ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಜಯಶ್ರೀ.ಭ.ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ ಜಯಶ್ರೀ.ಭ.ಭಂಡಾರಿ ಅವರ ಗಜಲ್ ಹುಸಿ ಕೋಪ ಮರೆತು ಎಲ್ಲರೊಂದಿಗೆ ಬೆರೆಯುವುದೇ ಮಾತು.ತುಸು ದೂರ ಇದ್ದವರ ಹತ್ತಿರ ಕರೆಯುವುದೇ ಮಾತು. ಸುಮ್ಮನೇ ಜಗಳ ಮಾಡಿ ದ್ವೇಷ ಸಾಧಿಸುವುದು ಸರಿಯೇ.ಬಿಮ್ಮನೆ ಮುಖ ಊದಿಸಿದರೆ ಅಗಲಿ ತೊರೆಯುವದೇ ಮಾತು. ಸಿಹಿಯ ‌ದ್ವನಿ ಕೇಳುಗನ ಮನ ತಣಿಸುವುದು ನೋಡು.ಕಹಿಯ ಕಂಠ ನೋವ ನೀಡುತ ಕೊರೆಯುವುದೇ ಮಾತು. ಒಂದಾಗಿ ಚಂದದಿ ಬಾಳುತ ಸಾಗುವುದೇ ರಸಮಯ ಜೀವನ.ಬಂಧನದಿ ಭುವಿಗೆ ಹೊಂದಿಕೊಳ್ಳದಿರೆ ವಿಷ ಎರೆಯುವುದೇ ಮಾತು ಹೃದಯ ಪರಸ್ಪರ ಮಿಡಿದರೆ ಒಲವಿನ ಜಯ ಸಿಗುವುದುಮಧುರ ಬಾಂಧವ್ಯ ಬೆಸೆದರೆ ಸಂಕಟ ಮರೆಯುವುದೇ ಮಾತು ಜಯಶ್ರೀ.ಭ.ಭಂಡಾರಿ.

ಜಯಶ್ರೀ.ಭ.ಭಂಡಾರಿ ಅವರ ಗಜಲ್ Read Post »

ನಿಮ್ಮೊಂದಿಗೆ

ವೈ .ಎಸ್.ಹರಗಿ ಅವರ ಕೃತಿ “ಇಮಾಮ್ ಸಾಹೇಬರ ಕುದುರೆ” ಒಂದು ಅವಲೋಕನ,‌ ಸಂಗೀತ ರವಿರಾಜ್

ಪುಸ್ತಕ ಸಂಗಾತಿ ಸಂಗೀತ ರವಿರಾಜ್ ವೈ .ಎಸ್.ಹರಗಿ “ಇಮಾಮ್ ಸಾಹೇಬರ ಕುದುರೆ” ದಂಗುಬಡಿಸುವಂತಹ ಭಾಷಾ ಸಂಪತ್ತು,ನೂರಾರು ಗಾದೆಗಳು,ಲೋಕೋಕ್ತಿಗಳು, ಗ್ರಾಮ್ಯ ಭಾಷೆಯ ಸೊಗಡು  ಇವೆಲ್ಲವೂ ಮೇಳೈಸಿದ ಒಂದು ವಿಶಿಷ್ಟವಾದ ನಿರೂಪಣೆಯ ಕಾದಂಬರಿ ” ಇಮಾಮ್ ಸಾಹೇಬರ ಕುದುರೆ ” . ವೈ. ಎಸ್. ಹರಗಿ ವಿರಚಿತ, ಇಮಾಮ್ ಸಾಹೇಬರ ಕುದುರೆ ಕಾದಂಬರಿ ಇಪ್ಪಂತೊoಭತ್ತು ಆಸಕ್ತಿದಾಯಕ ಶೀರ್ಷಿಕೆಗಳ ಅಧ್ಯಾಯಗಳನ್ನು ಹೊಂದಿ ಓದುಗರಿಗೆ ಹೊಸ ಅನುಭೂತಿಯನ್ನು ಕೊಡುತ್ತದೆ.          ಈ ಕಾದಂಬರಿಯ ಕೊನೆಯ ಸಾಲುಗಳು “ನೀವು ಜಾತಿ,ಮತ,ಧರ್ಮಗಳ ಒಳಸುಳಿಯಲ್ಲಿ ಮನುಷ್ಯನ ಹುಟ್ಟನ್ನು ಹಿಡಿದಿಡಬಹುದು. ಆದರೆ ಸಾವನ್ನು ಮಾತ್ರ ಹಿಡಿದಿಡಲು ಸಾಧ್ಯವಿಲ್ಲ. ಮರಣದ ಮೂಲಕ ವ್ಯಕ್ತಿಯು ವಿಶ್ವಮಾನವತೆಯ ಪರಿಧಿಗೆ ಸೇರಿ ಪಂಚಮಹಾಭೂತಗಳಲ್ಲಿ ಲೀನವಾದಾಗ ಅವನನ್ನು ಹಿಂಬಾಲಿಸಿದ ನಿಮ್ಮ ಶ್ರೇಷ್ಠತೆಯ ಜಾತಿ,ಮತ ಧರ್ಮಗಳು ಸಾವಿನ ಎದುರು ಅನಾಥವಾಗುತ್ತವೆ.  ಪ್ರಯೋಜನವಿಲ್ಲದ ನಿಷ್ಪ್ರಯೋಜಕ ಕೊರಡುಗಳಾಗುತ್ತದೆ! ”  ಈ ಮಾತುಗಳು ಸಂಪೂರ್ಣ ಕಾದಂಬರಿಗೆ ಹಿಡಿದ ಕೈಗನ್ನಡಿಯಾಗಿದೆ.  ಮಹಾಮಡಿವಂತರಾದ ಗಣಾಚಾರರು ಹಳ್ಳದಲ್ಲಿ ಬಿದ್ದು ಸಾಯುವಾಗ ಹೆಣ ಬಾತು ಭಾರವಾಗಿ ಹೆಗಲು ಕೊಡಲು ಪ್ರಯಾಸಪಟ್ಟವರು ಜೀವಂತವಿದ್ದಾಗ ಅವರನ್ನು ಮುಟ್ಟಬಾರದ ಜನರು ! ಇಂತಹ ವಿಪರ್ಯಾಸದ ನಿದರ್ಶನಗಳು ಕಾದಂಬರಿಯುದ್ದಕ್ಕೂ  ನಮಗೆ ಸಿಗುತ್ತವೆ. ಹಾಗೂ ಇವೆಲ್ಲ ನಮ್ಮನ್ನು ನಾವು ಅರಿಯಲು ಇರುವಂತಹ ಓದುಗರು ಮೆಚ್ಚುವಂತಹ ಕಾದಂಬರಿಯ ಅಂಶಗಳು.        ಗ್ರಾಮೀಣ ಬದುಕೆಂದರೆ ಅದೊಂದು ಅನುಭವಗಳ ಕಣಜ ಮತ್ತು ಜೀವನದ ವಿಶ್ವಕೋಶ. ಬಗೆದಷ್ಟು ಅನುಭವಗಳ ಮೂಟೆ,  ಜೀವನ ಪಾಠ ನಮಗಿಲ್ಲಿ ಲಭ್ಯ. ಲೇಖಕರು ಹಳ್ಳಿಯಲ್ಲಿ ಬೆಳೆದಿದ್ದರ ಪರಿಣಾಮ ಮಾತ್ರವಲ್ಲದೆ, ಹಳ್ಳಿಯ ಜೀವನವನ್ನು ಅಪಾರವಾಗಿ ಪ್ರೀತಿಸಿದ್ದರಿಂದ ಇಂತಹ ಹಳ್ಳಿಯ ಚಿತ್ರಣದ, ಕನ್ನಡದ ಒಂದು ಉಪಭಾಷೆಯ ಶಬ್ದಗಳಿರುವ ಕಾದಂಬರಿ  ಇವರಿಂದ ಮೂಡಿಬಂದಿದೆ ಎಂಬುದಾಗಿ ನಿಚ್ಚಳವಾಗಿ ಹೇಳಬಹುದು.  ಕಾದಂಬರಿಯ ನನ್ನ ಮಾತುವಿನಲ್ಲಿ ಅವರೇ ಹೇಳಿಕೊಂಡಂತೆ,  ” ಬಹುಶಃ ನಾನು ಹುಲ್ಲೂರಿನಂತಹ ಕುಗ್ರಾಮದಲ್ಲಿ ಹುಟ್ಟದೆ ಇದ್ದಿದ್ದರೆ ಅಥವಾ ಹಳ್ಳಿಯ ಸೂಕ್ಷ್ಮ ಬದುಕಿನ ಹಳವಂಡಗಳು,ಜೀವ ವಿರೋಧಿ ಸೈತಾನಿಗಳ ಶೋಷಣೆ, ಮನೋವಿಕಾರದ ಠೇಂಕಾರ,  ಶೋಷಿತರ ಚೀತ್ಕಾರಗಳು, ಸಾಮಾಜಿಕ ಸ್ಥಿತಿ ಬಿಂಬಗಳು ನನ್ನ ಅರಿವಿಗೆ ಬಾರದೆ ಇದ್ದರೆ ಈ ಗ್ರಾಮೀಣ ಬದುಕಿನ ಕೃತಿಯನ್ನು ಬರೆಯಲು ಆಗುತ್ತಿರಲಿಲ್ಲವೇನೋ”  ಎಂದಿದ್ದಾರೆ.         ಕಾದಂಬರಿಯಲ್ಲಿ ಹಳ್ಳಿಯ ವ್ಯಕ್ತಿ ಚಿತ್ರಣಗಳು ಮತ್ತು ಹಳ್ಳಿಯ ಬಹುತೇಕ ಅಕ್ಷರಸ್ಥರಲ್ಲದ ಕಾಲದ ಹಳ್ಳಿಯ ಸಮಾಜದ ಅನುಭವಗಳನ್ನು ಲೇಖಕರು ಗ್ರಹಿಸಿರುವುದು ಮಾತ್ರ ಅಭೂತಪೂರ್ವವಾಗಿದೆ.  ಅದರಲ್ಲೂ ಮುಖ್ಯವಾಗಿ ಅಭಿವೃದ್ಧಿಯ ಯಾವುದೇ ಕೆಲಸವನ್ನು ಮಾಡಲಾಗದೆ ಅತಂತ್ರ ಸ್ಥಿತಿಗೆ ಒಬ್ಬ ಉತ್ತಮ ಆಡಳಿತಗಾರನನ್ನು ತಳ್ಳುವಂತಹ ವ್ಯವಸ್ಥೆ ನಮ್ಮನ್ನೆಲ್ಲ ಇಲ್ಲಿ ಕಾಡುತ್ತದೆ.  ಇಂತಹ ಮಹತ್ವದ ಕೃತಿ ಬರೆಯಲು ಇಂತಹ ರಾಜಕೀಯವು ಇವರಿಗೆ ಸ್ಫೂರ್ತಿ   ಆಗಿದ್ದಿರಬಹುದು ಎಂದರು ತಪ್ಪಲ್ಲ.  ಸಂಸ್ಕೃತ ಕವಿವಿಶಾಖದತ್ತನ್ನು ಹೇಳುವಂತೆ, “ರಾಜಕಾರಣಿಯ ನೀತಿಗಳು ಅವನಲ್ಲಿ ತಲುಪುವ ಗುರಿಯಿಂದ ತಿಳಿಯುತ್ತದೆ ವಿನಃ ಅವನ ಮಾತಿನಿಂದಲ್ಲ”  ಎಂಬುದಕ್ಕೆ ಕಾದಂಬರಿಯ ರಾಜಕಾರಣಿ ದೇವರಾಯಪ್ಪನನ್ನು ಲೇಖಕರು ಚಿತ್ರಿಸಿರುವುದು ವಿಭಿನ್ನವಾಗಿ ಮೂಡಿಬಂದಿದೆ.          ಮಲ ಹೊರುವಂತಹ ಪದ್ಧತಿಯ ಆಯಗಾರರ ಕಥಾಹಂದರ ಹೊಂದಿರುವ ಈ ಕಾದಂಬರಿ ಎಷ್ಟೋ ದಶಕಗಳ ಹಿಂದಿನ ವಿಚಾರವಾದರೂ,ಲೇಖಕರ ಸೃಜನಶೀಲ ಚಿಂತಿಸುವಿಕೆಯ ಕಾರಣದಿಂದ ಹೊಸತನದಿಂದ ಮೂಡಿ ಬಂದಿದೆ.  ಆಯಗಾರರ ಜನರ ತಲ್ಲಣಗಳನ್ನು ಅರ್ಥೈಸಿಕೊಂಡ ಲೇಖಕರು ಈ ಪದ್ಧತಿಯನ್ನು ಹೋಗಲಾಡಿಸುವ ಸಲುವಾಗಿ ಕಾದಂಬರಿಯಲ್ಲಿ ಬಹಳ ಹೆಣಗಾಡಿದ್ದಾರೆ ಅಂದರೆ, ಆ ಕಾಲದಲ್ಲಿ ಸಮಾಜದ ದುಸ್ಥಿತಿ ಹೇಗಿರಬಹುದೆಂದು ನಾವು ಊಹಿಸಿಕೊಳ್ಳಬಹುದು.  ಕೊನೆಗೂ ಅಂತಹ ಜಾತಿಗೊಂದು ಇದ್ದ ಕೆಟ್ಟ ಕಸುಬನ್ನು ಹೋಗಲಾಡಿಸುವಲ್ಲಿ ಮಾತ್ರ ಲೇಖಕರು ಗೆದ್ದಿದ್ದಾರೆ ಎನ್ನಬಹುದು. ಉಳಿದಂತೆ ಧರ್ಮ, ಜಾತಿಗಳ ಕೆಟ್ಟ ರಾಜಕೀಯದ ವ್ಯವಸ್ಥೆಗೆ ಜನಸಾಮಾನ್ಯರು ಶರಣಾಗುವ, ಬಲಿಯಾಗುವ ಹುಂಬತನವನ್ನು ಗೆಲ್ಲಲು ಆ ಕಾಲದಲ್ಲೂ, ಈ ಕಾಲದಲ್ಲೂ ಸಾಧ್ಯವಿಲ್ಲ ಎಂಬುದನ್ನು ಮನಗಾಣಿಸಿದ್ದಾರೆ. ಪರಸ್ಪರ ಮಾನವೀಯತೆ,ಪ್ರೀತಿ ಇಲ್ಲದೆ ಎರಡು ಧರ್ಮದವರು ವಿನಾಕಾರಣ ಸತ್ತಿರುವುದು ಕಾದಂಬರಿಯ ವಿಪರ್ಯಾಸವಾದರೂ ಧರ್ಮ,  ಜಾತಿಗಳ ಜಗಳದ ವಿರುದ್ಧ ಹೋರಾಟ ಬೇಕು ಎನ್ನುವ ಸಂದೇಶ ಕಾದಂಬರಿಯಲ್ಲಿದೆ.         ಇಮಾಮ್ ಸಾಹೇಬರಿಗೂ ಗೋಕುಲಾಷ್ಟಮಿಗು ಏನು ಸಂಬಂಧ?  ಎನ್ನುವ ಗಾದೆಯನ್ನು  ಹಲವಾರು ಸಂದರ್ಭದಲ್ಲಿ ನಾವು ಕೇಳಿಕೊಂಡು ಬಂದಿದ್ದೇವೆ. ಈ ಗಾದೆಯ ಹುಟ್ಟು ಮತ್ತು  ತಾತ್ಪರ್ಯ ನಮಗಿಲ್ಲಿ ಗೋಚರಿಸುತ್ತದೆ.  ನೂರು ವರ್ಷಗಳ ಕಾಲ ಬಾಳಿ ಬದುಕಿದ ಸಾಮರಸ್ಯದ ಕೊಂಡಿಯಾಗಿದ್ದ ಪವಾಡ ಪುರುಷನೆಂದು ಹೆಸರುವಾಸಿಯಾಗಿದ್ದ ಇಮಾಮ್ ಸಾಹೇಬರ ಸಮಾಧಿ ಸರ್ವ ಜನಾಂಗದ ಪೂಜನೀಯ ದರ್ಗವಾಗಿ ಉಳಿದುಕೊಂಡಿದೆ.  ಅದಕ್ಕೆ ಕಾರಣ ಹಿರೇಮಠದ ಗುರುಲಿಂಗೇಶ್ವರ ದೇವರ ಗದ್ದುಗೆಗೆ  ರುದ್ರಾಭಿಷೇಕ,ಬಿಲ್ವಾರ್ಚನೆ ಆಗಿ ದೇವರ ಮೆರವಣಿಗೆ ಮಾಡುತ್ತಾ ಊರಿನ ರಾಜಭೀದಿಯಲ್ಲಿ ಬಂದು ಇಮಾಮ್ ಸಾಹೇಬರ ಸಮಾಧಿ ಸ್ಥಳಕ್ಕೆ ಬರುತ್ತಾರೆ.  ಸ್ವತಃ ಇಮಾಮ ಸಾಹೇಬರು ಕ್ರಿಸ್ತ ಶಕ  1811ರಲ್ಲಿ ಪೈಗಂಬರ ವಾಸಿಯಾದ ನಂತರ ಇದು ಹೀಗೆ ಮುಂದುವರೆದುಕೊಂಡು ಬಂದಿದೆ. ಇಮಾಮ್ ಸಾಹೇಬರಿಗೆ ಬ್ರಿಟಿಷ್ ಅಧಿಕಾರಿ ಹರಕೆ ರೂಪದಲ್ಲಿ ಕುದುರೆಯನ್ನು ನೀಡಿರುವುದೇ ಗ್ರಾಮದಲ್ಲಿ ದರ್ಗಾಕ್ಕೆ ಕುದುರೆ ಬಿಡುವ ರೂಡಿಗೆ ಬಂದಿರುವ ಹಿನ್ನೆಲೆಯಾಗಿದೆ. ಕಾದಂಬರಿಯ ಹಳ್ಳಿ ಶಾಂತಿಪುರದಲ್ಲಿ ಒಂದಾನೊಂದು ಕಾಲದಲ್ಲಿ ಎರಡು ಧರ್ಮದವರ ಸಾಮರಸ್ಯ ಸಹಜವಾಗಿ ಇತ್ತು.  ಕ್ರಿಸ್ತ ಶಕ 1811 ರಲ್ಲಿ ಬದುಕಿದ್ದ ಇಮಾಮ್ ಸಾಹೇಬರೇ ಸ್ವತಃ ಕುದುರೆ ಏರಿ ಕಡುಬಿನ ಕಾಳಗದ ದಿವಸ ಹಿರೇಮಠದ ಗುರುಲಿಂಗೇಶ್ವರನ ಗದ್ದುಯವರೆಗು ಬಂದು,  ಗದ್ದುಗೆಗೆ ಹೂಮಾಲೆ ಹಾಕಿ ಕೈಮುಗಿದು ಹೋಗುತ್ತಿದ್ದರಂತೆ. ಆ ಪ್ರತೀತಿ ಮುಂದುವರೆದುಕೊಂಡು ಬಂದು ತದನಂತರ ಊರಿನ ಜನರು ತಾವೇ ಕಟ್ಟಿಕೊಂಡ ಮತ ಧರ್ಮಗಳ ಗೋಡೆಗಳ ಆಚೆ ಈಚೆ ಪರಸ್ಪರ ಮೂಗು ಮುರಿಯುತ್ತಿದ್ದರೆ, ಹಿರೇಮಠದ ಗರ್ಭಗುಡಿ ಗೋಪುರ ಮತ್ತು ಇಮಾಮ್ ಸಾಹೇಬರ ದರ್ಗಾ ಕಟ್ಟೆಯ ಮೇಲೆ ಬೆಳೆದು ನಿಂತ ಆಕಾಶದೆತ್ತರದ ಬೇವಿನ ಮರಗಳು ಮಾತ್ರ ಅನ್ಯೋನ್ಯತೆಯಿಂದ ಪರಸ್ಪರ ಮುಖ ನೋಡಿ ನಿತ್ಯವು ಶಾಂತಿಪುರದ ಜನರ ಹುಚ್ಚುತನಕ್ಕೆ ನಗೆಯಾಡುವಂತೆ ಕಾಣುತ್ತದೆ. ಇಂತಹ ವಿಪರ್ಯಾಸಗಳ ವೈರುಧ್ಯಗಳು ಪ್ರಾರಂಭವಾದ ಹಂತದ ಜನರ ಮನಸ್ಥಿತಿ ಕಾದಂಬರಿಯಲ್ಲಿ ಕಾಣಸಿಗುತ್ತದೆ.        ಹಿಂದಿನ ತಲೆಮಾರಿನಲ್ಲಿ ಇದ್ದಂತಹ ಧರ್ಮ, ಜಾತಿಯ ಅನ್ಯೋನತೆ ಹಂತ ಹಂತವಾಗಿ ಮುಂದಿನ ತಲೆಮಾರಿನವರಲ್ಲಿ ಹೇಗೆ ಮತ್ತು ಏಕೆ ಬದಲಾಗುತ್ತಾ ಹೋಯಿತು ಎನ್ನುವ ಚಿತ್ರಣವಿದೆ.  ಶಾಂತಿಪುರದ ನೂರು ವರ್ಷದ ಮುಗ್ಧ ಮನಸ್ಸಿನ ಗಡ್ಡಜ್ಜನ ಪಾತ್ರ ಮಾತ್ರ ಮಾರ್ಮಿಕವಾಗಿ ಮೂಡಿಬಂದಿದೆ. ಶಾಂತಿಪುರದ ಕಪ್ಪು ಬೆಳಕಿನ ಇತಿಹಾಸ ಪೂರ್ಣ ಪ್ರಮಾಣದಲ್ಲಿ ಗೊತ್ತಿದ್ದರೂ ಸಾಮರಸ್ಯ ಮರೆತ ಊರಿನ ಜನರಿಂದ ಆತನ ಮನಸ್ಸು ಘಾಸಿಯಾಗಿತ್ತು. ಹೊಲೆ ಮಾದಿಗರು ಇನ್ನಾದರೂ ಆಯಗಾರಕಿ ಬಿಡಬೇಕೆಂದು ಸರಕಾರ ಹೊಸ ಕಾಯಿದೆ ಮಾಡಿದರು, ಊರು ಅವರನ್ನು ಬಿಡಿಸಲು ಒಪ್ಪುತ್ತಿಲ್ಲ.  ಪ್ರಕಾಶನಂತಹ ಕ್ರಾಂತಿಕಾರಿಯ ಹುಟ್ಟು ಕೇರಿಯಿಂದ ಹೊರಬಂದಿರುವುದು ಒಂದು ವಿಶೇಷವಾದರೂ ಆತನ ಹಿರಿಯರೇ ವ್ಯವಸ್ಥೆಯ ಪರವಾಗಿದ್ದರು. ಹೀಗೆ ಊರಿನ ಪಟ್ಟಭದ್ರ ಹಿತಾಸಕ್ತಿಗಳ ಕೈ ಗೊಂಬೆಗಳಾಗಿರುವ ಜನರು ಒಳಿತು ಕೆಡುಕುಗಳ ಮಾನಸಿಕ ತುಮುಲಗಳಲ್ಲಿ  ತೊಯ್ದಾಡುವುದನ್ನು ನಿಬ್ಬೆರಗಾಗುವಂತೆ ಲೇಖಕರು ಚಿತ್ರಿಸಿದ್ದಾರೆ.  ಕಾದಂಬರಿಯಲ್ಲಿ ವಿಭಿನ್ನವಾಗಿ ನಿಲ್ಲುವ ಗುರಯ್ಯ ಗಾಂಧಿ ಅಜ್ಜ ಅವರು ಮಾನವೀಯ ಮೌಲ್ಯಗಳ ಮಾರಣ ಹೋಮ ನೋಡಿ ಹೊರಗಿನ ಕಾಡಿನ ಗುಡಿಗೆ ಹೋಗಿ ವಾಸ ಮಾಡಲು ಪ್ರಾರಂಭ ಮಾಡಿರುವುದು ನೋಡಿದರೆ ನ್ಯಾಯ ಎಲ್ಲಿದೆ ಎಂಬ ಪ್ರಶ್ನೆ ನಮ್ಮೆಲ್ಲರಿಗೂ ಮೂಡುವುದು ಸಹಜ.ಕಾದಂಬರಿಯುದ್ಧಕ್ಕೂ ನಮಗೆ ಲೇಖಕರ ಸೂಕ್ಷ್ಮ ಗ್ರಹಿಕೆಯ ಗುಣ ಪರಿಣಾಮಕಾರಿಯಾಗಿ ಮೂಡಿ ಬಂದಿರುವುದು ಸ್ಪಷ್ಟವಾಗುತ್ತದೆ. ತನ್ನ ಸುತ್ತಲೂ ನಡೆಯುತ್ತಿರುವ ಅಸ್ಪೃಶ್ಯತೆ, ಅನ್ಯಾಯ, ಗಾಳಿ ಸುದ್ದಿಗಳನ್ನು ಹಬ್ಬಿಸುವುದು, ಹೆಣ್ಣನ್ನು ಕೀಳಾಗಿ ನೋಡುವುದು ರಾಜಕಾರಣಿಗಳ ಭ್ರಷ್ಟಾಚಾರ ಇವುಗಳನೆಲ್ಲ ನೋಡಿ ಲೇಖಕರು ಖಂಡಿತ ಕಣ್ಣು ಮುಚ್ಚಿ ಕುಳಿತಿಲ್ಲ.  ಎಷ್ಟೋ ಹಳೆಯ ರಾಜಕೀಯ ಚಿತ್ರಣವನ್ನು ಕಾದಂಬರಿಯಲ್ಲಿ ಚಿತ್ರಿಸಿದರು ಈಗಲೂ ನಮ್ಮ ರಾಜಕೀಯ ಹಾಗೆ ಇರುವುದು ವಿಪರ್ಯಾಸ.  ಎಲ್ಲಾ ಕೆಟ್ಟ ವ್ಯವಸ್ಥೆಗಳನ್ನು ಹಂತ ಹಂತವಾಗಿ ಕಾದಂಬರಿಯಲ್ಲಿ ಸರಿ ಮಾಡುತ್ತಾ ಹೋಗಲು ಪ್ರಯತ್ನಿಸಿರುವುದು ಕಾದಂಬರಿಯ ಹೆಚ್ಚುಗಾರಿಕೆ.  ಆದರೆ ಪ್ರಮುಖವಾಗಿ ಗುರಯ್ಯ ಗಾಂಧಿ ಒಬ್ಬರೇ ಜಾತ್ಯಾತೀತ ನಿಲುವಿನ ಆದರ್ಶನಾಗಿ ಸಮಾಜವನ್ನು ಬದಲಾಯಿಸಲು ನೋಡುತ್ತಾ ಹೋಗುತ್ತಾರೆ. ಆದರೆ ಒಬ್ಬರಿಂದ ಏನು ಸಾಧ್ಯ ಈಗಲೂ ಕೆಲವು ಹಳ್ಳಿಗಳಲ್ಲಿ ಧಾರ್ಮಿಕ ಭೇದವಿಲ್ಲದೆ ಜನರು ಬದುಕುತ್ತಿರುವ ಉದಾಹರಣೆಗಳು ನಮಗೆ ಸಿಗುತ್ತವೆ. ಒಟ್ಟಿನಲ್ಲಿ ಕಾದಂಬರಿ ಓದುವಾಗ ಮಾನವೀಯತೆ ಮಾತ್ರ ಮುಖ್ಯ ಉಳಿದದ್ದೆಲ್ಲ ನಗಣ್ಯ ಎನ್ನುವ ವಿಷಯನಮಗೂ ಮನವರಿಕೆಯಾಗುತ್ತದೆ.ಇದುವೇ ಕಾದಂಬರಿಯ ಉತ್ತಮ ಸಂದೇಶವು ಆಗಿದೆ.           ಲೇಖಕರು ಕಾದಂಬರಿಯಲ್ಲಿ ಬಳಸಿರುವ ಕನ್ನಡದ ಉಪಭಾಷೆಗಳ ಶಬ್ದಗಳು ಇಸಿ, ಚಿಟಬಿಲ್ಲಿ, ಹಸೇ ತಂಬಾಕ, ಹರಗುಣೀ, ಕೊರಿ ಚುಟ್ಟ, ಚಿಟ  ಬುರಸಿ, ವತ್ತೊಟ್ಟಿಗೆ, ಕಪ್ಪೂ ಬಸಿ, ಜುಲ್ಮಾನೆ, ಈಚೀ ಕಡಸೆ, ಒದರು ಇತ್ಯಾದಿ ಶಬ್ದಗಳು ತೇಜೋಹಾರಿಯಾಗಿದ್ದು  ಓದುಗರನ್ನು ಆಕರ್ಷಕವಾಗಿ  ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.  ಇದರೊಂದಿಗೆ ಅಪರೂಪದ ಗಾದೆ ಮಾತುಗಳು ನಮ್ಮೆಲ್ಲರ ಮನಸ್ಸನ್ನು ಪ್ರಮುಖವಾಗಿ ಗೆಲ್ಲುತ್ತದೆ.  ಹಳ್ಳಿಯಲ್ಲಿ ಆಗಿಂದಾಗೆ ಹುಟ್ಟಿದೆಯೇನೋ ಎನಿಸುವಂತಹ ಗಾದೆ ಮಾತುಗಳು ಬಲು ಚೆನ್ನಾಗಿವೆ. “ಖರ್ಜೂರ ಗಿಡದಾಗ ಹಣ್ಣು ಆದಾಗ ಕಾಗಿ ಬಾಯಿಗೆ ಹುಣ್ಣು”  ” ಚೆಲುವು ಚರ್ಮ ಇರುವ ತನಕ,ಗುಣ ಜೀವ ಇರೋ ತನಕ ” ಅಡೂರಾಗ  ಒಂದು ಗುಡೂರು ಅಂದಂಗ”  ”  ಬೆಕ್ಕಿಲ್ಲದ ಮನೆಯಾಗ ಇಲಿ ಲಗಾಟ ಹೊಡಿತಂತ  ಹಂಗಾತು,   ”  ಇಸ  ಕುಡಿದೇನಂದ್ರ ಕೈಯಾಗ ನಯಾ ಪೈಸೆ ಇಲ್ಲ ” ಇತ್ಯಾದಿಗಳು ತೇಜೋಹರಿಯಾಗಿದ್ದು ನಮ್ಮನ್ನು ಓದಲು ಪ್ರೇರೇಪಿಸುತ್ತವೆ.       ಕಾದಂಬರಿಯಲ್ಲಿ ತನ್ನದೇ ಆದ ಒಂದು ಸತ್ವ ಇದೆ. ಅಂದರೆ ಲೇಖಕರು ತನ್ನದೇ ನೆಲವನ್ನು ಧನ್ಯತಾ ಭಾವದಿಂದ ಸ್ಮರಿಸಿಕೊಂಡಿದ್ದಾರೇನೋ ಎನ್ನುವ ಒಳದನಿ ನಮ್ಮನ್ನು ಇಲ್ಲಿ ತಟ್ಟುತ್ತದೆ.  ಹಿಂದಿನ ಹಳ್ಳಿಯೊಂದರ ಚಿತ್ರಣಕ್ಕೆ ಸಾಕ್ಷಿ ಪ್ರಜ್ಞೆಯಾದ ಲೇಖಕರ ಧೋರಣೆಯನ್ನು ಇನ್ನು ಮುಂದೆಯೂ ಸಮಾಜ ಅಳವಡಿಸಿಕೊಂಡು ಹೋದರೆ ಇಮಾಮ್ ಸಾಹೇಬರ ಕುದುರೆ ಕೃತಿ ಸಾರ್ಥಕತೆ ಪಡೆದುಕೊಳ್ಳುತ್ತದೆ.  ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯು ಲಭಿಸಿದೆ. ವೈ ಎಸ್ ಹರಗಿ ಅವರ ಈ ಕೃತಿ ಶಿರಸಿಯ ಶ್ರೀಗಂಗಾ ಪ್ರಕಾಶನದಿಂದ ಹೊರಬಂದಿದೆ.ಖ್ಯಾತನಾಮರಾದ ಡಾ. ಅಮರೇಶ ನುಗಡೋಣಿ, ಡಾ.  ಮಲ್ಲಿಕಾ ಘಂಟಿ ಇವರ ಮುನ್ನುಡಿಗಳೊಂದಿಗೆ,  ಅಪಾರ ರಘು ಇವರ ಮುಖಪುಟ ವಿನ್ಯಾಸದೊಂದಿಗೆ ತುಂಬಾ ಅಚ್ಚುಕಟ್ಟಾಗಿ ಹೊರಬಂದಿದೆ. ಈಗಾಗಲೇ ಅತ್ಯುತ್ತಮ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವ ಇವರ ಮುಂದಿನ ಬರಹಗಳಿಗೆ ನಮ್ಮ ಶುಭಹಾರೈಕೆಗಳು.     ಸಂಗೀತ ರವಿರಾಜ್, ಚೆಂಬು.  

ವೈ .ಎಸ್.ಹರಗಿ ಅವರ ಕೃತಿ “ಇಮಾಮ್ ಸಾಹೇಬರ ಕುದುರೆ” ಒಂದು ಅವಲೋಕನ,‌ ಸಂಗೀತ ರವಿರಾಜ್ Read Post »

ಇತರೆ

“ಹೆಗಲಿಗೆ ಹೆಗಲಾದ ನಮ್ಮಪ್ಪ.” ದಯಾನ೦ದ ಎಂ ಪಾಟೀಲ.

ಕಾವ್ಯ ಸಂಗಾತಿ ದಯಾನ೦ದ ಎಂ ಪಾಟೀಲ. “ಹೆಗಲಿಗೆ ಹೆಗಲಾದ ನಮ್ಮಪ್ಪ.” ಅಪ್ಪ ತಾತ್ಯಾ ದಾದಾ ಡ್ಯಾಡ ಹೆಸರುಗಳಿಂದ ಕೂಡಿದ ತ೦ದೆ ಸ್ಟಾಭಿಮಾನಿ ಹಾಗೂ ನಿಸ್ವಾರ್ಥ ಪರೋಪಕಾರಿ ಜೀವಿಯೆ೦ದರೆ ತಪ್ಪಗಲಾರದು. ಹಗಲು ರಾತ್ರಿಯೆನ್ನದೇ ತನ್ನ ಕುಟುಂಬ ಗೋಸ್ಕರ ದುಡಿಯುತ್ತಾನೆ.ಬೇನೆ ಬಾಸರಿಕೆ ಇದ್ದರೂ ಕೂಡ ತನ್ನ ಮಕ್ಕಳು ಉಪವಾಸವನವಾಸ ಇರಬಾರದು ತಾನು ಉಪವಾಸ ಇದ್ದರೂ ಕೂಡ ಹೆ೦ಡತಿ ಮಕ್ಕಳಿಗೆ ಪ್ರತಿ ನಿತ್ಯ ಅವಶ್ಯಕತೆ ಪೂರೈಕೆ ಮಾಡುತ್ತಾನೆ. ತಾನು ಹರಿದ ಬಟ್ಟೆ ತೊಟ್ಟಿದ್ದರೂ ತನ್ನ ಮಕ್ಕಳು ಹೊಸ ಹೊಸ ಬಟ್ಟೆ ತೊಡಬೇಕು ತನ್ನ ಹತ್ತಿರ ಸಾದಾ ಪೋನ ಇದ್ದರೂ ಮಕ್ಕಳ ಹತ್ತಿರ IPOne ಇರಬೇಕು ತಾನು ಹಳಸಿದ ಅನ್ನ ತಿ೦ದರೂ ತನ್ನ ಮಕ್ಕಳು ಒಳ್ಳೆಯ ಆಹಾರ ತಿನ್ನಬೇಕು. ಪ್ರತಿಯೊಂದು ಕಾರಣಕ್ಕೂ ಒ೦ದೊಂದು ಕಣ್ಣೀರು ಕಥೆ ಇದೆ.ಇವುಗಳಿಗೆ ಬೆಲೆ ಕಟ್ಟಲು ಸಾಧ್ಯವೆ? ತಂದೆ ಹಿಮಾಲಯ ಪರ್ವತ ಇದ್ದ೦ತೆ ಇಡೀ ಕುಟುಂಬವನ್ನು ಕಾಪಾಡುವನು ಅವನೇ ಹೊಲದಲ್ಲಿ ಕಾರ್ಮಿಕರಿಂದ ಹಿಡಿದು ನಾನಾ ತರಹದ ಉದ್ಯೋಗ ಪತಿಗಳು ಸರ್ಕಾರಿ ನೌಕರರು ಹಿಡಿದು ಉನ್ನತ ಸ್ಥಾನಮಾನದಲ್ಲಿ ಅಧಿಕಾರಿಗಳು ಇಡೀ ಕುಟುಂಬದ ಜವಾಬ್ದಾರಿ ಹೊರುವ ತಂದೆ ಆಗಿರುತ್ತಾರೆ. ತ೦ದೆಯಾದವನು ಜೀವನ ಪಾತ್ರವನ್ನು ನಿರ್ವಹಣೆ ಮಾಡುತ್ತಾ ಇರುತ್ತಾನೆ. ಶಾಲೆ ಅಥವಾ ಪದವಿ ಶಿಕ್ಷಣಗೆ ಕಳಿಸಿ ಬರುವ ವೆಚ್ಚ ನಷ್ಟ ಬರಿಸುತ್ತಾ ಮಕ್ಕಳು ಶಿಕ್ಷಣ ಮುಗಿಸಿದ ಬಳಿಕ ಸ್ವಂತ ಸ್ವಾಲಂಬನೆ ಸಾಧಿಸುತ್ತಾರೆ. ಮಕ್ಕಳು ಸಹ ತಂದೆ ತಾಯಿಯ ಕಷ್ಟಕ್ಕೆ ಆಗುವುದು ಇಲ್ಲ ಚಿಕಿತ್ಸೆಗೆ ದಿನ ನಿತ್ಯ ದಿನಸಿಗೆ ಹಣ ಕೊಡುವುದೇ ಇಲ್ಲ. ಮಕ್ಕಳ ಕಷ್ಟಕ್ಕೆ ನೆರವು ನೀಡುವ ಅಪ್ಪ ಅದೇ ಮಕ್ಕಳು ಅಪ್ಪನಿಗೆ ಸಹಾಯ ಮಾಡುವುದು ಇಲ್ಲ.ನಯಾ ಪೈಸೆ ಕೊಡುವುದು ಇಲ್ಲ ಅಪ್ಪಂದಿರು ಜೀವನ ಪರ್ಯಾಂತ ಮಕ್ಕಳ ಗೋಸ್ಕರ ಜೀವ ಹಾಗೂ ಜೀವನವನ್ನು ತ್ಯಾಗ ಮಾಡುತ್ತಾರೆ. ಆದರೆ ಮಕ್ಕಳು ತಂದೆಯ ಕಣ್ಣೀರು ಒರಿಸುವುದು ಇಲ್ಲವೇ ಇಲ್ಲ ಇಂತಹ ಮಕ್ಕಳು ಜಾಲಿ ಮರಕ್ಕೆ ಸಮ. ಅಪ್ಪ ಯೆಂದರೆ ಹಠವಾದಿ ಸ್ವಾಭಿಮಾನಿ ಹೊರಗಿನ ಕಡೆ. ಸಾಲ ಮಾಡದೇ ಅಭಿಮಾನದಿಂದ ಜೀವನ ಮಾಡುವ ಅಪ್ಪನಿಂದ ಕಲಿಯಬೇಕಾಗಿದೆ. ಸಿಟ್ಟು ಏಕೆ? ಬರುತ್ತೆ ಗೊತ್ತೆ? ತನ್ನ ಮೇಲೆ ಶೋಷಣೆ ಅನ್ಯಾಯ ಮೋಸ ದಬ್ಬಾಳಿಕೆ ನಡೆದಾಗ ಹೋರಾಟ ಮಾಡುತ್ತಾನೆ. ಮಕ್ಕಳು ಸಹ ಚನ್ನಾಗಿ ನೋಡಿಕೊಳ್ಳಬೇಕು. ಕಣ್ಣಿನ ರಪ್ಪೆಯ0ತೆ ಕಾಪಾಡಬೇಕುಅಪ್ಪ ಎಂಬವಸ್ತು ಕಳೆದು ಹೋದರೆ ಮತ್ತೆ ಸಿಗುವುದೇಇಲ್ಲ. ಇಂದಿನ ದಿನಮಾನದಲ್ಲಿ ತಂದೆ ತಾಯಿಯನ್ನುಮನೆಯಿಂದ ಹೊರಗೆ ಹಾಕುವಕೆಟ್ಟ ಚಾಳಿ ಹೆಚ್ಚಾಗುವುದು ವಿಷಾದನೀಯ ಹಾಗೂ ಖಂಡನೀಯ ಇಡೀ ಮಾನವಕುಲ ತಲೆ ತೆಗಿಸುವ೦ತಅನೇಕ ಘಟನೆಗಳು ದೇಶದ ಅನೇಕ ಭಾಗದಲ್ಲಿ ನಡೆದಿವೆ ನಡೆಯುತ್ತಿವೆ. ನೋಡಿದಾಗ ಸಮಾಜ ಯತ್ತ ಸಾಗಿದೆ ಒಮ್ಮೆ ಎಲ್ಲರೂ ಆಲೋಚನೆ ಮಾಡಬೇಕಾಗಿದೆ. ಇದು ಹೆಚ್ಚಾಗಿ ವಿದ್ಯಾವಂತರಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಕಣ್ಣಾರೆ ನೋಡುತ್ತಿದ್ದೇವೆ. ಹಣ ಆಸ್ತಿ ಹೆಂ ಡರು ಮಕ್ಕಳು ಅಷ್ಟೆ ತಂದೆ ತಾಯಿ ಸಂಬಂಧಿಕರು ಬೇಡವೇ ಬೇಡ…ದಾರಿಗೆದಾರಿಯಾಗಿ ಕತ್ತಲಿನಿಂದ ಬೆಳಕು ತೋರಿಸಿದನಿವೃತ ಶಿಕ್ಷಕರಾದ ಮಲ್ಲಪ್ಪಾ ಬಿರಾದಾರ ಪಾಟೀಲಯವರಿಗೆ ಈ ಪುಟ್ಟ ಕವನ ಅರ್ಪಣೆ.ನನ್ನಪ್ಪ…ಗಾಳಿ ಬಿರುಗಾಳಿಯಲ್ಲಿ ಮಿ೦ಚು ಸಿಡಿಲಿನಂತೆ ಬೆರೆತು ಹೋದ ನನ್ನಪ್ಪ.ಹೆಜ್ಜೆ ಹೆಜ್ಜೆಯಲ್ಲಿ ಕಣ ಕಣದಲ್ಲಿ ಬೆರೆತು ಹೋದ ನನ್ನಪ್ಪ..ನಾಡಿನಾಡಿಯಲ್ಲಿ ಹೃದಯ ಹೃದಯದಲ್ಲಿ ಬೆರೆತು ಹೋದ ನನ್ನಪ್ಪ..ಜೀವ ಜೀವದಲ್ಲಿ ಮನ ಮನದಲ್ಲಿ ಬೆರೆತು ಹೋದ ನನ್ನಪ್ಪ…ದುಡಿಮೆಯಲ್ಲಿ ತ್ಯಾಗದ ಜೊತೆ ಬೆರೆತು ಹೋದ ನನ್ನಪ್ಪ..ಉಸಿರು ಉಸಿರಲ್ಲಿ ನೋವು ಸಂತೋಷದಲ್ಲಿ ಬೆರೆತು ಹೋದ ನನ್ನಪ್ಪ..ಆಕಾಶದಲ್ಲಿ ಕಾಣುವ ನಕ್ಷತ್ರದಂತೆ ಹುಣ್ಣಿಮೆಯ ಚಂದ್ರನಂತೆ ಬೆರೆತು ಹೋದ ನನ್ನಪ್ಪ..ಅಕ್ಷರಗಳು ನೂರಾರು ಸಾಲುಗಳು ಸಾವಿರಾರು ಸಾಲಿನಲ್ಲಿ ಬೆರೆತು ಹೋದ ನನ್ನಪ್ಪ…ತ್ಯಾಗದಲ್ಲಿ ಕರ್ಣನಂತೆ ಕಾಯಕದಲ್ಲಿ ಬೆರೆತು ಹೋದ ನನ್ನಪ್ಪ..ಭೂ ತಾಯಿಯ ಮಡಿಲಲ್ಲಿ ಮಣ್ಣಾದನನ್ನಪ್ಪಇ೦ಥ ಸ್ವಾರ್ಥ ಜೀವನ ಹೆಚ್ಚಾಗಿರುವುದು ಅಪ್ಪನ ಅಸ್ತಿ ಬೇಕು ಆದರೆ ತಂದೆ ತಾಯಿ ಬೇಡ ಇಂಥೆಂಥ ಮಕ್ಕಳು ಇದ್ದಾವೆ ನೋಡಿ. ಕಳೆದ 20 ವರುಷಗಳ ಹಿಂದಿನ ಅವಲೋಕನ ನೋಡಿದಾಗ ತಂದೆಗೆ ಒಳ್ಳೆಯ ಸ್ಥಾನಮಾನ ನೀಡಿದ್ದರು. ಅವಿಭಕ್ತ ಕುಟುಂಬಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿದ್ದರು. ಹಿರಿಯರು ಕಿರಿಯರು ಭೇದ ಭಾವ ಇರುತ್ತಿರಲಿಲ್ಲ ಮದುವೆ ಮುಂಜಿ ಕಾರ್ಯಕ್ರಮ ಹಿರಿಯರ ಮುಂದಾಳುತನದಲ್ಲಿ ಮಾಡುತ್ತಿದ್ದರು. ಹೀಗೆ ಹಿಂದಿನ ಹಾಗೂ ಇಂದಿನ ಇತಿಹಾಸ ನೋಡಿದರೆ ಅಜಜಾಂತರ.ಮಠಾಧಿಪತಿಗಳು ತಿದ್ದುವ ಕಾಯ೯ ಮಾಡಬೇಕಾಗಿದೆ… ಲೇಖಕರು. ದಯಾನ೦ದ ಎಂ ಪಾಟೀಲ.ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ..

“ಹೆಗಲಿಗೆ ಹೆಗಲಾದ ನಮ್ಮಪ್ಪ.” ದಯಾನ೦ದ ಎಂ ಪಾಟೀಲ. Read Post »

ಇತರೆ, ಜೀವನ

“ರೇಡಿಯೇಷನ್ ಥೆರಪಿ: ನನ್ನ ಅನುಭವ” ಕವಿತಾ ಶ್ರೀನಿವಾಸ್‌ ನಾಯಕ್

ಅನುಭವ ಸಂಗಾತಿ ವಿಶ್ವ ರೆಡಿಯೇಷನ್ ಜಾಗೃತಿ ದಿನದಂದು — ರೇಡಿಯೇಷನ್ ಥೆರಪಿ: ನನ್ನ ಅನುಭವ ಕವಿತಾ ಶ್ರೀನಿವಾಸ್‌ ನಾಯಕ್ ವಿಶ್ವ ರೆಡಿಯೇಷನ್ ಜಾಗೃತಿ ದಿನದಂದು — ರೇಡಿಯೇಷನ್ ಥೆರಪಿ: ನನ್ನ ಅನುಭವ  ನಾನು ಲೇಖಕಿಯಾಗಿ ನನ್ನ ಕ್ಯಾನ್ಸರ್ ಚಿಕಿತ್ಸೆಯ ಅನುಭವವನ್ನು ನಾನೇ ಬರೆಯುವ ಪರಿಸ್ಥಿತಿ. ನನ್ನ ಕ್ಯಾನ್ಸರ್ ಪಯಣದಲ್ಲಿ ಸಾಕಷ್ಟು ಅನುಭವಗಳಾಗಿವೆ. ಸಾಧ್ಯವಾದಷ್ಟು ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ಮುಂದೆ ಸಾಗುತ್ತಿದ್ದೇನೆ.ಮೊದಲಿಗೆ ಕಿಮೋಥೆರಪಿ, ನಂತರ ಶಸ್ತ್ರಚಿಕಿತ್ಸೆ. ತದನಂತರ ಬಂದದ್ದು ರೆಡಿಯೇಷನ್ ಥೆರಪಿ.ನನಗೆ ಮೊದಲು ರೆಡಿಯೇಷನ್ ಥೆರಪಿ ಎಂದರೆ ಏನು ಎಂಬುದೇ ಗೊತ್ತಿರಲಿಲ್ಲ. ವೈದ್ಯರು ರೆಡಿಯೇಷನ್ ಥೆರಪಿ ಮಾಡಬೇಕೆಂದು ಹೇಳಿದಾಗ ನನ್ನಲ್ಲಿ ಕುತೂಹಲ ಹೆಚ್ಚಾಯಿತು. ಯೂಟ್ಯೂಬ್‌ನಲ್ಲಿ ಹುಡುಕಿದೆ. ಅಲ್ಲಿ ಸ್ವಲ್ಪಮಟ್ಟಿನ ಮಾಹಿತಿ ಸಿಕ್ಕಿತು. ಆದರೆ ನಿಜವಾದ ಅನುಭವ ಚಿಕಿತ್ಸೆ ಪಡೆಯಲು ಹೋದಾಗಲೇ ತಿಳಿಯಿತು.ಮೊದಲು ಸಿಟಿ ಸ್ಕ್ಯಾನ್ ಮಾಡಿ, ವೈದ್ಯರು ನಿಗದಿಪಡಿಸಿದ ದಿನಕ್ಕೆ ರೆಡಿಯೇಷನ್ ಥೆರಪಿಗಾಗಿ ಹೋದೆ. ಮೊದಲ ದಿನ ಸ್ವಲ್ಪ ಸಮಯ ಕಾಯಬೇಕಾಯಿತು. ನನ್ನ ಸರದಿ ಬಂದಾಗ ಅವರು ನೀಡಿದ ವಸ್ತ್ರ ಧರಿಸಿ ರೆಡಿಯೇಷನ್ ಕೊಠಡಿಗೆ ಹೋದೆ.ಅದು ವಿಶಾಲವಾದ, ಎಸಿ ಇರುವ ಕೊಠಡಿ. ಮಧ್ಯದಲ್ಲಿ ರೆಡಿಯೇಷನ್ ಯಂತ್ರ. ಮೊದಲ ಬಾರಿ ನೋಡಿದಾಗ, ಯಾವುದೋ ಹೊಸ ಲೋಕಕ್ಕೆ ಬಂದಂತಾಯಿತು!ಚಳಿಯಾಗಿದ್ದರಿಂದ ಅಲ್ಲಿನ ಸಿಬ್ಬಂದಿ ಬೆಡ್‌ಶೀಟ್ ನೀಡಿದರು. ಮೊದಲ ದಿನ ವೈದ್ಯರು, ದಾದಿಯರು ಹಾಗೂ ರೆಡಿಯೇಷನ್ ಸಿಬ್ಬಂದಿ ನನ್ನ ರೆಡಿಯೇಷನ್ ನೀಡಬೇಕಾದ ಭಾಗವನ್ನು ಪರಿಶೀಲಿಸಿ, ಎಲ್ಲವನ್ನೂ ಸರಿಯಾಗಿ ಹೊಂದಿಸಿದರು. ನಂತರ ರೆಡಿಯೇಷನ್ ಯಂತ್ರ ತಿರುಗಲು ಆರಂಭಿಸಿತು.ಆ ಸಮಯದಲ್ಲಿ ನಮ್ಮ ದೇಹಕ್ಕೆ ಯಾವುದೇ ರೀತಿಯ ನೋವು ಅಥವಾ ವಿಶೇಷ ಅನುಭವವಾಗುವುದಿಲ್ಲ. ಆರಾಮವಾಗಿ ಮಲಗಿಕೊಂಡೇ ಇರಬಹುದು. ಕೆಲವೊಮ್ಮೆ ಸಣ್ಣ ನಿದ್ರೆಯೂ ಬರಬಹುದು. ಆದರೆ ರೆಡಿಯೇಷನ್ ನಡೆಯುವ ಸಂದರ್ಭದಲ್ಲಿ ನಮ್ಮ ದೇಹವನ್ನು ಅಲುಗಾಡಿಸದೆ ಸ್ಥಿರವಾಗಿರಬೇಕು.ಸಕಾರಾತ್ಮಕವಾಗಿ ಹೇಳಬೇಕೆಂದರೆ, ನಾನು ಆ ಸಮಯವನ್ನೂ ಒಳ್ಳೆಯ ರೀತಿಯಲ್ಲಿಯೇ ಕಳೆದಿದ್ದೇನೆ. ರೆಡಿಯೇಷನ್ — ಕ್ಯಾನ್ಸರ್ ಹೋರಾಟಗಾರರ ಮಿತ್ರರೆಡಿಯೇಷನ್ ಥೆರಪಿ ಕ್ಯಾನ್ಸರ್ ಚಿಕಿತ್ಸೆಯ ಪ್ರಮುಖ ಭಾಗವಾಗಿದೆ. ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿ ಅವುಗಳನ್ನು ನಿಯಂತ್ರಿಸಲು ಅಥವಾ ನಾಶಪಡಿಸಲು ರೆಡಿಯೇಷನ್ ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಕ್ಯಾನ್ಸರ್ ಗುಣಪಡಿಸುವ ಚಿಕಿತ್ಸೆಯ ಭಾಗವಾಗಿರಬಹುದು; ಕೆಲವೊಮ್ಮೆ ರೋಗದ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹ ಬಳಸಲಾಗುತ್ತದೆ.ನನ್ನ ಅನುಭವದಲ್ಲಿ ರೆಡಿಯೇಷನ್ ಪಡೆಯುವ ಸಂದರ್ಭದಲ್ಲಿ ಯಾವುದೇ ವಿಶೇಷ ಸಮಸ್ಯೆಯಾಗಲಿಲ್ಲ. ಅಲ್ಲಿನ ವೈದ್ಯರು ಹಾಗೂ ರೆಡಿಯೇಷನ್ ಸಿಬ್ಬಂದಿ ಬಹಳ ಅಕ್ಕರೆಯಿಂದ ಪ್ರತಿಯೊಂದನ್ನೂ ಮಾಡುತ್ತಿದ್ದರು. ಅವರ ಮಾತು, ಕಾಳಜಿ ಮತ್ತು ಧೈರ್ಯ ತುಂಬುವ ರೀತಿಯೇ ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿತ್ತು.ನಾನು ಚಿಕಿತ್ಸೆ ಪಡೆಯುವುದರ ಜೊತೆಗೆ ಅಲ್ಲಿಗೆ ಬರುವ ಇತರ ಕ್ಯಾನ್ಸರ್ ಚಿಕಿತ್ಸಕರಿಗೂ, “ರೆಡಿಯೇಷನ್ ಬಗ್ಗೆ ಭಯಪಡಬೇಡಿ. ಧೈರ್ಯವಾಗಿ ಬನ್ನಿ. ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಹೋಗಿ” ಎಂದು ಹೇಳುತ್ತಿದ್ದೆ. ಅವರೊಂದಿಗೆ ಮಾತನಾಡಿ ಅವರಲ್ಲೂ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದೆ.ರೆಡಿಯೇಷನ್ ಚಿಕಿತ್ಸೆಯಿಂದ ಉಂಟಾಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆಯೂ ವೈದ್ಯರು ಮೊದಲೇ ವಿವರವಾಗಿ ತಿಳಿಸುತ್ತಾರೆ. ಆದರೆ ಎಲ್ಲರಿಗೂ ಒಂದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಚಿಕಿತ್ಸೆ ನೀಡುವ ಭಾಗ ಮತ್ತು ವ್ಯಕ್ತಿಯ ದೇಹದ ಪ್ರತಿಕ್ರಿಯೆಗನುಗುಣವಾಗಿ ಅನುಭವ ಬದಲಾಗಬಹುದು.ನನ್ನದು ಸ್ತನ ಕ್ಯಾನ್ಸರ್ ಆಗಿದ್ದರಿಂದ ನನ್ನ ಗಂಟಲಿನವರೆಗೂ ರೆಡಿಯೇಷನ್ ಚಿಕಿತ್ಸೆ ನೀಡಬೇಕಾಯಿತು. ಅದರ ಪರಿಣಾಮವಾಗಿ ನನಗೆ ಸುಮಾರು ಎರಡು ತಿಂಗಳು ಗಂಟಲು ನೋವಿನ ಸಮಸ್ಯೆ ಇತ್ತು. ಆ ಸಮಯದಲ್ಲಿ ನೀರಾಹಾರ ಸೇವಿಸುತ್ತಿದ್ದೆ. ಇದನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ಪ್ರಮುಖ ಅಡ್ಡ ಪರಿಣಾಮಗಳು ಇರಲಿಲ್ಲ.ಇದು ನನ್ನ ವೈಯಕ್ತಿಕ ಅನುಭವ ಮಾತ್ರ. ಪ್ರತಿಯೊಬ್ಬರ ಚಿಕಿತ್ಸೆಯ ಅನುಭವವೂ ವಿಭಿನ್ನವಾಗಿರಬಹುದು. ಆದ್ದರಿಂದ ವೈದ್ಯರು ನೀಡುವ ಸಲಹೆ ಮತ್ತು ಸೂಚನೆಗಳನ್ನು ಪಾಲಿಸುವುದು ಅತ್ಯಂತ ಮುಖ್ಯ.ಭಯ ಬೇಡ… ಧೈರ್ಯದಿಂದ ಮುಂದೆ ಸಾಗೋಣಕ್ಯಾನ್ಸರ್ ಎಂಬ ಪದ ಕೇಳಿದಾಗ ಭಯ ಸಹಜ. ರೆಡಿಯೇಷನ್ ಥೆರಪಿ ಎಂದಾಗಲೂ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಮೂಡಬಹುದು. ಆದರೆ ತಿಳುವಳಿಕೆ, ವೈದ್ಯರ ಮೇಲಿನ ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವ ನಮ್ಮ ಭಯವನ್ನು ಕಡಿಮೆ ಮಾಡಬಹುದು.ನನ್ನ ಅನುಭವದಲ್ಲಿ ರೆಡಿಯೇಷನ್ ಥೆರಪಿ ನನಗೆ ಭಯ ಹುಟ್ಟಿಸಿದ ಚಿಕಿತ್ಸೆಯಾಗಿರಲಿಲ್ಲ. ಅದು ನನ್ನ ಕ್ಯಾನ್ಸರ್ ಹೋರಾಟದ ಮತ್ತೊಂದು ಪ್ರಮುಖ ಹಂತವಾಗಿತ್ತು.ಆದ್ದರಿಂದ ರೆಡಿಯೇಷನ್ ಥೆರಪಿ ಪಡೆಯಬೇಕಾದ ಪ್ರತಿಯೊಬ್ಬ ಕ್ಯಾನ್ಸರ್ ಹೋರಾಟಗಾರರಿಗೂ ನನ್ನ ಒಂದೇ ಮಾತು—ಭಯಪಡಬೇಡಿ… ಧೈರ್ಯದಿಂದ ಮುಂದೆ ಬನ್ನಿ.ವೈದ್ಯರ ಮಾತು ಕೇಳಿ, ಚಿಕಿತ್ಸೆಯ ಮೇಲೆ ನಂಬಿಕೆ ಇಡಿ.ಪ್ರತಿಯೊಂದು ದಿನವೂ ನಾವು ಗೆಲುವಿನತ್ತ ಇಡುವ ಮತ್ತೊಂದು ಹೆಜ್ಜೆ ಎಂದು ಭಾವಿಸಿ.ಕ್ಯಾನ್ಸರ್ ಪಯಣ ಕಷ್ಟವಾದರೂ, ಧೈರ್ಯ, ನಂಬಿಕೆ ಮತ್ತು ಸಕಾರಾತ್ಮಕ ಮನೋಭಾವ ನಮ್ಮ ದೊಡ್ಡ ಶಕ್ತಿ.  ಕವಿತಾ ಶ್ರೀನಿವಾಸ ನಾಯಕ್ರೇಡಿಯೇಷನ್ ಥೆರಪಿ: ನನ್ನ ಅನುಭವ ಕಾರ್ಕಳ, ಉಡುಪಿ ಜಿಲ್ಲೆ

“ರೇಡಿಯೇಷನ್ ಥೆರಪಿ: ನನ್ನ ಅನುಭವ” ಕವಿತಾ ಶ್ರೀನಿವಾಸ್‌ ನಾಯಕ್ Read Post »

You cannot copy content of this page

Scroll to Top