ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ವೈ.ಬಿ.ಕಡಕೋಳ ಅವರ ಕೃತಿ “ಬದುಕು ಬಂಡಿ”ಅವಲೋಕನ ಜಯಶ್ರೀ ಭಂಡಾರಿ

ಪುಸ್ತಕ ಸಂಗಾತಿ ಜಯಶ್ರೀ ಭಂಡಾರಿ ವೈ.ಬಿ.ಕಡಕೋಳ ಅವರ ಕೃತಿ “ಬದುಕು ಬಂಡಿ” ಅವಲೋಕನ ಬದುಕು ಬಂಡಿಯ ಅದ್ಭುತ ಲೋಕ. ಮುನವಳ್ಳಿಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮದುವೆ ಎಂದ ಕೂಡಲೇ ನನಗೆ ತುಂಬಾ ಖುಷಿಯಾಗಿ ಮದುವೆಗೆ ಹೋಗಲು ಸಿದ್ದಳಾದೆ.. ಕಾರಣ ಪಂಚಲಿಂಗೇಶ್ವರ ದೇವಸ್ಥಾನ ನೋಡುವ ಸಂಭ್ರಮ. ನಾವು ಮಕ್ಕಳೊಂದಿಗೆ ಶಾಲಾ ಪ್ರವಾಸದಲ್ಲಿ ಬಹಳ ದಿನಗಳ ಹಿಂದೆ ನೋಡಿದ ನೆನಪಿತ್ತು. ಮತ್ತೊಮ್ಮೆ ನೋಡಬೇಕೆಂದರೆ ಸಾಧ್ಯವಾಗಿರಲಿಲ್ಲ. ಮದುವೆ ಕಾರಣದಿಂದ ಪಂಚಲಿಂಗೇಶ್ವರ ದರ್ಶನ ಮತ್ತೆ ನನಗಾಯಿತು. ಅಂತೆಯೇ ನನ್ನ ಗೆಳತಿಯ ಮಗಳ ಮದುವೆ ಅಂದು ಅಲ್ಲಿ ಇತ್ತು. ಹೀಗಾಗಿ ನಾನು ಬಾದಾಮಿಯಿಂದ ನನ್ನ ಸ್ನೇಹಿತೆಯರ ಜೊತೆ ಹೋಗಿದ್ದೆ. ಬಹಳ ದಿನಗಳ ನಂತರ ಪಂಚಲಿಂಗೇಶ್ವರ ದೇವಸ್ಥಾನವೆಲ್ಲ ಸುತ್ತಾಡಿ ನಮಸ್ಕರಿಸಿ ತೀರ್ಥ ತೆಗೆದುಕೊಂಡು ಕೆಲವು ಫೋಟೋಗಳನ್ನ ಕ್ಲಿಕ್ಕಿಸಿಕೊಂಡೆವು ನಂತರ ಅದ್ದೂರಿಯ ವಿವಾಹದಲ್ಲಿ ಪಾಲ್ಗೊಂಡೆವು. ಮುನವಳ್ಳಿ ಎಂದ ಕೂಡಲೇ ನನಗೆ ಒಬ್ಬ ಅತ್ಯುತ್ತಮ ಲೇಖಕರ ನೆನಪಾಗುವುದು ಸಹಜ. ಅವರೇ ವೈ. ಬಿ. ಕಡಕೋಳ. ನಾನು ಅವರಿಗೆ ಫೋನಾಯಿಸಿ ಮುನವಳ್ಳಿ ಗೆ ಬಂದ ವಿಷಯ ಹೇಳಿದೆ ಅಲ್ಲದೆ ನನಗೆ ಪೋಸ್ಟ್ ಮುಖಾಂತರ ಕಳಿಸುವ ಪುಸ್ತಕಗಳನ್ನ ಇಲ್ಲಿಯೇ ಕೊಟ್ಟು ಬಿಡಿ ಸರ್ ಎಂದು ಫೋನಲ್ಲಿ ಹೇಳಿದೆ. ಅಂತೆಯೇ ಅಂದು ನನಗೆ ಕಡಕೋಳ ಸರ್ ಬದುಕು ಬಂಡಿ, ಬೆಳಕಿನೆಡೆಗೆ ಹಾಗೂ ಬಲ್ಲವರ ಬಳಗ ಒಟ್ಟು ಮೂರು ಪುಸ್ತಕಗಳನ್ನ ಕೊಟ್ಟರು. ನನ್ನ ಸ್ನೇಹಿತೆಯರು ಇಲ್ಲಿ ಬಂದರೂ ನಿನ್ನ ಸಾಹಿತ್ಯ ನೀನು ಬಿಡ್ತಾ ಇಲ್ಲವಲ್ಲ ಅಂತ ಛೇಡಿಸಿದರು. ನಾವು ಇದ್ದಲ್ಲಿ ಕಡಕೋಳ ಸರ್ ಪುಸ್ತಕಗಳನ್ನು ತಲುಪಿಸಿದರು. ಅವರಿಗೆ ಕೃತಜ್ಞತೆಗಳನ್ನು ಅರ್ಪಿಸಿ ನಮ್ಮ ಗಾಡಿ ಬಾದಾಮಿಯತ್ತ ಹೊರಟಿತು. ದಾರಿಯಲ್ಲಿಯೇ 3 ಪುಸ್ತಕಗಳನ್ನ ತಿರುವಿ ಹಾಕುತ್ತಾ ಬಂದೆ. ಬೆಳಕಿನೆಡೆಗೆ ಹಾಗೂ ಬದುಕು ಬಂಡಿ ಇವು ಕಡಕೋಳವರ  ಸಂಪಾದಿತ ಕೃತಿಗಳು. ಇನ್ನೊಂದು ಕೃತಿ “ಬಲ್ಲವರ ಬಳಗ” ಇದರಲ್ಲಿ ನಾಡಿನ ಖ್ಯಾತ ಲೇಖಕ ಲೇಖಕಿಯರ ಬದುಕು ಬರಹ ಕುರಿತು ಲೇಖನಗಳಿವೆ. ನನ್ನ ಕುರಿತು ಲೇಖನವೂ ಇದರಲ್ಲಿ ಇದೆ ಇದಕ್ಕಾಗಿ ಕಡಕೋಳ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಸಮರ್ಪಿಸುತ್ತೇನೆ.  ಬದುಕು ಬಂಡಿ ಇದು ಕಡಕೋಳರವರ 34ನೇ ಕೃತಿ ಇದರಲ್ಲಿ ಲೂಸಿ ಸಲ್ದಾನ ಮಾತೆಯ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಲೂಸಿ ಸಲ್ದಾನ ರವರ ಅಪರೂಪದ ವ್ಯಕ್ತಿತ್ವವನ್ನ ಅವರ ಆದರ್ಶವನ್ನು ಹಾಗೂ ಅವರು ಜೀವನದಲ್ಲಿ ಕಂಡುಂಡ  ನೋವು ನಲಿವುಗಳನ್ನು ಬದುಕು ಬಂಡಿ ನಮಗೆ ತೆರೆದಿಡುತ್ತದೆ. ಸಂಪಾದಕರ ನುಡಿ ಒಳಗೆ ಮಾತೆಯ ಜೀವನದ ಬದುಕು ಬರಹವನ್ನು ಸಂಕಲಿಸಿದ್ದಾರೆ.  ಬದುಕು ಬಂಡಿಯ ಮುನ್ನುಡಿಯನ್ನು ಖ್ಯಾತ ಪರಿಸರವಾದಿ ಚಲನಚಿತ್ರ ನಿರ್ದೇಶಕ ನಟ ಸುರೇಶ್ ಹೆಬ್ಳಿಕರ್  ಬರೆದು ಮುನ್ನಡೆಸಿದ್ದಾರೆ. ಆಶಯ ನುಡಿಗಳನ್ನು ಶ್ರೀ ಮಹಾಂತ ಸ್ವಾಮಿಗಳು ಬೇರುಗಂಡಿ ಬ್ರಹನ್ಮಠ ಚಿಕ್ಕಮಗಳೂರು ಜಿಲ್ಲೆ, ಹಾಗೂ ಡಾ ರೇಣುಕಾ ಅಮ್ಮಲಝರಿ ಇಬ್ಬರು ವ್ಯಕ್ತಿಗಳು ಬದುಕು ಬಂಡಿಗೆ ಆಸೆಯ ನುಡಿಗಳನ್ನು ಬರೆದು ಪುಸ್ತಕದ ಮೆರಗು ಹೆಚ್ಚಿಸಿದ್ದಾರೆ.  ೧ಪರಿವಿಡಿ, ೨ಬದುಕು ಬಂಡಿಯ ರೂವಾರಿಗಳು, ೩ಕವನಗಳು, ೪ಲೇಖನಗಳು ಹೀಗೆ ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಆಯಾ ಭಾಗಗಳಲ್ಲಿ ಸಂಬಂಧಿತ ಬರಹಗಳನ್ನ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.. ಬದುಕು ಬಂಡಿ ನಂದಿನಿ ಸನ್ಬಾಳ್ ಶಿಕ್ಷಕಿ ಬರೆದ ಕವನವಾಗಿದೆ. ಇದೇ ಕವನವನ್ನು ಸಂಪಾದಿತ ಕೃತಿಗೆ ಶಿರ್ಷಿಕೆ  ಕೊಟ್ಟಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾಳಾ, ಕಲ್ಬುರ್ಗಿ ಜಿಲ್ಲೆಯ ನಂದಿನಿ ಸನ್ಬಾಳ್ ಶಿಕ್ಷಕಿಯರು ಈ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಶಿವಲೀಲಾ ಪ್ರಕಾಶನ ಮಾರುತಿ ಬಡಾವಣೆ, ಸಿಂದೋಗಿ ಕ್ರಾಸ್ ಮುನವಳ್ಳಿ ಇವರು ಬದುಕು ಬಂಡಿ ಸಂಪಾದಿತ ಕೃತಿಯನ್ನು ಪ್ರಕಾಶನ ಮಾಡಿದ್ದಾರೆ.. ಇದರಲ್ಲಿರುವ “ನೋವುಂಟು ನಲಿದವರು” ಈ ಕವನದಲ್ಲಿ ಸಲ್ದಾನ ಮಾತೆಯ ಜೀವನ ಗಾತೆಯನ್ನು ತುಂಬ ಮನೋಜ್ಞವಾಗಿ ಶ್ರೀಮತಿ ವಿದ್ಯಾ ನಾಡಿಗೆರೆ ಬರೆದಿದ್ದಾರೆ.  ಸ್ವತಃ ಲೂಸಿ ಸಲ್ಡಾನಾ.  ಮಾತೆಯವರು ‘ನನ್ನ ಬದುಕಿನ ಸಂಕ್ಷಿಪ್ತ ಆತ್ಮ ಚರಿತ್ರೆ’ ಎಂಬ ಲೇಖನದಲ್ಲಿ ತಮ್ಮ ಇಡೀ ಜೀವನದ ಕುರಿತು ಪರಿಚಯವನ್ನ ತುಂಬಾ ಅಮೋಘವಾಗಿ ಹೇಳುತ್ತಾ ಸಾಗುತ್ತಾರೆ. ಅವರ ಜೀವನ ಚರಿತ್ರೆಯನ್ನು ಓದುತ್ತಾ ಓದುತ್ತಾ ಅದ್ಭುತ ಲೋಕವನ್ನೇ ಪ್ರವೇಶಿಸಿದಂತಾಗುತ್ತದೆ. ತಂದೆಯ ಈ ಬದುಕು ಕಲಿಸಿದ ಪಾಠ, ಅಕ್ಕನ ಸ್ವಭಾವ, ನೋವಿನ ನುಡಿ, ತಿರುವಿನ ಒಡಲು, ಬದುಕು ಜಟಕಾ ಬಂಡಿ, ಬದುಕಿಗೆ ನೆರವಾದವರ ಹಿನ್ನೆಲೆ, ಕಣ್ಣೀರಧಾರೆ, ಇದೇಕೆ ಹೀಗೇಕೆ, ಭಯ ನಿರ್ಭಯ, ಅರಳಿದ ಕುಸುಮ, ಹೀಗೆ ಬಾಲ್ಯದಿಂದ ಯೌವ್ವನ ,ಯೌವನದಿಂದ ಮದುವೆ, ಮದುವೆಯಿಂದಾಗುವ ಅದೆಷ್ಟೋ ಘಟನೆಗಳು ಹೀಗೆ ತಮ್ಮ ಸಂಪೂರ್ಣ ಆತ್ಮಕಥೆಯನ್ನು ಸಂಕ್ಷಿಪ್ತವಾದ ಪಕ್ಷಿ ನೋಟವನ್ನು ಲೂಸಿ ಸಲ್ದಾನಾ. ದಾಖಲಿಸಿದ್ದು ಓದುಗರ ಮನದಾಳಕ್ಕೆ ಇಳಿಯುತ್ತದೆ.. ಕೀರ್ತಿವತಿ ವಿ.ಎನ್. ಬರೆದ ಪ್ರತಿಭಾನ್ವಿತ ಬಡ ಮಕ್ಕಳ ಆಶಾಕಿರಣ ಮೇಡಂ ಇದರಲ್ಲಿ ಗುರು-ಶಿಷ್ಯರ ಸಂಬಂಧವನ್ನ ದಾಖಲಿಸಲಾಗಿದೆ. ಬಡ ಮಕ್ಕಳು ಸದಾ ನೆನಪಿನಲ್ಲಿಟ್ಟುಕೊಳ್ಳುವ ಹಿರಿಯ ಜೀವ ಸಲ್ಡಾನ ಮೇಡಂ ಎಂದು ಲೇಖಕಿ ಮನದಾಳದಿಂದ ಹೇಳುತ್ತಾರೆ. ಬದುಕು ಬಂಡಿ ಕಿರು ಚಿತ್ರದಲ್ಲಿ ಬೇರೆ ಬೇರೆ ಪಾತ್ರಗಳ ರೂವಾರಿಗಳಾದ ವ್ಯಕ್ತಿಗಳು ತಾವು ತೊಡಗಿಸಿಕೊಂಡ 32 ಪಾತ್ರಧಾರಿಗಳ  ಪರಿಚಯ ಅವರ ಪಾತ್ರದ ವಿಶೇಷತೆ ಹೀಗೆ ಅವರೆಲ್ಲರ ಸಂಪೂರ್ಣ ಪರಿಚಯದೊಂದಿಗೆ ಬರಹಗಳನ್ನು ದಾಖಲಿಸಿದ್ದಾರೆ. ಇದು ಕೂಡ ಬದುಕು ಬಂಡಿ ಕೃತಿಗೆ ವಿಶೇಷವಾದ ಮೆರಗು ತಂದಿದೆ. ಕಾರಣ ಅವರೆಲ್ಲರ ಪರಿಚಯದಿಂದ ಅವರ ಬಹುಮುಖ ಪ್ರತಿಭೆ ನಾಡಿನ ಜನತೆಗೆ ಪರಿಚಯಿಸಿದಂತಾಗುತ್ತದೆ.  ಮತ್ತೆ ಮುಂದುವರಿದು ನಾಲ್ಕನೇ ಭಾಗದಲ್ಲಿ ಕವನಗಳು ನಮ್ಮನ್ನು ಸೆಳೆಯುತ್ತವೆ. ಅಕ್ಷರ ತಾಯಿ, ಮಹಾತಾಯಿ ನೀನು, ಲೂಸಿ ಸಲ್ಡಾನಾ, ಓ ದೇವತೆ ಹೀಗೆ ಮುಂದುವರೆಯುತ್ತಾ ಈ ಎಲ್ಲಾ ಕವನಗಳಲ್ಲಿ ಮಾತೆ ಲೂಸಿಯವರ ಜೀವನ ಗಾಥೆಯನ್ನು ಕಾವ್ಯದಲ್ಲಿ ಹೃದಯಂಗಮವಾಗಿ, ಆಕರ್ಷಣೀಯವಾಗಿ ಪದಗಳಲ್ಲಿ ಸೆರೆಹಿಡಿಯಲಾಗಿದೆ. ಒಟ್ಟಾರೆ ಮಾತೆ ಮಮತೆಯ ಕಡಲು, ಅದೆಷ್ಟು ವಿಶಾಲ ಹೃದಯ ,ಅವರ ಬದುಕು ಅದೆಷ್ಟು ಸಹನೀಯ, ಅವರ ತಾಳ್ಮೆ, ಮನದ ವಿಶಾಲತೆ, ಬಡವರನ್ನು ಕಾಣುವ ಕಾರುಣ್ಯತೆ, ಮಕ್ಕಳೊಂದಿಗೆ ಬೆರೆಯುವ ವಾತ್ಸಲ್ಯ, ತಮ್ಮ ಸಂಪರ್ಕದಲ್ಲಿ ಬಂದ ಒಡನಾಡಿಗಳನ್ನ ಆತ್ಮೀಯತೆಯಿಂದ ಕಾಣುವ ಭಾವ, ಹೀಗೆ ಒಂದೇ ಎರಡೇ ಸಾಕಷ್ಟು ಬೆರಗುಗಳ ಸಂಕಲನ ಇವರು. ದಾನ ಧರ್ಮದಲ್ಲಿ ಎತ್ತಿದ ಕೈ. ಏನೆಲ್ಲ ಸಮಾಜಕ್ಕೆ ಕೊಟ್ಟರೂ ಕೊಡದಂತಿರುವ ನಿರ್ಭಾವ. ಸಮಾಜಕ್ಕೆ ಇವರು ಅಪರೂಪದ ಕೊಡುಗೆ. ಇವರಿಂದ ಸಮಾಜ ಸಾಕಷ್ಟನ್ನು ಕಲಿತಿದೆ, ಕಲಿಯಬೇಕಾಗಿದೆ ಇವರ ಆದರ್ಶ ಪಥದಲ್ಲಿ ನಡೆದು ನಾವೆಲ್ಲಾ ನಮ್ಮ ಜೀವನ ಸಾರ್ಥಕ ಮಾಡಿಕೊಳ್ಳೋಣ ಎಂದು ಆಶಿಸುತ್ತಾ‌ ಎಲ್ಲರೂ ಒಮ್ಮೆ ಓದಲೇಬೇಕಾದ ಕೃತಿ ಎಂದು ಮನದುಂಬಿ ಹಾರೈಸುವೆ. ಮತ್ತೊಮ್ಮೆ ಮಾತೆ ಲೂಸಿಯವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುವೆ.  ಜಯಶ್ರೀ.ಭ. ಭಂಡಾರಿ. 

ವೈ.ಬಿ.ಕಡಕೋಳ ಅವರ ಕೃತಿ “ಬದುಕು ಬಂಡಿ”ಅವಲೋಕನ ಜಯಶ್ರೀ ಭಂಡಾರಿ Read Post »

ಕಾವ್ಯಯಾನ

ಸರಸ್ವತಿ ಕೆ ನಾಗರಾಜ್ ಅವರ ಕವಿತೆ “ಬುದ್ದಿಗಿಂತ ನಿಷ್ಠೆ”

ಕಾವ್ಯ ಸಂಗಾತಿ ಸರಸ್ವತಿ ಕೆ ನಾಗರಾಜ್ “ಬುದ್ದಿಗಿಂತ ನಿಷ್ಠೆ” ನಾಯಿಗಿಂತ ನರಿ ಬಹಳ ಬುದ್ಧಿವಂತ ಪ್ರಾಣಿ,ಆದರೂ ಜನ ನರಿ ಸಾಕುವುದಿಲ್ಲ,ನಾಯಿಯನ್ನೇ ಸಾಕುತ್ತಾರೆ;ಯಾಕೆ ಗೊತ್ತಾ?ಬುದ್ಧಿವಂತಿಕೆಗಿಂತ ಪ್ರಾಮಾಣಿಕತೆ ಮುಖ್ಯ,ಚಾಣಾಕ್ಷತನಕ್ಕಿಂತ ನಿಷ್ಠೆಯೇ ಶ್ರೇಷ್ಠ. ಜಾಣ್ಮೆಯಿಂದ ಬದುಕು ಗೆಲ್ಲಬಹುದು,ಆದರೆ ನಂಬಿಕೆಯಿಂದ ಹೃದಯವನ್ನೆ ಗೆಲ್ಲಬಹುದು,ಮಾತಿನಿಂದ ಮನವೊಲಿಸಬಹುದು,ಆದರೆ ನಡೆನುಡಿಯಿಂದ ನಂಬಿಕೆಯನ್ನೇ ಗಳಿಸಬಹುದು.ಎಷ್ಟೇ ಬುದ್ಧಿ ಇದ್ದರೂ ನಂಬಿಕೆ ಇಲ್ಲದಿದ್ದರೆ ವ್ಯರ್ಥ,ಎಷ್ಟೇ ಸರಳವಾಗಿದ್ದರೂ ನಿಷ್ಠೆ ಇದ್ದರೆ ಅರ್ಥ, ಜಗತ್ತು ಕೊನೆಗೆ ನೆನಪಿಡುವುದುಜಾಣತನ ತೋರಿದವನನ್ನಲ್ಲ,ಕಷ್ಟಕಾಲದಲ್ಲೂ ಕೈಬಿಡದೆಜೊತೆಯಾಗಿ ನಿಂತ ನಿಷ್ಠಾವಂತನನ್ನು.ಜಾಣ್ಮೆ ಬದುಕಿಗೆ ಅಲಂಕಾರ,ನಿಷ್ಠೆ ಬದುಕಿಗೆ ಆಧಾರ, ಬುದ್ಧಿ ಮನುಷ್ಯನನ್ನು ಎತ್ತರಿಸಬಹುದು,ಆದರೆ ಪ್ರಾಮಾಣಿಕತೆಯೇ ಅವನ ವ್ಯಕ್ತಿತ್ವವನ್ನು ಶ್ರೇಷ್ಠಗೊಳಿಸುತ್ತದೆ. ಸರಸ್ವತಿ ಕೆ ನಾಗರಾಜ್

ಸರಸ್ವತಿ ಕೆ ನಾಗರಾಜ್ ಅವರ ಕವಿತೆ “ಬುದ್ದಿಗಿಂತ ನಿಷ್ಠೆ” Read Post »

ಕಾವ್ಯಯಾನ

ಮಾಜಾನ್ ಮಸ್ಕಿ‌ ಅವರ ಕವಿತೆ “ಮರೆಯಾಗದಿರು ಗಾಂಧಿ”

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ‌ “ಮರೆಯಾಗದಿರು ಗಾಂಧಿ” ಪ್ರತಿ ಆತ್ಮಗಳ ಮಹಾತ್ಮನೊಂದವರ ಅಭಯ ಹಸ್ತದೇವನಾಗಿ ಕರಗದಿರುಕರುಣೆಯ ತತ್ವಮೂರ್ತಿ ನೀನು ಗೂಡ್ಸೆಗಳಿಗೇನು ಕಮ್ಮಿ ಇಲ್ಲದ್ವೇಷಿಸುವರು ದ್ವೇಷಿಸಲಿಟೀಕಿಸುವರು ಟೀಕಿಸಲಿಅಹಿಂಸೆಯ ಅಸ್ತ್ರ ಹಿಡಿದು ಮತ್ತೆ ಬಾ ಹಿಂಸೆ ಅತ್ಯಾಚಾರ ಯೋಧರ ಜೀವಂತ ದಹನಮುಗಿಲು ಮುಟ್ಟಿದೆ ಆಕ್ರಂಧನ ಎಲ್ಲೆಡೆ ಚಿತ್ಕಾರಸಿಡಿಲು ಮಿಂಚಾಗಿ ಸಂಚರಿಸುನಮ್ಮಯ ಧಮನಿ ಧಮನಿಗಳಲ್ಲಿ ನೋವನುಂಡು ತಲ್ಲಣಿಸಿವೆ ಮನಗಳುಹಗಲಿನಲ್ಲಿಯೇ  ನಡೆದಾಡಲು ಕಂಪಿಸಿವೆನಿನ್ನ ಕೋಲಿನ ಗಸ್ತು ಬೇಕಿದೆ ಬಂದೊಮ್ಮೆ ನೋಡು ಇಂದಿನ ಭಾರತಮನೆ ಮನೆಗಳಲ್ಲಿ ನೆಲೆಸಿಶಾಂತಿಯ ಹರಸು ಗಾಂಧಿ……ಬಾ ಮತ್ತೊಮ್ಮೆ ಗಾಂಧಿ…..ಬಾ ಮತ್ತೊಮ್ಮೆ ಗಾಂಧಿ….. ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ‌ ಅವರ ಕವಿತೆ “ಮರೆಯಾಗದಿರು ಗಾಂಧಿ” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಭಾಷಾವಾರ ಪ್ರಾಂತ್ಯ ರಚನೆ ಭಾರತದ ಭಾಷಾ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಅವಲೋಕಿಸಿದಾಗ, ಸಂಸ್ಕೃತವು ದೀರ್ಘಕಾಲಿಕ ಜ್ಞಾನ, ಧರ್ಮ, ಸಾಹಿತ್ಯ ಮತ್ತು ಆಡಳಿತದ ಪ್ರಮುಖ ಭಾಷೆಯಾಗಿ ಪ್ರಭಾವ ಬೀರಿರುವುದು ಕಂಡುಬರುತ್ತದೆ.ಆದರೆ ಭಾರತದ ವಿಶಾಲ ಜನಸಮುದಾಯದ ಬದುಕು ಒಂದೇ ಭಾಷೆಯೊಳಗೆ ಸೀಮಿತವಾಗಿರಲಿಲ್ಲ. ದೇಶದ ವಿವಿಧ ಭೂಭಾಗಗಳಲ್ಲಿ ಜನರು ತಮ್ಮ ತಮ್ಮ ಸ್ಥಳೀಯ ಭಾಷೆಗಳ ಮೂಲಕ ತಮ್ಮ ಜೀವನಾನುಭವ, ಸಂಸ್ಕೃತಿ, ಪರಂಪರೆ, ಜನಪದ ಜ್ಞಾನ ಮತ್ತು ಸಾಮಾಜಿಕ ಅಸ್ತಿತ್ವವನ್ನು ಶತಮಾನಗಳಿಂದಲೂ ಉಳಿಸಿಕೊಂಡು ಬಂದಿದ್ದರು. ಬ್ರಿಟಿಷರ ಆಗಮನದ ನಂತರ ಭಾರತದ ವಿವಿಧ ಪ್ರದೇಶಗಳು ವಸಾಹತುಶಾಹಿ ಆಡಳಿತದ ಅಡಿಯಲ್ಲಿ ಬಂದವು. ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ವಿಭಜಿಸಲ್ಪಟ್ಟಿದ್ದ ಈ ಪ್ರದೇಶಗಳಲ್ಲಿ ಸ್ವಾತಂತ್ರ್ಯದ ಆಶಯ ಕ್ರಮೇಣ ಬಲಗೊಳ್ಳತೊಡಗಿತು. ಪರಕೀಯ ಆಡಳಿತದಿಂದ ವಿಮೋಚನೆ ಪಡೆಯುವ ರಾಷ್ಟ್ರೀಯ ಹೋರಾಟದ ಜೊತೆಯಲ್ಲೇ, ತಮ್ಮ ನೆಲ, ನುಡಿ ಮತ್ತು ಸಂಸ್ಕೃತಿಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹೋರಾಟವೂ ರೂಪುಗೊಳ್ಳತೊಡಗಿತು.  ಕನ್ನಡಿಗರ ಪಾಲಿಗೂ ಇದೇ ಭಾವನೆ ಕ್ರಮೇಣ ಒಂದು ದೊಡ್ಡ ಚಳುವಳಿಯ ರೂಪ ಪಡೆದುಕೊಂಡಿತು.ಆ ಕಾಲದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು  ನೆಲೆಯನ್ನು ಹೊಂದಿದ್ದ ಕನ್ನಡಿಗರು ಆಡಳಿತಾತ್ಮಕವಾಗಿ ಬೇರೆ ಬೇರೆ ಭಾಗಗಳಲ್ಲಿ ವಿಭಜಿತರಾಗಿದ್ದರು. ಈ ವಿಭಜನೆಯಿಂದ ಕನ್ನಡ ಭಾಷೆಯ ಬೆಳವಣಿಗೆಗೂ, ಕನ್ನಡಿಗರ ಒಗ್ಗಟ್ಟಿನ ಭಾವನೆಗೂ ಹಲವು ಅಡಚಣೆಗಳು ಎದುರಾದವು. ಆರಂಭದಲ್ಲಿ ಕೆಲವೇ ಚಿಂತಕರು, ಸಾಹಿತಿಗಳು ಮತ್ತು ಹೋರಾಟಗಾರರ ಮನಸ್ಸಿನಲ್ಲಿ ಮೂಡಿದ ಈ ಆಶಯ ಕ್ರಮೇಣ ಜನಮನದ ಆಶಯವಾಗಿ ಪರಿವರ್ತಿತವಾಯಿತು. ವಿವಿಧ ಸಂಘ-ಸಂಸ್ಥೆಗಳು ಸ್ಥಾಪನೆಯಾದವು. ಕನ್ನಡ ಸಾಹಿತ್ಯ ಸಮ್ಮೇಳನಗಳು, ಸಭೆಗಳು, ಉಪನ್ಯಾಸಗಳು, ಪತ್ರಿಕೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಕನ್ನಡಿಗರಲ್ಲಿ ಏಕತೆಯ ಭಾವನೆ ಮೂಡಿಸಲಾಯಿತು. “ಕನ್ನಡನಾಡು ಒಂದಾಗಬೇಕು” ಎಂಬ ಕನಸು ನಿಧಾನವಾಗಿ ಸಾಮೂಹಿಕ ಸಂಕಲ್ಪವಾಗಿ ಬೆಳೆದಿತು. ಹೀಗೆ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ವಿಶಾಲ ಹಿನ್ನೆಲೆಯೊಳಗೆ ಹುಟ್ಟಿಕೊಂಡ ಕನ್ನಡ ನಾಡಿನ ಏಕತೆಯ ಹೋರಾಟವು ಕಾಲಕ್ರಮೇಣ ತನ್ನದೇ ಆದ ವಿಶಿಷ್ಟ ರೂಪ ಪಡೆದುಕೊಂಡಿತು.    ಕರ್ನಾಟಕದ ಭೂಭಾಗವು ಸುಮಾರು ಇಪ್ಪತ್ತೆರಡು(೨೨) ಆಡಳಿತಾತ್ಮಕ ವಿಭಾಗಗಳಲ್ಲಿ ಚದುರಿಹೋಗಿತ್ತು. ಮೈಸೂರು ಸಂಸ್ಥಾನ, ಕೊಡಗು ಮದ್ರಾಸ್ ಪ್ರಾಂತ್ಯದಲ್ಲಿ ಬಳ್ಳಾರಿ ದಕ್ಷಿಣ ಕನ್ನಡ ಕೊಳ್ಳೇಗಾಲ, ಮುಂಬೈ ಪ್ರಾಂತ್ಯದಲ್ಲಿ ಬೆಳಗಾವಿ ಬಿಜಾಪುರ ಧಾರವಾಡ ಉತ್ತರ ಕನ್ನಡ ಜಿಲ್ಲೆಗಳಾದರೆ…. ಹೈದರಾಬಾದ ಸಂಸ್ಥಾನದಲ್ಲಿ ಗುಲ್ಬರ್ಗಾ, ಬೀದರ,ರಾಯಚೂರು ಜಿಲ್ಲೆಗಳು ಇವಅಲ್ಲದೆ ಕೇಂದ್ರ ಸರ್ಕಾರದ ನೇರ ಆಡಳಿತದಲ್ಲಿ ಬೆಂಗಳೂರು, ಬೆಳಗಾವಿ, ಬಳ್ಳಾರಿ ಪ್ರದೇಶಗಳು ಜತ್ತ, ಮುಧೋಳ, ಸೊಂಡೂರ, ಸವಣೂರ, ಸಾಂಗ್ಲಿ, ಮಿರಜ, ಜಮಖಂಡಿ, ರಾಮದುರ್ಗ ಮುಂತಾದವು ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿದ್ದವು. . ರಾಜಕೀಯ ಗಡಿಗಳು ಕನ್ನಡಿಗರನ್ನು ಬೇರ್ಪಡಿಸಿದ್ದರೂ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಂಧ ಮಾತ್ರ ಅವರನ್ನು ಒಳಗಿನಿಂದ ಒಂದಾಗಿಸುತ್ತಲೇ ಇತ್ತು.   ಚಳುವಳಿಗೆ ಸುಮಾರು ಒಂದೂವರೆ ಶತಮಾನದಷ್ಟು ದೀರ್ಘ ಇತಿಹಾಸವಿದೆ.ಹಲವು ತಲೆಮಾರುಗಳ ಚಿಂತನೆ, ಪರಿಶ್ರಮ, ತ್ಯಾಗ ಮತ್ತು ನಿರಂತರ ಹೋರಾಟದ ಫಲವಾಗಿ ಬೆಳೆದ ಮಹತ್ತರ ಜನಚಳುವಳಿಯಾಗಿದೆ. ಚಳುವಳಿಯ ಹಾದಿ ಸುಗಮವಾಗಿರಲಿಲ್ಲ.  ನಾಡು ನುಡಿಯ ಮೇಲಿನ ಅಭಿಮಾನ ಅವರ ಹೋರಾಟಕ್ಕೆ ನಿರಂತರ ಶಕ್ತಿಯನ್ನು ನೀಡಿತು. ಚಳುವಳಿಗೆ ಕೈಜೋಡಿಸಿದವರ ಆಶಯವು…. ಕೆಲವರ ಕನಸಾಗಿ ಉಳಿಯದೆ, ನಿಧಾನವಾಗಿ ಜನಸಾಮಾನ್ಯರ ಹಕ್ಕಿನ ಧ್ವನಿಯಾಗಿ ಮಾರ್ಪಟ್ಟಿತು.ಈ ಹೋರಾಟವು ಒಂದೇ ಹಂತದಲ್ಲಿ ತನ್ನ ಗುರಿಯನ್ನು ಸಾಧಿಸಲಿಲ್ಲ.  ಗಡಿಗಳ ಪುನರ್ವ್ಯವಸ್ಥೆಯು….. ಕನ್ನಡಿಗರ ಒಗ್ಗಟ್ಟಿನ ಪ್ರಜ್ಞೆಯ ದ್ಯೋತಕವಾಯಿತು.ಜನಮನದ ಶಕ್ತಿಯಾಗಿ ಪರಿವರ್ತಿತವಾದ ಇತಿಹಾಸವಾಯಿತು.ಕರ್ನಾಟಕ ಏಕೀಕರಣದ ಈ ದೀರ್ಘ ಹೋರಾಟವು   ಕನ್ನಡದ ನೆಲ ನುಡಿಯೊಂದಿಗೆ ಬೆಸೆದುಕೊಂಡು, ಕನ್ನಡಿಗರಲ್ಲಿ ಜಾಗೃತಿ ಮತ್ತು ಒಗ್ಗಟ್ಟಿನ ಭಾವನೆಯನ್ನು ಬೆಳೆಸಲು ಶ್ರಮಿಸಿಲು  ಜಯದೇವಿತಾಯಿಯವರು ಕರೆಕೊಡುತಿದ್ದರು.    ಒಂದೇ ರಾಜ್ಯದ ಅಡಿಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು ಸೇರಿದರೂ, ಗಡಿಭಾಗಗಳ ಪ್ರಶ್ನೆ ಹೊಸ ಸವಾಲಾಗಿ ಎದುರಾಯಿತು. ಹಲವು ಕನ್ನಡ ಪ್ರದೇಶಗಳು ದೀರ್ಘಕಾಲ ಅನ್ಯಭಾಷಿಕ ಆಡಳಿತಗಳ ಅಡಿಯಲ್ಲಿ ಉಳಿದಿದ್ದರಿಂದ, ಅಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರ ಹಕ್ಕುಗಳು ಕ್ರಮೇಣ ದುರ್ಬಲಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡಕ್ಕೆ ಅಗತ್ಯವಾದ ಸ್ಥಾನ ದೊರೆಯದಿರುವುದು ಕನ್ನಡಪರ ಚಿಂತಕರಲ್ಲಿ ಆತಂಕ ಮೂಡಿಸಿತ್ತು. ಭಾಷೆಯೊಂದಿಗೆ ಜನರ ಸಂಸ್ಕೃತಿ, ಪರಂಪರೆ, ಸಾಮಾಜಿಕ ಬದುಕು ಮತ್ತು ಅಸ್ತಿತ್ವವೂ ಬೆಸೆದುಕೊಂಡಿತ್ತು. ಹೀಗಾಗಿ ಗಡಿಭಾಗದ ಕನ್ನಡಿಗರ ಹಕ್ಕುಗಳನ್ನು ರಕ್ಷಿಸುವುದು ಮತ್ತೊಂದು ಮಹತ್ವದ ಕರ್ತವ್ಯವಾಗಿ ಪರಿಣಮಿಸಿತು. ಇದೇ ಸಂದರ್ಭದಲ್ಲಿ ಸೋಲಾಪುರದಂತಹ ಕನ್ನಡಿಗರ ಬಾಂಧವ್ಯ ಹೊಂದಿದ್ದ ಪ್ರದೇಶಗಳ ಕುರಿತೂ ರಾಜಕೀಯ ಚರ್ಚೆಗಳು ನಡೆದವು. ಗಡಿಭಾಗಗಳ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆ ಕೇವಲ ರಾಜಕೀಯ ನಾಯಕರ ಮಟ್ಟದಲ್ಲೇ ಉಳಿಯದೆ, ಜನಸಾಮಾನ್ಯರ ಮನಸ್ಸಿನಲ್ಲಿಯೂ ತೀವ್ರ ಆತಂಕವನ್ನು ಹುಟ್ಟಿಸಿತು.ಈ ಸಂದರ್ಭದಲ್ಲಿ ಜಯದೇವಿತಾಯಿಯವರ ಧ್ವನಿ ಮತ್ತೊಮ್ಮೆ ಸ್ಪಷ್ಟವಾಗಿ ಮೊಳಗಿತು. ಗಡಿಭಾಗದ ಜನರ ಅಭಿಪ್ರಾಯವನ್ನು ಕಡೆಗಣಿಸಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂಬುದು ಅವರ ದೃಢ ನಿಲುವಾಗಿತ್ತು. ಜನರ ಸಮ್ಮತಿಯಿಲ್ಲದೆ, ಅವರ ಬದುಕು ಮತ್ತು ಭಾಷೆಯ ಭವಿಷ್ಯವನ್ನು ನಿರ್ಧರಿಸುವ ಯಾವುದೇ ಒಪ್ಪಂದಕ್ಕೆ ಸರ್ಕಾರ ಮುಂದಾಗಬಾರದು ಎಂದು ಅವರು ಎಚ್ಚರಿಸಿದರು. ವಿಶೇಷವಾಗಿ ನಿಜಲಿಂಗಪ್ಪನವರಂತಹ ನಾಯಕರ ಮೇಲೆ ಕನ್ನಡಿಗರು ಇಟ್ಟಿದ್ದ ನಿರೀಕ್ಷೆಯನ್ನು ಉಲ್ಲೇಖಿಸುತ್ತಾ, ಕನ್ನಡಿಗರ ಹಿತವನ್ನು ರಕ್ಷಿಸುವ ಜವಾಬ್ದಾರಿ ನಾಯಕತ್ವದ ಮೇಲಿದೆ ಎಂಬ ಸಂದೇಶವನ್ನು ಅವರು ಸ್ಪಷ್ಟಪಡಿಸಿದರು.ಅವರ ಎಚ್ಚರಿಕೆಯ ಧ್ವನಿಯಲ್ಲಿ ಯಾವುದೇ ಒಂದು ಪ್ರದೇಶದ ಪರವಾದ ಸಂಕುಚಿತ ಮನೋಭಾವನೆಯ ಬದಲಾಗಿ, ಕರ್ನಾಟಕದ ಅಖಂಡತೆ ರಾಜಕೀಯ ಏರುಪೇರುಗಳಿಗೆ, ಜಾತಿ ಮತಗಳ ವಿಭಜನೆಗೆ ಅಥವಾ ಕ್ಷಣಿಕ ರಾಜಕೀಯ ಒತ್ತಡಗಳಿಗೆ ಬಲಿಯಾಗಬಾರದು ಎಂಬ ವಿಶಾಲ ಚಿಂತನೆ ಇತ್ತು. ೧೯೫೪-೫೫ ಮೈಸೂರು ಸಂಸ್ಥಾನದ ಶಾಸನ ಸಭೆಯ ಮುಂಗಡ ಪತ್ರದ ಅಧಿವೇಶನದಲ್ಲಿ ಕೆಂಗಲರು ಐತಿಹಾಸಿಕ ಕಾರಣಗಳು ಮೈಸೂರು ಸಂಸ್ಥಾನವನ್ನು ವಿಶಾಲ ಗೊಳಿಸುತ್ತ ಮಗ್ಗಲು ಪ್ರದೇಶದಲ್ಲಿಯೇ ಜನರು ಸ್ವಯಂ ಪ್ರೇರಣೆಯಿಂದ ಈ ಸಂಸ್ಥಾನದಲ್ಲಿ ಸೇರ್ಪಡೆ ಹೊಂದಲು ಆತುರರಾಗಿದ್ದಾಗ ಅವರೆಲ್ಲರನ್ನು ನಾವು ಅವರಾಡುವ ಭಾಷೆಯನ್ನು ಗಮನಿಸದೇ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಹೀಗಿದ್ದರೂ ನಾವೆಲ್ಲಾ ಭಾರತೀಯರೆಂಬ ಒಂದೇ ಮಾತೃಭೂಮಿಯ ನಾಗರಿಕರಿಗೆ ಅವರನ್ನು ಸ್ವಾಗತಿಸದಿರುವುದು ಸಾಧ್ಯವಿಲ್ಲ ,ನಮ್ಮ ದೇಶ ಬಾಂಧವರು ಒಳಕ್ಕೆ ಬಾರದಂತೆ ಬಾಗಿಲನ್ನು ನಾವು ಮುಚ್ಚಿಕೊಳ್ಳುವುದೆಂದರೆ ದೇಶಪ್ರೇಮ ಮತ್ತು ಭಾತೃ ಪ್ರೇಮಿಗಳಿಗೆ ಮಿತಿಯನ್ನು ಹಾಕಿಕೊಂಡಂತೆ ಎಂದು ಹೇಳಬಹುದು ನಮ್ಮ ಧೋರಣೆಯು ರಾಜ್ಯವನ್ನು ವಿಸ್ತರಿಸುವುದಲ್ಲ, ನಮ್ಮಲ್ಲಿ ಬಂದು ಸೇರಬೇಕೆನ್ನುವವರನ್ನು ಸ್ವಾಗತಿಸುತ್ತೇವೆ. ಮುಂಬೈ ಕರ್ನಾಟಕ ಹೈದರಾಬಾದ ಕರ್ನಾಟಕವೆಂದೇ ಇಂಗ್ಲೀಷರಿಂದ ಕರೆಯಲ್ಪಟ್ಟು ಭೂ ಪ್ರದೇಶದ ಜನತೆಯ ಭಾಷೆ ಕನ್ನಡವೆನ್ನುವುದನ್ನು  ಮೈಸೂರುವನ್ನು ಬಿಟ್ಟರೆ ಉಳಿದೆಲ್ಲರೂ ಆಂಧ್ರಪ್ರದೇಶ ಮಹಾರಾಷ್ಟ್ರದವರಂತೆ ಅನ್ಯಭಾಷಿಕ ಭಿನ್ನತೆಯನ್ನು ಬಿಟ್ಟರೆ ಆ ಭಾಗದವರೆಲ್ಲರ ಭಾಷೆ ಕನ್ನಡವೆಂದು ಇಂಗ್ಲೀಷರ ಅಧ್ಯಯನ ಮಾಡಿ ಹೇಳಿದ್ದನ್ನು ಒಪ್ಪದೆ ತಿರಸ್ಕಾರದ ಭಾವನೆ ಸ್ವ ಪ್ರತಿಷ್ಠತೆಯಿಂದ ಮೈಸೂರಿನ ಜನರು ಉಳಿದಿರುವುದನ್ನು ಪರಿಕೀಯರಂತೆ ನಟಿಸುವದ ಖಂಡಿಸಿದರು.   ದೇಶಪ್ರೇಮ ಮಾತೃ ಪ್ರೇಮದ ಹೆಸರಿನಲ್ಲಿ ತಮ್ಮ ಹೆಗ್ಗಳಿಕೆಯನ್ನು ಮೆರೆಯುವ ಪ್ರಯತ್ನ ಮಾಡಿದ್ದಾರೆ ಇದಕ್ಕೆ ಹಿಂದೆ ಎರಡು ಕರ್ನಾಟಕಗಳಾಗಲಿ ಎಂದು ಅವರ ಪ್ರಯತ್ನವಿತ್ತು ಇಂಥ ಮೈಸೂರಿನವರಿಗೆ ಜಯದೇವಿ ತಾಯಿಯವರು ಖಂಡಿಸಿದ್ದಾರೆ. ಕನ್ನಡಿಗರ ಸಂದಿಗ್ಧ ಮನೋಭಾವವನ್ನು ಪ್ರಕಟಿಸಿದ ಕೆಂಗಲರು ಕನ್ನಡಿಗರ ಬಹುದಿನಗಳ ಕನಸು ನನಸಾಗದಿದ್ದಲ್ಲಿ ಅಖಿಲ ಕನ್ನಡ ಕುಲಕ್ಕೆ ಕೇಡು ಬಗೆದಂತೆ ಕನ್ನಡ ಸರ್ಕಾರವು ನಿಮ್ಮೆಲ್ಲರನ್ನು ಕ್ಷಮಿಸದು ಎಂದಿದ್ದಾರೆ . ಜಯದೇವಿ ತಾಯಿಯವರಂತ ಉದಾರಿ ನಿಸ್ವಾರ್ಥಿ ಅಧಿಕಾರದ ವ್ಯಾಮೋಹವಿಲ್ಲದ ಮಹಿಳೆಯರ ಒತ್ತಾಯಕ್ಕಾಗಿಯಾದರೂ ಮೈಸೂರಿನವರು ಅಖಂಡ ಕರ್ನಾಟಕ ನಿರ್ಮಾಣಕ್ಕೆ ಒಪ್ಪಿದರು. ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೆ ವೈಯಕ್ತಿಕ ಹಿತಾಸಕ್ತಿಗಳಿಗೆ ಮಣಿಯದ ವೀರ ಕನ್ನಡತಿಯ ಸ್ಥಾನ ಉಳಿಸಿಕೊಂಡು ಬಂದ ಜಯದೇವಿಯವರ ನಿಶ್ಚಲ ನಿಷ್ಠೆಯೇ ಮೈಸೂರಿನವರ ಮನ ಒಲಿಸಿತು .ಅವರ ಸರಳ ಸ್ವಾಭಾವಿಕ ಸೋದರಿಕೆಯ ಅಧಿಕಾರದ ಒತ್ತಾಯವನ್ನು ಒಪ್ಪಿದರು ಎನ್ನಬಹುದಾಗಿದೆ.  ಇದೇ ಹೊತ್ತಿಗೆ ಕರ್ನಾಟಕ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಅಂಬಲಿಯವರ ನೇತೃತ್ವದ ಸದಿಚ್ಚಾ ಮಂಡಳಿಯು ಮೈಸೂರಿನಲ್ಲಿ ಪ್ರವಾಸ ತೆಗೆದುಕೊಂಡು ಜನತೆಯ ಮನವಣಿಸಲು ಪ್ರಾರಂಭಿಸಿತು. “ನೊಂದವರ ನೋವು, ನೋವೇಅರಿಯದವರಿಗೇನು ಬಲ್ಲರು?”ಎಂದು ಹೇಳುತ್ತಿದ್ದ ಜಯದೇವಿತಾಯಿಯವರ ಮನಸ್ಸಿನ ತಳಮಳ ತೊರುತಿತ್ತು. ಪರಭಾಷೆಯ ಒತ್ತಡದಲ್ಲಿ ಬದುಕುತ್ತಿರುವವನಿಗೆ ಮಾತ್ರ ತನ್ನ ಭಾಷೆಯನ್ನು ಕಳೆದುಕೊಳ್ಳುವ ನೋವು ಎಷ್ಟು ಆಳವಾದುದು ಎಂಬುದು ತಿಳಿಯುತ್ತದೆ. ತನ್ನ ಮಗುವಿನ ಶಿಕ್ಷಣದಲ್ಲಿ ತನ್ನದೇ ಮಾತೃಭಾಷೆಗೆ ಸ್ಥಾನ ದೊರೆಯದಾಗ ತಾಯಿಯ ಮನಸ್ಸಿಗೆ ಆಗುವ ನೋವು, ಆಡಳಿತ ಕಚೇರಿಯಲ್ಲಿ ತನ್ನ ಭಾಷೆಯಲ್ಲಿ ಮಾತನಾಡಲು ಸಾಧ್ಯವಾಗದಾಗ ಸಾಮಾನ್ಯ ಕನ್ನಡಿಗ ಅನುಭವಿಸುವ ಅಸಹಾಯಕತೆ….ಇವುಗಳನ್ನು ದೂರದಿಂದ ನೋಡುವವರಿಗೆ ಅರ್ಥವಾಗುವುದು ಸುಲಭವಲ್ಲ.ಎಂದು… ಹೀಗೆ ಜಯದೇವಿತಾಯಿಯವರ ಹೋರಾಟಕ್ಕೆ ಹೊಸ ಅರ್ಥ ದೊರೆಯಿತು. ಸವಿತಾ ದೇಶಮುಖ

Read Post »

ಕಾವ್ಯಯಾನ

ಟಿ.ಪಿ.ಉಮೇಶ ಅವರ ಕವಿತೆ “ಗಾಂಧೀಜಿ ನಿನ್ನೆಗೆ ಮುಗಿದ ಕಥೆಯಲ್ಲ!”

ಕಾವ್ಯ ಸಂಗಾತಿ ಟಿ.ಪಿ.ಉಮೇಶ “ಗಾಂಧೀಜಿ ನಿನ್ನೆಗೆ ಮುಗಿದ ಕಥೆಯಲ್ಲ!” ಕೈಯಲ್ಲಿ ಆಯುಧ ಹಿಡಿಯದೆಸಾಮ್ರಾಜ್ಯವನ್ನೇ ನಡುಗಿಸಿದಅಹಿಂಸೆಯ ಮಹಾಶಕ್ತಿವಂತ! ಕೈಯಲ್ಲಿ ಯಾವ ಅಧಿಕಾರವಿರದೆಕೋಟ್ಯಾಂತರ ಹೃದಯಗಳ ಗೆದ್ದಜನಮನದ ಮಹಾನಾಯಕ! ಮಾತಿನಲ್ಲಷ್ಟೇ ಸತ್ಯವನ್ನಾಡದೆಬದುಕಿನಲ್ಲೇ ಸತ್ಯವನ್ನು ತೋರಿದಲೋಕದ ಸತ್ಯಸಾಧಕ! ಶತ್ರುವನ್ನೆಂದಿಗು ದ್ವೇಷಿಸದೆಅನ್ಯಾಯವನ್ನೆಲ್ಲ ಎದುರಿಸಿದವಿಶ್ವದ ಧೈರ್ಯಶಾಲಿ! ಆಡಂಬರದ ಬಟ್ಟೆಗಳ ಬಿಟ್ಟುಬಡವರ ನೋವನ್ನೆಲ್ಲ ಹೊದ್ದಜನಜಗತ್ತಿನ ಸರಳಜೀವಿ! ತನ್ನ ಹಸಿವು ನೋವುಗಳಿಗಿಂತಪರರ ಹಸಿವು ನೀಗಿಸಲು ದುಡಿದಮಹಾನ್ ಕರುಣಾಮೂರ್ತಿ! ಜಾತಿ ಧರ್ಮಗಳ ಹೆಸರಿನಲ್ಲಿಗೋಡೆ ಕಟ್ಟದೆ ಸೇತುವೆ ಕಟ್ಟಿದಧೀಮಂತ ಸಮನ್ವಯವಾದಿ! ತನ್ನ ಹೆಜ್ಜೆ ಗುರುತುಗಳಿಗಿಂತದೇಶದ ಹೆಜ್ಜೆ ಗುರುತು ಉಳಿಸಿದಯುಗಮಾನದ ದೇಶಸೇವಕ! ಸೆರೆಮನೆಯಲ್ಲಿನ ಕತ್ತಲೆಯಲ್ಲುಸ್ವಾತಂತ್ರ್ಯದ ಬೆಳಕನ್ನು ಕಂಡಛಲಬಿಡದ ಕನಸುಗಾರ! ಗುಂಡಿಗೆ ಎದೆಯೊಡ್ಡಿದರೂದ್ವೇಷಕ್ಕೆಂದೂ ಮನಸ್ಸು ಕೊಡದದೈವಸದೃಶ ಕ್ಷಮಾಶೀಲ! ಮಹಾತ್ಮ ಗಾಂಧೀಜಿ ಎಂದರೆಒಂದು ಹೆಸರು ಮಾತ್ರವಲ್ಲನಡೆಯಬಹುದಾದ ತತ್ವ ಸಿದ್ಧಾಂತ! ಮಹಾತ್ಮ ಗಾಂಧೀಜಿ ಎಂದರೆಒಬ್ಬ ಮನುಷ್ಯ ಮಾತ್ರವಲ್ಲಬದುಕಬಹುದಾದ ಒಂದು ಆದರ್ಶ! ಮಹಾತ್ಮ ಗಾಂಧೀಜಿ ಎಂದರೆನಿನ್ನೆಗೆ ಮುಗಿದ ಕಥೆಯಲ್ಲನಾಳೆಗೂ ಬೇಕಾದ ಮಾನವೀಯತೆ! ಟಿ.ಪಿ. ಉಮೇಶ್

ಟಿ.ಪಿ.ಉಮೇಶ ಅವರ ಕವಿತೆ “ಗಾಂಧೀಜಿ ನಿನ್ನೆಗೆ ಮುಗಿದ ಕಥೆಯಲ್ಲ!” Read Post »

ಇತರೆ

“ಗಾಂಧೀಜಿ ಮತ್ತು ಆತ್ಮ ಗೌರವದ ಪಾಠ”ವೀಣಾ ಹೇಮಂತ್ ಗೌಡ ಪಾಟೀಲ್ 

ಗಾಂಧಿ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್  “ಗಾಂಧೀಜಿ ಮತ್ತು ಆತ್ಮ ಗೌರವದ ಪಾಠ” ಲಂಡನ್ ನಲ್ಲಿ ಗಾಂಧೀಜಿಯವರು ಕಾನೂನು( ಬ್ಯಾರಿಸ್ಟರ್ ) ಪದವಿಯನ್ನು ಓದುತ್ತಿದ್ದ ಸಮಯ. ಅವರಿಗೆ ಪಠ್ಯ ವಿಷಯವನ್ನು ತೆಗೆದುಕೊಳ್ಳುತ್ತಿದ್ದ ಪ್ರೊಫೆಸರ್ ಪೀಟರ್ ಎಂಬ ವ್ಯಕ್ತಿಗೆ ಗಾಂಧಿ ಎಂದರೆ ಕೊಂಚ ಅಸೂಯೆ ಸಿಟ್ಟು… ಕಾರಣವಿಷ್ಟೇ ಗಾಂಧಿ ಎಂದಿಗೂ ತಮ್ಮ ಆತ್ಯಾಭಿಮಾನವನ್ನು ಬಿಟ್ಟು ಕೊಟ್ಟು ಮಾತನಾಡುತ್ತಿರಲಿಲ್ಲ. ಅವರಿಬ್ಬರ ನಡುವೆ ಆಗಾಗ ವಾದಗಳು ನಡೆಯುತ್ತಿದ್ದುದು ಸಾಮಾನ್ಯವಾಗಿತ್ತು.  ಒಂದು ದಿನ ವಿಶ್ವವಿದ್ಯಾಲಯದ ವಿಶಾಲವಾದ ಊಟದ ಕೋಣೆಯಲ್ಲಿ ಪೀಟರ್ ಆಹಾರವನ್ನು ಸ್ವೀಕರಿಸುತ್ತಿದ್ದರು ಮತ್ತು ಅದೇ ಸಮಯದಲ್ಲಿ ಗಾಂಧೀಜಿಯವರು ತಮ್ಮ ಊಟದ ಟ್ರೇಯನ್ನು ಹಿಡಿದು ಪ್ರೊಫೆಸರ್ ಪಕ್ಕದಲ್ಲಿ ಬಂದು ಕುಳಿತರು. ಇದು ಪ್ರೊಫೆಸರ್ ಗೆ ಇಷ್ಟವಾಗಲಿಲ್ಲ ಆ ಸಮಯದಲ್ಲಿ ಗಾಂಧಿಯನ್ನು ಕೆಣಕುವ ನಿಟ್ಟಿನಲ್ಲಿ ಪ್ರೊಫೆಸರ್ “ಮಿಸ್ಟರ್ ಗಾಂಧಿ ನಿಮಗೆ ಗೊತ್ತಿಲ್ವೇ! ಒಂದು ಹಂದಿ ಮತ್ತು ಒಂದು ಹಕ್ಕಿ ಎಂದೂ ಜೊತೆಯಾಗಿ ಊಟಕ್ಕೆ ಕುಳಿತುಕೊಳ್ಳುವುದಿಲ್ಲ” ಎಂದು ಗಾಂಧಿಯನ್ನು ಕಿಚಾಯಿಸಿದರು.  ಇದಕ್ಕೆ ಪ್ರತ್ಯುತ್ತರವಾಗಿ ಗಾಂಧಿ “ಡೋಂಟ್ ವರಿ  ಪ್ರೊಫೆಸರ್…ನಾನು ಹಾರಿ ಹೋಗುವೆ ” ಎಂದು ಹೇಳಿಕೂಡಲೇ ಪಕ್ಕದ ಮತ್ತೊಂದು ಟೇಬಲ್ ಗೆ ಹೋಗಿ ಕುಳಿತರು    ಗಾಂಧೀಜಿಯವರ ಉತ್ತರ  ಪೀಟರ್ಸ್ ಗೆ ತುಂಬಾ ಕೋಪವನ್ನು ತರಿಸಿತು. ಮುಂದೆ ನಡೆಯಲಿರುವ ಪರೀಕ್ಷೆಯಲ್ಲಿ ಗಾಂಧೀಜಿಯವರನ್ನು ನಪಾಸು ಮಾಡುವ ಮೂಲಕ ಸೇಡು ತೀರಿಸಿಕೊಳ್ಳಬೇಕು ಎಂದು ಪೀಟರ್ ಯೋಜಿಸಿದರು. ಆದರೆ ಪರೀಕ್ಷೆಗಳಲ್ಲಿ ಗಾಂಧೀಜಿ ಅತ್ಯಂತ ಚಾಣಾಕ್ಷತನದಿಂದ ಉತ್ತರಗಳನ್ನು ನೀಡಿದ್ದರು.ಇಲ್ಲಿಯೂ ಪೀಟರಗೆ ಗಾಂಧಿಯವರನ್ನು ಏನು ಮಾಡಲು ಆಗಲಿಲ್ಲ  ನಂತರ ನಡೆದ ಮೌಖಿಕ ಪರೀಕ್ಷೆಯಲ್ಲಿ ಮಿಸ್ಟರ್ ಪೀಟರ್ ಗಾಂಧೀಜಿಯವರನ್ನು ಕುರಿತು ಕೇಳಿದ ಪ್ರಶ್ನೆ ಹೀಗಿತ್ತು… “ಮಿಸ್ಟರ್ ಗಾಂಧಿ, ನೀವು ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ನಿಮಗೆ ಒಂದು ಬ್ಯಾಗಿನಲ್ಲಿ ಸಾಕಷ್ಟು ಹಣ ಮತ್ತು ಮತ್ತೊಂದು ಬ್ಯಾಗಿನಲ್ಲಿ ಜಾಣ್ಮೆ ಇದ್ದರೆ ನೀವು ಯಾವುದನ್ನು ಆರಿಸಿಕೊಳ್ಳುತ್ತೀರಿ?” ಎಂದು ಕೇಳಿದರು. ತಕ್ಷಣವೇ ಪ್ರತ್ಯುತ್ತರ ನೀಡಿದ ಗಾಂಧಿ ನಾನು ಖಂಡಿತವಾಗಿಯೂ ಹಣ ತುಂಬಿದ ಬ್ಯಾಗನ್ನು ಆರಿಸಿಕೊಳ್ಳುತ್ತೇನೆ ಎಂದು ಹೇಳಿದರು.  ಆಗ ಸಿಕ್ಕಿಕೊಂಡೆ ನೀನು ಎಂಬಂತೆ ಮಿಸ್ಟರ್ ಪೀಟರ್ ನಗುತ್ತಾ “ನಾನಾಗಿದ್ದರೆ ಖಂಡಿತವಾಗಿಯೂ ಜಾಣ್ಮೆಯ ಬ್ಯಾಗ್ ಅನ್ನು ಆರಿಸಿಕೊಳ್ಳುತ್ತಿದ್ದೆ…. ನಿನ್ನ ಹಾಗೆ ಹಣಕ್ಕೆ ಬಾಯ್ಬಿಡುತ್ತಿರಲಿಲ್ಲ ಎಂದು ಹೆಮ್ಮೆಯಿಂದ ಹೇಳಿದರು.  ಪೀಟರ್ಸ್ ನ ಕುಹಕವು ಗಾಂಧಿಗೆ ಅರ್ಥವಾಯಿತು. ಒಂದು ಕ್ಷಣವೂ ತಡ ಮಾಡದೆ ಅವರು ಪೀಟರ್ಸ್ ಗೆ” ಹೌದು ಸರ್… ಯಾರ್ಯಾರಿಗೆ ಯಾವುದರ ಅವಶ್ಯಕತೆ ಇರುತ್ತದೆಯೋ ಅದನ್ನು ಅವರು ಆರಿಸಿಕೊಳ್ಳುತ್ತಾರೆ. ಈಗ ನೋಡಿ! ನನಗೆ ಹಣದ ಅವಶ್ಯಕತೆ ಇದೆ ಆದ್ದರಿಂದ ನಾನು ಹಣವನ್ನು ಆರಿಸಿಕೊಳ್ಳುತ್ತೇನೆ  ಮತ್ತು ನಿಮಗೆ ಜಾಣ್ಮೆಯ ಅವಶ್ಯಕತೆ ಇದೆ ಎಂದು ತೋರುತ್ತದೆ,ಆದ್ದರಿಂದ ನೀವು ಜಾಣ್ಮೆಯನ್ನು ಆರಿಸಿಕೊಳ್ಳಲು ಇಚ್ಚಿಸುತ್ತೀರಿ  ಎಂದು ಮರುತ್ತರ ನೀಡಿದರು.ಮೊದಲೇ ಕೆಂಪಗಿನ ಬಣ್ಣವನ್ನು ಹೊಂದಿದ ಮಿಸ್ಟರ್ ಪೀಟರ್ ಕ್ರೋಧದಿಂದ ಮತ್ತಷ್ಟು ಕೆಂಪಗಾದರೂ ಕೂಡ ಗಾಂಧೀಜಿಯವರನ್ನು ಮಾತಿನಲ್ಲಿ ಸೋಲಿಸಲಾಗುವುದಿಲ್ಲ ಎಂದು ಅರ್ಥ ಮಾಡಿಕೊಂಡರು…. ಅಲ್ಲದೆ ಮುಂದೆಂದೂ ಗಾಂಧೀಜಿಯವರನ್ನು ವಿನಾಕಾರಣ ಕೆಣಕುವ ಸಾಹಸಕ್ಕೆ ಕೈ ಹಾಕಲಿಲ್ಲ.  ನೋಡಿದಿರಾ ಸ್ನೇಹಿತರೆ? ನಮ್ಮ ಬದುಕಿನಲ್ಲಿಯೂ ನಾವು ಇಂತಹ ಸಾಕಷ್ಟು ಜನರನ್ನು ನೋಡುತ್ತೇವೆ. ತಮ್ಮ ಜಾಣ್ಮೆಯನ್ನು, ಮೇಲರಿಮೆಯನ್ನು, ಶ್ರೀಮಂತಿಕೆಯನ್ನು ತೋರಿಸುವ ನಿಟ್ಟಿನಲ್ಲಿ ಉಳಿದವರನ್ನು ಕೀಳಾಗಿ ಕಾಣುವ ಜನ ನಮ್ಮಲ್ಲಿಯೂ ಇದ್ದಾರೆ. ಅವರು ಜಾಣರಿರಬಹುದು, ಶ್ರೀಮಂತರಿರಬಹುದು, ಮೇಲರಿಮೆ ಉಳ್ಳವರೂ ಇರಬಹುದು… ಆದರೆ ಬೇರೊಬ್ಬರನ್ನು ಅವಮಾನಿಸುವ, ಕಡೆಗಣಿಸುವ ಹಕ್ಕು ಅವರಿಗೆ ಇಲ್ಲ.ಸ್ವಾಭಿಮಾನಿಯಾದ ಯಾವುದೇ ವ್ಯಕ್ತಿಯು ಬೇರೆಯವರು ತನ್ನನ್ನು ಕಡೆಗಣಿಸಲು ಅಣಕಿಸಲು, ಅವಮಾನಿಸಲು ಅವಕಾಶ ಮಾಡಿಕೊಡುವುದಿಲ್ಲ. ಅಂತಹ ಸಮಯದಲ್ಲಿ ಬೇರೆಯವರು ತಮ್ಮನ್ನು  ಹೀಗಳೆದರೆ ಅವರು ತಕ್ಕ ಪ್ರತ್ಯುತ್ತರವನ್ನು ನೀಡುತ್ತಾರೆ ಎಂಬುದು ಗಾಂಧೀಜಿಯವರ ಮೇಲಿನ ಕಥೆಯಿಂದ ನಮಗೆ ಅರಿವಾಗುತ್ತದೆ.  ನಮ್ಮ ಬದುಕಿನಲ್ಲಿಯೂ ಇಂತಹ ಪ್ರಸಂಗಗಳು ಆಗಿರುತ್ತವೆ. ಎಷ್ಟೋ ಬಾರಿ ನಮಗಿಂತ ಹಿರಿಯರು ಎಂದು ನಾವಂದುಕೊಂಡವರು ಮತ್ತು ನಾವು ಗೌರವಿಸುವ ವ್ಯಕ್ತಿಗಳು ನಮ್ಮನ್ನು ಹೀಗೆಳೆದಾಗಲೂ ಕೂಡ ನಾವು ನಮ್ಮ ಸ್ವಾಭಿಮಾನವನ್ನು ಬದಿಗೊತ್ತಿ ಅವರು ಮಾಡುವ ಅವಮಾನವನ್ನು ಸಹಿಸಿಕೊಳ್ಳುತ್ತೇವೆ… ಇದಕ್ಕೆ ಕಾರಣ ಅವರ ಮೇಲರಿಮೆಯಂತೂ ಖಂಡಿತ ಅಲ್ಲ. ಬದಲಾಗಿ ಅವರ ವಯೋ ಸಹಜ ಹಿರಿಮೆಯ ಕಾರಣ ನಾವು ಅವರನ್ನು ಅವರ ಹೀಗಳಿಕೆಗಳನ್ನು ಸುಮ್ಮನೆ ಸಹಿಸಿಕೊಳ್ಳುತ್ತೇವೆ…. ನಾವು ಸುಮ್ಮನೆ ಸಹಿಸಿಕೊಳ್ಳುವುದು ಅವರು ನಮ್ಮ ಮೇಲೆ ಪ್ರಭುತ್ವವನ್ನು ಸಾಧಿಸಿದ್ದಾರೆ ಎಂದರ್ಥವಲ್ಲ ಎಂಬುದನ್ನು ಅರಿತು ಅವರು ತಮ್ಮ ತಪ್ಪನ್ನು ತಿದ್ದಿಕೊಂಡರೆ ಸರಿ ಇಲ್ಲವಾದರೆ ಖಂಡಿತವಾಗಿಯೂ ತಮ್ಮ ಗೌರವವನ್ನು ತಾವೇ ಕಳೆದುಕೊಳ್ಳುತ್ತಾರೆ. ನಿಜವಲ್ಲವೇ ಸ್ನೇಹಿತರೆ? ವೀಣಾ ಹೇಮಂತ್ ಗೌಡ ಪಾಟೀಲ್ 

“ಗಾಂಧೀಜಿ ಮತ್ತು ಆತ್ಮ ಗೌರವದ ಪಾಠ”ವೀಣಾ ಹೇಮಂತ್ ಗೌಡ ಪಾಟೀಲ್  Read Post »

ಕಾವ್ಯಯಾನ

ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಸ್ನೇಹ”

ಕಾವ್ಯ ಸಂಗಾತಿ ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಸ್ನೇಹ” ಸ್ನೇಹ ಜೊತೆಯ ಹೆಜ್ಜೆಯಷ್ಟೇಯಲ್ಲ,ಜೊತೆಯಿಲ್ಲದ ಕ್ಷಣದಲೂ ಜೊತೆಗಿರುವ ಭಾವ;ಮೌನದ ತುಟಿಯಂಚಲಿ ಮಾತು ಅರಳಿಮನದ ಮಿಡಿತವನು ಓದುವ ಜೀವ. ಇದು ಕೈಹಿಡಿದ ನೆರಳಷ್ಟೇ ಅಲ್ಲಾ,ಕತ್ತಲ ಹಾದಿಯ ಹಣತೆಯ ಬೆಳಕು;ಬಿದ್ದ ಮೇಲೆ ಎತ್ತುವ ಕೈಯೆತ್ತದದುಜಾರುವ ಮುನ್ನವೇ ಚಾಚುವ ಅಭಯ ಹಸ್ತ. ಕಾಲದೊಳಗೆ ಬತ್ತಿದ ಹೊಳೆಯ ದಡದಂತೆ,ಮನದ ನದಿಯ ಒರತೆ ಬತ್ತದಿರೆ ನೈಜದಿಕ್ಕುಗಳೇ ಹೊರಳಿ ಸರಿದರೂ ದೂರಸದಾ ಜೀವಂತ ನೆನಪಿನ ರಹದಾರಿ ನಗುವಿನ ಹೊತ್ತಿಗೆ ನೆರಳುಗಳು ನೂರು,ಕಣ್ಣೀರ ಹೊತ್ತಿಗೆ ಕರೆವ ಎದೆಯದನಿಜಗವೇ ಬೆನ್ನು ತಿರುಗಿದ ಹೊತ್ತಲೂ“ನಾನಿದ್ದೇನೆ ಎನುವೊಂದು ಅಭಯ. ಇದು ಬಂಧನವಿಲ್ಲ, ಬೆಸೆಯುವ ನಂಟು,ಸ್ವಾರ್ಥದ ನೆರಳಿಲ್ಲ, ಹೃದಯದ ಹಂಚಿಕೆ;ಪಡೆದಷ್ಟಕ್ಕಿಂತ ಕೊಟ್ಟಾಗಲೇ ಪಾವನ—ಜೀವದ ದಾರಿಯಲಿ ಅದೊಂದು ಬೆಳಕು. ಜೀವಪರರಲಿನ ಜೀವ ಸೆಳೆತವೂಮಹಾಮೌಲ್ಯದ ಮಾಣಿಕ್ಯವೂ ಸ್ನೇಹನಿಂತರೂ ಉಸಿರು ನೆನಪಾಗಿ ಮಿಡಿಯುವ,ಜೀವದ ಪುಟದಲಿ ಅಳಿಯದ ಅಕ್ಷರ ಸ್ಹ – ವನಜಾಕ್ಷಿ ಬೆಟ್ಟದಾಲೂರು

ವನಜಾಕ್ಷಿ ಬೆಟ್ಟದಾಲೂರು ಅವರ ಕವಿತೆ “ಸ್ನೇಹ” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ದಿಟ್ಟ ಗಣಾಚಾರಿ ಶರಣೆ ಅಮುಗೆ ರಾಯಮ್ಮ ಅಮುಗೆ ರಾಯಮ್ಮ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಜಿಲ್ಲೆಯ ಪುಳಜೆ ಊರಿನವಳು, ನೇಕಾರ ಕುಲದವಳು, ಅಮುಗೆ ದೇವಯ್ಯನ ಧರ್ಮಪತ್ನಿ. ಇವಳ ಮೊದಲ ಹೆಸರು ವರದಾನಿಯಮ್ಮ. ಶರಣೆ ಅಕ್ಕಮ್ಮಳಂತೆ ಈಕೆಯೂ ಆಚಾರ ಶೀಲ ವ್ರತ ನೇಮ ಶೀಲ ಮತ್ತು ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ.  ಒಬ್ಬ ದಿಟ್ಟ ಹೆಣ್ಣು ಮಗಳು ಗಣಾಚಾರಿ ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ. • ಪತಿ: ಶಿವಶರಣರಾದ ಅಮುಗೆ ದೇವಯ್ಯ. • ಕಾಯಕ:  ಇವರ ಕುಟುಂಬವು ನೆಯ್ಗೆಯ (ನೇಕಾರ) ಕಾಯಕದಲ್ಲಿ ತೊಡಗಿತ್ತು. • ಜೀವನ : ಬಸವಣ್ಣನವರ ಕಾಯಕ ದಾಸೋಹ ಮತ್ತು ಸಮ ಸಮಾಜದ ಪರಿಕಲ್ಪನೆಯ ಪ್ರಭಾವಕ್ಕೆ ಒಳಗಾಗಿ  ಪತಿಯೊಂದಿಗೆ ಕಲ್ಯಾಣಕ್ಕೆ ತೆರಳಿ, ಅಲ್ಲಿನ ಕ್ರಾಂತಿಯ ನಂತರ ಪುಳುಜೆಗೆ (ಪುಳಜೆ) ಬಂದು ಅಲ್ಲಿಯೇ ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ. ವಚನ ಸಾಹಿತ್ಯಕ್ಕೆ ಕೊಡುಗೆ • ವಚನಗಳ ಸಂಖ್ಯೆ: ಇವರ ಸುಮಾರು ೧೧೬ ವಚನಗಳು ಲಭ್ಯವಾಗಿವೆ.ಅಕ್ಕ ಮಹಾದೇವಿ ಅಕ್ಕಮ್ಮ ನೀಲಮ್ಮರ ನಂತರ ಅತಿ ಹೆಚ್ಚು ವಚನಗಳನ್ನು ಬರೆದ ಶರಣೆಯರಲ್ಲಿ ಇವರೂ ಒಬ್ಬರು. • ವಚನಾಂಕಿತ: ಇವರ ವಚನಗಳ ಅಂಕಿತನಾಮ “ಅಮುಗೇಶ್ವರಲಿಂಗ” ಅಥವಾ “ಮಹಾಲಿಂಗ ಅಮುಗೇಶ್ವರಲಿಂಗ”. • ವಚನಗಳ ಶೈಲಿ: ರಾಯಮ್ಮನವರ ವಚನಗಳಲ್ಲಿ ಗಾಢವಾದ ಲಿಂಗನಿಷ್ಠೆ, ಆತ್ಮನಿರೀಕ್ಷೆ, ಕೆಚ್ಚು ಮತ್ತು ಧೈರ್ಯ ಎದ್ದು ಕಾಣುತ್ತವೆ. ಕೇವಲ ಬಾಹ್ಯ ಆಚಾರಗಳನ್ನು ಪಾಲಿಸುತ್ತಾ ಅಧರ್ಮವಾಗಿ ನಡೆಯುವವರನ್ನು, ಕಾಷಾಯ ವಸ್ತ್ರ ತೊಟ್ಟು ಕಾಮವಿಕಾರಗಳಲ್ಲಿ ಮುಳುಗುವ ಕಪಟ ವೇಷಧಾರಿಗಳನ್ನು ತಮ್ಮ ವಚನಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ. ಅಮುಗೆದೇವಯ್ಯ ‘ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ಕೆಡಿಸುವರಾರನೂ ಕಾಣೆನಯ್ಯಾ ಆದ್ಯರ-ವೇದ್ಯರ ವಚನಗಳಿಂದ ಅರಿದೆವೆಂಬುವರು ಅರಿಯಲಾರರು ನೋಡಾ! ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು ಅಮುಗೇಶ್ವರಲಿಂಗವ ನಾನೇ ಅರಿಯಬೇಕು’. ಇನ್ನೊಂದು ವಚನವನ್ನು ನೋಡೋಣ  ಕಾಗೆಯ ಮರಿಯು ಕೋಗಿಲೆಯಾಗಬಲ್ಲುದೆ ? ಆಡಿನ ಮರಿಯು ಆನೆಯಾಗಬಲ್ಲುದೆ ? ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ ? ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ. ವಚನ ವಿಶ್ಲೇಷಣೆ : ಈ ವಚನದಲ್ಲಿ ಅಮುಗೆ ರಾಯಮ್ಮನವರು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ, ವೇಷಭೂಷಣಗಳ ಮೂಲಕ ಜನರನ್ನು ವಂಚಿಸುವ ಡಾಂಭಿಕ ಭಕ್ತರನ್ನು ಅತ್ಯಂತ ಕಠೋರವಾದ ಉಪಮೆಗಳ ಮೂಲಕ ಟೀಕಿಸಿದ್ದಾರೆ. ೧. ಬಾಹ್ಯ ಬದಲಾವಣೆ ಆಂತರಿಕ ಸತ್ಯವಾಗಲಾರದು (ಮೊದಲ ಮೂರು ಸಾಲುಗಳು): • “ಕಾಗೆಯ ಮರಿಯು ಕೋಗಿಲೆಯಾಗಬಲ್ಲುದೆ?”: ಕಾಗೆ ಮತ್ತು ಕೋಗಿಲೆ ಎರಡೂ ಕಪ್ಪಗಿದ್ದರೂ, ಕಾಗೆಯು ಕೋಗಿಲೆಯಂತೆ ಮಧುರವಾಗಿ ಹಾಡಲು ಸಾಧ್ಯವಿಲ್ಲ. • “ಆಡಿನ ಮರಿಯು ಆನೆಯಾಗಬಲ್ಲುದೆ?”: ಸಣ್ಣದಾದ ಆಡಿನ ಮರಿ ಎಂದಿಗೂ ಆನೆಯಷ್ಟು ಭವ್ಯ ಹಾಗೂ ಬಲಿಷ್ಠವಾಗಲು ಸಾಧ್ಯವಿಲ್ಲ. • “ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ?”: ಸೀಳನಾಯಿಯು ಸಿಂಹದ ಚರ್ಮ ಹೊದ್ದರೂ ಸಿಂಹದ ಗಾಂಭೀರ್ಯ ಮತ್ತು ಶೌರ್ಯವನ್ನು ಹೊಂದಲು ಸಾಧ್ಯವಿಲ್ಲ. • ಈ ಮೂರು ನಿಸರ್ಗದ ಉದಾಹರಣೆಗಳ ಮೂಲಕ ರಾಯಮ್ಮನವರು ಹೇಳುವುದೇನೆಂದರೆ, ಕೇವಲ ವೇಷ ಬದಲಾಯಿಸಿದ ತಕ್ಷಣ ಒಬ್ಬ ವ್ಯಕ್ತಿಯ ಮೂಲ ಗುಣ ಅಥವಾ ಯೋಗ್ಯತೆ ಬದಲಾಗುವುದಿಲ್ಲ. ೨. ಡಾಂಭಿಕತೆಯ ಖಂಡನೆ  • “ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ”: ನಿಜವಾದ ಭಕ್ತನಿಗೆ ಮೂರು ಗುಣಗಳು ಮುಖ್ಯ – ಅರಿವು (ಆತ್ಮಜ್ಞಾನ), ಆಚಾರ (ಶುದ್ಧ ನಡೆ), ಮತ್ತು ಸಮ್ಯಜ್ಞಾನ (ಸದಸದ್ವಿವೇಕ ಬುದ್ಧಿ). ಆದರೆ, ಇವು ಯಾವುದನ್ನೂ ಅರಿಯದೆ ಕೇವಲ ಹಣೆಗೆ ವಿಭೂತಿ ಧರಿಸಿ, ಕೊರಳಿಗೆ ಲಿಂಗ ಅಥವಾ ರುದ್ರಾಕ್ಷಿ ನೇತುಹಾಕಿಕೊಂಡು ತಾನು ದೊಡ್ಡ ಭಕ್ತನೆಂದು “ನಾಮ” (ವೇಷ) ಹೊತ್ತು ತಿರುಗುವವರನ್ನು ರಾಯಮ್ಮ ಇಲ್ಲಿ ಪ್ರಶ್ನಿಸುತ್ತಾರೆ. ೩. ಕಟು ನಿಷ್ಠುರತೆ  • “ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ”: ಅಂತರಂಗ ಶುದ್ಧಿ ಇಲ್ಲದೆ ಕೇವಲ ಬಹಿರಂಗದ ಪ್ರದರ್ಶನ ಮಾಡುವ ಅಂತಹ ಮೂರ್ಖರ (ಗಾವಿಲರ) ಮುಖವನ್ನು ನೋಡುವುದು ಕೂಡ ಪಾಪ ಎಂದು ರಾಯಮ್ಮನವರು ಅತ್ಯಂತ ನಿಷ್ಠುರತೆಯಿಂದ ಹೇಳುತ್ತಾರೆ. ಅಂತಹವರ ಭಕ್ತಿಯನ್ನು ತಮ್ಮ ಆರಾಧ್ಯದೈವ “ಅಮುಗೇಶ್ವರ” ಎಂದಿಗೂ ಒಪ್ಪಲಾರ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಈ ವಚನದ ಮೂಲಕ ಅಮುಗೆ ರಾಯಮ್ಮನವರು “ನುಡಿದಂತೆ ನಡೆ, ನಡೆದಂತೆ ನುಡಿ” ಎಂಬ ಶರಣ ತತ್ವವನ್ನು ಎತ್ತಿಹಿಡಿಯುತ್ತಾರೆ. ಭಕ್ತಿ ಎಂಬುದು ಪ್ರದರ್ಶನದ ವಸ್ತುವಲ್ಲ; ಅದು ಅಂತರಂಗದ ಶುದ್ಧಿ ಮತ್ತು ಜ್ಞಾನದ ಸಂಕೇತವಾಗಿರಬೇಕು ಎಂಬ ವೈಚಾರಿಕ ಸಂದೇಶವನ್ನು ಈ ವಚನ ನಮಗೆ ನೀಡುತ್ತದೆ. ಆಯ್ದಕ್ಕಿ ಲಕ್ಕಮ್ಮನಂತೆ ದಿಟ್ಟ ವಚನಕಾರ್ತೆ ತನ್ನ ಗಂಡನೊಂದಿದೆ ಕಾಯಕ ದಾಸೋಹ ಮಾಡಿ ಕೊನೆಗೆ ನಡೆದ ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಸಂರಕ್ಷಣೆಗೆ ನಿಂತು ಸಿದ್ಧರಾಮ ಚೆನ್ನ ಬಸವಣ್ಣ ಅಕ್ಕನಾಗಮ್ಮನವರ ಜೊತೆಗೂಡಿ ವಚನಗಳ ಕಟ್ಟನ್ನು ಹೊತ್ತುಕೊಂಡು  ಸೋಮಿದೇವನ ಸೈನಿಕರನ್ನು ಎದುರಿಸುತ್ತಾ ಸೊಲ್ಲಾಪುರದ ಪುಳಜೆಗೆ ಬಂದು ಅಲ್ಲಿಯೇ ನೆಲೆಸಿ ಕೊನೆಗೆ ಅಲ್ಲಿಯೇ ಐಕ್ಯಳಾದ ಸಾವಿಲ್ಲದ ಮಹಾಶರಣೆ ಅಮುಗೆ ರಾಯಮ್ಮಳ ಜೀವನ ಸಂಘರ್ಷ ನಿಷ್ಠುರತೆ ನಮಗೆ ಇಂದಿಗೂ ಮಾದರಿಯಾಗಿವೆ. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಜ್ಯೋತಿ ಡಿ ಬೊಮ್ಮಾ ಮನದ ಮಾತುಗಳು ನಾ ನೀನೆಂಬ ಅಹಂಕಾರ ತಲೆದೂರಿದಲ್ಲಿ… ನಾ ನೀನೆಂಬ ಅಹಂಕಾರ ತಲೆದೂರಿದಲ್ಲಿ… ಎನ್ಮಾಡಲತಿರೀ ಅಕ್ಕೋರೇ ಅಂತ ಬಾಜು ಮನಿ ಅಕ್ಕೋರು ಬಾಗಿಲು ಬಡಿದರು. ಬರ್ರಿ ಒಳಗ ಅಂದೆ , ಇಲ್ರಿ ..ಬಾಳ ಕೆಲಸದ.ನಾಳಿಗಿ ನಮ್ಮನಿಗಿ ಅಪ್ಪೋರು ಹೊಂಟಾರ , ಪಾದಪೂಜಾ ಅದ.ಬರ್ರಿ.ಊಟ ಅಲ್ಲೆ ಮಾಡಬೇಕು ನೋಡ್ರಿ ಅಂದು ಗಡಿಬಿಡಿದಾಗ ಹೋದ್ರು. ಈಗ ಕೆಲ ದಿವ್ಸದಿಂದ ನನ್ನ ಪೋನ್ ದಾಗ ಬರಿ ಅಪ್ಪಗೋಳ  ( ಮಠಾಧಿಶರ ) ಮಾರಿನೆ ಕಾಣಲತದ.ಯಾಕಂದ್ರ ಮೊನ್ನೆ ಕಲ್ಬುರ್ಗಿ ದಾಗ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಿದ್ರು.ಭಾಳ ಜನಗಳನ್ನ ಸೇರಿಸಿದ್ರು.ಅದರ ಪ್ರಮುಖ ಸ್ವಾಮಿಯೊಬ್ರು ಕಮ್ಯೂನಿಸ್ಟ್‌ ವಿಚಾರಧಾರೆಯುಳ್ಳವ್ರಿಗೆ ಬೈದಿದ್ದೆ ಬೈದದ್ದು. ಹಿಂದೂಗಳಂದ್ರ ಅವರ ಮಾತಿಗಿ ವಿರುದ್ದ ಆಗಿದ್ದವ್ರಿಗಿ  ಬೈಯೋದು ಅಂತ ನನಗ ಆ ಸಮಾವೇಶದಿಂದ ತಿಳಿತು.ವಿರುದ್ದ ಅಂದ್ರ ಬಸವಾದಿ ಶರಣರು ಸನಾತನ ಹಿಂದೂ ಪದ್ದತಿಗಳಾದ ಹೋಮ , ಹವನ , ಗುಡಿ ಕಟ್ಟೋದು , ದೇವರ‌ಮೂರ್ತಿ ಮೆರೆಸಿ ನೀರಾಗ ಬಿಸಾಡೋದು ಇನ್ನೂ ಅನೇಕ ಆಚರಣೆಗಳನ್ನ ನಿರಾಕರಿಸಿದ್ರೂ.ಸಮಾಜದಾಗಿನ ಮೂಢ ನಂಬಿಕೆ ಹೋಗಲಾಡಿಸುವದಕ್ಕ ಪ್ರಯತ್ನಿಸಿದ್ರು.ಅದಕ್ಕೆ ಈ ಹೋಮ ಹವನ ಪೂಜಾ ಗುಡಿ ಇಂತವಕ್ಕೆಲ್ಲ ನಿಮ್ಮ ಸಮಯ ವಿನಿಯೋಗಿಸಬ್ಯಾಡ್ರಿ , ಅದೇ ಸಮಯ ದುಡಿಲಕ್ಕ ಮಿಸಲಾಗಿಡ್ರಿ , ದುಡಿರಿ , ಉಣ್ರಿ , ಬದುಕ್ರಿ ಅಂತ ಸರಳವಾಗಿ ಹೇಳಿದ್ರು. ಆದ್ರ ಇವೆಲ್ಲ ನಮ್ಮ ದೇಶದ ಸಂಪ್ರದಾಯ , ಸಂಸ್ಕೃತಿ  ಅಂತ ಮುಂದುವರೆಸಿಕೊಂಡು ಬಂದವ್ರು‌ ,  ಶರಣರ ಆಶಯಗಳಿಗಿ ವಿರುಧ್ದವಾದ ಧೋರಣೆ ಹೊಂದಿದವ್ರು. ಪ್ರಶ್ನಿಸಿದ್ರ ,   ಬಸವಾದಿ ಶರಣರು ಎಲ್ಲರಿಗೂ ಬೆರಕಾದವ್ರು . ಬರೀ ನೀವೇ ಅವರ ಪೆಟೆಂಟ್ ತಗೊಂಡಿರೇನ್ , ಅಂತ ಕೇಳತಾರ ಒಬ್ಬ ಕಟ್ಟಾ ಹಿಂದೂ ಸ್ವಾಮಿ ಗಳು. ಹೌದು ಬಸವಾದಿ ಶರಣರು ಸಮಾಜ ಸುಧಾರಕರು. ಎಲ್ಲರಿಗೂ ಆದರ್ಶ ಪ್ರಾಯರು.ಅವರ ವಿಚಾರಗಳನ್ನು ಪಾಲಿಸದ ನೀವು ಯಾಕ ಅವರ ಪೆಟೆಂಟ್ ತಗೋತಿರಿ.ನಿಮ್ಮ ವಿಚಾರಧಾರೆ ಬೆಂಬಲಿಸೋ ಇನ್ನೂ ಭಾಳ ಜನ ಸಮಾಜ ಸುಧಾರಕರಿದ್ದಾರ.ಅವರ ಪೆಟೆಂಟ್ ನೀವೇ ತಗೋರಿ ನಮಗ ಬ್ಯಾಡ. ಮೂಢ ನಂಬಿಕೆ ಅಂದರ , ದಬ್ಬಾಳಿಕೆಗೆ ಪ್ರಶ್ನಿಸಿದ್ರ , ಸಮಾನತೆ ಬೇಕು ಅಂದ್ರ ಕಮ್ಯೂನಿಸ್ಟ್‌ ಅಂತ್ರಿ. ಎಲ್ಲಾನೂ ಸುಲಭವಾಗಿ ಸಿಕ್ರ ಯಾರು ಯಾಕ ಕಮ್ಯೂನಿಸ್ಟ್‌ ಆಗತಾರ. ಹೋರಾಡಿದ್ರ ಮಾತ್ರ ಸಿಗತದ ಅಂದ್ರ ಕಮ್ಯೂನಿಸ್ಟ್‌ ಆಗ್ಲೇಬೇಕಾಗತದ. ನಾವೆಲ್ಲರೂ ಹಿಂದೂ ಒಂದು ಬಂಧು ಅಂತ ಹೆಳೊದು ಚಲೋ ಅನಿಸ್ತದ ನಮಗೂ . ಹಿಂದೂ ಅಂದ್ರ ಬರಿ  ಬ್ಯಾರೆ ಧರ್ಮದವ್ರಿಗಿ ಬೈಯೋದು , ಪಾಕಿಸ್ತಾನಕ್ಕೆ ಹೋಗಿ ಅನ್ನೊದು , ನಮ್ಮ ದೇಶದಾಗ ಬರೀ ಗುಡಿಗಳು ಮಾತ್ರ ಇರಬೇಕು ಅನ್ನೋದು ಹಿಂದುತ್ವಾನ. ಮತ್ತೊಂದು ಧರ್ಮದ ಬಗ್ಗೆ ಸಹಿಷ್ಣುತೆ ಇರದ ಯಾವ ಧರ್ಮವೂ ವ್ಯರ್ಥ. ನೀವು ಹೇಳಿದಂಗ ಎಲ್ಲರ ಆಚರಣೆ ಗೌರವಿಸೋಣ.ಪೂಜಾ ಮಾಡ್ಲಿ , ಗುಡಿಗೆ ಹೋಗ್ಲಿ , ಮಠಾಧಿಶರ ಕಾಲು ತೊಳ್ದು ನೀರು ಕುಡಿಲಿ..ಅವರವರ ಭಕುತಿಗೆ ಬಿಡೋಣ.ಆದ್ರ ಇವೆಲ್ಲ ಮಾಡದಿದ್ರ ಅವರನ್ನು ಹಿಂದುತ್ವದಿಂದ ದೂರ ಇಡಲು ನೀವು ಯಾರು..! ಒಂದು ವೇಳೆ ಈ ಎಲ್ಲಾ ಅಡಚಣೆಗಳು ಒಪ್ಪಿಕೊಳ್ಳೊಣ , ಇದರಿಂದ ಸಮಾಜಕ್ಕ ಆಗುವ ಉಪಯೋಗ ಎನು ಹೇಳ್ರಿ. ಬಾಜು ಮನಿ ಅಕ್ಕೋರು ಸ್ವಾಮಿಗಳಿಗಿ ಕರದು ಪಾದಪೂಜಿ ಮಾಡಿ , ತುಲಾಭಾರ ಮಾಡಿದ್ರು.ಇದರಿಂದ ಅವ್ರಿಗಿ ಮನಸ್ಸಿಗಿ ನೆಮ್ಮದಿ ಆಯ್ತು.ಸಮಾಜದಾ್ಗ ಅವ್ರ ಗೌರವ ಹೆಚ್ಚಾಯಿತ.ಮತ್ತ ಕೆಲ ಜನ್ರಿಗಿ ನಾವೂ ಗುರುಗಳಿಗಿ ನಮ್ಮ ಮನಿಗಿ ಕರದು ಪಾದಪೂಜಾ ಮಾಡಬೇಕು ಅನಿಸ್ತು.ಅಪ್ಪೋರ ಕೃಪೆಗೆ ಪಾತ್ರ ಆದೇವು ಅಂತ ಅಭಿಮಾನ ಆಯ್ತು.ಇನ್ನೂ ಎನೇನೋ ಆಯ್ತು. ಆದ್ರ ಇದರಿಂದ ಯಾರಿಗಿ ಏನು ಪ್ರಯೋಜನ ಆಯ್ತು.ಸಮಾಜದಲ್ಲಿ ಏನು ಸುಧಾರಣೆ ಆಯ್ತು.ಮುಂದಿನ ಮಕ್ಕಳಿಗಿ ಎನು ಸಂದೇಶ ಹೋಯ್ತು.    ಹಿಂದೂಗಳು ಸನಾತನ ಧರ್ಮದ ಆಚರಣೆ ಮಾಡಬೇಕು ಅಂತ ಒತ್ತಾಯ ಮಾಡುವವರಿಗೆ ಒಂದು ಪ್ರಶ್ನೆ  .ಇದರಿಂದ ಹೊಟ್ಟೆ ತುಂಬತದೇನು. ಯಾರಿಗಾದ್ರೂ ಉದ್ಯೋಗ ಸಿಗಬಹುದಾ.ಸಮಾಜದ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದಾ.. ಈಗ ಎಲ್ಲರ ಆರ್ಥಿಕ ಪರಿಸ್ಥಿತಿ ಉತ್ತಮ ಆಗ್ಯಾದ.ಯಾರೂ ಪೂಜಾ ಪಾಠಗಳಿಗಿ ಖರ್ಚ ಮಾಡ್ಲಿಕ್ಕ ಲೆಕ್ಕಹಾಕತಿಲ್ಲ ಬಿಡ್ರಿ.ಈಗ ಎಲ್ಲಾರ ಮನ್ಯಾಗೂ  ದೇವ್ರಿಗೆ ಒಂದು ಪ್ರತ್ಯೇಕ ರೂಂ ಇರತದ.ಅಲ್ಲಿ ದೇವರ ಅಲಂಕಾರ , ಬೆಳ್ಳಿ ಬಂಗಾರದ ಮೂರ್ತಿಗಳು ಭಕ್ತಿಯ ವಿವಿಧ ಭಾವಗಳೆಲ್ಲ ಅಲ್ಲಿಂದ ಅವರವರ ಪೋನ್ ಗಳ ಸ್ಟ್ಯಾಟಸ್ ಗಳ ಮೂಲಕ ಎಲ್ಲರಿಗೂ ತಲುಪ್ತಾವ. ಭಕ್ತಿ ಎಂಬುದು ತೊರುಂಬುವ ಲಾಭ ಎಂಬುದು ಎಷ್ಟು ನಿಜಾನೋ , ಇವೆಲ್ಲ ಮಾಡ್ಲಾರದವ್ರಿಗಿ ಸಮಾಜ ಎಷ್ಟು ಪ್ರತ್ಯಕವಾಗಿ ನೋಡತದ ಅನ್ನೊದು ಅಷ್ಟೆ ನಿಜ. ಈಗ ಹಿಂದೂ ಸಮಾಜದ ಆಚರಣೆಗಳನ್ನು ಆಚರಿಸೊದು ಬಿಡೊದು ಅವರವರ ಇಷ್ಟಕ್ಕೆ ಬಿಡಬೇಕು.ಆದ್ರ ಈ ಎಲ್ಲಾ ಆಚರಣೆ ಮಾಡ್ಲೇಬೇಕು ಅನ್ನುವವರು ಬಸವಾದಿ ಶರಣರನ್ನು ಈ ಅಸಚರಣೆಗಳ ಭಾಗ ಮಾಡದಿರುವದು ಒಳ್ಳೆದು.ಯಾವ ಆಚರಣೆಗಳನ್ನು ಬಸವಾದಿ ಶರಣರು ಖಂಡಿಸಿದರೋ ಅವೆಲ್ಲ ಈಗ ಹಿಂದೂ ಆಚರಣೆಗಳು , ನಮ್ಮ ಸಂಪ್ರದಾಯ , ನಮ ಸಂಸ್ಕೃತಿ ಎಂದು ಹೇಳುವವರು , ನಮ್ಮ ದೇಶದ ಬಹುತ್ವದ ಸಂಸ್ಕೃತಿಗಳ ನ್ನು ಕೂಡ ಗೌರವಿಸಬೇಕು. ಈಗ ಹಿಂದೆಂದಿಗಿಂತಲೂ ಕಾವಿಧಾರಿಗಳು ಹೆಚ್ಚಾಗ್ತಿದ್ದಾರ.ಓಟ್ ಬ್ಯಾಂಕ್ ಗಾಗಿ ರಾಜಕಾರಣಿಗಳು ಅವ್ರನ್ನ ಪೋಷಿಸುತ್ತಾರೆ.ಸಮಾಜವನ್ನು ಜಾತಿಭೇಧ ಗಳಿಂದ ಮುಕ್ತ ಮಾಡುವ ಕಾರ್ಯ ಮಾಡ್ಬೇಕಾದ ಮಠಗಳು ಜಾತಿ ಧರ್ಮದ ಕಂದಕಗಳನ್ನು ಇನ್ನೂ ಹೆಚ್ಚು ಮಾಡ್ತಿರೋದು ವಿಪರ್ಯಾಸ. ಜಾತಿಗೊಬ್ಬರ ಮಠಗಳು ಅದಕ್ಕೊಬ್ಬರು ಮಠಾಧಿಶರು ಅವರನ್ನು ಒಲೈಸಿ ತಮ್ಮ ಕಡೆ ಎಳೆದುಕೊಳ್ಳೊ ರಾಜಕಾರಣಿಗಳು , ಇದೆಲ್ಲದರ ನಡುವೆ ಸಾಮಾನ್ಯರ ಸ್ಥಿತಿ ಅತಂತ್ರ. ಮೊನ್ನೆ ಕಲ್ಬುರ್ಗಿ ಯಲ್ಲಿ ನಡೆದ ಹಿಂದೂ ಸಮಾವೇಶದ ಮುಖ್ಯ ಉದ್ದೇಶ ಎನಿತ್ತೊ ಎನೋ‌, ಆದ್ರ ಸ್ಟೇಜ್ ಮ್ಯಾಲಿರೊ ಕಾವಿಧಾರಿಗಳನ್ನು ನೋಡಿ ನಮ್ಮ ದೇಶ ಎಷ್ಟು ಅಭಿವೃದ್ಧಿ ಆಗಲತದ ಅಂತ ಅರ್ಥ ಆಯ್ತು . ಅಲ್ಲಿ ಇರುವ ಯಾರೊಬ್ರು ನಮ್ಮ ದೇಶದ ಕುರಿತಾಗ್ಲಿ , ನಿರುದ್ಯೋಗ ಕುರಿತಾಗ್ಲಿ. ಶಿಕ್ಷಣದ ಕುರಿತಾಗ್ಲಿ , ಮಾತಾಡಿಲ್ಲ.ಮಾತಾಡಿದ್ದೆಲ್ಲ ಬರೀ ಕಮ್ಯೂನಿಸ್ಟ್‌ (ಪ್ರಶ್ನಿಸುವರನ್ನು) ರನ್ನು ಬೈದದ್ದು. ಕಮ್ಯೂನಿಸ್ಟ್ ರು ಸಾಮಾಜ ಒಡಿತಾರಂತ ಹೇಳತಾರ.ಆದ್ರ ಆ ಒಡೆಯುವ ಕೆಲಸ ಮಾಡ್ತಿರೋದು ನೀವು.ಆಚರಣೆಗಳ ಹೆಸರಲ್ಲಿ ಮುಗ್ದ ಜನರ ವ್ಯಕ್ತಿತ್ವ ಕುಂಠಿತ ವಾಗುವಂತೆ ಮಾಡ್ತಿದ್ಷಿರಿ.ನಿಮಗೆ ಹಿಂದೂ ಸಮಾಜದ ಮೇಲೆ ಅಷ್ಟೊಂದು ಅಭಿಮಾನ ಇರುವದೇ ಆದ್ರೆ ಯಾವೊಬ್ಬ ಹಿಂದೂ ಪ್ರಜೆಯು ಬಡವನಾಗಿರಬಾರದು‌, ಅವಿದ್ಯಾವಂತನಾಗಿರಬಾರದು , ನಿರುದ್ಯೋಗಿ ಆಗಿರಬಾರದು . ಕಲಬುರಗಿ ಯಲ್ಲಿ ನಡೆಗ ಹಿಂದೂ ಸಮಾವೇಶದಲ್ಲಿ  ಸ್ವಾಮಿಗಳು ಹೇಳತಿದ್ರು.ಬಸವಾದಿ ಶರಣರು ಕಾಯಕಕ್ಕ ಮಹತ್ವ ಕೊಟ್ಟವ್ರು.  ಕೆಲ ಕಮ್ಯೂನಿಸ್ಟ್‌ ಸ್ವಾಮಿಗಳು ಏನು ಕಾಯಕ ಮಾಡ್ಧ ಬರಿ ಸಮಾಜ ಒಡೆಯೋ ಕೆಲ್ಸ ಮಾಡ್ತಾರ ಅಂತ. ಅದಕ್ಕೆ ನೀವು ಹೊರತಾಗಿಲ್ಲ ಮಹಾಶಯರೆ , ಯಾವ ಮಠಾಧಿಶರು ಕಾಯಕ ಜೀವಿಗಳಲ್ಲ.ಕೆಲ ಮಠಗಳು ವಿದ್ಯಾ ಸಂಸ್ಥೆ ಮೂಲಕ ಜನಪರ ಆಗಿವೆ.ಉಳಿದ ಮಠಗಳು ನಮ್ಮ ದೇಶದ ಓಟ್ ಬ್ಯಾಂಕ್ ಸಲುವಾಗಿ ಇರುವಂಥವು. ನಮ್ಮ ರಾಜ್ಯದ ಮುಖ್ಯ ಮಂತ್ರಿಗಳು ಮೊನ್ನೆ ಒಂದು ಕಾರ್ಯಕ್ರಮ ದಲ್ಲಿ ಮಠಾಧಿಶರ ರಿಗೆ ಎಲ್ಲರ ಮುಂದೆ ಹೆಳಿದ್ರು. ನೀವು ನಮಗಾಗಿ ಸೇವೆ ಮಾಡಿ , ನಮ್ಮ ಕೃಪೆ ಗೆ ಪಾತ್ರರಾಗಿ ಆಗ ನೀವು ಉಳಿತಿರಿ ಬೆಳಿತಿರಿ ಸಂತ. ಇದರಿಂದ ಗೊತ್ತಗತದ ರಾಜಕಾರಣಿಗಳ ಮತ್ತು ಮಠಾಧಿಶರ ಸಂಭಂಧ.ಒಬ್ಬರಿಗಿ ಬಿಟ್ಟು ಇನ್ನೊಬ್ರರಿಲ್ಲ. ಮಂಡೆ ಬೋಳಾಗದೆ ಮನ ಬೋಳಾಗದು ಅಂತ ಹಿಂದಿನವರು ಹೇಳತಿದ್ರು.ಈಗೀಗ ಬಹುತೇಕ ಮಠಾಧಿಶರು ಸರ್ವ ಪರಿತ್ಯಾಗಿ ಅಂತ ಹೇಳಕ್ಕೊಂತ ಎಲ್ಲಾ ಮೋಹದಲ್ಲಿ ಬಂಧಿಸಲ್ಪಟ್ಟವ್ರು. ಚರ್ಚೆಗಳಿಗೆ ಕೊನೆ ಇಲ್ಲ ಬಿಡ್ರಿ.ಎಲ್ಲರೂ ಅವರವರ ವಾದಕ್ಕ ಕಟ್ಟುಬಿದ್ದವ್ರು.ನಮ್ಮ ದೇಶದಾಗ ಎಲ್ಲರಿಗೂ ಅವರವರ ಇಷ್ಟದಂಗ ಬದುಕೋ ಹಕ್ಕು ಅದಾ. ಮತ್ತೊಬ್ಬರ ಬದುಕುವ ರೀತಿ ಪ್ರಶ್ನಿಸುವದರಿಂದ ಏನು ಬದಲಾಗಲ್ಲ.ಉಪದೇಶಗಳು ಈಗ ಯಾರಿಗೂ ಬೇಕಾಗಿಲ್ಲ.ಬೇಕಾಗಿರುವದು ಸಹಾಯ. ನಮ್ಮ ದೇಶದ ಮಠಗಳು ಜನರ ಆರ್ಥಿಕ ಸ್ಥಿತಿ ಸುಧಾರಿಸುವದಕ್ಕ ಪ್ರಯತ್ನ ಮಾಡ್ಲಿ.ಮಠಕ್ಕ ಬಂದ ಅನುದಾನ ಜನರ ಸಹಾಯಕ್ಕ ಬಳಕೆ ಆಗ್ಲಿ. ಗುಡಿಗಳು ಕಟ್ಟುವದರಿಂದ ನಮ್ಮ ದೇಶ ಉದ್ದಾರ ಅಗ್ತದ ಅಂತ ಅವರಿಗೆ  ಅನುಸಿದ್ರ ಅದು ಅವರ ವಿಚಾರ.ಒಪ್ಪುವಂತೆ ಬಲವಂತ ಮಾಡ್ದೆ ಮತ್ತೊಬ್ಬರ ಅಭಿಪ್ರಾಯವನ್ನು ಗೌರವಿಸಬೇಕು. ಬಸವಾದಿ ಶರಣರ ಆಶಯಗಳನ್ನು ಪೂರ್ಣ ಜೀವನದಾಗ ಅಳವಡಿಸಿಕೊಳ್ಳೊದು ಕಷ್ಟ.ಯಾರೂ ಪರಿಪೂರ್ಣ ರಲ್ಲ.ಸಮಾಜದಾಗ ಇರಬೇಕಂದ್ರ ಕೆಲವೊಮ್ಮೆ ನಮ್ಮ ಮನಸ್ಸಿನ ವಿರುದ್ದವಾಗೂ ವರ್ತಿಸಬೇಕಾಗತದ.ಅದಕ್ಕ ಯಾರನ್ನೂ ತೀಕ್ಷವಾಗಿ ನಿಂದಿಸದೆ ಅವರವರ ಇಷ್ಟಕ್ಕ ಬಿಡಬೇಕು.ಆದ್ರ ಸಮಾಜಕ್ಕಾಗಲಿ ಅಥವಾ ವ್ಯಕ್ತಿಗಾಗಲಿ ಯಾವದೆ ವಿಷಯದಿಂದ ನಷ್ಟ ಅಥವಾ ತೊಂದರೆ ಆದ್ರ ಪ್ರಶ್ನಿಸಬೇಕು.  ಮಠಾಧಿಶರು ಗಳ ಬಗ್ಗೆ ನಮ್ಮ ದೇಶದ ಜನರಿಗೆ ನಂಬಿಕೆ ಭಕ್ತಿ ಅದ.ಅದನ್ನು ಉಳಿಸಿಕೊಂಡು ಜನಪರ ಕಾರ್ಯ ಮಾಡಲಿ.ಬರಿ ಪೂಜಾ ಪಾಠಗಳಿಗಿ ಮಾತ್ರ ಬಸವಾದಿ ಶರಣರನ್ನು ಬಳಸಿಕೊಳ್ಳದೆ , ಸಮಾನತೆ , ಪ್ರೀತಿ , ಕರುಣೆ ಮತ್ತು ಇವ ನಮ್ಮ ವ ಎಂಬ ಭಾವಗಳು ಜನರಲ್ಲಿ ಬಿತ್ತುವ ಪ್ರಯತ್ನ ಮಠ ಮಾನ್ಯ ಗಳು ಮಾಡ್ಬೇಕು. ಜ್ಯೋತಿ ಡಿ ಬೊಮ್ಮಾ ಜ್ಯೋತಿ ಡಿ ಬೊಮ್ಮಾ ಅವರು ಕಲಬುರ್ಗಿ ಜಿಲ್ಲೆಯವರು.ಇದುವರೆಗು ನಾಲ್ಕು ಕವನ ಸಂಕಲನಗಳನ್ನು,ಎರಡು ಪ್ರಬಂಧ ಸಂಕನಲಗಳನ್ನು ಪ್ರಕಟಿಸಿದ್ದಾರೆ.ಪ್ರತಿ ತಿಂಗಳ ಒಂದನೇ ತಾರೀಖು ಸಂಗಾತಿಪತ್ರಿಕೆಗಾಗಿ ಅವರ ದೇಸಿ ನುಡಿಕಟ್ಟಿನಲ್ಲಿ ಅಂಕಣಬರಹವನ್ನು ಬರೆಯುತ್ತಿದ್ದಾರೆ.

Read Post »

ಕಾವ್ಯಯಾನ

ಅನನ್ಯ ಎಚ್ ಸುಬ್ರಹ್ಮಣ್ಯ ಅವರ ಕವಿತೆ “ಕಾಣದ ನೆರಳು”

ಕಾವ್ಯ ಸಂಗಾತಿ ಅನನ್ಯ ಎಚ್ ಸುಬ್ರಹ್ಮಣ್ಯ “ಕಾಣದ ನೆರಳು” ಕಣ್ಣಿಗೆ ಕಾಣದ ಸತ್ಯದ ಹಿಂದೆ,ಬೆನ್ನೇರಿ ಬರುವ ಅಗೋಚರ ಚಂದ;ರೂಪವಿಲ್ಲದ ರೂಪಿಗೆ ನಾವಿಲ್ಲಿ ಮಣಿದಿದ್ದೇವೆ,ಇಲ್ಲದ ಅಸ್ತಿತ್ವವ ಜೀವದೊಳಗೆ ತಂದಿದ್ದೇವೆ. ಮುಟ್ಟಲಾಗದ ಆಕಾಶವ ಸ್ಪರ್ಶಿಸಲು ಕೈಚಾಚಿ,ಕತ್ತಲೆಯಲಿ ಕಣ್ಣುಗಳನ್ನು ಬಿಟ್ಟು ಪರಿತಪಿಸಿ;ನಂಬಿಕೆಯೆಂಬ ಕಗ್ಗತ್ತಲ ದಾರಿಯಲಿ ಸಾಗುತ,ಕಾಣದ ದೇವರ ನೆರಳನೆ ಮೈತುಂಬಾ ಹೊತ್ತು ಗಾಳಿಯಂತೆ ಆತ, ಇರುವುದೆಲ್ಲದರಲಿ ವ್ಯಾಪಿಸಿ,ಆದರೆ ಯಾರ ಕಣ್ಣಿಗೂ ಎಂದೂ ಕಾಣದೆ ಮುಚ್ಚಿ;ಸುಂಟರಗಾಳಿಯಲಿ ಸಿಲುಕಿದ ಒಂಟಿ ಮರ ದೇವನೆ?ಅಥವಾ ನಮ್ಮೊಳಗಿನ ಅಂಜಿಕೆಯೆ ಆತನ ನಾಮವೆ? ಸಂಕಟದ ಕಡಲು ಉಕ್ಕಿ ಬಂದಾಗ ಈ ಬದುಕಿನಲಿ,ಯಾರೂ ಇಲ್ಲದ ಏಕಾಂತದ ಆ ಕತ್ತಲು ಗೂಡಿನಲಿ;ಮನಸ್ಸು  ಕೈಮುಗಿದು ಬೇಡುವುದು ಯಾರಿಗೆ?ಕಾಣದೆಯೇ ಆ  ಸ್ಪರ್ಶವಿರುವುದೇಕೆ ಒಳಗೆ? ಕಣ್ಣಿಗೆ ಕಾಣದ್ದೇ ಇಲ್ಲಿ ದೊಡ್ಡ ಸತ್ಯವಾಗಿಹುದು,ಉಸಿರು ಕಣ್ಣಿಗೆ ಕಾಣದು, ಆದರೂ ಜೀವವಿಹುದು; ದೇವರು; ಕಾಣದಿದ್ದರೇನು, ನಂಬಿಕೆಯ ಕಣ್ಣಲಿ,ಅವನಿಲ್ಲದ ಕ್ಷಣವಿಲ್ಲ ಈ ಜಗತ್ತಿನ ಹಾದಿಯಲಿ. ಕಾಣದ ದೇವರ ನೆರಳೂ ಇಲ್ಲದ ಕತ್ತಲೆಯ ಕಡಲಲಿ,ಬೆಳಕಿಗಾಗಿ ಹಂಬಲಿಸಿ ಕರಗಿತು ಮನುಜನ ನೆರಳು;ಕೊನೆಗೆ ಉಳಿದದ್ದು ದೇವರು ನಂಬಿಕೆಯೂ ಅಲ್ಲಬ್ರಹ್ಮಾಂಡದ ಅಂತಿಮ ಶೂನ್ಯದೊಂದಿಗೆ ನಮ್ಮದೇ ಕರಗಿಹೋದ ಪ್ರಜ್ಞೆ ಮಾತ್ರ ಉಳಿಯಿತು. ಅನನ್ಯ ಎಚ್ ಸುಬ್ರಹ್ಮಣ್ಯ

ಅನನ್ಯ ಎಚ್ ಸುಬ್ರಹ್ಮಣ್ಯ ಅವರ ಕವಿತೆ “ಕಾಣದ ನೆರಳು” Read Post »

You cannot copy content of this page

Scroll to Top