ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಥಾಗುಚ್ಛ

ರೋಹಿಣಿ ಜೆ. ಅವರ ಅನುಭವ ಕಥನ “ದುಗ್ಗಟ್ಟಿ ದುರ್ಗಿ”

ಅನುಭವ ಸಂಗಾತಿ ರೋಹಿಣಿ ಜೆ. “ದುಗ್ಗಟ್ಟಿ ದುರ್ಗಿ” ಎಂದಿನಂತೆ ನಾನು ಕೆಲಸ ಮುಗಿಸಿ ಸಾಯಂಕಾಲ ಚಾಮರಾಜನಗರದಿಂದ ಯಳಂದೂರಿಗೆ ಹೊರಟಿದ್ದೆ. ಈಗಿನ ಬಸ್ಸುಗಳ ರಸ್ಸಂತೂ ಯಪ್ಪಾ! ಈ ಪ್ರಯಾಣವೇ ಸಾಕೆನಿಸುವಷ್ಟು ಬೇಸರ ತರಿಸಿಬಿಡುತ್ತವೆ. ಬಸ್ಸಲ್ಲಿ ನಿಲ್ಲಲು ಜಾಗ ಸಿಕ್ಕರೆ ಹೆಚ್ಚು. ಒಂದು ದಿನ ಹೀಗೆ ನಿಲ್ಲಲು ಜಾಗ ಮಾಡಿಕೊಂಡು ಬಸ್ಸಲ್ಲಿ ನಿಂತಿದ್ದ ಸಂದರ್ಭ ಬಸ್ಸು ಚಲಿಸಲಾರಂಭಿಸಿತು. ಆಗ ಒಂದು ಅಜ್ಜಿಯ ಬೈಗುಳ ಅಥವಾ ಜೋರು ಮಾತು ಎಂದುಕೊಳ್ಳಿ ಕಿವಿಗೆ ಬಿತ್ತು. ಆದದ್ದಿಷ್ಟೇ ಅಜ್ಜಿ ನಿಂತಿದ್ದರು ಕೆಳಗೆ ಅವಳ ಹಿಂದಿನ ಆಸನದಲ್ಲಿ ಕುಳಿತಿದ್ದವರಲ್ಲಿ ಒಬ್ಬರ ಒಂದು ಲೀಟರ ನೀರು ತುಂಬಿದ್ದ ಪ್ಲಾಸ್ಟಿಕ್‌ ಬಾಟಲ್‌ ಕೆಳಗೆ ಬಿತ್ತು ಅಜ್ಜಿ ತನಗೆ ಬಿದ್ದಿತೆಂದು ಅಂಜಿಬಿಟ್ಟರು. ಸುಮಾರು ಒಂದರಿಂದ ಎರಡು ನಿಮಿಷ ಇಬ್ಬರ ನಡುವೆ ಮಾತಿಗೆ ಮಾತು ನಡೆದರೂ ಅಂತಹ ಜಗಳವೇನೂ ಆಗಲಿಲ್ಲ. ಬಸ್ಸು ಚಲಿಸಲು ಶುರುವಾಗಿ ಸುಮಾರು ಹತ್ತು ನಿಮಿಷ. ನನಗೋ ಏನೋ ಕುತೂಹಲ ಆಕೆಯನ್ನು ಕಂಡು. ನನ್ನ ಅಂದಾಜಿನ ಪ್ರಕಾರ ಸುಮಾರು ಎಂಭತ್ತರಿಂದ ಎಂಭತ್ತೈದು ಆಗಿರಬಹುದು ಆಕೆಯ ವಯಸ್ಸು. ನಿಂತೇ ಇದ್ದಾಳೆ ಅವಳು ಒರಗಿ ನಿಂತಿರುವಲ್ಲಿಯೇ ಇಬ್ಬರು ಪಿಯುಸಿ ಓದುವ ವಿದ್ಯಾರ್ಥಿನಿಯರಿದ್ದಾರೆ. ನನಗೆ ಹೇಅಗೆ ತಿಳಿಯಿತು ಎನ್ನುವಿರಾ ಕೊರಳಪಟ್ಟಿಯಿಂದ. ನಾನು ನೋಡಿದೆ ಅವರು ಸೀಟ್‌ ಬಿಟ್ಟು ಕೊಡ್ತಾರೇನೋ ಅಂತ. ಅವರು ತಲೆಎತ್ತಿ ನೋಡಿದರೆ ಎಲ್ಲಿ ಆ ಅಜ್ಜಿ ಸೀಟು ಬಿಟ್ಟುಕೊಡಿ ಅನ್ತಾರೋ ಎನ್ನುವಂತೆ ತನಗೇನೂ ಅರಿಯದಂತೆ ತಮ್ಮದೇ ಮಾತುಕತೆಯಲ್ಲಿ ಮಗ್ನರಾಗಿದ್ದರು. ಮೊದಲೆಲ್ಲ ನಮ್ಮ ಶಿಕ್ಷಕರು ನಮಗೆ ಹೇಳಿಕೊಡುತ್ತಿದ್ದರು ಹಿರಿಯರಿಗೆ ಸೀಟ್‌ ಬಿಟ್ಟುಕೊಡಬೇಕು, ಕೈಲಾದಷ್ಟು ಸಹಾಯ ಮಾಡಬೇಕು, ದಿನಕ್ಕೊಂದು ಒಳ್ಳೆಯ ಕೆಲಸ ಮಾಡಿ ದಿನಚರಿಯಲ್ಲಿ ಬರೆಯಬೇಕು ಇತ್ಯಾದಿ ಇತ್ಯಾದಿ. ಅದನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದೆವೋ ಗೊತ್ತಿಲ್ಲ ಆದರೆ ಪ್ರತಿದಿನ ಅಲ್ಲದೇ ಇದ್ದರೂ ಅಂತಹ ಸಂದರ್ಭಗಳು ಬಂದಾಗ ನಮಗರಿವಿಲ್ಲದೆ ಎದೆಯ ದನಿ ಜಾಗೃತಗೊಂಡು ನಮ್ಮಿಂದ ಸಹಾಯ ಮಾಡಿಸುತ್ತಿತ್ತು. ಈಗಂತೂ ಹೇಳುವವರಿಲ್ಲವೋ ಹೇಳಿದ ಮಾತನ್ನು ಕೇಳುವವರಿಲ್ಲವೋ, ಬೇರೆಯವರಿಗಿರಲಿ ಸ್ವಯಂ ತನಗೆ ಕಲಿಸಿರುವ, ಪಾಠ ಹೇಳುತ್ತಿರುವ ಗುರುಗಳೇ ಬಂದರೂ ಒಂದು ನಮಸ್ಕಾರವನ್ನೂ ಹೇಳದೆ ವಿದ್ಯಾರ್ಥಿಗಳು ಆರಾಮಾಗಿ ಕುಳಿತಿರುತ್ತಾರೆ. ಅಂತಹವರಿಂದ ಏನನ್ನಾದರೂ ನಿರೀಕ್ಷೆ ಮಾಡಿದರೆ ನಮ್ಮದೇ ತಪ್ಪು. ಎಲ್ಲರೂ ಹೀಗೆಯೇ ಎಂದು ಸಾರ್ವಜನಿಕವಾಗಿ ಹೇಳಲಾಗದು ಈಗಲೂ ಉತ್ತಮ ವ್ಯಕ್ತಿತ್ವ, ಸಂಸ್ಕಾರ ರೂಢಿಸಿಕೊಂಡಿರುವ ಮಕ್ಕಳಿದ್ದಾರೆ ಆದರೆ ಬಹುಪಾಲು ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಗರ್ಭಿಣಿ, ಸಣ್ಣಮಗುವಿನ ಬಾಣಂತಿ, ವೃದ್ಧರು ಯಾವುದೂ ಲೆಕ್ಕಕ್ಕಿಲ್ಲ. “ಅವರನ್ಯಾರು ಬಾ ಅಂದಿದ್ದು ಮನೆಯಲ್ಲಿ ಇರಬೇಕು ತಾನೇ ಸುಮ್ಮನೆ ತೆಪ್ಪಗೆ” ಎನ್ನುತ್ತಾರೆಯೆ ಹೊರತು ಕುಂತಲ್ಲಿಂದ ಅಲುಗಾಡುವುದೂ ಇಲ್ಲ. ಈಗಂತೂ ಫ್ರೀ ಬಸ್‌ ಅನ್ನುವ ಒಂದು ನೆಪ ಸಾಕು ಎಲ್ಲರನ್ನು ಬೈಯುವುದಕ್ಕೆ. ಒಮ್ಮೆ ಮೂರು ಸೀಟಿರುವ ಖಾಸಗಿ ಬಸ್ಸಿನಲ್ಲಿ ಕಿಟಕಿ ಪಕ್ಕ ನಾನು ಕುಳಿತಿದ್ದೆ. ಮುಂದಿನ ಊರಿನ ನಿಲ್ದಾಣದಲ್ಲಿ ನನ್ನ ಪಕ್ಕದ ಸೀಟುಗಳು ಖಾಲಿ ಆದವು ನನ್ನ ಪಕ್ಕ ಒಂದು ಕಾಲೇಜು ಹುಡುಗಿ ಅವಳ ಪಕ್ಕ ಒಂದು ಹುಡುಗ ಬಂದು ಕುಳಿತರು. ನಾನು ಅಯ್ಯೋ ಆಕೆಗೆ ಮುಜುಗರ ಆಗಬಹುದು ಎಂದು ಸ್ವಲ್ಪ ಸರಿದು ಕುಳಿತೆ ಅವಳೇನು ನನ್ನತ್ತ ಸರಿಯಲಿಲ್ಲ! ಆಮೇಲೆ ಗೊತ್ತಾದದ್ದು ಅವನ ಹೊಟ್ಟೆಗೆ ಅವಳು ಟಪಟಪ ಅಂತ ಹೊಡೆಯುತ್ತಿದ್ದುದರಿಂದ, ಅವರ ಮಾತಿನ ಶೈಲಿಯ ಕಾರಣದಿಂದ ಅವರಿಬ್ಬರು ಪ್ರೇಮಿಗಳು ಎಂಬುದು ತಡವಾಗಿ ಅರಿವಿಗೆ ಬಂತು. ಇದಾದ ನಂತರ ಅದರ ಮುಂದಿನ ನಿಲ್ದಾಣದಲ್ಲಿ ಮತ್ತಷ್ಟು ಜನ ಹತ್ತಿದರು. ಅವರಲ್ಲಿ ಒಬ್ಬಳು ವಯಸ್ಸಾದವಳು ಮುಖ ಮುಖ ನೋಡುತ್ತಿದ್ದಳು ನಾನು ಕೊನೆಯಲ್ಲಿ ಕುಳಿತಿದ್ದರೆ ಎದ್ದು ಸೀಟು ಬಿಟ್ಟುಕೊಡುತ್ತಿದ್ದೆ. ಆದರೆ ಈ ಬದಿಯಲ್ಲಿದೀನಿ ಏನು ಮಾಡಲಿ ಯೋಚಿಸುತ್ತಿದ್ದಾಗಲೇ ಆಕೆ ಆ ಹುಡುಗನನ್ನು ಬಾಯಿಬಿಟ್ಟು ಕೇಳಿದಳು “ಮಂಡಿನೋವು ಸ್ವಲ್ಪ ಸೀಟು ಬಿಡಪ್ಪ”. ನಾನು ಅಂದುಕೊಂಡೆ ತನ್ನ ಪ್ರೇಯಸಿಯನ್ನು ಮೆಚ್ಚಿಸಲಿಕ್ಕಾದರೂ ಸೀಟು ಬಿಡಬಹುದೆಂದು. ಆದರೆ ನನಗೆ ಅರ್ಥವಾಗಿದ್ದು ಏನೆಂದರೆ ಅದೆಲ್ಲ ಹಳೆಯ ಕಾಲದ ತಂತ್ರಗಳೆಂದು ಇವನಂತು ಅವಳನ್ನು ಬಿಟ್ಟು ಏಳಲು ಸಿದ್ಧನಿರಲಿಲ್ಲ, ಅವಳೂ ಕೂಡ ಏಳು ಎನ್ನಲಿಲ್ಲ. ಪಾಪ ಅವರಿಗೆ ಸಿಕ್ಕಿರುವ ಆ ಅರೆಗಳಿಗೆಯ ಅವಕಾಶವನ್ನು ಅವರು ಏಕೆ ಕಳೆದುಕೊಂಡಾರು. ಸುಮ್ಮನೆ ಕುಳಿತರು. ನನಗೆ ಯಾಕೋ ಸರಿಬರಲಿಲ್ಲ “ಬನ್ನಿ ಕುಳಿತುಕೊಳ್ಳಿ” ಎಂದು ಎದ್ದು ಅವರನ್ನು ದಾಟಿ ಈ ಕಡೆ ಬಂದು ನಿಲ್ಲಲು ಪ್ರಯತ್ನಿಸಿದೆ. ಆಗಲೂ ಅವನೇನು ಏಳಲಿಲ್ಲ. ಅಷ್ಟಕ್ಕೆ ಕಂಡಕ್ಟರ್‌ ಬೇರೆ ಕಡೆ ಸೀಟು ಮಾಡಿ “ಇಲ್ಲಿ ಬನ್ನಿ” ಎಂದು ಕರೆದು ಕೂರಿಸಿದರು. ನನ್ನ ಸೀಟು ನನಗೆ ಉಳಿಯಿತು. ಇದನ್ನು ಯಾಕೆ ಹೇಳಿದೆ ಎಂದರೆ ಇವತ್ತು ಬಹುಪಾಲು ಯುವಮನಸ್ಸುಗಳ ಮನಸ್ಥಿತಿ ಹೀಗೆ ಇದೆ. ತಮಗೂ ಒಂದು ದಿನ ಹೀಗೆ ವಯಸ್ಸಾಗುತ್ತದೆ ಎಂಬ ಅರಿವಿರಲ್ಲ. ಯಾಕೆಂದರೆ ವಯಸ್ಸಾದ ಅಜ್ಜಅಜ್ಜಿಯರ ಜೊತೆ ಜೀವನ ಕಳೆಯುವುದು ಕಡಿಮೆಯೇ ಅಲ್ಲವೇ. ಹೆಚ್ಚುತ್ತಿರುವ ವಿಭಕ್ತ ಕುಟುಂಬ, ವೃದ್ಧಾಶ್ರಮಗಳೇ ಸಾಕು ನಾವು ಹಿರಿಯರಿಗೆ ಕೊಡುತ್ತಿರುವ ಮರ್ಯಾದೆ, ಮನ್ನಣೆ, ಅವರ ಮಹತ್ವ ಎಲ್ಲವೂ ತಿಳಿಯುತ್ತದೆ. ಹಾಗಿದ್ದ ಮೇಲೆ ಇಂತಹ ಕುಟುಂಬಗಳಿಂದ ಬರುವ ಮಕ್ಕಳಲ್ಲಿ ಏನನ್ನು ನಿರೀಕ್ಷಿಸಲು ಸಾಧ್ಯ. ಬೇವು ಬಿತ್ತಿ ಬೆಲ್ಲವ ಬಯಸಿದಡೇನು ಫಲ ಅಂದಿಲ್ಲವೇ ಹಿರಿಯರು. ಬಹುಪಾಲು ಯುವಕರು ಬಸ್ಸುಗಳಲ್ಲಿ ಸೀಟು ಬಿಡುವುದಿರಲಿ ಮಕ್ಕಳು, ವೃದ್ಧರು ಎನ್ನುವುದನ್ನು ನೋಡದೆ ನೂಕಿ ಬೀಳಿಸಿ ತಾವು ಬಸ್ಸು ಹತ್ತಿ, ತಮ್ಮ ಪ್ರೇಯಸಿಗೂ ಸೀಟು ಹಿಡಿದಿರುತ್ತಾರೆ. ಹೀಗಿರುವಾಗ ನಾನು ಯಾವ ಧೈರ್ಯದಲ್ಲಿ ಈ ಕಾಲಘಟ್ಟದ ಯುವಜನರಲ್ಲಾಗಲಿ, ವಿದ್ಯಾರ್ಥಿಗಳಿಗಾಗಲಿ ಏನಾದರೂ ಹೇಳಲು ಸಾಧ್ಯವೇ? ಆದರೂ ನನ್ನ ವಿದ್ಯಾರ್ಥಿಗಳಾಗಿದ್ದರೆ ಖಂಡಿತ ಹೇಳುತ್ತಿದ್ದೆ. ಆದರೆ ಇವರನ್ನು ಆ ಅಜ್ಜಿಗೆ ಸೀಟು ಬಿಟ್ಟುಕೊಡಿ ಎಂದು ಹೇಗೆ ಕೇಳಲಿ. ನನ್ನೊಳಗಿನ ಶಿಕ್ಷಕಿ “ಹ್ಞೂ ಕೇಳು, ಪಾಪ ಅಜ್ಜಿ, ತುಂಬಾ ವಯಸ್ಸಾಗಿದೆ” ಎಂದು ಪ್ರೋತ್ಸಾಹಿಸಿದರೆ ನನ್ನ ಸ್ವಾಭಿಮಾನ, ವಿವೇಕ “ಬೇಡ, ತಿರುಗಿ ಮಾತನಾಡುತ್ತಾರೆ. ಸುಮ್ಮನೆ ಅವಮಾನ ಅವರೇನು ಮಾತು ಕೇಳಲು ನಿನ್ನ ವಿದ್ಯಾರ್ಥಿಗಳ? ಕೇಳಬೇಡ” ಎನ್ನುತ್ತಿತ್ತು. ವಿಸ್ಮಯ ಏನೆಂದರೆ ಈ ಅಜ್ಜಿಯೂ ಯಾರನ್ನೂ ಅಷ್ಟೇ ಯಾಕೆ ತನ್ನ ಮುಂದೆ ಇರುವ ಆ ಹುಡುಗಿಯರನ್ನೂ ಕೇಳಲಿಲ್ಲ.  ಆಕೆಗೆ ಸಂಕೋಚ ಇರಬಹುದು ಅಥವಾ ಈ ಹಿಂದೆ ಕೇಳಿ ಸೀಟು ಬಿಡದಂತಹ ಎಷ್ಟೋ ಅನುಭವಗಳು ಆಗಿರಬಹುದು ಅದಕ್ಕೆ ಸುಮ್ಮನಿರಬಹುದು ಎನಿಸಿತು. ಬಹುಶಃ ಎರಡನೆಯದೆ ಹೆಚ್ಚು ಸಮಂಜಸ. ಆದರೂ ಆಕೆ ನನ್ನಲ್ಲೇನೋ ಬೆರಗು ಹುಟ್ಟಿಸುತ್ತಿದ್ದಳು ನನ್ನ ಕಣ್ಣನ್ನು ಪದೇಪದೇ ಸೆಳೆಯುತ್ತಿದ್ದಳು. ಅವಳನ್ನು ಅಡಿಯಿಂದ ಮುಡಿಯವರೆಗೂ ನೋಡಿದೆ ಏನೋ ಆಕರ್ಷಣೆ. ಕೆಂಪು ಸೀರೆಗೆ ಉದ್ದ ತೋಳಿನ ಕೆಂಪು ರವಿಕೆ, ಮೈಯೆಲ್ಲ ಸುಕ್ಕುಗಟ್ಟಿದ್ದ ಒರಟು ಕಪ್ಪು ಚರ್ಮವನ್ನು ಪ್ರತಿನಿಧಿಸುವಂತೆ ಕೈಗಳು ಕಾಣುತ್ತಿದ್ದವು.‌ ಚಿನ್ನದ ಬಣ್ಣದ ಬಳೆ ಕನಕದ್ದೋ, ಕೃತಕದ್ದೋ ತಿಳಿಯದು. ಸ್ವಲ್ಪ ಬಣ್ಣ ಮಾಸಿತ್ತು. ಮೂಗಿನಲ್ಲಿ ನೆತ್ತಿಯ ನಾಗರದ ಆಕಾರದ ಹಳೆಯ ಕಾಲದ ಅಗಲವಾದ ಮೂಗುತಿ ಬಲಭಾಗದಲ್ಲಿ ಇತ್ತು. ಎಡಭಾಗದಲ್ಲೂ ಇತ್ತೇನೋ ನಾ ಈ ಭಾಗದಲ್ಲಿದ್ದರಿಂದ ಅದು ಕಾಣಲಿಲ್ಲ. ನಮ್ಮಲ್ಲಿ ಹಳೆಯ ಅಜ್ಜಿಯರು ಹೀಗೆ ಎರಡೂ ಭಾಗಕ್ಕೂ ಮೂಗುತಿಗಳನ್ನು ಧರಿಸುತ್ತಿದ್ದರು. ಆ ಚಿನ್ನದ ಆಸೆಗಾದರೂ ತಮ್ಮನ್ನು ಮಕ್ಕಳು, ಮೊಮ್ಮಕ್ಕಳು ಚೆನ್ನಾಗಿ ನೋಡಿಕೊಳ್ಳಲಿ ಎನ್ನುವುದೂ ಇರಬಹುದು ಅಥವಾ ಅವರ ಸೌಂದರ್ಯ ಪ್ರಜ್ಞೆ ಯಾವ ಬಗೆಯದೋ ಅಲ್ಲಗಳೆಯಲು ನಾವಾರು? ಈಗ ಆ ವಿಷಯ ಬಿಡಿ. ಇನ್ನು ಆಕೆಯ ಕಿವಿಯಲ್ಲಿ ತುಂಬಾ ಹಳೆಯದಾದ ಬಿಳಿ ಏಳು ಹರಳಿನ ಓಲೆ ಅದರಲ್ಲಿ ಎರಡು ಮೂರು ಹರಳು ಬಿದ್ದುಹೋಗಿದ್ದವು. ಇನ್ನು ಅವಳ ತಲೆಯಂತೂ ಪೂರ್ತಿ ನರೆತಿತ್ತು ಅಲ್ಲಿ ಕೂದಲಿಗಿಂತ ಬುರುಡೆಯೇ ಚೆನ್ನಾಗಿ ಕಾಣುತ್ತಿತ್ತು ಇರುವ ಕೆಲವು ಕೂದಲಿಗೆ ಎಣ್ಣೆ ಹಾಕಿ ಮೇಲೆ ಕಟ್ಟಿದ್ದಳು. ಇನ್ನು ಅವಳ ಪಾದಗಳು ಚಪ್ಪಲಿಯಿಲ್ಲದೆ ನಿಂತಿದ್ದವು. ನನಗೆ ಯಾಕೋ ಮರುಕ ಜೊತೆಗೆ ಕುತೂಹಲ ಈ ವಯಸ್ಸಲ್ಲಿ ಈ ಬಿರುಬಿಸಿಲಲ್ಲಿ ಬರಿಗಾಲಲ್ಲಿ ಎಲ್ಲಿಗೆ ಹೋಗಿತ್ತು ಈ ಅಜ್ಜಿ ಮನೆಯಲ್ಲಿರೋದು ಬಿಟ್ಟು ಅಂತ. ಕಪ್ಪನೆಯ ಆ ಕಾಲುಗಳಲ್ಲಿ ಏನೇನೋ ಗಾಯದ ಗುರುತು ಚರ್ಮ ಸುಲಿದ ಕುರುಹುಗಳು ಯಥೇಚ್ಛವಾಗಿತ್ತು. ಎಡಗೈಯಲ್ಲಿ ಆರೇಳು ಈರುಳ್ಳಿ ಹಿಡಿದಿದ್ದಳು. ಅದನ್ನೂ ಹಿಡಿದೇ ಚಾಮರಾಜನಗರದಿಂದ ಬಂದಿದ್ದಳು. “ಇದು ಅವಳೇ ಬೆಳೆದಿದ್ದಿರಬಹುದಾ ಅಥವಾ ಮಗಳ ಮನೆಗೆ ಹೋಗಿ ಅಲ್ಲಿಂದ ಕೊಟ್ಟು ಕಳಿಸಿರಬಹುದಾ ಹೀಗೆ ಏನೇನೋ ಆಲೋಚನೆ. ಮನಸ್ಸು ಅವಳೊಡನೆ ಮಾತನಾಡಿಸಲು ತವಕಿಸುತ್ತಿತ್ತು. ಈಗಾಗಲೇ ಆರಂಭದಲ್ಲಿ ಬೇರೆಯವರಿಗೆ ನೀರಿನ ಬಾಟಲ್‌ ವಿಷಯಕ್ಕೆ ಸ್ವಲ್ಪ ಮಾತಾಗಿದ್ದರಿಂದ ನನ್ನನ್ನು ತಿರುಗಿ ಏನಾದರೂ ಅಂದುಬಿಟ್ಟರೆ ಭಯ ಸುಮ್ಮನಾದೆ. ಆದರೆ ಅವಳು ಮಾತ್ರ ನನ್ನನ್ನು ಮತ್ತೆ ಮತ್ತೆ ಸೆಳೆಯುತ್ತಿದ್ದಳು. ಲಂಕೇಶರ ಕವಿತೆಯ ಅವ್ವ ಕಣ್ಮುಂದೆ ಬಂದುಹೋದಂತೆ. ಅವಳೂ ನನ್ನನ್ನು ಒಂದೆರಡು ಬಾರಿ ನೋಡಿದಳು ತನ್ನಷ್ಟಕ್ಕೆ ನಿಂತಳು. ಆ ವಯಸ್ಸಲ್ಲಿ ವಾಲಾಡುವ ಬಸ್ಸಲ್ಲಿ ಅಷ್ಟುಹೊತ್ತು ನಿಲ್ಲುವುದು ಅಸಾಧ್ಯದ ಮಾತು. ಇಪ್ಪತ್ತು ನಿಮಿಷ ದಾಟಿ ಆಗಿತ್ತು. ಬಸ್ಸು ಮಂಗಲ ದಾಟಿ ಮರಳ್ಳಿಗೆ ಬಂತು. ಮಧ್ಯೆ ಎಲ್ಲೂ ಬಸ್ಸು ನಿಲುಗಡೆ ನೀಡಲಿಲ್ಲ. ನಾನು ಬಹುಶಃ ಅವಳು ಸಂತೇಮರಳ್ಳಿಯಲ್ಲಿ ಇಳಿಯಬಹುದು ಎಂದು ಊಹಿಸಿದ್ದೆ ಅದೂ ತಪ್ಪಾಯಿತು. ಆಕೆ ನಿಂತೇ ಇದ್ದಳು ಸೀಟು ಕೂಡ ಅಲ್ಲಿಯೂ ಖಾಲಿಯಾಗಲಿಲ್ಲ. ನನಗೆ ಈಗಲಾದರೂ ಅವರನ್ನು ಕೇಳೋಣ ಅಜ್ಜಿಗೆ ಸೀಟ್‌ ಬಿಡಿ ಎಂದು ಅನಿಸಿತು. ಆದರೆ ಆಕೆಯ ಗಟ್ಟಿತನವನ್ನು ನಾನೇ ಪೊಳ್ಳಾಗಿ ಅಂದಾಜಿಸುತ್ತಿದ್ದೇನೆಯೇ, ನಾ ನಿಲ್ಲಬಲ್ಲೆ ಎಂಬ ಅವಳ ಆತ್ಮವಿಶ್ವಾಸವನ್ನು ನಾ ಕುಗ್ಗಿಸಿಬಿಟ್ಟಂತಾದರೆ ಅದಕ್ಕೆ ಮತ್ತೆ ಸುಮ್ಮನಾದೆ ಇನ್ನು 5-6 ನಿಮಿಷ ಕಳೆದರೆ ನನ್ನೂರು ಬಂದು ಬಿಡುತ್ತಿತ್ತು. ಅಷ್ಟರಲ್ಲಿ ಏನಾದರೂ ಆಗಲಿ ಅವಳನ್ನು ಮಾತಾಡಿಸಿ ಬಿಡಬೇಕೆನಿಸಿ ಮಾತನಾಡಿಸಿಯೇ ಬಿಟ್ಟೆ! “ಯಾವ ಊರಿಗೆ ಹೋಗ್ತಿದೀರಾ ಅಮ್ಮ, ಮರಳ್ಳಿ ಅಲ್ವಾ?” “ಇಲ್ಲಕವ್ವ ಯಳಂದೂರ್ಲಿ ಇಳ್ಕತೀನಿ” “ಚಪ್ಪಲಿ ಹಾಕಿಕೊಳ್ಳಬಾರದಾ ಕಾಲಿಗೆ ಬರಿಗಾಲಲ್ಲಿದೀರಲ್ಲ” “ಒಂದ್ಸಲಿ ಆಕಂಡು ಬಿದ್ಬುಟ್ಟಿ ಅದ್ಕೆ ಚಪ್ಲಿ ಆಕಳದ ಬುಟ್ಬುಟ್ಟಿನಿ” “ಅಯ್ಯೋ ಹೌದಾ! ಛೇ..” ಎಂದು ಮುಂದೆ ಮಾತಾಡಲು ಹೋದೆ ಅವಳೇ ಹೇಳಿದಳು ತಾನು ಮೈಸೂರಿಂದ ನಂಜನಗೂಡು ಮಾರ್ಗವಾಗಿ ನಗರಕ್ಕೆ ಬಂದುದಾಗಿ ಈಗ ಯಳಂದೂರಿಗೆ ಹೋಗುತ್ತಿರುವುದಾಗಿ ಹಾಗೆಯೇ ತನ್ನೂರನ್ನೂ ಕುರಿತು ಹೇಳಿದಳು. ತನ್ನ ಕಾಲಿಗೆ ಉರೊಪ್ಳೆ(ಕೀವುತುಂಬಿದ,ಉರಿಯುವ ಗುಳ್ಳೆ) ಆಗಿ ತುಂಬಾ ಉರಿ ನಡೆದಾಡಕೆ ಆಗ್ತಿರಲಿಲ್ಲ ಒಸಿ ದಿನ ಹೋಗಿರಲಿಲ್ಲ ಏನೇನೋ ಹೇಳಿದಳು ನನಗೆ ಅರೆಬರೆ ಅರ್ಥ ಆಯ್ತು. ಕಾಲಿಗೆ ಗಾಯ ಆದದ್ದು ಅರ್ಥ ಆಯ್ತು ಅನುಕಂಪದಿಂದ “ಹೌದು ನೋಡಿದೆ ನಿಮ್ಮ ಕಾಲನ್ನ” ಎಂದೆ. “ಹೌದಾ ನೋಡಿದ್ರ್ಯಾ” ಎಂದು ನನ್ನ ನೋವನ್ನು ಯಾರೋ ಆಪ್ತರು ಗಮನಿಸಿದ್ದಾರೆ ಎನ್ನುವಂತೆ ಅವಳ ಮುಖದಲ್ಲಿ ನಗು ಬಂತು. ಮತ್ತೆ ಪ್ರಶ್ನಿಸಿದೆ “ಮೈಸೂರಿಗೆ ಯಾಕೆ ಹೋಗಿದ್ದು ಅಷ್ಟು ದೂರ”, ಅವಳೆಂದಳು “ಈರುಳ್ಳಿ ತರೋಕೆ”. ಇನ್ನೂ ಆಶ್ಚರ್ಯ ಆಯಿತು ನನಗೆ ಅವಳೇ ಮುಂದುವರೆದು ಹೇಳಿದಳು “ಆರ್‌ ಎಂ ಸಿ ಗೆ ಹೋಗಿದ್ದೆ ಈರುಳ್ಳಿ ತರಾಕೆ ಆಗಾಗ ಹೋಗ್ತಿರ್ತೀನಿ ಅರಿವೊತ್ತು” ಮುಂಜಾನೆಯೇ ಹೋಗಿದ್ದುದಾಗಿ ಮಧ್ಯಾಹ್ನವಾದುದರಿಂದ ಹಸಿವಾಯ್ತದೆ ಅದಕ್ಕೆ ಊಟಮಾಡಿ ಹೋಗಲು ಯಳಂದೂರಿಗೆ ಬಂದಿರುವಂತೆ ಏನೋ ಹೇಳಿದಳು ಅವಳ ಕೈಯಲ್ಲಿದ್ದ ಈರುಳ್ಳಿಯನ್ನು ಮರಳ್ಳಿಯಲ್ಲಿ ಅವಳನ್ನು ಮಾತನಾಡಿಸಲು ಶುರುಮಾಡಿದಾಗಲೇ ನಾನು ತೆಗೆದುಕೊಂಡಿದ್ದೆ. “ನಾನೂ ಯಳಂದೂರೇ ಅಮ್ಮ ಕೊಡಿ ಅಲ್ಲಿವರೆಗೆ ಇಡ್ಕೋತೀನಿ” ಎಂದು ಪಡೆದುಕೊಂಡಿದ್ದೆ. ಕೊನೆಗೆ ಮತ್ತೆ ಮತ್ತೆ ಕೇಳಿದಾಗ ತಿಳಿದ ಮಾಹಿತಿ ಅವಳ ಊರು ದುಗ್ಗಟ್ಟಿ. ಯಳಂದೂರಿನಿಂದ ಐದು ಕಿಮೀ ದೂರ. ಇಲ್ಲಿಂದ ಮೈಸೂರಿಗೆ ಹೋಗಿ

ರೋಹಿಣಿ ಜೆ. ಅವರ ಅನುಭವ ಕಥನ “ದುಗ್ಗಟ್ಟಿ ದುರ್ಗಿ” Read Post »

ಪುಸ್ತಕ ಸಂಗಾತಿ

“ಸೀಮೆ ಜಾಲಿ” ಇತಿಹಾಸ ಬರೆದ ತೇಜಾವತಿ,ಹೊಸ ಓದು: ನಾಗರಾಜ್ ಹರಪನಹಳ್ಳಿ

ಪುಸ್ತಕ ಸಂಗಾತಿ ,ಹೊಸ ಓದು: ನಾಗರಾಜ್ ಹರಪನಹಳ್ಳಿ “ಸೀಮೆ ಜಾಲಿ” ಇತಿಹಾಸ ಬರೆದ ತೇಜಾವತಿ ಸೀಮೆ ಜಾಲಿಯ* *ಇತಿಹಾಸ ಬರೆದ ತೇಜಾವತಿ ಹೊಸ ಓದು: ನಾಗರಾಜ್ ಹರಪನಹಳ್ಳಿ ಕನ್ನಡ ಕಾವ್ಯ ಜಗತ್ತಿನಲ್ಲಿ ಕವಯಿತ್ರಿ  ತೇಜಾವತಿ ಹೆಚ್.ಡಿ.   ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ‌‌‌ . ಸೀಮೆ ಜಾಲಿ ಕವನ ಸಂಕಲನ 2026ರಲ್ಲಿ ಪ್ರಕಟವಾಗಿದೆ. 2025 ನೇ ಸಾಲಿನ ಸುಶೀಲಾ ಸೀತಾರಾಮಶೆಟ್ಟಿ ಸ್ಮಾರಕ ಕವಿತಾ ಪ್ರಶಸ್ತಿ ವಿಜೇತ ಕೃತಿಯಾಗಿ ಹೊರಹೊಮ್ಮಿದ ‘ಸೀಮೆ ಜಾಲಿ ‘ಯಲ್ಲಿ ಸ್ತ್ರೀ ಕೇಂದ್ರಿತ ಹೂರಣದ ಕವಿತೆಗಳನ್ನು  ಹೆಚ್ಚಾಗಿ ಹೊಂದಿವೆ. ತೇಜಾವತಿ ಅವರ ನಾಲ್ಕನೇ ಸಂಕಲನ ಇದು‌. ಮೊದಲ ಸಂಕಲನದಲ್ಲಿ ಮಗುವೊಂದು ಬೆರಗು ಕಣ್ಣಿನಿಂದ ಸಮಾಜವನ್ನು ನೋಡುವ ಅಚ್ಚರಿಗಳನ್ನು ದಾಟಿಕೊಂಡು ಭಾವ ಮತ್ತು ತಾರ್ಕಿಕ ಮನಸ್ಥಿತಿಯ ಮಿಶ್ರಣ ಇಲ್ಲಿದೆ. ಕವಿಯೊಳಗೆ ಒಬ್ಬ ಮಾನಸಿಕ ಅಂತರ ( ಸೈಕಿಕಲ್ ಡಿಸ್ಟೆನ್ಸ್ )  ಕಾಪಾಡಿಕೊಂಡು , ಹೊರ ಜಗತ್ತು ಗಮನಿಸುವ ಸೂಕ್ಷ್ಮತೆ ಇಲ್ಲಿನ ಕವಿತೆಗಳಲ್ಲಿ ಕಾಣಬಹುದು. ಕನ್ನಡ ಕಾವ್ಯ ಪರಂಪರೆಯನ್ನು ಅರ್ಥ ಮಾಡಿಕೊಂಡಿರುವ ತೇಜಾವತಿಯ ‘ಸೀಮೆ ಜಾಲಿ’ ಯನ್ನು ಓದುವಾಗ , ವಚನ ಸಾಹಿತ್ಯ ಕಾಲದ ಅಕ್ಕ ಮಹಾದೇವಿಯನ್ನು ಮಾತಾಡಿಸಿಕೊಂಡು ಬಂದಂತೆ ಕಾಣುತ್ತದೆ. ಕನ್ನಡದಲ್ಲಿ ದೇವರನ್ನು ಪ್ರಶ್ನಿಸುವ ಪರಂಪರೆ ಇದೆ. ಅದನ್ನು ಈ ಸಂಕಲನದಲ್ಲಿ ಸಹ ಕಾಣಬಹುದು.‌ ಮಾಗಿದ ಮನಸ್ಸಿನ ಒಳ ನೋಟ ಇಲ್ಲಿನ ಕವಿತೆಗಳಲ್ಲಿದೆ. ಹೆಣ್ಣಿನ ತೊಳಲಾಟ, ಒಳ ಬೇಗುದಿ ಹಾಗೂ ವಿವಿಧ ಸನ್ನಿವೇಶಗಳಲ್ಲಿ  ಸ್ತ್ರೀ ಎದುರಿಸುವ ಪರಿಸ್ಥಿತಿಗಳನ್ನು ತೇಜಾವತಿ ಇಲ್ಲಿ ದಾಖಲಿಸಿದ್ದಾರೆ. ಕವಯಿತ್ರಿ ಅನಿತಾ ಪಿ.ತಾಕೋಡೆ ಅಭಿಪ್ರಾಯಪಡುವಂತೆ  ವಾಯಿದೆ ಮುಗಿದ ಬಳಿಕ ವಸ್ತುಗಳು ಮಾತ್ರವಲ್ಲ, ಸಂಬಂಧಗಳು ಕೂಡಾ ಚುಚ್ಚಲು ಶುರುವಿಡುತ್ತವೆ ಎನ್ನುವ ಕಟು ವಾಸ್ತವತೆಯನ್ನು ಚುಚ್ಚುವ ಸೀರೆ ಕವಿತೆ , ಸಹೃದಯರನ್ನು ಸದಾ ಕಾಡುವ ಕವಿತೆಯಾಗಿದೆ‌‌. ಕನ್ನಡದ ಮತ್ತೊಬ್ಬ ಪ್ರಸಿದ್ಧ ಕವಯಿತ್ರಿ , ವಿಮರ್ಶಕಿ ಡಾ.ಎಚ್.ಎಲ್ .ಪುಷ್ಪಾ ಅವರು ತೇಜಾವತಿ ಅವರ “ಸೀಮೆ ಜಾಲಿ ” ಕವಿತೆಗಳ ಬಗ್ಗೆ ಬರೆಯುತ್ತಾ ಇಲ್ಲಿನ ಬಹುತೇಕ ಕವಿತೆಗಳು ವಿಷಯ ಸಂಬಂಧಗಳನ್ನು ನಿರ್ವಹಿಸುವಲ್ಲಿನ ತೊಡಕುಗಳನ್ನು ,ಸುಸ್ತಾದ ಮನಸ್ಥಿತಿಯೊಂದನ್ನು ವಿವರಿಸುತ್ತಾ ಹೋಗುತ್ತವೆ. ಅದು ಸಮಾಜ ದೊಂದಿಗಿನ ಕ್ರೌರ್ಯ ಎದುರಿಸುವಲ್ಲಿ, ಗುಂಡು – ಹೆಣ್ಣು, ಪತಿ-ಪತ್ನಿಯ ಸಂಬಂಧಗಳ ನಿರ್ವಹಣೆಯಲ್ಲಿ ಮತ್ತೆ ಮತ್ತೆ ತಲೆದೋರುತ್ತಾ ಹೋಗುತ್ತದೆ‌ . ‘ವರ್ತಮಾನದಲ್ಲಿ ಸಂಬಂಧ ಗಳನ್ನು ನಿರ್ವಹಿಸುವಲ್ಲಿ ಬದಲಾದ ನಿಷ್ಠೆಗಳು, ಸಂಸಾರಿಕ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಕಳೆದುಕೊಂಡ ಹೆಣ್ಣಿನ ಅಸ್ತಿತ್ವ , ಗಂಡ‌ ಗೆಳೆಯನಾಗದ ಅಘಾತ – ಹೀಗೆ ಹಲವು ತೊಡಕುಗಳನ್ನು ಕುರಿತು ತೇಜಾವತಿ ಕವಿತೆಗಳು ಮಾತಾಡುತ್ತವೆ’ ಎಂದು ಅಭಿಪ್ರಾಯಪಡುತ್ತಾರೆ. ಹೇಳಲಾರದ ಅಸಹಾಯಕತೆಯನ್ನು ಕವಿತೆಗಳಲ್ಲಿ ಕಟ್ಟುವಲ್ಲಿ ತೇಜಾವತಿ ಗೆದ್ದಿದ್ದಾರೆ‌ . ಹಾಗೆ ಹೆಣ್ಣಿನ ಸೋಲಿನಲ್ಲೂ ಆಕೆಗೆ ಚಲನಶೀಲತೆಯನ್ನು ಕವಿತೆಯ ಮೂಲಕ ಹಿಡಿದಿಡುತ್ತಾರೆ.ಸೀಮೆ ಜಾಲಿ ಕವಿತೆ ಬದುಕಿನ ಕ್ರೌರ್ಯ ಹೇಳುತ್ತಲೇ ಅದರ ಕೊನೆಯಲ್ಲಿ ಆಶಾವಾದಾವನ್ನು ಕವಯಿತ್ರಿ ಕಟ್ಟುತ್ತಾಳೆ.  ಕವಿಯ ಅಪ್ಟಿಮಿಸಜಂನ್ನು ಜೀವ ಸಂಕುಲಕ್ಕೆ , ಸುತ್ತಣ ಜಗತ್ತಿಗೆ  ಬಿತ್ತುತ್ತಾರೆ. *“ಕ್ಷಣಿಕ ಸಂಬಂಧಗಳೇ ಹೀಗೆ**ಆಕರ್ಷಕ ಸೀರೆಯ ಹಾಗೆ**ಸೀಮಿತ ಅವಧಿಯೊಳಗೆ ಕಂಫರ್ಟ ಝೋನ್* *ಸೃಷ್ಟಿಸುವ ಅವು**ವಾಯಿದೆ ಮುಗಿದ ಬಳಿಕ ಚುಚ್ಚಲು ಶುರುವಿಡುತ್ತವೆ”*(ಚುಚ್ಚುವ ಸೀರೆ) “ಚುಚ್ಚುವ ಸೀರೆ” ಕವಿತೆ ಹೆಣ್ಣಿನ ಬದುಕನ್ನು ತೆರೆದಿಡುತ್ತದೆ. ವಾಸ್ತವದ ಕಠೋರತೆಯನ್ನು ದಾಖಲಿಸುತ್ತದೆ. *’ ಏನು ಮಾಡುವೆ? ‘* ಎಂಬ ಕವಿತೆಯಲ್ಲಿ ಪ್ರಕೃಯನ್ನು ಪ್ರಶ್ನಿಸುವ ಮೂಲಕ ಒಂದು ಚೆಂದದ ರೂಪಕದ ಮೂಲಕ ಕ್ರೂರ ವ್ಯವಸ್ಥೆ ನಡುವೆ ಬದುಕಿನ ಚೆಲುವು ಹುಡುಕುವ ಮನಸ್ಥಿತಿ ಕಾಣಿತ್ತದೆ.ನಕ್ಷತ್ರಗಳು ಹೊಳೆಯುವಾಗ ಅವು ಕತ್ತಲನ್ನು ನುಂಗುವ ಅಚ್ಚರಿ, ನದಿಗಳು ನಿತ್ಯ ಶುಭ್ರತೆಗಾಗಿ ನಿತ್ಯ ನಿರಂತರವಾಗಿ ಹರಿಯುವ ಚಲನಶೀಲತೆ, ಗಿಡ ಮರಗಳು ಪ್ರವಾಹವನ್ನು ಎದುರಿಸಲು ಭೂಮಿಗೆ, ತಾಯಿಬೇರು ಬಿಟ್ಟು ನಿಲ್ಲುವ ಗಟ್ಟಿತನ, ನಿಸ್ವಾರ್ಥವಾಗಿ ಅರಳುವ ಹೂಗಳ ಹಿಂದಿನ ಕಾಯಕ, ನ್ಯಾಯಾ ದೇವತೆ ಅಧರ್ಮವನ್ನು ಕುಡಿಯುವ ಬಗೆಯ ಹಿಂದೆ ಒಂದು ಬಗೆಯ ತಾತ್ವಿಕ ನಿಲುವನ್ನು ಸಹೃದಯರ ಮುಂದೆ ಇಡುತ್ತಾರೆ ಕವಯಿತ್ರಿ. ಒಳಗೆ ಅತ್ತು ಹೊರಗೆ ನಗುವ ಬುದ್ಧನ ಸ್ಥಿತಪ್ರಜ್ಞೆ, ಕೊನೆಗೆ ಬದುಕು ಭಾರ ಎನಿಸಿದಾಗ ತಾನೇ ಬುದ್ಧಳಾಗುವ ಕವಿ ಮಹೋನ್ನತ ಸ್ಥಿತಿಗೆ ಏರಬಲ್ಲ ಎಂಬ ಒಂದು ಸಂದೇಶವನ್ನು ‘ ಏನು ಮಾಡುವೆ ‘ ಕವಿತೆ ಹೊಮ್ಮಿಸುತ್ತದೆ. *”ಮೂರು ದಿನದ ಬದುಕು**ನಾಲ್ಕು ಗೋಡೆಯೊಳಗೆ ಸೋರಿ**ಸಮಾಧಿಯಾಗುವಾಗಬೊಗಸೆ ತುಂಬಿದ್ದ**ಕನಸುಗಳೆಲ್ಲ ಬೆರಳ ಸಂಧಿಯಲ್ಲಿ ಖಾಲಿಯಾಗಿದ್ದವು* *ಈಗೀಗ ಆ ಜೀವಕ್ಕೆ**ಹಗಲು ರಾತ್ರಿಗಳ ವ್ಯಾತ್ಯಾಸವಿಲ್ಲ**ಕಣ್ಣ ತುಂಬುವ ನಿದ್ದೆಯ ಸುಳಿವಿಲ್ಲ”*(ವಲ್ಲಿಯ ಗಂಟು) “ವಲ್ಲಿಯ ಗಂಟು” ಬಾಲ್ಯವನ್ನು , ಕೌಟುಂಬಿಕ ಪ್ರೀತಿ, ವಾತ್ಸಲ್ಯ ‌ಮತ್ತು ಕೊನೆಯಲ್ಲಿ ಹಿರಿಯರು ಹೊರಟು ಹೋಗುವ ಅನಾಥ ಭಾವ ಕಥನವನ್ನು ಕಟ್ಟಿಕೊಡುತ್ತದೆ. ಈ ಕವಿತೆ ಓದುವಾಗಲೇ ಒಂದು ಲಹರಿ ಸಹೃದಯರಲ್ಲಿ ಸೃಷ್ಟಿಯಾಗುತ್ತದೆ. ಅಪೂರ್ಣವಾದ ಕವಿತೆ ನಾನು ;ಹೌದುನಿಮ್ಮ ಊಹೆಯೂ ನಿಜವಾಗಿದೆಕವಿತೆಯಾಗಲು ಹೊರಟವಳ ಅರ್ಧ ಕವಿತೆ ಎಂಬ ಸಾಲುಗಳಲ್ಲಿ ಕವಯಿತ್ರಿಯ ವಿನಮ್ರತೆ ಎದ್ದು ಕಾಣುತ್ತದೆ. ಪುಟದಲ್ಲಿನ ಕವಿತೆಗಳುತಾನು ಹುಟ್ಟಿ ಬೆಳೆದಹೋರಾಟದ ಹಾದಿಯ ನೆನೆದುನೋವಿನ ನಗೆ ಬೀರುತ್ತವೆ;ಕೊನೆಗೂಕಾವ್ಯ ಪ್ರತಿಭೆ ಗೆದ್ದಿತಲ್ಲ ಎಂದು. ನಾಗರಾಜ್‌ ಹರಪನಹಳ್ಳಿ

“ಸೀಮೆ ಜಾಲಿ” ಇತಿಹಾಸ ಬರೆದ ತೇಜಾವತಿ,ಹೊಸ ಓದು: ನಾಗರಾಜ್ ಹರಪನಹಳ್ಳಿ Read Post »

ಕಾವ್ಯಯಾನ

 ಸುಹಾಸ್ ಶ್ರೀವತ್ಸ ಅವರ ಭಾವಗೀತೆ

ಕಾವ್ಯ ಸಂಗಾತಿ  ಸುಹಾಸ್ ಶ್ರೀವತ್ಸ ಭಾವಗೀತೆ ಈ ಬದುಕ ಬದುಕುವುದ ಕಲಿಯಲು ಈ ಬದುಕು ಸಾಕೇ?ಈ ಬದುಕ ಸವಿಯ ಸವಿಯಲು ಈ ಬದುಕು ಸಾಕೇ? ನಿನ್ನ ಜೀವನವೇ ಒಂದು ಹಾಡು,ಅದರ ಸಾಲು ಬರೆದವರಾರು?ಅರಿಯದ ಪದಗಳಿಗೂ ಅರ್ಥವಿದೆ,ಲಯದಲಿ ಹಾಡಿದರೆ ಹಿತವಿದೆ. ಹಾಡಿನ ಭಾಷೆಯೇ ಬೇರಾದರೂ,ಭಾವಕ್ಕೆ ಬೇಕಿಲ್ಲ ಭಾಷಾಂತರ;ಇದ್ದರೂ ಬದುಕಿನಲ್ಲಿ ಎಷ್ಟೇ ಅಂತರ,ನಿನ್ನ ಬದುಕನ್ನು ಪ್ರೀತಿಸು ನೀ ನಿರಂತರ. ಯಾರದೋ ರಾಗಕ್ಕೆ, ಯಾರದೇ ತಾಳಕ್ಕೆ,ನಿನ್ನ ಸ್ವರವನ್ನು ಶ್ರುತಿಯಲಿ ಸೇರಿಸು;ಜೀವವು ಜನನಿಯದು,ಜೀವನ ನಿನ್ನದು.  ಸುಹಾಸ್ ಶ್ರೀವತ್ಸ

 ಸುಹಾಸ್ ಶ್ರೀವತ್ಸ ಅವರ ಭಾವಗೀತೆ Read Post »

ಕಾವ್ಯಯಾನ

ಬಾಗೇಪಲ್ಲಿ ಅವರ ಗಜಲ್‌ ಜುಲ್ ಖಾಫಿಯಾ ರದೀಫ್ ಸಹಿತ

ಕಾವ್ಯ ಸಂಗಾತಿ ಬಾಗೇಪಲ್ಲಿ ಅವರ ಗಜಲ್‌ ಜುಲ್ ಖಾಫಿಯಾ ರದೀಫ್ ಸಹಿತ ನಿನ್ನಂದವ ನೋಡುವ ಭಾಗ್ಯ ಸಾಕೆನಗೆ ಅಪ್ಪುಗೆ ಬೇಕಿಲ್ಲತುಟಿ ಹೊರಡಿಸುವ ಸುಹಾಸ ಬೇಕೆನಗೆ ಸಲಿಗೆ ಬೇಕಿಲ್ಲ ಹೃದಯಾಂತರಾಳದಿ ಚೂರು ಸ್ಥಾನವ ನನಗೆ ಕಾಯ್ದಿರಿಸುನಿನ್ನ ಸನಿಹ ಇರುವ ಸುಖ ಮಾತ್ರ ನೀಡೆನಗೆ ಹೆಚ್ಚಿಗೆ ಬೇಕಿಲ್ಲ “ನಾನಿನ್ನ ಪ್ರೀತಿಸುವೆ” ಎಂಬ ಉಲಿ ಕೇಳಲು ಕಾತುರ ನಾನುಬಿಗಿ ಬಾಹು ಬಂಧನದ ಸಖ ಬೇಡೆನಗೆ ಹುಸಿನಗೆ ಬೇಕಿಲ್ಲ ನಿನ್ನೂಂದಿಗೆ ಸಹ ಬಾಳ್ವೆ ಎಂದಿಗೂ ಊಹಿಸಿ ಆಸೆ ಪಟ್ಟಿಲ್ಲಸಣ್ಣೊಂದು ಪ್ರೀತಿಯ ಕುಡಿನೋಟ ಬೀರೆನಗೆ ಕಾಡಿಗೆ ಬೇಕಿಲ್ಲ ಕೃಷ್ಣಾ! ಗರತಿ ರಾಧೆ ಸದಾ ರಮಿಸಿದಳು ಮಧುರೆಯಲಿ ನಿನ್ನಅಯ್ಯೋ ಪಾಪವೆ ಎನುತ ದಯೆ ತೋರೆನಗೆ ಮೈಲಿಗೆ ಬೇಕಿಲ್ಲ. ಬಾಗೇಪಲ್ಲಿ  

ಬಾಗೇಪಲ್ಲಿ ಅವರ ಗಜಲ್‌ ಜುಲ್ ಖಾಫಿಯಾ ರದೀಫ್ ಸಹಿತ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಬಸವ ಪ್ರೇಮಿ ಸಿರಿಗೆರೆಯ ಸಿರಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳು ದಾವಣಗೆರೆ ಚಿತ್ರದುರ್ಗ ಶಿವಮೊಗ್ಗ ಹೀಗೆ ಮಧ್ಯ ಕರ್ನಾಟಕದ ಭಾಗಗಳಲ್ಲಿ ಬಸವ ಜ್ಯೋತಿಯ ಬೆಳಕಾಗಿ ಮನೆ ಮನೆಗೆ ಬಸವಾದಿ ಶರಣರ ವಚನಗಳನ್ನು ಮುಗಿಸಿದ ಶಿವಯೋಗದ ಸಿರಿ ತರಳಬಾಳು ಶ್ರೀ ಮಠದ 20ನೆಯ ಜಗದ್ಗುರು ಶ್ರೀ ಶಿವಕುಮಾರ ಸ್ವಾಮೀಜಿ. ಏಪ್ರಿಲ್ 28, 1914ರಂದು ಬಸವ ಜಯಂತಿಯಂದು ಜನಿಸಿದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು 1940ರ ಬಸವ ಜಯಂತಿಯಂದೇ ತರಳಬಾಳು ಪೀಠದ ಜಗದ್ಗುರುಗಳಾಗಿ ಸಮಾಜಸೇವಾ ದೀಕ್ಷೆಯನ್ನು ಕೈಗೊಂಡರು.  ಆ ಮೂಲಕ ಮಠದ 20ನೆಯ ಜಗದ್ಗುರುಗಳಾಗಿ ಮಠಗಳ ಪರಂಪರೆಯಲ್ಲಿಯೇ ಆಮೂಲಾಗ್ರ ಬದಲಾವಣೆಗೆ ನಾಂದಿ ಹಾಡಿದ ಮೊದಲಿಗರು ಎಂದರೆ ಅತಿಶಯೋಕ್ತಿಯಲ್ಲ. ಮಠದ ಆಡಳಿತದ ಚುಕ್ಕಾಣಿ ಹಿಡಿದಾಗ ಸಿರಿಗೆರೆ ಮಠ ದುಗ್ಗಾಣಿ ಮಠವಾಗಿತ್ತು. ಅಂಥ ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿಸುವಲ್ಲಿ ಅವರಲ್ಲಿನ ಕಾಯಕಶ್ರದ್ಧೆ, ದೂರದೃಷ್ಡಿ, ತಾಯ್ತನ, ಸಂಘಟನಾ ಚಾತುರ್ಯ, ನೇರನಿಷ್ಟುರ ನುಡಿ, ಅದಮ್ಯ ವಿಶ್ವಾಸವೇ ಕಾರಣ. 19ನೆಯ ಶತಮಾನದ ಕಲ್ಯಾಣದಲ್ಲಿ ಬೆಳಗಿದ ಶರಣ ಧರ್ಮದ ದೀವಿಗೆಯನ್ನು ಸಿರಿಗೆರೆಯ ಪ್ರಣತಿಯಲ್ಲಿ ಬೆಳಗಿಸಿದವರು ಪೂಜ್ಯರು. ಮಠದ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ಧರ ಚಿಂತನೆ, ವಿಶ್ವಗುರು ಬಸವಣ್ಣನವರ ತತ್ವಸಿದ್ಧಾಂತಗಳ ತಳಹದಿಯಲ್ಲಿ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸದಾ ಕಲ್ಲುಮಳ್ಳುಗಳ ಹಾದಿಯಲ್ಲಿ ಸಾಗಿದ ಧೀಮಂತ ಗುರುಗಳು ಶ್ರೀ ಶಿವಕುಮಾರ ಶ್ರೀಗಳು. ಪ್ರಸ್ತುತ ದಿನಮಾನದಲ್ಲಿ ಒಂದು ಮಠವನ್ನು ಕಟ್ಟುವುದು ಅಷ್ಟು ಕಷ್ಟವಾಗಲಾರದೇನೋ! ಸರ್ಕಾರದ ಅನುದಾನದಿಂದಲೇ ಅನೇಕ ಮಠಗಳು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರಬಹುದು. ಆದರೆ ಕಳೆದ ನಾಲ್ಕು ದಶಕದ ಹಿಂದೆ ಮಠವೆಂದರೆ ಭಕ್ತರಿಗೆ ಏನೂ ಎಂಬುದೇ ಗೊತ್ತಿಲ್ಲದ ಸಂದರ್ಭದಲ್ಲಿ ಇಡೀ ಭಕ್ತಸಮೂಹವನ್ನು ಎಚ್ಚರಿಸಿ ಮಠದ ಕಡೆಗೆ ಸೂಜಿಗಲ್ಲಿನಂತೆ ಸೆಳೆಯುವಂತೆ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಅವರು ಪಟ್ಟ ಕಷ್ಟ, ನೋವು, ನಿಂದನೆ, ಯಾರಿಗೂ ಬಂದಿರಲಾರದೇನೋ! ಆದರೆ ಹಿಡಿದ ಕಾಯಕವನ್ನು ಮಾಡಿಮುಗಿಸುವ ಇಚ್ಛಾಶಕ್ತಿ ಗುರುಗಳಿಗೆ ಇದ್ದುದರಿಂದಲೇ ಸಿರಿಗೆರೆ ಮಠವನ್ನು ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿಸಿತು. ಶಿಷ್ಯರು ಮತ್ತು ಮಠದ ನಡುವೆ ಬಾಂಧವ್ಯಕಲ್ಪಿಸಿ ಶಿಷ್ಯರೆಂದರೆ ಸಿರಿಗೆರೆ ಶಿಷ್ಯರಂತೆ ನಡೆದುಕೊಳ್ಳಬೇಕು ಎನ್ನುವ ವಾತಾವರಣವನ್ನು ನಿರ್ಮಿಸಿದರು. ’ಮಠ ನಮಗೇನು ಮಾಡಿದೆ’ ಎಂದು ಆಶಿಸುವ ಜನರೇ ಈ ಸಮಾಜದಲ್ಲಿ ತುಂಬಿರುವಾಗ ’ಮಠಕ್ಕೆ ನಾನೇನು ಮಾಡಿದೆ’ ಎಂದು ಯೋಚಿಸುವ ಸಮರ್ಪಣಾ ಭಾವದ ಭಕ್ತರು ಸಿರಿಗೆರೆ ಮಠಕ್ಕಿದ್ದಾರೆ. ಅದರಂತೆ ಸ್ವಾಮಿಗಳೆಂದರೆ ಸಿರಿಗೆರೆ ಸ್ವಾಮಿಗಳ ಹಾಗೆ ಇರಬೇಕು ಎನ್ನುವಂತೆ ತೋರಿಸಿಕೊಟ್ಟರು. ನಿಸರ್ಗದ ಮುನಿಸಿನಿಂದ ಬರಗಾಲ ಬರಬಹುದೇ ಹೊರತು ಆ ಮಠದ ಶಿಷ್ಯರ ಶ್ರದ್ಧಾ-ಭಕ್ತಿಗೆ ಎಂದಿಗೂ ಬರವೆಂಬುದಿಲ್ಲ. ಹಾಗೆ ನೋಡಿದರೆ ಹಿರಿಯ ಗುರುಗಳಿಗಿಂತ ಮೊದಲು ಆರ್ಥಿಕ ಅನಾರೋಗ್ಯದಿಂದ ಬಳಲುತ್ತಿದ್ದ ಮಠವದು. ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಸದ್ಧರ್ಮ ಸಿಂಹಾಸನವನ್ನು ಅಲಂಕರಿಸಿದ ನಂತರ, ಭಕ್ತರು ನಾಮುಂದು ತಾಮುಂದು ಎಂದು ತನು-ಮನ-ಧನದ ಸೇವೆಯ ಮೂಲಕ ಈ ಬೃಹನ್ಮಠವನ್ನು ಅನ್ವರ್ಥವಾಗಿಯೂ ಬೃಹದಾಕಾರವಾಗಿ ಬೆಳೆಸಿದರು. ‘ಕಾಯ, ಕಾಲ, ಕಾಸಿಗೆ ಮಹತ್ವ ಕೊಡದವನು ಉದ್ಧಾರವಾಗುವುದಿಲ್ಲ’ ಎಂದು ಸಾರುತ್ತಾ ಅದರಂತೆಯೇ ತಾವು ನಡೆದು, ತಮ್ಮ ಶಿಷ್ಯವರ್ಗವೂ ನಡೆಯುವಂತೆ ನೋಡಿಕೊಳ್ಳುತ್ತಿದ್ದರು.ಬಹುಶಃ ಭಾರತದಲ್ಲಿ ಸಂವಿಧಾನ ಜಾರಿ ಆಗುವುದಕ್ಕಿಂತ ಮೊದಲೇ ಇಡೀ ರಾಷ್ಟ್ರದಲ್ಲಿ ಜಾತ್ಯತೀತ ಕನಸನ್ನು ಕಂಡು ಅದನ್ನು ನಿಜಗೊಳಿಸಿದ ವ್ಯಕ್ತಿ ಯಾರಾದರೂ ಇದ್ದರೆ ಅದು ಶ್ರೀ ಶಿವಕುಮಾರ ಶ್ರೀಗಳು ಮಾತ್ರ ಎಂದು ಹೆಮ್ಮೆಯಿಂದ ಹೇಳಬಹುದು.  ಸಹಪಂಕ್ತಿ ಭೋಜನ, ಸಮಾನ ಶಿಕ್ಷಣ, ಅಂತರ್ಜಾತಿ ಶಿಕ್ಷಣದ ಮೂಲಕ ’ಮಾನವಜಾತಿ ತಾನೊಂದೆ ವಲಂ’ ಎನ್ನುವ ಪಂಪನ ನುಡಿಯನ್ನು ನಿಜಗೊಳಿಸಿದರು. ಶಿಕ್ಷಣ ಸಂಸ್ಥೆಗಳ ಸ್ಥಾಪನೆ    ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯನ್ನು ಸ್ಫಾಪಿಸಿ ಅದರ ಅಡಿಯಲ್ಲಿ ನೂರಾರು ಶಾಲಾಕಾಲೇಜುಗಳನ್ನು ತೆರೆದರು. ಅಲ್ಲಿ  ಓದುವ ಮಕ್ಕಳಲ್ಲಿ  ಸಮಾನತೆಯ ಬೀಜಬಿತ್ತಿದರು. ವ್ಯವಹಾರ ಜ್ಙಾನವಿರುವವನಿಗೆ ವ್ಯಾಪಾರ ಮಾಡು, ಕೃಷಿ ಕೆಲಸದಲ್ಲಿ ಅನುಭವವಿದ್ದರೆ ಒಳ್ಳೆಯ ರೈತನಾಗು, ಚೆನ್ನಾಗಿ ಓದಿ ಉತ್ತಮ ಪದವಿಯನ್ನು ಪಡೆದಿದ್ದರೆ ಒಳ್ಳೆಯ ಕೆಲಸಕ್ಕೆ ಸೇರಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸು ಎಂದು ಹೇಳುವ ಮೂಲಕ ಬಸಣ್ಣನವರ ಕಾಯಕ ಶ್ರದ್ಧೆಯನ್ನು ಬೆಳೆಸಿದರು.  ‘ನೆತ್ತಿಯುಳ್ಳವನು ಓದಬೇಕು, ರಟ್ಟೆಯುಳ್ಳವನು ದುಡಿಯಬೇಕು, ಹೊಟ್ಟೆಯುಳ್ಳವನು ಉಣ್ಣಬೇಕು’  ಎಂದು ಹೇಳುತ್ತಿದ್ದ ಅವರ ಆಶೀರ್ವಾಣಿಯು ಅದೆಷ್ಟೋ ಜನರನ್ನು ಕರ್ತವ್ಯ ಪ್ರಜ್ಞರನ್ನಾಗಿ ಹಾಗೂ ಕ್ರಿಯಾಶೀಲರನ್ನಾಗಿ ಮಾಡಿತು. ಸಮಾಜದಲ್ಲಿ ನಡೆಯುವ ವಿವಾಹ, ಶಿವಗಣಾರಾಧನೆ, ಗೃಹಪ್ರವೇಶ ಇತ್ಯಾದಿ ಯಾವುದೇ ಕಾರ್ಯಕ್ರಮವಿರಲಿ;  ಅಲ್ಲಿ ‘ಸರ್ವ ಶರಣ ಸಮ್ಮೇಳನ’ಗಳ ಮೂಲಕ ನಾಡಿನ ಒಳ-ಹೊರಗೆ ಶರಣತತ್ವ ಪ್ರಸಾರ ಕಾರ್ಯವನ್ನು ಕೈಗೆತ್ತಿಕೊಂಡರು. ಅನ್ಯ ಭಾಷೆಗಳಿಗೂ ಶರಣರ ವಚನಗಳನ್ನು ಭಾಷಾಂತರಿಸಿ ಅನ್ಯ ಭಾಷಿಕರೂ ಶರಣ ಸಾಹಿತ್ಯದ ಮಹತ್ವವನ್ನ್ನು ಮನಗಾಣುವಂತೆ ಮಾಡಿದರು. ಒಂದು ಮಠದ ಪೀಠಾಧಿಪತಿಯಾಗಿ, ಕಾವಿಧಾರಿ ಸ್ವಾಮಿಗಳಾಗಿರುವವರು ಬಹುತೇಕ ಸಂಪ್ರದಾಯವಾದಿಗಳೇ ಆಗಿರುತ್ತಾರೆ. ಜಪ, ತಪ, ನಿತ್ಯ ನೇಮಗಳನ್ನು ಅನುಸರಿಸುತ್ತಾ ಅದನ್ನೇ ಶಿಷ್ಯರಿಗೆ ಬೋಧಿಸುತ್ತಾ ಕುರುಡು ಆಚರಣೆಗೆ ಒಳಗಾದವರೇ ಎಲ್ಲೆಲ್ಲೂ ಕಾಣಸಿಗುತ್ತಾರೆ. ಆದರೆ ಸ್ವಾಮಿಗಳಾಗಿ ಪ್ರಖರ ವಿಚಾರವಾದಿಯಾಗಿ, ಮೂಢನಂಬಿಕೆಗಳ ವಿರೋಧಿಯಾಗಿ ಶಿಷ್ಯರನ್ನು ತಿದ್ದುತ್ತಾ ಸರಿದಾರಿಯಲ್ಲಿ ಕರೆದೊಯ್ಯೊವ ಶ್ರೀ ಶಿವಕುಮಾರ ಸ್ವಾಮಿಜಿಯಂಥವರು ಸಿಗುವುದು ವಿರಳವೇ ಸರಿ. ಹಳಕಟ್ಟಿಯವರಿಗೆ ಬಂಗಾರದ ಪದಕ ಒಮ್ಮೆ ದಾವಣಗೆರೆ ನಗರದ ರಾಜನಹಳ್ಳಿ ಹನುಮಂತಪ್ಪ ಛತ್ರದ ಆವರಣದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಿತ್ತು. ಆಗ ವಚನಶಾಸ್ತ್ರದ ಪಿತಾಮಹರೆಂದೇ ಖ್ಯಾತರಾದ ಫ.ಗು ಹಳಕಟ್ಟಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.  ಅವರು ಹಳ್ಳಿ ಹಳ್ಳಿಗೆ ಸೈಕಲ್ ಮೇಲೆ ತಿರುಗಿ ವಚನಗಳ ಓಲೆಗರಿ, ಕೈಬರಹಗಳ ಪ್ರತಿ ಸಂಗ್ರಹಿಸಲು ಪಟ್ಟ ಶ್ರಮ, ಅದಕ್ಕಾಗಿ ಆರ್ಥಿಕವೆಚ್ಚ ಹೆಚ್ಚಾಗಿ ಆಗಿನ ಕೆಸಿಸಿ ಬ್ಯಾಂಕಿನಲ್ಲಿ ಮಾಡಿದ ಸಾಲವನ್ನು ತೀರಿಸಲಾಗದೆ ಮನೆ ಜಪ್ತಿಗೆ ಬಂದಿತು. ಈ ವಿಷಯ ತಿಳಿದ ಶ್ರೀ ಶಿವಕುಮಾರ ಶ್ರೀಗಳು ಕೂಡಲೇ ಎ. ಜಿ ವಿರುಪಾಕ್ಷಪ್ಪ, ಮತ್ತು ಸಿ ಅಂಕಪ್ಪ ಇವರನ್ನು ಸಿರಿಗೆರೆಗೆ ಕಳುಹಿಸಿ ಮಠದ ಏಜೆಂಟ್ ಆಗಿದ್ದ ರುದ್ರಯ್ಯನವರಿಗೆ ಪತ್ರ ಕೊಟ್ಟು ಮಠದಲ್ಲಿದ್ದ ಬಂಗಾರದ ಪದಕವನ್ನು ತರಿಸಿ ಅಂದಿನ ಕಾರ್ಯಕ್ರಮ ಮುಗಿಯುವದರೊಳಗಾಗಿ ಫ .ಗು ಹಳಕಟ್ಟಿಯನ್ನು ಸನ್ಮಾನಿಸಿ  ‘ಮಠ ಕೊಟ್ಟದ್ದು ಎಂದು ಬಂಗಾರದ ಪದಕವನ್ನು ಹಾಗೆ ಇಟ್ಟುಕೊಳ್ಳಬೇಡಿ. ಇದನ್ನು ಮಾರಿ  ನಿಮ್ಮ ಸಾಲವನ್ನು ತೀರಿಸಿ ಋಣಮುಕ್ತರಾಗಿ, ಶರಣ ಸಾಹಿತ್ಯದ ಸೇವಕರು ಸಾಲಗಾರರಾಗಿ ಈ ರೀತಿ ನೋವನ್ನು ಪಡುವುದು ನಮಗೆ ಇಷ್ಟವಿಲ್ಲ’ ಎಂದು ಆಶೀರ್ವದಿಸಿದರು. ತುಂಬಿದ ಕಣ್ಣು, ಮುಗಿದ ಕೈನಿಂದ ಅದನ್ನು ಸ್ವೀಕರಿಸಿದ ಹಳಕಟ್ಟಿಯವರು ಸಾಲ ತೀರಿಸಿ ಉಳಿದ ಹಣವನ್ನು ಮಠಕ್ಕೆ ತಲುಪಿಸುವುದಾಗಿ ಎಂದು ಹೇಳಿದಾಗ ಸಾಧ್ಯವಿಲ್ಲ, ಅದು ಶರಣ ಸಾಹಿತ್ಯದ ಮೀಸಲು ಎಂದು ಶ್ರೀಗಳು ಹೇಳಿದ್ದರು. ತಮ್ಮ ಜೀನದುದ್ದಕ್ಕೂ ಜಾತಿಮತ ಭೇದವಿಲ್ಲದೆ ಗ್ರಾಮೀಣ ಜನರ ಅಭ್ಯುದಯಕ್ಕಾಗಿ ನಾಲ್ಕು ದಶಕಗಳ ಕಾಲ ಅಹರ್ನಿಷಿ ದುಡಿದು  ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಆಮುಲಾಗ್ರ ಬದಲಾವಣೆಗೆ ನಾಂದಿ ಹಾಡಿದವರು ಶ್ರೀಗಳವರು. ಕಲ್ಲಾಗಿದ್ದ ಭಕ್ತರನ್ನು ಶಿಲೆಗಳನ್ನಾಗಿ ರೂಪಿಸಿದರು. ಬಿದ್ದವರನ್ನು, ಶೋಷಣೆಗೆ ಒಳಗಾದವರನ್ನು. ದೀನ ದಲಿತರನ್ನು, ಅಜ್ಞಾನದ ಸ್ಥಿತಿಯಲ್ಲಿ ಇರುವವರನ್ನು ಸದಾ ಮೇಲಕ್ಕೆತ್ತುವ ಮೂಲಕ ಸರ್ವ ಜನಾಂಗದ ಕಲ್ಯಾಣಕ್ಕೆ ಶ್ರಮಿಸಿದರು. ತಮ್ಮ ಕಣ್ ಸನ್ನೆ, ಬಾಯ್ ಸನ್ನೆ, ಕೈಸನ್ನೆಯ ಮೂಲಕವೇ ಸಾವಿರ ಸಾವಿರ ಜನರನ್ನು ಒಗ್ಗೂಡಿಸುವ, ಎಚ್ಚರಿಸುವ, ಮೌನರನ್ನಾಗಿಸುವ ಅವರ ವ್ಯಕ್ತಿತ್ವ ಕಲ್ಪನೆಗೂ ನಿಲುಕದ್ದು.ಪೀಠ ಅವರಿಗೆ ಹೂವಿನ ಹಾಸಿಗೆಯಾಗಿರಲಿಲ್ಲ; ಮುಳ್ಳಿನ ಹಾಸಿಗೆಯಾಗಿತ್ತು.  ಪೂಜ್ಯರು ಮನಸ್ಸಿದ್ದರೆ ಮಾರ್ಗ ಎಂಬ ತತ್ವದ ಮೇಲೆ ನಂಬಿಕೆಯಿಟ್ಟವರು. ಯಾವುದೇ ಕಾರ್ಯವಿರಲಿ ಹಣವಿಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಶ್ರೀಜಗದ್ಗುರುಗಳು ಹಣವನ್ನು ಎಂದೂ ಹಿಂಬಾಲಿಸಲಿಲ್ಲ; ಇವರು ಕಾರ್ಯ ಸಾಧನೆ ಮಾಡುತ್ತಾ ಹೋದಂತೆ ಹಣವೇ ಇವರನ್ನು ಹಿಂಬಾಲಿಸಿತು. ದೀನದಲಿತರ ಮಧ್ಯೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡುತ್ತ ಅವರ ಬದುಕಿನಲ್ಲಿ ವಿಶ್ವಾಸ ಮೂಡಿಸಿದ ಶಿವಕುಮಾರ ಶ್ರೀಗಳು ಸಮಸ್ತ ಸಮಾಜದ ಜಾಗೃತಿಗೆ ತಮ್ಮನ್ನು ತಾವೇ ಅರ್ಪಿಸಿಕೊಂಡ ವಾಸ್ತವ ಮಾನವತಾವಾದಿಗಳು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಉನ್ನತಿಗೆ ಹಗಲಿರುಳು ಶ್ರಮಿಸಿ ಸಮಾಜದ ಅಭ್ಯುದಯಕ್ಕೆ ಪಣತೊಟ್ಟು ಸುಂದರ ’ಮಹಾಮನೆ’ಯನ್ನೇ ನಿರ್ಮಾಣ ಮಾಡಿದ ಶ್ರೀಗಳಿಗೆ  ನಾಡು ಎಷ್ಟು ಋಣಿಯಾಗಿದ್ದರೂ ಸಾಲದು.  ಜಾತಿ ನಿರ್ಮೂಲನೆ ಜಾತಿಯ ವಿಷಬೀಜ ಎಲ್ಲೆಲ್ಲೂ ಚಿಗುರಿ ’ಗಿರಕಿ’ ಹೊಡೆಯುತ್ತಿದ್ದಾಗ ಮೊತ್ತಮೊದಲು ಕರ್ನಾಟಕದಲ್ಲಿ ಸಹಪಂಕ್ತಿ ಭೋಜನ ಆರಂಭಿಸಿ ಇಂದಿಗೂ ನಿರಂತರತೆ ಉಳಿಸಿದ ಧೀರ ಚೇತನ ಲಿಂಗೈಕ್ಯ ಶಿವಕುಮಾರ ಸ್ವಾಮಿಗಳವರು. “ಸಹಪಂಕ್ತಿ ಭೋಜನ ಬೇಡ ಎನ್ನುವುದಾದರೆ ಈ ಪೀಠದ ಜಗದ್ಗುರು ಪಟ್ಟವೇ ನಮಗೆ ಬೇಡ” ಎಂದ ಮಾನವತಾವಾದಿ ಅವರು.ಶ್ರೀಗಳವರನ್ನು ಕುರಿತು ಹೇಳುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಸೂರ್ಯನನ್ನು ಪರಿಚಯಿಸುತ್ತೇನೆ ಎನ್ನುವುದು ದಡ್ಡತನದ ಮಾತಾಗುತ್ತದೆ. ಕಲೆ, ಸಾಹಿತ್ಯ, ನಾಟಕ, ಶಿಕ್ಷಣ, ಧರ್ಮ, ಸಮಾಜ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಶಾಲಾ-ಕಾಲೇಜುಗಳ ಮುಖಾಂತರ ಅನ್ನದಾನ, ವಿದ್ಯಾದಾನಗಳ ಕ್ರಾಂತಿಯನ್ನು ಮಾಡಿ ನವಸಮಾಜವನ್ನು ಕಟ್ಟಿದ ಕೀರ್ತಿಗೆ ಅವರು ಭಾಜನರಾಗಿದ್ದಾರೆ.  ಇಂದಿನ ವಿಜ್ಞಾನ ಯುಗದಲ್ಲಿಯೂ ಅಡ್ಡಪಲ್ಲಕ್ಕಿ ಇರಲಾರದೆ ನಾವು ಬರುವುದಿಲ್ಲ ಎನ್ನುವ ವೇಷದಾರಿ ಸ್ವಾಮಿಜಿಗಳೆತ್ತ, ಅಂದಿನ ಕಾಲದಲ್ಲಿ ಜಗದ್ಗುರುಗಳಾಗಿದ್ದರೂ ತಾವೇ ಬಂದು ಜನ-ಮನದ ಹೃದಯಾಂತರಾಳದಲ್ಲಿ ಬಸವ ಬೀಜ ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡ ನಿಜವಾದ ಜಗದ್ಗುರು ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳೆತ್ತ!   ತಮ್ಮ ಉತ್ತರಾಧಿಕಾರಿಯಾಗಿ ವಿದ್ವತ್ ಪೂರ್ಣ  ಜಗದ್ಗುರುಗಳಾಗಿರುವ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ತಮ್ಮ ಸ್ಥಾನಕ್ಕೆ ಕುಳ್ಳಿರಿಸಿ ತರಳಬಾಳು ಮಠವನ್ನು  ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ, ಸಾಂಸ್ಕೃತಿಕ ರೈತಮುಖಿಯಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆಯುವಂತೆ  ಮಾಡಿದ್ದಾರೆ.  ಶ್ರೀಗಳವರ ಭೌತಿಕ ಶರೀರ ಅಳಿದಿರಬಹುದು. ಆದರೆ ಅವರ ವ್ಯಕ್ತಿತ್ವ ಜಂಗಮ. ಸಾವಿರ ವರ್ಷ ಕಳೆದರೂ ಅವರ ಚೈತನ್ಯ ಮರೆಯಾಗಲಾರದು. ಇಂದಿಗೂ ಅವರ ಸ್ಮರಣೆ ನಮ್ಮಲ್ಲಿ ಚೈತನ್ಯ ತುಂಬುತ್ತದೆ. ಇದು ಅವರ ಜಂಗಮತ್ವ. ಅವರನ್ನು ಸ್ಮರಿಸಿದಾಗಲೆಲ್ಲಾ ಕಣ್ಣು ಒದ್ದೆಯಾಗುತ್ತದೆ.  ಹೀಗೆ ಶ್ರೀಗಳ ಬಗ್ಗೆ ಬರೆಯುತ್ತಾ ಹೋದರೆ ಬತ್ತದ ಒರತೆಯಂತೆ, ವಜ್ರದ ಗಣಿಯಂತೆ ಅನೇಕ ಪಾಠ ಕಲಿಸುವ ಪ್ರಸಂಗಗಳು ನೆನಪಿನ ಬುತ್ತಿಯಿಂದ ಚಿಮ್ಮುತ್ತವೆ.ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಬಲ್ಲವರು ಅವರನ್ನು ನೆನೆಯದ ದಿನವೇ ಇಲ್ಲ. ಬಯಲಲ್ಲಿ ಬಯಲಾದರು  ಪೂಜ್ಯರು 1992 ಸೆಪ್ಟೆಂಬರ್ 24 ರಂದು ಲಿಂಗೈಕ್ಯರಾಗಿದ್ದರೂ  ಭಕ್ತರ ಅಂತರಾಳದಲ್ಲಿ ಇಂದಿಗೂ ಹೃದಯ ಸಿಂಹಾಸನಾಧೀಶ್ವರರಾಗಿ ಉಳಿದಿದ್ದಾರೆ. ಭಕ್ತರೆದೆಯಲಿ ಹಣತೆ ಹಚ್ಚಿಭಕ್ತರೇಳಿಗೆಯಲಿ ಬೆಳಕ ಕಂಡು ಮಾತಿಗಿಂತ ಕೃತಿಯೆ ಮೇಲೆಂದ ಭಕ್ತರೆದೆಯ ದಿವ್ಯಪ್ರಭೆ ವರಗುರು ಶ್ರೀ  ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕಾರ್ಯ ಸಾಧನೆ ನಿತ್ಯ ಸ್ಮರಣೀಯವಾಗಿದೆ. ಬಸವ ತತ್ವ ಪ್ರಸಾರ ಮಾಡುವ ಕೈಂಕರ್ಯಕ್ಕೆ ದುಡಿಯುವ ಶ್ರೇಷ್ಠ ಶಿವಯೋಗದ ಸಿರಿ ಸಾಧಕ ಪೂಜ್ಯರು ಶ್ರೀ ಶಿವಕುಮಾರ ಸ್ವಾಮಿಗಳು. ಇವರು ಸಾವಿಲ್ಲದ ಶರಣರು  ಡಾಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

You cannot copy content of this page

Scroll to Top