ನೀನಿಲ್ಲದ ಮನ

ಕಾವ್ಯಯಾನ

ನೀನಿಲ್ಲದ ಮನ

ಅಭಿಜ್ಞಾ ಪಿ ಎಮ್ ಗೌಡ

ಮನದ ಚಿಂತನೆಯ ಆವರ್ತದಲು
ತಿರು ತಿರುಗಿ ನೋಡಿದೆ
ಅವನಾಳ್ವಿಕೆಯ ಒಡ್ಡೋಲಗವನು
ಆವಿರ್ಭವಿಸೊ ನೆನಪುಗಳ
ದಿಬ್ಬಣವ ನೆನೆ ನೆನೆದು.!
ಹಸಿ ಕನಗಳ ಮೇಳ
ನನ್ನೆದೆಯ ಶಿಖರ ಸಿಂಹಾಸನಕೆ
ಲಗ್ಗೆ ಇಟ್ಟು ರಾರಾಜಿಸಿ
ಭೋರ್ಗರೆಯುತ ನೆನಪುಗಳ
ಜಲಪಾತವನ್ನೆ ಹರಿಸುತಿವೆ…

ಅದೋ.! ಗುಳಿಬಿದ್ದ ಕಣ್ಣಕೊಳ
ಇಂಗಿ ಬರಡಾದ ಬಯಲು
ದುಃಖಿಸಲು ನೀರಿಲ್ಲ
ಭಣಗುಟ್ಟಿ ಹಪಹಪಿಸುತಿದೆ.!
ನಿನ್ನಿರುವಿಕೆಯ ಮನದಭಾವ
ಕಣ್ಣೆದುರೆ ಕುಸಿದು
ನಿತ್ರಾಣವಾಗುವ
ಶೂನ್ಯತೆಯ ಜಯಭೇರಿ ಕಂಡು…

ಎದೆಯ ಆವಾರ
ಅವನಿರುವಿಕೆಯ ಹಸಿಪೈರಿನ
ಉನ್ಮಾದದಿ ಜಗಮಗಿಸಿದರೂ
ನೆನಪುಗಳ ಉದ್ಬೋಧ
ಇನ್ನಿಲ್ಲದ ಉದ್ಭೂತದಂತೆ
ನಳನಳಿಸೊ ಉಜ್ಜ್ವಲದಂತೆ
ನನ್ನೆದೆಯ ಬಯಲನ್ನೆ
ಉಸಿತಗೊಳಿಸಿ
ಧಗಧಗಿಸಿ ಉರಿಸುತಿವೆ
ಉಬ್ಬರವಿಳಿತದ ಉದಧಿ ತೆರೆಗಳಂತೆ.!

ಮನದ ವಠಾರ
ಮಾತಿಲ್ಲದೆ ತುಟಿಯಾಡಿಸದೆ
ಸತ್ತ ಮನೆಯಂತೆ
ಸೂತಕದ ಛಾಯೆಯಲಿ ಮುಳುಗುತಿದೆ..
ಅಡಿಗಡಿಗೂ
ಧಾಳಿಯಿಡುವ ನೆನಪುಗಳಿಗೇನು ಗೊತ್ತು
ಮನದ ನೋವಿನ ಆಕ್ರಂದನ
ಅಂಕೆಯಿಲ್ಲದೆ ಬರುವ ಕನಗಳೋ
ಹುಚ್ಚು ಆಸೆಗಳೊಂದಿಗೆ
ಸತ್ತು ಮಲಗಿಸುತಿವೆ
ಮನದೊಳಗಿನ ಭಾವಗಳ…!!


Leave a Reply

Back To Top