ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಜ್ವಲಿಸುವ ಪ್ರೀತಿಯ ಸಹಿಸಿ ನುಂಗಲೆಂಗ ಹೇಳು
ಸುಡುವ ಕೆಂಡವ ಕಟ್ಟಿಕೊಂಡು ತಾಳಲೆಂಗ ಹೇಳು

ಬಯಕೆ ಬಾಂದಳ ತೋಟ ನಳನಳಿಸುತಿದೆ ನೋಡು
ಒಲವಿನೊರತೆಯ ಒತ್ತರವ ತಡೆಯಲೆಂಗ ಹೇಳು

ಮನಸು ಕಂಡ ಆಸೆಯೆಲ್ಲಾ ಫಲಿಸದೆಂದು ನಾ ಬಲ್ಲೆ
ಪ್ರೇಮದುಯ್ಯಾಲೆಯ ಏರಿಳಿತ ತಾಳಲೆಂಗ ಹೇಳು

ಜೀವ ಜೀವಕಂಟಿದ ನಂಟಿನ ಗಂಟು ಬಿಡಿಸಲುಂಟೆ
ಪ್ರೇಮಾಮೃತವೇ ವಿಷವಾದರೆ ಬಾಳಲೆಂಗ ಹೇಳು

ಒಡಲಾಳ ವಿರಹ ಭೋಗ೯ರೆತಕೆ ಸಿಕ್ಕು ತಪ್ತವಾಗಿದೆ
ತುಟಿಯ ಮಧು ಹೆಪ್ಪುಗಟ್ಟಿದರೆ ಉಸುರಲೆಂಗ ಹೇಳು

ಸರಸವಿಲ್ಲದ ಕೋಲಾಹಲ ಅವುಡುಗಚ್ಚಿಸಿ ಚುಚ್ಚುತಿದೆ
ಹಾರಬೇಕೆನುವ ಬಯಕೆ ಪುಕ್ಕವ ಕತ್ತರಿಲೆಂಗ ಹೇಳು

ಹುಚ್ಚೆದ್ದ ಆಸೆಗಳ ಸೊಕ್ಕನೆಲ್ಲ ಮುರಿಯಲಾಗುತಿಲ್ಲ
ಕುದಿವ ಬೆಚ್ಚನೆಯ ಆ  ಭಾವ ಹೊಚ್ಚಲೆಂಗ ಹೇಳು

ಅನುಳೆದೆಯಲ್ಲೆ ಅಚ್ಚಾದ  ಚಿತ್ರ ಕೊಚ್ಚಿ ಕತ್ತರಿಸಲುಂಟೆ
ಚಿತ್ತ ಬಿತ್ತಿಯ ನೆನಪು ವಿಧಿ ಚೋರಗ ಒಪ್ಪಿಸಲೆಂಗ ಹೇಳು//


About The Author

Leave a Reply

You cannot copy content of this page

Scroll to Top