ಧಾರಾವಾಹಿ ಸಂಗಾತಿ-35 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಕರ್ನಾಟಕ ಏಕೀಕರಣ ಭಾಗ-35*ಕರ್ನಾಟಕ ಏಕೀಕರಣ* ಡಾ. ಜಯದೇವಿತಾಯಿಯವರು ಭಾರತದ ಅಖಂಡತೆಯನ್ನು ಸದಾ ಒಪ್ಪಿಕೊಂಡವರು.ಭಾರತವು ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿರುವ ವೈವಿಧ್ಯಮಯ ರಾಷ್ಟ್ರ. ಭಾಷೆಗಳು ಬೇರೆಬೇರೆಯಾಗಿದ್ದರೂ, ಅವೆಲ್ಲವೂ ಸೇರಿ ಭಾರತದ ಏಕತೆಯನ್ನು ರೂಪಿಸುತ್ತವೆ ಎಂಬ ನಂಬಿಕೆ ಅವರದ್ದಾಗಿತ್ತು. ಹಾಗೇನೆ ಅವರು ಭಾಷಾವಾರು ಪ್ರಾಂತ ರಚನೆಯನ್ನೂ ಬೆಂಬಲಿಸಿದರು. ಭಾಷಾವಾರು ಪ್ರಾಂತ ಎಂದರೆ ದೇಶವನ್ನು ವಿಭಜಿಸುವುದು ಎಂಬ ಅರ್ಥ ಅವರದ್ದಾಗಿರಲಿಲ್ಲ. ಬದಲಾಗಿ, ಒಂದೇ ಭಾಷೆಯನ್ನು ಮಾತನಾಡುವ ಜನರು ಒಂದೇ ಆಡಳಿತದ ಅಡಿಯಲ್ಲಿ ಬಂದರೆ, ಆ ಭಾಷೆಯ ಅಭಿವೃದ್ಧಿ, ಸಂರಕ್ಷಣೆ ಮತ್ತು ಬೆಳವಣಿಗೆಗೆ ಹೆಚ್ಚಿನ ಅವಕಾಶ ದೊರೆಯುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಆ ಕಾಲದಲ್ಲಿ ಕನ್ನಡ ಮಾತನಾಡುವ ಜನರು ವಿವಿಧ ಆಡಳಿತ ಪ್ರದೇಶಗಳಲ್ಲಿ ಚದುರಿಹೋಗಿದ್ದರು. ಇದರಿಂದ ಕನ್ನಡ ಭಾಷೆಯ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಆಡಳಿತದಲ್ಲಿ ಕನ್ನಡದ ಬಳಕೆಗೆ ಹಲವು ಅಡಚಣೆಗಳಿದ್ದವು. ಕನ್ನಡಿಗರ ಪ್ರದೇಶಗಳು ಒಂದಾದರೆ ಕನ್ನಡ ಶಾಲೆಗಳು ಬೆಳೆಯಲು, ಕನ್ನಡದಲ್ಲಿ ಶಿಕ್ಷಣ ದೊರೆಯಲು, ಕನ್ನಡ ಸಾಹಿತ್ಯ ಅಭಿವೃದ್ಧಿಯಾಗಲು ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಉತ್ತಮ ಅವಕಾಶ ಸಿಗುತ್ತದೆ ಎಂದು ಅವರು ನಂಬಿದ್ದರು.ಭಾಷೆಯನ್ನು ಉಳಿಸುವ ಉದ್ದೇಶದಿಂದಜಯದೇವಿತಾಯಿಯವರ ಭಾಷಾವಾರು ಪ್ರಾಂತದ ಬೆಂಬಲಿಸಿದರು..ಅಂತೆಯೇ ಅದರ ಹಿಂದೆ ಭಾಷಾಭಿಮಾನವಿತ್ತು…… ಭಾಷೆಯು ಒಂದು ಜನಾಂಗದ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಪರಂಪರೆ, ಜೀವನಶೈಲಿ ಮತ್ತು ಭಾವನೆಗಳ ವಾಹಕ. ಆದ್ದರಿಂದ ಒಂದು ಭಾಷೆಯನ್ನು ಉಳಿಸುವುದು ಎಂದರೆ ಅದರೊಂದಿಗೆ ಬೆಸೆದುಕೊಂಡಿರುವ ಸಂಪೂರ್ಣ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದಾಗಿದೆ.ಕನ್ನಡ ಭಾಷಿಕ ಪ್ರದೇಶಗಳು ಒಂದಾಗುವುದರಿಂದ ಕನ್ನಡಿಗರಲ್ಲಿ “ನಾವೆಲ್ಲರೂ ಒಂದೇ” ಎಂಬ ಭಾವನೆ ಬಲವಾಗುತ್ತದೆ. ಕನ್ನಡ ಶಾಲೆಗಳು, ಶಿಕ್ಷಣ ಸಂಸ್ಥೆಗಳು, ಸಾಹಿತ್ಯ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ಕನ್ನಡ ಭಾಷೆ ಮುಂದಿನ ಪೀಳಿಗೆಗೂ ಸುರಕ್ಷಿತವಾಗಿ ಸಾಗುತ್ತ ಬಂದಿತು ಜಯದೇವಿತಾಯಿಯವರ ವಿಚಾರದಲ್ಲಿ ಕರ್ನಾಟಕದ ಏಕೀಕರಣ ಮತ್ತು ಭಾರತದ ಅಖಂಡತೆ ಪರಸ್ಪರ ವಿರೋಧಿಗಳಲ್ಲ. ಕರ್ನಾಟಕ ಒಂದಾಗುವುದು ಭಾರತದೊಳಗೇ ಒಂದು ರಾಜ್ಯದ ಏಕೀಕರಣವೆಂದರೆ“ನಾಡು ಒಂದಾಗಲಿ, ಭಾಷೆ ಬೆಳೆಯಲಿ.. ಎಂಬ ಭಾವನೆ ಅವರ ಚಿಂತನೆಯಲ್ಲಿತ್ತು. ಅಖಂಡ ಕರ್ನಾಟಕ ಏಕೀಕರಣ ಆಗಷ್ಟೇ ಹುಟ್ಟಿಕೊಂಡಿದ್ದಾಗಿರಲಿಲ್ಲ …ಕೆಲವು ದಶಕಳ ನಿರಂತರ ಹೋರಾಟ ನಡೆದೇಯಿತ್ತು…. ೧೯೧೬,ರಲ್ಲಿ ಮೌಂಟೇಗ್ಯೂ ಚೆಮ್ಸ್‌ಫರ್ಡ್ ಭಾರತಕ್ಕೆ ಬಂದ ಸಂದರ್ಭದಲ್ಲಿ, ಉತ್ತರ ಕರ್ನಾಟಕದ ಪ್ರಮುಖ ವಿದ್ಯಾಸಂಸ್ಥೆಯಾಗಿದ್ದ *ವಿದ್ಯಾವರ್ಧಕ ಸಂಘವು* ಅವರಿಗೆ ಒಂದು ಬಿನ್ನಹ ಪತ್ರವನ್ನು ಸಲ್ಲಿಸಿತು.ಆ ಬಿನ್ನಹ ಪತ್ರದಲ್ಲಿ ಕನ್ನಡಿಗರ ಪ್ರಮುಖ ಸಮಸ್ಯೆಯನ್ನು ವಿವರಿಸಲಾಗಿತ್ತು. ಆಗ ಕನ್ನಡ ಮಾತನಾಡುವ ಜನರು ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಕರ್ನಾಟಕದ ಕನ್ನಡ ಭಾಷಿಕ ಪ್ರದೇಶಗಳು ವಿವಿಧ ಪ್ರಾಂತಗಳು ಮತ್ತು ಸಂಸ್ಥಾನಗಳಲ್ಲಿ ಹಂಚಿಹೋಗಿದ್ದವು. ಇದರಿಂದ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ಕನ್ನಡಿಗರ ಅಭಿವೃದ್ಧಿಗೆ ತೊಂದರೆಯಾಗುತ್ತಿತ್ತು. ಆದ್ದರಿಂದ ಭಾಷೆಯ ಆಧಾರದ ಮೇಲೆ ಪ್ರಾಂತಗಳನ್ನು ರಚಿಸಬೇಕು ಮತ್ತು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ಪ್ರಾಂತದ ಅಡಿಯಲ್ಲಿ ಸೇರಿಸಬೇಕು ಎಂದು ವಿದ್ಯಾವರ್ಧಕ ಸಂಘವು ಮನವಿ ಮಾಡಿತು. ಇದುವೇ ಮುಂದೆ ಕರ್ನಾಟಕ ಏಕೀಕರಣದ ಬೇಡಿಕೆಗೆ ಪ್ರಮುಖ ಬಲ ನೀಡಿತು.ಈ ಸಂದರ್ಭದಲ್ಲಿ ಭಾಷಾವಾರು ಪ್ರಾಂತ ರಚನೆಯ ವಿಚಾರದ ಬಗ್ಗೆ ಚರ್ಚೆ ನಡೆಯಿತು. ೧೯೧೭ರಲಿ ಮಹಾತ್ಮ ಗಾಂಧೀಜಿಯವರಿಗೆ ಮನವಿ ಸಲ್ಲಿಸಲಾಗಿತ್ತು.ಭಾಷೆಯ ಆಧಾರದ ಮೇಲೆ ಪ್ರಾಂತಗಳನ್ನು ರಚಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಕಾಂಗ್ರೆಸ್ ಒಪ್ಪಿಗೆ ನೀಡಿತು. ಇದರಿಂದ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಪ್ರಾಂತದ ಅಡಿಯಲ್ಲಿ ತರಬೇಕು ಎಂಬ ಆಶಯಕ್ಕೆ ಮತ್ತಷ್ಟು ಬಲ ದೊರೆಯಿತು. ನಂತರ ಕರ್ನಾಟಕ ಏಕೀಕರಣಕ್ಕಾಗಿ ನಡೆದ ವಿವಿಧ ಸಭೆ, ಸಮ್ಮೇಳನ ಮತ್ತು ಮನವಿಗಳ ಮೂಲಕ “ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳು ಒಂದಾಗಬೇಕು” ಎಂಬ ಬೇಡಿಕೆ ನಿರಂತರವಾಗಿ ಮುಂದುವರಿಯಿತು.ಈ ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಉದ್ದೇಶದಿಂದ *ಕರ್ನಾಟಕ ಏಕೀಕರಣ ಪರಿಷತ್ತು* ಸ್ಥಾಪಿಸಲಾಯಿತು. ಕರ್ನಾಟಕದ ವಿವಿಧ ಭಾಗಗಳ ಕನ್ನಡಿಗರನ್ನು ಒಂದುಗೂಡಿಸಿ, ಏಕೀಕರಣದ ಉದ್ದೇಶವನ್ನು ಜನರಲ್ಲಿ ಬಿತ್ತುವುದು ಮತ್ತು ಸರ್ಕಾರದ ಗಮನವನ್ನು ಸೆಳೆಯುವುದು ಈ ಪರಿಷತ್ತಿನ ಪ್ರಮುಖ ಉದ್ದೇಶವಾಗಿತ್ತು. ಕರ್ನಾಟಕ ಏಕೀಕರಣ ಪರಿಷತ್ತಿನ ಅಧಿವೇಶನಗಳು ಕೈಕೊಳ್ಳಲಾರಂಭಿಸಿದರು. ೧೯೨೪ ಡಿಸೆಂಬರ್ ೨೫ ರಂದು ಬೆಳಗಾವಿಯಲ್ಲಿ ಮೊದಲ ಅಧಿವೇಶನ ನಡೆಯಿತು.ಅಧಿವೇಶನದ ಅಧ್ಯಕ್ಷರು ಸಿದ್ಧಪ್ಪ ಕಂಬಳಿ ಅವರುವಹಿಸಿದ್ದರು….ಈ ಅಧಿವೇಶನದಲ್ಲಿ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸುವ ಅಗತ್ಯದ ಬಗ್ಗೆ ಚರ್ಚಿಸಲಾಯಿತು. ಕನ್ನಡಿಗರಲ್ಲಿ ಏಕತೆಯ ಭಾವನೆ ಮೂಡಿಸುವುದು ಮತ್ತು ಏಕೀಕರಣದ ಹೋರಾಟವನ್ನು ಬಲಪಡಿಸುವ ಬಗ್ಗೆ ಚಿಂತನೆ ನಡೆಯಿತು.೧೯೨೬ರಲಿ ಜರುಗಿದ ಎರಡನೇ ಅಧಿವೇಶನಕ್ಕೆ ಪಟ್ಟಾಭಿ ಸೀತಾರಾಮಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು.ಈ ಅಧಿವೇಶನದ ಮೂಲಕವೂ ಕನ್ನಡ ಪ್ರದೇಶಗಳ ಏಕೀಕರಣದ ಬೇಡಿಕೆಯನ್ನು ಮತ್ತಷ್ಟು ಬಲವಾಗಿ ಮುಂದಿಡಲಾಯಿತು. ಕರ್ನಾಟಕದ ವಿವಿಧ ಭಾಗಗಳ ನಾಯಕರು ಹಾಗೂ ಹೋರಾಟಗಾರರು ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಮುಂದಾದರು. ೧೯೨೮ರ ಮೂರನೇ ಅಧಿವೇಶನವು ಧಾರವಾಡದಲ್ಲಿ ನಡೆಯಿತು.ಇದಕ್ಕೆ ಫ. ಗು. ಹಳಕಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಧಾರವಾಡವು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಕೇಂದ್ರವಾಗಿ ಬೆಳೆಯಲು ಈ ರೀತಿಯ ಸಭೆಗಳು ಸಹಾಯ ಮಾಡಿದವು.ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಅದರ ಶಾಖೆಗಳು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಸ್ಥಾಪನೆಯಾದವು. ಇದರ ಮೂಲಕ ಏಕೀಕರಣದ ಸಂದೇಶವು ಗ್ರಾಮ, ಪಟ್ಟಣ ಮತ್ತು ವಿವಿಧ ಕನ್ನಡ ಪ್ರದೇಶಗಳಿಗೆ ತಲುಪಿತು. ಜನರಲ್ಲಿ “ನಾವೆಲ್ಲರೂ ಕನ್ನಡಿಗರು, ನಮ್ಮ ನಾಡು ಒಂದಾಗಬೇಕು” ಎಂಬ ಭಾವನೆ ಗಟ್ಟಿಯಾಯಿತು.ಈ ಚಳವಳಿಯ ಪ್ರಮುಖ ನಾಯಕರಲ್ಲಿ ಆಲೂರು ವೆಂಕಟರಾಯರು, ಕಡಪ ರಾಘವೇಂದ್ರರಾಯರು, ಮುದವೀಡು ಕೃಷ್ಣರಾಯರು, ನರಗುಂದಾರಾಯಣ ದೇಶಪಾಂಡೆ ಮುಂತಾದವರು ಪ್ರಮುಖರಾಗಿದ್ದರು. ಇವರು ಕನ್ನಡಿಗರನ್ನು ಸಂಘಟಿಸಿ, ಕರ್ನಾಟಕದ ಏಕೀಕರಣಕ್ಕಾಗಿ ನಿರಂತರವಾಗಿ ಶ್ರಮಿಸಿದರು. ವಿದ್ಯಾವರ್ಧಕ ಸಂಘದಂತಹ ಸಂಸ್ಥೆಗಳು, ಕಾಂಗ್ರೆಸ್‌ನ ಭಾಷಾವಾರು ಪ್ರಾಂತದ ಪರವಾದ ನಿಲುವು, ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಕನ್ನಡ ಮಾತೆಯ ಮಕ್ಕಳ ನಿರಂತರ ಪ್ರಯತ್ನಗಳು ಮುಂದೆ ಕರ್ನಾಟಕ ಏಕೀಕರಣಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿದವು. ಸವಿತಾ ದೇಶಮುಖ