ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

       ಅವನ ಕೈಯೊಳಗೆ ಇರುವ ಎಳೆನೀರು ಕುಡಿದರೆ ಅಮೃತದಂತೆ. ಬರೀ ನಲವತ್ತಕ್ಕೆ ಕೊಡುವ ಎಳೆನೀರು ಅವನದ್ದು. ಚಿಕ್ಕದು ಮೂವತ್ತಕ್ಕೆ ದೊಡ್ಡದಾದರೆ ನಲವತ್ತಕ್ಕೆ ಎಂದು ಕುಡಿಯಲು ಅನುಕೂಲವಾಗುವ ಹಾಗೆ ನೀಡಿದರೆ ಸಮಾಧಾನ ಅವನಿಗೆ. ನಿಂತು ನೋಡಿದರೆ ಎಲ್ಲರೂ ಇವನಿಗೆ ಪರಿಚಯದವರೇ ಎನಿಸಿ ಬಿಡುತ್ತಾರೆ. ಆದರೆ ಹಾಗೆ ಯಾರೂ ಪರಿಚಯದವರಲ್ಲ. ಅಕ್ಕ ಒಂದು ಎಳನೀರು ಕೊಡಲಾ….? ಅಣ್ಣ ಒಂದು ಎಳೆ ನೀರು ಕೊಡಲಾ? ಎಂದಾಗ ಯಾರಿಗೂ ಬೇಡ ಎನ್ನುವ ಮನಸ್ಸಾಗದು‌. ಅವನಿಗೂ ತನ್ನ ಹೆಸರು ಹೇಳುವ ರೂಢಿ  ಇಲ್ಲ. ಎಲ್ಲರಿಗೂ ತಮ್ಮನಾಗಿ ಉಳಿದ. ನಗು ಅಷ್ಟೇ ಅವನ ಗುರುತು. ಸಿಕ್ಕವರ ನಗು ಅರಳಿಸುವುದು ಅವನ ಕೆಲಸ. ಸಂದೀಪ ಮಾಸ್ತರರು, ರಾಜೇಶ ಮಾಸ್ತರು, ಶಾಂತಿ ಟೀಚರ್, ಕರೆಂಟ್ ಸೀನ ,ಬ್ಯಾಂಕ್ ಕವಿತಾ, ಪೋಸ್ಟ್ ಸುಬ್ಬು, ಡ್ರೈವರ್ ಮಂಜ ಎಲ್ಲರೂ ಅವನ ಹತ್ತಿರ ಬಂದು ಎಳನೀರು ಕುಡಿದು ಹೋದವರೇ. ಅಂಗಡಿ ನಾಗೇಶ, ಆಯರಾ, ಸಾಜಿದ್, ರೋಜಿ ಎಲ್ಲರಿಗೂ ಇವನೆಂದರೆ ಮನೆ ಮನುಷ್ಯನ ಹಾಗೆ. ಆದರೆ ಆ ಕಡೆ ಬಂದವರೆಲ್ಲ ಒಮ್ಮೆ ಮಾತನಾಡಿ ಹೋಗುವರು ಅವನ ಹತ್ತಿರ. ಹೊಸ ಮುಖ ಕಂಡ್ರೆ ಬನ್ನಿ. ಊರು  ಯಾವುದು? ಎಂದು ಚಂದದಿಂದ ಕೇಳುವ. ಅವನ ರೂಢಿಗೆ ಎಲ್ಲರೂ ಒಮ್ಮೆ ನಿಂತು ಮಾತನಾಡುವ ಹೋಗುವ ಅಭ್ಯಾಸ. ಕಲ್ಪವೃಕ್ಷದಂತೆ ಇವನು ಎಳೆನೀರು ಎಂದವರು ಕೆಲವರು. ಹತ್ತಿರ ಹತ್ತಿರ ಏನೇ ಅಂದ್ರು ದಿನಕ್ಕೆ ದುಡಿಮೆ ಸಾಕು.  ಸಂಜೆ ಎಂಟು ಗಂಟೆವರೆಗೆ ದುಡಿಮೆ. ಮುಗಿಸಿ ಮನೆಗೆ ಬಂದರೆ ಅಕ್ಕನೇ ಅವನಿಗೆ ಎಲ್ಲ.  ಅಕ್ಕ ಗುಣಿ ತಮ್ಮಂದಿರು ಕೇಮು ಮತ್ತು ಪರಮ. ಈ ಹೆಸರು ಯಾರಿಟ್ಟರೋ ಗೊತ್ತಿಲ್ಲ. ಅಕ್ಕನೊಟ್ಟಿಗೆ ಬಂದದ್ದು ಮಾತ್ರ ಇವರಿಗೆ ಗೊತ್ತಿರುವುದು. ಅಮ್ಮ ಅಪ್ಪ ಅವರ ಮುಖ ನೋಡಿದ ನೆನಪಿಲ್ಲ ಅವರಿಗೆ. ಅಕ್ಕನಿಗೂ ಅಷ್ಟೇ. ಅಮ್ಮ ಅಪ್ಪ ಅನಾರೋಗ್ಯದಿಂದ ಸತ್ತಿದ್ದು ಮಾತ್ರ ನೆನಪಿರುವುದು. ಇರುವ ಜೋಪಡಿ ಒಳಗೆ ಒಂದು ಪುಟ್ಟ ಮನೆ. ಅಮ್ಮ ಸತ್ತ ನಂತರ ಅವರದಾಗಿ ಉಳಿಯಲಿಲ್ಲ. ಮನೆಯಲ್ಲಿನ ಜಗಳಗಳು, ತೊಂದರೆಗಳು ಇವುಗಳಿಂದ ಬೇಸತ್ತು ಎಲ್ಲವೂ ಬೇಡ ಎನ್ನಿಸಿ ಕೆಲಸಕ್ಕೆ ಬಂದಿದ್ದ ಗಂಗೂನು ಒಪ್ಪಿಸಿ ಮದುವೆಯಾಗಿ ಬಂದವಳು ಗುಣವತಿ. ಬರುವಾಗ ಈ ತಮ್ಮಂದಿರ ಬಿಟ್ಟು ಬರಲು ಮನಸ್ಸಾಗದೇ ಅನಾಥ ಮಕ್ಕಳು ಆಗಬಾರದು ಎಂದು ಅಕ್ಕರೆ ಕಕ್ಲಾತಿಯಿಂದ ಕರೆದುಕೊಂಡು ಬಂದವಳು.
            ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿ ಬದುಕು ಚೆಂದಾಗೆ ಕಟ್ಟಿಕೊಂಡವಳು. ಹಗಲಿಗೆ ಎದುರಾಗುವ ಕಷ್ಟ ರಾತ್ರಿ ಆದ್ರೆ ಕರಗಿಬಿಡುತ್ತಿತ್ತು. ಕಾಲಕ್ಕೆ ಕನ್ನಡಿ ಇರುವುದಿಲ್ಲ. ಮನಸ್ಸಿಗೆ ಕನ್ನಡಿ ಇರುತ್ತದೆ. ಕಾಲದ ಕನ್ನಡಿ ಒಳಗಿನ ನೋಟವೇ ಬದುಕು ಸಾಗಿ ಬಂದ ದಾರಿಯ ಕನ್ನಡಿಯೊಳಗಿನ ಬಿಂಬ. ಬೇರೆ ಅಭ್ಯಾಸಗಳು ಇರದ ಕಾರಣ ಗಂಗೂ ಮನೆಗೆ ದುಡಿದು ತರುವ. ಒಂದಿಷ್ಟು ದಿನ ತಮ್ಮಂದಿರ ಪ್ರೀತಿಯಿಂದ ಸಾಕಿದಳು ಗುಣಿ. ಕೇಮು ಓದಿನಲ್ಲಿ ಮುಂದೆ.  ಆದರೆ ಪರಮ ಅಷ್ಟಾಗಿ ಓದಲಿಲ್ಲ. ಕೇಮುವಿಗೂ ಓದಬೇಕು ಅನಿಸಲಿಲ್ಲ. ಸ್ವಲ್ಪ ಬುದ್ಧಿ ಬಂದಮೇಲೆ ಗಂಗೂಗೆ ಒಂದು ಎಳನೀರು ಅಂಗಡಿ ಹಾಕಬೇಕು ಅನ್ಸಿ ಹಾಕಿದರೆ ಹೇಗೆ ಎಂದು ಯೋಚಿಸುತ್ತಿರುವೆ ಎಂದಾಗ ಕೇಮು ಮತ್ತು ಪರಮ ಇಬ್ರು ಒಪ್ಪಿ, ನಾವು ನಡೆಸ್ತೇವೆ.  ನೀನು ಕೆಲಸಕ್ಕೆ ಹೋಗು ಅಂದಾಗ ಗಂಗೂಗೆ ನಿರಾಳ ಎನಿಸಿತು. ಅಂತೂ ಒಂದಿಷ್ಟು ಎಳೆನೀರು ಪಕ್ಕದಲ್ಲಿ ಇಟ್ಕೊಂಡು ಕೇಮು ಮತ್ತು ಪರಮ ಕುಳಿತರು. ಇದು ಸವಾಲಿನ ಕೆಲಸ ಎನಿಸಿತು. ಪರಿಚಯ ಗುರುತು ಒಂದೂ ಇರದ ನೆಲದಲ್ಲಿ ಅಪರಿಚಿತರಾಗಿ ಕುಳಿತು ಎದುರಾಗುವ ಮುಖಗಳನ್ನು ನೋಡಬೇಕು. ಅವರ ನಡುವೆ ಎಳನೀರಿಂದ ಸೇತುವೆ ಕಟ್ಟಿ ಬಂಧುತ್ವ ಗಳಿಸಬೇಕು.ಅದು ಸುಲಭದ ಮಾತಾಗಿರಲಿಲ್ಲ ಅವರಿಗೆ. ಆದರೆ ಅದೇಕೋ ಬೇಸಿಗೆಯ ಸಮಯ ಆದ್ದರಿಂದ ಆ ಕೆಲಸ ಕಷ್ಟ ಅನಿಸಲಿಲ್ಲ. ಹತ್ತು ,ಇಪ್ಪತ್ತು, ಮೂವತ್ತು, ನಲವತ್ತು, ಐವತ್ತರ ಲೆಕ್ಕದಲ್ಲಿ ಹೆಚ್ಚುತ್ತಲೇ ಹೋಯಿತು….ತಕ್ಕ ಮಟ್ಟಿಗೆ ಆದಾಯವೂ ಬರುತ್ತಾ ಹೋಯಿತು.  ಏನು ಗೊತ್ತಿರದ ಪರಮನಿಗೆ ನಗುವೇ ಅವನು ಒಂದು ಗುರುತು. ಬದುಕಿಗಾಗಿ ಯಾರಾದರೇನು ಅಣ್ಣ ಅಕ್ಕ ಎಂದು ಬಾಯಿ ತುಂಬಾ ಕರೆದು ಕೂಗುವುದು ಅವನ ರೂಢಿ. ಖಾಲಿ ಸುಮ್ಮನೇ ಕುಳಿತು  ಜೀವನ ಕಳೆಯುವವರೂ ಬಂದು ಎಳೆನೀರು ಕುಡಿದು ಸಾಗುತ್ತಿದ್ದರು. ಖರ್ಚಿಲ್ಲದ ಉದ್ಯೋಗವದು. ಏಳನೀರು ಕತ್ತರಿಸಲು ಒಂದು ಹಾಳಾದ ಮರದ ತುಂಡು, ಒಂದು ಕತ್ತಿ ಅಷ್ಟೇ ಸಾಕು. ಹೀಗೆ  ಎಳೆನೀರು ಎನ್ನುವುದು ಪರಮನ ಬದುಕಿನಲ್ಲಿ ಹಾಸು ಹೊಕ್ಕಾಗಿ ಉಳಿಯಿತು .ಪರಮನ ಅಣ್ಣನು ಪಾನಿಪುರಿ ಅಂಗಡಿ ಮಾಡಿದ. ಸಂಜೆಯ ನಂತರ ಪರಮನೂ ಅಣ್ಣನ ಅಂಗಡಿ ಕಡೆ ಸಾಗಿ ಸಹಾಯ ಮಾಡುವ ರೂಢಿ ಇಟ್ಟುಕೊಂಡ. ಪರಮನ  ಪರಿಚಯ ಎಲ್ಲರಿಗೂ ಬಹು ಬೇಗ ಆಯಿತು.ಅಂಗಡಿ ನಾಗೇಶ ಬಂದು ಅಂಗಡಿಯಲ್ಲಿ ಸುದ್ದಿ ಹೇಳಿ ನಕ್ಕು ಎಳೆನೀರು ಕುಡಿದು ಹಿಡಿ ಎಂದು ರೊಕ್ಕ ಕೊಟ್ಟು ಹೋದರೆ ಹೋಗುವಾಗ ಅಣ್ಣಾ ನಂಗೆ ಸಾಮಾನ್ ಬೇಕಿತ್ತಾ ಕಟ್ಟಿಡೋ ಹಾ ಎಂದು ಪರಮ ಹೇಳುತ್ತಿದ್ದ ಮಾತಿಗೆ ಕುಶಾಲ ಮಾಡಿ ನಕ್ಕು ನಾಗೇಶಣ್ಣ ಸಾಗಿ ಬಿಡುತ್ತಿದ್ದ‌. ಒಮ್ಮೊಮ್ಮೆ ಮಾತನಾಡಲು ಮನೆಯಲ್ಲಿ ಮಕ್ಕಳು  ಇಲ್ಲದ ಹಿರಿಯರು ಇವನ ಸಿಯಾಳ ಅಂಗಡಿ ಮುಂದೆ ಬಂದು ಬಹು ಸಮಯ ಪೇಪರ್ ಓದುವ ಕೆಲಸ ಮಾಡ್ತಾ ಇದ್ರು. ಹೆಚ್ಚಿನ ಮಾತೇ ಅವರ ಗುರುತಾಗಿತ್ತು.   ಅಲ್ಲಿ ಪ್ರೀತಿ ,ಕಾಳಜಿ,  ಅಕ್ಕರೆ,ಗೆಳೆತನ ,ಸಂಬಂಧ ಅದೇ ಅವರ ವಿಷಯ ಆಗಿತ್ತು . ಪರಮನ ಅಂಗಡಿಯೇ ಅವರು ಓದುವ ಸ್ಥಳವಾಗಿ ಬಿಟ್ಟಿತ್ತು.

ಪರಮನ ಅಂಗಡಿ ಎದುರು ದೊಡ್ಡದೊಂದು ಹೋಟೆಲ್, ಜನುಮಗಾಗಿ ಮುಖ ಹೊತ್ತು ನಿಂತಿತ್ತು . ಅಲ್ಲಿ ಪೇಪರ್ ಬರುತ್ತಿರಲಿಲ್ಲ . ಆದರೆ ಪರಮನ ಅಂಗಡಿಗೆ ಪೇಪರ್ ದಿನಾಲು ಬರುತ್ತಿತ್ತು. ಪೇಪರ್ ಪರಮನಿಗೆ ದಿನಾಲು ಓದಲು ಬೇಕಿತ್ತು. ನಾಲ್ಕನೇ ಕ್ಲಾಸ್ ಆಗಿ ಓದುವುದನ್ನು ರೂಢಿಸಿಕೊಂಡಿದ್ದ. ಈ ಜಗದ ಸುದ್ದಿ ಅದರೊಳಗೆ ಕುಳಿತು ಬರುವುದು ಅವನಿಗೆ ಬಹಳ ಅಪ್ಯಾಯಮಾನವಾದ ಸಂಗತಿಯಾಗಿತ್ತು. ಎಷ್ಟೆಲ್ಲಾ ನಮೂನೆ ಜನರಿದ್ದಾರೆ ಈ ಜಗದಲ್ಲಿ ಎನಿಸ್ತಿತ್ತು. ಅಂಗಡಿಗೆ ದಿನ ಬರುವ ದಿನು ಮಾಸ್ತರರು  ನಿವೃತ್ತಿ ಆಗಿ ಎರಡೇ ವರ್ಷ ಕಳೆದಿತ್ತು. ಇರುವ ಇಬ್ಬರೂ ಮಕ್ಕಳು ದೂರ ದೇಶದಲ್ಲಿ ಉದ್ಯೋಗದಲ್ಲಿದ್ದರು. ಹೆಂಡತಿ ತೀರಿ ಕೊಂಡ ಮೇಲೆ ಅವರಿಗೆ ಬೇರೆ ಎಲ್ಲ ಹೋಗಲು ಮನಸ್ಸಾಗದೆ ಇರುವ ಮನೆ ಒಳಗೆ ಅವರು ವಾಸ ಮಾಡ್ತಾ ಇದ್ರು. ಒಮ್ಮೆ ಕೇಳಿ ಬಿಡುವ ಪರಮ. ಯಾಕೆ ತೊಂದರೆ ಮಾಡಿಕೊಳ್ಳುತ್ತೀರಿ.  ಹೋಗಿ ಬಿಡಿ ಮಕ್ಕಳ ಮನೆಗೆ ಆರಾಮಾಗಿ ಇರಬಹುದು ಎನ್ನುತ್ತಿದ್ದ . ಕೈಲಾಗುವವರೆಗೆ ಇಲ್ಲೇ ಇರುತ್ತೇನೋ. ನಿಮ್ಮಂತಹ  ಜನರ ಜೊತೆ ನಾಲ್ಕು ಮಾತಾಡಿ ಹಗುರ ಆಗಿ ಇರಬಹುದು. ಕಾಣದ ದೇಶಕ್ಕೆ ಹೋಗಿ ಗೋಡೆ ನೋಡುತ್ತಾ ಕೂರೋದು ಬೇಜಾರು ಮಾರಾಯ ನಂಗೆ . ನಮ್ಮೂರ ಗದ್ದೆ ,ಬಯಲು, ಸಮುದ್ರ ನೋಡೋಕೆ ಚಂದನ.  ನಂಗೆ ಅಂತ ಒಂದು ಊರಿದೆ ಅಂದ್ರ ಇದೇ ಊರಲ್ವಾ . ನಂಗೆ ಅನ್ನ ಸಾರು ಅಷ್ಟೇ ಸಾಕು. ಅದನ್ನೇ ನಾನು ಮಾಡಿಕೊಳ್ಳೋದು. ಯಾರಾದರೂ ಕಲಿಸಿದ ಮಕ್ಕಳು ಬರ್ತಾರೆ ಮಾತಾಡ್ತಾರೆ. ಆಗ ಬಹಳ ಖುಷಿಯಾಗುತ್ತೆ ನೋಡು ಪರಮ ಎನ್ನುವರು. ಆಗಾಗ ಒಳ್ಳೆಯ ಎಳೆ ನೀರು ಬಂದಾಗ ಹಿಡಿರಿ ಕುಡಿಯಿರಿ ಸರ್ ಅಂದಾಗ  ಬೇಡ ಎನ್ನುವುದಿಲ್ಲ . ಖುಷಿಯಿಂದ ಕುಡಿದು ಒಳ್ಳೆದಾಗ್ಲಿ ನಿಂಗೆ ಅನ್ನುತ್ತಾರೆ.  ಕಷ್ಟ ಅಂತ ಬಂದಾಗ ಒಂದಿಷ್ಟು ಹಣ ಎಣಿಸಿ ಕೈಗಿಡುತ್ತಾರೆ. ನಾನಿದ್ದೀನೋ ಎಂದು ಜೀವ ತುಂಬುತ್ತಾರೆ. ಇನ್ನೂ ರಮೇಶ್ ಮಾಸ್ತರು ತಮ್ಮ ಬಂದೆ ಎಂದು ಹೇಳುತ್ತಲೇ ಪಾಸ್ ಆಗಿ ಹೋಗಿ ಬಿಡುತ್ತಾರೆ. ಒಂದಿಷ್ಟು ನಡೆದು ಬಿಡುತ್ತೇವೆ ಆಮೇಲೆ ಬರ್ತೇನೆ ಅಂತ ಮುಂದಕ್ಕೆ ಹೋಗಿ ಮತ್ತೆ ಬರ್ತಾರೆ.

              ಪರಮನ ಆಪ್ತರು ಎಷ್ಟು ಅಂತ ಪರಮನಿಗೂ ಗೊತ್ತಿಲ್ಲ. ಎಲ್ಲರೂ ಅವನ ಜೊತೆ ಪ್ರೀತಿಯಿಂದ ಮಾತನಾಡುವವರೇ. ಯಾರು ಇಲ್ದಾಗ ಅಪ್ಪ ಅಮ್ಮ ಈಗ ಇದ್ದಿದ್ದರೆ ಖುಷಿ ಪಟ್ಟಿರೋರು ಅಂದುಕೊಳ್ಳುತ್ತಾನೆ ಪರಮ. ಹಸಿವೆಯಾಗಿ ಕೈ ಚಾಚಿದ್ದು, ಇದ್ದವರು ಇಲ್ಲ ಎಂದು ಹೇಳಿದ್ದು ಅದೆಲ್ಲ ನೆನಪಿಸಿಕೊಂಡು ದುಃಖ ಆಗುತ್ತದೆ ಎಂದು ತನಗೆ ತಾನೇ ಅಂದುಕೊಳ್ಳುತ್ತಾನೆ. ಒಮ್ಮೆ ವಿದೇಶದ ಇಬ್ಬರು ಪ್ರವಾಸಿಗರು ಬಂದು ಇವನನ್ನು ಮಾತನಾಡಿಸಿ ಫೋಟೋ ತೆಗೆದುಕೊಂಡು ಹೋದರು. ಯಾರೋ ದೂರದ ಬೆಂಗಳೂರು, ಮೈಸೂರು ,ಗೋವಾ, ಮುಂಬೈನವರು ಹತ್ರ ಬಂದು ನಿಂತಾಗ ಇವನಿಗೆ ಆ ಊರೇ ಹತ್ತಿರ ಬಂದು ನಿಂತ ಹಾಗೆ ಅನ್ನಿಸೋದು . ಹೋಟೆಲಿನ ತಿಂಡಿಗಿಂತ ತನ್ನ ಎಳೆನೀರು ಹೆಚ್ಚು ಎಂದುಕೊಳ್ಳುವ ಒಮ್ಮೊಮ್ಮೆ. ಅದೇ ಆ ಹೋಟೆಲ್ ಹತ್ತಿರ ಹೋಗಿ ಹಸಿವಾದ ತಿಂಡಿ ತಿಂದು ಐದು ನೂರು ಕೊಟ್ಟು  ಚಿಲ್ಲರೆ ಪಡೆದರೆ ಸಾಹುಕಾರ ಏನೋ ತಮ್ಮ ವ್ಯಾಪಾರ ಹೆಂಗೆ ?ಎಂದು ಕೇಳಿದರೆ ಬಹಳ ಒಳ್ಳೆಯವರು ಅನ್ನಿಸೋದು. ತೊಂದರೆ ಇಲ್ಲ. ತುಂಬಾ ಜನ ಬರುತ್ತಾರೆ ಈಗ ಎಂದು ನಗುತ್ತಾ ಹೇಳಿ ಬರುವಾಗ ಪರಮ ಮರತೆ ನೋಡು. ಚೋಲೋತು ಎರಡು ಸಿಯಾಳ ಇದ್ದರೆ ತೆಗೆದು ಇಡು. ಹೋಗುವಾಗ ಒಯ್ತೆ ಎಂದಾಗ ಇವನಿಗೆ ಕಾಲು ನೆಲದ ಮೇಲೆ ಇಲ್ಲ ಎನಿಸೋದು. ಹಾಂ.. ತೆಗೆದು ಇಡುವೆ ಎಂದು ಹೇಳಿ ಬರುವ. ದೊಡ್ಡ ಜನಾನೂ ನಮ್ಮಂಗೆ ಅಂದುಕೊಳ್ಳುವ ಪರಮ.

        ಎದುರಿನ ಅಂಗಡಿಯ ಗುಂಡಣ್ಣನೂ ಸಿಯಾಳ ಯಾಪಾರ ಸುರು ಮಾಡಿ ಇಪ್ಪತ್ತು ವರ್ಷ ಮೇಲಾಗಿತ್ತು. ಮಕ್ಕಳೆಲ್ಲಾ ದೊಡ್ಡ ಉದ್ಯೋಗ ಮಾಡ್ತಾ ಇದ್ದರೂ ಈ ಕೆಲಸ ಬಿಟ್ಟಿರಲಿಲ್ಲ. ಪರಮನಿಗೂ ಅವನಿಗೂ ಅಂತ ದ್ವೇಷ ಏನೂ ಇರಲಿಲ್ಲ. ಹಾಗಂತ ಆಪ್ತರೂ ಅಲ್ಲ. ಆದರೆ ಕಷ್ಟ ಅಂತ ಬಂದಾಗ ಇಬ್ಬರೂ ಒಬ್ಬರ ಪರವಾಗಿ ನಿಲ್ಲೋರು. ಒಮ್ಮೊಮ್ಮೆ ಗುಂಡಣ್ಣನ ಹಳೆ ಗಾಡಿ ಚಾಲು ಆಗೋದೇ ಇಲ್ಲ. ಆಗ ಪರಮನೇ ಬಂದು ಗಾಡಿ ಅಲ್ಲಾಡಿಸಿ ಹಿಂದೆ ಮುಂದೆ ಸರಿಸಿದರೆ ಗಾಡಿ ಚಾಲು ಆಗಿ ಬಿಡೋದು. ಇಷ್ಟೇ ಅನ್ನದ ಜೀವನ. ಇನ್ನಷ್ಟು ಇದೆ ಅನ್ನುವುದು ಬದುಕು. ಹತ್ತಿರದಿಂದ ಬದುಕಬೇಕು. ನಾಕು ಚೆಂದ ಮಾತು ಆಡಬೇಕು. ಸಾಧ್ಯವಾದರೆ ಉಪಕಾರ ಮಾಡಬೇಕು ಅನ್ನೋದು ಪರಮನ ಬದುಕು. ಏನೂ ಅಲ್ಲದ ಜೀವನ ಎಲ್ಲವನ್ನೂ ಹೇಳುತ್ತದೆ. ಏನೂ ಅಲ್ಲದ ಕೆಲವರು ಎಲ್ಲವನ್ನೂ ಹೇಳುತ್ತಾರೆ ಎನ್ನುವವ ಪರಮ. ಕರೆಂಟ್ ಸೀನ ಬಂದಾಗಲೆಲ್ಲಾ ಇಂದು ಕರೆಂಟ್ ಎಲ್ಲೆಲ್ಲಿ ಇರುವುದಿಲ್ಲ ಎಂದು ಹೇಳಿ ಹೋಗುವ. ಪರಮ ಬಂದವರಿಗೆ ಅದನ್ನು ಹೇಳುವ. ಅಡುಗೆ ಮಾಡಿ ಕೊಳ್ಳುವವರು ಎಲ್ಲಾ ಬೇಗ ಮಾಡಲಿ ಅಂತ ಹೇಳಿ ಬಿಡೋವ. ಆಗಾಗ ರಾಮಮೂರ್ತಿ ಸರ್ ಬರುವವರು ಸುಮ್ಮನೇ ನಗುತ್ತಾ ಪರಮ ಬದುಕು ಅಂದರೆ ಏನೋ ಎಂದು ಕೇಳುವರು. ಬದುಕು ಎಂದರೆ ಹೀಗೆ ಅಂತ ಹೇಳೂಕೆ ಆಗುವುದಿಲ್ಲ. ಕಾಲ ಬಂದಾಂಗೆ ನಾವು ಹೋಗೋದು ಬದುಕು. ಏನೇ ಬಂದರೂ ಖುಷಿಯಾಗಿ ಕಳೆಯೋದು ಜೀವನ ಅನ್ನೋನು ಪರಮ. ಅವನ ಮಾತಿಗೆ ನಕ್ಕು ಹಗುರಾಗಿ ಒಂದು ಸಿಯಾಳ ಕೊಡ ಎಂದು ಕುಡಿದು ಸಾಗುವರು.

           ಆಯೀರಾ ಅಕ್ಕನೂ ಹಾಗೆ. ಆಸ್ಪತ್ರೆಯಲ್ಲಿ ಕೆಲಸ. ಎಲ್ಲಾದರೂ ಸಿಯಾಳ ಕುಡಿಯುವ ಆಸೆ ಆದರೆ ಸ್ಕೂಟಿ ಹತ್ತಿ ಬಂದು ಬಿಡೋರು. ತಮ್ಮ ಒಂದು ಚೊಲೋತು ಸಿಯಾಳ ಕೊಡು ಎನ್ನೋರು. ನೀವೇ ಆರಿಸಿ ಅಂದಕೂಡ್ಲೇ ಇದೇ ಕೊಡು ಎನ್ನೋರು. ಇದು ಚಿಕ್ಕದು. ನೀರು ಅಷ್ಟು ಇರಲ್ಲ. ಇದೇ ಕೊಡ್ತೆ ಎಂದು ಆರಿಸಿ ಕೊಡುವನು. ತಮ್ಮನಲ್ಲ, ಅಣ್ಣನಲ್ಲ ಆದರೂ ಆಯೀರಾ ಅಕ್ಕ’ ತಮ್ಮ ಸರಿ ಹೊತ್ತಿಗೆ ಊಟ ಮಾಡು ಹಾಂ’ ಎನ್ನೋರು. ಆಯ್ತು, ಅಕ್ಕಾ ಅನ್ನೋನು. ಆಯೀರಾ ಅಕ್ಕ ಹಬ್ಬ ಬಂದಾಗ ಏನಾದರೂ ತಿಂಡಿ ಕೊಟ್ಟು ಹೋಗೋರು. ಆಗ ಈ ಮಾನವೀಯ ಪ್ರೀತಿ ದೊಡ್ಡದು ಅನ್ನಿಸೋದು ಪರಮನಿಗೆ. ಖುಷಿಯಾಗೋದು.

           ಡ್ರೈವರ್ ಮಂಜಣ್ಣನೂ ಆಗಾಗ ಬರುವವನು ಊರಿಗೆ. ಆಗ ಅಂಗಡಿಗೆ ಬರುವನು. ಬರುವಾಗ ಅವನಷ್ಟೇ ಬರುವುದಿಲ್ಲ. ಬರುವಾಗ ಕಥೆಗಳನ್ನು ತಕಂಡೇ ಬರುತ್ತಾನೆ. ಈ ಸಲ ಮುಂಬೈ ಕಡೆಗೆ ಹೋಗಿದ್ದೆ ಮಾರಾಯ. ಎಂಥಾ ಮಳೆ ಹೇಳು ಅಲ್ಲಿ ಅಂತ ಹೇಳೋವಾ. ಈ ಮಂಜಣ್ಣನ ಜೊತೆಗೇ ಮುಂಬೈ ಮಳೆನೂ ಬಂದಂಗೆ ಕಾಣೋದು ಪರಮನಿಗೆ. ಆದರೂ ಕೇಳುವನು ಪರಮ. ಮಂಜಣ್ಣ ನೋಡ್ಲಿಕ್ಕೆ  ಮುಂಬೈ ಹೇಗೆ ಉಂಟಾ? ಎಂದರೆ “ಅದೇನೂ ಸಣ್ಣ ಮಾತಲ್ಲ ಬಿಡು. ನಾನು ಮುಂಬೈಗೆ ವಾರಕ್ಕೆ ಎರಡು ಸಲ ಹೋದರೂ ನಂಗೆ ಪೂರಾ ನೋಡುಕೆ ಆಗ್ಲಿಲ್ಲ ನೋಡು. ಒಮ್ಮೆ ನೀ ಖಾಲಿ ಇದ್ದಾಗ ಹೇಳು. ನಿನ್ನ ಕರೆದುಕೊಂಡು ಹೋಗಿ ತೋರಿಸುವೆ” ಎನ್ನುವ ಮಂಜಣ್ಣ ಕಣ್ಣಿಗೆ ಕಟ್ಟುವಂತೆ ಮುಂಬೈ ಶಹರಿನ ಕಥೆ ಹೇಳುವನು. ಒಮ್ಮೊಮ್ಮೆ ಈ ಮಂಜಣ್ಣ ಹಗಲು ರಾತ್ರಿ ಅಂತ ಲಾರಿ ಓಡಿಸಿಕೊಂಡು ಬರೋನು ಪಾಪ. ಇವನ ಬದುಕು ಕಷ್ಟ ಅನಿಸೋದು. ಆದರೆ ಅವನ ಖುಷಿ ನೋಡಿ ಪರಮನಿಗೂ ಖುಷಿ. ಎಂತೆಂಥ ಜನಗಳು ಆ ರಸ್ತೆಯಲ್ಲಿ ಎಂದರೆ ಸಾಕು ಅವರ ಚಿತ್ರ ಕಣ್ಣ ಮುಂದೆಯೇ ನಡೆದುಹೋದಂಗೆ ಕಾಣುವುದು. ಕುಶಾಲಿನ ಸಂಗತಿಗಳನ್ನು ರೋಚಕವಾಗಿ ಹೇಳಿದಾಗ ಈ ಸಲ ಮಳೆಗಾಲಕ್ಕಾದರೂ ಮಂಜಣ್ಣನ ಜೊತೆಗೆ ಮುಂಬೈಗೆ ಹೋಗಬೇಕು ಅನಿಸೋದು ಪರಮನಿಗೆ. ಬದುಕು ಅಂದರೆ ಮನುಷ್ಯರ ಜೊತೆಗೆ ಮನುಷ್ಯರಾಗಿ ಬದುಕೋದು. ಈ ಮಂಜಣ್ಣ ಕಾಣದ ಊರಿನಲ್ಲಿ ಲಾರಿ ಓಡಿಸುವ ಚಿತ್ರ ಬಹಳ ಕಾಡೋದು. ಮಂಜಣ್ಣ ಅಷ್ಟೇ ಅಲ್ಲ ಅವನಂತೆ ಲಾರಿ ಓಡಿಸುವ ಎಲ್ಲರ ಚಿತ್ರ ಕಣ್ಣ ಮುಂದೆ ಬರುವುದು. ಬದುಕು ವಿಶೇಷ ಅನಿಸೋದು.

     ತರಕಾರಿ ಅನಿತಣ್ಣನೂ ಆಗಾಗ ಸಿಯಾಳ ಕುಡಿಯಲು ಬರುವನು.ಹೋಗುವವರೆಗೂ ಅವನಿಗೆ ತರಕಾರಿದೇ ಮಾತು.ಆ ಕಡೆಯಿಂದ ಲಾರಿ ಬರಲಿಲ್ಲ. ಈ ಕಡೆಯಿಂದ ಲಾರಿ ಬಂದಿಲ್ಲ ಹೀಗೆ. ಟೋಮೆಟೋ, ಈರುಳ್ಳಿ  ಮೆಣಸು. ಕುತ್ತುಂಬರಿ ರೇಟು ಹೆಚ್ಚಾಗಿ ಆದ ಲಾಸ್ ಬಗ್ಗೆ ಹೇಳುವನು. ಅವಂದು ಬದುಕು ಎನಿಸುವುದು.ತರಕಾರಿ ಪದ್ದಕ್ಕನೂ ಹಾಗೆ. ಬೆಳಿಗ್ಗೆ ಎದ್ದು ತರಕಾರಿ ಹೊತ್ತು ಬರೋಳು. ಎಷ್ಟು ಶಕ್ತಿ ಇವಳಿಗೆ ಎನಿಸೋದು. ಮೂರು ಮಕ್ಕಳ ಸಾಕಿ ದೊಡ್ಡ ಮಾಡಿದ್ದಾಳೆ. ಎಷ್ಟು ಪರಿಶ್ರಮ ಪಟ್ಟಿದ್ದಾಳೆ. ಅಂತ ಹೆಮ್ಮೆ ಪಡೋನು. ಆಗ ಪದ್ದಕ್ಕ ಹೇಳೋಳು. ಇನ್ನೂ ಮದುವೆ ಆಗಿಲ್ಲ….. ಮೂರು ಮಕ್ಕಳು ಇದ್ದಾರೆ ಎನ್ನುವಳು. ಇರಲಿ ಬಿಡು ಆಗುತ್ತದೆ. ಒಳ್ಳೆ ಗಂಡು ಸಿಗುತ್ತದೆ ಎಂದು ಹೇಳಿದಾಗ ಎಲ್ಲಿ ಸಿಗ್ತಾರೆ ಈಗ ಎನ್ನುವಳು. ಆದರೂ ವಯಸ್ಸು ಆಯಿತು ನೋಡು. ಈಗ ದುಡಿಯೋಕೆ ಆಗಲ್ಲ ಎಷ್ಟು ದಿನಾಂತ ಹೀಗೆ ದುಡಿಯೋದು. ಅಂತ ಹೇಳಿ ಹೋದ ಪದ್ದಕ್ಕ ಇನ್ನೂ ಬಂದಿರಲಿಲ್ಲ. ಕೆಲದಿನ  ಕಳೆಯಿತು. ಪದ್ದಕ್ಕಳಿಗೆ ಇದ್ದ ಒಬ್ಬ ಮಗಳ ಮದುವೆ ಆಯಿತು ಎಂಬ ಸುದ್ದಿ ಸಿಕ್ಕಿತು. ಆಗಲಿ ಒಳ್ಳೆಯದಾಗಲಿ ಎಂದು ಖುಷಿ ಪಟ್ಟ ಪರಮ.
           ಈ ನಡುವೆ ಸೈಕಲ್ ಮೇಲೆ ಬರುವ ಇರುಪಿದು ಮಜ ಅನಿಸೋದು. ಬೆಳಿಗ್ಗೆ ಏಳಕ್ಕೆ ಸೈಕಲ್ ಹಿಡಿದು ಹೊರಟರೆ ಎಂಟರಿಂದ ಒಂಬತ್ತರೊಳಗೆ ಚೀಲ ತುಂಬುವಷ್ಟು ಪ್ಲಾಸ್ಟಿಕ್ ಬಾಟಲಿ ತುಂಬಿಕೊಂಡು ಬರುವವನು. ಒಮ್ಮೊಮ್ಮೆ ಸೈಕಲ್ ತುಂಬಿ ಮತ್ತೊಮ್ಮೆ ತರಲು ಹೋಗುವನು ಇರೂಪಿ. ಪರಮನಿಗೆ ಇರೂಪಿ ಕಂಡರೆ ಬಹಳ ಖುಷಿ. ಏಕೆಂದರೆ ಯಾರೂ ಮಾಡದ ಕೆಲಸ ಇರೂಪಿ ಮಾಡೋದು. ಇರೂಪಿಗೂ ಎಳೆನೀರಿಗೂ ವಿಶೇಷ ಅನುಬಂಧ. ಅವನ ಅಂಗಡಿ ಮುಂದೆ ನಿಂತು ಎಳೆನೀರು ಕುಡಿದರೆ ಇವನಿಗೂ ಸಮಾಧಾನ. ಇರೂಪಿ ಮಾಡೋ ಕೆಲಸ ಸಣ್ಣದಲ್ಲ ಎಂದು ಹೇಳಿದ ರಾಮಮೂರ್ತಿ ಸರ್ ಮಾತು ಬಹಳ ನಿಜ ಅನಿಸೋದು ಆಗಾಗ. ನಮ್ಮ ಮಣ್ಣು ಚೆನ್ನಾಗಿ ಇರಬೇಕು. ಆಗ ಬೆಳೆ ಬರುತ್ತದೆ ಎನ್ನುವ ಮಾತು ಸಂವೇದನೆಯ ಮಾತು ಎನ್ನಿಸೋದು.
           
         ಒಮ್ಮೊಮ್ಮೆ ಖಾಲಿ ಕುಳಿತಾಗ ಅನ್ಸೋದು. ಎಷ್ಟೆಲ್ಲಾ ಜನ ಇದ್ದಾರೆ ಈ ನೆಲದಲ್ಲಿ ಎಂದು ನೋಡುವ. ಆದರೆ ಅವರ ಮುಖಭಾವ  ನೋಡಿದ್ರೆ ಒಂಥರಾ ಅನ್ಸೋದು. ಕೆಲವರಿಗೆ ತೀರಾ ಆಸೆ.  ಕೆಲವರಿಗೆ ಸಂಬಂಧದ ಅಂತರ. ದೂರ ನಿಂತ ಒಂಟಿ ಮರಗಳಂತೆ ಕಾಣುತ್ತಾರೆ.     ಖುಷಿ ಅನ್ನೋದು ಬದುಕು. ಒಮ್ಮೊಮ್ಮೆ ಈ ಉಸಿರು ಎಷ್ಟು ಮುಖ್ಯ ಅಂತ ಅನ್ನಿಸೋದು. ಅವನಿಗೆ ಉಸಿರೇ ಇಲ್ಲ ಅಂದ್ರೆ ಏನು ಇಲ್ಲ ಅಂದುಕೊಳ್ಳುವ ಕೆಲವೊಮ್ಮೆ.  ಕೆಲವೊಂದು ಪಾತ್ರಗಳು ನಮ್ಮೆದುರು ಓಡಾಡಿದಂತೆ ಕಾಣಿಸುತ್ತದೆ. ಆದರೆ ಅವು ನಮ್ಮನವರದು ಅಲ್ಲ ಎನಿಸುತ್ತದೆ. ನಮ್ಮವರದು ಎನಿಸಲು ಬಂಧ ಬೇಕು. ನಮ್ಮ ಜೊತೆಯಾಗಿಸುವ ಮಾತು ಬೇಕು. ಎಲ್ಲವನ್ನು ಮೀರಿದ ಸಹಜತೆ ಬೇಕು. ಪಾತ್ರ ಅನ್ನೋದು ನಾವು ತೊಡುವ ವೇಷವಲ್ಲ. ಅಂತರಂಗದೊಳಗೆ ಉಳಿಯುವ ಸಾಮಾನ್ಯತೆ ಅನಿಸುತ್ತದೆ. ನಾವು ನಡೆದಷ್ಟು ದೂರ ನಮ್ಮ ಜೊತೆ ಬರುವ ಪಾತ್ರಗಳು ನಮ್ಮೆದುರು ಸದಾ ಕಾಲ ಉಳಿಯುತ್ತದೆ. ನಿಜವಾದ ಪಾತ್ರಗಳು ನಮ್ಮನ್ನ ಪ್ರತಿಬಿಂಬಿಸುತ್ತದೆ. ಇಲ್ಲವೇ ನಾವೇ ಅದರ ಪ್ರತಿಬಿಂಬವಾಗುತ್ತೇವೆ. ಪರಮ ಹೀಗೆ ಯೋಚಿಸುವ  ಪ್ರೀತಿ ಜೀವಂತ ಇರಬೇಕು . ಅದು ಆಶಾವಾದಿಯಾಗಿರಬೇಕು. ಒಳಿತು ಮಾಡಿ ಅಂತರಂಗದಲ್ಲಿ ಶಾಶ್ವತವಾಗಿ ಉಳಿಯಬೇಕು    ಹೀಗೆ ತನ್ನ ಅಂತರಂಗದಲ್ಲಿ ಉಳಿದವರೆಷ್ಟು ಎಂದುಕೊಂಡ. ಎಣಿಸುತ್ತಾ ಹೋದರೆ ತುಂಬಾ ಜನರು ಅವನವರು ಎನಿಸುತ್ತದೆ ಅವನಿಗೆ. ನಾಳೆ ತಾನು ಈ ಸಿಯಾಳ ಅಂಗಡಿ ತೆರೆದಿಲ್ಲ ಎಂದರೆ ಅ ಜಾಗವೇ ಅನಾಥವಾಗುತ್ತದೆ. ದೂರದಲ್ಲಿ ಇರುವ ಮಕ್ಕಳ ನೆನೆದು ಬರುವ ಹಿರಿಯ ಜೀವಗಳ ಮುಖ ಎದುರಿಗೆ ಬರುತ್ತದೆ. ಅವನಿಗೆ ಎಲ್ಲಾ ಮೀರಿದ ಮನುಷ್ಯ ಸಂಬಂಧವೊಂದು ಮನುಷ್ಯರ ರೂಪದಲ್ಲಿ ಕಾಣಿಸುತ್ತದೆ. ತಾನು ಎಲ್ಲರಿಗೂ ಕೊಡುವ ಈ ಸಿಯಾಳ ಸಾಮಾನ್ಯವಾದುದಲ್ಲ. ಎಷ್ಟು ಜನರ ಜೀವ ಉಳಿಸಿದೆ. ನನ್ನ ಹತ್ತಿರ ಎಷ್ಟು ಜನರನ್ನು ಕರೆದುಕೊಂಡು ಬಂದಿದೆ ಎಂದುಕೊಳ್ಳುತ್ತಾನೆ. ಬದುಕಿಗೆ ನಿಷ್ಠೆ ಮುಖ್ಯ. ನಿಷ್ಠೆ ಇದ್ದರೆ ಎಲ್ಲವೂ ಅನ್ನ ನೀಡುತ್ತದೆ ಎಂದು ಅಂದುಕೊಳ್ಳುವ. ಎಲ್ಲರಳೊಳಗೊಂದು ಪ್ರೀತಿಯ ಇಡುವ ಈ ಸಿಯಾಳ ಇವನ ಬದುಕಿನ ಅರ್ಥ ‌. ಆದರೆ ಅದು ಅವನ ಶಕ್ತಿ, ಸಹಜತೆ, ಮತ್ತು ಆರಾಧನೆಯಾಗಿತ್ತು‌. ಅದನ್ನು ಅವನು ನಿತ್ಯವೂ ಅಷ್ಟೇ  ಬದುಕುವ ಕಾಳಜಿಯಿಂದ ಮಾಡುತ್ತಿದ್ದ.

           ಒಂದು ದಿನ ಅಚಾನಕ್ಕಾಗಿ ಆರಾಮ ಇಲ್ಲದ ಪದ್ದಕ್ಕನನ್ನು ಇವನೇ ಮನೆಯವರೆಗೆ ಹೋಗಿ ಮುಟ್ಟಿಸಿ ಬಂದಿದ್ದ. ಪದ್ದಕ್ಕನ ಮನೆ ಪುಟ್ಟದು. ಆದರೆ ಮನಸ್ಸು ತುಂಬಾ ದೊಡ್ಡದು ಎನಿಸಿತ್ತು. ಪದ್ದಕ್ಕ ನೋವಿನಿಂದ ಹೇಳಿದ ಮಾತು ಅವನಲ್ಲಿ ಯೋಚಿಸುವಂತೆ ಮಾಡಿತ್ತು. ಇನ್ನೂ ಇಬ್ಬರು ಮಕ್ಕಳು ಮದುವೆಯಾಗಬೇಕು. ನನಗೆ ಆರಾಮಾದರೆ ಸಾಕು. ಅವೆಲ್ಲಾ ಯೋಚನೆ ಮಾಡಬೇಡ. ಒಳ್ಳೆಯದೇ ಆಗುತ್ತದೆ ಎಂದಿದ್ದ. ನನಗೆ ಏನಾದರೂ ಆದರೆ ನೀನೇ ಕೈ ಹಿಡಿಯಬೇಕಪ್ಪ ಎಂದು ಪದ್ದಕ್ಕ ಅಂದಿದ್ದಳು. ಪದ್ದಕ್ಕ ಹೀಗೇಕೆ ಅಂದಳು ಎಂದು ಮನೆ ಕಡೆ ಯೋಚಿಸುತ್ತಾ ಬಂದ. ನೀನೇನೂ ಯೋಚಿಸಬೇಡ ಪದ್ದಕ್ಕ ನಾನಿದ್ದೇನೆ ಎಂದಿದ್ದ. ಪದ್ದಕ್ಕನೂ ಹೀಗೆ ಬೇರೆ ಊರಿನಿಂದ ಬಂದು ಇಲ್ಲಿ ಬದುಕು ಕಟ್ಟಿದವಳೇ. ಪದ್ದಕ್ಕನ ಗಂಡ ಅನಾರೋಗ್ಯದಿಂದ ತೀರಿಕೊಂಡಾಗ ಪದ್ದಕ್ಕ ಪಟ್ಟ ಕಷ್ಟ ಎಷ್ಟಿರಬಹುದು ಎಂದು ಯೋಚಿಸಿದ. ಇವನಿಗೆ ಒಳ್ಳೆಯದಾಗಲಿ ಎಂದು ಸದಾ ಬಯಸುತ್ತಿದ್ದವಳು ಅವಳು.

              ಕೆಲ ದಿನಗಳಲ್ಲೇ ಆಸ್ಪತ್ರೆಗೆ ಅನಾರೋಗ್ಯದಿಂದ ಸೇರಿದಳು. ಆಗ ಪರಮನೇ ಹೋಗಿ ಒಂದಷ್ಟು ಹಣ ಕೊಟ್ಟು ಬಂದ. ಕಣ್ಣೀರಿಡುತ್ತಾ ಪರಮ ಇದ್ಯಾವ ಜನುಮದ ಋಣ ಎಂದು ಪದ್ದಕ್ಕ ಅಂದಾಗ ಪರಮನ ಕಣ್ಣಲ್ಲೂ ಹನಿನೀರು ಹರಿಯಿತು. ಅದೆಲ್ಲಾ ಯೋಚಿಸಬೇಡ ಇದೇ ಜನುಮದ ಋಣ ಇದು ಎಂದು ಹೇಳಿದ. ಒಂದು ಮಾತು ಹೇಳಲಾ ಎಂದು ಕೇಳಿದಳು. ಆಗಲಿ ಎಂದ. ನನ್ನ ಎರಡನೇ ಮಗಳನ್ನು ಮದುವೆ ಆಗುವೆಯಾ ಎಂದಾಗ ಪರಮನಿಗೆ ಪರಮಾಶ್ಚರ್ಯ. ತನ್ನ ಮದುವೆ ಆಗುವುದೇ ಇಲ್ಲ ಎಂದುಕೊಂಡಿದ್ದ ಪರಮನಿಗೆ ಹೊಸ ಸಂಚಲನ ಉಂಟಾಯಿತು. ಎಲ್ಲಾ ದಿಕ್ಕುಗಳಲ್ಲಿ ಬೀಸಿದ ಗಾಳಿ ಪರಮನನ್ನು ಮೇಲಕ್ಕೆ ಏರಿಸಿದಂತೆ ಎನಿಸಿತು.” ಓಹೋ! ತುಂಬಾ ದೊಡ್ಡ ಮಾತು ಇದು ಪದ್ದಕ್ಕ”  ಎಂದು ಹೇಳಿದ. ಪದ್ದಕ್ಕ ಈ ಮಾತಿಗೆ ಹಗುರವಾದಂತೆ ಎನಿಸಿತು ಅವನಿಗೆ. “ನಗುತ್ತಾ ಎರಡೆಳೆ ಸರ ಹಾಕುವೆ.ಮದುವೆ ಮಾಡಿಕೊಡುವೆ. ಹುಡುಗಿ ಇವಳೇ ನೋಡು ಆಗಬಹುದಾ ?” ಎಂದಳು. ಅಲ್ಲಿಯೇ ಇದ್ದ ಪದ್ದಕ್ಕನ ಎರಡನೇ ಮಗಳು ಸುಜಿ ಸುಂದರವಾಗಿ ಕಂಡಳು.ಹುಡುಗಿ ಅಮ್ಮನ ಮಾತಿಗೆ ಕರಗಿ ನಗುತ್ತಾ ಔಷಧಿ ತಕ ಬರುವೆ ಎಂದು ಹೊರಟಳು. ಪರಮ ನೋಡುತ್ತಾ ಕುಳಿತ. ಪದ್ದಕ್ಕ ಹೇಳಿದ ಋಣದ ಮಾತು ಇದೆಯಾ? ಎಂದು ಯೋಚಿಸುತ್ತಾ ಕುಳಿತ. ಎರಡನೇ ಮಗಳು ಬರುವವರೆಗೂ ಕಾದು ಕುಳಿತ. ಕೆಲ ಸಮಯದ ನಂತರ ಪದ್ದಕ್ಕನ ಎರಡನೇ ಮಗಳು ಔಷಧಿ ಹಿಡಿದು ಒಳಗೆ ಬಂದಳು. ಬರುವಾಗ  ಸಿಯಾಳವೊಂದನ್ನು ಹಿಡಿದು ತಂದಿದ್ದಳು. ಔಷಧಿಯ ಚೀಲ ಇಟ್ಟು ಸಿಯಾಳವನ್ನು ಪರಮನ ಕೈಗೆ ಇಟ್ಟು ಕುಡಿಯಿರಿ ಎಂದಳು. ಅದೆಷ್ಟೋ ಜನರಿಗೆ ಸಿಯಾಳ ಕೊಟ್ಟ ಕೈಯಿದು. ಆದರೂ ಕುಡಿದದ್ದು ಕಡಿಮೆ. ಈಗ ಅನಿವಾರ್ಯವಾಗಿ ಕುಡಿಯಬೇಕು ಎನಿಸಿತು. ಸುಜಿ ಕೈ ಒಳಗಿನ ಎಳೆನೀರು ಎಂದರೆ ಕೇಳಬೇಕೇ. ಜಗದ ಅದ್ಭುತ ಸನ್ನಿವೇಶ ಇದು ಎನಿಸಿತು ಅವನಿಗೆ. ಪರಮ ಎಳೆನೀರು ಕುಡಿದ. ಅದು ಸಾಮಾನ್ಯ ಎಳೆನೀರು ಎನಿಸಲಿಲ್ಲ ಅವನಿಗೆ. ಅವನ ಜನ್ಮಾಂತರದ ಸಂಬಂಧವೇ ಇದು ಎನಿಸಿತು. ನಂತರ ಪದ್ದಕ್ಕನಿಗೆ ಹೇಳಿದ ಈ ಮದುವೆ ಆಗಲು ನನಗೂ ಒಪ್ಪಿಗೆ ಇದೆ ಎಂದು ಹೇಳಿದ. ಆಗ ಪದ್ದಕ್ಕನ ಮುಖದಲ್ಲಿ ನಗು ಕಾಣಿಸಿತು. ಅವಳ ಮಗಳಾದ  ಸುಜಿಯ ಮುಖದಲ್ಲಿ  ನಕ್ಷತ್ರ ಮಿಂಚಿತು. ಪರಮ ಖುಷಿಯಿಂದ ಬರುವೆ ಎನ್ನುತ್ತಾ ಹೊರಟ. ಗಾಳಿಯೇ ತಂಗಾಳಿಯ ಹೊತ್ತು ಬಂದಿತ್ತು. ಪರಮ ಜಗವ ಗೆದ್ದ ಖುಷಿಯಲ್ಲಿ ಮನೆಗೆ ಹೊರಟ. ಸಿಯಾಳದ ಬದುಕೊಂದು ಕಥೆಯಾಗದೇ ಜೀವನವಾಯಿತು. ಪರಮ ಓದುತ್ತಲೇ ಹೋದ ಬಂದವರ ಹೋದವರ ಭಾವಗಳ ಮತ್ತೆ ಮತ್ತೆ……….


ನಾಗರಾಜ ಬಿ ನಾಯ್ಕ.

About The Author

Leave a Reply

You cannot copy content of this page

Scroll to Top