ರಹಮತ್ ತರೀಕೆರೆ ಬರೆಯುತ್ತಾರೆ

ಬೇಂದ್ರೆಯವರ ದೇಶತತ್ವ

ಪ್ರಾಚೀನ ಕವಿಗಳು ತಮ್ಮನ್ನು ಪ್ರಭಾವಿಸಿದ ಪೂರ್ವಕವಿಗಳನ್ನು ಸ್ಮರಿಸುವ ಪದ್ಧತಿ, ಆಧುನಿಕ ಕಾಲದಲ್ಲೂ ಮುಂದುವರೆಯಿತು.  ಕುವೆಂಪು `ರಾಮಾಯಣ ದರ್ಶನ’ದಲ್ಲಿ `ಹೋಮರಗೆ ವರ್ಜಿಲಗೆ ಡಾಂಟೆ ಮೇಣ್ ಮಿಲ್ಟನಗೆ ನಾರಣಪ್ಪಂಗೆ’ ಎಂದು ಯಾದಿ ಕೊಟ್ಟು, ಕಡೆಯಲ್ಲಿ `ಕಾಲದೇಶದ ನುಡಿಯ ಜಾತಿಯ ವಿಭೇದಮಂ ಲೆಕ್ಕಿಸದೆ ಜಗತೀ ಕಲಾಚಾರ್ಯರೆಲ್ಲರ್ಗೆ’ ನಮಿಸುವರು. ವಿಶ್ವಮಾನವ ತತ್ವ ರೂಪಿಸುವ ಕವಿಯು ವಿಶ್ವಾತ್ಮಕವಾದ ಪ್ರೇರಣೆಗಳನ್ನು ಪಡೆವ ವಿಶಿಷ್ಟ ಕ್ರಮದಂತೆ ಈ ನಮನವಿದೆ.

ಬೇಂದ್ರೆಯವರೂ ಪೂರ್ವಕವಿಗಳ ಸ್ಮರಣೆಯಲ್ಲಿ ಕವಿತೆ-ಲೇಖನ ಬರೆಯುತ್ತಾರೆ. ಈ ದಿಸೆಯಲ್ಲಿ ಅವರ `ಗುರು-ಚತುರ್ಮುಖ’ ಲೇಖನ ಮಹತ್ವದ್ದಾಗಿದೆ. ಇದರಲ್ಲಿ ಕಾಳಿದಾಸ, ಜಗನ್ನಾಥ ಪಂಡಿತ, ಲಕ್ಷ್ಮೀಶ, ಸರ್ವಜ್ಞ, ಕೀಟ್ಸ್, ಶೆಲ್ಲಿ, ಯೇಟ್ಸ್, ಕಝಿನ್ಸ್, ವಿನೋಬಾ, ಗಾಂಧಿ, ಜಿದ್ದು ಮುಂತಾದವರ ಯಾವ್ಯಾವ ಗುಣದಿಂದ ಪ್ರೇರಿತರಾದೆವೆಂದು ವಿವರಿಸುವರು.  ಆದರೆ ಶ್ರದ್ಧೆಯಿಂದ ಚರ್ಚಿಸುವುದು ನಾಲ್ವರನ್ನೇ: ಐರಿಶ್ ಕವಿ ಏ.ಈ., ಲೆಬೆನಾನ್ ಮೂಲದ ದಾರ್ಶನಿಕ ಖಲೀಲ್ ಜಿಬ್ರಾನ್, ಬಂಗಾಳದ ರವೀಂದ್ರನಾಥ ಟಾಗೂರ್ ಹಾಗೂ ಮಹರ್ಷಿ ಅರವಿಂದ. ಬೇಂದ್ರೆ, `ನಾನು’ ಕವನದಲ್ಲಿ ತಮ್ಮನ್ನು ಐದು ತಾಯಂದಿರ ಪುತ್ರನೆಂದು ಬಣ್ಣಿಸಿಕೊಳ್ಳುವಂತೆ, ಇಲ್ಲಿ ನಾಲ್ಕು ಗುರುಗಳ ಶಿಸುಮಗನಾಗಿ ಚಿತ್ರಿಸಿಕೊಳ್ಳುವರು.  `ಗುರು ಚತುರ್ಮುಖ’ ಲೇಖನದ ಹೆಸರು ಗುರುಗಳ ಸಂಖ್ಯೆಯನ್ನು ಮಾತ್ರವಲ್ಲದೆ ಸೃಷ್ಟಿಶೀಲತೆಯ ಪ್ರತೀಕವಾದ ಬ್ರಹ್ಮನನ್ನೂ, ನಾಲ್ಕು ಕವಿಗುರುಗಳಿಂದ ಪಡೆದ ಶಕ್ತಿಯ ನಾಲ್ಕು ಆಯಾಮಗಳನ್ನೂ ಸೂಚಿಸುತ್ತಿದೆ. ಈ ಗುರುಗಳನ್ನು ಕುರಿತ ಅವರ  ಕೆಲವು ಹೇಳಿಕೆ ಹೀಗಿವೆ: 

ಅ.“ಏ.ಈ. ಕವಿ ನನ್ನ ಜೀವನದ ಲೋಲಕದಲ್ಲಿ ಕಿರಣದಂತೆ ಸೇರಿದ್ದಾನೆ’’

 ಆ.“ಜಿಬ್ರಾನ ಎಣ್ಣೆ ಮಜ್ಜನ ಮಾಡಿಸಿ ಎರೆದು, ತೊಟ್ಟಿಲ ನಿದ್ರೆಯಲ್ಲಿಯೇ ಕನಸಿನ ಆಕಾಶಕ್ಕೆ ಎತ್ತೆತ್ತಿ ಒಯ್ದಿದ್ದಾನೆ…ಜಿಬ್ರಾನ್ ಅರಬ್ಬಿ ಭಾಷೆಯಲ್ಲಿ ಮೂಡಿದ ಇಸ್ಲಾಂ ಸೂಫಿಗಳ ಉಸಿರುಂಡಿದ್ದ; ಆದರೆ ಅವನ ಜೀವ ಜೀಸಸ್ಸಿನ ಸತ್ವದೊಡನೆ ಸಾಮರಸ್ಯಗಂಡಿತ್ತು. `ಪ್ರವಾದಿ’ `ಮಾನವಪುತ್ರ ಜೀಸಸ್’ ಎಂಬ ಎರಡು ಕೃತಿಗಳಿಂದ ನನ್ನ ಹೃದಯ ಬೆಳಗಿದ್ದಾನೆ’’

ಇ. “ವ್ಯಕ್ತಿ-ಸಮಷ್ಟಿ ಪರಸ್ಪರ ಪೋಷಕ, ಪೂರಕ, ಪೂರ್ಣದಿಂದ ಪೂರ್ಣದತ್ತ ಪರಿವರ್ಧಿಸುವ ಸಂಬಂಧ ಎಂದು ಆಗದಿದ್ದರೆ, ಜೀವನವೇ ವಿಕೃತಿಯಾಗುತ್ತದೆ. ಈ ಎಚ್ಚರ ಮೊದಲು ಸ್ಪಷ್ಟವಾಗಿ ತಂದುಕೊಟ್ಟ ಸಾಹಿತಿ ರವೀಂದ್ರನಾಥ ಟಾಗೂರರು’’.

ಈ.“ಶ್ರೀ ಅರವಿಂದರ ಜ್ಞಾನ-ವಿನ್ಯಾಸವು ಧೈರ್ಯ ಕೊಟ್ಟಿದೆ’’

ಇಲ್ಲಿ ನೆನಕೆಗೊಂಡಿರುವ ನಾಲ್ವರೂ ದಾರ್ಶನಿಕ ಕವಿಗಳು; ಆಲೋಚನ ಕ್ರಮದಲ್ಲಿ ಆಧುನಿಕರು; ವಿಶ್ವಮಾನವತೆಯ ಪ್ರತಿಪಾದಕರು; ಪಶ್ಚಿಮದವರು ಇಲ್ಲವೇ ಪಾಶ್ಚಿಮಾತ್ಯ ನಾಗರಿಕ ಪ್ರಭಾವದಿಂದ ರೂಪುಗೊಂಡವರು. ನಮ್ಮ ಲೇಖಕರು ಸಾಹಿತ್ಯಕ್ಕಾಗಲಿ ಬಾಳದರ್ಶನಕ್ಕಾಗಲಿ ಪ್ರೇರಣೆ ಪಡೆವಾಗ ಆಧುನಿಕ-ಪ್ರಾಚೀನ, ಪಾಶ್ಚಿಮಾತ್ಯ-ಪೌರ್ವಾತ್ಯ ಎಂದು ಭೇದ ಮಾಡುವುದಿಲ್ಲ. ಒಳಚೈತನ್ಯವನ್ನು ಬೆಳಗಿಸುವ ದೀಪದ ಕುಡಿಯನ್ನು ಎಲ್ಲಿಂದಲಾದರೂ ಸ್ವೀಕರಿಸುವ ಉದಾರತೆ ಮತ್ತು ಅರಗಿಸಿಕೊಳ್ಳುವ ಜೀರ್ಣಶಕ್ತಿ ತೋರುವರು. ಈ ಆತ್ಮವಿಶ್ವಾಸ ಅಹಮಿಕೆ ಆಗದಂತೆ ಜಾಗ್ರತೆ ವಹಿಸುವರು. ಬೇಂದ್ರೆಯವರ `ಭಾರತದ ಗುರುವೇ’ ಕವನದಲ್ಲಿರುವ ಆರ್ತತೆ ಗಮನಿಸಬೇಕು:

ಮೂಡಲಕ ಮೂಡೀದಿ ಪಡುವಲಕ ಓಡೀದಿ, ದಿಕ್ಕೆಲ್ಲ ಕೂಡೀದಿ ಗುರುದೇವಾ

ಹಾಡಿ ಹಣ್ಣಾದಿ ನೀ ಜಗದಿ ಕಣ್ಣಾದಿ, ನೀ ದುಡಿದು ಸಣ್ಣಾದಿ ನೀ ಗುರುದೇವಾ

ನಿನ್ಹಾಂಗ ಆಡಾಗ ನಿನ್ಹಾಂಗ ಹಾಡಾಕ, ಪಡೆದು ಬಂದಿರಬೇಕೋ ಗುರುದೇವಾ

ಇಲ್ಲಿ ಟಾಗೂರರನ್ನು ಲೋಕಬಳಕೆಯಂತೆ `ಗುರುದೇವಾ’ ಎಂದು ಸಂಬೋಧಿಸಲಾಗುತ್ತಿದ್ದರೂ ಅದರೊಳಗೆ ನಮ್ರ ಶಿಷ್ಯಭಾವವಿದೆ. ಈ ಶಿಷ್ಯಭಾವವು ಗುರುಗಳನ್ನು ತರ್ಜುಮೆ ಮಾಡುವಲ್ಲೂ ಚಾಚಿಕೊಳ್ಳುತ್ತದೆ. ಬೇಂದ್ರೆ ಈ ನಾಲ್ಕೂ ಕವಿಗಳನ್ನು ಕನ್ನಡಿಸಿದರು. ಅನುವಾದವೂ ಗುರು ಕೃತಜ್ಞತೆಯ ಭಾಗವೇ.

Rabindra Jayanti 2021: Here Are Some Of The Most Famous Works Of Rabindranath  Tagore

 ಕುತೂಹಲವೆಂದರೆ, ಲೋಕದ ಅನುಭಾವಿ ಸಂತಕವಿಗಳ ಕುರಿತು ಒಲವು ತೋರುವ ಬೇಂದ್ರೆ, ಸ್ಥಳೀಯ ಸಂತರ ಬಗ್ಗೆ ಅನಾಸಕ್ತರಾಗಿದ್ದುದು. ಅವರ ಪರಿಸರದಲ್ಲಿ ಗರಗದ ಮಡಿವಾಳಪ್ಪ, ಸಿದ್ಧಾರೂಢ, ಕಳಸದ ಗೋವಿಂದಭಟ್ಟ, ಶರೀಫ, ನಾಗಲಿಂಗಸ್ವಾಮಿ ಇದ್ದರು. ಹೆಚ್ಚಿನವರು ಬೇಂದ್ರೆಯವರಂತೆ ಅದ್ವೈತಿಗಳೂ ಶಾಕ್ತರೂ ಆಗಿದ್ದವರು. ಆದರೂ ಬೇಂದ್ರೆ ಇವರ ಜತೆ -`ಸಮಗಾರ ಭೀಮವ್ವ’ನ ಶಿವಪ್ರಕಾಶರಂತೆ- ಅನುಸಂಧಾನ ಮಾಡಲಿಲ್ಲ. `ಕವಿ ಚತುರ್ಮುಖ’ದಲ್ಲಿ ಚರ್ಚೆಗೊಳಪಟ್ಟಿರುವ ದಾರ್ಶನಿಕ ಕವಿಗಳಂತೆ ಇವರು ಆಧುನಿಕ ಪ್ರಜ್ಞೆಗೆ ಹೊರತಾಗಿದ್ದರೆಂಬುದು ಕಾರಣವೇ? ಅಧ್ಯಾತ್ಮ-ಅನುಭಾವಗಳು ಹೊಸಕಾಲದ ಮೌಲ್ಯಾದರ್ಶಗಳ ಜತೆ ಕಸಿಗೊಂಡು ಮರುಹುಟ್ಟು ಪಡೆವ ಸೃಜನಶೀಲ ತಹತಹ ಅವರಿಗಿತ್ತ?

ಕನ್ನಡದ ಲೇಖಕರ ಪೂರ್ವಕವಿ ಸ್ಮರಣೆಗೂ ಅವರ ಬರೆಹ-ಬದುಕಿಗೂ ನಡುವೆ ಯಾಂತ್ರಿಕವಾಗಿ ನಂಟು ಹುಡುಕುವುದು ಕಷ್ಟ. ಉಂಡಅನ್ನ ರಕ್ತಗತವಾಗಿರುವಂತೆ ಶಕ್ತ  ಪ್ರಭಾವಗಳು ಕರಗಿ ರೂಪಾಂತರ ಪಡೆಯುತ್ತವೆ. ಹಲವು ಮೂಲಗಳಿಂದ ತಂದ ಅದಿರನ್ನು ಸೃಜಶೀಲತೆಯ ಕುಲುಮೆಯಲ್ಲಿ ಕರಗಿಸಿ ಹೊಸವಿನ್ಯಾಸದಲ್ಲಿ ಅವರು ಎರಕ ಹೊಯ್ಯುವರು. ಕುವೆಂಪು ಬೇಂದ್ರೆ ಪುತಿನ ಅವರಲ್ಲಿ ಅದ್ವೈತವು ಮರುಹುಟ್ಟುಗೊಂಡಿದ್ದು, ಲೋಹಿಯಾ ಚಿಂತನೆಗಳು ತೇಜಸ್ವಿ-ಲಂಕೇಶರಲ್ಲಿ ಹೊಸಕೊನರು ಪಡೆದಿದ್ದು, ಹೊಲೆಮಾದಿಗರ ಹಾಡು’ಗಳಲ್ಲಿ ಮಾರ್ಕ್ಸವಾದ ರೂಪಾಂತರಗೊಂಡಿದ್ದು ಇದೇ ವಿನ್ಯಾಸದಲ್ಲಿ ತಾನೇ? ಕನ್ನಡ ಪ್ರತಿಭೆಯ ವಿಶಿಷ್ಟ ಚಹರೆಯಿದು. ಯಾವತ್ತೂ ಮರುಹುಟ್ಟಿನ ಆಶಯವನ್ನು ನಿರ್ಧರಿಸುವುದು ವರ್ತಮಾನದ ಒತ್ತಾಸೆಗಳೇ.

Ram Manohar Lohia 54th Death Anniversary 2021 Leader Of Goa Satyagraha Lets  Remember This Hero Through This Article - डॉ.राम मनोहर लोहिया की 54वीं  पुण्यतिथि: गोवा सत्याग्रह के महान नायक रहे ...

ಜಿದ್ದು ಕೃಷ್ಣಮೂರ್ತಿ ಮುಂತಾದ ದಾರ್ಶನಿಕರನ್ನು ಬೇಂದ್ರೆ `ಗುರು’ಗಳೆಂದು ಕರೆದರೂ,  ಕಾವ್ಯ-ದರ್ಶನಗಳು ಏಕೀಭವಿಸಿದ ಅರವಿಂದ, ಟಾಗೂರ್, ಏ.ಈ., ಜಿಬ್ರಾನರಂತಹ ದಾರ್ಶನಿಕ ಕವಿಗಳೇ ಅವರಿಗೆ ಮುಖ್ಯ. ದರ್ಶನ ಶಕ್ತಿಯಿಲ್ಲದ ಕಾವ್ಯದ ಅಥವಾ ಕಾವ್ಯದ ಆಯಾಮ ಇಲ್ಲದ ದರ್ಶನದ ಬಗ್ಗೆ ಅವರಿಗೆ ಪ್ರೀತಿಯಿಲ್ಲ. ಆದರೆ ತಾವು ಸ್ಮರಿಸುವ ಕವಿಗುರುಗಳ ಬಗ್ಗೆ ಎಷ್ಟೇ ನಮ್ರತೆಯಿದ್ದರೂ, ಅದರೊಳಗೆ ಗುರುಗಳನ್ನು ಮೀರಿಸುವಂತೆ ಕಾವ್ಯಕಟ್ಟುವ ಆತ್ಮವಿಶ್ವಾಸವೂ ಪ್ರಕಟವಾಗುತ್ತದೆ. “ನನ್ನ ಗುರುಗಳ ಆಳ ಎತ್ತರ ವಿಸ್ತಾರ ವೈಭವ ನನಗಿಲ್ಲ. ಸಾಧಕ ಶಿಷ್ಯನಿಗೆ ಅವುಗಳ ಅಗತ್ಯವಿಲ್ಲ. ಅಧ್ಯಾತ್ಮ ಪ್ರಸಾದ ಚಿತ್ರಪ್ರಸಾದ ಅರ್ಪಣ-ದಪರ್ಣ ಇವು ಸಾಗಿದರೂ ಸಾಕು. ಅಂಬಿಕಾತನಯನ ಕಾವ್ಯಲೀಲೆ ಬೇಂದ್ರೇನ ಉದ್ಧಾರ ಶಾಲೆ’’ ಎಂಬ ಹೇಳಿಕೆಯಲ್ಲಿದು ಕಾಣುತ್ತದೆ. ಇದು `ವ್ಯಾಸ ಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನೀಸುವೆನ್, ಕವಿವ್ಯಾಸನೆಂಬ ಗರ್ವಮೆನಗಿಲ್ಲ’ ಎಂಬ ಪಂಪನನ್ನು ನೆನಪಿಸುತ್ತದೆ; ತನ್ನನ್ನು `ಕುಮಾರವ್ಯಾಸ’ನೆಂದು ಎಂದು ಕರೆದುಕೊಂಡ ನಾರಾಯಣಪ್ಪನನ್ನೂ ನೆನಪಿಸುತ್ತದೆ. ಈ ಇಬ್ಬರೂ ತಾವು ವ್ಯಾಸರಿಗಿಂತ ದೊಡ್ಡವರಲ್ಲ ಎಂದು ನಮ್ರತೆ ತೋರುವವರು; ಆದರೆ ಮೂಲಕ್ಕೆ ಸಾಧ್ಯವಾಗದ ವಿಶಿಷ್ಟತೆಯನ್ನು ಕನ್ನಡದಲ್ಲಿ ಹುಟ್ಟಿಸುತ್ತೇವೆ ಎಂಬ ಆತ್ಮವಿಶ್ವಾಸ ಇದ್ದವರು.

ಕುವೆಂಪು ಫೋಟೋ | Kuvempu Pictures, Photos, Images - Filmibeat Kannada

ಕುವೆಂಪು-ಬೇಂದ್ರೆ ಇಬ್ಬರೂ ಅದ್ವೈತಿಗಳು. ಟಾಗೂರ್-ಅರವಿಂದರನ್ನು ಕಾವ್ಯಗುರುಗಳೆಂದು ಪರಿಭಾವಿಸಿದವರು; ರಾಮಕೃಷ್ಣ-ವಿವೇಕಾನಂದರ ದಾರ್ಶನಿಕತೆ ಒಪ್ಪಿದವರು.  ಒಬ್ಬರು ರಾಮಕೃಷ್ಣ ಆಶ್ರಮದ  ಲಗತ್ತುಳ್ಳವರಾಗಿದ್ದರೆ, ಮತ್ತೊಬ್ಬರು ಅರವಿಂದಾಶ್ರಮದ ಜತೆ ನಂಟು ಬೆಸೆದಿದ್ದವರು. ಈ ದೃಷ್ಟಿಯಿಂದ ಬೇಂದ್ರೆಯವರ `ನಾನು’, ಕುವೆಂಪುರವರ `ಅನಿಕೇತನ’ ಹಾಗೂ ಟಾಗೂರರ `ಏಕಲಚಲೋ’ ಕವನಗಳಲ್ಲಿ ಆಶ್ಚರ್ಯಕರ ಸಾಮ್ಯಗಳಿವೆ. ಕನ್ನಡದ ಇಬ್ಬರೂ ಕವಿಗಳು, ಬಂಗಾಳದ ನಾಲ್ಕೂ ದಾರ್ಶನಿಕ-ಕವಿ-ಅನುಭಾವಿಗಳನ್ನು ಅರಗಿಸಿಕೊಂಡು ಮರುಹುಟ್ಟಿಸಿದ ವಿನ್ಯಾಸ ಮತ್ತು ತಾತ್ವಿಕತೆ ಮಾತ್ರ ಅನನ್ಯ. ಇವರ ಈ ಸ್ವಂತಿಕೆಗೆ ಕಾರಣವಾಗಿದ್ದು ಕನ್ನಡಪ್ರಜ್ಞೆ. ಒಂದೆಡೆ ಬೇಂದ್ರೆ “ಜಿಬ್ರಾನ್ ಹೊತ್ತಿಸಿದ ಬೆಳಕು ಬರಿ ಬೆಳಕಾದರೆ ಸಾಲದು! ಅದಕ್ಕೆ ತಮ್ಮ ಬಣ್ಣ ಇರದಿದ್ದರೆ ಕಣ್ಣಿಗೆ ಅಸಹ್ಯ!’ ಎನ್ನುತ್ತಾರೆ.  ಏ.ಈ. ಹಾಗೂ ಅರವಿಂದರ ಬಗ್ಗೆ ಸದಾ ಚರ್ಚೆ ಮಾಡುತ್ತಿದ್ದ `ಗೆಳೆಯರ ಗುಂಪ’ನ್ನು ಬಹುಶಃ ಯಾರೊ ಟೀಕಿಸಿರಬೇಕು. ಇದಕ್ಕೆ ಉತ್ತರಿಸುವಂತೆ ಬೇಂದ್ರೆ, ತಮ್ಮದು ಐರಿಶ್ ಮತ್ತು ಪಾಂಡಿಚೇರಿಯ ಬ್ರಾಂಚಲ್ಲವೆಂದೂ, ಕನ್ನಡದ  ಸ್ವಂತದ ಶಕ್ತಿ ಬೆಳೆಸುವುದೇ ತಮ್ಮ ಧ್ಯೇಯ-ಧ್ಯಾನವೆಂದೂ ಸ್ಪಷ್ಟಪಡಿಸುತ್ತಾರೆ.

ಬೇಂದ್ರೆಯವರನ್ನು ಕುರಿತು `ಸ್ಥಳೀಯ ಪರಿಸರದಲ್ಲಿ ಬೇರುಬಿಟ್ಟ, ಜನಪದ ಪ್ರಜ್ಞೆಯ ಕವಿ’ ಎಂಬರ್ಥದ ವ್ಯಾಖ್ಯಾನಗಳಿವೆ. ಅವರ ಕಾವ್ಯ ಬುನಾದಿಗಳಲ್ಲಿ ಸ್ಥಳೀಯತೆ  ಮೂಲೆಗಲ್ಲಾಗಿರುವುದು ದಿಟ. ಆದರೆ ಸ್ಥಳೀಯ ಗುರುಪಂಥಗಳ ಬಗ್ಗೆ ಅವರು ತೋರುವ ವಿಮರ್ಶನ ಪ್ರಜ್ಞೆಯ ನಿಷ್ಠುರತೆ, ದಾರ್ಶನಿಕ ಕವಿಯಾಗಿ ಅವರ ಎಚ್ಚರವನ್ನೂ ಸೂಚಿಸುತ್ತಿದೆ. ಲೋಕಾನುಭವದ ವಿಷಯದಲ್ಲಿ ಸ್ಥಳೀಯತೆಯ ಮಣ್ಣೊಳಗೆ ಬೇರು ತಳೆದು ಕಸುವನ್ನು ಹೀರಿಕೊಳ್ಳುವ ಬೇಂದ್ರೆ ಕಾವ್ಯ, ದಾರ್ಶನಿಕ ಪ್ರೇರಣೆಗಳ ವಿಷಯದಲ್ಲಿ ವಿಶ್ವದ ವಿಶಾಲ ಗಗನಕ್ಕೆ  ಕೈಚಾಚುತ್ತದೆ; `ಗಂಗಾವತರಣ’ದ ನಾಯಕನ ಆರ್ತತೆಯಲ್ಲಿ ನೆಲಕ್ಕೆ ಆವಾಹಿಸುತ್ತದೆ. ಬೇಂದ್ರೆಯವರ ಕಾವ್ಯ ಸ್ಥಳೀಯತೆಯ ನೆಲದಲ್ಲಿ ವಿಮರ್ಶಾತ್ಮಕವಾಗಿ ಬೇರುಬಿಟ್ಟು ವಿಶ್ವಪ್ರಜ್ಞೆಯ ಆಗಸದಲ್ಲಿ ಕೊಂಬೆ ಚಾಚಿ ಹೂಬಿಟ್ಟ ಮರ. ದೇಶಭಾಷೆಗಳಲ್ಲಿ ಬರೆವ ಎಲ್ಲ ಪ್ರತಿಭಾವಂತ ಲೇಖಕರಲ್ಲಿ ಅರ್ಥಪೂರ್ಣ ವಿಶ್ವಪ್ರಜ್ಞೆ ಇದೇ ಪರಿಯಲ್ಲಿರುತ್ತವೆ. ಕುವೆಂಪು ಅವರಂತೆ ದಾರ್ಶನಿಕ ಪ್ರಜ್ಞಾಪೂರ್ವಕತೆಯಲ್ಲಿ `ವಿಶ್ವಮಾನವತ್ವ’ದ ಪರಿಕಲ್ಪನೆಯನ್ನು ಪ್ರಣಾಳಿಕೆಯಂತೆ ಬೇಂದ್ರೆ ತಾರದಿರಬಹುದು. ಆದರೆ ಈ ಪ್ರಜ್ಞೆ ಅವರ ಕಾವ್ಯದಲ್ಲಿ ಗುಪ್ತಗಂಗೆಯಂತೆ ಅಂತರ್ಗತವಾಗಿದೆ. `ನಾನು’ ಕವನದ ನಾಯಕ ಹೇಳಿಕೊಳ್ಳುವಂತೆ, ಆತ ವಿಶ್ವಮಾತೆಯ ಗರ್ಭದಿಂದ ಹುಟ್ಟಿದ ತಾವರೆಯ ಪರಾಗ ಪರಮಾಣುವಾಗಿ ಹುಟ್ಟಿದವನು. ಅವನ ಕಾರ್ಯ `ವಿಶ್ವದೊಳನುಡಿಯಾಗಿ ಕನ್ನಡಿಸು’ವುದು. “ನಮ್ಮ ಓಣಿ, ನಮ್ಮ ಕೇರಿ, ನಮ್ಮ ಕಂಪೌಂಡು, ನಮಗೆ ಸ್ವರ್ಗ; ಎಲ್ಲ ಕಡೆಗೂ ನಮ್ಮವರನ್ನು ಕಾಣಬೇಕೋ? ಎಲ್ಲರೂ ತಮ್ಮಲ್ಲಿ ನನ್ನನ್ನು ಕಾಣಬೇಕು; ನನ್ನಲ್ಲಿ ತಮ್ಮನ್ನು ಕಾಣಬೇಕು’’ ಎಂಬ ಬೇಂದ್ರೆಯವರ ಹೇಳಿಕೆಯೂ ಇದನ್ನೇ ನುಡಿಯುತ್ತದೆ. ಪಂಪನ `ದೇಸಿಯೊಳ್ ಪುಗುವುದು ಪೊಕ್ಕು ಮಾರ್ಗದೊಳೆ ತಳ್ವುದು’, ಬಿಎಂಶ್ರೀಯವರ `ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ’, ಕುವೆಂಪು ಅವರ `ಎಲ್ಲ ಮತದ ಹೊಟ್ಟತೂರಿ, ನಿರ್ದಿಗಂತವಾಗಿ ಏರಿ ಆಗು ನೀ ಅನಿಕೇತನ’ `ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ’-ಮುಂತಾದ ಹೇಳಿಕೆಗಳಂತೆ; ಬೇಂದ್ರೆಯವರ `ವಿಶ್ವದೊಳಗೆಲ್ಲೆಲ್ಲು ತನ್ನ ಜೀವದ ಸೊಲ್ಲು’  `ವಿಶ್ವದೊಳನುಡಿಯಾಗಿ ಕನ್ನಡಿಸುತಿಹನು ಅಂಬಿಕಾದತ್ತನಿವನು’ `ಕನ್ನಡವು ಕನ್ನಡವ ಕನ್ನಡಿಸುತಿರಬೇಕು’ ಹೇಳಿಕೆಗಳು ಕೂಡ, ಕನ್ನಡ ಸಾಹಿತ್ಯ ಮೀಮಾಂಸೆಯ ಭಾಗ.

ನಮ್ಮ ದೊಡ್ಡ ಲೇಖಕರು ತಾವು ಶ್ರದ್ಧೆಯಿಂದ ನೆನೆವ ಮತ್ತು ಅನುವಾದಿಸುವ ಕವಿ-ದಾರ್ಶನಿಕರು, ತಮ್ಮ ಸಾಹಿತ್ಯ ರಚನೆ ಮತ್ತು ವ್ಯಕ್ತಿತ್ವದ ಮೇಲೆ ಹಿಮದಂತೆ ಆಚ್ಛಾದನೆಗೊಳ್ಳಲು ಬಿಡುವುದಿಲ್ಲ. ಪೂರ್ವಕವಿಗಳ ಮತ್ತು ದಾರ್ಶನಿಕರ ಬದುಕಿನ ಯಾವುದೋ ಒಂದಂಶದ ಸೆಳೆತಕ್ಕೆ ಒಳಗಾಗುತ್ತಾರೆ. ಅಲ್ಲಿಂದ ಕೆಲವು ಎಳೆಯನ್ನು ಎಚ್ಚರಿಕೆಯಿಂದ ಆರಿಸಿಕೊಂಡು, ಬರೆಹ ಮತ್ತು ಬದುಕಿನ ಬಟ್ಟೆಯಲ್ಲಿ ಹಾಸುಹೊಕ್ಕು ಮಾಡುತ್ತಾರೆ. ಬೇಂದ್ರೆ ಬುದ್ಧನ ಮೇಲೆ ಹಲವು ಕವಿತೆಗಳನ್ನು ಬರೆದರೂ ಬೌದ್ಧ ದರ್ಶನವನ್ನು ಅನುಸಂಧಾನಿಸಲಿಲ್ಲ. ಅವನ ಬಾಳಿನ ಮಾನವೀಯ ಘಟನೆಗಳೇ ಅವರಿಗೆ ಸಾಕೆನಿಸಿದವು. ರುಬಾಯತನ್ನು ರೂಪಾಂತರಿಸುವಾಗ (`ಬೆಳಗುಜಾವ’) ಅವರಿಗೆ ಮೃತ್ಯು ಸಮ್ಮುಖದಲ್ಲಿರುವ ಬದುಕನ್ನು ಮೊಗೆದು ಸವಿಯಬೇಕೆಂಬ ಉಮರ ಖಯಾಮನ ದರ್ಶನ ಹಿಡಿಸಿತು. ಈ ದರ್ಶನದ ಒಂದು ರೆಂಬೆ ಅವರ `ಉಗಾದಿ’ಯಲ್ಲಿ ಬೇರೊಂದು ಹೊಳಹನ್ನು ಪಡೆದು ಚಿಗುರೊಡೆಯಿತು.

ಅರವಿಂದ-ಮದರ್ ಕುರಿತ ಬೇಂದ್ರೆ ಪದ್ಯಗಳಲ್ಲಿ ತೀವ್ರವಾದ ವೈಯಕ್ತಿಕ ಸೆಳೆತವಿದೆ. ಆದರೆ ಈ ಸೆಳೆತವು ದಾರ್ಶನಿಕಕ್ಕಿಂತ ಮಿಗಿಲಾಗಿ ಶ್ರದ್ಧಾಭಕ್ತಿ ಪ್ರಧಾನವಾಗಿದೆ. ಈ ಬಗೆಯ ಶಿಥಿಲ ಮತ್ತು ಭಾವುಕ ಬದ್ಧತೆಯೇ ಕೊನೆಯ ದಿನಗಳಲ್ಲಿ ಪುಟಪರ್ತಿ ಸಾಯಿಬಾಬಾ ಮೇಲೆ ಸ್ತವನರೂಪಿ ಪದ್ಯಗಳನ್ನು ಕಟ್ಟಿಸಿತು. ಕಾವ್ಯದ ಹಂಗಿಲ್ಲದ ದಾರ್ಶನಿಕ ತನ್ಮಯತೆಯಿಲ್ಲದ ಸ್ತವನಗಳಿವು. ಬೇಂದ್ರೆಯವರು ಅರವಿಂದ, ಕಾಳಿದಾಸ-ಉಮರನನ್ನು ಕುರಿತು ಆಸ್ಥೆಯಿಂದ ಬರೆದ ಪದ್ಯಗಳಿಗೆ ಹೋಲಿಸಿದರೆ, ಈ ಸ್ತವನಗಳ ಕೃತಕತೆ  ಎದ್ದುಕಾಣುತ್ತದೆ. ಅವರಲ್ಲಿ `ಕಾವ್ಯಗುರು’ ಹಾಗೂ ಆಧ್ಯಾತ್ಮದ `ಶ್ರೀಗುರು’ಗಳು  ಜಿಬ್ರಾನ್ ಜ್ಞಾನೇಶ್ವರ ಟಾಗೂರ ಉಮರ ಅರವಿಂದರ ವಿಷಯದಲ್ಲಿ ಬಿರುಕಿಲ್ಲದೆ ಏಕೀಭವಿಸುವರು.

ವಿಶೇಷವೆಂದರೆ, ಬೇಂದ್ರೆ ಸ್ಮರಿಸಿರುವ ಗುರು ಹಾಗೂ ಪೂರ್ವಕವಿಗಳು ಒಂದು ತಾತ್ವಿಕ ಮೂಸೆಯಲ್ಲಿ ವೈರುಧ್ಯಗಳನ್ನು ಕಳೆದುಕೊಂಡು ಕರಗುವವರಲ್ಲ. ಬೇಂದ್ರೆಯವರಲ್ಲಿ  ಬಹುಮುಖಿ ಪ್ರಭಾವ ಪ್ರೇರಣೆಗಳ ಬಹುತ್ವವು ಕೆಲವೊಮ್ಮೆ ತನ್ನ  ವೈರುಧ್ಯಗಳ ಸಮೇತ ಹಾಗೇ ಉಳಿಯುತ್ತದೆ. ಅವರದು ದಾರ್ಶನಿಕ ಹೂವಿಂದ ಹೂವಿಗೆ ಹಾರುವ ಪಾತರಗಿತ್ತಿಯ ಚಂಚಲತೆ. ಮಗು ಹಳೆಯ ಆಟಿಕೆ ಬೇಸರವಾದಾಗ ಎಸೆದು ಇನ್ನೊಂದು ಆಟಿಕೆಗೆ ಹೋಗುವಂತೆ, ಹಲವು ಮೂಲಗಳಿಂದ ತತ್ವದರ್ಶನಗಳನ್ನು ಮೋಹಿತರಾಗಿ ಪಡೆದರೂ, ನಿರ್ದಿಷ್ಟ  ಘಟ್ಟದ ಬಳಿಕ ಅವನ್ನು ಕೈಬಿಡುತ್ತಾರೆ. ಬಹುಮೂಲಗಳಿಂದ ದಾರ್ಶನಿಕ-ಸಾಹಿತ್ಯಕ ಪ್ರೇರಣೆಯನ್ನು ಬೇಕಾದಾಗ ಬೇಕಷ್ಟು ಪಡೆದು ಕಾವ್ಯ ಕಟ್ಟುವ ಈ ಗುಣ, ಭಂಗಮಾರ್ಗಿ. `ಮೇಘದೂತ’ ಅನುವಾದದಲ್ಲಿ “ಕವಿಯ ಕಮಲಕೃತಿಯಲ್ಲಿ ಉಂಡೆ ನಾನೊಬ್ಬ ಭಾವಭೃಂಗ ಪಕಳೆಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ’’ ಎಂಬ ಮಾತೂ ಇದೆ. ಇದು ಬೇಂದ್ರೆಯವರ ಕಾವ್ಯತಂತ್ರವೂ ಆಗಿದೆ. ನಾದಲೀಲೆಯಂತೆ ಇದೂ ಒಂದು ದಾರ್ಶನಿಕ ಲೀಲಾವಿಲಾಸ. ಈ ದಾರ್ಶನಿಕ ಶಿಥಿಲತೆ ಕುವೆಂಪು ಅವರಲ್ಲಿಲ್ಲ. ಅವರಲ್ಲಿ ದಾರ್ಶನಿಕ ಪ್ರೇರಣೆಗಳು ಬರೆಹ ಮತ್ತು ಬಾಳಿನಲ್ಲಿ ಅಬೇಧವಾಗಿ ಆವರಿಸುತ್ತವೆ. ಆರಂಭದಿಂದ ಕೊನೆಯ ತನಕ ತಂತುಗಡಿಯದೆ  ದೃಢವಾದ ಪ್ರಮೇಯವಾಗಿ ಬೆಳೆಯುತ್ತವೆ. ಅವರಿಗೆ ಸಾಹಿತ್ಯಕ ಆಯ್ಕೆಯಲ್ಲೂ ತೀವ್ರತರ ಇಷ್ಟನಿಷ್ಟಾಗಳಿದ್ದವು. ಟಾಲ್‌ಸ್ಟಾಯ್-ವರ್ಡ್ಸವರ್ತ್ ಬಗ್ಗೆ ಅವರು ಶ್ರದ್ಧೆಯಿಂದ ರಚಿಸಿದ ಪದ್ಯಗಳ ಜತೆಗೆ, ಶೇಕ್ಸ್ ಪಿಯರ್ ಬಗ್ಗೆ ಅಸಮ್ಮತಿಯಲ್ಲಿ ಬರೆದ ಪದ್ಯವನ್ನು ಜತೆಗಿಟ್ಟು ನೋಡಿದರೆ ಇದು ಸ್ಪಷ್ಟವಾಗುತ್ತದೆ.

ಕಾವ್ಯರಚನೆಗೆ ಹಲವು ದೆಸೆಗಳಿಂದ ಪ್ರೇರಣೆ ಪಡೆವ ಕವಿಗೆ, ಈ ಗುರುಗಳು ದೇಶ ಕಟ್ಟುವುದಕ್ಕೂ ಬೇಕಾದ ತತ್ವ ಕೊಟ್ಟವರು ಎಂಬ ನಂಬಿಕೆಯಿದೆ. ಇದುವೇ ಟಾಗೂರರನ್ನು `ಭಾರತದ ಗುರುವೇ’ ಎಂದು ಕರೆಯಲು ಕಾರಣವಾಗಿದೆ: “ಶ್ರೀ ಅರವಿಂದರಂಥ ಜ್ಞಾನ-ಪಿಂಡ, ಶ್ರೀ ರವೀಂದ್ರರ ಕಲಾಪಿಂಡ-ಕೂಡಿ ಅದ್ವೈತ ಸಾಧಿಸಿದರೆ, ಕನ್ನಡಕ್ಕೆ ಬೇಕಾಗುವ ಪಿಂಡವಾದೀತು. ಮಾನವಪುತ್ರ ಜೀಸಸನನ್ನು ಸಾಕ್ಷಾತ್ಕರಿಸಿಕೊಂಡು, ಕನ್ನಡದ ಮುಸ್ಲಿಮ್, ಕ್ರಿಶ್ಚನ್ ಸಾಹಿತಿಗಳು ಹೃದಯದ ಸಮರಸ ಮಾಡಿ, ಶರೀಫನಂತೆ ನಿರಂಜನ ಅವಧೂತ ಮುದ್ರೆ ಮೂಡಿಸಿದರೆ, ಶಂಕರರ ನಾಡು ಕಿಂಕ್ರಾಂತವಾಗಿ ಬಿದ್ದುಕೊಂಡೀತು ಎಂದು ತೋರುವುದಿಲ್ಲ?’’. ಇಲ್ಲಿ ವೇದಗಳಿಂದ ಪ್ರೇರಣೆ ಪಡೆಯಬಲ್ಲ ಕವಿ, ಮುಸ್ಲಿಂ ಸಮುದಾಯದಿಂದ ಬಂದ ಗಿಬ್ರಾನ್ ಏಸುವಿನ ಬಗ್ಗೆ ಬರೆದ ಕೃತಿಯನ್ನು ಭಾರತೀಯ ಆರ್ಷೇಯ ಪಠ್ಯಗಳಷ್ಟೇ ಪವಿತ್ರಭಾವದಲ್ಲಿ ಉಲ್ಲೇಖಿಸುತ್ತಿರುವುದು ಗಮನಾರ್ಹ.

ಕನ್ನಡದ ಕವಿಗಳು ಸಾಹಿತ್ಯ ರಚನೆಗೆ ಬಹುಮೂಲಗಳಿಂದ ಪ್ರೇರಣೆ ಪಡೆವಾಗ ತೋರುವ ಭಾಷಾತೀತ ಧರ್ಮಾತೀತ ದೇಶಾತೀತ ಮುಕ್ತತೆಯನ್ನು, ದೇಶಕಟ್ಟುವ ತತ್ವವನ್ನಾಗಿಯೂ ರೂಪಿಸುತ್ತಾರೆ. ಆಗ ಅವರ ಕಾವ್ಯತತ್ವವು ಬಾಳತತ್ವವಾಗಿ ಪಲ್ಲಟಗೊಳ್ಳುತ್ತದೆ. ಈ  ಎರಡೂ ತತ್ವಗಳಲ್ಲಿ ದೇಶಕಟ್ಟುವ ತತ್ವವೂ ಅಡಗಿರುತ್ತದೆ. ಹೀಗೆಂದೇ ನಮ್ಮ ಮಹತ್ವದ ಲೇಖಕರೆಲ್ಲ ಪ್ರಚ್ಛನ್ನರಾದ ರಾಜಕೀಯ ದಾರ್ಶನಿಕರೂ ಆಗಿರುವರು.


ಡಾ.ರಹಮತ್ ತರೀಕೆರೆ.

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Leave a Reply

Back To Top