ನಾಯಕ

ಕಾವ್ಯಯಾನ

ನಾಯಕ

ಕಾಂತರಾಜು ಕನಕಪುರ

GoodTherapy | The Benefits of Mask Making in a Journey toward Wholeness

ಅವನು,
ಗಾಂಧಿ ಮೊದಲ್ಗೊಂಡು
ಎಲ್ಲಾ ಮಹಾತ್ಮರುಗಳನು
ಅವರ ಆದರ್ಶಗಳ ಸಮೇತ
ತನ್ನ ಕಚೇರಿಯ ಗಟ್ಟಿ ಗೋಡೆಗಳಿಗೆ
ದಪ್ಪ ಕಟ್ಟುಗಳ ಚಿತ್ರಪಟದಲ್ಲಿ ಸೇರಿಸಿ
ಮೊಳೆ ಜಡಿದು ನೇತು ಹಾಕಿ
ತಪ್ಪದೆ ದಿನಾಲೂ ಪುಷ್ಪಾರ್ಚನೆ ಮಾಡಿ
ಪ್ರಚಾರ ಪಡೆಯುತಿರುವವ

ಅವನೇನು ಸಾಮಾನ್ಯನಲ್ಲ;
ಅಚ್ಯುತನ ಜನನ ತಾಣ ಪ್ರಾಪ್ತಿ ಕೆಲಸಗಳಲಿ
ಅನವರತ ನಿರತನಾದರೂ ಸಿಕ್ಕಿಬೀಳದವ
ಹೀಗಾಗಿಯೇ ಅವನು ಅಗ್ರಪಂಕ್ತಿಯ ನಾಯಕ

ಅವನು ಸುಲಭ ಸಂತನಲ್ಲ;
ದುರಿತ ಕಾಲದಲ್ಲಿಯೂ ತನ್ನ
ಹರಕು ಬಾಯಿಯನ್ನು ತೆರೆದೇ ಇರುವ
ಹರಿತ ನಾಲಿಗೆಯ ಅಸ್ಖಲಿತ ವಾಗ್ಮಿ
ಹೀಗಾಗಿಯೇ ಅತ್ಯಂತ ಜನಪ್ರಿಯ ನಾಯಕ

ಅವನು ನಿಜವಾಗಿಯೂ ಅಸಾಮಾನ್ಯ;
ಮನದೊಳಗಿನ ಕಿಚ್ಚಿಗೆ ಕವುರು ಹಾಕಿ
ಮನೆಗಳನ್ನು ಬೇಯಿಸಬಲ್ಲ ಚತುರ
ಹೀಗಾಗಿಯೇ ಚುನಾವಣಾ ಸಮಯದಲ್ಲಿ
ಅವನ ಮೆರವಣಿಗೆಗೆ ಬೇಡಿಕೆ
ಹೆಷ್ಷಿಸುವುದೇ ಹಿಂಬಾಲಕರ ಕಾಯಕ

ತಾನು ಮಾತ್ರವಲ್ಲದೆ, ತನ್ನ
ಪಟಾಲಂ ಎಂಬ ಸಾಕು ನಾಯಿ ರೂಪದ
ಸೀಳುನಾಯಿಗಳನ್ನು ಬಿಡದೆ ಬೆಂಬತ್ತಿಸಿ
ಎದುರಾಳಿಗಳನ್ನು ಹಣಿಯುವ ಚಾಣಕ್ಯ
ನೀತಿಯ ನಿಶಿತಮತಿ ಹೀಗಾಗಿ ಅವನೇ
ಆ ಗುಂಪಿನೆಲ್ಲರ ಲಲಾಟ ತಿಲಕ

ತನ್ನ ಬಂಧುಗಳ ಭವ್ಯ ಭವಿಷ್ಯಕ್ಕೆ
ಸದಾ ವ್ಯಾಕುಲನಾಗಿ ಅವರಿಗಾಗಿ
ಹಗಲಿರುಳೂ ದುಡಿವ ಕಾರಣ
ಅವನು ಕೇವಲ ನಾಯಕನೇ?
ಅವನಲ್ಲದಿರೆ ಮತ್ಯಾರು ಪ್ರಜಾಸೇವಕ?!


One thought on “ನಾಯಕ

Leave a Reply

Back To Top