Month: October 2021

“ಅವತಾರ ಮತ್ತು ಹಾರುವ ಕುದುರೆ “

ಕಲಘಟಗಿಯ ಸಮೀಪದ ಕಾರವಾರ ಸರಹದ್ದಿನ ಕಿರವತ್ತಿಯ ಹತ್ತಿರದ ಬೈಲಂದೂರ ಗೌಳಿವಾಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ನಾಗರಾಜ ಹುಡೇದ ಅವರು ಸಾಹಿತ್ಯದ ಓದು ಒಲವಿನ ಸೆಳೆತದಿಂದ ಪರಿಚಿತರಾದವರು.
ನಾಗರಾಜ ಓರ್ವ ಕವಿಹೃದಯದ ಶಿಕ್ಷಕರು. ‘ನಗುವ ತುಟಿಗಳಲ್ಲಿ’ ‘ಭರವಸೆ’ ದೊಡ್ಡವರ ಕವನಸಂಕಲನಗಳನ್ನು ಪ್ರಕಟಿಸಿ ಓದುಗರ ವಲಯಕ್ಕೆ ಹರಿಬಿಟ್ಟಿದ್ದಾರೆ. ಇದಲ್ಲದೆ ತಾವು ಸೇವೆ ಸಲ್ಲಿಸುತ್ತಿರುವ ಆ ಊರಿನ ಗೌಳಿ ಜನಾಂಗದ ಭಾಷೆಯನ್ನು ಅರಿತುಕೊಂಡು ಕನ್ನಡ ಇಂಗ್ಲೀಷ್ ಭಾಷೆಯ ಶಬ್ದಕೋಶವನ್ನು ರಚಿಸಿ ಪ್ರಕಟಿಸಿದ್ದಾರೆ.
ಮಕ್ಕಳಲ್ಲಿ ಸಾಹಿತ್ಯ ಪ್ರೀತಿ ಬೆಳೆಸಲು ಹಾಗೂ ಪೋಷಿಸಲು ಸ್ವತಃ ‘ ಅರಳು ಮೊಗ್ಗು’ ಎನ್ನುವ ದ್ವೈಮಾಸಿಕ ಮಕ್ಕಳ ಪತ್ರಿಕೆಯನ್ನು ಪ್ರಕಟಿಸುವ ಸಾಹಸಕ್ಕೂ ಕೈ ಹಾಕಿ ಯಶಸ್ವಿಯಾಗಿದ್ದಾರೆ. ದೊಡ್ಡವರು, ಚಿಕ್ಕವರು ಬರೆದ ಕಥೆ,ಕವನಗಳು ಇಂದಿಗೂ ಪ್ರಕಟವಾಗುತ್ತಿವೆ. ಈ ಪತ್ರಿಕೆಯನ್ನು ಯಲ್ಲಾಪೂರ ತಾಲೂಕಿನ ಬಹುತೇಕ ಶಾಲೆಗಳಿಗೂ ತಲುಪಿಸುತ್ತಿದ್ದಾರೆ.
ಇತ್ತೀಚಿಗೆ ಮಕ್ಕಳಿಗಾಗಿ ಹೊಸ ಬಗೆಯ ಕವಿತೆಗಳನ್ನು ರಚಿಸಿ ಪತ್ರಿಕೆಗಳಲ್ಲಿ ಪ್ರಕಟಿಸುವ ದಾವಂತ ಮುಂದುವರೆದಿದೆ. ಹೊಸ ಬಗೆಯ ಪುಸ್ತಕಗಳನ್ನು ಓದುತ್ತಾ ಅವುಗಳ ಕುರಿತಾಗಿ ಪರಿಚಯಾತ್ಮಕ ಬರೆದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ಹೀಗೆ ಓದಿನೊಂದಿಗೆ, ಅಧ್ಯಯನದೊಂದಿಗೆ ಬರವಣಿಗೆ ಸಾಗಿದೆ.
ಇದರ ಜೊತೆಯಲ್ಲಿ ಮಕ್ಕಳಿಗಾಗಿ ಹೊಸ ಬಗೆಯ ಕತೆಗಳನ್ನು ರಚಿಸುತ್ತಿದ್ದಾರೆ ಇವೆಲ್ಲಾ ನಾಗರಾಜ ಹುಡೇದ ಅವರ ಸಾಹಿತ್ಯ ಸಮೃದ್ಧಿಯ ಕೆಲಸಗಳು.
ಹೊಸ ರಚನೆಗಾಗಿ ಹೊಸ ಓದಿಗೆ ನಮ್ಮನ್ನು ನಾವು ತೆರದುಕೊಳ್ಳಬೇಕು ಅಂದಾಗ ಹೊಸಹೊಳವಿನ ಬರವಣಿಗೆಗೆ ಅಣಿಯಾಗಬಹುದು.
ಮಕ್ಕಳ ನಡುವೆ ಸದಾ ಕಳೆಯುವ ನಾಗರಾಜ ಬಿಡಿ ಬಿಡಿಯಾದ ಎಲ್ಲಾ ಕಥೆಗಳನ್ನು ಒಗ್ಗೂಡಿಸಿ ಪ್ರಥಮ ಮಕ್ಕಳ ಕಥಾಸಂಕಲನ ಪ್ರಕಟಿಸಿದ್ದಾರೆ.
ಹದಿಮೂರು ಕಥೆಗಳಿವೆ. ಹತ್ತರಿಂದ ಮೇಲ್ಪಟ್ಟ ವಯೋಮಾನದ ಮಕ್ಕಳ ಓದಿಗೆ ನಿಲುಕಬಲ್ಲ ಕಥೆಗಳಿವು. ಕುತೂಹಲದಿಂದ ಸಾಗುವ ಕತೆಗಳ ಕಥಾತಂತ್ರ, ಬೆರಗುಗೊಳಿಸುವ ಕತೆಗಳ ಶೀರ್ಷಿಕೆಗಳು ಸಂಕಲನದ ವಿಶೇಷತೆ. ಬಹತೇಕ ಕತೆಗಳು ಪರಿಸರದ ಕಾಳಜಿಯನ್ನು ವ್ಯಕ್ತಪಡಿಸುತ್ತವೆ.
‘ಗೂಗಲ್ ಭೀಮಪ್ಪ’ ಈ ಕಥೆಯಲ್ಲಿ ಅಪ್ಪ ತನ್ನ ಮಗನಿಗೆ ತನ್ನ ಬಾಲ್ಯದ ಕತೆ ಹೇಳುವಾಗ ಭೀಮಪ್ಪ ಅಜ್ಜ ಏನೆಲ್ಲಾ ಸಂಗತಿಗಳನ್ನು ಹೇಳಿ ನಗಿಸುತ್ತಿದ್ದ. ಆತ ನಮ್ಮ ಪಾಲಿಗೆ ನಡೆದಾಡುವ ವಿಶ್ವಕೋಶವಾಗಿದ್ದ ಎಂದೆಲ್ಲಾ ವಿಷಯಗಳನ್ನು ಮಗನಿಗೆ ಹೇಳುವ ಬಗೆ ಕುತೂಹಲ ಹುಟ್ಟಿಸುತ್ತದೆ. ಈಗ ಮೊಬೈಲ್ ಆ ಸ್ಥಳವನ್ನು ಆಕ್ರಮಿಸಿಕೊಂಡಿದೆ ಎನ್ನುವ ಅಂಶ ಬದಲಾವಣೆ ಜಗದ ನಿಯಮ ಎನ್ನುವ ಸಂದೇಶ ಸಾರುತ್ತದೆ. ಇವೆಲ್ಲಾ ಮಕ್ಕಳಿಗೆ ಬಲು ಪ್ರೀತಿ ನೀಡುತ್ತದೆ.
ಮಕ್ಕಳ ಹಸಿರು ಪ್ರೀತಿಯ ಅನಾವರಣದ ಬಗ್ಗೆ ” ರಾಪಾ ದಿಬ್ಬ” ಕತೆ ಹೇಳುತ್ತದೆ. ಮಲೆನಾಡಿನ ಬೆಟ್ಟಗಳಲ್ಲಿ ಹಸಿರು ಹೆಚ್ಚಿಸುವ ಪ್ರಯತ್ನ ಇಲ್ಲಿದೆ. ಮಳೆಗಾಗಿ ಮಕ್ಕಳು ಕಪ್ಪೆಯ ಮದುವೆಗಾಗಿ ಕಪ್ಪೆಗಳನ್ನು ಹಿಡಿಯುವುದಕ್ಕಾಗಿ ತಡಕಾಡುವ ಮೋಜಿನ ಸಂಗತಿಗಳನ್ನು ” ಕಪ್ಪೆಗಳ ಮದುವೆ” ಕತೆಯಲ್ಲಿ ಕಾಣಬಹುದು.
” ಮಾತಾಡುವ ಮರಗಳು” ಪ್ಯಾಂಟಸಿಯ ಗುಣಹೊಂದಿರುವ ವಿಶೇಷ ಕಥೆಯಾಗಿದೆ. ಈ ಕತೆಯಲ್ಲಿ ಗಿಡ, ಮರ, ಬಳ್ಳಿಗಳು ಮನುಷ್ಯರಂತೆ, ನಡೆಯಬಲ್ಲವು. ತಮ್ಮದೇ ಆದ ಭಾಷೆಯಲ್ಲಿ ಮಾತಾಡಬಲ್ಲವು. ಮನಸ್ಸಿನ ಭಾವನೆಗಳನ್ನು ತಿಳಿಯಬಲ್ಲವು. ಗದುಗಿನ ಗುಂಡಣ್ಣ ಸಮುದ್ರಯಾಣದಲ್ಲಿ ಬಿರುಗಾಳಿಗೆ ಸಿಕ್ಕು ವಿಚಿತ್ರ ದ್ವೀಪದಲ್ಲಿ ಎಚ್ಚರಗೊಂಡಾಗ ಆಗುವ ವಿಚಿತ್ರ ಘಟನೆಗಳು ಮಕ್ಕಳಿಗೆ ಮೋಜು, ಖುಶಿ ನೀಡುತ್ತವೆ.
“ಯಾರು ಹೆಚ್ಚು” ಇದು ಜನಪದ ಶೈಲಿಯ ಕತೆಯಾಗಿದೆ. ಇಲ್ಲಿಯ ಕತೆಗಳಲ್ಲಿ ಅಜ್ಜನ ಪಾತ್ರ ಸೃಷ್ಠಿಸಿ ಆತನಿಂದಲೇ ಕತೆ ಹೇಳಿಸುವ ಶೈಲಿ ಓದುಗನಿಗೆ ಹಿಡಿಸುತ್ತದೆ.
“ಬಕ್ಕೂ ಅಂದ್ರೆ ಬಕ್ಕೂ” “ಹಾಂ! ಅದೇ ಬಸಪ್ಪ” ” ಬಂಗಾರದ ಸರ” ” ಸೊಂಡಿಲು, ಜಿಂಕೆಗಳ ಮೈ ಮುಟ್ಟೋಣ ಬನ್ನಿ” “ಬಂಗಾಳಿ ಮರ” ಕಬ್ಬಿನ ಗದ್ದೆ ಮತ್ತು ಗೊದ್ದಿರುವೆ” ಓದುಗರಿಗೆ ಮೆಚ್ಚಿಗೆಯಾಗುವ ಹಾಗೂ ಗಮನ ಸೆಳೆಯುವ ಕತೆಗಳಾಗಿವೆ. ಪ್ಯಾಂಟಸಿ, ಜಾನಪದ, ಹಾಗೂ ವಾಸ್ತವ ಅಂಶ ಇರುವ ವೈವಿಧ್ಯಮಯ ಕತೆಗಳಿವೆ.
ಗ್ರಾಮ್ಯ ಭಾಷೆಯ ಸಹಜ ಸಂಭಾಷಣೆಗಳು, ನವೀರಾದ ನಿರೂಪಣೆ ಇವು ಕತೆಗಳ ಸೊಗಸು ಹೆಚ್ಚಿಸಿವೆ. ಸಂತೋಷ ಸಸಿಹಿತ್ಲು ಬರೆದ ಚಿತ್ರಗಳು, ಮುಖಪುಟ ಆಕರ್ಷಕವಾಗಿವೆ.
ನಾಗರಾಜ ಹುಡೇದ ಅವರು ಪ್ರಥಮ ಪ್ರಯತ್ನದಲ್ಲಿ ಮಕ್ಕಳಿಗೆ ಸುಂದರವಾದ ಕತೆಗಳನ್ನು ನೀಡಿದ್ದಾರೆ.
ಮಕ್ಕಳ ಸಾಹಿತ್ಯಕ್ಕೆ ಮುಂಬರುವ ದಿನಗಳಲ್ಲಿ ವಿಭಿನ್ನ ವಿಷಯ ವಸ್ತುಗಳನ್ನು ಹೊತ್ತ ಕತೆಗಳನ್ನು ರಚನೆ ಮಾಡುವಂತಾಗಲಿ. ಉತ್ತಮ ಕೃತಿ ನೀಡಿದ್ದಕ್ಜೆ ಅವರನ್ನು ಅಭಿನಂದಿಸುತ್ತಾ, ಶುಭಕೋರುತ್ತೇನೆ.
– ವೈ,ಜಿ,ಭಗವತಿ ಕಲಘಟಗಿ 9448961199

ಕನ್ನಡದ ಕವಿಗಳು ಸಾಹಿತ್ಯ ರಚನೆಗೆ ಬಹುಮೂಲಗಳಿಂದ ಪ್ರೇರಣೆ ಪಡೆವಾಗ ತೋರುವ ಭಾಷಾತೀತ ಧರ್ಮಾತೀತ ದೇಶಾತೀತ ಮುಕ್ತತೆಯನ್ನು, ದೇಶಕಟ್ಟುವ ತತ್ವವನ್ನಾಗಿಯೂ ರೂಪಿಸುತ್ತಾರೆ.

ಮತ್ತೊಂದು ಅಪಿಡೆವಿಟ್ಟು

ಅದೆಷ್ಟು ಅಡ್ಡ ಹಾದಿಗಳು
ಕಳ್ಳಬಂಧಗಳು, ಕಣ್ಣ ತಪ್ಪಿಸಿ
ಜಿಗಿದ ಬೇಲಿಗಳು, ನಿನಗೆ ನೀನೆ ಮಾಡಿಕೊಂಡ ಸಮರ್ಥನೆಗಳು!

ಮಣ್ಣಿನೊಂದಿಗೆ

ನೀರಧಾರೆ, ಬಿಸಿಲಝಳ,ಅಷ್ಟಿಷ್ಟು ಪ್ರೀತಿ
ಬೀಜ ಅದೋ ಗರ್ಭ ಧರಿಸಿ
ಬೆಳಕ ಸಲಿಗೆಯಲ್ಲಿ ಸಂಧಾನ!

ನೀನಿಲ್ಲದ ಮನ

ಧಾಳಿಯಿಡುವ ನೆನಪುಗಳಿಗೇನು ಗೊತ್ತು
ಮನದ ನೋವಿನ ಆಕ್ರಂದನ
ಅಂಕೆಯಿಲ್ಲದೆ ಬರುವ ಕನಗಳೋ
ಹುಚ್ಚು ಆಸೆಗಳೊಂದಿಗೆ
ಸತ್ತು ಮಲಗಿಸುತಿವೆ

ಗಝಲ್

ಮಳಲ ರಾಶಿಯ ತೀರದ ಉದ್ದಕ್ಕೂ ಕಾಲನ 
ಹೆಜ್ಜೆಗಳ ಗುರುತು 
ಅಳಲ ಮರೆಸಿ ಬಾಳಿನ ಬಟ್ಟಲಿಗೆ ಹರುಷ 
ಸುರಿದೆಯಾ ನೀನು

Back To Top