ಧಾರಾವಾಹಿ ಸಂಗಾತಿ
ರುಕ್ಮಿಣಿ ನಾಯರ್

ಒಬ್ಬ ಅಮ್ಮನ ಕಥೆ
ಬೆಂಗಳೂರಿನಿಂದ ಹಾಸನದತ್ತ ಸುಮತಿಯಪಯಣ

ಬಾವನ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದಳು. ಅವಳ ನೋಟದಲ್ಲಿ ಯಾವುದೋ ಅವ್ಯಕ್ತವಾದ ದೃಢ ನಿರ್ಧಾರದ ಸೂಚನೆ ಬಾವನಿಗೆ ದೊರೆಯಿತು. ಆದರೂ ಅದೇನೆಂದು ತಿಳಿದುಕೊಳ್ಳಲು…. “ಏನು ನಿರ್ಧರಿಸಿದೆಯಮ್ಮಾ… ನೀನು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದು ಎಲ್ಲರ ಹಿತ ದೃಷ್ಟಿಯಿಂದಲೂ ಉತ್ತಮವಾಗಿರುತ್ತದೆ ಎಂಬುದು ನನಗೆ ತಿಳಿದಿದೆ…. ವಯಸ್ಸು ಚಿಕ್ಕದಾದರೂ ನಿನ್ನ ಆಲೋಚನಾ ಶೈಲಿ ಬಹಳ ಪ್ರಬುದ್ಧವಾದದ್ದು…. ಎಂದಾಗ, ನಾದಿನಿ…”ಬಾವಾ… ನನ್ನ ನಿರ್ಧಾರ ಸರಿಯೋ ತಪ್ಪೋ ನನಗೆ ತಿಳಿದಿಲ್ಲ…. ಆದರೆ ನನಗೆ ಬೇರೆ ದಾರಿ ತೋಚುತ್ತಿಲ್ಲ….. ವಾರ್ಡಿನಲ್ಲಿ ದಾಖಲಾದ ಅಮ್ಮ ನಮ್ಮನ್ನು ಸಂಪೂರ್ಣವಾಗಿ ನಂಬಿದ್ದಾಳೆ…. ಅವಳ ಮುಖ ಈಗ ಸಂಪೂರ್ಣ ಗೆಲುವಿನಿಂದ ಕೂಡಿದೆ…. ಇಲ್ಲಿಂದ ಚಿಕಿತ್ಸೆ ಪಡೆದು ಹಿಂತಿರುವಾಗ ತಾನು ತನ್ನ ಹಿಂದಿನ ಆರೋಗ್ಯವನ್ನು ಪಡೆದು ಮನೆಗೆ ಹಿಂತಿರುತ್ತೇನೆ ಎಂಬ ಭರವಸೆಯನ್ನು ನನ್ನ ತಾಯಿಯ ಕಣ್ಣುಗಳಲ್ಲಿ ನಾನು ನೋಡಿದೆ… ಎಂದು ಅರ್ಧಕ್ಕೆ ನಿಲ್ಲಿಸಿದಳು. ವಿಷಯವನ್ನು ಪೂರ್ತಿ ಹೇಳದೇ ಏಕೆ ಅರ್ಧಕ್ಕೆ ನಿಲ್ಲಿಸಿದಳು? ಎಂದು ಪ್ರಶ್ನಾರ್ಥಕವಾಗಿ ಬಾವ ನಾದಿನಿಯನ್ನು ನೋಡುತ್ತಾ…. “ಹೌದು ನೀನು ಹೇಳಿದ್ದು ನಿಜ…. ನಾನು ಅದನ್ನು ಗಮನಿಸಿದೆ…. ಇಲ್ಲಿನ ಚಿಕಿತ್ಸೆ ಬಹಳ ದುಬಾರಿ ಎಂಬುದು ತಿಳಿಯಿತು…. ಆದರೆ ಎಲ್ಲ ಖರ್ಚು ವೆಚ್ಚಗಳನ್ನು ಭರಿಸಲು ನಮ್ಮಿಂದ ಸಾಧ್ಯವೇ? ಎಂಬ ವಿಚಾರ ನನ್ನನ್ನು ಚಿಂತೆಗೀಡು ಮಾಡಿದೆ…. ನಮ್ಮೆಲ್ಲಾ ದುಡಿಮೆಯ ಹಣವನ್ನು ಸೇರಿಸಿದರೂ ಕೂಡ ಒಂದು ಬಾರಿಯ ಡಯಾಲಿಸಿಸ್ ಸಾಧ್ಯವಾಗುತ್ತದೆಯೇ? ಎಂಬುದು ಕೂಡಾ ನನಗೆ ಸಂಶಯ”… ಎಂದ ಚಿಂತಾಕ್ರಾಂತನಾಗಿ.
ಬಾವನ ಪರಿಸ್ಥಿತಿಯು ನಾದಿನಿಗೆ ತಿಳಿದಿತ್ತು. ಎಷ್ಟೋ ಬಾರಿ ತಮಗೆ ಹಣಕಾಸಿನ ತೊಂದರೆ ಬಂದಾಗ ತನ್ನಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ನಮಗೆ ಕೊಟ್ಟು ಸಹಾಯ ಮಾಡಿದ್ದಾರೆ ಬಾವ. ಒಮ್ಮೆ ಇನ್ನೇನು ಬದುಕಲು ಬೇರೆ ದಾರಿಯೇ ಇಲ್ಲವೇನೋ? ಎನ್ನುವ ಪರಿಸ್ಥಿತಿಯಲ್ಲಿ ಬಾವನೇ ನಮಗೆ ಸಹಾಯ ಮಾಡಿ ನಮ್ಮೆಲ್ಲರ ಜೀವ ಉಳಿಸಿದ್ದು. ತಮ್ಮ ಕೈಲಿದ್ದರೆ ಖಂಡಿತ ಏನಾದರೂ ಸಹಾಯ ಮಾಡೇ ಮಾಡುತ್ತಾರೆ. ಈಗ ಮಳೆಗಾಲ ಬೇರೆ ಸಮೀಪಿಸುತ್ತಿರುವುದರಿಂದ ಅವರಿಗೆ ಕೆಲಸ ಇರುವುದಿಲ್ಲ
ಎನ್ನುವುದು ನಾದಿನಿ ಬಲ್ಲಳು. ನಾದಿನಿ ಏನೂ ಮಾತನಾಡದೆ ಸುಮ್ಮನೆ ಎಲ್ಲೋ ನೋಡುತ್ತಾ ಏನೋ ಆಲೋಚನೆ ಮಾಡುತ್ತಾ ನಿಂತಿರುವುದನ್ನು ಕಂಡು… “ಈಗ ಏನು ಮಾಡುವುದು?…ನೀನು ಏನು ನಿರ್ಧರಿಸಿರುವೆ? ಎಂದು ಬಾವ ಕೇಳಿದಾಗ…. “ಹೇಗೆ ಹೇಳಲಿ ಎಂದು ನನಗೆ ತಿಳಿಯುತ್ತಿಲ್ಲ ಬಾವಾ”…. ಎಂದು ತನ್ನ ಮನದಲ್ಲಿದ್ದ ಆಲೋಚನೆಯನ್ನು ಭಾವನೆಗೆ ತಿಳಿಸಿದಳು. ನಾದಿನಿಯ ಮಾತನ್ನು ಕೇಳಿದ ಬಾವ ಒಮ್ಮೆ ದೀರ್ಘವಾದ ನಿಟ್ಟಿಸಿರನ್ನು ಬಿಟ್ಟು… ₹ಸರಿ ನಡಿ… ಅತ್ತೆಗೆ ತಿಳಿಸೋಣ ಬಾ”…. ಎಂದು ಹೇಳಿ ಮುಂದೆ ಹೆಜ್ಜೆ ಹಾಕಿದ ಬಾವನನ್ನು ನಾದಿನಿ ಹಿಂಬಾಲಿಸಿದಳು. ಇಡುವ ಪ್ರತಿ ಹೆಜ್ಜೆಯೂ ಭಾರವಾದಂತ ಅನಿಸಿತು. ಎಷ್ಟೇ ವೇಗವಾಗಿ ನಡೆದರೂ ಹೆಜ್ಜೆ ಮುಂದಿಡಲು ಸಾಧ್ಯವಾಗುತ್ತಿಲ್ಲ ಎಂದು ಅನಿಸಿತವಳಿಗೆ. ತುರ್ತು ಚಿಕಿತ್ಸಾ ಘಟಕ ವಿಭಾಗದ ವಾರ್ಡಿನ ಬಾಗಿಲ ಬಳಿ ಬಂದಾಗ ಅವಳ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿತ್ತು.
ಹೆಜ್ಜೆ ಮುಂದಡಲಾಗದೆ ಅವಳು ಬಾಗಿಲ ಬಳಿಯೇ ನಿಂತು ಬಿಟ್ಟಳು. ನಾದಿನಿ ತನ್ನ ಹಿಂದೆ ಬರುತ್ತಿದ್ದಾಳೆಯೇ ಎಂದು ಖಚಿತಪಡಿಸಿಕೊಳ್ಳಲು ಹಿಂತಿರುಗಿ ನೋಡಿದ ಆತ, ನಾದಿನಿಯ ಕಣ್ಣುಗಳು ತುಂಬಿದ್ದನ್ನು ಕಂಡು… “ಅಳಬೇಡ… ಈಗ ನೀನು ಅಧೀರಳಾಗಬಾರದು…. ನಿನ್ನ ದುಗುಡ, ನೋವು ಏನೆಂದು ನನಗೆ ತಿಳಿದಿದೆ…. ದಯವಿಟ್ಟು ಕಣ್ಣುಗಳನ್ನು ಒರೆಸಿಕೊ….. ನಿನ್ನ ತುಂಬಿದ ಕಣ್ಣುಗಳನ್ನು ಗಮನಿಸಿದರೆ ಅತ್ತೆ ಎಲ್ಲವನ್ನೂ ಊಹಿಸಿಬಿಡುತ್ತಾರೆ…. ನೀನು ಈಗ ಧೈರ್ಯವನ್ನು ತಂದುಕೊಳ್ಳಲೇಬೇಕು…. ನಿನ್ನ ಮನಸ್ಸಿನಲ್ಲಿರುವ ಯೋಜನೆಯ ಪ್ರಕಾರ ಅತ್ತೆಗೆ ಮನನವಾಗುವಂತೆ ತಿಳಿಸಿಬಿಡು.”… ಎಂದು ಬಾವ ಹೇಳಿದ್ದು ಕೇಳಿ, ಹೌದು ಅವರು ನಿಜವನ್ನೇ ಹೇಳುತ್ತಿದ್ದಾರೆ ಎನ್ನುತ್ತಾ ತನ್ನ ಕಣ್ಣು ಒರೆಸಿಕೊಂಡಳು. ಬಾರದ ನಗುವನ್ನು ಮುಖದಲ್ಲಿ ತಂದುಕೊಂಡು ಬಾವನ ಜೊತೆಗೆ ವಾರ್ಡಿನ ಒಳಹೊಕ್ಕಳು. ಅಳಿಯ ವಾರ್ಡಿನ ಒಳಗೆ ಬಂದಿದ್ದನ್ನು ಗಮನಿಸಿದ ಸುಮತಿ…. “ಡಾಕ್ಟರ್ ಏನ್ ಹೇಳಿದರು?… ಎದ್ದು ಕೇಳಿದಳು. ಅತ್ತೆಯ ಪ್ರಶ್ನೆಗೆ ಅಳಿಯ ನಾದಿನಿಯ ಕಡೆ ತಿರುಗಿ, ಹೇಳು ಎನ್ನುವಂತೆ ಸನ್ನೆ ಮಾಡಿದ. ಗಂಟಲುಬ್ಬಿ ಬಂದರೂ, ಕಣ್ಣುಗಳು ಮತ್ತೆ ಹನಿಗೂಡ ತೊಡಗಿದರೂ ಅದನ್ನು ತಾಯಿಗೆ ತೋರಕೊಡದೆ….. “ಅಮ್ಮಾ…. ಡಾಕ್ಟರ್ ಹೇಳಿದರು…. ಇಲ್ಲಿ ದೊರಕುವ ಚಿಕಿತ್ಸೆಯು ನಮ್ಮ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿಯೇ ಲಭ್ಯವಿದೆ. ಅಲ್ಲಿಗೆ ಹೋಗಿ ಪಡೆದುಕೊಳ್ಳಬಹುದು…. ಎಂದಿದ್ದಾರಮ್ಮಾ”…. ಎನ್ನುತ್ತಾ ಅಮ್ಮನ ಬಳಿಗೆ ಬಂದಳು. ತನ್ನ ಅಳುವನ್ನು ತಡೆ ಹಿಡಿದುಕೊಳ್ಳಲು ಅವಳು ಹರಸಾಹಸ ಪಡಬೇಕಾಯಿತು. ಸುಮತಿಯನ್ನು ಬಿಗಿಯಾಗಿ ಅಪ್ಪಿಕೊಂಡಳು.
“ಆದಷ್ಟು ಬೇಗನೇ ನಾವು ಇಲ್ಲಿಂದ ಹೋಗೋಣ… ಎಂದು ಹೇಳುತ್ತಾ ವಾರ್ಡಿನಲ್ಲಿದ್ದ ನರ್ಸ್ ಬಳಿಗೆ ತೆರಳಿದಳು…. “ಸಿಸ್ಟರ್…. ತಾಯಿಯನ್ನು ಇಲ್ಲಿ ಈಗ ಅಡ್ಮಿಟ್ ಮಾಡುವುದಿಲ್ಲ…. ಇನ್ನೊಂದೆರಡು ದಿನದ ಬಳಿಕ ಬರುತ್ತೇವೆ_…. ಎಂದು ಹೇಳಿದಳು.… “ಓ ಹೌದಾ… ನೀವು ಔಷಧಿಯನ್ನು ತಂದಿದ್ದರೆ ಹಾಗೂ ಇಲ್ಲಿ ಅಡ್ಮಿಟ್ ಮಾಡಿದ್ದರೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದಿತ್ತು…. ಸರಿ ನಿಮ್ಮ ಇಚ್ಛೆ”…. ಎಂದು ಹೇಳಿ ಸುಮತಿಯನ್ನು ವಾರ್ಡಿನಿಂದ ಕರೆದುಕೊಂಡು ಹೋಗುವುದಕ್ಕೆ ಅನುಮತಿ ನೀಡಿದಳು. ಮಾವನಿಗೆ ಕರೆ ಮಾಡಿ ವಿಷಯ ತಿಳಿಸುವಂತೆ ನಾದಿನಿ ಬಾವನನ್ನು ವಿನಂತಿಸಿಕೊಂಡಳು. ಸರಿ ಎಂದು ಹೇಳಿ ಬಾವ ರಿಸೆಪ್ಶನ್ ಗೆ ಹೋಗಿ ಅಲ್ಲಿಂದ ಮಾವನಿಗೆ ಕರೆ ಮಾಡಿ, ಅತ್ತೆಯನ್ನು ಇಲ್ಲಿಂದ ಹಾಸನದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ದಾಖಲು ಮಾಡುತ್ತೇವೆ. ಇಲ್ಲಿ ಹೆಚ್ಚು ಸಮಯ ಕಳೆಯಲು ಅತ್ತೆಯಿಂದ ಸಾಧ್ಯವಿಲ್ಲ ಹಾಗಾಗಿ ಇಲ್ಲಿಂದ ನೇರವಾಗಿ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಹಾಸನಕ್ಕೆ ಹೋಗುತ್ತೇವೆ ಎಂಬುದಾಗಿ ಅಳಿಯ ಸುಮತಿಯ ತಮ್ಮನಿಗೆ ತಿಳಿಸಿದ. ತಮ್ಮನಿಗೆ ಅಳಿಯನ ಮಾತು ಕೇಳಿ ಮನದಲ್ಲಿ ಏನೋ ಕಸಿವಿಸಿ ಉಂಟಾಯಿತು. ಸ್ವಲ್ಪ ಆತಂಕವಾಯಿತು. ಆಸ್ಪತ್ರೆಯಲ್ಲಿ ನಡೆದ ವಿಷಯ ಅಳಿಯ ಸುಮತಿಯ ತಮ್ಮನಿಗೆ ತಿಳಿಸಿದ. ಪರಿಸ್ಥಿತಿಯ ಅರ್ಥ ಅವನಿಗಾಯಿತು. ಅವನ ಮನಸ್ಸು ಭಾರವಾಯಿತು…”ಸರಿ ಅಕ್ಕನನ್ನು ನೀವು ಕರೆದುಕೊಂಡು ಹೋಗಿ….. ಹಾಸನದಲ್ಲಿ ಅಕ್ಕನಿಗೆ ಚಿಕಿತ್ಸೆ ಕೊಡಿಸಿ…. ನಾನು ಕುಟುಂಬ ಸಮೇತ ಅಲ್ಲಿಗೆ ಬರುತ್ತೇನೆ”….ಎಂದು ಸುಮತಿಯ ತಮ್ಮ ಹೇಳಿದ. ಸುಮತಿಯನ್ನು ಅಲ್ಲಿಂದ ಕರೆದುಕೊಂಡು ಅಳಿಯ ಮತ್ತು ಮಗಳು ಹಾಸನದ ಕಡೆಗೆ ಪ್ರಯಾಣ ಬೆಳೆಸಿದರು.




