ಗಜಲ್ ಜುಗಲ್ ಬಂದಿ

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಗಜಲ್-17

ನಿನ್ನನೇ ನೆಚ್ಚಿಕೊಂಡ ಭಾವಗಳ ದೂರುತ್ತಿರುವೆ ಸರಿ ಬಿಡು
ನನ್ನ ಪ್ರೀತಿಗೆ ಹಲವು ನೋವುಗಳ ಸುರಿಯುವೆ ಸರಿ ಬಿಡು

ಆಕಾಶ ಚುಂಬಿಸುವ ಹಕ್ಕಿಗೆ ಪ್ರೀತಿಯ ತುತ್ತು ಈ ಭೂಮಿ
ಗೂಡು ಬೇಸರವಾಯಿತೆಂದು ತೊರೆಯುತ್ತಿರುವೆ ಸರಿ ಬಿಡು.

ಇಳೆಗೂ ,ಬಾನಿಗೂ, ಇರುವ ನಂಟಿನ ಹೆಸರೇನು ಮತ್ತೆ
ಸಹಿ ಇರದ ಯಾವಬಂಧಕ್ಕೂ ಬೆಲೆಯಿಲ್ಲವೆನ್ನುವೆ ಸರಿ ಬಿಡು.

ಮೌನದಲ್ಲೇ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತದೆ ಈ ಪ್ರಕೃತಿ
ಎಲ್ಲೋ ತಪಗೈವ ನಾನು ನಿನಗೆ ಅಪಾರ್ಥವಾಗುವೆ ಸರಿಬಿಡು

ನನ್ನೊಳಗಿನ ಅಚಲವಾದ ನಂಬಿಕೆಗೆ ಅಂತ್ಯವಿಲ್ಲ”ಮಾಧವಾ”
ಕೊನೆ ಇಲ್ಲದ್ದಕ್ಕೆ ಅರ್ಥವೂ ಇರಲಾರದೆನ್ನುವೆ ಸರಿ ಬಿಡು.

ಸ್ಮಿತಾ ಭಟ್


ಅದ್ಯಾವುದೊ ಮಿಂಚಿನಾಸರೆ ಸಿಕ್ಕಂತೆ ಹೊರಟಿರುವೆ ಸರಿ ಬಿಡು
ಬಂಧಿಸಿದ್ದ ನಂಟು ಬೇರುಗಳನು ಪೂರ್ತಿ ಕಡಿದಿರುವೆ ಸರಿ ಬಿಡು

ಈ ನೇಹ ನಿನ್ನೊಳಗೆ ತುಂಬಿಕೊಟ್ಟ ಕಸುವ ಹೀಗೆ ಮರೆತೆಯೇಕೆ?
ಸೂತ್ರ ಹರಿದ ಪಟ ಗುರಿ ಕಾಣದ ಕಥೆಯ ಮರೆತಿರುವೆ ಸರಿ ಬಿಡು

ಮಾತುಗಳಿಗೆ ಅರ್ಧ ವಿರಾಮದಂತೆ ಮೌನವಿರಲು ಚೆನ್ನವಿತ್ತು
ಅರ್ಧ ವಾಕ್ಯಕೆ ಪೂರ್ಣವಿರಾಮವನಿಟ್ಟು ನಡೆದಿರುವೆ ಸರಿ ಬಿಡು

ಭರಪೂರ ಕನಸುಗಳು ಹೇಗೆ ಬತ್ತಿಹೋದವೋ ಸೋಜಿಗ ನನಗೆ
ನಿರ್ಲಿಪ್ತ ಭಾವಗಳನು ಸುತ್ತಿಕೊಂಡು ನಟಿಸುತಿರುವೆ ಸರಿ ಬಿಡು

“ರೇಖೆ” ನಿಂತಲ್ಲೇ ನಿಲ್ಲುವ ಮರ ಹಾರುವ ರೆಕ್ಕೆಗಳ ನೆಚ್ಚಬಾರದು
ಎದೆಗಾಯದ ಮೇಲೆ ಹೂವಿಟ್ಟು ಅಭಿನಂದಿಸಿರುವೆ ಸರಿ ಬಿಡು

ರೇಖಾ ಭಟ್


Leave a Reply

Back To Top