‘ವಿಕಸಿತ ಭಾರತ’-ವಿಶೇಷ ಲೇಖನ-ಜಯಲಕ್ಷ್ಮಿ ಕೆ.

” ವಿಕಸಿತ ಭಾರತ ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಸ್ವಾತಂತ್ರೋತ್ಸವವವನ್ನು ಆಚರಿಸುತ್ತಿರುವ ನಮ್ಮ ಸಾರ್ವಬೌಮ ಭಾರತೀಯ ಗಣರಾಜ್ಯಕ್ಕೆ ಇಂದು 78 ನೇ ವಾರ್ಷಿಕೋತ್ಸವದ ಸಂಭ್ರಮ. ಭರತಮಾತೆಯನ್ನು ಪಾರತಂತ್ರ್ಯ ದ ಸಂಕೋಲೆಯಿಂದ ವಿಮುಕ್ತಿಗೊಳಿಸಿ ಇಂದಿಗೆ 77 ವರ್ಷಗಳು ಕಳೆದಿವೆ. ಸ್ವಾಧಿಕಾರ ಸಂಸ್ಥಾಪನೆಗಾಗಿ ಸರ್ವಸ್ವವನ್ನೂ ಸ್ವದೇಶಕ್ಕೆ ಸಮರ್ಪಿಸಿದ ಸ್ವತಂತ್ರ ಹೋರಾಟಗಾರರ ಉಸಿರಿನ ಫಲ, ನಮ್ಮ ಇಂದಿನ ನಿರಾಳ ಉಸಿರು. ದೇಶವನ್ನು ನಮ್ಮ ಕೈಗಿತ್ತು ಅಮರರಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ, ಅವರ ತ್ಯಾಗ – ಬಲಿದಾನಗಳಿಗೊಂದು ಗೌರವದ ನಮನ ಸಲ್ಲಿಸುವ ಪುಣ್ಯ ದಿನವಿದು. ಬ್ರಿಟಿಷರ ಯೂನಿಯನ್ ಜ್ಯಾಕ್ ಬಾವುಟವನ್ನು ಕೆಳಗಿಳಿಸಿ ನಮ್ಮ ತ್ರಿವರ್ಣ ಧ್ವಜ ನಭದೆತ್ತರಕ್ಕೆ ಹಾರಾಡಿ ಮೆರೆದ ಹೆಮ್ಮೆಯ ದಿನ.

” ದೇಶ ಮೊದಲು, ದೇಶವೇ ಮೊದಲು.. ದೇಶವೇ ಕೊನೆ.. ದೇಶಕ್ಕಾಗಿ ಈ ಉಸಿರು ” ಎಂದು ಪಣ ತೊಟ್ಟು ಪರಕೀಯರ ಗುಂಡಿಗೆ ತಮ್ಮ ಗುಂಡಿಗೆಯನ್ನು ತೋರಿದ ವೀರ ಯೋಧರ ಸುದೀರ್ಘ ಹೋರಾಟದ ಫಲ ಇಂದಿನ ಈ ನಮ್ಮ ಸಂಭ್ರಮ. ಭರತ ಭೂಮಿಯನ್ನು ಸ್ವಾತಂತ್ರ್ಯ ವೆಂಬ ಸಿಂಹಾಸನದಲ್ಲಿ ಅಲಂಕ್ರತಗೊಳಿಸುವಲ್ಲಿ ದೇಶ ಕಟ್ಟಿದ ಯೋಧರು ಎದುರಿಸಿದ ಸವಾಲುಗಳೆಷ್ಟೋ… ಅನುಭವಿಸಿದ ಯಾತನೆಗಳೆಷ್ಟೋ… ಸಂದ ಬಲಿದಾನಗಳೆಷ್ಟೋ.. ನೊಂದ ನೋವುಗಳೆಷ್ಟೋ… ” ನೊಂದ ನೋವ ನೋಯದವರೆತ್ತ ಬಲ್ಲರು? ” ಎನ್ನುವಂತೆ ನಮಗೆ ಅದರ ಕಲ್ಪನೆ ಮಾತ್ರ ಇರಲು ಸಾಧ್ಯ, ಅಷ್ಟೇ.

” ವಿವಿಧತೆಯಲ್ಲಿ ಏಕತೆ ” ಯೇ ಸಂಸ್ಕೃತಿಯ ಸಾರವಾಗಿರುವ ಈ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆ ಕೂಡಾ ಇಂತಹ ಸಂಗ್ರಾಮಗಳಲ್ಲಿ ಧುಮುಕುವುದು ಅಸಾಧ್ಯದ ಮಾತು. ಆದರೆ ದೇಶ ಪ್ರೇಮ ಮೆರೆಯಲು ಹೋರಾಟ ಬಲಿದಾನ ಮಾತ್ರವೇ ಮಾರ್ಗವಲ್ಲ. ಶಾಂತಿಯುತ ಸಹಬಾಳ್ವೆಗೆ ನಮ್ಮ ಅಂತಃಕರಣ ತೆರೆದರೆ ಸಾಕು… ಅದು ದೇಶ ಪ್ರೇಮವೇ. ಶಾಂತಿಯುತ ಸಹ ಬಾಳುವೆಗೆ ಪರಸ್ಪರರು ಅರಿತುಕೊಂಡು ವಿವೇಚನೆಯಿಂದ ಬಾಳುವ, ಬಾಳಕೊಡುವ ತತ್ವ ಪಾಲಿಸಿದರೆ ಸಾಕು. ಅದುವೇ ದೇಶಕ್ಕೆ ನಾವು ಸಲ್ಲಿಸುವ ಕಾಣಿಕೆ. ಅಂಥ ಒಂದು ದೀಕ್ಷೆಯನ್ನು ನಾವೆಲ್ಲರೂ ತೊಡಬೇಕಾದದ್ದು ಸೌಹಾರ್ಧತೆಯ ಕೊರತೆ ಕಾಡುವ ಇಂದಿನ ದಿನಗಳಲ್ಲಿ ಅನಿವಾರ್ಯ ಎನ್ನುವುದು ನನ್ನ ಅನಿಸಿಕೆ.

1947 ರಲ್ಲಿಯೇ ನಮಗೆ ರಾಜಕೀಯ ಸ್ವಾತಂತ್ರ್ಯ ದೊರೆತಿದೆ. ಮತೀಯ ಸ್ವಾತಂತ್ರ್ಯ ಇದೆ. ಆರ್ಥಿಕ, ಸಾಮಾಜಿಕ ಮತ್ತು ವೈಚಾರಿಕ ಸ್ವಾತಂತ್ರ್ಯ ಇನ್ನು ಕೂಡಾ ಸಂಪೂರ್ಣ ಲಭಿಸಿಲ್ಲ. ಸಮಾಜದ ಇಂದಿನ ಸ್ಥಿತಿ -ಗತಿಗಳನ್ನು ಅವಲೋಕಿಸುವ ಯಾರೇ ಆದರೂ ನಮ್ಮಲ್ಲಿನ ವೈಚಾರಿಕ ಚಿಂತನೆಯ ಕೊರತೆಯನ್ನು ಅಲ್ಲಗಳೆಯಲಾರರು.

” ಸ್ವಾತಂತ್ರ್ಯ ಎನ್ನುವ ಪರಿಕಲ್ಪನೆ ನಮ್ಮ ಹೃದಯದ ಮಿಡಿತ : ಶ್ವಾಸಕೋಶದ ಉಸಿರಾಟದ ಏರಿಳಿತ ” ಇದು ” ಉಕ್ಕಿನ ಮನುಷ್ಯ ” ಎಂದೇ ಹೆಸರಾದ ಸರದಾರ್ ವಲ್ಲಭಭಾಯ್ ಪಟೇಲರ ಮಾತು. ಎಷ್ಟು ಅರ್ಥಪೂರ್ಣ! ಅದೆಷ್ಟೋ ದೇಶಪ್ರೇಮಿಗಳು ಉಸಿರು ಚೆಲ್ಲಿ ಗಳಿಸಿಕೊಟ್ಟ ಈ ಸ್ವಾತಂತ್ರ್ಯ ಕ್ಕೆ ಒಂದು ಅರ್ಥ ಬರಬೇಕಾದರೆ ಈ ಆಚರಣೆ ಒಂದು ದಿನದ ಹಬ್ಬವಾಗಿರದೆ ಹೃದಯದ ಕ್ಷಣ ಕ್ಷಣ ದ ಮಿಡಿತವೇ ಆ ಪರಿಕಲ್ಪನೆ ಆಗಿರಬೇಕು.ಸ್ವಾಮಿ ವಿವೇಕಾನಂದರು ಹೇಳಿದಂತೆ” ದೇಶದ ಅಪೂರ್ವ ಆಸ್ತಿ, ಯುವಶಕ್ತಿ ” ಅದು  ‘ ಸ್ವಾತಂತ್ರ್ಯ ‘ಎನ್ನುವ ಪದದ ನಿಜವಾದ ಅರ್ಥವನ್ನು ಗ್ರಹಿಸಿ ನಡೆಯಬೇಕಿದೆ. ಜಾತಿ, ಮತ ಧರ್ಮಗಳ ಬಗೆಗಿನ ಅವರ ಕೆರಳಿಕೆ ಸಾಮಾಜಿಕ ಸಾಮರಸ್ಯದತ್ತ ಹೊರಳಿದಾಗ, ನಿಜವಾದ ವೈಚಾರಿಕ ಸ್ವಾತಂತ್ರ್ಯ ದ ತಿಳುವಳಿಕೆ ಅವರಿಗಾದಾಗ ನಮ್ಮ ದೇಶ ಬೌದ್ಧಿಕವಾಗಿ ಸ್ವಾತಂತ್ರ್ಯ ಗಳಿಸಿದಂತೆಯೇ.  ಇಲ್ಲಿ ಬೌದ್ಧಿಕ ಚಿಂತನೆ ಎನ್ನುವ ನನ್ನ ಮಾತಿನ ಅರ್ಥ ” ಬಾಳು, ಬಾಳಗೊಡು ” ಎನ್ನುವ ತತ್ವ. ನಮ್ಮ ಸಹ ಜೀವಗಳೊಂದಿಗೆ ನಾವು ಹೊಂದಿಕೊಂಡು ಬಾಳುವುದು ನಮ್ಮ ಬಾಳಿನ ಸುಗಮತೆಗೆ ಎಷ್ಟು ಮುಖ್ಯವೋ, ನಮ್ಮ ಸುತ್ತಮುತ್ತಲಿನ ಚರಾಚರಗಳ ಉಳಿಕೆ ಎಂಬ ಪ್ರಬುದ್ಧತೆ ಬಂದಾಗಲೇ ನಾವು ನಿಜವಾಗಿ ಸ್ವತಂತ್ರರು.. ನಿರಾಳ ಬದುಕಿಗೆ ಯೋಗ್ಯರು. ಈ ವೈಚಾರಿಕ ಸ್ವಾತಂತ್ರ್ಯ ಪ್ರತಿಯೊಬ್ಬ ಪ್ರಜೆಯ ಆದ್ಯ ಚಿಂತನೆ ಆಗಬೇಕು. ವಾಕ್ ಶಕ್ತಿ ಮತ್ತು ವಿವೇಚನಾ ಶಕ್ತಿ ಹೊಂದಿರುವ ನಾವು ನಮ್ಮ ಬೌತಿಕ ಪರಿಸರವನ್ನು ಉಳಿಸಿದರಷ್ಟೇ ನೆಮ್ಮದಿಯಿಂದ ಬಾಳಲು ಸಾಧ್ಯ ಎಂಬ ಅರಿವು ಮನದಾಳಕ್ಕೆ ಇಳಿದಂದು ನಾವು ಸಂಪೂರ್ಣ ಸ್ವತಂತ್ರರು. ಆಗ ಮಾತ್ರ ಪ್ರತಿ ವರ್ಷದ ನಮ್ಮ ಈ ಸ್ವಾತಂತ್ರ್ಯ ವರ್ದಂತಿ ಇಡೀ ಮನುಕುಲದ ಆನಂದದ ಹಬ್ಬವಾಗಲು ಸಾಧ್ಯ.


3 thoughts on “‘ವಿಕಸಿತ ಭಾರತ’-ವಿಶೇಷ ಲೇಖನ-ಜಯಲಕ್ಷ್ಮಿ ಕೆ.

Leave a Reply

Back To Top