ಬರಗೂರರ ಜನ್ಮದಿನಕ್ಕೊಂದು ಬರಹ

ಬರಗೂರರ ಜನ್ಮದಿನಕ್ಕೊಂದು ಬರಹ

ನಾನು ಕಂಡಂತೆ

ಬರಗೂರರಲ್ಲಿನ ನೇತಾರ

ಮಮತಾ ಸಾಗರ . ಅರಸೀಕೆರೆ

ಬರಗೂರು ರಾಮಚಂದ್ರಪ್ಪ ಎನ್ನುವ ಹೆಸರು ಈ ನಾಡಿನಲ್ಲಿ ಒಬ್ಬೊಬ್ಬರಲ್ಲಿ ಒಂದೊಂದು ಭಾವವನ್ನು ಸೃಷ್ಟಿಸಬಹುದು. ಅವರು ಕೆಲವರಿಗೆ ಬೋಧಿಸಿದ ಮೇಷ್ಟ್ರು, ಕೆಲವರಿಗೆ ಪರೋಕ್ಷವಾಗಿ ಗುರುಗಳು, ಸಲಹೆ ಸೂಚನೆಗೆ ಮಾರ್ಗದರ್ಶಿ, ಯಾವುದಾದರೂ ವಿಷಯಕ್ಕೆ ಸಂಬಂಧಿಸಿದ ಮಾರ್ಗಸೂಚಿ, ನಾಡುನುಡಿಗಳ ವಿಷಯಕ್ಕೆ ವಿವರಣಾ ಕೈಪಿಡಿ, ಜ್ಞಾನಶಿಸ್ತಿಗೆ ಮಾಹಿತಿ ಗ್ರಂಥ, ಅರಿವಿನ ವಿಚಾರಕ್ಕೆ , ಸಂವೇದನೆಯ ತುಡಿತಕ್ಕೆ ರೂಪಣೆಗಾರ, ಅಜ್ಞಾನದ ಅಂಧಕಾರಕ್ಕೆ ಹತೋಟಿಯ  ಕೀಲು, ಚಳವಳಿಗೆ ನಿರ್ದೇಶಕ, ವಿಪ್ಲವಕ್ಕೆ ಪ್ರತಿರೋಧ. ತಲ್ಲಣ, ಹತಾಶೆಗೆ ಭರವಸೆ.

ಈ ಎಲ್ಲಾ ಉಪಾದಿಗಳೂ ಬರಗೂರರಿಗೆ ಸುಖಾಸುಮ್ಮನೆ ದಕ್ಕಿತೆ? ನಮ್ಮಂತವರು ಕಂಡಂತೆ ಈ ಎಲ್ಲಾ ಪಟ್ಟಗಳನ್ನು ಪಡೆಯಲು ಅವರು ದಾಟಿದ ಮಾರ್ಗಗಳು ಸುಗಮವಾಗಿದ್ದವೆ? ಅದೆಷ್ಟು ಅಗ್ನಿದಿವ್ಯಗಳನ್ನು ಹಾದುಬಂದರು. ಅದೆಷ್ಟು ಪ್ರತಿರೋಧಗಳನ್ನು ಎದುರಿಸಬೇಕಾಯಿತು. ಸಂಕಷ್ಟಗಳೆಂಬ ನಾವೆಯಲ್ಲಿಯೆ ಅದೆಷ್ಟು ದೊಗರುಗಳು! ಇಲ್ಲೀವರೆಗಿನ ಪಯಣದಲ್ಲಿ ಅಡೆತಡೆಗಳ ಸಂತೆಕಂತೆ. ಪ್ರತೀ ಹಂತವೂ ಸುಲಭವಾಗಿಯೇನೂ ಸೃಷ್ಟಿಯಾಗಿರಲಾರದು. ಯಶಸ್ಸೆಂಬುದನ್ನ ಬೆಲೆಬಾಳುವ ಹರಿವಾಣದಲ್ಲಿಟ್ಟು ಯಾರೂ ಅವರ ಕೈಗೆ ಒಪ್ಪಿಸಿರಲಾರರು. ಸಾಧನೆಯ ಮೈಲಿಗಲ್ಲುಗಳನ್ನ ನೆಡುವಾಗ ಸಂದರ್ಭಗಳೇನು ಅವರೊಂದಿಗೆ ಉದಾರವಾಗಿದ್ದಿರಲಾರದು.

ಚರ್ಚೆ ಹಾಗೂ ಚಿಂತನೆಗಳಿಗೆ ಪೇಜಾವರ ಶ್ರೀಗಳು ಮುಖಾಮುಖಿಯಾಗುತ್ತಿದ್ದರು: ಡಾ. ಬರಗೂರು  ರಾಮಚಂದ್ರಪ್ಪ –

ಭಾಷೆಯ ಪ್ರಶ್ನೆ ಬಂದಾಗ, ನಾಡಿನ ತಳಮಳಗಳು ಅಸಹಾಯಕವಾಗಿ ನಿಂತಾಗ, ಹೋರಾಟವೆಂಬ ದುರ್ಗಮ ಹಾದಿ ಆಗಾಗ್ಗೆ ಕಂಪಿಸುವಾಗ, ದುರ್ಬಲರ, ದೀನರೆಂಬ ದನಿಯಿಲ್ಲದ ಜನರ ತುಟಿಗಳು ಅದುರುವಾಗ,  ಸಾಂಸ್ಕೃತಿಕವಾಗಿ ಘಾತವುಂಟಾಗುವಾಗ, ಮತ್ತೇನೊ ಕಣ್ಣಿಗೆ ಕಟ್ಟಿದಂತಹ ಪರಿಸ್ಥಿತಿ ನಿರ್ಮಾಣವಾದಾಗ  ನಾಡಿನ ಚಿಂತಕರು, ಪ್ರಜ್ಞಾವಂತರು ಆಗಾಗ್ಗೆ ಧಾವಿಸಿ ಸೂಕ್ತ ಚಿಕಿತ್ಸೆ ನೀಡುವ ಇತಿಹಾಸವಿದೆಯಲ್ಲ, ಆ ಇತಿಹಾಸದ ಸುವರ್ಣ ಪುಟದಲ್ಲಿ ರಾರಾಜಿಸುವ ಒಂದು ಧೀಮಂತ ಹೆಸರು ಬರಗೂರರೂ ಕೂಡ ಹೌದು.

ಅವರು ಸಾಕಷ್ಟು ವಿಷಯಗಳ ಕುರಿತು ಮಾತನಾಡಿದ್ದಾರೆ. ಆ ಕುರಿತ ವೀಡಿಯೋಗಳು ಸಾಕಷ್ಟು ಆನ್ಲೈನ್ ನಲ್ಲಿ ಸಿಗುತ್ತವೆ. ಬರವಣಿಗೆ ಕೂಡ ಹಾಗೆಯೆ, ತಮಗೆ ಕುದಿತದ ಅನುಭವವನ್ನುಂಟು ಮಾಡಿದ  ವಿಷಯಗಳನ್ನು ದಾಖಲಿಸದೇ ಬಿಟ್ಟವರಲ್ಲ ಅವರು. ಆ ಚಿಂತನೆಗಳ ಸಾಕಷ್ಟು ಪುಸ್ತಕಗಳೂ ಪ್ರಕಟವಾಗಿವೆ. ಸಾಮಾಜಿಕ ಪ್ರವಾಹಗಳು, ತಾರತಮ್ಯಗಳು, ವರ್ಗ ಸಂಘರ್ಷಗಳು, ಜಾತಿ ಧರ್ಮಗಳ ತಹತಹಗಳು, ಹಿಂದುಳಿದ ವರ್ಗಗಳ ಧಮನಿತರ ಸಂಗತಿಗಳು, ಮಹಿಳೆಯರ ಪರವಾದ ಮಾತುಗಳು, ಪುರಾಣ, ಐತಿಹಾಸಿಕ ಹೋಲಿಕೆಗಳ ಸರಕುಗಳು ಒಂದೇ ಎರಡೆ!? ಅವರು ಸಮಾನತೆಯ ಪರವಾಗಿ, ಸಶಕ್ತೀಕರಣಕ್ಕಾಗಿ, ಸಹಬಾಳ್ವೆಯ ಧ್ಯೇಯೋದ್ದೇಶಕ್ಕಾಗಿ ತಮ್ಮ  ಶಕ್ತ್ಯಾನುಸಾರ ಪ್ರಬಲವಾಗಿ ದನಿಯಾದವರು. ತಮಗನಿಸಿದ್ದನ್ನು ನೇರವಾಗಿ, ಗಟ್ಟಿದನಿಯಲ್ಲಿ ಯಾವುದೇ ಭೀತಿಯಿಲ್ಲದೆ ಹೇಳಿದವರು. ಹೇಳುವುದು ಕೂಡ ಹೇಗೆ! ಆ ನಮ್ರ ದನಿಗೊಂದು ಸಂಸ್ಕಾರವಿದೆ. ಕೆಲವೊಮ್ಮೆ ಯಾವುದೋ ಕಾರಣಕ್ಕೆ ಅವರನ್ನು ಪ್ರತಿರೋಧಿಸುವ ಕೂಗುಮಾರಿಗಳಿಗಿಲ್ಲದ ಸಂಸ್ಕೃತಿ, ಘನತೆಯ ಮೂಲಕ, ಅತ್ಯಂತ ಪ್ರಬುದ್ಧತೆಯ ನಯವಾದ ಭಾಷೆಯಲ್ಲಿ ಅವರು ಹೇಳಬೇಕಾದುದನ್ನು ಸ್ಪಷ್ಟವಾಗಿ, ನಿರ್ದಿಷ್ಟವಾಗಿ, ನಿಷ್ಪಕ್ಷಪಾತವಾಗಿ, ಸ್ಫುಟವಾಗಿ ಅಭಿವ್ಯಕ್ತಿಸಬಲ್ಲರು. ಅವರ ಆಲೋಚನಾ ಕ್ರಮವೂ ಹಾಗೆಯೆ, ಆ ಕ್ಷಣದ ನಿರ್ಣಯವಲ್ಲ, ಏಕಾಏಕಿಯ ತೀರ್ಮಾನಗಳಲ್ಲ, ಎಲ್ಲಾ ಕೋನಗಳನ್ನು, ಮಜಲುಗಳನ್ನು ಅವಲೋಕಿಸುವ ಹಾದಿ. ನಂತರ ಶಾಂತಿಪ್ರಿಯ ಅಭಿವ್ಯಕ್ತಿ ಮಾಧ್ಯಮ.

Banned History Book To Get New Life - chitraloka.com | Kannada Movie News,  Reviews | Image

ಯಾವುದೇ ಕ್ಷೇತ್ರದಲ್ಲಿ ಅವರ ಕಾರ್ಯಯೋಜನೆಗಳು ಚೊಕ್ಕವಾಗಿಯೇ ಇರುತ್ತವೆ. ಬರಹ, ಕಾವ್ಯ,ಭಾಷಣ, ಸಿನೆಮಾ, ಶಿಕ್ಷಣ, ಸಾಂಸ್ಕೃತಿಕ, ರಾಜಕಾರಣ ಸಲಹೆಯ ಪುಟ್ಟಭಾಗ, ಮತ್ತಿತರೆ ನಾನಾ ಕ್ರಿಯಾಶೀಲ  ಕಾರ್ಯಕ್ಷೇತ್ರಗಳಲ್ಲಿ ಅವರು ಯಾವುದೇ ರಾಜಿಯಿಲ್ಲದಂತೆ ಹಸನಾಗಿಯೇ ಕೃಷಿಮಾಡಿ ಸಮೃದ್ಧತೆ ತರಬಲ್ಲರು. ಗಟ್ಟಿಯಾಗಿ ಕಟ್ಟಬಲ್ಲರು. ಭದ್ರಬುನಾದಿಯ ತಳಹದಿ ಹಾಕಬಲ್ಲರು. ಎಲ್ಲಕಿಂತ ಹೆಚ್ಚಾಗಿ ಈ ಎಲ್ಲ ಹರಹಿನ ಸ್ಥಳದಲ್ಲಿ ಸೂಕ್ಷ್ಮತೆಯ ಅವಶ್ಯಕತೆಯಿದೆ. ಅದು ಅವರಲ್ಲಿ ಹೆಚ್ಚಾಗಿಯೆ ಇದೆ. ಸಂವೇದನೆಯ ತೀವ್ರ ಸ್ಥಿತಿಗೆ ಬರಗೂರರೂ ಕೂಡ ಉದಾಹರಣೆ. ಪ್ರಜಾಸತ್ತಾತ್ಮಕವಾಗಿ, ಸಂವಿಧಾನದ ಆಶಯದಂತೆ ಅವರ ನಿರಂತರ ಕಾರ್ಯತತ್ಪರತೆ.  ಹದವಾದ ಭಾವುಕತೆಯೊಂದಿಗೆ ಆಲೋಚನಾಪರತೆ ಅವರದು. ಗತಿಶೀಲ ಅಧ್ಯಾಯಕ್ಕೆ ಪ್ರೀತಿಯಿಂದಲೇ ಬರಗೂರರು ಉತ್ತಮವಾಗಿ ಮುನ್ನುಡಿ ಬರೆಯಬಲ್ಲರು.

ದೂರದೃಷ್ಟಿಯುಳ್ಳ. ಸೈದ್ಧಾಂತಿಕ ಬದ್ಧತೆಯುಳ್ಳ ಯಾವುದೆ ನಾಯಕರನ್ನು ಆಯಾ ಕಾಲಘಟ್ಟದ ಕೆಲವು ಪಲ್ಲಟಗಳು, ಅಸಂಬದ್ಧ ಹೊರಳುಗಳು ಗಲಿಬಿಲಿಗೊಳಿಸಬಹುದು. ಅವುಗಳೊಂದಿಗೆ ಹೋರಾಡುವ ವೈಪರೀತ್ಯವನ್ನು ಸೃಷ್ಟಿಸಬಲ್ಲದು. ಕೆಲವೊಮ್ಮೆ ಘಾಸಿಯಾಗಲೂಬಹುದು. ಅವೆಲ್ಲವೂ ತಾತ್ಕಾಲಿಕ ಪ್ರಕ್ರಿಯೆಗಳು. ಕೊನೆಗೂ ಸ್ಥಿರವಾಗುವುದು ಮಾನವೀಯ, ಜೀವಪರ ನಿಲುವುಗಳು ಮಾತ್ರ. ಸಾಣೆಹಿಡಿದಾಗ ಉಂಟಾಗುವ ಹೊಳಪು ಸ್ಥಿತಪ್ರಜ್ಞತೆಯನ್ನು ಮತ್ತಷ್ಟು ಪ್ರಜ್ಞಲಗೊಳಿಸಬಹುದು. ಸೈದ್ಧಾಂತಿಕವಾಗಿ ಬದ್ಧತೆಯನ್ನು ಪ್ರಖರಗೊಳಿಸಬಹುದು. ಅಂತಹ ಎಲ್ಲ ಕಾಲಯಾನದ ಕಾಣಿಕೆಗಳ ಅರಿವು ಅವರಿಗಿದೆ.

tippu-sultan-award-for-baraguru-ramachandrappa-aae0d0bc – SFI Karnataka

ಎಲ್ಲರ ಪ್ರೀತಿಯ ಮೇಷ್ಟ್ರು ಬಳಗ ಅಗಾಧವಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಸಂಘಟಕಾರರಾಗಿ, ಬೇರೆ ಬೇರೆ ಕ್ಷೇತ್ರಗಳ ಮುಖ್ಯಸ್ಥರಾಗಿ ಅವರನ್ನು ಸಂಪರ್ಕಿಸುವವರ ಸಂಖ್ಯೆ ವಿಪರೀತವೇ ಇದೆ. ಎಲ್ಲರನ್ನೂ ಸಂಭಾಳಿಸುವುದು, ತಾರತಮ್ಯವಿಲ್ಲದೆ ಪೋಷಿಸುವುದು, ಭಿನ್ನವಾಗದಂತೆ ನಿಭಾಯಿಸುವುದು, ಅಕ್ಕರೆಯ ಅತಃಕರಣದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವುದು ಸುಲಭ ಸಾಧ್ಯ ವಿಷಯವಲ್ಲ. ಹಿರಿಕಿರಿಯರನ್ನು ಪ್ರೋತ್ಸಾಹಿಸುತ್ತ, ಪ್ರಸ್ತುತ ಸಂದರ್ಭಗಳಿಗೆ ಪ್ರತಿಕ್ರಯಿಸುತ್ತ ಚೈತನ್ಯದಾಯಿಯಾಗಿರುವುದು ಕೂಡ ವಿಶೇಷವೆ.  ಒಬ್ಬ ಪರಿಪೂರ್ಣ ನಾಯಕನಿಗಿರಬೇಕಾದ ಸಾಕಷ್ಟು ಗುಣಗ್ರಾಹಿ ಅಂಶಗಳು ಅವರಲ್ಲಿವೆ. ಕುಂದು ಕೊರತೆಗಳು, ಮಿತಿಗಳು ಖಂಡಿತವಾಗಿಯೂ ವ್ಯಕ್ತಿಯ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಬಲ್ಲವು. ಆ ಎಲ್ಲ ಪರಿಮಿತಿ, ಇತಿಮಿತಿಗಳನ್ನು ದಾಟುತ್ತಲೆ, ಅವುಗಳೊಂದಿಗೆ ಸೆಣಸಾಡುತ್ತಲೆ ವರ್ತಮಾನದ ಚಿತ್ರಾತ್ಮಕ ಸಂಕೇತವಾಗುವುದು ಬೆರಗಿನ ವಿಷಯವೇ ಹೌದು. ಪ್ರಜ್ಞಾವಂತ ವಿಚಾರಶೀಲ ನಾಯಕರಾಗಿ, ಇಷ್ಟು ಸುದೀರ್ಘ ವರ್ಷಗಳ ಅವರ ಸತತ ಸಂಘಟನಾತ್ಮಕ, ಸಾಮಾಜಿಕ, ಸಾಹಿತ್ಯಿಕ ಮೊದಲಾದ ಸ್ವಯಂಭೂ ಅನುಭವಗಳ ಮೂಲಕ ಸದೃಢ ಕೌಶಲಗಳ ಸಾಗರವೇ ಆಗಿರುವ ಅವರು ಮತ್ತೂ ಹತ್ತಾರು ವರ್ಷಗಳು ನಮ್ಮೊಂದಿಗಿರಲಿ.


One thought on “ಬರಗೂರರ ಜನ್ಮದಿನಕ್ಕೊಂದು ಬರಹ

  1. ಬರಗೂರರ ವ್ಯಕ್ತಿತ್ವವನ್ನು ಕಾವ್ಯಾತ್ಮಕ ಭಾಷೆಯಲ್ಲಿ, ಭೋರ್ಗರೆದಂತೆ ಒಂದೇ ಉಸಿರಿಗೆ ಸಮರ್ಥವಾಗಿ ಕಟ್ಟಿಕೊಟ್ಟಿರುವ ಲೇಖನವಿದು.ಸೊಗಸಾಗಿ ಮೂಡಿ ಬಂದಿದೆ.ಗುರುಗಳಿಗೆ ಭಾಷೆಯ ಮೂಲಕವೇ ಅವರ ವ್ಯಕ್ತಿ ಶಿಲ್ಪ ಕಡೆದು ಅರ್ಪಿಸಿದ ಈ ಕಲೆಗೆ ಅಭಿನಂದನೆಗಳು ಮಮತ.

Leave a Reply

Back To Top