ಕಾವ್ಯಯಾನ
ಭಿತ್ತಿ ಚಿತ್ರ
ಶಾಂತಲಾ ಮಧು
ಬಟ್ಟಂಬಯಲಲಿ
ಮೂಲೆಯ ಮರದಲಿ ಅಂಟಿದ
ಕಪ್ಪುಬಿಳುಪಿನ
ಭಿತ್ತಿ ಚಿತ್ರ
ಬಣ್ಣತೊಡಿಸುವಾಸೆಯಲಿ
ಮುಟ್ಟಿ ಶೃಂಗರಿಸಿ
ಮೆರಗಿಟ್ಟು ಮತ್ತಸ್ಟು
ನಲಿದೆ ನರ್ತಿಸಿದೆ
ಏರಿತದು ಏರಿತದು
ಬಾನ ಅಂಗಳದಲ್ಲಿ
ಬಣ್ಣ ಬಣ್ಣದ
ಕಾಮನ ಬಿಲ್ಲಾಗಿ
ಜಿನುಗು ಮಳೆಯಲ್ಲಿ
ಬಣ್ಣವಾಗಿಸಿ ನೆಲವ
ಗಾಳಿಯದು
ಮಧುರ ನುಡಿಯದು
ಇಂಪು ಸೊಂಪಿನಲಿ
ತೇಲಿಸಿ ತೇಲಿಸಿ
ಮೇಲೇರಿತು ಎತ್ತರಕೆ
ಕಟ್ಟಿ ಅಲ್ಲಲ್ಲಿ
ಗೋಪುರವ
ಹಗಲ ಕನಸಾಗಿ
ಇರುಳ ಹಗಲಾಗಿಸಿ
ಇರುಳೇ ಬಿಸಿಯಾಗಿ
ಮೋಡ ಕರಗಲು
ಹನಿಯಾಗಿ ಹನಿಯಾಗಿ
ಬಣ್ಣ ಕರಗಿದ
ಭಿತ್ತಿ ಚಿತ್ರವಾಗಿ
ಪ್ರಜ್ಞೆ ಬಂದಾಗ
ನೆಲದ ಮೇಲಿತ್ತು
ಮಣ್ಣಿನವಾಸನೆ
ಮೈಗಂಟಿದ ಮಣ್ಣು
ಮುಗುಳ್ ನಕ್ಕು
ಹಸಿರನೆಲವದು
ಉಸಿರಿಗೆ ಆಹ್ವಾನ
ಬದುಕು ಭ್ರಮೆಯಲ್ಲ
ನಿತ್ಯ ಸತ್ಯ ಎನುತಿತ್ತು
ಆ ಮರ ಗಿಡ ಬಳ್ಳಿಗಳು