ಧಾರಾವಾಹಿ ಸಂಗಾತಿ
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ

ಅರ್ಜುನ ಉವಾಚ
ಸತತವಾಗಿ ಅತ್ತಳು ಸತ್ಯಸತ್ವದ ಸತಿ ಸೀತೆ

ಬಿರುಗಾಳಿಯ ಬಿರುಸಿಗೆ ಬಲವಿಲ್ಲದಂತಾದ ಬಾಳೆಗಿಡ ಬುವಿಯನ್ನಪ್ಪಿದಂತೆ ನೆಲಕ್ಕೆ ಬಿದ್ದಳು ಧರಣಿಸುತೆ, ಲಕ್ಷö್ಮಣನ ನುಡಿಯದು ಕಿವಿಗೆ ಬಿದ್ದ ಕ್ಷಣದಲ್ಲಿ. ಲೋಕವನ್ನೇ ಮರೆತಳು ತಕ್ಷಣದಲ್ಲಿ.
ಸೀತೆಯ ಸ್ಥಿತಿಗೆ ಮರುಗಿದ ಲಕ್ಷö್ಮಣ ತನ್ನ ಉತ್ತರೀಯದಿಂದ ಅವಳಿಗೆ ಗಾಳಿಯನ್ನು ಬೀಸಿ, ಕಣ್ಣೀರು ಹರಿಸುತ್ತಾ ಅವಳನ್ನು ಸಾಂತ್ವನಗೊಳಿಸುವ ಪ್ರಯತ್ನ ನಡೆಸಿದ.
ಕಣ್ಣುಗಳ ತೆರೆದಳು ರಾಮಸತಿ. ನಿಟ್ಟುಸಿರ ಬಿಟ್ಟಳು ಧರಣಿಸುತೆ. ಸುಮಿತ್ರಾಸುತನನ್ನು ನೋಡಿದಳು ಜನಕಸುತೆ.
“ಅಪರಾಧವನ್ನೇನೂ ಮಾಡದ ನನ್ನನ್ನು ಹೀಗೆ ಅರಣ್ಯಕ್ಕೆ ಅಟ್ಟುವ ಬದಲು ಖಡ್ಗದಿಂದ ನನ್ನ ಶಿರವನ್ನೇ ಕತ್ತರಿಸಬಹುದಿತ್ತಲ್ಲಾ! ನನ್ನ ಮನೋವಲ್ಲಭನನ್ನು ತೊರೆದು ಈ ಕಾಡಿನಲ್ಲಿರುವಂತಾಯಿತೇ ನಾನು!” ಎಂದು ಅತ್ತಳು ಕೌಸಲ್ಯಾಸುತನ ಸತಿ.
“ವಿವಾಹ ಆದಾಗಿನಿಂದಲೂ ನನ್ನ ಜೊತೆ ಸುಖಸುಖವಾಗಿ ಬದುಕಿದವರು, ನಾನು ಅಗಲಿದಾಗ ನೋವು ಅನುಭವಿಸಿದವರು, ನನಗಾಗಿ ಆ ದುಷ್ಟ ರಾವಣನನ್ನು ಕೊಂದವರು ಈಗ ತೊರೆದರೇ ನನ್ನನ್ನು!” ಎಂದು ಹಲುಬಿದಳು ಹಲವು ನಿಮಿಷ.
ತನ್ನದೇನೂ ತಪ್ಪಿಲ್ಲ ಎಂದು ರುಜುವಾತುಪಡಿಸುವ ಸ್ವಪ್ರಜ್ಞೆ ಸೀತೆಯಲ್ಲೀಗ ಮೂಡತೊಡಗಿತು. “ಅಂದು ರಾವಣ ಸಂಹಾರದ ನಂತರ ಅಗ್ನಿಪ್ರವೇಶದ ಮೂಲಕ ನನ್ನ ಸತ್ಯವನ್ನು ಸಾಬೀತುಪಡಿಸಿಕೊಂಡವಳು ಈ ಸೀತೆ. ಹಾಗಿದ್ದೂ ನನ್ನನ್ನು ಅಪರಾಧಿ ಎನ್ನಲು ಕಾರಣವೇನು?” ಎಂಬ ಪ್ರಶ್ನೆಯೆತ್ತಿ ಲಕ್ಷö್ಮಣನ ಮುಖವನ್ನೇ ನೋಡಿದಳು.
ಕಾಡಿನಲ್ಲಿ ತನ್ನನ್ನು ಬಿಟ್ಟುಹೋಗಲೆಂದು ಬಂದ ಲಕ್ಷ್ಮಣನು ಅವಳ ಕಣ್ಣಿಗೆ ಕಂಡದ್ದು ಕರುಣೆಯಿಲ್ಲದವನಾಗಿ. “ಕಲ್ಲುಮುಳ್ಳುಗಳೇ ಇರುವ ಕಾಡಿನಲ್ಲಿ ಅಂದು ಅಲೆದಾಡುತ್ತಿದ್ದೆವು. ಅಂತಹ ಕಷ್ಟದ ಸ್ಥಿತಿಯಲ್ಲಿ ನಾನು ನಡೆಯಲಾರದೆ ಒದ್ದಾಡುತ್ತಿದ್ದಾಗ ನನ್ನನ್ನು ಉಪಚರಿಸಿದವನು ನೀನು. ನನಗೆ ಸಂಕಟವಿತ್ತು ಘರ್ಜಿಸಿದ ವಿರಾಧನೆಂಬ ಅಸುರರನ್ನು ಕೊಂದವನು ನೀನು. ಅಂದು ಚಿನ್ನದ ಜಿಂಕೆಯ ಬೆನ್ನತ್ತಿಹೋದ ನನ್ನೊಡೆಯರಿಗೆ ಏನೋ ಕೆಡುಕು ಆಗಿದೆಯೆಂದು ನಾನು ವ್ಯಥೆಪಟ್ಟು, ಹೋಗಿ ನೋಡಿ ಬಾ ಎಂದು ನಿನ್ನಲ್ಲಿ ಕೇಳಿಕೊಂಡಾಗ ಅಯೋಧ್ಯಾಪತಿಯನ್ನು ಹುಡುಕಿಕೊಂಡು ಹೋದವ ನೀನು. ನನ್ನಿಷ್ಟದ ಮೈದುನ ನೀನು. ಹಾಗಿರುವಾಗ ನನ್ನನ್ನೊಬ್ಬಳನ್ನೇ ಈ ದುರ್ಗಮ ಕಾಡಿನಲ್ಲಿ ಬಿಟ್ಟುಹೋಗುವ ಮನಸ್ಸು ನಿನಗೆ ಬಂದೀತೇ ಲಕ್ಷö್ಮಣ!” ಎಂದು ದುಃಖವನ್ನು ತೋಡಿಕೊಂಡಳು.
ಪತಿಯ ಮುಖವನ್ನು ಕಾಣದೆ ಎಂತಿರಲಿ ಇಲ್ಲಿ ಎಂದು ಪ್ರಲಾಪಿಸಿದಳು. ರಮಣನನ್ನು ರಮಿಸದೆ ಹೇಗಿರಲಿ ಇಲ್ಲಿ ಎಂದು ವಿಲಾಪಿಸಿದಳು. ಆಗಾಗ ಮೈಮರೆಯುತ, ಆಗಾಗ ಎಚ್ಚರವಾಗುತ ಸೋತ ಭಾವದಲ್ಲಿದ್ದಳು ಸೀತೆ, ಹಾವಿನಿಂದ ಕಚ್ಚಿಸಿಕೊಂಡ ಎಳೆಶಿಶುವಿನಂತೆ.
ಈ ಬಗೆಯಲ್ಲಿ ಜಾನಕಿಯನ್ನು ಕಂಡ ಲಕ್ಷö್ಮಣ ತೊಳಲಾಟಕ್ಕೆ ಈಡಾದ. ತೊರೆದುಹೋಗಲೇಬೇಕಿತ್ತು ಅವನು ಅವಳನ್ನು ಕಾಡಿನಲ್ಲಿ, ರಾಮನಾಜ್ಞೆಗೆ ಶಿರಬಾಗಿ. ತೊರೆದುಹೋಗದಂತೆ ತಡೆಯಿತದೋ ಮಮಕಾರ, ದುಃಖಿಸಿದ ಅತಿಯಾಗಿ ಆ ಕ್ಷಣವೇ ಎದೆಬೀಗಿ.
ಎಂತು ಹೋಗಲಿ ತಾನು, ಹೋಗದೇ ಇರಲೆಂತು ಇನ್ನು ಎಂಬ ದ್ವಂದ್ವ ಭಾವದಲ್ಲಿ ಸಂಕಟವನ್ನು ಸೌಮಿತ್ರಿ ಅನುಭವಿಸುತ್ತಿದ್ದಾಗಲೇ ಸೀತೆ ನುಡಿದಳು ತಪಸ್ವಿನಿಯ ತೆರದಲ್ಲಿ. “ಅಂದು ರೇಖೆಯನೆಳೆದು ರಾಮ ಶೋಧನೆಗೆ ಹೊರಟ ರೀತಿಯಲ್ಲಿಯೇ ಇಂದೂ ಹೊರಡು ಸೌಮಿತ್ರಿ. ನನ್ನ ಅಪರಾಧವಿಲ್ಲದೆ ನನ್ನ ಒಡೆಯರು ಇಂದು ತೊರೆದರೆನ್ನ ಎಂಬ ಸಮಾಚಾರವನ್ನು ಹೇಳಿಬಿಡು ಎನ್ನ ತಾಯಿಸಮಾನರಾದ ಕೌಸಲ್ಯೆಗೆ” ಎಂದಳು ಸೀತೆ.
ರಾಮನ ಜೊತೆಗೆ ಯಾರೂ ಇಲ್ಲ ಸಹಾಯಕ್ಕೆ ಎಂಬ ಯೋಚನೆ ಮೂಡಿತು ಅವಳಲ್ಲಿ, ಆ ಕ್ಷಣದಲ್ಲಿ. “ತಡವಾದರೆ ಕೋಪಿಸಿಕೊಳ್ಳಬಹುದು ನಿನ್ನಣ್ಣ. ನನಗಾದರೂ ಈ ಕಾಡಿನಲ್ಲಿ ಕ್ರೂರಮೃಗಗಳ ನೆರವಿದೆ. ಅವರು ಅಲ್ಲಿ ಒಬ್ಬಂಟಿಯಾಗಿದ್ದಾರೆ. ವಿಳಂಬ ಮಾಡದೆ ಸೇರು ಕ್ಷಿಪ್ರವಾಗಿ ಅವರನ್ನು” ಎಂದಳು ಮರ್ಮಾರ್ಥಭರಿತವಾಗಿ.
ತನ್ನನ್ನು ತೊರೆದ ರಾಮನದ್ದೇನೂ ತಪ್ಪಿಲ್ಲ. ಹೆಣ್ಣಾಗಿ ಜನಿಸಿದ ತನ್ನದೇ ಅಪರಾಧ ಎಂಬ ಕೀಳರಿಮೆಯ ಮಾತೂ ಹೊರಬಂತು ಅವಳಿಂದ.
ಈ ಪರಿಯ ಪರಿತಾಪವನ್ನು ಕಂಡ ಲಕ್ಷö್ಮಣ ದೃಷ್ಟಿ ಹರಿಸಿದ ದೆಸೆದೆಸೆಗೆ. ಕಣ್ಣಿಗೆ ಕಂಡ, ಕಾಣದ ಮೃಗ- ಖಗ, ಕ್ರಿಮಿ- ಕೀಟ, ಗಿಡ- ಮರ, ಗಂಗಾನದಿ, ದಿಕ್ಕುಗಳು, ಪಂಚಭೂತಗಳು ಎಲ್ಲವುಗಳನ್ನೂ ಉದ್ದೇಶಿಸಿ ನುಡಿದ ಉದ್ದಂಡವಾದ ಮಾತನ್ನು.
“ಜಾನಕಿಯನ್ನು ರಕ್ಷಿಸುವ ಹೊಣೆಯೀಗ ನಿಮ್ಮದು. ಭೂದೇವಿಯೇ ಪೊರೆಯಬೇಕು ನೀನೇ, ನಿನ್ನ ಈ ಮಗಳನ್ನು”
ಅಸಹಾಯಕ ಹೆಣ್ಣನ್ನು ಅನಾಥೆಯ ತೆರದಲ್ಲಿ ಬಿಟ್ಟುಹೋಗಬೇಕಾದ ತನ್ನ ಹೀನಸ್ಥಿತಿಯನ್ನು ನೆನೆದು ಮತ್ತೆ ಮತ್ತೆ ಮರುಗಿದ ಲಕ್ಷö್ಮಣ. ಈ ನಿಷ್ಠುರದ ಬದುಕನ್ನು ತಾನು ನಡೆಸಬೇಕಾಗಿ ಬಂದದ್ದಕ್ಕೆ ತನ್ನ ದೇಹವನ್ನು ಎರಡು ಭಾಗವಾಗಿ ಸೀಳಿಹಾಕಬೇಕು ಎಂದು ತನಗೆ ತಾನೇ ಶಪಿಸಿಕೊಂಡ.
ಏನಾದರಾಗಲಿ ಇಲ್ಲಿಂದ ಹೋಗಿಯೇ ಬಿಡುತ್ತೇನೆ ಎಂದು ಮುಂದೆ ಮುಂದೆ ಹೋದ, ಬಿರುಸಾಗಿ. ಏನಂದುಕೊಳ್ಳುವಳೋ ಜನಕಸುತೆ ಎಂದು ಆಲೋಚಿಸಿ ಮತ್ತೆ ಹಿಂದೆ ಹಿಂದೆ ಬಂದ, ಇರಿಸುಮುರುಸಾಗಿ. ಅಣ್ಣನನ್ನು ಸೇರಬೇಕೆಂಬ ತುಡಿತವದು ಮತ್ತೆ ಸೆಳೆಯಿತು ಅವನನ್ನು. ಸೀತೆಯನ್ನು ನೋಡದೆಯೇ ಮುಂದೆ ಹೋದ. ಹೆಂಗಳೆಯ ಮನವನ್ನು ನೋಯಿಸಿದೆ ಎಂಬ ಭಾವವದು ಎಳೆಯಿತು ಅವನನ್ನು. ಸೀತೆಯೆಡೆಗೆ ನೋಡುತ್ತಾ ಹಿಂದೆ ಬಂದ. ಒಮ್ಮೆ ಆ ಕಡೆಗೆ, ಮತ್ತೊಮ್ಮೆ ಈ ಕಡೆಗೆ. ಒಮ್ಮೆ ಮುಂದೆ, ಇನ್ನೊಮ್ಮೆ ಹಿಂದೆ. ತೊರೆಯದಿರಲಾರೆ ಈಗ ಎಂಬ ಭಾವ ಒಮ್ಮೆ. ತೊರೆದುಹೋಗಲಾರೆ ಬೇಗ ಎಂಬ ಭಾವ ಮಗದೊಮ್ಮೆ. ಮುಂದಕ್ಕೂ ಹಿಂದಕ್ಕೂ ಹೊಯ್ದಾಡುವ ಉಯ್ಯಾಲೆಯಂತಾದ ಲಕ್ಷö್ಮಣ.
ಅದೋ! ಆ ಕ್ಷಣದಲ್ಲಿ, ಅದೊಂದು ಕ್ಷಣದಲ್ಲಿ, ಆ ಒಂದೇ ಒಂದು ಕ್ಷಣದಲ್ಲಿ ಸೀತೆಯನ್ನು ಅಗಲಿ ಹೋಗಿಯೆಬಿಟ್ಟ ಸೌಮಿತ್ರಿ!

ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ



