ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾರೂ ಬರೆಯದ ಕತೆಯ ಲೇಖಕಿಯಾಗುವ ಉಮೇದಿನಲಿ
ಅಕ್ಷರಗಳ ಹೆಕ್ಕುವಾಗ ಆಸೆಯೇ ಇಲ್ಲವೆಂದ ಪದಗಳಿಗೆ ಪ್ರಶಸ್ತಿಗಳ ಆಮಿಷವೊಡ್ಡಿದೆ!

ಕಾರಣವೇ ಇಲ್ಲದೆ ಕತೆಯಾಗುವ
ಸುಳ್ಳಿನ ಬಲೆಯೊಳಗೆ ಸಿಲುಕುವ
ಬೇಡವೆಂದರೂ ಬೇಕೆನಿಸುವ
ಬಯಕೆ ಬಿಸಿಯ ಕಾವಿಗೆ
ಪದಗಳು ಕರಗಿದವು.

ಅದೆಲ್ಲೋ ಕುಳಿತ ಪುಟ್ಟ ಹಕ್ಕಿಯ ಶಿಳ್ಳೆಕೂಗು
ಎದೆಹಾಡಿಗೆ ಸ್ವರ ಕೂಡಿಸುವ ವೇಳೆಗೆ
ಅಲ್ಲೊಂದು ಕಥಾನಕದ ಅನಾವರಣ

ಸುಳ್ಳು ಸತ್ಯವಾಗಿ
ಸತ್ಯ ಸುಳ್ಳಾಗಿ ಹೇಳುವವರ ಬಾಯಲ್ಲಿ
ಹೊರಳಾಡುತ್ತಾ ಹೊರಬಿದ್ದವು ಮಾತಾಗಿ
ದಾಖಲಾದವು ಮಸಿಯಾಗಿ.

ಹೇಳಲೇನಿದೆ ಕೇಳಿದವರಿಗೆಲ್ಲ
ಒಂದೇ ಪ್ರಶ್ನೆ
ಉತ್ತರವೇ ಇಲ್ಲದ
ಮಾರುತ್ತರ ಬಯಸದ ಹಾಗೆ
ದಿಕ್ಕೆಡಿಸುವಂತೆ ಪದಗಳ ನದಿ ಹರಿದಂತೆ
ಕತೆಗಾರಳಾಗುವ ಕನಸಿನ ಹಕ್ಕಿ ರೆಕ್ಕೆ ಬಿಚ್ಚಿತ್ತು!

ಅಲ್ಲೊಂದು ದಿವ್ಯಮೌನ
ರೆಕ್ಕೆಬಿಚ್ಚಿದ ಕನಸಿನ ಹಕ್ಕಿಗಾಗೇ ಕಾಯುತ್ತಿತ್ತು
ಮೌನ ಮಾತನಾಡಿತು
‘ನ ಬ್ರೂಯಾತ್ ಸತ್ಯಮಪ್ರಿಯಮ್’
ಸತ್ಯ ಸಾವಿನಮನೆ ಸೇರಿತು
ಪದಗಳಾಗುವ ಆಸೆಯೇ
ಇಲ್ಲದ ವರ್ಣಮಾಲೆಯ ಅಕ್ಷರಗಳಲ್ಲಿ
ಮೂಡಿತ್ತು ಮಂದಹಾಸ!!


About The Author

Leave a Reply

You cannot copy content of this page

Scroll to Top