ಕಾವ್ಯಯಾನ
ಮಣ್ಣಿನೊಂದಿಗೆ
ಸಂತೆಬೆನ್ನೂರು ಫೈಜ್ನಟ್ರಾಜ್
ಮಣ್ಣಿನೊಂದಿಗೆ
ಸಂಧಾನ ಸಣ್ಣದೇ,
ಬೀಜ ಮಣ್ಣಿನೊಡನೆ
ಕೂಡಿಕೆ ಮಾಡುವುದು ಸರಳವಲ್ಲ!
ಬಂಧುಗಳಿಂದ ಬೇರಾಗಿ
ಬೇರೇ ಇಲ್ಲದೇ ಬೇರು ಮೂಡಿಸಿಕೊಳ್ಳುವ
ತವಕದಿ ಸುತ್ತ ಕವಿದ ಕತ್ತಲ ಕೂಡೆ
ಮಾತಿಲ್ಲದೇ ಮುದುಡಿ ಮೇಲೇಳಬೇಕು!
ಸಿಕ್ಕ ಸಣ್ಣ ಕಣವೇ ತಿಂದು
ದಾರಿ ಹುಡುಕಿ ಮುಗಿಲ ಹಾದಿಗೆ ಹೆಜ್ಜೆ
ಊರಬೇಕು!
ಬಂದ ಬಂದವರನ್ನೆಲ್ಲಾ ಬಾಚಿ
ತಬ್ಬಲು ಮಣ್ಣೇನು ರಾಜಕೀಯ ಪಕ್ಷವೇ?
ಒಡಲ ಗರ್ಭದಿ
ಮೌನ ಚಿಪ್ಪಲಿ ಭವ ಬಂಧನದಿ
ಬಂಧಿಯಾಗೋ ಅತಿಥಿಗಿದೋ ಮೈ ಮುರಿಯೆ
ಟಿಸಿಲೊಡೆವ ದಿವ್ಯ ಅವಕಾಶ!
ನಾಲ್ಕು ಮಾತನಾಡಿದರೆ ಹರದಾರಿ ಸಾಗೋ
ಪಯಣಿಗರೂ ಗೆಳೆಯರೆ;
ಮಡಿಲಲಿ ಮಲಗಿದ ಬೀಜ
ಅಂಕುರವಾಗೇ ನಾಳೆ ಕನಸ ಶಿಖರಕೆ ಆಲ!
ನೀರಧಾರೆ, ಬಿಸಿಲಝಳ,ಅಷ್ಟಿಷ್ಟು ಪ್ರೀತಿ
ಬೀಜ ಅದೋ ಗರ್ಭ ಧರಿಸಿ
ಬೆಳಕ ಸಲಿಗೆಯಲ್ಲಿ ಸಂಧಾನ!
ಸಾಗರದ ನೋವಿನ ನಡುವೆ
ಸಾಸಿವೆ ಪ್ರೀತಿ ಸಿಕ್ಕರೂ
ನಾಳಿನ ಬೆಳಕೇ ಬೆಳೆದ ಸಾಧನೆ!
ಸಾಸಿವೆಷ್ಟು ಸುಖಕ್ಕೆ ಸಾಗರದಷ್ಟು ದುಃಖ ಎಂಬುದು ಅಲ್ಲಮ ಪ್ರಭುವಿನ ವಚನ
ಕನ್ನಡದಲ್ಲಿ ಅನುಸಂಧಾನ ಮಾಡುವ ಕವಿ ಸಶಕ್ತವಾಗುವದೇ ವಚನ ಸಾಹಿತ್ಯದ ಓದು ಮತ್ತು ಅರವಿನಿಂದ…
ಒಳ್ಳೆಯ ಕವಿತೆ ಫೈಜ್ನಾಟ್ರಾಜ್….ನಿಮ್ಮ ಹೆಸರಲ್ಲಿ ಒಂಥರಾ ಗತ್ತಿದೆ. ಹಾಗೂ ತಾಜ್ ಸಹ ಇದೆ .