ಪುಸ್ತಕಸಂಗಾತಿ
ಶೋಭಾ ನಾಗಭೂಷಣ
ʼಅನುಭವಾಮೃತವಿದುವೇ
ವಚನ ವೈವಿಧ್ಯ
ಸಂತೋಷ್ ಎಂ ಬಿ


ಶೋಭಾ ನಾಗಭೂಷಣ: ಗುರುಭಕ್ತಿ, ಗುರುಕರುಣೆ, ಗುರುಮಮತೆಗಳು ವೃಷ್ಟಿಯಾಗಿ ಸುರಿದಾಗ ಶಿಷ್ಯರ ಪ್ರತಿಭೆಯನ್ನು ಇಮ್ಮಡಿಯಾಗಿಸುತ್ತದೆ. ಗುರು ತಾನು ತನ್ನೊಳಗಿರುವ ಶಕ್ತಿಯನ್ನು ಶಿಷ್ಯನಾದವನಿಗೆ ಧಾರೆ ಎರೆದಾಗ, ಶಿಷ್ಯನ ಪ್ರತಿಭೆ ಸಂವೃದ್ಧಿಯಾಗುತ್ತದೆ. ಗುರು ತಾನು ಮನಸ್ಸು ಮಾಡಿದರೆ ತನ್ನ ಶಿಷ್ಯನನ್ನು ಯಾವ ಮಟ್ಟಕ್ಕಾದರೂ ಏರಿಸಬಹುದು. ‘ *ಹಿಂದೆ ಗುರು ಮುಂದೆ ಗುರಿ’ ಇದ್ದವ ತಾನು ತನ್ನ ಕನಸಿನ ಹಾದಿಯಲ್ಲಿ ಸುಗಮವಾಗಿ ಸಾಗಬಹುದು ‘ಗುರು’ ಎನ್ನುವವರು ಪ್ರತಿಯೊಬ್ಬರ ಬಾಳಿನಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಹಾಗೆಯೇ ಗುರುವು ಸೃಷ್ಟಿಕರ್ತನಂತೆ ಕರ್ಮಕಾರಕನಾಗಿ ಜಗತ್ತಿನ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಾರೆ. ನಿಸ್ವಾರ್ಥಿಯಾದ ಗುರುವು ತನ್ನ ವೈಯಕ್ತಿಕ ಒಳಿತಿನಿಂದ ಆಚೆಗೆ ಕಾರ್ಯತತ್ಪರರಾಗುತ್ತಾರೆ. ಪ್ರತಿಯೊಬ್ಬ ಗುರುವೂ ತನ್ನ ಶಿಷ್ಯವೃಂದವು ಗುರುಮೀರಿಸಿದಂತಾಗಬೇಕೆಂದು ಬಯಸುತ್ತಾರೆ. ಆ ಸಂದರ್ಭವು ಗುರುವಿಗೆ ಸಾರ್ಥಕ ಕ್ಷಣವಾಗಿರುತ್ತದೆ.
ಗುರುಗಳಾದ ಶ್ರೀ ಎಂ ಬಿ ಸಂತೋಷ್ ಸರ್ ಅವರು ಇಂತಹ ಸತ್ಕಾರ್ಯವನ್ನು ಮಾಡುತ್ತಾ, ತಾವೊಬ್ಬ ಸದ್ಗುರುವಾಗಿ ತಮ್ಮ ಶಿಷ್ಯವೃಂದವನ್ನು ಬೆಳೆಸುತ್ತಿದ್ದಾರೆ. ತಾವು ಸಾಧಕರಾಗಿ ಶಿಖರದಲ್ಲಿ ನಿಂತಿರುವುದಲ್ಲದೇ, ತಮ್ಮೊಂದಿಗೆ ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ. ಅದರಲ್ಲಿಯೇ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತಿದ್ದಾರೆ. ಸನ್ನಡತೆ, ನಲ್ಮಾತು, ನಿಸ್ವಾರ್ಥತೆ, ಪ್ರಾಮಾಣಿಕತೆ, ಇಂತಹ ಹಲವಾರು ಸದ್ಗುಣಗಳ ಸಾಕಾರ ಮೂರ್ತಿಯಂತಿರುವ ಇವರು ತಾವು ಸಾಹಿತ್ಯ ಮತ್ತು ಸಂಸ್ಖೃತಿಯ ಸೇವೆಯನ್ನು ಮಾಡುವುದರ ಜೊತಗೆ, ನನ್ನಂತಹ ಅದೆಷ್ಟೋ ಉದಯೋನ್ಮುಖ ಪ್ರತಿಭೆಗಳಿಗೂ ದಾರಿದೀಪವಾಗಿ ತಮಗೆ ಸರಿಸಮಾನವಾಗಿ ಮುಂದೆ ಕರೆದೊಯ್ಯುತ್ತಿದ್ದಾರೆ.
ಇವರು ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ, ಕಾವ್ಯ, ಕತೆ, ಆಧುನಿಕ ವಚನ, ಕಾದಂಬರಿ, ಮುಕ್ತಕ, ಹನಿಗವನ, ಚುಟುಕುಗಳು, ಹಾಯ್ಕುಗಳು ಹೀಗೆ ಬಹುಪ್ರಕಾರದ ಸಾಹಿತಿಯಾಗಿ ತಮ್ಮ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ೮೫೦ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು, ೪೫೦ಕ್ಕೂ ಹೆಚ್ಚು ಸಾಧಕರನ್ನೂ ಗುರುತಿಸಿ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಸಾಹಿತ್ಯ ಸೇವೆ ಮಾಡಿದ್ದಾರೆ. ತಾಯಿ ಶಾರದಾಂಬೆಯ ಸೇವೆಗಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಶ್ರೀ ಎಂ ಬಿ ಸಂತೋಷ್ ಅವರು ಹಲವು ಸಂಘ ಸಂಸ್ಥೆಗಳು ಸೇರಿದಂತೆ ಮಕ್ಕಳ ಮಾಣಿಕ್ಯ, ಬಸವ ಪುರಸ್ಕಾರ, ಹೊನ್ಕಲ್ ಸಾಹಿತ್ಯ ಪ್ರಶಸ್ತಿ, ಮೈಸೂರು ಜಿಲ್ಲಾಡಳಿತದಿಂದ ಕೊಡಮಾಡುವ ‘ಕನ್ನಡ ರಾಜ್ಯೋತ್ಸವ’ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಮುಖ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಕರ್ನಾಟಕ ಸರ್ಕಾರದಿಂದ ನೀಡಲಾಗುವ ಉನ್ನತ ಪ್ರಶಸ್ತಿಗಳು ದೊರೆಯಲಿ ಎನ್ನುವುದು ಎಲ್ಲರ ಆಶಯವಾಗಿದೆ.
ಶ್ರೀಯುತರ ೩೦ನೇ ಕೃತಿಯಾದ ‘ ವಚನ ವೈವಿಧ್ಯ’ – ಆಧುನಿಕ ವಚನ ಸಂಕಲನವು ಲೋಕಾರ್ಪಣೆಗೊಳ್ಳುತ್ತಿದ್ದು, ಇವರಿಗಿಂತ ಎಲ್ಲದರಲ್ಲಿಯೂ ಅತ್ಯಂತ ಕಿರಿಯಳಾದ ನನಗೆ ಈ ಕೃತಿಗೆ ಮುನ್ನುಡಿ ಬರೆಯಲು ಅವಕಾಶ ನೀಡಿರುವುದನ್ನು ನನ್ನ ಪೂರ್ವಜನ್ಮದ ಪುಣ್ಯ ಎಂದೇ ಹೇಳಬಹುದು. ಇದು ಇವರ ಉದಾರ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ನಾನೆಂಬ ಅಹಂ ಭಾವವನ್ನು ಬಿಟ್ಟು ಕಿರಿಯರಿಗೆ ಅವಕಾಶವನ್ನು ನೀಡುವ ಇವರ ವ್ಯಕ್ತಿತ್ವ ಶ್ಲಾಘನೀಯವಾದದ್ದು ಎಂದೇ ಹೇಳಬಹುದು ಈ ಸದವಕಾಶವನ್ನು ನನಗೆ ದಯಪಾಲಿಸಿದ್ದಕ್ಕಾಗಿ ಗುರುಗಳಿಗೆ ಶಿರಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತೇನೆ.
ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವೇ ವಚನ ಸಾಹಿತ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಕಾವ್ಯ ಪ್ರಕಾರ. ವಚನ ಎಂದರೆ ‘ಆಣೆ’, ‘ಪ್ರಮಾಣ’ ಕೊಟ್ಟ ಮಾತು’ ಎಂಬ ಅರ್ಥದಂತೆಯೇ, ವಚನ ಎಂದರೆ, ‘ಮಾತು’ ಎನ್ನುವುದು ಸಾಮಾನ್ಯ ಅರ್ಥವಾಗಿದೆ.
ಹನ್ನೊಂದನೇ ಶತಮಾನದಲ್ಲಿ ಉದಯವಾದ ವಚನ ಸಾಹಿತ್ಯವು ಕನ್ನಡ ಪ್ರಾಚೀನ ಸಾಹಿತ್ಯದಲ್ಲಿ ವಿಶ್ವ ಸಾಹಿತ್ಯದ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ದೇವರ ದಾಸಿಮಯ್ಯ, ಮಾದಾರ ಚೆನ್ನಯ್ಯನವರಿಂದ ಆದಿಯಾಗಿ ಗುರು ಬಸವಣ್ಣನವರನ್ನು ಒಡಗೂಡಿದಂತೆ ಸಮಾಜದ ಎಲ್ಲಾ ವರ್ಗದ ಜನರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು ತಮ್ಮ ಅನುಭವವನ್ನು ಹೇಳಿಕೊಂಡಿದ್ದರಿಂದ ವಚನ ಸಾಹಿತ್ಯ ಒಂದು ಚಳುವಳಿಯೂ ಆಯಿತು. ಅದರ ಸಾಮಾಜಿಕ ವ್ಯಾಪ್ತಿ ಅಪಾರವಾದದ್ದು. ವಚನ ಸಾಹಿತ್ಯವು ಸಾಮಾನ್ಯ ಜನರ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಸಮಾಜದ ಓರೆಕೋರೆಗಳನ್ನು ತಿದ್ದುವ ಶ್ರೇಷ್ಠ ಸಾಹಿತ್ಯ ಪ್ರಕಾರವಾಗಿದೆ. ಕಾಯಕತತ್ವವನ್ನು ಜಗತ್ತಿಗೆ ಸಾರಿದ ಏಕೈಕ ಧರ್ಮ ವೀರಶೈವ ಧರ್ಮವಾಗಿದೆ. ಸರ್ವರಿಗೂ ಸಮಾನತೆ ಹಾಗೂ ಸಮಪಾಲಿನ ಸಿದ್ಧಾಂತವನ್ನು ಮಂಡಿಸಿದ ಚಳುವಳಿಯೇ ವಚನಸಾಹಿತ್ಯ ಚಳುವಳಿ.
ವಚನ ಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಜನ ಶರಣರು ಶ್ರಮಿಸಿದ್ದಾರೆ. ತಮ್ಮದೇ ಆದ ಅಂಕಿತನಾಮದೊಂದಿಗೆ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ, ಸೂಳೆ ಸಂಕವ್ವ ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ಆಯ್ದಕ್ಕಿ ಲಕ್ಕಮ್ಮ, ಅಜಗಣ್ಣ ತಂದೆ, ಚೆನ್ನ ಬಸವಣ್ಣ, ಮೋಳಿಗೆ ಮಾರಯ್ಯ ಹೀಗೆ ವಚನಗಾರರ ಸಾಲು ನೂರಾರು ಹೆಸರುಗಳೊಂದಿಗೆ ಸೇರಿಕೊಂಡಿದೆ. ಇವರು ರಚಿಸಿರುವ ವಚನಗಳು ಮನುಷನ್ಯ ಶೀಲಸಂವರ್ಧನೆ, ವ್ಯಕ್ತಿತ್ವ ವಿಕಾಸಕ್ಕೆ ಶರಣರ ಅನುಭಾವದ ನುಡಿಗಳು ಸಹಕಾರಿಯಾಗಿದೆ. ಜೀವನದಲ್ಲಿ ಆದರ್ಶನೀಯ ಬದುಕನ್ನು ನಾವು ರೂಪಿಸಿಕೊಳ್ಳಲು ವಚನ ಸಾಹಿತ್ಯ ಮಾರ್ಗಸೂಚಿಯಾಗುತ್ತದೆ. ಇವರಷ್ಟೇ ಅಲ್ಲದೇ ಸರ್ವಜ್ಞ ಕವಿಯ ವಚನಗಳು ಸಮಾಜದ ಸುಧಾರಣೆಗಾಗಿಯೇ ರಚಿತವಾದಂತೆ ಅಗ್ರ ಸ್ಥಾನದಲ್ಲಿ ನಿಲ್ಲುತ್ತವೆ. ವಚನಸಾಹಿತ್ಯದಲ್ಲಿ ಮನುಷ್ಯ ತನ್ನ ಜೀವನಕ್ಕೆ ಗೌರವವನ್ನು ತಂದುಕೊಳ್ಳಲು ರೂಪುರೇಷೆಗಳು. ಕಾಯಕದ ಮಹತ್ವ, ಬದುಕಿನ ದೃಷ್ಟಿಕೋನ, ವ್ಯಕ್ತಿತ್ವ ವಿಕಾಸದ ಹಾದಿ, ಭಕ್ತಿಯ ಮಹತ್ವ, ಸುಸಂಸ್ಕೃತ ಜೀವನ, ಜ್ಞಾನ, ದಯೆ, ಸ್ವಸ್ಥ ಸಮಾಜಕ್ಕೆ ಮಾರ್ಗದರ್ಶಿಯಾಗಿ ವಚನ ಸಾಹಿತ್ಯ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಶ್ರೇಷ್ಠ ಸಾಲಿನಲ್ಲಿ ನಿಲ್ಲುತ್ತದೆ.
ಆಧುನಿಕ ವಚನ ಸಾಹಿತ್ಯವು ೧೧/೧೨ ನೇ ಶತಮಾನದ ವಚನ ಸಾಹಿತ್ಯದ ಮುಂದುವರಿಕೆಯ ಭಾಗ ಎಂದು ನಾವು ಹೇಳುವುದಕ್ಕೆ ಆಗದೇ ಇದ್ದರೂ, ಅದೇ ಆಶಯವನ್ನು ಇರಿಸಿಕೊಂಡು ರಚನೆಯಾಗಿದ್ದಾಗಿವೆ. ಯಾವುದಾದರೂ ಸಮಾಜದ ಸತ್ಯವನ್ನು ಹೇಳುವ ಉದ್ದೇಶವನ್ನು ಇಟ್ಟುಕೊಂಡು ರಚನೆಯಾಗುತ್ತಿರುವ ಸಾಹಿತ್ಯ ಪ್ರಕಾರವಾಗಿದೆ.
ಕೇವಲ ಒಂದು ಅಂಕಿತವನ್ನಿರಿಸಿಕೊಂಡು ಬರೆದದ್ದೆಲ್ಲಾ ವಚನವಾಗುವುದಿಲ್ಲ. ಅವು ಗದ್ಯವಾಗುತ್ತವೆ. ವಚನವು ಸಮಾಜದ ಓರೆಕೋರೆಗಳನ್ನು ಎತ್ತಿ ತೋರಿಸಿ ಮನಸ್ಸಿಗೆ ಕೈಗನ್ನಡಿಯಾಗಿರಬೇಕು.
ಆಧುನಿಕ ವಚನಕಾರರಾಗಿ ಅಗ್ರಸ್ಥಾನದಲ್ಲಿ ನಿಲ್ಲುವ ಶ್ರೀ ಎಸ್ ವಿ ರಂಗಣ್ಣನವರು ಹೇಳಿರುವಂತೆ ‘ ವಚನಗಳು ಸುಂದರ ಸರಳ ಶಬ್ದಗಳ ಗುಚ್ಚವಾಗಿರಬೇಕು. ವಿಚಾರಪೂರಿತವಾಗಿರಬೇಕು. ಬಾಳಿನ ವೈರುಧ್ಯಗಳ, ವೈವಿಧ್ಯಗಳ ಪರಿಚಯವನ್ನು ಮಾಡುವಂತಿರಬೇಕು. ಆಧುನಿಕ ವಚನ ಸಾಹಿತ್ಯದಲ್ಲಿ ಎಸ್ ವಿ ರಂಗಣ್ಣನವರ ಹೆಸರು ದೊಡ್ಡದು.
ಇವರಂತೆಯೇ ಡಾ.ಜ.ಚ.ನಿ.(ಡಾ ಜಗದ್ಗುರು ಶ್ರೀ ಚನ್ನಬಸವರಾಜ ದೇಶೀಕೇಂದ್ರ ಮಹಾಸ್ವಾಮಿಗಳು) ಇವರ ವಚನಗಳಲ್ಲಿ ಮೋಹ , ಮಾಯೆಯಿಂದ ಬಿಡುಗಡೆ ಹೊಂದಬೇಕು ಎನ್ನುವ ಆಶಯಗಳನ್ನು ತಮ್ಮ ವಚನಗಳಲ್ಲಿ ಹೆಚ್ಚು ವ್ಯಕ್ತಪಡಿಸುತ್ತಾರೆ.
ಹಾಗೆಯೇ ಎಸ್ ವಿ ಪರಮೇಶ್ವರ ಭಟ್ಟ, ಡಾ|| ಸಿದ್ದಯ್ಯ ಪುರಾಣಿಕ, ರಂ.ರಾ.ದಿವಾಕರ, ಪ್ರೋ|| ಆರ್.ಸಿ. ಹಿರೇಮಠ, ಡಾ|| ಮೂಜಗಂ, ಶ್ರೀ ಪಂಡಿತಾರಾಧ್ಯ ಶಿವಾಚರ‍್ಯ ಸ್ವಾಮಿಗಳು, ಡಾ.ಸಿಂಪಿಲಿಂಗಣ್ಣ, ಡಾ|| ಗುಂಡ್ಮಿ ಚಂದ್ರಶೇಖರ ಐತಾಳ. ಡಾ|| ಸಿ.ಪಿ.ಕೃಷ್ಣಕುಮಾರ್, ಡಾ|| ಎಂ.ಎನ್ ವಾಲಿ, ಡಾ|| ಕೆ.ಸಿ.ಶಿವಪ್ಪ, ಡಾ|| ಮಹಾದೇವ ಬಣಕಾರ, ಡಾ|| ವಿಜಯಶ್ರೀ ಸಬರದ, ಡಾ|| ಕಮಲಾಹಂಪನಾ ಇನ್ನೂ ಮುಂತಾದವರು ಆಧುನಿಕ ವಚನ ಸಾಹಿತ್ಯ ರಚನೆಯಲ್ಲಿ ಮೇಲ್ಪಂಕ್ತಿಯಲ್ಲಿದ್ದು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂತಹ ಶ್ರೇಷ್ಠ ವಚನಕಾರರ ಸಾಲಿಗೆ ಸೇರಬಹುದಾದವರು, ಆಧುನಿಕ ವಚನಲೋಕದಲ್ಲಿ ‘ಜಗದೀಶ’ ಎನ್ನುವ ಅಂಕಿತನಾಮದೊಂದಿಗೆ ಇದುವರೆಗೆ ಮೂರು ಸಾವಿರ ವಚನಗಳು ಹಾಗೂ ಆರು ಆಧುನಿಕ ವಚನ ಕೃತಿಗಳನ್ನು ರಚಿಸಿರುವ ಶ್ರೀ ಎಂ ಬಿ ಸಂತೋಷ್ ಅವರು. ಈ ‘ವಚನ ವೈವಿಧ್ಯ’ ಕೃತಿಯಲ್ಲಿರುವ ಪ್ರತಿಯೊಂದು ವಚನಗಳು ಸಂತೋಷ್ ಅವರ ಜೀವನಾನುಭವದಿಂದ ಹಣ್ಣಾಗಿವೆ.
ಜೀವನದ ನಶ್ವರತೆಯನ್ನು ತಿಳಿಸುವಂತಹ ವಚನದಲ್ಲಿ ಮನುಷ್ಯ ತಾನು ಜೀವನದಲ್ಲಿ ಏನೇ ಸಾಧಿಸಿದರೂ, ಏನೇ ಮೆರೆದರೂ ಕೊನೆಗೆ ಸೇರುವುದು ಮಣ್ಣನ್ನೇ ಎನ್ನುವ ವಚನವೊಂದು ಓದುಗನನ್ನು ಸೆಳೆಯುತ್ತದೆ.
ಚಪ್ಪಲಿ ಅದೆಷ್ಟೇ ದುಬಾರಿಯಾದರೂ
ಹಾಕಿಕೊಳ್ಳೋದು ಮಾತ್ರ ಕಾಲಿಗೆ
ಮನುಜ ತಾನೆಷ್ಟೇ ಶ್ರೀಮಂತರಾದರೂ
ಕೊನೆಗೆ ಹೋಗೋದು ಮಣ್ಣಿಗೆ – ಜಗದೀಶ
ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಜನರ ಬೆನ್ನ ಹಿಂದೆ ಹಲವಾರು ಜನ ಅಡ್ಡಗಾಲು ಹಾಕಿ ತೊಂದರೆ ಕೊಡಲು ಕಾಯುತ್ತಿರುತ್ತಾರೆ. ಇಂತಹವರನ್ನು ಲೆಕ್ಕಕ್ಕಿರಿಸಿಕೊಳ್ಳದೆ ನಮ್ಮ ಗುರಿಯನ್ನು ಸಾಧಿಸುವ ಕಡೆಗೆ ಮುನ್ನಡೆಯಬೇಕು ಎನ್ನುವುದನ್ನು ತಿಳಿಸುವ ವಚನ
ನಮ್ಮ ಹೆಸರಿಗೆ ಮಸಿ ಬಳಿಯಲು
ಸಾಕಷ್ಟು ಜನ ನಮ್ಮ ಸುತ್ತಲೂ ಇರುತ್ತಾರೆ
ಅವರ ಮುಂದೆ ಬೀಳಬೇಕೋ ಇಲ್ಲ
ಬೆಳದು ತೋರಿಸಬೇಕೋ ಎಂಬ ನಿರ್ಧಾರ
ಕೇವಲ ನಮ್ಮದಾಗಿರುತ್ತದೆ – ಜಗದೀಶ
ಇತ್ತೀಚಿನ ದಿನಗಳಲ್ಲಿ ಜನ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವುದನ್ನು ಬಹಳ ಪಾಲಿಸುತ್ತಾರೆ. ತಾವು ಜನರಿಗೆ ನೋಡಲಿಕ್ಕೆ ಹೇಗೆ ಕಾಣಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಆದರೆ ನಾವು ಜನರ ಸ್ವೀಕಾರವನ್ನು ನೋಡುವುದಕ್ಕಿಂತಲೂ ಅವರ ತಿರಸ್ಕಾರವನ್ನು ಗಮನದಲ್ಲಿ ಇರಿಸಿಕೊಂಡು ಬದುಕಬೇಕು ಎನ್ನುವದನ್ನು ತಿಳಿಸುವ ವಚನ ಮುಂದಿನದ್ದಾಗಿದೆ
ನಾಲ್ಕು ಜನ ನಮ್ಮನ್ನು ನೋಡಲಿ
ಎಂದು ಬದುಕಬಾರದು
ಅದೇ ನಾಲ್ಕು ಜನ ನಮ್ಮನ್ನು
ತಿರಸ್ಕರಿಸಿ ಹೋದ ಘಳಿಗೆಯನ್ನು ಸಹ ಮರೆಯಬಾರದು-ಜಗದೀಶ
ಮಂಕುತಿಮ್ಮನ ಕಗ್ಗದಲ್ಲಿ ಡಿ ವಿ ಜಿ ಅವರ ಮಾತನ್ನು ನೆನಪಿಸುವ ಒಂದು ವಚನ ಮುಂದಿನದ್ದಾಗಿದೆ. ಬದುಕಿನ ಸತ್ಯತೆಯನ್ನು ತಿಳಿಸುವಂತಹ ವಚನ ಇದಾಗಿದ್ದು ಬದುಕು ಮದುವೆಗೋ ಮಸಣಕೋ ತಿಳಿಯದೆ ಬೀಗುವ ಜನರಿಗೆ ಎಚ್ಚರಿಕೆಯ ಗಂಟೆಯನ್ನು ಹೊಡೆಯುವ ವಚನ. ನಾವು ಬದುಕಿರುವಷ್ಟು ದಿನ ನಾನು ನನ್ನದು ಎಂದು ಹೊಡೆದಾಡಿಕೊಂಡು ಸಾಯುವ ಮನುಷ್ಯ ಒಮ್ಮೆ ಬೆಂಕಿಯಲ್ಲಿ ಲೀನವಾಗಿ ಭಸ್ಮವಾಗುವ ಸ್ಮಶಾನ ಸತ್ಯವನ್ನು ಒಳಗೊಂಡ ವಚನ ಇಂತಿದೆ.
ಬದುಕಿರುವಷ್ಟು ದಿನ ನಾನು ನನ್ನದು
ಎಂದು ಮರೆಯುತ್ತಿದ್ದ ಮನುಜ
ಸತ್ತ ಬಳಿಕ ಏನನ್ನೂ ಮಾತನಾಡದೆ
ತಲೆಯೆತ್ತಿ ಯಾರನ್ನು ನೋಡದೆ
ಉರಿದು ಭಸ್ಮವಾಗುತ್ತಾನೆ, ಇಷ್ಟೇ
ನಮ್ಮೀ ಜೀವನ ಅಲ್ಲವೇ? –ಜಗದೀಶ
ಬಸವಣ್ಣನವರ ಅತ್ಯಂತ ಜನಪ್ರಿಯ ವಚನ ನುಡಿದರೆ ಮುತ್ತಿನ ಹಾರದಂತಿರಬೇಕು ಈ ವಚನವು ಮಾತಿನ ಮಹತ್ವವನ್ನು ತಿಳಿಸುತ್ತದೆ. ಮಾತಿನ ಮಹತ್ವವನ್ನು ವೇದ್ಯವಾಗಿಸುವ ಅನೇಕ ಗಾದೆಗಳು, ನಾಣ್ಣುಡಿಗಳಿವೆ ಅಂತಹವುಗಳ ಸಾಲಿಗೆ ಸೇರಬಹುದಾದ ಮಾತಿನ ಪ್ರಾಮುಖ್ಯತೆ – ನಡೆ-ನುಡಿಯ ಮಹತ್ವವನ್ನು ತಿಳಿಸುವ ವಚನವೊಂದಿದೆ. ನಾವು ಆಟವಾಡುವಾಗ ಬೇಕಾದಾರೆ ಜಾರಿಬಿದ್ದರೆ ಆಗ ಆಗುವ ಗಾಯ ಒಮ್ಮೆ ಮಾಸಿಹೋಗುತ್ತದೆ. ಬಿದ್ದ ಮೇಲೆ ಎದ್ದು ನಿಲ್ಲಬಹುದು. ಆದರೆ ಆಡುವ ನುಡಿಯಲ್ಲಿ ಎಂದಿಗೂ ಜಾರಿ ಬೀಳಬಾರದು. ಬಿದ್ದರೆ ಅದು ನಮ್ಮ ಎದುರಿನಲ್ಲಿ ಇರುವವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಅದು ನುಡಿದವರ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಎಂದಿಗೂ ಮಾತಿನಿಂದ ನಮ್ಮನ್ನು ನಾವು ಕೆಳಗೆ ಬೀಳಿಸಿ ಕೊಳ್ಳಬಾರದು. ಎನ್ನುವುದನ್ನು ಈ ವಚನ ತಿಳಿಸುತ್ತಾ ನಡೆ-ನುಡಿಯಲ್ಲಿ ಇರಬೇಕಾದ ಭಾವ ಶುದ್ಧತೆಯನ್ನು ತಿಳಿಸುತ್ತದೆ.
ಆಡುವಾಗ ಜಾರಿಬಿದ್ದರೆ
ಮತ್ತೆ ಎದ್ದು ನಿಲ್ಲಬಹುದು
ನುಡಿಯಲ್ಲಿ ಜಾರಿದರೆ ಸರಿಪಡಿಸಲಾದೀತೇ?
ನಡೆಯಲ್ಲಿ ಜಾರಿದರೆ ತಲೆಯೆತ್ತಿ ಬದುಕಲಾದೀತೇ?
ಕೈಮುಗಿದು ಬೇಡುವೆನು ನಡೆ ನುಡಿಯಲ್ಲಿ
ನಾ ಜಾರಿ ಬೀಳದಂತೆ ಸಲಹಯ್ಯ- ಜಗದೀಶ
ಕಾಲ ಎಂದರೆ ಸಮಯ, ಕಾಲ ಎಂದರೆ ಯಮ, ಕಾಲ ಎಂದರೆ ಭೈರವ ಈ ಅರ್ಥಗಳನ್ನು ಒಳಗೊಂಡಂತಹ ವಚನ ಕಾಲನ ಹಾಗೂ ಕಾಲದ ಮಹತ್ವವನ್ನು ತಿಳಿಸುವ ವಚನವು ಜನರಿಗೆ ಕಾಲದ ಬಗೆ ಕರೆ ಗಂಟೆಯನ್ನು ಒತ್ತಿ ಎಚ್ಚರಿಸುತ್ತದೆ.
ಕಾಲ ಯಾರನ್ನೂ ಕಾಯುವುದಿಲ್ಲ
ಆಯಸ್ಸು ನಮ್ಮ ಕೈಯೊಳಗಿಲ್ಲ
ಸಾಧನೆಯ ಹಾದಿಯಲ್ಲಿ ಮುನ್ನಡೆದು
ಮನುಜ ಏನನ್ನಾದರೂ ಸಾಧಿಸಿ ತೋರಿಸು
ಕಾಲನ ಕರೆ ಬರುವ ತನಕ
ನೆಮ್ಮದಿಯಾಗಿ ಜೀವಿಸು- ಜಗದೀಶ
ಮನುಷ್ಯ ಒಂದು ಭ್ರಮೆಯಲ್ಲಿ ಸದಾ ಬದುಕುತ್ತಿರುತ್ತಾನೆ. ತಾನು ಮಾಡುವ ಪ್ರತಿ ಕೆಲಸವೂ ಸರಿಯಾಗಿರುತ್ತದೆ. ತನ್ನ ಜೊತೆಯಲ್ಲಿರುವ ಪ್ರತಿಯೊಂದು ಕೂಡ ಶಾಶ್ವತವಾಗಿ ತನ್ನ ಜೊತೆಯಲ್ಲಿಯೇ ಇರುತ್ತದೆ. ತಾನು ಈ ಭೂಮಿಯಲ್ಲಿ ಚಿರವಾಗಿ ನೆಲೆಯೂರಿಕೊಂಡು ಇರುತ್ತೇವೆ ಎಲ್ಲವೂ ತನ್ನದೇ ತನ್ನಿಂದಲೇ ಎಲ್ಲಾ ಎನ್ನುವ ಭ್ರಮಗೆ ಉತ್ತರವಾದಂತೆ ಇದೆ ಮುಂದಿನ ವಚನ
ಜೀವನದಲ್ಲಿ ನಮಗಿರೋದು
ಕೇವಲ ಎರಡೇ ಆಯ್ಕೆಗಳು
ಒಂದು ಕೊಟ್ಟು ಹೋಗಬೇಕು
ಮತ್ತೊಂದು ಬಿಟ್ಟು ಹೋಗಬೇಕು
ಆದರೆ ತೆಗೆದುಕೊಂಡು ಹೋಗುವ ಆಯ್ಕೆ
ಆ ದೇವರು ಕೂಡ ನಮಗೆ ನೀಡಿಲ್ಲ
ಎಂಬುದನ್ನರಿತು ಬಾಳಬೇಕು – ಜಗದೀಶ
ಒಂದು ಮಹತ್ತರವಾದ ಮಾತಿದೆ, ಏರಿದ ಏಣಿಯನ್ನು ನಾವು ಎಂದಿಗೂ ಒದೆಯಬಾರದು ಎಂದು ಆ ಏಣಿಯನ್ನು ಒದ್ದಾಗ ಇಳಿಯುವ ಸಂದರ್ಭ ಅಚಾನಕ್ಕಾಗಿ ಬಂದಾಗ ಬಿದ್ದ ಏಣಿ ಎಂದಿಗೂ ಆಸರೆಯಾದರೆ ಪ್ರಪಾತಕ್ಕೆ ಬೀಳಬೇಕಾಗಬಹುದು ಇಂತಹ ಸಂದೇಶವನ್ನು ತಿಳಿಸುವಾಗ ಆಧುನಿಕ ವಚನಕಾರರು ಪಕ್ಷಿ ಎಷ್ಟೇ ಎತ್ತರಕ್ಕೇರಿದರೂ ಭೂಮಿಯ ಋಣವನ್ನು ಮರೆತರೆ ಏರಿದಪಕ್ಷಿ ಒಮ್ಮೆ ಇಳಿಯಲೇಬೇಕು. ಇಳಿಯುವಾಗ ಅದು ಭೂಮಿಯನ್ನೇ ಆಸರೆಯಾಗಿಸಿಕೊಳ್ಳಬೇಕು ಇಲ್ಲದಿದ್ದರೆ ಅದು ಜೀವನ ಪರ್ಯಂತ ಹಾರಾಡಿಕೊಂಡೇ ಇರಲು ಯತ್ನಿಸಬೇಕಾಗುತ್ತದೆ. ಈ ಪ್ರಯತ್ನದಲ್ಲಿ ಅದು ಖಂಡಿತ ಸಾವನ್ನಪ್ಪುತ್ತದೆ. ಹಾಗೆಯೇ ನಾವು ನಮ್ಮ ಸಾಧನೆಯ ಹಾದಿಯಲ್ಲಿ ಎಷ್ಟೇ ಬೆಳೆದರೂ ಹಿಂದೆ ಪ್ರೇರೇಪಿಸಿ ಮಾರ್ಗದರ್ಶನ ಮಾಡಿದ ಗುರುವನ್ನು ಎಂದಿಗೂ ಮರೆಯಬಾರದು. ಮರೆತರೆ ಮರೆಯಾಗಬೇಕಾಗುತ್ತದೆ ಎನ್ನುವ ಮಾತನ್ನು ತಿಳಿಸಿ, ಇಂದಿನ ಯುವಜನರನ್ನು ಎಚ್ಚರಿಸುವ ಪ್ರಯತ್ನವನ್ನು ಆಧುನಿಕ ವಚನಕಾರರು ತಮ್ಮ ವಚನದಲ್ಲಿ ತಿಳಿಸುತ್ತಾರೆ.
ಪಕ್ಷಿ ಎಷ್ಟೇ ಎತ್ತರಕ್ಕೆ ಹಾರಿದರೂ
ಅದು ಭೂಮಿಯ ಋಣವನ್ನು
ತೀರಿಲಾಗದು, ಹಾಗೆಯೇ
ಸಾಧನೆಯ ಹಾದಿಯಲ್ಲಿ ನಾವೆಷ್ಟೇ
ಬೆಳೆದರೂ, ಬೆಳೆಸಿದ ಗುರುವನ್ನು
ಮರೆಯಲಾಗದು – ಜಗದೀಶ
ಇಂದು ತಂದೆ ತಾಯಿಗಳು ತಮ್ಮ ಮಕ್ಕಳಿಗೆ ತಾವು ಪಟ್ಟಂತಹ ಕಷ್ಟವನ್ನು ತನ್ನ ಮಗು ಪಡದಿರಲಿ ಎನ್ನುತ್ತಾ ತಮ್ಮ ಉಸಿರಿರುವವರೆಗೂ ತಾವು ಮಾತ್ರ ಕಷ್ಟ ಪಡುತ್ತಲೇ ಇರುತ್ತಾರೆ. ಅಂತಹ ತಂದೆತಾಯಿಗಳಿಗೆ ತಮ್ಮ ವಚನದ ಮೂಲಕ ಕಿವಿಮಾತನ್ನು ಹೇಳುತ್ತಾರೆ.
ಮಕ್ಕಳನ್ನು ಬೆಳೆಸುವಾಗ
ಅವರಿಗೆ ಕಷ್ಟಗಳನ್ನು ನೀಡದಿರಿ
ಆದರೆ ಅವರ ಬೆಳವಣಿಗೆಗಾಗಿ
ನೀವು ಪಡುವ ಕಷ್ಟಗಳನ್ನು
ಮನವರಿಕೆ ಮಾಡಲು ಎಂದಿಗೂ
ಮರೆಯದಿರಿ- ಜಗದೀಶ
ಹಿತ್ತಲ ಗಿಡ ಮದ್ದಲ್ಲ ಎನ್ನುವ ಗಾದೆಯನ್ನು ನೆನಪಿಸುವ ಒಂದು ವಚನವು ಈ ರೀತಿಯಾಗಿದೆ.
ಅಂಗೈಯಲ್ಲಿರುವ ಅರಗಿಣಿಯನ್ನು
ಕಡೆಗಣಿಸಿ ಜೊತೆಯಲ್ಲಿರುವ
ಕಾಗೆ-ಗೂಬೆಗಳನ್ನು ಅವಲಂಬಿಸಿದರೆ
ಬದುಕಲ್ಲಿ ಬೆಳಕನ್ನು ಕಾಣಲು
ಸಾಧ್ಯವೇ?-ಜಗದೀಶ
ಜಗತ್ತಿನ ಸೂಕ್ಷ್ಮತಿಸೂಕ್ಷ್ಮ ವಿಷಯಗಳನ್ನು ಗಮನಿಸಿರುವ ವಚನಕಾರರು, ಜಗದೊಳಿತಿಗಾಗಿ ಹಲವಾರು ಉತ್ತಮ ವಚನಗಳನ್ನು ರಚಿಸಿದ್ದಾರೆ.
ಕೆನ್ನೆಗೆ ಹೊಡೆದರೆ ಕ್ಷಮೆಯಿರಲಿ
ಬೆನ್ನಿಗೆ ಹೊಡೆದರೆ ತಾಳ್ಮೆಯಿರಲಿ
ಆದರೆ, ಹೊಟ್ಟೆಯ ಮೇಲೆ ಹೊಡೆದರೆ
ಆ ದೇವರು ಕೂಡ ಕ್ಷಮಿಸುವುದಿಲ್ಲ
ಎಂಬುದನ್ನು ಮನುಜ ತಿಳಿದಿರಲಿ-ಜಗದೀಶ
ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕಾದರೆ ಜನರ ನಡುವೆ ಹೇಗೆ ಬದುಕಬೇಕು ಎನ್ನುವುದನ್ನು ಹೀಗೆ ಹೇಳಲಾಗಿದೆ.
ನಾಲ್ಕು ಜನರ ಎದುರು
ಸತ್ತಂತೆ ಬದುಕುವುದಕ್ಕಿಂತ
ಸತ್ತ ಮೇಲೂ ಎಲ್ಲರ ಹೃದಯದಲ್ಲಿ
ನೆಲೆಸುವುದು ಸರ್ವಶ್ರೇಷ್ಠನಲ್ಲವೇ – ಜಗದೀಶ
ಉತ್ತಮ , ಮಧ್ಯಮ, ಅಧಮನಾರು ಎನ್ನುವ ತಾತ್ವಿಕ ನೆಲೆಗಟ್ಟಿನ ಚಿಂತನೆಯನ್ನು ಒಳಗೊಂಡ ಒಂದು ವಚನವನ್ನು ತಮ್ಮದೇ ಶೈಲಿಯಲ್ಲಿ ಹೀಗೆ ವ್ಯಕ್ತ ಪಡಿಸುತ್ತಾರೆ.
ತನ್ನ ಕಾಲ ಮೇಲೆ ತಾ ನಿಂತು
ಬದುಕಿದವ ನಿಜ ಉತ್ತಮನು
ಬಂಧು-ಬಳಗ ಸ್ನೇಹಿತರ
ಆಶ್ರಯದಲ್ಲಿ ಬದುಕಿದವ ಮಧ್ಯಮನು
ಪರರಿಂದ ಖ್ಯಾತಿ ಪಡೆದವ
ನಿಜಕ್ಕೂ ಅಧಮನು-ಜಗದೀಶ
ಈ ವಚನವು ಕಾಯಕದ ಮಹತ್ವವನ್ನು ಸಹ ತಿಳಿಸುತ್ತಾ, ತಾನು ತನ್ನ ಅನ್ನವನ್ನಾದರೂ ಹುಟ್ಟಿಕೊಳ್ಳುವಷ್ಟು ಮನುಷ್ಯ ಕಾರ್ಯತತ್ಪರನಗಿರಬೇಕು ಎನ್ನುವುದನ್ನು ತಿಳಿಸುತ್ತದೆ. ತನ್ನ ಕಾಲ ಮೇಲೆ ನಿಂತು ಬದುಕು ನಡೆಸಬೇಕು ಎನ್ನುವ ಸಂದೇಶವನ್ನು ಈ ವಚನವು ನೀಡುತ್ತದೆ.
ಇಂದಿನ ಪೀಳಿಗೆಯವರು ಎಷ್ಟು ಸ್ವಾರ್ಥಿಗಳಾಗಿದ್ದಾರೆ. ಎಂದರೆ ತಾನೊಬ್ಬನೇ ಬೆಳೆಯ ಬೇಕು, ತಾನು ಮಾತ್ರ ಉದ್ಧಾರವಾಗಬೇಕು. ಜಗತ್ತಿನಲ್ಲಿರುವುದೆಲ್ಲಾ ತನಗೇ ಬೇಕು ಎನ್ನುವಷ್ಟು ಸ್ವಾರ್ಥಿಗಳಾಗಿದ್ದಾರೆ. ಇಂತಹವರಿಗೆ ವಚನಕಾರರು ಅತ್ಯತ್ತಮವಾದ ಸಂದೇಶವನ್ನು ನೀಡುತ್ತಾರೆ. ಯಾರಲ್ಲಿ ಮತ್ತೊಬ್ಬರನ್ನು ಬೆಳೆಸುವ ಉತ್ತಮ ಗುಣವಿರುತ್ತದೆಯೋ ಅಂತಹವನು ತಾನೂ ಬೆಳೆಯುತ್ತಾನೆ. ಎನ್ನುವ ಮಾತನ್ನು ಹೇಳುವ ವಚನ ಸ್ವತಃ ವಚನಕಾರರಾದ ಎಂ.ಬಿ.ಸಂತೋಷ್ ಅವರ ದೊಡ್ಡಗುಣವನ್ನೇ ತಿಳಿಸುತ್ತದೆ.
ಮತ್ತೊಬ್ಬರನ್ನು ಬೆಳೆಸುವ
ದೊಡ್ಡಗುಣ ಯಾರಿಗೆ ಇರುತ್ತೋ
ಅವರು ತನಗರಿವಿಲ್ಲದ ಹಾಗೆ
ಬಲು ಎತ್ತರಕ್ಕೆ ಬೆಳೆಯುತ್ತಾರೆ
ಎಂಬುದರಲ್ಲಿ ಖಂಡಿತ ಸಂಶಯವಿಲ್ಲ-ಜದಗೀಶ
ನಾವು ಸಂತಸಮಯವಾದ ಜೀವನವನ್ನು ಕಟ್ಟಿಕೊಳ್ಳಲು ಹೇಗೆ ಇರಬೇಕು ಎನ್ನುವುದನ್ನು ವಚನಕರರು ಮುಂದಿನಂತೆ ವ್ಯಕ್ತಪಡಿಸುತ್ತಾರೆ. ನಮ್ಮ ಜೀವನದಲ್ಲಿ ನಾವು ಸದಾ ಯಾವುದಾದರೂ ಒಂದು ಕಾರಣಕ್ಕೆ ದುಃಖಿತರಾಗಿರುತ್ತೇವೆ. ಅದರೆ ದುಃಖದ ದಿನಗಳನ್ನು ಮೆರೆತು ಸದಾ ಸಂತೋಷದ ಕ್ಷಣಗಳನ್ನು ನೆನೆದು ಬದುಕನ್ನು ಧನಾತ್ಮಕವಾಗಿಸಿಕೊಳ್ಳಬೇಕು ಎನ್ನುವ ವಚನ ಹೀಗಿದೆ.
ಜೀವನದಲ್ಲಿ ನಾವು ಸಂತೋಷದಿಂದಿರಲು
ನಮ್ಮ ಸುಂದರವಾದ ನೆನೆಪುಗಳನ್ನು
ಮಾತ್ರ ಮೆಲುಕು ಹಾಕಬೇಕು
ಕಳೆದುಹೋದ ಕೆಟ್ಟ ಘಟನೆಗಳನ್ನಲ್ಲ- ಜಗದೀಶ
ಮುಂದುವರೆಯುತ್ತಾ ನಮ್ಮ ಸುತ್ತಲಿರುವ ಜನರ ಬೆಗೆಗೆ ತಿಳಿದುಕೊಂಡು ಮುಂದೆ ಸಾಗಬೇಕು ಎನ್ನುವುದಕ್ಕೆ ಈ ಸಂದರ್ಭದಲ್ಲಿ ನಮ್ಮ ಜೊತೆಯಲ್ಲಿ ಇರುವವರು ಎಂತಹವರು ಎನ್ನುವುದನ್ನು ಅರಿತುಕೊಳ್ಳದೇ ಜೊತೆಯಲ್ಲಿದ್ದುಕೊಂಡು ವಂಚಿಸುವವರ ಬಗ್ಗೆ ಜಾಗೃತರಗಿರಬೇಕು. ಎನ್ನುವ ಎಚ್ಚರಿಕೆಯನ್ನು ನೀಡುವ ವಚನ ಹೀಗಿದೆ.
ಬೈದು ಬುದ್ಧಿ ಹೇಳುವ ಜನರನ್ನು ನಂಬಬಹುದು
ಹೊಗಳಿ ಅಟ್ಟಕ್ಕೇರಿಸುವ ಜನರನ್ನು ನಂಬಲೇಬಾರದು
ನಮ್ಮ ಜೊತೆಯಲ್ಲಿಯೇ ಇದ್ದು ಬೆನ್ನಿಗೆ
ಚೂರಿ ಹಾಕುವ ನಯವಂಚಕರನ್ನು ಹತ್ತಿರ
ಸೇರಿಸಲೇಬಾರದು – ಜಗದೀಶ
ಮನುಷ್ಯನೆಂದ ಮೇಲೆ ಸಿಟ್ಟು ಸೆಡವುಗಳು ಸಹಜ ಇವುಗಳಿಲ್ಲದ ವ್ಯಕ್ತಿ ಬಹುಶಃ ಇಲ್ಲವೇನೋ ಸಿಟ್ಟನ್ನೂ ನಿಗ್ರಹಿಸಿ ವ್ಯಕ್ತಿ ಸಾಧಕನಾಗಿರುತ್ತಾನೆ. ಎನ್ನುವ ವಚನ ಬಹಳ ಸರಳವಾಗಿ ಸಾಧಕನಿಗೆ ಇರಬೇಕಾದ ಪ್ರಮುಖ ಗುಣವನ್ನು ತಿಳಿಸುತ್ತದೆ.
ಸಿಟ್ಟು ಬರುವುದು ಮನುಜನ ಸಹಜ ಲಕ್ಷಣ
ಬಂದ ಸಿಟ್ಟನ್ನು ಅಷ್ಟೇ ವೇಗವಾಗಿ
ನುಂಗುವುದು ನಿಜ ಸಾಧಕನ ಲಕ್ಷಣ
ಸಿಟ್ಟಿನಲ್ಲಿ ಯಾವ ಸಾಧನವೂ ಇಲ್ಲ
ಹಿತವೂ ಖಂಡಿತ ಇರುವುದೇ ಇಲ್ಲ-ಜಗದೀಶ
ಹೊಂದಾಣಿಕೆಯನ್ನು ಕುರಿತಾದ ಕೆಲವು ವಚನಗಳು ಇಲ್ಲಿ ರಚಿಸಲ್ಪಟ್ಟಿವೆ. ನಿರೀಕ್ಷೆಗಳಿದ್ದಂತೆ ಏನೂ ಸಹ ಎಷ್ಟೋ ಬಾರಿ ಜೀವನದಲ್ಲಿ ನಡೆಯುವುದಿಲ್ಲ. ಜೀವನ ಹೇಗೆ ಬರುತ್ತದೆಯೋ ಹಾಗೇ ನಡೆದುಕೊಳ್ಳಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದನ್ನು ಈ ವಚನ ನೆನೆಪಿಸುತ್ತದೆ. ಹೊಂದಾಣಿಕೆ ಇಲ್ಲದಿದ್ದರೆ, ಜೀವನ ಘೋರ ಕಗ್ಗತ್ತಲಿನಂತೆ ಎಂದೇ ಹೇಳಬಹುದು.
ಪಾದಕ್ಕೆ ಹೊಂದುವ ಹಾಗೆ
ಚಪ್ಪಲಿ ತೆಗೆದುಕೊಳ್ಳಬೇಕು
ಮನೆಯ ಬಾಗಿಲಿನೆತ್ತರ ನೋಡಿ
ಬಗ್ಗಿ ನಡೆಯಬೇಕು ಹೇ ಮನುಜ
ಹೊಂದಾಣಿಕೆಯ ಬದುಕು ನಿಜ
ನಮ್ಮದಾಗಬೇಕು- ಜಗದೀಶ
ಶಿವನನ್ನು ಮೆಚ್ಚಿಸುವ ಪ್ರಯತ್ನವಿರಲಿ, ಆ ಆಲೋಚನೆಯೂ ಇಂದಿನ ಜನರಿಗೆ ಇಲ್ಲ. ಅವರು ಬದುಕುವುದು ಸ್ವಾರ್ಥಕ್ಕಾಗಿ ಮುಖವಾಡ ತೊಟ್ಟು ಮತ್ತು ಜನರನ್ನು ಮೆಚ್ಚಿಸಲು ಬದುಕಿರುತ್ತಾರೆ. ಹೀಗೆ ಬದುಕುವ ನಿಟ್ಟಿನಲ್ಲಿ ಬಾಳು ದುಸ್ತರವಾಗುತ್ತದೆ. ಎನ್ನುವ ಕಹಿಸತ್ಯವನ್ನು ಈ ಮುಂದಿನ ವಚನ ತಿಳಿಸುತ್ತದೆ.
ಮೂರು ದಿನದ ಈ ಬದುಕಿಗೆ
ನೂರು ನಾಟಕವಾಡಬೇಕೇ?
ಹೇ ಮನುಜ ಇರುವಷ್ಟು ದಿನ
ಸರಳ ಹಾಗೂ ಸುಂದರವಾದ ಬದುಕು
ನಮ್ಮದಾಗಿಕೊಂಡರೆ ಆ ಶಿವ
ಮೆಚ್ಚುವುದಿಲ್ಲ – ಜಗದೀಶ
ಜೀವನದ ಪ್ರತಿ ಹೆಜ್ಜೆಗೂ ಸಂಬಂಧಿಸಿದ ಎಷ್ಟೋ ವಚನಗಳು ಈ ಕೃತಿಯಲ್ಲಿದೆ. ಆದ್ದರಿಂದ ಹೆಸರಿಗೆ ತಕ್ಕ ಹಾಗೆ ವೈವಿಧ್ಯಮಯವಾದ ವಚನಗಳನ್ನು ಈ ಕೃತಿಯು ಒಳಗೊಂಡಿದೆ. ಇವು ಇಂದಿನ ಜನರ ಸಾಮಾಜಿಕ, ಕೌಟುಂಬಿಕ, ವೈಯಕ್ತಿಕ ಜೀವನಕ್ಕೆ ಮಾದರಿಯಾಗಿ, ದಾರಿದೀಪವಾಗುತ್ತವೆ. ಆಧುನಿಕ ವಚನಕಾರರಾದ ಗುರುಗಳಾದ ಶ್ರೀ ಎಂ.ಬಿ.ಸಂತೋಷ್ ಅವರು ತಮ್ಮ ಜೀವನದ ಅನುಭವ ಕ್ಷಣಗಳ ಸಾರವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಂತಹ ಸಾವಿರಾರು ವಚನಗಳು ಇವರ ಅನುಭವ ಜ್ಯೋತಿಯಿಂದ ಮೂಡಿಬರಲಿ ಎಂದು ಆ ಪರಶಿವನಲ್ಲಿ ಬೇಡಿಕೊಳ್ಳುತ್ತೇನೆ.
ಶೋಭಾ ನಾಗಭೂಷಣ್
