ವಿಶೇಷ ಸಂಗಾತಿ
ಜಯಲಕ್ಷ್ಮಿ ಕೆ ಮಡಿಕೇರಿ
ಹೋಗುವುದಾದರೂ ಎಲ್ಲಿಗೆ ….??


ಪಿ ಯು ಸಿ ಮೌಲ್ಯ ಮಾಪನ ನಡೆಯುತ್ತಿದ್ದ ದಿನಗಳವು. ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಉಪನ್ಯಾಸಕರೊಬ್ಬರು ಅವರ ವತಿಯಿಂದ ಆ ಒಂದು ದಿನ ಮೌಲ್ಯ ಮಾಪನ ಕೇಂದ್ರದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಿದ್ದರು. ಊಟ ಬರುವುದು ತಡವಾಯಿತು. ಎರಡು ಗಂಟೆಯವರೆಗೂ ಊಟಕ್ಕೆ ಕಾದು ದಣಿದಿದ್ದ ಉಪನ್ಯಾಸಕ ವೃಂದ ಆಹಾರ ಬಂದ ತಕ್ಷಣ ಊಟಕ್ಕೆ ಮುಗಿಬಿದ್ದಿತು. ಸಾಲೂ ಇಲ್ಲ,ಸಂಯಮವೂ ಇಲ್ಲ, ಒಂದು ವ್ಯವಸ್ಥೆ ಯಂತೂ ಮೊದಲೇ ಇಲ್ಲ. ಶಕ್ತಿವಂತರು ಆಹಾರ ಗಿಟ್ಟಿಸಿಕೊಳ್ಳುವಲ್ಲಿ ಗೆದ್ದರು, ಕೆಲವರು ಸೋತು ಗೆದ್ದರು. ಒಂದಿಬ್ಬರು ಪಡೆಯುಕೊಂಡ ತಟ್ಟೆಯ ಅನ್ನ ಸಾಂಬಾರ್ ಗುಂಪು ತಿಕ್ಕಾಟದಲ್ಲಿ ಮತ್ತೊಬ್ಬರ ಮೇಲೆ ಚೆಲ್ಲಿ..ಅದೇ ಒಂದು ಜಗಳದ ವಿಷಯವಾಗಿ , ಕಿರುಚಾಡಿ.. ಉಫ್.. ಸಾಕಪ್ಪ ಸಾಕು ಎನಿಸುವ ಒಂದು ಅನುಭವ ಎಲ್ಲರಿಗೂ. ಕೊನೆಗೆ ನಿಂತವರಿಗೆ ಊಟವೇ ಸಿಗದೆ, ಆ ದಿನ ಊಟದ ವ್ಯವಸ್ಥೆ ಇದೆ ಎಂದುದರಿಂದ ಕ್ಯಾಂಟೀನ್ ನವರೂ ಊಟ ಪೂರೈಕೆ ಮಾಡದೇ ಹೋದ್ದರಿಂದ ಕೆಲವರು ಆ ದಿನ ಉಪವಾಸ ಇದ್ದುಕೊಂಡೇ ಪೇಪರ್ ತಿದ್ದುವಂತಾಯಿತು. ಆ ಚಿತ್ರಣ ನನ್ನ ಮನದಲ್ಲಿ ಅಚ್ಚೊತ್ತಿ ನಿಂತಿದೆ. ವ್ಯಾಲ್ಯೂಯೇಷನ್ ಸೆಂಟರ್ ನಲ್ಲೇ ಊಟ ಸಿಗುತ್ತೆ ಅಂತ ಜೆ ಎಸ್ ಎಸ್ ಮಹಿಳಾ ಹಾಸ್ಟೆಲ್ ನಲ್ಲಿ ರುಚಿಕರವಾಗಿ ತಯಾರಿಸಿ ಕೊಡುತ್ತಿದ್ದ ಊಟವನ್ನು ಬಿಟ್ಟು ಬಂದು ಕೊನೆಗೆ ಊಟ ಸಿಗದೆ ಇದ್ದವರಲ್ಲಿ ನಾನೂ ಒಬ್ಬಳು. ಅಲ್ಲಿ ಇದ್ದವರೆಲ್ಲ ಸುಶಿಕ್ಷಿತರೇ..ಸಾಲು..ಶಿಸ್ತು ಸಂಯಮದ ಬಗ್ಗೆ ಬೋಧನೆ ಮಾಡುವವರೇ….ಆದರೇನು? ವಚನಕಾರರು ಹೇಳುವಂತೆ ” ಹಸಿವೆಂಬ ಹೆಬ್ಬಾವು ಬಂದು ಬಸಿರ ಹಿಡಿಯಲು ವಿಷವೇರಿತ್ತಯ್ಯಾ ಅಪಾದ ಮಸ್ತಕಕ್ಕೆ “. ಅಷ್ಟೇ. ‘ಹಸಿವು’ ಎನ್ನುವ ರಾಕ್ಷಸನ ಅಸುರ ಗುಣಗಳ ಮುಂದೆ ಸಭ್ಯತೆ ಸಂಸ್ಕಾರಗಳು ಮೌಲ್ಯ ಕಳೆದುಕೊಂಡುಬಿಡುತ್ತವೆ. ಮಾತು ಬರುವ ನಮ್ಮ ಪರಿಸ್ಥಿತಿಯೇ ಹೀಗಿರಬೇಕಾದರೆ ಇನ್ನು ಮಾತು ಬಾರದ ಮೂಕ ಪ್ರಾಣಿಗಳು ಹಸಿವು ನಿವಾರಣೆಗೆ ಕಾಡು ಬಿಟ್ಟು ನಾಡಿಗೆ ಬರುವುದರಲ್ಲಿ ತಪ್ಪೇನಿದೆ?
ಹಸಿವು ಬಾಯಾರಿಕೆಗಳ ಈಡೇರಿಕೆ ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಂದು ಜೀವಿಯ ಮೂಲಭೂತ ಅವಶ್ಯಕತೆ. ಹಸಿದ ಜೀವಕಷ್ಟೇ ಗೊತ್ತು ಹಸಿವಿನ ಕಾವು. ಮಾತು ಬಲ್ಲ, ಚಿಂತನಾಶಕ್ತಿಯುಳ್ಳ ಮನುಷ್ಯರಾದ ನಾವೇ ಹಸಿವಾದಾಗ ಅನ್ಯರ ಬಗ್ಗೆ ಯೋಚಿಸದ ರೀತಿಯಲ್ಲಿ ವರ್ತಿಸುವಾಗ ವನ್ಯ ಮೃಗಗಳಾದ ಆನೆ, ಹುಲಿ, ಚಿರತೆ, ಕಾಡು ಹಂದಿ ಇತ್ಯಾದಿ ಹಸಿವು ನೀಗಿಸಿಕೊಳ್ಳಲು ನಾಡಿನ ಹಾದಿ ಹಿಡಿಯುವ ಮತ್ತು ಹಿಂಸಾತ್ಮಕ ವರ್ತನೆ ತೋರುವ ಬಗ್ಗೆ ಏನು ಹೇಳುವುದು? ಹೊಟ್ಟೆ ತುಂಬಿಸಿಕೊಳ್ಳುವ ಏಕೈಕ ಉದ್ದೇಶದಿಂದ ಅವು ಹಸಿರು ಕಂಡಲ್ಲಿಗೆ ಧಾವಿಸುತ್ತವೆ. ಅವುಗಳ ಅಸಹಾಯಕತೆ ನಡೆ ಅದು.ಆ ಪ್ರಾಣಿಗಳು ನಮಗೆ ಉಂಟುಮಾಡುವ ಕಷ್ಟ ನಷ್ಟಗಳನ್ನು ನಾವು ನುಂಗಿಕೊಳ್ಳಲೇ ಬೇಕು. ಇಲ್ಲ, ಪರಿಹಾರವನ್ನು ಕಂಡುಕೊಳ್ಳಬೇಕು.
ಈ ಪ್ರಕೃತಿಯಲ್ಲಿ ಜೀವಿಸಲು ಎಲ್ಲ ಜೀವರಾಶಿಗಳಿಗೆ ಸಮಾನ ಹಕ್ಕಿದೆ. ಆದರೆ ಬದುಕುವ ಸಂದರ್ಭ ಪ್ರಕೃತಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಮೂಕ ಪ್ರಾಣಿಗಳು ಮೌನವಾಗಿಯೇ ಪ್ರಕೃತಿಯ ಮಾತನ್ನು ಆಲಿಸುತ್ತವೆ. ನಿಸರ್ಗ ನಿಯಮವನ್ನು ಪಾಲಿಸುತ್ತವೆ. ಮಾತು ಬಲ್ಲ ಮನುಷ್ಯ ಮಾತ್ರ ಮಾತನಾಡುತ್ತಾ ಆಡುತ್ತಾ ಉಳಿದ ಜೀವರಾಶಿಗಳು ತನ್ನ ಅಧೀನದಲ್ಲಿಯೇ ಇರಬೇಕು ಎಂದು ತನಗೆ ತಾನೇ ಒಂದು ನಿಯಮ ಮಾಡಿಕೊಂಡಿದ್ದಾನೆ. ಕಾಡಿನಲ್ಲೂ ಅಧಿಪತ್ಯ ಸ್ಥಾಪಿಸುವಲ್ಲಿ ಕೆಲವೆಡೆ ಜಯವನ್ನೂ ಸಾಧಿಸಿದ್ದಾನೆ. ವನ್ಯಜೀವಿಗಳಿಗೆ ಮೀಸಲಾದ ಅರಣ್ಯ ಪ್ರದೇಶದ ಮೇಲೆ ಮಾನವನ ಹಸ್ತಕ್ಷೇಪ ಹೆಚ್ಚಿದಂತೆ ಅರಣ್ಯ ಪ್ರದೇಶ ಕಿರಿದಾಗುತ್ತಾ ಸಾಗುತ್ತಿದೆ. ವಸತಿ, ವ್ಯವಸಾಯ, ಸಾರಿಗೆ ವ್ಯವಸ್ಥೆ.. ಹೀಗೆ ನಾನಾ ಅಭಿವೃದ್ಧಿ ಕಾರ್ಯಗಳಿಂದಾಗಿ ವನ್ಯ ಮೃಗಗಳ ನೆಲೆ ನಶಿಸುತ್ತಿದೆ. ಒಂದು ಕಾಲದಲ್ಲಿ ಆನೆ ನಾಡಿನತ್ತ ಬಂದಿದೆ ಎಂದರೆ ಅದು ಪರಮಾಶ್ಚರ್ಯ ದ ವಿಚಾರವಾಗಿತ್ತು. ಏಕೆಂದರೆ ಅರಣ್ಯ ಹೇರಳವಾಗಿದ್ದಾಗ ಎಲ್ಲೋ ದಾರಿತಪ್ಪಿ ಅಪರೂಪಕ್ಕಷ್ಟೇ ಆನೆಗಳು ಕಾಡಿನಿಂದ ನಾಡಿನತ್ತ ಬರುತ್ತಿದ್ದವು. ಈಗ ಹಾಗಲ್ಲ. ಇದು ಪ್ರತಿದಿನದ ಸುದ್ದಿಯೇ ಆಗಿದೆ. ಮನುಷ್ಯ ಬೆಳೆದ ಕಬ್ಬು,ಬಾಳೆ, ಬತ್ತ ಇತ್ಯಾದಿ ಬೆಳೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ವನ್ಯಮೃಗಗಳು ನಾಡಿಗೆ ಬರುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ.ಇಲ್ಲಿ ಒಂದು ಅಂಶ ಗಮನಾರ್ಹ, ವನ್ಯ ಮೃಗಗಳು ಆಸೆ ಪಡುವುದು ಆಹಾರಕ್ಕಾಗಿ. ಮನುಷ್ಯರಾದ ನಾವು ಆಸೆ ಪಟ್ಟಿರುವುದು ಅವುಗಳ ಆವಾಸಸ್ಥಾನಕ್ಕಾಗಿ!! ಇತ್ತೀಚೆಗೆ ಆನೆ ಮಾನವ ಸಂಘರ್ಷವಂತೂ ಮಿತಿ ಮೀರಿದೆ. ಆನೆ ದಾಳಿಗೆ ಅದೆಷ್ಟೋ ಜೀವಗಳು ಬಲಿಯಾಗಿವೆ. ಪ್ರತಿ ಬಾರಿಯೂ ನಾಡಿಗೆ ದಾಳಿಯಿಟ್ಟ ಆನೆಗಳನ್ನು ಮರಳಿ ಕಾಡಿಗೆ ಸೇರಿಸಲು ಅರಣ್ಯ ಇಲಾಖೆಯವರು ಹರ ಸಾಹಸ ಪಡುತ್ತಾರೆ. ಕಾಡಿಗೆ ಅಟ್ಟಿದ ಆನೆಗಳು ತಮ್ಮ ದಂಡಿನೊಂದಿಗೆ ಮತ್ತೆ ನಾಡಿನಲ್ಲಿ ಪ್ರತ್ಯಕ್ಷವಾಗಿವೆ ಎನ್ನುವ ಸುದ್ದಿ ಅರಿಯುವುದೇ ಯಾವುದೋ ಅಮಾಯಕ ಜೀವ ಬಲಿಯಾದಾಗ. ನೀರು,ಆಹಾರ ಅರಸಿ ತನ್ನ ಪುಟ್ಟ ಕಂದಮ್ಮಗಳನ್ನೂ ಕರೆದುಕೊಂಡು 10-15 ಕಿಲೋಮೀಟರ್ ನಡೆದಾಡುವ ಆನೆಗಳು ಜನ ವಸತಿ ಪ್ರದೇಶಗಳನ್ನು ಲೆಕ್ಕಿಸದೆ ಹೊಟ್ಟೆ ಹೊರೆಯಲು ಹೆಣಗಾಡುತ್ತವೆ.ಅಂಥ ಸಂದರ್ಭದಲ್ಲಿ ತನಗೆದುರಾದ ಮನುಷ್ಯರನ್ನು ಸೊಂಡಿಲಿನಿಂದ ಎತ್ತಿ ಎಸೆಯುವ,ಮೆಟ್ಟಿ ಸಾಯಿಸುವ ಕ್ರೂರ ಕೃತ್ಯವನ್ನು ಎಸಗುತ್ತದೆ. ಆನೆಗಳಿಗೆ ಮಾನವನ ಮೇಲೆ ಇನ್ನಿಲ್ಲದ ದ್ವೇಷ! ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಆನೆಗಳ ಸಂತತಿ ಕೂಡಾ ಹೆಚ್ಚುತ್ತಲೇ ಇದೆ. ಹೀಗಿರುವಾಗ ತಮ್ಮ ಸಹಜ ನೆಲೆಗಳನ್ನು ಕಳೆದುಕೊಂಡ ಆನೆಗಳು ಹೋಗುವುದಾದರೂ ಎಲ್ಲಿಗೆ? ಕುಳಿತು ಉಣ್ಣುವ ಅಭ್ಯಾಸವಾದ ಮನುಷ್ಯ ದುಡಿದು ಉಣ್ಣಲಾರನಂತೆ! ಹಾಗೆ ಒಮ್ಮೆ ನಾಡಿನಲ್ಲಿ ಜನರು ಬೆಳೆದ ಕಬ್ಬು ಬಾಳೆ ಇತ್ಯಾದಿಗಳನ್ನು ತಿಂದು ರೂಢಿಯಾದ ಆನೆಗಳು ಕಾಡಿನಲ್ಲಿ ಆಹಾರ ಅರಸುವ ಅಭ್ಯಾಸವನ್ನೇ ಬಿಟ್ಟು ಬಿಟ್ಟಿವೆಯೋ ಏನೋ!! ಎಷ್ಟು ಬಾರಿ ಕಾಡಿಗೆ ಅಟ್ಟಿದರೂ ಮತ್ತೆ ಮತ್ತೆ ಜನವಸತಿ ಪ್ರದೇಶಕ್ಕೇ ಬರುತ್ತವೆ, ಉಪಟಳ ಕೊಡುತ್ತಲೇ ಇರುತ್ತವೆ.
ಸಾಗರದಿಂದ ನಭಕ್ಕೇರಿದ ನೀರ ಹನಿಗಳು ಮತ್ತೆ ಸಾಗರವನ್ನೇ ಸೇರಬೇಕು. ಈ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಎಷ್ಟೇ ಸಂಪಾದನೆ ಮಾಡಿದರೂ ಮತ್ತೆ ಭೂಮಿಯ ಒಡಲಿಗೇ ಸೇರಬೇಕು.ಇದು ಪ್ರಕೃತಿ ನಿಯಮ. ಈ ಸೂಕ್ಷ್ಮ ಅರಿತಾಗ ಅರಣ್ಯ ಒತ್ತುವರಿಯನ್ನೂ ಒಳಗೊಂಡಂತೆ ಮನುಜನ ಅತಿ ಆಸೆಗಳಿಗೆ ಕಡಿವಾಣ ಬೀಳಬಹುದು. ವನ್ಯ ಜೀವಿ – ಮಾನವ ಸಂಘರ್ಷ ಕೊನೆಯಾಗಬಹುದು. ಪ್ರಕೃತಿಯ ಜೊತೆಗೆ ಅನುಸಂಧಾನ ಮಾಡಿಕೊಂಡು ಬದುಕುವ ಕಲೆಗಾರಿಕೆ ಮೃಗ ಪಕ್ಷಿಗಳಿಗಿವೆ. ಮನುಷ್ಯರಾದ ನಾವು ಈಗ ಕಲಿಯುತ್ತಿದ್ದೇವೆ. ಪ್ರಕೃತಿ ನಿಯಮದ ವಿರುದ್ಧ ನಾವು ಎಸಗಿದ ದ್ರೋಹದ ಪರಿಣಾಮವಾಗಿ ಹುಟ್ಟಿಕೊಂಡಿರುವ ಸಮಸ್ಯೆಗಳ ಪರಿಹಾರಕ್ಕೆ ದೂರಗಾಮಿ ಯೋಜನೆಗಳಿಂದ ಪರಿಹಾರವನ್ನು ಕಂಡುಕೊಳ್ಳುವತ್ತ ಚಿಂತನೆ ನಡೆಸದೆ ನಾವು ಮಾಡುವ ಪ್ರತಿಭಟನೆ, ಹೋರಾಟ, ಅಧಿಕಾರಿ ವರ್ಗದವರು ಮಾಡಿಕೊಳ್ಳುವ ಪರಸ್ಪರ ನಿಂದನೆ ಯಾವುವೂ ನಿರೀಕ್ಷಿತ ಫಲ ನೀಡಲಾರವು. ಅಡವಿಯಲ್ಲಿ ಮೂಲಭೂತ ಅವಶ್ಯಕತೆ ಪೂರೈಸಿಕೊಳ್ಳಲಾಗದ ವನ್ಯ ಮೃಗಗಳು ಮತ್ತೆ ಹೋಗುವುದಾದರೂ ಎಲ್ಲಿಗೆ???
ಜಯಲಕ್ಷ್ಮಿ ಕೆ ಮಡಿಕೇರಿ.




ಅರಣ್ಯಜೀವಿಗಳ ಆಹಾರಗಳನ್ನು ನಾವು ದೋಚಿಕೊಂಡು ಬರುತ್ತ ಅರಣ್ಯ ಪರಿಸರವನ್ನು ಬರಿದು ಮಾಡುತ್ತ ಹೋದರೆ ಪ್ರಾಣಿಲೋಕ ಏನನ್ನು ತಿನ್ನಬೇಕು? ಎಲ್ಲಿಗೆ ಹೋಗಬೇಕು? ಸಕಾಲಿಕವಾದ, ಕಣ್ತೆರೆಸು ಜಯಲಕ್ಷ್ಮಿ.