ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್


ತಪ್ಪು ಯಾರದೇ ಆಗಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ
ಸರಿ ನಿಮ್ಮದೇ ಇದ್ದಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ
ನಾ ನೀ ಅವರಿವರು ಮೇಲು ಕೀಳು ಬಿಟ್ಟುಹಾಕಿ
ಹಿಂದೆ ಏನೇ ನಡೆದಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ
ಸೇಡಿನಿಂದೇ ಕೇಡು ಕೋಪ ತಾಪ ಸುಟ್ಟು ಹಾಕಿ
ಅರಿಯದ ಪ್ರಮಾದವಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ
ತಪ್ಪಿ ಆಡಿದ ಮಾತು ಕೊಟ್ಟ ಭಾಷೆ ಬದಲಾಗದು
ಸರಿ ತಪ್ಪುಗಳು ತೆಪ್ಪಗಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ
ಕಲಹಗಳು ಇಂದಿನವಲ್ಲ ಬಾಳು ಕಟ್ಟಿದಂದಿನವು
ತೆರವು ಕೊಡುವುದಾಗಲಿ ಕೇಳಿ ಬಿಡಿ ಒಮ್ಮೆ ಕ್ಷಮೆ
ನಾಗರೀಕನೆನಿಸಿದ್ದೆ ಈ ನಾಲಿಗೆಯ ನಲಿವಿನಿಂದ
ಅವರೇ ದೊಡ್ಡವರಾಗಲಿ ಕೇಳಿ ಬಿಡಿ ಒಮ್ಮೆ ಕ್ಷಮೆ
ಅನುಳ ಅಂತರಂಗದಿ ಪ್ರಶಾಂತತೆ ಮನೆ ಮಾಡಲಿ
ಆತುರದ ಎಡರುತೊಡರಿರಲಿ ಕೇಳಿ ಬಿಡಿ ಒಮ್ಮೆ ಕ್ಷಮೆ
ಡಾ ಅನ್ನಪೂರ್ಣ ಹಿರೇಮಠ



