ಕೆ ಬಂದು ಉರ್ದು ಭಾಷೆಯಲ್ಲಿ ದೇಶಾದ್ಯಂತ ಪಸರಿಸಿ ಎಲ್ಲರ ಮನ ಗೆದ್ದ ಹೃದಯದ ಕಾವ್ಯ ಗಜಲ್ ಎಂದು ಹೇಳಬಹುದು . ಇಲ್ಲಿಯ ನೆಲ ಜಲ ಸಂಸ್ಕೃತಿಗೆ ಹೊಂದಿಕೊಂಡು ನಿರಂತರವಾಗಿ ನಿರಾಯಾಸವಾಗಿ ಭಾವನಾತ್ಮಕವಾಗಿ ಮನೋಹರವಾಗಿ ಅರಳಿ ಎಲ್ಲರ ಹೃದಯದಲ್ಲಿ ಸ್ಥಾನವನ್ನು ಪಡೆದಿದೆ . ಇಂದು ವಿಶ್ವದ ಎಲ್ಲಾ ಭಾಷೆಯಲ್ಲಿ ಗಜಲ್ ಗಳನ್ನು ಬರೆಯುತ್ತಿದ್ದಾರೆ . ಹೆಚ್ಚಾಗಿ ಜನ ಹುಚ್ಚಾಗಿ ಓದುತ್ತಿರುವ ಕಾವ್ಯವೆಂದರೆ ಗಜಲ್ ಎಂದು ಹೆಮ್ಮೆಯಿಂದ ಹೇಳಬಹುದು .

ಅನುಸೂಯ ಸಿದ್ದರಾಮ ಅವರು ವಯಸ್ಸಿನಿಂದ ಅನುಭವದಿಂದ ಬರಹದಿಂದ ಮಾಗಿದ ಹಿರಿಯ ಹೃದಯವಂತರು . ಈಗಾಗಲೇ ಇವರು ಅನೇಕ ಗದ್ಯ ಸಾಹಿತ್ಯವಾದ ಲಲಿತ ಪ್ರಬಂಧ ಕಥಾಸಂಕಲನ,ಲೇಖನಗಳನ್ನು , ಕೃತಿಗಳನ್ನು ರಚಿಸಿ ಕನ್ನಡ ಸರಸ್ವತ ಲೋಕಕ್ಕೆ ನೀಡಿ  ಚಿರಪಚಿತರಾಗಿದ್ದಾರೆ .ಈ ಮಾಗಿದ ಮನಸ್ಸು ಮತ್ತು ಹೃದಯ ಗಜಲ್ ಸಾಹಿತ್ಯ ಕಡೆಗೆ ತಿರುಗಿದ್ದು ಅವರು ಓದುಗರಿಗೆ ಹೆಚ್ಚಿನ ಸಂತಸ ನೀಡುವ ಗಜಲ್ ಗಳನ್ನು ರಚಿಸಿದ್ದಾರೆ .ಇವರ ಗಜಲ್ ಸಂಕಲನದ ವೈಶಿಷ್ಟವೆಂದರೆ ಇವರು ಬಳಸಿದ ಭಾಷೆ,ಇವರು ಗ್ರಾಮೀಣ ಪ್ರಾದೇಶಿಕ ಭಾಷೆಯನ್ನು ಸತ್ವಪೂರ್ಣವಾಗಿ ಬಳಿಸಿಕೊಂಡು ಗಜಲ್ ಗಳನ್ನು ರಚನೆ ಮಾಡಿದ್ದಾರೆ .ಗಜಲ್ ಕಾತಿ೯ ಹೆಣ್ಣಿನ ಮನದ ಬೇಗುದಿಯನ್ನು  ವ್ಯಕ್ತ ಪಡಿಸುವ ಗಜಲ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ  ತಮ್ಮ ಈ ಕೃತಿಯಲ್ಲಿ ಬರೆದು ತೋರಿಸಿದ್ದಾರೆ. ಈ ತರಹ ಭಾಷಾ ಪ್ರಯೋಗ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಗಜಲ್ ಗಳನ್ನು ರಚಿಸಿ ಓದುಗರ ಕೈಗೆ ಕೃತಿ ಕೊಡುತ್ತಿರುವವರ  ಸಂಖ್ಯೆ ಬಹಳ ಕಡಿಮೆ ಎಂದು  ನನಗನಿಸುತಿದೆ. ಶಿಷ್ಟ ಭಾಷೆಯಲ್ಲಿ ಕನ್ನಡ ಗಜಲ್ ಕೃತಿಗಳನ್ನು ಅನೇಕರು ಪ್ರಕಟಿಸಿದ್ದಾರೆ.

ಅನುಸೂಯಾ ಸಿದ್ಧರಾಮ ಅವರ  ಸಂಕಲನ  ನೂರಾರು ಗಝಲ್  ಕೃತಿಯಲ್ಲಿ ೧೨೨ ಗಜಲ್ ಗಳು ಇದ್ದು ಅವು ಗಜಲ್ ರಚನಾ ಪದ್ದತಿಯಂತೆ ನಿಯಮಗಳನ್ನು ಅರಿತು ರಚಿಸಿದ್ದವು ಆಗಿವೆ.ಈ ಸಂಕಲನಕ್ಕೆ ಗಣೇಶ ಪ್ರಸಾದ ಪಾಂಡೇಲು ಹಿರಿಯ ಪತ್ರಕರ್ತರು ಮುನ್ನುಡಿ ಬರೆದಿದ್ದಾರೆ. ಸಾಹಿತಿಗಳು,ಗಜಲ್ ಕಾರರು ಆದ ಡಾ.ಸುರೇಶ ನೆಗಳಗುಳಿ ಮಂಗಳೂರು ಅವರು ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ.ಮಹಿಳಾ ಗಜಲ್ ಕಾತಿ೯ಯವರಾದ ಶಮಾ ಜಮಾದಾರ ಯರಗಟ್ಟಿ  ಹಾಗೂ ಜಯಲಕ್ಷ್ಮಿ ಗದಗ  ಅವರು ಕೃತಿ ಪ್ರಕಟನೆಗೆ ಮುಂಚೆ ಗಜಲ್ ಗಳನ್ನು ಓದಿ ತಮ್ಮ ಅನಿಸಿಕೆ ಗಳನ್ನು ಬರೆದಿದ್ದಾರೆ.ಈ ಕೃತಿಯಲ್ಲಿ ಮುರದ್ದಫ್ ಗಜಲ್ ಮತ್ತು ಗೈರ್ ಮುರದ್ದಫ್ ಗಜಲ್ ಗಳಿದ್ದು ಅನೂ ಎಂಬ ತಖಲ್ಲೂಸ ವನ್ನು ಉಪಯೋಗಿಸಿದ್ದಾರೆ.

ಕಿಚ್ಚು ಉರಿಯಲು ಬಿಡೆನು ತಣಿಸುವೆನು ನಕ್ಕುಬಿಡು
ಹುಚ್ಚು ಅನ್ನದಿರು ಬಾಗುತ ಮಣಿಸುವೆನು ನಕ್ಕುಬಿಡು……( ಗ.೨)

ಪ್ರಿಯಕರ ತನ್ನ ಪ್ರಿಯತಮೆಗೆ ಹೇಳುತ್ತಾನೆ ನಿನ್ನನ್ನು ವಿರಹದ ಅಗ್ನಿಯಲಿ ಉರಿಯಲು ಬಿಡುವುದಿಲ್ಲ . ನೀನು ನನಗಾಗಿ ಕಾಯುತ್ತಾ ಬಳಲಿ ಬೆಂಡಾಗದಿರು ನಾನು ಬಂದು ನಿನ್ನನ್ನು ಅಪ್ಪಿ ಮುದ್ದಿಸಿ ಸಂತೋಷ ಪಡಿಸುವೆ , ಹುಚ್ಚನೆಂದು ತಿಳಿಯದಿರು ,ನೀನು ನಕ್ಕು ಬಿಡು, ಬಿಕ್ಕದಿರು ಎಂದು ಒಲವಿನ ಮಾತಿನಲ್ಲಿ ನಲ್ಲ ರಮಿಸುತ್ತಾನೆ . ಗಜಲ್ ಕಾರ್ತಿಯು ಅನೇಕ ಸೊಗಸಾಗ ಉಪಮೆಗಳೊಂದಿಗೆ  ರೂಪಕಗಳೊಂದಿಗೆ ಗಜಲ್ ನ್ನು ಹೆಣೆದಿದ್ದಾರೆ .

ಪಾದದ ಬಯಕೆಯು ಊಮಿ೯ಳೆಯ ಕನಸನು ಕೊಂದಿತೇ ಹೇಳು
ಕಾದಿಹ ಸಮಯದ ದುರದೃಷ್ಟಕೆ ಮನಸದು ಬೆಂದಿತೇ  ಹೇಳು….( ಗ.೧೫)

ರಾಮಾಯಣದ ರೂಪಕವನ್ನು ತೆಗೆದುಕೊಂಡು ಗಜಲ್ ಹೆಣದಿದ್ದಾರೆ ರಾಮನ ಜೊತೆ ಲಕ್ಷ್ಮಣ ಕಾಡಿಗೆ ಹೋಗುತ್ತಾನೆ ಆದರೆ ಊಮಿ೯ಳೆಯ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಗಂಡನ ಪ್ರೀತಿಗಾಗಿ ಹಂಬಲಿಸುತ್ತಾ ಏಕಾಂಗಿಯಾಗಿ ದುಃಖದ ಮಡುವಿನಲ್ಲಿ ಬಿದ್ದಿರುತ್ತಾಳೆ . ಅವಳು ಲಕ್ಷ್ಮಣನು ಬರುತ್ತಾನೆ ಎಂದು ಕನಸು ಕಾಣುತ್ತಿರುತ್ತಾರೆ .ಭರತ ಬಂದು ನಾನು ಕಾಡಿಗೆ ಹೋಗಿ ಮೂರು ಜನರನ್ನು ಮತ್ತೆ ಅಯೋಧ್ಯೆಗೆ ಕರೆದುಕೊಂಡು ಬರುತ್ತೇನೆ ಎಂದು ಊಮಿ೯ಳೆಗೆ ಹೇಳಿ ಹೋಗುತ್ತಾನೆ .ಭರತ ತನ್ನ ಪತಿಯನ್ನು ಕರೆದುಕೊಂಡು ಬರುತ್ತಾನೆ ಕನಸು ಕಾಣುತ್ತಿರುತ್ತಾಳೆ, ಆದರೆ ಭರತನ ಜೊತೆ ಅವರು ಬರುವದಿಲ್ಲ ಭರತ ರಾಮನ ಪಾದರಕ್ಷ ತೆಗೆದು ಕೊಂಡು ಬರುತ್ತಾನೆ. ಲಕ್ಷ್ಮಣ ಬರುವನೆಂದು ಕಾದ ಊಮಿ೯ಳೆಯ ಕನಸುಗಳು ಕನಸಾಗಿಯೇ ಉಳಿಯುತ್ತವೆ.  ಗಜಲ್ ಕಾತಿ೯  ಹೆಣ್ಣಿನ ಮನದ ತಳಮಳವನ್ನು ರಾಮಾಯಣದ  ರೂಪಕದೊಂದಿಗೆ ಸುಂದರವಾಗಿ ಗಜಲ್ ದಲ್ಲಿ ಹೆಣೆದಿದ್ದಾರೆ.

ಹುಣ್ಣಿಮೆಯ ಚಂದ್ರನಲಿ ಕಲೆಯ ಮೂಡಿಸದಿರು ನೀ ಬರದೆ
ಕಣ್ಣೆವೆಯ ಪಿಳುಕಿಸದೆ ಕಾವಲು ಕೂಡಿಸದಿರು ನೀ ಬರದೆ…( ಗ೨೩)

ಏಕಾಂಗಿಯಾದ ಪ್ರಿಯತಮೆ ಪ್ರಿಯಕರನ ಬರವಿಗಾಗಿ ಹಂಬಲಿಸುವ ಗಜಲ್ ಇದಾಗಿದ್ದು , ನೀ ಬಾರದೆ ಹುಣ್ಣಿಮೆಯ ಚಂದ್ರನು ಬಾನಲ್ಲಿ ಮೂಡದಿರಲಿ ಅವನ ಕಲೆಗಳು ಜಗಕ್ಕೆ ಕಾಣದಿರಲಿ , ಚಂದಿರ ಮೂಡಿ ಬೆಳದಿಂಗಳ ಹರಡಿದರೆ ವಿರಹದ ನೋವು ಹೆಚ್ಚಾಗುವುದು , ನೀ ಬರುವೆ ಎಂದು ಭರವಸೆ ಕೊಟ್ಟದ್ದಕ್ಕಾಗಿ ಕಣ್ಣ ಎವೆ ಪಿಳಕಿಸದೆ  ನಿನಗಾಗಿ ಕಾಯುತ್ತಾ ಕುಳಿತಿದ್ದೇನೆ ನಲ್ಲ , ನೀ ಬಾ ಎಂದು ಹಂಬಲಿಸುವ ಗಜಲ್ ಉತ್ತಮವಾದ ರೂಪುಗಳೊಂದಿಗೆ ಕಟ್ಟಿದ್ದಾರೆ .

ಹೋದವಳು ಮರಳಿ ಬರುವಳೆದೇ ಕಾದೆ ಕುಣಿಗಾದರೂ
ಅಗೆದ ಮುಟಿಗೆಮಣ್ಣು ತರುವಳೆಂದೇ ಕಾದೆ ಕುಣಿಗಾದರೂ…( ಗ೨೮)

ಈ ಗಜಲನ್ನು ಪರಕಾಯ ಪ್ರವೇಶಿಸಿ ಬರೆದಿದ್ದಾರೆ ಪ್ರೀತಿ ದಿಕ್ಕರಿಸಿ ತೊರೆದು ಹೋದವಳು ಮರಳಿ ಬರವಳೆಂದು ಪ್ರಿಯಕರ ಕಾಯುವ ಚಿತ್ರಣವನ್ನು ಗಜಲ್ ದಲ್ಲಿ ಕಟ್ಟಿದ್ದಾರೆ .  ಪ್ರಿಯಕರ ತನ್ನ ಕೊನೆಯ ಕಾಲದಲ್ಲಾದರೂ ಅಥವಾ ಮರಣ ಹೊಂದಿದ ಮೇಲೆ ಮಣ್ಣು ಮಾಡಲಾದರು ಅವಳು ಬರಬಹುದು ಎಂದು ಅಂತಿಮ ದರ್ಶನ ಮಾಡಿ ಒಂದು ಬೊಗಸೆ ಮಣ್ಣು ಕುಣಿಗಾದರೂ ಹಾಕಬಹುದೆಂದು ಆಸೆಯಿಂದ ಪ್ರಿಯಕರ ಕಾಯುತ್ತಿರುತ್ತಾನೆ. ಅವಳು ತೊರೆದು ಹೋದರು ಮೋಹ ಬಿಡದೆ  ಅವನು ಅವಳನ್ನು ನೆನೆಯುತ್ತಾ ಕೊನೆಯ ಕಾಲಕ್ಕೆ ಬರುವಳೆಂಬ ನಂಬಿಕೆ ಇಟ್ಟುಕೊಂಡ ಗಜಲ್ ರೂಪಕದೊಂದಿಗೆ ವಿವರಿಸಿದ್ದಾರೆ .

ಇರುವಾಗಲೆ ಒಂದೆರಡು ಒಳ್ಳೆಯ ನುಡಿಯ ಆಡೋಣ ಬನ್ನಿ
ಬರುವಾಗಲೆ ಹೆಜ್ಜೆಯ ಗುರುತಿನ ಕಲ್ಲು ನೆಡೋಣ ಬನ್ನಿ….( ಗ೩೭)

ಇದು ಒಂದು ಸಾಮಾಜಿಕ ಕಳಕಳಿಯ ಗಜಲ್ ಆಗಿದ್ದು ಮನುಜ ಜನ್ಮದಲ್ಲಿ ಹುಟ್ಟಿರುವಾಗ ಬದುಕಿದಷ್ಟು ದಿನ ಒಳ್ಳೆಯ ಕೆಲಸ ಒಳ್ಳೆಯ ನಡೆ ನುಡಿಗಳಿಂದ ಬಾಳೋಣ ಬನ್ನಿ ಎಲ್ಲರೂ ಒಂದಾಗಿ ಇರೋಣ , ನಾವು ಬಾಳಿದ ದಿನಗಳ ನೆನಪಿಗಾಗಿ  ಗುರುತಾಗಿ ಹೆಜ್ಜೆಯ ಗುರುತುಗಳನ್ನು ಕಲ್ಲಿನಲ್ಲಿ ಕೆತ್ತಿ ಇಡೋಣ ಎಂದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಸಾರುವ ಗಜಲ್ ಇದಾಗಿದೆ.

ಬಾಳಲಾಗದ ಪಾತ್ರಗಳನ್ನೇಕೆ ಬರೆದರೋ ಹೆಣ್ಣಿಗೆ
ತಾಳಲಾಗದ ಚಿತ್ರಗಳನ್ನೇಕೆ ಕೊರೆದರೋ ಹೆಣ್ಣಿಗೆ..( ಗ ೪೮)

ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವಿಲ್ಲದೆ ಆಕೆಗೆ ಅನೇಕ ರೀತಿಯ ಬಂಧನಗಳನ್ನು ಮೂಢನಂಬಿಕೆಗಳ ಸಂಕೋಲೆಯಿಂದ ಬಂಧಿಸಿದ್ದಾರೆ . ಒಂದು ಕಾಲದಲ್ಲಿ ಅವಳನ್ನು ದೇವತೆಯೆಂದು ಹೊಗಳಿದರೆ ಇನ್ನೊಂದು ಕಾಲದಲ್ಲಿ ಅವಳು ಮಾಯೆ ಬಂಧನ ,ಭಾರ  ಎಂದು ಹೇಳಿದ್ದಾರೆ . ಸಮಾಜದ ರೀತಿ ನೀತಿಗಳನ್ನು ಬರೆದವರು ಪುರುಷರೇ ಆದಕಾರಣ  ಮನು ಸ್ಮುತಿಯಲ್ಲಿ  ಹೆಣ್ಣಿಗೆ ಸ್ವಾತಂತ್ರ್ಯ ವಿಲ್ಲ, ಹೆಣ್ಣು ಎಲ್ಲಾ ಕಾಲದಲ್ಲಿ ಗಂಡನ ರಕ್ಷಣೆಯಲ್ಲಿರಬೇಕು,  ಆಕೆಗೆ ಯಾವುದೇ ರೀತಿಯ ಸ್ವತಂತ್ರ ಬೇಡವೆಂದು ಮನು ಸ್ಮುತಿಯಲ್ಲಿ ಬರೆದಿದ್ದಾರೆ . ಇದನ್ನೇ ಇಂದಿನ ಪುರುಷರು ಹೆಣ್ಣಿಗೆ ಹೇಳುತ್ತಾ ಅವಳನ್ನು ಬಂದನದಲ್ಲಿ ಇಟ್ಟಿದ್ದಾರೆಂದು ಗಜಲ್ ಕಾರ್ತಿ ಗಜಲ್ ದಲ್ಲಿ ತೋರಿಸಿದ್ದಾರೆ .

ಬಂಜೆ ಎಂದರೆಂದು ಕಂಬನಿಯ ಸುರಿಸಿ ನೋಯದಿರು
ಸಂಜೆ ಬದುಕಿಗೊಂದು ನಿರಾಳದ ಸಮಯ ಬೇಯದಿರು….( ಗ ೫೬)

ಜಗದಲ್ಲಿ ಹೆಣ್ಣಾಗಿ ಹುಟ್ಟಿದ ಮೇಲೆ ಮದುವೆ ಆಗಬೇಕು ಮದುವೆ ಆದ ಮೇಲೆ ಅವಳು ಮಕ್ಕಳನ್ನು ಹೆರಬೇಕು . ಅವಳು ಮಕ್ಕಳನ್ನು ಹಡೆಯದಿದ್ದರೆ ಅಂತವರಿಗೆ ಸಮಾಜದಲ್ಲಿ ಬಂಜೆ ಎಂದು ಕರೆದು ಅವಳಿಗೆ ಅನೇಕ ರೀತಿಯ ಮಾನಸಿಕ ಕಿರುಕುಳವನ್ನು ಕೊಡುತ್ತಾ ನೀನು ಬಂಜೆ ಎಂದು ಹಂಗಿಸುತ್ತಾರೆ . ಬಂಜೆಯ ಬಗ್ಗೆ ನಮ್ಮ ಜಾನಪದ ಸಾಹಿತ್ಯದಲ್ಲಿ ಗರತಿಯ ಹಾಡುಗಳಲ್ಲಿ ಅನೇಕ ತ್ರಿಪದಿಗಳಿವೆ. ಅವಳನ್ನು ಬಹಳ ಹೀನವಾಗಿ ನೋಡುವುದನ್ನು ಬರೆದಿದ್ದಾರೆ . ಇಲ್ಲಿ ಅಂತ ಬಂಜೆಗೆ ಧೈರ್ಯ ತುಂಬುವ ಸಮಾಧಾನದ ಮಾತುಗಳನ್ನು ಗಜಲ್ದಲ್ಲಿ ಹೇಳಿದ್ದಾರೆ . ಬಂಜೆ ಎಂದು ಜನ ಹೀಯಾಳಿಸಿದರು ನೀನು ನೋಯಬೇಡ ಕಂಬನಿ ಸುರಿಸಬೇಡ ಎಂದು ಸಮಾಧಾನ ಮಾಡಿದ್ದಾರೆ .  ಅನೇಕರು ಉಪಮೆಗಳನ್ನು ಕೊಡುತ್ತಾ ಬಂಜೆಗೆ ಧೈರ್ಯವನ್ನು ತುಂಬಿದ್ದಾರೆ .

ಹೆಣ್ಣು ಬೆನ್ನಿನ ಬ್ಯಾತಾಳ ಹುಣ್ಣೆಂದವರ ಮಿದ್ದಿ ಮೀರಿಸಿದಳು  ಅವ್ವ
* ದಿಣ್ಣೆಗೇ ಬಲದ ನಿಚ್ಚಣಿಕೆ ಆನಿಸಿಟ್ಟು ಜಿದ್ದಿಂದ ಏರಿಸಿದಳು ಅವ್ವ*   ( ಗ೭೦)

ಕೆಲವು ವರ್ಷಗಳ ಹಿಂದೆ ಸಮಾಜದಲ್ಲಿ ಹೆಣ್ಣು ಹುಟ್ಟಿದರೆ ಮನೆಯವರು ಹೊರಗಿನವರು ಅದು  ಹುಣ್ಣೆಂದು , ಹೆಣ್ಣು  ಮನೆಗೆ ಬೇತಾಳವೆಂದು ,ಸಂಸಾರದಲ್ಲಿ ಅವಳು ಭಾರವೆಂದು ತಿಳಿದಿದ್ದರು. ಅಷ್ಟು ಅಲ್ಲದೆ ಗರ್ಭದಲ್ಲಿಯೇ ಹೆಣ್ಣು ಶಿಶು ಇದ್ದದ್ದು ಗೊತ್ತಾದರೆ ಗರ್ಭದಲ್ಲಿಯೇ ಹತ್ಯೆ ಮಾಡುತ್ತಿದ್ದರು .ಅಂತಹ ಕಾಲದಲ್ಲಿಯೂ ಅವ್ವ ಎಲ್ಲಾ ನಿಂದೆ ಅಪವಾದ ಅವಮಾನಗಳನ್ನು ಸಹಿಸಿ ಸಮಾಜದ ಏಳಿಗೆಗಾಗಿ ಮನೆತನದ ಗೌರವಕ್ಕಾಗಿ ಆ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಎತ್ತರಕ್ಕೆ ಮಕ್ಕಳನ್ನು ಬೆಳೆಸಿದ್ದಾಳೆಂದು ಗಜಲ್ ಕಾರ್ತಿ ಅವ್ವ ಎಂಬ ರದಿಫ್ ಇಟ್ಟು ಹೆಣ್ಣಿನ ದುಡಿಮೆ ಸಾಹಸದ ಬಗ್ಗೆ ರೂಪಕಗಳೊಂದಿಗೆ ಹೆಣ್ಣು (ಅವ್ವ )ಸಮಾಜದ ಹಾಗೂ ಮನೆಯ ಕಣ್ಣು ಎಂದು ತೋರಿಸಿದ್ದಾರೆ .

ಗೋರಿಯಾಗದೆ  ಹಗುರ ಗಾಳಿಯಲಿ ಲೀನವಾದ ಅಪ್ಪ
ದಾರಿತೋರಿಸಿ ಹಸಿದೊಡಲ ಹಾಲ್ಬಾನವಾದ  ಅಪ್ಪ   ( ಗ೯೨ )

ಈ ಗಜಲ್ ದಲ್ಲಿ ತಂದೆಯ ಪ್ರೀತಿ ಮತ್ತು ಮಹತ್ವವನ್ನು ಎತ್ತಿ ತೋರಿಸಿದ್ದಾರೆ . ಅಪ್ಪ ಸತ್ತು ಮಣ್ಣಲ್ಲಿ ಮಣ್ಣಾಗಲಿಲ್ಲ ಅವನ ಆತ್ಮ ಗಾಳಿಯಲ್ಲಿ ಲೀನವಾಗಿ ನಮಗೆಲ್ಲ ಉಸಿರಾಗಿದೆ ಎಂದು ಹೇಳುತ್ತಾ ಅಪ್ಪ ತೋರಿಸಿದ ಹಾದಿಯಲ್ಲಿ ನಮ್ಮ ಬದುಕು ಹಸನಾಗಿದೆ ಎಂದು ಹೇಳಿದ್ದಾರೆ ಅಪ್ಪನ ಹೋರಾಟದ ಹಾಡುಗಳು ನಮಗೆ ರಾಗವಾಗಿವೆ , ಸಂಸಾರದಲ್ಲಿನ ಕಾಯಕವೇ ಅಪ್ಪನಿಗೆ ಮಾನವಾಯಿತು ಅಪ್ಪನಿಂದಲೇ ನಮಗೆಲ್ಲ ಕೀರ್ತಿ ಬೆಳಕು ಎಂದು ಅಪ್ಪನ ಮಹಿಮೆಯನ್ನು ಅವನ ಗರಿಮೆಯನ್ನು ಗಜಲ್ ದಲ್ಲಿ ತೋರಿಸಿದ್ದಾರೆ.

ಅತಿಯಾಗಿ ಏನನು ಎಂದೂ ಹಚ್ಚಿಕೊಳದಿರು ಎಂದಿತು ವಯಸು
ಮಿತಿಮೀರಿ ಎಳೆದು ಯಾವುದಕು ಕಚ್ಚಿಕೊಳದಿರು ಎಂದಿತು ವಯಸು   (  ಗ ೧೦೭)

ಇದು ಒಂದು ಅಧ್ಯಾತ್ಮಿಕ ಗಜಲಾಗಿದ್ದು ಬದುಕಿನಲ್ಲಿ ಯಾವುದಕ್ಕೂ ಹೆಚ್ಚಿಗೆ ಆಸೆ ಪಡದೆ ಎಲೆ ಮೇಲಿನ ನೀರ ಹನಿಯಂತೆ ಬಾಳಬೇಕೆಂದು ಹೇಳುವ ಆಧ್ಯಾತ್ಮಿಕ ಗಜಲ್ ಇದು ,ಹಾಗೂ ಹಿರಿಯ ನಾಗರೀಕರಿಗೆ ಸಂಸಾರದ ,ಹಣದ ,ಮಕ್ಕಳು, ಮೊಮ್ಮಕ್ಕಳು ,ಎನ್ನುವ ಮೋಹವನ್ನು ಬಿಡಬೇಕು ಎಂದು ಹೇಳುವ ಗಜಲ್ ಆಗಿದೆ .  ಲೌಕಿಕ ಮತ್ತು ಅಲೌಕಿಕ ಎರಡಕ್ಕೂ ಸಂಬಂಧಿಸುವ ತತ್ವವನ್ನು ತುಲನಾತ್ಮಕವಾಗಿ ಗಜಲ್ ದಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ .

ಅನುಸೂಯ ಸಿದ್ದರಾಮಯ್ಯ ಅವರ ನೂರಾರು ಗಝಲ್   ಸಂಕಲನದಲ್ಲಿ ಇರುವ ಗಜಲ್ ಗಳು ಓದಿಸಿಕೊಂಡು ಹೋಗುತ್ತವೆ ಮತ್ತು ಓದುಗರಿಗೆ ಚಿಂತನೆಗೆ ಹಚ್ಚುತ್ತವೆ.  ಇವರ ಪ್ರಾದೇಶಿಕ ಭಾಷೆಯ ಗಜಲ್ ಸಾಹಿತ್ಯ ರಚನೆಯಲ್ಲಿ ಇದು  ಒಂದು ಪ್ರಯೋಗವೆಂದು ಹೇಳಬಹುದು .ಮೃದು ಮಧುರ ಕೋಮಲ  ನಯವಾದ ಭಾಷೆ ಮತ್ತು ಶಬ್ದಗಳು ಗಜಲ್ ರಚನೆಗೆ ಬೇಕು ನಿಜ . ಅನುಸೂಯಾ ಸಿದ್ದರಾಮ ಅವರ ಈ ಪ್ರಾದೇಶಿಕ ಭಾಷೆಯ ಗಜಲ್ ಸಂಕಲನ ಒಂದು ಪ್ರಾಯೋಗಿಕವಾಗಿದೆ ಎಂದು ಭಾವಿಸಬಹುದು . ಅನೇಕ ನಗರವಾಸಿಗಳಿಗೆ ಈ ಭಾಷೆ ಅರ್ಥವಾಗುವುದಿಲ್ಲವೆಂದು ನನಗೆ ಅನಿಸಿತು . ಇವರು ತಮ್ಮ ಮುಂದಿನ ಗಜಲ್ ಸಂಕಲನವನ್ನು ಶಿಷ್ಟ ಭಾಷೆಯಲ್ಲಿ ತರಲೆಂದು ಹಂಬಲಿಸುತ್ತ ನನ್ನ ಬರಹಕ್ಕೆವಿರಾಮ ಕೊಡುವೆನು .


Leave a Reply

Back To Top