ಮಾನದಂಡಗಳಿಲ್ಲದ ಆಯ್ಕೆಗೆ ಮಾನವೆಲ್ಲಿದೆ? ವಿಶೇಷ ಲೇಖನ-ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ

ಯಾವುದೇ ಹುದ್ದೆಯ ಅಥವಾ ಉನ್ನತ ಸ್ಥಾನದ ಆಯ್ಕೆಯ ಪ್ರಕ್ರಿಯೆಯಲ್ಲಿ ಕೆಲವೊಂದಿಷ್ಟು ಮಾನದಂಡಗಳು ಇರುತ್ತವೆ. ಆ ಮಾನ ದಂಡಗಳು ಆ ಹುದ್ದೆಯ ಘನತೆಯನ್ನು ಹೆಚ್ಚಿಸುತ್ತವೆ. ಆ ಮಾನದಂಡಗಳೇ ಆ ಆಯ್ಕೆಯನ್ನು ಒಂದು ಉನ್ನತ ಸ್ಥಾನದಲ್ಲಿ ತಂದು ನಿಲ್ಲಿಸುತ್ತದೆ. ಹಾಗೇಯೆ ಆ ಮಾನದಂಡಗಳು ಆಯ್ಕೆಯ ಪ್ರಕ್ರಿಯೆಯಲ್ಲಿ ತೊಡಗಿದವರಿಗೂ ಕೂಡ ದಾರಿದೀಪದಂತಿರುತ್ತವೆ. ಹೀಗೆ ಮಾನದಂಡಗಳು ಆಯ್ಕೆಗೊಂಡ ಸ್ಥಾನದ ಮಾನವನ್ನು ಕಾಪಾಡಿಕೊಳ್ಳುತ್ತವೆ.

ಆಯ್ಕೆಯ ಪ್ರಕ್ರಿಯೆಯಲ್ಲಿ ತೊಡಗಿದವರೂ ಕೂಡಾ ಆ ಮಾನದಂಡಗಳ ನೆರಳಿನಡಿಯಲ್ಲಿ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸಬೇಕಾಗುತ್ತದೆ. ಅಲ್ಲಿ ಯಾವುದೇ ಆಸೆ, ಆಮೀಷ, ಋಣಮುಕ್ತ ಇಂತಹ ಅಪಮೌಲ್ಯ ನಿಯಮಗಳನ್ನು ಅಲ್ಲಿ ತಂದೊಡ್ಡಬಾರದು. ಹಾಗೇನಾದರೂ ಅಲ್ಲಿ ನಡೆಸುತ್ತಾರೆ ಎಂದಾದರೆ ಅವರು ಆ ಆಯ್ಕೆಯ ಸ್ಥಾನಕ್ಕೆ ಯೋಗ್ಯರಲ್ಲ ಎಂದರ್ಥ. ಇಂತಹ ವ್ಯಕ್ತಿಗಳು ಆ ಸ್ಥಾನದ ಘನತೆಯನ್ನು ಕೀಳು ಮಟ್ಟಕ್ಕೆ ತಂದು ನಿಲ್ಲಿಸಿದಂತಾಗುತ್ತದೆ. ಹಾಗಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಆಯ್ಕೆದಾರರು ತಾವು ಇಂತಹ ಕೀಳುತನದಿಂದ ಹಿಂದೆ ಸರಿದು, ಪ್ರಕ್ರಿಯೆಯ ನಿಯಮಾವಳಿಗಳನ್ನು ಚಾಚು ತಪ್ಪದೇ ಪಾಲಿಸುವವರನ್ನು ಆ ಸ್ಥಾನದಲ್ಲಿ ಕೂಡಿಸಿದರೆ ತಾವು ತಮ್ಮ ಘನತೆ ಹೆಚ್ಚಿಸಿಕೊಂಡಂತಾಗುತ್ತದೆ.

ನಾವು ಇತಿಹಾಸವನ್ನು ಅವಲೋಕಿಸಿದಾಗ ಅಯೋಗ್ಯರನ್ನು ಆ ಮಾನದಂಡಗಳ ಮೀರಿ ಪಟ್ಟವೇರಿದ ರಾಜರನ್ನು ಆ ಕಾಲವು, ಆ ವ್ಯವಸ್ಥೆಯು ಸಹಿಸಿಕೊಂಡಿಲ್ಲ. ಕೆಲವೇ ಸಮಯಗಳವರೆಗೆ ಅವರಿಗೆ ಕಾಲಾವಕಾಶ ನೀಡಿ. ಆ ಸ್ಥಾನದಿಂದ ಅವರನ್ನು ತಳಿದ್ದನ್ನು ನಾವು ಇತಿಹಾಸದಲ್ಲಿ ನೋಡಬಹುದು. ನಮ್ಮ ಸಾಂವಿಧಾನಿಕ ರಾಜಕಾರಣದಲ್ಲಿಯೂ ಕೂಡ ಈ ಹಿಂದೆ ಕೆಲವೊಂದಿಷ್ಟು ನಮ್ಮನ್ನಾಳುವ ನಾಯಕರು ಸಾಂವಿಧಾನಿಕ ಮಾನದಂಡಗಳನ್ನು ಧಿಕ್ಕರಿಸಿ ಪ್ರಜಾ ನಾಯಕತ್ವ ವಹಿಸಿಕೊಂಡಾಗಲೂ ಕೂಡ ಅವರು ಹೆಚ್ಚು ದಿನ ಆಳ್ವಿಕೆ ನಡೆಸದೆ ತಮ್ಮ ಸ್ಥಾನದಿಂದ ಪದಚ್ಯುತಿಗೊಂಡಿದ್ದನ್ನು ನಾವು ಕಂಡಿದ್ದೇವೆ.

ಸಮಾಜವು ಇಂದು ಎಷ್ಟೇ ವಿದ್ಯಾವಂತತೆಯನ್ನು ಹೊಂದಿದ್ದರೂ ಕೂಡಾ, ಅವರೊಳಗೆ ಜಾತಿ, ಧರ್ಮ, ಋಣ, ಹಣ, ಅಧಿಕಾರ, ಕೆಲವೊಂದು ಲಾಲಾಷೇಗಳು ಇಂದು ತುಂಬಿ ತುಳುಕುತ್ತಿವೆ. ಅದರಷ್ಟೇ ಜನರು ಪ್ರಜ್ಞಾವಂತರೂ ಆಗುತ್ತಿದ್ದಾರೆ. ಆದರೆ ಈ ಪ್ರಜ್ಞಾವಂತಿಕೆ ಅಥವಾ ಸಜ್ಜನತೆ ಹೊಂದಿದ ಮನುಷ್ಯರು ಇಂತಹ ಆಯ್ಕೆ ಪ್ರಕ್ರಿಯೆಗಳಿಂದ ದೂರ ಉಳಿದು, ತಮ್ಮ ಸ್ಥಾನದ ಮಾನಗಳು ಉಳಿಸಿಕೊಳ್ಳುತ್ತಾರೆ.

ಅರ್ಹತೆ ಇಲ್ಲದಿದ್ದರೂ ಕೂಡ ಆ ಆಯ್ಕೆ ಪ್ರಕ್ರಿಯೆಯ ಮಾನದಂಡಗಳನ್ನು ಮೀರಿ, ಆಯ್ಕೆಯಾಗಬೇಕೆಂಬ ಹಪಾಹಪಿ ಹೊಂದಿರುವ ಜನರು, ಏನಾದರೂ ಆಗಲಿ, ಹೋಗಲಿ ತಮ್ಮ ಅನುಕೂಲಕ್ಕೆ ತಕ್ಕಂತೆ, ಅಥವಾ ತಮ್ಮ ಆಯ್ಕೆಗೆ ತಕ್ಕಂತೆ ಆ ಮಾನದಂಡಗಳನ್ನು ತಿರುಚಿ ತಾವು ಆಯ್ಕೆಯಾಗಬೇಕು. ಆ ಆಸ್ಥಾನದಲ್ಲಿ ಕುಳಿತುಕೊಳ್ಳಬೇಕು ಎನ್ನುವ ದುಷ್ಟಾಸೆಯನ್ನು ತಮ್ಮೊಳಗೆ ತುಂಬಿಕೊಂಡು ಆಯ್ಕೆಯಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ.

ಹೀಗೆ ಆಯ್ಕೆಗೊಂಡು ತಾವು ಉನ್ನತವಾದ ಹುದ್ದೆಯನ್ನು ಅಲಂಕರಿಸಿದ್ದೇವೆ ಎಂಬ ಗರ್ವ ಅವರ ಒಳಗಿಂದ ಹೊರಗೆ ಬರುತ್ತದೆ. ಅದನ್ನು ಪ್ರಜ್ಞಾವಂತ ಜನತೆ ವೀಕ್ಷಿಸಿ ಅವರ ಹುದ್ದೆಯನ್ನು ಅಪಹಾಸ್ಯ ಮಾಡುವ ಪರಸ್ಥಿತಿಯು ಕೂಡ ಬಂದೊದಗುತ್ತದೆ ಎಂಬ ಪರಿಜ್ಞಾನ ಆಯ್ಕೆಯಾದವರಲ್ಲಿ ಆಯ್ಕೆಯ ಪ್ರಕ್ರಿಯೆಗೆ ಸಹಕರಿಸಿದವರಲ್ಲಿ ಒಡಮೂಡಬೇಕು.

ಮಾನದಂಡಗಳೇ ಇಲ್ಲದ ಆಯ್ಕೆಯ ಪ್ರಕ್ರಿಯೆಗೆ ಎಂದಿಗೂ ಕೂಡ ಮಾನಸಿಗಲಾರದು. ಅದನ್ನು ಆಯ್ಕೆ ಮಾಡಿದ ಮಹನೀಯರಿಗೂ ಕೂಡ ಗೌರವ ಈ ಸಮಾಜ ನೀಡಲಾರದು. ಕ್ಷಣಿಕವಾಗಿ ಅವರು ಗೆದ್ದೆವೆಂದು ಬೀಗಬಹುದು. ಆದರೆ ಅವರ ಗೆಲುವು ಅದು ಬಹಳ ದಿನ ಉಳಿಯಲಾರದು. ಹೇಗೆ ಹಾಳೆಯು ಗಾಳಿಯಲ್ಲಿ ಉರಿದು ಹಾರಿ ಹೋಗುವುದೋ ಹಾಗೆಯೇ ಮಾನದಂಡಗಳಿಲ್ಲದೆ ಆಯ್ಕೆಯಾದವರು ಈ ಕಡೆ ಒಲೆಗೂ ಬೆಂಕಿಯಾಗದೆ, ಹಲ್ಲಿಗೂ ಇದ್ದಲಿ ಆಗದೆ, ತಿಪ್ಪೆಗೆ ಗೊಬ್ಬರವಾಗದೆ ಹಾಗೆ ಗಾಳಿಯಲ್ಲಿ ಬೆರತು ಸಜ್ಜರ ಜನರ ಕಣ್ಣಿಗೆ ಬೂದಿಯಾಗಿ ನಿಲ್ಲುತ್ತಾರೆ‌.

ಯಾವುದೇ ಒಂದು ಸ್ಥಾನವಾಗಲಿ, ಮಾನವಾಗಲಿ ಶಾಶ್ವತವಾಗಿಯೇ ಜನರ ಮನದಲ್ಲಿ, ಇತಿಹಾಸದ ಪುಟದಲ್ಲಿ ಉಳಿಯಬೇಕಾದರೆ, ಆ ಆಯ್ಕೆಯ ಪ್ರಕ್ರಿಯೆಯಲ್ಲಿ ತೊಡಗಿದವರು ಚಾಚು ತಪ್ಪದೆ ನಿಯಮಗಳನ್ನು ಪಾಲಿಸಬೇಕು. ಹಾಗೆಯೇ ಆಯ್ಕೆಗೊಳ್ಳುವವರು ಕೂಡ ತಮ್ಮ ಹಪಾಹಪಿಯನ್ನು ಬಿಟ್ಟು ನಾವುಗಳು ಆಸ್ಥಾನಕ್ಕೆ ಯೋಗ್ಯರೋ, ಅಯೋಗ್ಯರೋ ಎಂಬುವುದನ್ನು ತಮ್ಮ ಅಂತರಾತ್ಮವನ್ನು ಕೇಳಿಕೊಳ್ಳಬೇಕು. ಹೀಗಾದಾಗ ಮಾತ್ರ ಸಜ್ಜನ ಸಮಾಜ ನಿರ್ಮಾಣವಾಗುತ್ತದೆ. ಹಾಗೂ ಆ ಸಮಾಜ ಒಳ್ಳೆಯ ಪಥದತ್ತ ಸಾಗುತ್ತದೆ. ಇಂತಹ ವಾತಾವರಣ ಸಾಕ್ಷರದ ನಾವುಗಳು ಸೃಷ್ಟಿಸಿಕೊಳ್ಳಬೇಕಿದೆ ಅಲ್ಲವೆ.

3 thoughts on “ಮಾನದಂಡಗಳಿಲ್ಲದ ಆಯ್ಕೆಗೆ ಮಾನವೆಲ್ಲಿದೆ? ವಿಶೇಷ ಲೇಖನ-ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ

    1. ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು.ಯಾವುದೇ ಸ್ಥರವಾಗಲಿ,ಸ್ಥಿರತೆಯನ್ನು ಕಾಪಾಡಿಕೊಂಡು, ಪ್ರಬುದ್ಧತೆ ಇರುವವರ ಸೊತ್ತಾಗಬೇಕು.ದಿನ ನಿತ್ಯ ತಮ್ಮನ್ನು ತಾವು ಮಾರಿಕೊಳ್ಳುವವರ,ಮತ್ತು ಖರೀದಿಸುವವರ ಸೊತ್ತಾಗಬಾರದು.ಕೆಲವೊಂದು ಮಾನದಂಡಗಳು ಹಣದ ದಂಡಕ್ಕೆ ತಲೆ ಬಾಗುತ್ತದೆ.ಎಲ್ಲಾ ರಂಗದಲ್ಲೂ ಹಣ,ಅಧಿಕಾರ,ಕುಲದ ವ್ಯಾಮೋಹ,ಮತ್ತು ಕಳ್ಳುಬಳ್ಳಿ ಸಂಬಂಧಗಳು ತಲೆದೂರಿಸಿ,ಮಾನದಂಡವನ್ನು ಮುರಿದು ಹಾಕಿರುವ ಅದೆಷ್ಟೋ ನಿದರ್ಶನಗಳಿವೆ.ಈ ನೆಲೆಯಲ್ಲಿ ತಮ್ಮ ಬರವಣಿಗೆ ಸರ್ವಕಾಲಿಕವಾಗಿದೆ.ಒಳ್ಳೆಯ ಬರಹವನ್ನು ಓದಲು ನೀಡಿದ ತಮಗೆ ಅಭಿನಂದನೆಗಳು

Leave a Reply

Back To Top